ಎಂದೂ ಸೋಲು ಒಪ್ಪಬಾರದು
ಸುಶಾಂತ್ ಸಿಂಗನ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾಳ ಹೆಸರು ಬಂದಿದ್ದೇ ತಡ, ಅವಳ ಜೀವನ ತಟಸ್ಥ ಆಗಿಹೋಗಿದೆ. ಇಂಡಸ್ಟ್ರಿಯ ಬಹುತೇಕರು ಅವಳನ್ನೇ ದೋಷಿ ಎನ್ನತೊಡಗಿದರು, ಆದರೆ ರಿಯಾ ಮಾತ್ರ ತಾನು ಸೋಲು ಒಪ್ಪಿಕೊಳ್ಳುವವಳಲ್ಲ ಎಂದು ನಿರೂಪಿಸಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಅವಳು ಹಿಂಟ್ ನೀಡುತ್ತಲೇ ಇರುತ್ತಾಳೆ. ಇತ್ತೀಚೆಗೆ FBನಲ್ಲಿ ಅbಳೊಂದು ಫೋಟೋ ಪೋಸ್ಟ್ ಮಾಡಿಕೊಂಡಳು. ಅದರಲ್ಲಿ ಅವಳೊಂದು ಟೋಪಿ ಹಾಕಿಕೊಂಡಿದ್ದಾಳೆ. ಅದರಲ್ಲಿ ಆಂಗ್ಲ ಅಕ್ಷರಗಳಲ್ಲಿ ಸ್ಪಷ್ಟವಾಗಿ `ಎಂದೂ ಸೋಲು ಒಪ್ಪುವುದಿಲ್ಲ!’ ಎಂದಿದೆ. ಅಂದಹಾಗೆ ರಿಯಾ ಇತ್ತೀಚೆಗೆ ಶೂಟಿಂಗ್ ಶುರುವಾಗಿರುವ `ಚೆಹರೆ’ ಚಿತ್ರದ ಭಾಗವಾಗಿದ್ದಾಳೆ. ಇಲ್ಲಿ ಅವಳು ಅಮಿತಾಭ್‌ರ ಮಗಳಾಗಿದ್ದಾಳೆ. ಆಲ್ ದಿ ಬೆಸ್ಟ್ ರಿಯಾ!
ಬುಸುಗುಟ್ಟುಲು ಬರುತ್ತಿದ್ದಾಳೆ ನಾಗಿನ್
 
ಶ್ರದ್ಧಾ ಕಪೂರ್‌ಳನ್ನು ಇತ್ತೀಚೆಗೆ ಸುದ್ದಿಗಾರರು ನಿರ್ದೇಶಕ ನಿಖ್‌ರ ಆಫೀಸಿನೆದುರು ಫೋಟೋದಲ್ಲಿ ಸೆರೆಹಿಡಿದರು. ನಂತರ ತಿಳಿದ ವಿಷಯ, ಅವಳು ಅಲ್ಲಿ ತನ್ನ ಮುಂದಿನ `ನಾಗಿನ್’ ಚಿತ್ರ (ಶ್ರೀದೇವಿ ಆರಂಭಿಸಿದ ಈ ನಾಗಿಣಿಯ ಸರಣಿ ಸಕಲ ಭಾಷೆಗಳಲ್ಲೂ, ಧಾರಾವಾಹಿಗಳಲ್ಲೂ ಬರುತ್ತಲೇ ಇದೆ)ಕ್ಕಾಗಿ ಎಂದು ತಿಳಿಯಿತು. ಕೊರೋನಾ ಮಹಾಮಾರಿಯಿಂದಾಗಿ, ಈ ತಾರೆಯರ ಸ್ಥಿತಿ ತ್ರಿಶಂಕುವಾಗಿದೆ. ಯಾವ ಚಿತ್ರ ಎಲ್ಲಿ, ಯಾವಾಗ ನಿಂತು ಹೋಗುತ್ತೋ, ಬೇರಾರೂ ಆ ಜಾಗಕ್ಕೆ ಬಂದುಬಿಡುತ್ತಾರೋ ಒಂದು ಗೊತ್ತಾಗೋಲ್ಲ. ಹೀಗಾಗಿ ತಾರೆಯರು ಕಂಡ ಕಂಡ ನಿರ್ದೇಶಕ ನಿರ್ಮಾಪಕರ ಬಳಿ ಧಾವಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…. ಗೇಣು ಬಟ್ಟೆಗಾಗಿ….!
ಬೈಬಲ್ ವಿವಾದದಲ್ಲಿ ಸಿಕ್ಕಿಬಿದ್ದ ಬೇಬೋ

ಸೂಪರ್ ಸ್ಟಾರ್ ಕರೀನಾಳ ಮರಿ ಸೂಪರ್ ಸ್ಟಾರ್ ಮಕ್ಕಳಂತೂ ಹುಟ್ಟತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸತೊಡಗಿದ್ದಾರೆ. ಇದೀಗ ಕರೀನಾ ತನ್ನ 2-2 ಬಾರಿಯ ಪ್ರೆಗ್ನೆನ್ಸಿ ಕುರಿತು, ಗರ್ಭವತಿಯರಿಗೆ ನಾನಾ ಸಲಹೆ ನೀಡುವ ಪುಸ್ತಕ ರಚಿಸಿ, ಸುಮ್ಮನಿರಲಾಗದೆ ಅದರ ಹೆಸರನ್ನು `ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್’ ಎಂದಿರಿಸುವುದೇ? ಇಲ್ಲಿ ಗರ್ಭಿಣಿಯರು ಕಟ್ಟುನಿಟ್ಟಾಗಿ ಪ್ರೆಗ್ನೆನ್ಸಿಯಲ್ಲಿ ಅನುಸರಿಸಬೇಕಾದ ಸಲಹೆಗಳನ್ನೇ `ಬೈಬಲ್’ ಎಂದಿರುವುದಾಗಿ ಅವಳು ಒತ್ತಿ ಹೇಳಿದರೂ ಪುಸ್ತಕ ರಿಲೀಸ್ ಆದ ತಕ್ಷಣ, ಕಾನ್ಪುರದ ಕ್ರೈಸ್ತರು ಅವಳ ವಿರುದ್ಧ ಕೋರ್ಟಿಗೆ ಮೊರೆಹೋಗಿದ್ದಾರೆ. ಬಾಲಿವುಡ್ ಮಂದಿ ಅವಳೀಗ ಕಾನೂನಿನ ಕಬಂಧ ಬಾಹುಗಳಲ್ಲಿ ಸಿಕ್ಕಿಬಿದ್ದಳಲ್ಲ ಎಂದು ಪೇಚಾಡುತ್ತಿದ್ದಾರೆ. ತಾನೇನೇ ಸಮಜಾಯಿಷಿ ನೀಡಿದರೂ, ಧರ್ಮದ ಮುಂದೆ ಅವಳೀಗ ತತ್ತರಿಸುವಂತಾಗಿದೆ. ಚೀರ್ ಅಪ್ ಬೇಬೋ!
ಸರೋಗೆಸಿ ಆಧಾರಿತ ಮಿಮೀ

ಕೃತಿ ಸೇನನ್ ಪಂಕಜ್ ತ್ರಿಪಾಠಿಯರಂಥ ಘಟಾನುಘಟಿ ಕಲಾವಿದರು ನಟಿಸಿರುವ `ಮಿಮೀ’ ಚಿತ್ರ ತಯಾರಾಗಿ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಗಾಗಿ ಕಾದಿದೆ. ಈ ಚಿತ್ರದ ಟ್ರೇಲರ್ ಸೀದಾಸಾದಾ ಆಗಿದ್ದು, ಒಂದು ಯಕ್ಷಪ್ರಶ್ನೆ ಹುಟ್ಟುಹಾಕಿದೆಯಂತೆ. ಈ ಚಿತ್ರ ಮೂಲತಃ ಸರೋಗೆಸಿ ಆಧಾರಿತವಾಗಿದ್ದು, ಹಣದ ದುರಾಸೆಗಾಗಿ ಒಬ್ಬ ಹೆಣ್ಣು ಸರೋಗೇಟ್ ಮದರ್‌ಆಗಲು ತಯಾರಾಗಿ ಪ್ರೆಗ್ನೆಂಟ್ ಆದಮೇಲೆ, ಅದಕ್ಕೆ ಒಪ್ಪಿದ ದಂಪತಿ ಆ ಮಗುವನ್ನು ಬೇಡ ಎಂದು ತಿರಸ್ಕರಿಸಿದರೆ ಮುಂದೆ ಇವಳ ಗತಿ….? ಇದು ಅತಿ ಗಂಭೀರ ಸವಾಲಾಗಿದ್ದು, ಈ ಬೆಳೆಯುತ್ತಿರುವ ದಂಧೆಯ ಹಲವು ಮುಖ ತೋರಿಸುತ್ತದೆ.
ಸೈಫ್ ಅಲಿ ಇದೀಗ ನಡೆಯದ ನಾಣ್ಯವೇ?

ಸೋಲೋ ಚಿತ್ರಗಳ ಯಶಸ್ವಿ ಸ್ಟಾರ್, ಸತತ ಮಲ್ಟಿಸಾರ್ ಚಿತ್ರಗಳ ನೂಕು ನುಗ್ಗಲಲ್ಲೇ ಇರಬಯಸಿದರೆ ಅಂಥವರ ಬಗ್ಗೆ ಸಂದೇಹ ಮೂಡದೇ ಇರದು. `ಬಾರರ್’ ಚಿತ್ರ ಬಿಟ್ಟರೆ, ಇತ್ತೀಚಿನ ವರ್ಷಗಳ ಸೈಫ್ ಅಲಿಯ ಎಲ್ಲಾ ಸೋಲೋ ಚಿತ್ರಗಳೂ ಮಖಾಡೆ ಮಲಗಿದ್ದವು. ಆತ ಒಬ್ಬನೇ ನಾಯಕನಾಗಿರುವ ಚಿತ್ರ ಅಂತೂ ಇಂತೂ ಓಡಿದ್ದೇ ಬಂತು. ಹೀಗಾಗಿ ಈತನ ಮುಂದಿನ `ಭೂತ್‌ಪೊಲೀಸ್’ ಚಿತ್ರ ಬಿಟ್ಟರೆ ಸೋಲೋ ಚಿತ್ರಗಳೇ ಇಲ್ಲ ಎನ್ನಬಹುದು. ಹೀಗಾದರೆ ಹೇಗೆ? ಮಹಾನ್ ಖಾನ್ ತ್ರಯರ ಹಾಗೇ ಸೈಫ್ ಆಲಿ ಕೂಡ ನಡೆಯದ ನಾಣ್ಯ ಎನಿಸುತ್ತಿದ್ದಾನೆಯೇ?
ದಿಲೀಪ್ ಕುಮಾರ್ ಬಾಲಿವುಡ್ ಚಿತ್ರಗಳಿಗೆ ಏನೇನೂ ನೀಡಿಲ್ಲ!

ನಸೀರುದ್ದೀನ್ ಶಾಹ್ ತನ್ನ ಬಿಂದಾಸ್ ಮಾತುಗಳಿಂದಾಗಿ ಖ್ಯಾತನಾಗಿದ್ದಾನೆ!? ಈ ಬಾರಿ ಈತನ ನಿಶಾನೆಗೆ ಸಿಲುಕಿದರು ಇತ್ತೀಚೆಗೆ ನಿಧನರಾದ ದಶಕಗಳಾಚೆಯ ಹಿರಿ ನಟ ದಿಲೀಪ್ ಕುಮಾರ್. ದಿಲೀಪ್ ಅತಿ ಅದ್ಭುತ ನಟ ಎಂದು ಒಪ್ಪುವ ನಸೀರ್, ಆದರೆ ಆತ ಹಣ ಗಳಿಸಿಕೊಳ್ಳುವುದು ಒಂದನ್ನು ಬಿಟ್ಟರೆ, ಬಾಲಿವುಡ್ ಚಿತ್ರಗಳಿಗೆ ಮಾಡಿರುವುದಾದರೂ ಏನು? ಎಂದು ನೇರವಾಗಿ ಪ್ರಶ್ನಿಸುತ್ತಾನೆ. ಅವರು ನಿರ್ದೇಶಿದ್ದು ಒಂದೇ ಒಂದು ಚಿತ್ರ. ಅವರು ಯಾವ ಹೊಸಬರಿಗೂ ನಟನೆಯ ಹಿಡಿತ ಕಲಿಸಲಿಲ್ಲ. ಹೀಗೆಲ್ಲ ಈ ಮಹಾಶಯ ಬಾಯಿ ಹರಿಬಿಡುತ್ತಿರುವುದೇಕೆ ಎಂದು ಆತನೇ ಹೇಳಬೇಕು. ಇದಕ್ಕೆ ಮೂಗು ಮುರಿಯುವಂಥ ಉತ್ತರವನ್ನು ಈಗ ಕೊಡಲಿರುವವರು ಯಾರು?
ಧರ್ಮೇಂದ್ರ ಅಥವಾ ಅನುಪಮ್ ಖೇರ್ ಆಮೀರ್ ಬಗ್ಗೆ ವ್ಯಂಗ್ಯ ಏಕೆ?

ಆಮೀರ್ ಖಾನ್ ಹಾಗೂ 2ನೇ ಹೆಂಡತಿ ಕಿರಣ್ ಬೇರಾದ ಸುದ್ದಿ ಹರಡುತ್ತಿದ್ದಂತೆ, ಬಾಲಿವುಡ್ ರಾಜಕೀಯ ರಂಗಗಳಲ್ಲಿ ಗೊಂದಲದ ವ್ಯಂಗ್ಯ ವಾಗ್ಬಾಣಗಳು ಎದುರಾದವು. ಇದು ಪತಿಪತ್ನಿಯರ ತೀರಾ ಖಾಸಗಿ ವಿಚಾರ, ಅವರಾಗಿ ಬೇರೆ ಆಗಲು ನಿರ್ಧರಿಸಿರುವಾಗ ಬೇರೆಯವರಿಗೇಕೆ ಉರಿ ಉರಿ ಆಗಬೇಕು? ಬಿಜೆಪಿಯ ಒಬ್ಬ ಧುರೀಣರಂತೂ, ತಾತನಾಗುವ ಕಾಲದಲ್ಲಿ ಈತ 2ನೆಯವಳಿಗೆ ಖೊಕ್ ಕೊಟ್ಟು 3ನೆಯವಳನ್ನು ಹುಡುಕುತ್ತಿರುವನೇ? ಎಂದು ಹದ್ದುಮೀರಿ ಮಾತನಾಡಿದ್ದಾರೆ. ನಮ್ಮ ಸಮಾಜ ಇಂದಿಗೂ ಸಹ ಮಹಿಳಾ ಸ್ವಾತಂತ್ರ್ಯಕ್ಕೆ ಒತ್ತು ನೀಡುವುದಿಲ್ಲ. ಹೆಣ್ಣು ಎಂದಿದ್ದರೂ ಗಂಡಿನ ಅಧೀನದಲ್ಲೇ ಇರಬೇಕೆನ್ನುವ ಕುತಂತ್ರವಿದು. ಆಮೀರ್ ಇದುವರೆಗೂ ಇಂಥ ಯಾವ ವಾಗ್ಬಾಣಗಳಿಗೂ ತನ್ನ ಮೌನ ಮುರಿದಿಲ್ಲ. ಜನ ಇರುವುದೇ ಆಡಿಕೊಳ್ಳುವುದಕ್ಕೆ, ಅವರ ಕೆಲಸವೇ ಅದು ಎಂದು ಸುಮ್ಮನಾಗಿರಬೇಕು.
ಬದಲಾಗಿದ್ದಾಳಾ ಅಗ್ನಿಪಥದ ಕನ್ನಿಕಾ

ಭೋಪಾಲ್ ಮೂಲದ ನಟಿ ಕನ್ನಿಕಾ, `ಅಗ್ನಿಪಥ್’ ಚಿತ್ರದ ನಂತರ ಬದಲಾದಳಾ….? ಈ ಚಿತ್ರದ ನಂತರ ಆಕೆ ಬೆಳ್ಳಿ ತೆರೆಯಲ್ಲಿ ಮತ್ತೆ ಕಂಡದ್ದೇ ಇಲ್ಲ! ತನ್ನ ಓದು ಪೂರೈಸಲು ಮುಂಬೈ ಬಿಟ್ಟು ತವರೂರು ಸೇರಿದ್ದಾಳಂತೆ. ಆದರೆ ಅವಳೀಗ FBನಲ್ಲಿ ಸತತ ಪೋಸ್ಟ್ ಮಾಡುತ್ತಿರುವ ಅವತಾರದ ಫೋಟೋಗಳನ್ನು ಕಂಡರೆ, ಇವಳು ಮತ್ತೆ ಚಿತ್ರಗಳಲ್ಲಿ ಪಾತ್ರ ದೊರಕಲಿ ಎಂದು ಹಸಿದು ಕಂಗಾಲಾಗಿದ್ದಾಳೆ ಎಂದು ಹಿತೈಷಿಗಳು ಹಾರೈಸುತ್ತಿದ್ದಾರೆ, ಮುಂದೆ ಇವಳ ಗತಿ ಏನಾಗುವುದೋ? ಕಾಲವೇ ಉತ್ತರಿಸಬೇಕು!




 
  
         
    




 
                
                
                
                
                
                
               