ಕೊರೋನಾ ಭಾರತದ ಗೃಹಿಣಿಯರ ಆದ್ಯತೆ, ಅವಶ್ಯಕತೆ, ಅಭ್ಯಾಸ, ನೀತಿ ನಿಯಮಗಳನ್ನು ಬಹಳಷ್ಟು ಬದಲಿಸಿಬಿಟ್ಟಿದೆ. ಕಳೆದ ಒಂದೂವರೆ ವರ್ಷದಲ್ಲಿ ಶತ ಶತಮಾನಗಳಿಂದ ಜಾರಿಯಲ್ಲಿದ್ದ ಅನೇಕ ಕಂದಾಚಾರಗಳನ್ನು ಮಹಿಳೆಯರು ಹಿಮ್ಮೆಟ್ಟಿದ್ದಾರೆ. ಈ ಆಪತ್ಕಾಲದಲ್ಲಿ ಬಹಳಷ್ಟು ಕುಟುಂಬಗಳು ಚೆಲ್ಲಾಪಿಲ್ಲಿಯಾಗಿವೆ. ಆದರೆ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿವೆ.

ಮನೆಯ ಗಳಿಸುವ ವ್ಯಕ್ತಿ ಕೊರೋನಾದ ಕಾರಣದಿಂದ ಕಾಲದ ಸೆಳವಿಗೆ ಸಿಕ್ಕಿ ಹೋದಾಗ ಮನೆ, ಮಕ್ಕಳು ಹಾಗೂ ವೃದ್ಧರ ನಿರ್ವಹಣೆಯ ಹೊಣೆಗಾರಿಕೆ ಮನೆಯ ಏಕಾಂಗಿ ಮಹಿಳೆಯ ಹೆಗಲಿಗೆ ಬಿದ್ದಿದೆ. ಕೊರೋನಾ ಹಲವು ರೀತಿಯಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರಿದೆ. ಕೊರೋನಾದಿಂದ ಉದ್ಭವಿಸಿದ ತೊಂದರೆಯಿಂದ ಕೆಲವು ಮಹಿಳೆಯರು ಬಹಳಷ್ಟು ಕಷ್ಟಕ್ಕೀಡಾದರೆ, ಮತ್ತೆ ಕೆಲವು ಮಹಿಳೆಯರು ಇನ್ನಷ್ಟು ಹೊಣೆಗಾರರಾಗಿ ಸಬಲರಾದರು.

ದೇಶದಲ್ಲಿ ಕೊರೋನಾದಿಂದ ಸಾವಿಗೀಡಾದವರ ಸಂಖ್ಯೆ 2.25 ಲಕ್ಷ ದಾಟಿದೆ. ಪ್ರತಿದಿನ ಈ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಕಳೆದ ವರ್ಷ ಸಾವಿಗೀಡಾದವರಲ್ಲಿ ವೃದ್ಧರ ಸಂಖ್ಯೆ ಹೆಚ್ಚಿಗೆ ಇತ್ತು. ಆದರೆ ಈ ವರ್ಷ ಕೊರೋನಾದ ಹೊಸ ಅಲೆ ಯುವಕರನ್ನು, ಮನೆ ಮಾಲೀಕರನ್ನು ಕಳೆದುಕೊಳ್ಳುವಂತೆ ಮಾಡಿದೆ. ಸತ್ತವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು.

ಒಂದೆಡೆ ಯೌವನದಲ್ಲಿ ಗಂಡನನ್ನು ಕಳೆದುಕೊಂಡು ದುಃಖದಲ್ಲಿದ್ದರೆ, ಇನ್ನೊಂದೆಡೆ ಭವಿಷ್ಯದ ಚಿಂತೆ. ಮಕ್ಕಳ ಪಾಲನೆ ಪೋಷಣೆ, ಅವರ ಓದು, ಮದುವೆ ಹೇಗೆ ಮಾಡುವುದು? ಅತ್ತೆ ಅಥವಾ ಮಾವನ ಔಷಧಿ ಖರ್ಚಿಗೆ ಹಣ ಹೇಗೆ ಹೊಂದಿಸುವುದು? ಎಂದೆಲ್ಲ ಚಿಂತೆಗಳು ಅವರನ್ನು ಕಂಗೆಡಿಸುತ್ತಿವೆ.

ತಪ್ಪಿದ ಕುಟುಂಬದ ಆಸರೆ

ಸಂಯುಕ್ತಾಳ ವಯಸ್ಸು ಇನ್ನೂ 28. ಮಡಿಲಲ್ಲಿ 3 ವರ್ಷದ ಮಗುವಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಆಕೆಯ ಪತಿ ಶೇಖರ್‌ಗೆ ಕೊರೋನಾ ತಗುಲಿತು. ಅಕ್ಕ ಪಕ್ಕದವರಿಗೆ ಗೊತ್ತಾಗದಿರಲಿ, ಮನೆಯಿಂದ ಹೊರಗೆ ಹೋಗಲು ತೊಂದರೆಯಾಗದಿರಲಿ ಎಂದು ಕೊರೋನಾ ಟೆಸ್ಟ್ ಮಾಡಿಸಲಿಲ್ಲ. ಮನೆಯಲ್ಲಿ ಕೆಮ್ಮು ಜ್ವರದ ಔಷಧಿ ತೆಗೆದುಕೊಳ್ಳುತ್ತಾ ಇದ್ದರು. ಹೊರಗೆ ಹೋಗುವುದು, ಬರುವುದು ನಡೆದೇ ಇತ್ತು. ಯಾವಾಗ ಉಸಿರಾಟದ ಸಮಸ್ಯೆಯಾಗತೊಡಗಿತೊ, ಆಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದರು. 1 ವಾರ ಕಾಲ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಅದು ಯಶಸ್ವಿಯಾಗದೆ ಗಂಡ ತೀರಿಹೋದ.ಸಂಯುಕ್ತಾಳ ತವರು ಹಾಗೂ ಗಂಡನ ಮನೆ ಎರಡೂ ಕೋಲಾರದಲ್ಲಿವೆ. ಆಕೆಗೆ ತಂದೆ, ತಾಯಿ ಯಾರೂ ಇಲ್ಲ. ಅಣ್ಣ ಮಾತ್ರ ಇದ್ದಾನೆ. ಆದರೆ ಅವನಿಂದ ಯಾವುದೇ ನೆರವು ಸಿಗಲಿಲ್ಲ.

ಇನ್ನೊಂದೆಡೆ ಗಂಡನ ಊರಿನಲ್ಲಿ ಗಂಡನ ಹೆಸರಿನಲ್ಲಿ ಒಂದಷ್ಟು ಜಮೀನು ಇದೆ. ಆದರೆ ಆ ಜಮೀನಿನ ಮೇಲೆ ನಾದಿನಿ ಹಾಗೂ ಕುಟುಂದವರು ಹಕ್ಕು ಹೊಂದಿದ್ದಾರೆ. ಊರಿನಲ್ಲಿ ವೃದ್ಧ ಅತ್ತೆ ಇದ್ದಾರೆ. ಅವರು ನಾದಿನಿಯ ಮೇಲೆ ಅವಲಂಬಿಸಿ ಆಕೆಯ ಜೊತೆಗೇ ಇದ್ದಾರೆ. ಅವರ ಮಾತನ್ನು ಕೇಳುತ್ತಾರೆ. ಅತ್ತಿಗೆ ತನ್ನ ಬಳಿ ಇರುವ ಜಮೀನನ್ನು ಕೇಳದಿರಲಿ ಎಂದು ನಾದಿನಿ ತನ್ನ ಅಣ್ಣನ ಅಂತ್ಯಕ್ರಿಯೆಗೂ ಬರಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣ ಲಾಕ್‌ ಡೌನ್‌.

ಗಂಡನ ಅಂತ್ಯಕ್ರಿಯೆಯನ್ನು ನಗರಪಾಲಿಕೆಯ ಸ್ವಯಂಸೇಕರ ತಂಡ ನೆರವೇರಿಸಿತು. ಕೆಲವು ದಿನಗಳ ಬಳಿಕ ಅಣ್ಣ ಸಂಯುಕ್ತಾಳನ್ನು ನೋಡಲು ಬಂದು ಕೈಯಲ್ಲೊಂದು 5000 ರೂ. ಇಟ್ಟು ಹೊರಟುಹೋದ.

ದೊಡ್ಡ ಚಿಂತೆ

ಸಂಯುಕ್ತಾಳಿಗೆ ಈಗ ತನ್ನ ಮಗನನ್ನು ಹೇಗೆ ಸಲಹಬೇಕೆಂಬ ಚಿಂತೆ ಕಾಡುತ್ತಿದೆ. ಸಂಯುಕ್ತಾ ಓದಿದ್ದು ಪಿಯುಸಿ ತನಕ. ಆದರೆ ಮದುವೆಗೆ ಮೊದಲು ಆಕೆಗೆ ನೌಕರಿ ಮಾಡು ಅಗತ್ಯವೇ ಇರಲಿಲ್ಲ. ಮನೆಯ ಹೆಂಗಸರು ಹೊರಗೆಲ್ಲೂ ನೌಕರಿ ಮಾಡಿಲ್ಲ. ಸಂಯುಕ್ತಾಳ ಪತಿ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಅವನಿಗೆ ಯಾವುದೇ ಭವಿಷ್ಯ ನಿಧಿಯಾಗಲಿ, ಇತರೆ ಸೌಲಭ್ಯಗಳಾಗಲಿ ಇರಲಿಲ್ಲ.

ತಿಂಗಳ ಸಂಬಳ

ತಿಂಗಳು ಮುಗಿಯುವ ಮೊದಲೇ ಮುಗಿದುಹೋಗುತ್ತಿತ್ತು. ಬ್ಯಾಂಕಿನಲ್ಲಿ 8-10 ಸಾವಿರ ರೂ. ಮಾತ್ರ ಇತ್ತು. ಹೀಗಾಗಿ ಸಂಯುಕ್ತಾ ಕಳೆದ 8-10 ತಿಂಗಳಿಂದ ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ಮಾಡಿಕೊಂಡು ಅದ್ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದಾಳೆ. 5-6 ಮನೆಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಕೆಲಸ ಮಾಡುವುದರಿಂದ ಆಕೆಗೆ 10 ಸಾವಿರ ರೂ.ವರೆಗೆ ಸಿಗುತ್ತದೆ. ಇದರಿಂದ ಅದ್ಹೇಗೊ ಮನೆ ನಡೆಯುತ್ತಿದೆ.

ಕೊರೋನಾ ತನ್ನ ಕಪಿಮುಷ್ಟಿಯನ್ನು ಮತ್ತಷ್ಟು ಚಾಚಿಕೊಂಡಾಗ ಕೆಲವು ಮನೆಗಳಲ್ಲಿ ಹೊರಗಿನಿಂದ ಬರುವ ಕೆಲಸಗಾರರಿಗೆ ಅವಕಾಶ ಕೊಡುತ್ತಿಲ್ಲ. ತನಗೂ ಈ ರೀತಿ ಯಾರಾದರೂ ಹೇಳಿದರೆ ಏನು ಗತಿ ಎಂದು ಸಂಯುಕ್ತಾಳಿಗೆ ಚಿಂತೆ ಕಾಡುತ್ತಿರುತ್ತದೆ.

ಬೆಂಗಳೂರಿನ ಒಂದು ಬಡವಾಣೆಯಲ್ಲಿ ವಾಸಿಸುವ ರೇಖಾಳಿಗೂ ಕೊರೋನಾ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ರೇಖಾ ಎರಡು ಮಕ್ಕಳ ತಾಯಿ. ಕೊರೋನಾಗೂ ಮೊದಲು ಡೋರ್‌ ಟು ಡೋರ್‌ ಬ್ಯೂಟಿಶಿಯನ್‌ ನ ಕೆಲಸ ಮಾಡುತ್ತಿದ್ದಳು. ಕಳೆದ ಒಂದು ವರ್ಷದಿಂದ ಆಕೆಯ ಕೆಲಸ ನಿಂತುಹೋಗಿದೆ.

ಕೊರೋನಾದ ಹೆದರಿಕೆಯಿಂದ ಗ್ರಾಹಕರು ಈಗ ಆಕೆಯನ್ನು ಮನೆಗೆ ಕರೆಸುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿತ್ತು. ಬ್ಯಾಂಕ್‌ ನಲ್ಲಿ ಇದ್ದ ಅಷ್ಟಿಷ್ಟು ಉಳಿತಾಯದ ಹಣ ಈ ಅವಧಿಯಲ್ಲಿ ಖರ್ಚಾಗಿ ಹೋಯಿತು.

ಈಗ ರೇಖಾ ಮನೆಯ ಒಂದು ಪುಟ್ಟ ಭಾಗವನ್ನು ಬ್ಯೂಟಿಪಾರ್ಲರ್‌ ಆಗಿ ಪರಿವರ್ತಿಸಿಕೊಂಡಿದ್ದಾಳೆ. ಆದರೆ ಅವಳು ಇರುವುದು ಬೆಂಗಳೂರಿನ ಹೊರಲಯದಲ್ಲಿ. ಅಲ್ಲಿನ ಜನರಿಗೆ ಪಾರ್ಲರ್‌ನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ. ಹೀಗಾಗಿ ರೇಖಾ ಒಂದೊಂದು ದಿನಗಳು ಚಿಂತೆಯಲ್ಲಿ ಕಳೆಯುವಂತಾಗಿದೆ. ತೀರಾ ಇತ್ತೀಚೆಗಂತೂ ಪಾರ್ಲರ್‌ ಎದುರು ಹಾಲಿನ ಮಾರಾಟ ಮಾಡಲು ಆರಂಭಿಸಿದರೂ ಅದರಿಂದ ಲಾಭ ಕಡಿಮೆ.

ರೇಖಾ ಈಗ ತನ್ನ ಮಕ್ಕಳಿಗೆ ಕೊಡಿಸುತ್ತಿದ್ದ ಆನ್‌ ಲೈನ್‌ ಶಿಕ್ಷಣವನ್ನು ನಿಲ್ಲಿಸಿಬಿಟ್ಟಿದ್ದಾಳೆ. ಸ್ಕೂಲ್ ಫೀಸ್‌ ಅಥವಾ ನೆಟ್‌ ರೀಚಾರ್ಜ್ ಮಾಡಲು ಕೂಡ ಆಕೆಗೆ ಸಮಸ್ಯೆ ಎದುರಾಗುತ್ತಿದೆ. ಮುಂದಿನ ಜೀವನ ಹೇಗೆಂಬ ಚಿಂತೆ ಆಕೆಯನ್ನು ಕಾಡುತ್ತಿದೆ.

ನುಣುಚಿಕೊಳ್ಳುವ ಸಂಬಂಧಿಕರು

ಬೆಂಗಳೂರಿನ 38 ವರ್ಷದ ಅಂಜನಾಳ ಪತಿ 7 ದಿನಗಳ ಕಾಲ ಕೊರೋನಾದೊಂದಿಗೆ ಹೋರಾಡುತ್ತಾ ಸಾವಿಗೀಡಾದ. ಅಂಜನಾಳ ಮನೆಯ ಎಲ್ಲ ಪುರುಷ ಸದಸ್ಯರು ಕೊರೋನಾ ಸೋಂಕಿಗೆ ತುತ್ತಾಗಿದ್ದುದರಿಂದ ಪತಿಯ ಶವ ಸಂಸ್ಕಾರವನ್ನು ಹೇಗೆ ಮಾಡಬೇಕೆಂಬ ಚಿಂತೆ ಆಕೆಯನ್ನು ಕಾಡುತ್ತಿತ್ತು. ಮನೆಯಲ್ಲಿಯೇ ಶವ ಬಿದ್ದುಕೊಂಡಿತ್ತು. ಶವಕ್ಕೆ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿ ಆಕೆ ಬಸವಳಿದಿದ್ದಳು. ಸಂಬಂಧಿಕರಾಗಲಿ, ಅಕ್ಕಪಕ್ಕದವರಾಗಲಿ, ಸ್ನೇಹಿತರಾಗಲಿ ಯಾರೊಬ್ಬರೂ ಮುಂದೆ ಬರಲಿಲ್ಲ. ಎಲ್ಲರಿಗೂ ಫೋನ್‌ ಮಾಡಿ ಮಾಡಿ ಅಂಜನಾ ಸುಸ್ತಾಗಿ ಹೋದಳು. ಎಲ್ಲರೂ ಕೊರೋನಾ ಸೋಂಕಿನ ನೆಪವೊಡ್ಡಿ ತಮ್ಮನ್ನು ತಾವು ದೂರ ಇಟ್ಟುಕೊಂಡರು.

ಆಗ ಆಕೆಯ ನೆರವಿಗೆ ಬಂದದ್ದು ಸಂಘ ಸಂಸ್ಥೆಯೊಂದು. ಆ ಸಂಸ್ಥೆಯ ಸದಸ್ಯರೇ ಅಂತ್ಯ ಸಂಸ್ಕಾರ ನೆರವೇರಿಸಿದರು.

ಕೆಲವೇ ನಿಮಿಷಗಳಲ್ಲಿ ಆ ಸಂಸ್ಥೆಯ ಸದಸ್ಯರು ಮನೆಗೆ ಬಂದು ಶವವನ್ನು ಪ್ಲಾಸ್ಟಿಕ್‌ ನಲ್ಲಿ ಸುತ್ತಿ ಸ್ಮಶಾನಕ್ಕೆ ತೆಗೆದುಕೊಂಡು ಹೋದರು. ಅಂಜನಾ ಕೂಡ ಅವರೊಂದಿಗೆ ಹೋದಳು. ಧಾರ್ಮಿಕ ನಂಬಿಕೆಗಳನ್ನು ಬದಿಗೊತ್ತಿ ಅಂಜನಾ ತಾನೇ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದಳು.

ಅಂಜನಾ ಆ ನೋವಿನಿಂದ ಇನ್ನೂ ಹೊರಬಂದಿಲ್ಲ. ತಾನೊಬ್ಬಳೇ ಪತಿಯ ಚಿತೆಯ ಮುಂದೆ ನಿಂತಿರುವ ದೃಶ್ಯ ಅವಳ ಕಣ್ಣಂಚಿನಿಂದ ಇನ್ನೂ ಹೋಗುತ್ತಲೇ ಇಲ್ಲ.

ಭವಿಷ್ಯ ಈಗ ಅನಿಶ್ಚಿತತೆಯಿಂದ ಕೂಡಿದೆ. 9 ವರ್ಷದ ಮಗನ ಓದಿನ ಸಂಪೂರ್ಣ ಜವಾಬ್ದಾರಿ ಅಂಜನಾಳ ಹೆಗಲಿಗೆ ಬಿದ್ದಿದೆ. ಅಂಜನಾಳ ಸಂಬಂಧಿಕರು ಹಾಗೂ ಸ್ನೇಹಿತರ ಬಳಗ ಅದೇ ನಗರದಲ್ಲಿದ್ದರೂ ಈಗ ಅವರೆಲ್ಲ ಅಪರಿಚಿತರಂತೆ ವರ್ತಿಸುತ್ತಿದ್ದಾರೆ.

ಧಾರ್ಮಿಕ ವಿಧಾನಗಳಿಗೆ ಕೊಕ್ಕೆ

Aurat-ke-kandhe-par-page3

ಕೊರೋನಾ ಕಾಲದಲ್ಲಿ ಬಹಳಷ್ಟು ಧಾರ್ಮಿಕ ವಿಧಾನಗಳಿಗೆ ಪೆಟ್ಟುಬಿದ್ದಿದೆ. ಯಾವ ಮನೆಗಳಲ್ಲಿ ಕೊರೋನಾದಿಂದ ಮೃತರಾದರೊ, ಅವರ ಕುಟುಂಬದವರು, ಸಂಬಂಧಿಕರು ಪ್ರಾಣಭಯದಿಂದ ದೂರ ಉಳಿದರು. ಹೀಗಾಗಿ ಮೃತರ ಅಂತ್ಯ ಸಂಸ್ಕಾರವನ್ನು ಮಹಿಳೆಯರೇ ನೆರವೇರಿಸುವಂತಾಯಿತು. ಮೊದಲು ಸ್ಮಶಾನಗಳಿಗೆ ಮಹಿಳೆಯರು ಹೋಗುತ್ತಲೇ ಇರಲಿಲ್ಲ. ಧರ್ಮದ ಗುತ್ತಿಗೆದಾರರು ಅವರಿಗೆ ನಿರ್ಬಂಧ ಹೇರಿದ್ದರು.

ಈಗ ಕೊರೋನಾ ಮಹಿಳೆಯರನ್ನು ಧೈರ್ಯಶೀಲರನ್ನಾಗಿಸಿದೆ. ಈಗ ತಮ್ಮವರಿಗಾಗಿ ಮನೆಯೊಳಗೆ, ಹೊರಗೆ, ಆಸ್ಪತ್ರೆ ಹಾಗೂ ಸ್ಮಶಾನದಲ್ಲೂ ಕೂಡ ಹೆಣಗಾಡುತ್ತಿದ್ದಾರೆ. ಗಂಡ ನೌಕರಿಯಲ್ಲಿ ಇರದಿದ್ದರೆ, ಅವನ ಅನುಪಸ್ಥಿತಿಯಲ್ಲಿ ಯಾವುದೊ ಕೆಲಸಗಳನ್ನು ಮಾಡುತ್ತಾ ಕುಟುಂಬ ನಡೆಸುತ್ತಿದ್ದಾರೆ.

ಕೊರೋನಾದ ಕಾರಣದಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಮಧ್ಯಮ ವರ್ಗದ ನೌಕರಸ್ಥ ಮಹಿಳೆಯರ ಸಮಸ್ಯೆಗಳು ದುಪ್ಪಟ್ಟಾಗಿವೆ. ಮನೆಯ ಕೆಲಸಗಳನ್ನೆಲ್ಲ ನಿರ್ವಹಣೆ ಮಾಡುತ್ತಾ ಆಫೀಸಿನ ಕೆಲಸವನ್ನು ಕೂಡ ಸಂಭಾಳಿಸುತ್ತಿದ್ದಾರೆ. ಮನೆಗೆಲಸದವರು ಇಲ್ಲದೆ ಇರುವುದರಿಂದ ಅವರು ಮಾಡುತ್ತಿದ್ದ ಕೆಲಸಗಳನ್ನೆಲ್ಲ ಈಗ ತಾವೇ ಮಾಡಬೇಕಾಗಿ ಬಂದಿದೆ.

ಕೊರೋನಾ ವೈರಸ್‌ ನ ಆತಂಕ ಹೆಚ್ಚಾದ ಬಳಿಕ ಮಹಾನಗರಗಳಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ಈ ಮೊದಲು ಮನೆ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಅಲ್ಲಿ ನಿರ್ಬಂಧ ಹೇರಲಾಗಿದೆ. ಈ ಕಾರಣದಿಂದ ಕಸ ಗುಡಿಸುವುದರಿಂದ ಹಿಡಿದು ಬಟ್ಟೆ ಒಗೆಯುವ ಕೆಲಸಗಳನ್ನು ಕೂಡ ಅವರವರೇ ಮಾಡಬೇಕಾಗಿ ಬಂದಿದೆ.

ಸರ್ಕಾರಿ ನೌಕರಿ ಮಾಡುವ ಪ್ರೀತಿ ಹೀಗೆ ಹೇಳುತ್ತಾಳೆ, “ನನ್ನ ಹಾಗೂ ನನ್ನ ಇಡೀ ಕುಟುಂಬ ಕೊರೋನಾದ ಕಪಿಮುಷ್ಟಿಗೆ ಸಿಲುಕಿದೆ. ಎಲ್ಲರಿಗೂ ಜ್ವರ ಹಾಗೂ ಕೆಮ್ಮು ಬಾಧಿಸುತ್ತಿದೆ. ಪತಿ ಹಾಗೂ ಮಕ್ಕಳು ಬೇರೆ ಬೇರೆ ಕೋಣೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸೋಂಕಿನ ಜೊತೆಗೆ ನಾನು ಎಲ್ಲರಿಗೂ ಆಹಾರ ಸಿದ್ಧಪಡಿಸಬೇಕಿದೆ. ಎಲ್ಲರಿಗೂ ಬಿಸಿ ನೀರು ಹಾಗೂ ಮನೆ ಸ್ವಚ್ಛತೆ ಕೈಗೊಳ್ಳಬೇಕಿದೆ. ದೈಹಿಕ ನಿಶ್ಶಕ್ತಿಯಿಂದಾಗಿ ಪರಿಸ್ಥಿತಿ ತೀರಾ ಹೀನಾಯವಾಗಿದೆ. ಇಂತಹ ಸ್ಥಿತಿಯಲ್ಲಿ ಯಾರೊಬ್ಬರ ಸಹಾಯ ಪಡೆಯದ ಸ್ಥಿತಿ ಉದ್ಭವವಾಗಿದೆ.”

ಪ್ರೀತಿಯಂತಹ ಸಾವಿರಾರು ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. ಆದರೂ ಅವರಿಗೆ ಕೆಲಸ ಕಾರ್ಯಗಳಿಂದ ಮುಕ್ತಿ ದೊರಕಿಲ್ಲ. ತಮ್ಮ ಪ್ರಾಣವನ್ನು ಪಣಕ್ಕೊಡ್ಡಿ ತನ್ನ ಪತಿ, ಮಕ್ಕಳು ಹಾಗೂ ಹಿರಿಯ ನಾಗರಿಕರ ಪ್ರಾಣ ಉಳಿಸುವಲ್ಲಿ ನಿರತರಾಗಿದ್ದಾರೆ.

– ನಾಗರಾಜು 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ