ಟಕ್‌…..ಟಕ್‌…..ಟಕ್‌…. ಬಾಗಿಲು ಒಂದೇ ಸಮನೇ ಬಡಿಯುತ್ತಿರುವ ಶಬ್ದ ಕೇಳಿಸುತ್ತಿತ್ತು. ಬೇಸಿಗೆಯ ಮಧ್ಯಾಹ್ನದ ಹೊತ್ತಿನಲ್ಲಿ ನಮಗದು ಅತ್ಯಂತ ಅಸಾಮಾನ್ಯ ಎನಿಸುತ್ತಿತ್ತು. ಅದು ಯಾವುದೊ ಸಂಕಷ್ಟದ ಸಮಯ ಅಥವಾ ನಮ್ಮನ್ನು ಯಾರಾದರೂ ಎಚ್ಚರಿಸಲು ಹೀಗೆ ಒಂದೇ ಸಮನೆ ಬಾಗಿಲು ಬಡಿಯುತ್ತಿರಬಹುದು ಎನಿಸಿತು. ನಾವೆಲ್ಲ ಅಚ್ಚರಿಗೊಳಗಾಗಿ ಬಾಗಿಲಿನತ್ತ ಧಾವಿಸಿದೆ. ನಾನಂತೂ ಉಳಿದವರನ್ನು ಹಿಂದೆ ಹಾಕಿ ಬಾಗಿಲ ಬಳಿ ಓಡಿದೆ. ಒಬ್ಬ ವ್ಯಕ್ತಿ ಮಾಸ್ಕ್ ಧರಿಸಿ ಹೊರಗೆ ನಿಂತಿರುವುದು ಕಂಡುಬಂತು.

ನಾನು ಒಳಗಿನಿಂದಲೇ ಕೇಳಿದೆ, “ಏನ್‌ ವಿಷಯ?”

ಆ ವ್ಯಕ್ತಿ ಸ್ವಲ್ಪ ಆತುರಾತುರದಲ್ಲಿಯೇ ಉಸುರಿದ, “ಮೇಡಂ, ನಿಮ್ಮ ಮರ ನೆಲಕ್ಕುರುಳಿದೆ.”

“ಏನು?” ಎಂದು ಕೇಳುತ್ತ ನಾವೆಲ್ಲ ಅಂಗಳದತ್ತ ಓಡಿದೆವು. ಅಲ್ಲಿನ ದೃಶ್ಯ ನೋಡಿ ನಾವೆಲ್ಲ ಗಾಬರಿಗೊಳಗಾದೆವು.

“ಇದೇನಿದು? ಇದೇಗ್ಹಾಯಿತು?”

ಮರ ರಸ್ತೆಯ ನಟ್ಟನಡುವೆ ಉರುಳಿಬಿದ್ದಿತ್ತು. ಅದರಲ್ಲಿನ ಕೆಲವು ಒಣಗಿದ ಟೊಂಗೆಗಳು ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮರದ ಕೆಳಭಾಗದಲ್ಲಿ ನಾವು ಅಂಚಿನಗುಂಟ ಸಣ್ಣ ಸಣ್ಣ ಸಸಿಗಳನ್ನು ನೆಟ್ಟಿದ್ದೆವು. ಅವು ಅದರ ಬುಡದ ಭಾಗದಲ್ಲಿ ಅಪ್ಪಚ್ಚಿಯಾಗಿ ಹೋಗಿದ್ದವು. ಮರದ ಮೇಲೆ ಕಟ್ಟಲಾಗಿದ್ದ ಟಿ.ವಿ ಕೇಬಲ್ ಮರದ ಜೊತೆ ಜೊತೆಗೆ ಕೆಳಗೆ ತುಂಡಾಗಿ ಬಿದ್ದು ಹೋಗಿದ್ದವು. ಮನೆಯ ಎದುರುಗಡೆ ವಾಸಿಸುತ್ತಿದ್ದ ಕುಟುಂಬದವರ ಕಾರುಗಳು ಮಾತ್ರ ಮರದ ಟೊಂಗೆಗಳಡಿ ಸಿಲುಕದೆ ಸುರಕ್ಷಿತವಾಗಿದ್ದವು. ಮರದಿಂದ ಅವುಗಳಿಗೆ ಒಂದು ಸಣ್ಣ ತರಚು ಗಾಯ ಕೂಡ ಆಗಿರಲಿಲ್ಲ.

ಅದು ಬೇಸಿಗೆಯ ಉರಿಬಿಸಿಲಿನ ದಿನಗಳು. ಹೀಗಾಗಿ ರಸ್ತೆಯಲ್ಲಿ ಸಂಚಾರ ವಿರಳವಾಗಿತ್ತು. ನಾನು ಮನಸಾರೆ ಆ ಒಣಗಿದ್ದ ಮರ ಉರುಳಿಬಿದ್ದದ್ದನ್ನು ಗಮನಿಸಿ ನೋಡತೊಡಗಿದೆ. ಅದನ್ನು ನೋಡಿ ನನಗೆ 30 ವರ್ಷಗಳ ಹಿಂದಿನ ನೆನಪು ತಾಜಾ ಆಯಿತು.

ನಾವು ಆಗಷ್ಟೇ ಆ ಮನೆಗೆ ವಾಸಿಸಲು ಬಂದಿದ್ದೆವು. ನಮ್ಮ ನೆರೆಮನೆಯಾಕೆ ಒಂದು ಪುಟ್ಟ ಸಸಿ ಕೊಡುತ್ತ ನನಗೆ ಹೇಳಿದ್ದರು, “ನಮ್ಮ ಬೀದಿಯುದ್ದಕ್ಕೂ ಇಂತಹದೇ ಸಸಿಗಳನ್ನೇ ನೆಟ್ಟಿದ್ದಾರೆ. ನಿಮಗೂ ಅಂಥದೇ ಕೊಡಬೇಕು ಅನಿಸಿ ಇದನ್ನು ನಿಮಗೆ ಕೊಡುತ್ತಿರುವೆ. ಒಂದೇ ರೀತಿಯ ಮರಗಳನ್ನು ನೋಡಿದಾಗ ಬಹಳ ಖುಷಿಯಾಗುತ್ತದೆ.”

ಆ ಪುಟ್ಟ ಸಸಿ ಕ್ರಮೇಣ ದೊಡ್ಡದಾಗುತ್ತ ಹೋಯಿತು. ಸದಾ ಹಸಿರಾಗಿರುತ್ತಿತ್ತು. ಅದರಲ್ಲಿ ಪುಟ್ಟ ಬಿಳಿ ಹೂಗಳು ಕಂಡುಬರುತ್ತಿದ್ದವು. ಅದರ ತೀವ್ರ ವಾಸನೆ ಬಹಳ ವಿಚಿತ್ರ ಎನಿಸುತ್ತಿತ್ತು. ಬೇಸಿಗೆಯ ದಿನಗಳಲ್ಲಿ ಉದ್ದನೆಯ ತೆಳ್ಳನೆಯ ಬೀನ್ಸ್ ನಂತಹ ಕಾಯಿಗಳು, ಹಾರುತ್ತಿದ್ದ ಬೀಜಗಳು ಬಹಳಷ್ಟು ತೊಂದರೆ ಉಂಟು ಮಾಡುತ್ತಿದ್ದವು. ಅವು ಎಲ್ಲರ ಮನೆಯೊಳಗೆ ಹೇಳದೆ ಕೇಳದೆ ನುಸುಳುತ್ತಿದ್ದವು. ಆದರೆ ಆ ಮರ ಸದಾ ಹಸಿರಾಗಿರುತ್ತಿದ್ದುದರಿಂದ ಈ ಒಂದಿಷ್ಟು ಬಂದು ಹೋಗುವ ತೊಂದರೆಗಳು ಅಷ್ಟೊಂದು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ನಾನು ಕೊನೆಗೂ ಮರದ ಹೆಸರು ಏನೆಂದು ಪತ್ತೆ ಮಾಡಿದೆ. ಸಸ್ಯಶಾಸ್ತ್ರಜ್ಞರೊಬ್ಬರು ಅದರ ಹೆಸರು `ಸಪ್ತಪರ್ಣಿ’ ಎಂದು ಹೇಳಿದರು.

ಒಂದೇ ಗುಚ್ಛದಲ್ಲಿ ಏಕಕಾಲಕ್ಕೆ 7 ಎಲೆಗಳನ್ನು ಬಿಡುವುದರಿಂದ ಈ ಹೆಸರು ಬಂತೆಂದು ಗೊತ್ತಾಯಿತು. ಆ ಗಿಡದ ಹೆಸರು `ಸಪ್ತಪರ್ಣಿ’ ನನಗೆ ಬಹಳ ಇಷ್ಟವಾಯಿತು. ಜೊತೆಗೆ ಅದರ ತೀವ್ರ ವಾಸನೆಯ ಕಾರಣದಿಂದ ಅದಕ್ಕೆ ಸ್ಥಳೀಯ ಭಾಷೆಯಲ್ಲಿ ಬೇರೆ ಬೇರೆ ಹೆಸರುಗಳಿವೆ ಎನ್ನುವುದು ಕೂಡ ತಿಳಿಯಿತು.

ನೆಲಕ್ಕುರುಳಿದ ಸಪ್ತಪರ್ಣಿ ಕೂಡ ಹಾಗೆಯೇ ಇತ್ತು. ತೀವ್ರ ಬಿಸಿಲಿನಲ್ಲಿ ಅಂಚೆಯವರು ಅಥವಾ ಕೊರಿಯರ್‌ ನವರು ಬಂದರೆ, ನಾನು ಸಾಮಾನ್ಯವಾಗಿ ಅದೇ ಮರದ ನೆರಳಿನಲ್ಲಿ ನಿಂತು ಅವರಿಗೆ ಲ್ಯಾಂಡ್‌ ಮಾರ್ಕ್‌ ಹೇಳ್ತಿದ್ದೆ. ಕಾರಿನವರು ಕೂಡ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈ ಮರದ ಕೆಳಗಡೆಯೇ ನಿಲ್ಲಿಸುತ್ತಿದ್ದರು. ದಾರಿಯಲ್ಲಿ ಹೋಗುವವರು ಸುಸ್ತಾಗಿ ಈ ಮರದ ಕೆಳಗೆ ನಿಂತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದರು. ಕೆಲವು ಪಕ್ಷಿಗಳು ತಮ್ಮ ಗೂಡನ್ನು ಕಟ್ಟಿ ಈ ಮರದ ಶೋಭೆಯನ್ನು ಹೆಚ್ಚಿಸಿದ್ದವು. ಅವುಗಳ ಚಿಲಿಪಿಲಿ ಸ್ವರ ಮರದೊಂದಿಗೆ ಮಾತುಕತೆ ನಡೆಸುತ್ತಿವೆಯೇನೊ ಅನಿಸುತ್ತಿತ್ತು. ಟಿ.ವಿ ಕೇಬಲ್ ನವರು ಈ ಮರದ ಟೊಂಗೆಗಳನ್ನು ತಮ್ಮ ವೈರ್‌ ಗಂಟು ಹಾಕಲು ಬಳಸುತ್ತಿದ್ದರು. ಯಾವಾಗಲಾದರೂ ಮಕ್ಕಳ ಗಾಳಿಪಟಗಳು ಆ ಮರದಲ್ಲಿ ಸಿಕ್ಕಿ ಹಾಕಿಕೊಂಡಾಗ ಮರ ಅದರ ಖುಷಿ ಪಡೆದುಕೊಳ್ಳುತ್ತಿದೆ ಎನಿಸುತ್ತಿತ್ತು.

ದೀಪಾವಳಿಯ ದಿನಗಳಲ್ಲಿ ನಾನು ಆ ಮರದ ಕೆಳಗಡೆ ಕೂಡ ದೀಪಗಳನ್ನು ಬೆಳಗಿಸುತ್ತಿದ್ದೆ. ಅದು ನನಗೆ ಬಹಳ ಖುಷಿ ಕೊಡುವ ಸಂಗತಿ ಎನಿಸುತ್ತಿತ್ತು. ಮಕ್ಕಳು ಆ ಮರದ ಕೆಳಗಡೆ ನಿಂತು ತಮ್ಮ ಫೋಟೋ ಸೆರೆಹಿಡಿದಾಗ ಅವೆಷ್ಟು ಸುಂದರ ಎಂದು ನನಗೆ ಗೊತ್ತಿಲ್ಲದಂತೆಯೇ ಮೂಗಿನ ಮೇಲೆ ಬೆರಳಿಡುತ್ತಿದ್ದೆ. ನಾನು ಯಾವಾಗಲಾದರೂ ಬಸ್‌ ಸ್ಟಾಂಡ್‌ ಹಾಗೂ ರೈಲ್ವೆ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ಮರಳುತ್ತಿದ್ದರೆ, ನಾನು ಆ ಮರದ ಕೆಳಗಿನ ಮನೆಯ ಹತ್ತಿರ ನಿಲ್ಲಿಸು ಎಂದು ಹೇಳುತ್ತಿದ್ದೆ. ಆ ಮರವೇ ನನಗೆ ವಿಳಾಸವಾಗಿದೆ ಎಂದು ನನಗನ್ನಿಸುತ್ತಿತ್ತು. ಮಳೆಗಾಲದಲ್ಲಿ ಮಳೆಯ ಮುತ್ತಿನ ಹನಿಗಳು ಅದರ ಎಲೆಯ ಮೇಲೆ ಬೀಳುವಾಗಿನ ಸದ್ದು ನನಗೆ ಬಹಳ ಪ್ರೀತಿಪಾತ್ರ ಎನಿಸುತ್ತಿತ್ತು.

30 ವರ್ಷದ ಅದೆಷ್ಟೋ ನೆನಪುಗಳು ಆ ಮರದೊಂದಿಗೆ ಮಿಳಿತಗೊಂಡಿದ್ದವು. ಅದೆಷ್ಟೋ ಘಟನೆಗಳಿಗೆ ಆ ಮರ ಸಾಕ್ಷಿಯಾಗಿ ನಮ್ಮ ಜೊತೆಗೆ ತಟಸ್ಥವಾಗಿ ನಿಂತಿತ್ತು. ಹಗಲು, ರಾತ್ರಿ ಪ್ರತಿ ಹವಾಮಾನದಲ್ಲೂ ತನ್ನ ಪಾಲುದಾರಿಕೆ ದಾಖಲಿಸುತ್ತಿತ್ತು.

neke-wala-ped-story2

ಅದೇನಾಯ್ತೋ ಏನೋ ಅದೆಷ್ಟೋ ಜನರಿಗೆ ನೆಮ್ಮದಿಯ ನೆರಳು ನೀಡುತ್ತಿದ್ದ ಆ ಮರ ಎರಡು ವರ್ಷಗಳಿಂದೀಚೆಗೆ ಒಣಗುತ್ತಾ ಹೋಯಿತು. ಮೊದಲು ಕೆಲವು ದಿನಗಳಲ್ಲಿ ಅದರ ಕೆಲವು ಟೊಂಗೆಗಳು ಒಣಗುತ್ತಾ ಹೊರಟಿದ್ದವು. ದೊಡ್ಡದಾದ ಕೆಲವು ಟೊಂಗೆಗಳತ್ತ ಗಮನಹರಿಸಿದಾಗ ಅದರಲ್ಲಿ ಇನ್ನು ಹಸಿರೆಲೆಗಳು ಕಂಡುಬರುತ್ತಿದ್ದವು. ನಾನು ಸ್ವಲ್ಪ ನಿಶ್ಚಿಂತಳಾದೆ, ಅದು ಮತ್ತೆ ಸರಿಹೋಗಬಹುದು ಎನಿಸಿತು. ಆದರೆ ಕೆಲವು ತಿಂಗಳುಗಳಲ್ಲಿ ಆ ಟೊಂಗೆಗಳ ಎಲೆಗಳು ಕೂಡ ಮುರುಟತೊಡಗಿದವು. ನನಗೀಗ ಚಿಂತೆಯಾಗತೊಡಗಿತು. ಮಳೆ ಬಂದ ನಂತರ ಮತ್ತೆ ಮರ ಚಿಗುರಬಹುದುದೆಂದೂ ನನ್ನ ಮತ್ತೊಂದು ಮನಸ್ಸು ಯೋಚಿಸುತ್ತಿತ್ತು. ಆದರೆ ಮಳೆಗಾಲ ಶುರುವಾಗಿ 2-3 ತಿಂಗಳು ಕಳೆದು ಹೋದರೂ ಅದು ಪುನಃ ಚಿಗುರೊಡೆಯಲಿಲ್ಲ, ಒಣಗುತ್ತಲೇ ಹೋಯಿತು. ಒಳಗಿಂದೊಳಗೆ ಅದು ದುರ್ಬಲವಾಗುತ್ತ ಹೋಯಿತು. ಜೋರಾಗಿ ಗಾಳಿ ಬೀಸಿದರೆ ಅದು ಅಲ್ಲಾಡುತ್ತಿತ್ತು. ಆಗ ನಾನು ಓಡಿಹೋಗಿ ಕಿಟಿಕಿ, ಬಾಗಿಲುಗಳನ್ನು ಮುಚ್ಚುತ್ತಿದ್ದೆ. ಆದರೆ ಹೊರಗೆ ನಿಂತ ಆ ಒಣಗಿದ ಮರದ ಚಿಂತೆ ನನ್ನನ್ನು ಕಾಡುತ್ತಿತ್ತು.

ಮರ ಈಗ ಪರಿಪೂರ್ಣವಾಗಿ ಒಣಗಿಹೋಗಿತ್ತು. ಸಂಬಂಧಪಟ್ಟ ಇಲಾಖೆಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಅದು ಚಿಗುರುವ ಯಾವ ಲಕ್ಷಣಗಳೂ ಕಂಡುಬರುತ್ತಿರಲಿಲ್ಲ. ಹಾಗಾಗಿ ನಾನು ಒಂದು ಹೂವಿನ ಬಳ್ಳಿಯನ್ನು ಅದರ ಆಸರೆಯಲ್ಲಿ ಬೆಳೆಸಿದ್ದೆ. ಆ ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತ ಹೊರಟಿತ್ತು. ನಮ್ಮ ಮನೆಯ ಮಾಲಿ ಬಳ್ಳಿಯ ಮುಂದಿನ ಭಾಗವನ್ನು ಮರದ ಟೊಂಗೆಗೆ ಸುತ್ತಿದ. ಈಗ ಬಳ್ಳಿಯಲ್ಲಿ ಕೆಂಪು ಹೂಗಳು ಅರಳಿದ್ದವು. ಅದನ್ನು ಕಂಡು ನನಗೆ ಬಹಳ ಹಿತಕರ ಎನಿಸಿತು. ಈ ಉಪಾಯದಿಂದ ಮರದ ಒಂದಷ್ಟು ಸೊಗಸಾಗಿತ್ತು. ಪಕ್ಷಿಗಳು ಕೂಡ ಪುನಃ ಬರುತ್ತಿದ್ದವು. ಆದರೆ ಅ ಗೂಡನ್ನು ಮಾತ್ರ ಕಟ್ಟುತ್ತಿರಲಿಲ್ಲ. ಸ್ವಲ್ಪ ಹೊತ್ತು ಟೊಂಗೆಯ ಮೇಲೆ ಕುಳಿತು ಮರದೊಂದಿಗೆ ಮಾತುಕತೆ ನಡೆಸಿ, ವಾಪಸ್‌ ಹಾರಿ ಹೋಗುತ್ತಿದ್ದವು. ಆಗ ಬಳ್ಳಿಯ ಕಾಂಡ ಕೂಡ ದಪ್ಪಗಾಗುತ್ತಾ ಹೊರಟಿತ್ತು. ಮರವೇನೊ ಒಣಗಿತ್ತು. ಆದಾಗ್ಯೂ ಅದು ಬಳ್ಳಿಗೆ ಆಸರೆ ನೀಡಿ ಇನ್ನೂ ಒಳ್ಳೆಯ ಕೆಲಸ ಮಾಡುತ್ತಲೇ ಇತ್ತು.

ಟಿ.ವಿ ಕೇಬಲ್ ಗಳು ಇನ್ನೂ ಅದರ ಒಣಗಿದ ಟೊಂಗೆಗಳ ಮೇಲೆ ಕಟ್ಟಲ್ಪಟ್ಟಿದ್ದವು. ಸುಂದರ ಹೂಗಳನ್ನು ಬಿಟ್ಟಿದ್ದ ಬಳ್ಳಿಗೆ ಅದು ಆಸರೆ ಕೊಟ್ಟಿತ್ತು. ಬಳ್ಳಿಗೆ ಆಸರೆ, ಒಂದಿಷ್ಟು ನೆರಳು ದೊರೆತದ್ದರಿಂದ ಅದರ ನೆರಳಿನಲ್ಲಿ ಚಿಕ್ಕಪುಟ್ಟ ಹೂಗಿಡಗಳು ಸುರಕ್ಷಿತವಾಗಿದ್ದವು. ಮರ ಒಣಗಿಯೂ ಕೂಡ ಎಷ್ಟೊಂದು ಒಳ್ಳೆಯ ಕೆಲಸ ಮಾಡುತ್ತಿತ್ತು. ಹಾಗಾಗಿ ನಾನು ಅದಕ್ಕೆ `ಸದ್ಗುಣಶೀಲ’ ಮರ ಎಂದೇ ಕರೆಯುತ್ತಿದ್ದೆ. ನಾನು ಆ ಮರ ಹೀಗೆ ಬೆಳೆಯುತ್ತಿದ್ದುದನ್ನು ಗಮನಿಸಿದ್ದೆ. ಹೀಗಾಗಿ ಅದರ ಜೊತೆ ಒಡನಾಟ ಇರುವುದು ಸಹಜವೇ ಆಗಿತ್ತು.

ಆದರೆ ಇಂದು ಅದು ನೆಲದ ಮೇಲೆ ಅಪ್ಪಳಿಸಿ ಬಿದ್ದಿರುವುದು ನನಗೆ ಬಹಳ ದುಃಖವನ್ನುಂಟು ಮಾಡಿತು. ಅದು ನೆಲದ ಮೇಲೆ ಮುಖ ಮಾಡಿ ಬಿದ್ದಿರುವುದನ್ನು ನೋಡಿ ಸದ್ಗುಣವೇ ನೆಲಕ್ಕೆ ಅಪ್ಪಳಿಸಿದೆ ಎನಿಸಿತು. ಮರದ ಜೊತೆಗೆ ಕೆಂಪು ಹೂಗಳನ್ನು ಬಿಟ್ಟು ಬಳ್ಳಿಯೂ ಕೂಡ ಅದರ ಕೆಳಗೆ ಅಪ್ಪಚ್ಚಿಯಾಗಿ ಹೋಗಿತ್ತು. ಅದರ ಕೆಳಗೆ ಚಿಕ್ಕಪುಟ್ಟ ಸಸಿಗಳು, ಕುಂಡಗಳು ಸಿಲುಕಿ ನಜ್ಜುಗುಜ್ಜಾಗಿದ್ದು ನನಗೆ ಇನ್ನಷ್ಟು ದುಃಖವನ್ನುಂಟು ಮಾಡಿತು. ಬೆಲ್ ಬಾರಿಸಿದ್ದ ವ್ಯಕ್ತಿ ಅದು ಆಕಸ್ಮಿಕವಾಗಿ ಒಮ್ಮೆಲೆ ನೆಲಕ್ಕೆ ಬಿತ್ತೆಂದು ಹೇಳಿದ. ಆ ಬಳಿಕ ಕೇಬಲ್ ನವರು ಬಂದರು. ಅವರು ಕೇಬಲ್ ಸರಿ ಮಾಡತೊಡಗಿದರು. ಅವರು ಮರವನ್ನು ತುಂಡು ತುಂಡು ಮಾಡಿ ದಿಮ್ಮಿಯನ್ನು ಹೊರತೆಗೆಯುತ್ತಿದ್ದರು. ಅದನ್ನು ನನಗೆ ಕಣ್ಣಿಂದ ನೋಡಲು ಆಗುತ್ತಿರಲಿಲ್ಲ. ನಾನು ಮನೆಯ ಒಳಗಡೆ ಬಂದೆ. ಆದರೆ ಮನಸ್ಸು ತಳಮಳಗೊಂಡಿತ್ತು, ಯೋಚಿಸುತ್ತಿತ್ತು. ಕಾಡಿನಲ್ಲೂ ಅದೆಷ್ಟೋ ಮರಗಳು ಹೀಗೆ ಒಣಗಿ ಬೀಳುತ್ತಿರುತ್ತವೆ. ಆಗಲೂ ಮನಸ್ಸಿಗೆ ನೋವಾಗುತ್ತಿರುತ್ತದೆ. ಆದರೆ ಯಾವುದು ಸತತವಾಗಿ ನಿಮ್ಮ ಜೊತೆಗೆ ಇರುತ್ತದೊ ಅದು ನಿಮ್ಮ ಜೀವನದ ಒಂದು ಭಾಗವೇ ಆಗಿ ಹೋಗಿರುತ್ತದೆ.

ನನಗೆ ಒಂದು ವಿಷಯ ನೆನಪಿಗೆ ಬರುತ್ತಿತ್ತು. ನಮ್ಮ ಬೀದಿಯ ಕಚ್ಚಾ ರಸ್ತೆಯನ್ನು ಪಕ್ಕಾ ಆಗಿ ಪರಿವರ್ತಿಸಲು ಯೋಜನೆಗಳು ನಡೆಯುತ್ತಿದ್ದವು. ಮರದ ಆಸುಪಾಸಿನ ರಸ್ತೆಯನ್ನು ಹಾಗೆಯೇ ಮಾಡಬೇಕೆಂದು ಕೆಲವರು ಹೇಳುತ್ತಿದ್ದರು. ಮರಕ್ಕೂ ಉಸಿರಾಡಲು ಒಂದಿಷ್ಟು ಸ್ಥಳಾವಕಾಶ ಬೇಕಲ್ಲವೇ? ಅದನ್ನು ಸಿಮೆಂಟಿನಡಿ ನಾವೇಕೆ ಬಂಧಿಸಲು ಹೊರಟಿದ್ದೇವೆ? ಎಂದೆಲ್ಲ ನನಗೆ ವಿಚಾರಗಳು ಬಂದಿದ್ದವು. ಆದರೆ ನನ್ನ ಮಾತನ್ನು ಕೇಳಿಸಿಕೊಳ್ಳಲು ಅಲ್ಲಿ ಯಾರಿಗೂ ತಾಳ್ಮೆ ಇರಲಿಲ್ಲ. ನಮ್ಮ ಹಿರಿಯರು ಮರಗಳ ಮಹತ್ವದ ಬಗ್ಗೆ ನಮಗೆ ಹೇಳುತ್ತಲೇ ಬಂದಿದ್ದಾರೆ.

ಒಂದು ಸಲ ನಾನು ಅಜ್ಜಿಗೆ ಹೇಳ್ತಿದ್ದೆ, “ಅಜ್ಜಿ, ನೀವು ಇವತ್ತು ಈ ಮಾವಿನ ಸಸಿ ನೆಡುತ್ತಿದ್ದೀರಿ. ಆದರೆ ಅದರ ಫಲ ತಿನ್ನಲು ನಿಮಗೆ ಆಗುವುದಿಲ್ಲ.”

ಆ ಮಾತಿಗೆ ಅಜ್ಜಿ ನಗುತ್ತಲೇ ಹೇಳಿದ್ದರು, “ಇದನ್ನು ನಾನು ನನಗಾಗಿ ನೆಟ್ಟಿದ್ದೆ ಅಂದ್ಕೊಂಡೆಯಾ? ಇಲ್ಲ ಪುಟ್ಟಿ. ನಾನು ಅದನ್ನು ಈಗಿನ ಮಕ್ಕಳಿಗೆ ನೆಟ್ಟಿದ್ದು,” ಆ ಸಮಯದಲ್ಲಿ ನನಗೆ ಈ ಮಾತು ಅರ್ಥ ಆಗುತ್ತಿರಲಿಲ್ಲ. ಆದರೆ ಈಗ ಸ್ವಾರ್ಥದಿಂದ ಮೇಲೆದ್ದಾಗ ನಮ್ಮ ಪೂರ್ವಿಕರ ಪರಮಾರ್ಥ ಭಾವನೆ ಅರಿವಿಗೆ ಬರುತ್ತದೆ. ನಾವು ಕೂಡ ಇಂತಹ ಉದಾತ್ತ ಭಾವನೆಯನ್ನು ನಮ್ಮ ಮುಂದಿನ ಪೀಳಿಗೆಗೂ ಪರಂಪರೆಯ ರೂಪದಲ್ಲಿ ಏಕೆ ಕೊಡಬಾರದು ಎನಿಸುತ್ತಿತ್ತು. ನಾನು ಮರದ ಆಸುಪಾಸು ಸಾಕಷ್ಟು ಸಸಿಗಳನ್ನು ನೆಟ್ಟಿದ್ದೆ. ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಅದರ ಮೇಲೆ ಪುಟ್ಟ ಪುಟ್ಟ, ಬಣ್ಣ ಬಣ್ಣದ ಬಲ್ಬುಗಳ ಸರವನ್ನು ಹಾಕಿದಾಗ ಮರಕ್ಕೆ ಮತ್ತಷ್ಟು ರಂಗು ಬರುತ್ತಿತ್ತು.

ಆದರೆ ಇವತ್ತು ಮನಸ್ಸು ವ್ಯಥೆಗೊಳ್ಳುತ್ತಿತ್ತು. ನಾನು ಪುನಃ ಹೊರಗೆ ಬಂದೆ. ಸ್ವಲ್ಪ ಹೊತ್ತಿನಲ್ಲಿ ಸಂಬಂಧಪಟ್ಟ ಇಲಾಖೆಯ ಕಾರ್ಮಿಕರು ಬಂದರು. ಅವರೆಲ್ಲ ಕೆಲಸದಲ್ಲಿ ಮಗ್ನರಾದರು. ಎಲ್ಲ ಚಿಕ್ಕ ದೊಡ್ಡ ಮರದ ಟೊಂಗೆಗಳು ಒಂದೆಡೆ ಬಿದ್ದುಕೊಂಡಿದ್ದವು. ನಾನು ಹತ್ತಿರದಿಂದ ನೋಡಿದೆ. ಮರದ ಬೇರು ಕಿತ್ತುಕೊಂಡು ಹೊರಬಂದಿತ್ತು. ಅವರು ಅದರ ಬುಡಕ್ಕೆ ಹಗ್ಗ ಕಟ್ಟಿ ಎಳೆದುಕೊಂಡು ಹೊರಟಿದ್ದರು.

ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಅದರ ಬುಡಭಾಗದಲ್ಲಿ ಸಸಿಗಳು ಅಪ್ಪಚ್ಚಿಯಾಗಿ ಹೋಗಿದ್ದವು ಎಂದು ನಾನು ಭಾವಿಸಿದ್ದೆ. ಆದರೆ ಒಂದೇ ಒಂದು ಸಸಿ ಕೂಡ ಹಾಳಾಗಿರಲಿಲ್ಲ. ನೆಲಕ್ಕೆ ಬೀಳುವತನಕ ಒಳ್ಳೆಯದನ್ನು ಮಾಡಿ ಹೋಗಲು ಮರೆತಿರಲಿಲ್ಲ `ಸಪ್ತಪರ್ಣಿ.’ ಆಗ ನನಗನಿಸಿತು, ಸದ್ಗುಣ ಅಥವಾ ಸಚ್ಚಾರಿತ್ರ್ಯ ಎಂದೂ ನೆಲಸಮ ಆಗುವುದಿಲ್ಲ ಎಂದು. ನಾನು ಹಳೆಯದನ್ನು ನೆನಪಿಸಿಕೊಳ್ಳುತ್ತ ಅದನ್ನು ತುಂಡು ತುಂಡು ಮಾಡಿ ಎಳೆದುಕೊಂಡು ಹೋಗುವುದನ್ನು ನೋಡಿ ಮನಸ್ಸು ಕಂಪಿಸುತ್ತಿತ್ತು. ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಮರದ ಟೊಂಗೆಗಳನ್ನು ಹಾಗೂ ಬುಡವನ್ನು ಅವರು ತೆಗೆದುಕೊಂಡು ಹೋಗಿದ್ದರು. ಆದರೆ ಆಳವಾದ ಬೇರುಗಳು ಮಾತ್ರ ಇನ್ನೂ ಅಲ್ಲಿಯೇ ಗೋಚರಿಸುತ್ತಿದ್ದವು. ಆ ಬೇರುಗಳು ಪುನಃ ಮುಂದಿನ ಮಳೆಗಾಲದ ಹೊತ್ತಿಗೆ ಚಿಗುರೊಡೆಯಬಹುದು. ನನ್ನ `ಸಪ್ತಪರ್ಣಿ’ ಪುನಃ ವಾಪಸ್‌ ಬರಬಹುದು ಎಂಬ ನಂಬಿಕೆಯಲ್ಲಿ ನಾನಿದ್ದೇನೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ