ಅಭ್ಯಾಸಗಳೇ ಆರೋಗ್ಯನ್ನು ರೂಪಿಸುತ್ತವೆ. ನಮ್ಮ ಅಭ್ಯಾಸಗಳು ಹೇಗಿರುತ್ತವೆ, ಅದೇ ರೀತಿ ನಮ್ಮ ಆರೋಗ್ಯ ಇರುತ್ತದೆ. ಅಭ್ಯಾಸಗಳಿಗೂ ಆರೋಗ್ಯಕ್ಕೂ ನಿಕಟ ಸಂಬಂಧವಿದೆ. ಇಂತಹದರಲ್ಲಿ ನೀವು ನಿಮ್ಮ ಹೋಮ್ ಹೈಜೀನ್‌ ನ ಅಭ್ಯಾಸಗಳನ್ನು ಬದಲಿಸಬೇಕು, ಸುಧಾರಿಸಿಕೊಳ್ಳಬೇಕು. ಅಂದರೆ ಮನೆಯ ಇಂಚಿಂಚು ಜಾಗವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೆಲದ ಕ್ಲೀನಿಂಗ್‌ನಿಂದ ಹಿಡಿದು ಅಡುಗೆಮನೆಯನ್ನು ರೋಗಾಣುಮುಕ್ತಗೊಳಿಸುವುದು ಹೇಗೆ? ಅಡುಗೆ ಪದಾರ್ಥಗಳು ಕೆಡುವುದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಕೈಗಳ ಸ್ವಚ್ಛತೆಯಿಂದ ಹಿಡಿದು ಮನೆಗೆ ಸಂಬಂಧಪಟ್ಟ ಎಲ್ಲ ನೈರ್ಮಲ್ಯದ ಬಗ್ಗೆ ಗಮನಕೊಡಬೇಕಿದೆ. ಹೀಗೆ ಮಾಡಿದಾಗಲೇ ನೀವು ಹಾಗೂ ನಿಮ್ಮ ಕುಟುಂದವರನ್ನು ಕೊರೋನಾದಂತಹ ರೋಗದಿಂದ ರಕ್ಷಿಸಬಹುದು. ಇದೆಲ್ಲ ಸಾಧ್ಯವಾಗುವುದು ನೀವು ನಿಮ್ಮ ಅಭ್ಯಾಸಗಳನ್ನು ಬದಲಿಸಿಕೊಂಡಾಗ ಮಾತ್ರ.

ನೆಲದ ನೈರ್ಮಲ್ಯ ಮನೆಯಿಂದ ಹೊರಗೆ ಹೋಗುವುದು, ಬರುವುದು ನಡೆಯುತ್ತಲೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಕೊಳಕು ಚಪ್ಪಲಿ, ಶೂಗಳಿಂದ ನೆಲ ರೋಗಾಣುಗಳ ಸಂಪರ್ಕಕ್ಕೆ ಬರುತ್ತದೆ. ಹೀಗಾಗಿ ಪ್ರತಿದಿನ ನೆಲವನ್ನು ಸ್ವಚ್ಛಗೊಳಿಸುವುದು ಅತ್ಯವಶ್ಯ. ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಅವರು ನೆಲದ ಮೇಲೆ ಬಿದ್ದ ವಸ್ತುನ್ನು ಕೈಗೆತ್ತಿಕೊಂಡು ಯಾವಾಗ ಬಾಯಿಗೆ ಹಾಕಿಕೊಳ್ಳುತ್ತಾರೋ ಗೊತ್ತಾಗುವುದಿಲ್ಲ. ಬೇಸಿಗೆ ವಾತಾವರಣ ಹಾಗೂ ಫ್ಲೂ ಸೀಜನ್ನಿನಲ್ಲಿ ರೋಗಾಣುಗಳಿಗೆ ಅನುಕೂಲ ವಾತಾವರಣ ಸಿಗುತ್ತದೆ. ಆಗ ಅವು ಬಹುಬೇಗ ತಮ್ಮ ಪ್ರಭಾವ ಬೀರುತ್ತವೆ.

ಇಂತಹದರಲ್ಲಿ ಪ್ರತಿದಿನ ನೆಲವನ್ನು ಡಿಸ್‌ ಇನ್‌ಫೆಕ್ಟೆಂಟ್‌ನಿಂದ ಸ್ವಚ್ಛಗೊಳಿಸುವುದು ಅತ್ಯವಶ್ಯ. ಏಕೆಂದರೆ ಅದು ಜರ್ಮ್ಸ್ ಹಾಗೂ ವೈರಸ್‌ ನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗೆ ಮಾಡುವುದರಿಂದ ಅಲರ್ಜಿಯ ಸಾಧ್ಯತೆ ಕಡಿಮೆಯಾಗುತ್ತದೆ. ಜೊತೆಗೆ ಅದರ ಮಂದ ಸುವಾಸನೆ ಮನೆಯ ವಾತಾವರಣವನ್ನು ಲವಲವಿಕೆಯಿಂದಿರುವಂತೆ ಮಾಡುತ್ತದೆ.

ಅದಕ್ಕಾಗಿ ನೀವು ನೀರಿನಲ್ಲಿ ಡೆಟಾಲ್ ‌ನ ಕೆಲವು ಹನಿಗಳನ್ನು ಹಾಕಿಕೊಂಡು ಪ್ರತಿದಿನ ನೆಲವನ್ನು ಸ್ವಚ್ಛಗೊಳಿಸಬಹುದು. ಇಲ್ಲಿ ಮಾರುಕಟ್ಟೆಯಲ್ಲಿ ಲಭಿಸುವ ಡಿಸ್‌ ಇನ್‌ಫೆಕ್ಟೆಂಟ್‌ ಕೂಡ ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ. ಮನೆಯ ಪ್ರತಿಯೊಂದು ಮೂಲೆಯನ್ನು ಅದರ ಪ್ರಭಾವಕ್ಕೊಳಪಡಿಸುವುದು ಮುಖ್ಯ.

ಅಡುಗೆಮನೆಯ ಆರೋಗ್ಯ

ಸಂಶೋಧನೆಗಳ ಪ್ರಕಾರ, ಕೊರೋನಾ ವೈರಸ್‌ ಅಡುಗೆಮನೆಯ ಸರ್ಫೇಸ್‌ ಮೇಲೆ ಕೆಲವು ಗಂಟೆಗಳಿಂದ ಹಿಡಿದು 1 ದಿನದವರೆಗೆ ಜೀವಂತವಾಗಿರುತ್ತವೆ. ಕಾರ್ಡ್‌ ಬೋರ್ಡ್‌ ಮೇಲೆ 24 ಗಂಟೆ, ಸ್ಟೇನ್‌ ಲೆಸ್‌ ಸ್ಟೀಲ್ ‌ಮೇಲೆ 2 ದಿನ, ಕಾಪರ್‌ ಮೇಲೆ 5-6 ಗಂಟೆ, ಪ್ಲಾಸ್ಟಿಕ್‌ ಮೇಲೆ 3 ದಿನಗಳ ಕಾಲ ಜೀವಂತವಾಗಿರುತ್ತವೆ. ಹೀಗಾಗಿ ನಿಮ್ಮನ್ನು ನೀವು ಆರೋಗ್ಯದಿಂದ ಇಟ್ಟುಕೊಳ್ಳಲು ಅಡುಗೆಮನೆಯ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುವುದು ಅತ್ಯವಶ್ಯ.

ಅದಕ್ಕಾಗಿ ನೀವು ಅಡುಗೆಮನೆಗೆ ಹೋಗುವ ಮೊದಲು ಸೋಪ್‌ ಅಥವಾ ಆಲ್ಕೋಹಾಲ್ ‌ಯುಕ್ತ ಹ್ಯಾಂಡ್‌ ಸ್ಯಾನಿಟೈಸರ್‌ ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಆ ಬಳಿಕವೇ ಅಡುಗೆಮನೆಯ ಸಾಮಗ್ರಿಗಳನ್ನು ಮುಟ್ಟಿ. ಅಡುಗೆಮನೆಯ ಕೆಲಸ ಕಾರ್ಯಗಳು ಮುಗಿದ ಮೇಲೆ ಸರ್ಫೇಸ್‌ ನ್ನು ವೈಪ್ಸ್ ನ ನೆರವಿನಿಂದ, ಡಿಸ್‌ ಇನ್‌ಫೆಕ್ಟೆಂಟ್‌ ನಿಂದ ಅವಶ್ಯವಾಗಿ ಸ್ವಚ್ಛಗೊಳಿಸಿ. ಜೊತೆಗೆ ಅಡುಗೆಮನೆಯ ಬಟ್ಟೆಗಳು ಹಾಗೂ ಸ್ಪಾಂಜನ್ನು ದಿನ ಸ್ವಚ್ಛಗೊಳಿಸಿ.

ಕಟಿಂಗ್‌ ಬೋರ್ಡ್‌ ಮೇಲೆ ವೈರಸ್‌, ಇಕೊಲಿಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ. ಅವುಗಳ ಸಂಪರ್ಕಕ್ಕೆ ಬಂದರೆ ನೀವು ಅನಾರೋಗ್ಯ ಪೀಡಿತರಾಗಬಹುದು. ಹೀಗಾಗಿ ಅದನ್ನು ಪ್ರತಿಸಲದ ಉಪಯೋಗದ ಬಳಿಕ ಬಿಸಿನೀರಿನಿಂದ ಸ್ವಚ್ಛಗೊಳಿಸಲು ಮರೆಯಬೇಡಿ. ಕೀಬೋರ್ಡ್‌, ಹ್ಯಾಂಡಲ್ಸ್, ಮೈಕ್ರೋವೇವ್ ‌ನ ಹ್ಯಾಂಡಲ್ ನ್ನು ಡಿಸ್‌ ಇನ್‌ಫೆಕ್ಟೆಂಟ್‌ನಿಂದ ಸ್ವಚ್ಛಗೊಳಿಸಿ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಡಸ್ಟ್ ಬಿನ್‌ ಬ್ಯಾಕ್ಟೀರಿಯಾಗಳ ಮನೆಯೆಂದೇ ಹೇಳಲಾಗುತ್ತದೆ. ಅದನ್ನು ದಿನ ಡಿಸ್‌ ಇನ್‌ಫೆಕ್ಟೆಂಟ್‌ ನಿಂದ ಸ್ವಚ್ಛಗೊಳಿಸಬೇಕು.

ಬಾಗಿಲ ಹ್ಯಾಂಡಲ್ಸ್

ನಾವು ಮಾರುಕಟ್ಟೆಯಿಂದ ವಾಪಸ್‌ ಬರಲಿ ಅಥವಾ ಮನೆಯಲ್ಲಿಯೇ ಇರಲಿ, ನಮ್ಮ ಕೈಗಳು ನೇರವಾಗಿ ಹ್ಯಾಂಡಲ್ ಮೇಲೆಯೇ ಹೋಗುತ್ತವೆ. ಈಗ ಕೊರೋನಾದ ಅವಧಿಯಲ್ಲಿ ಇನ್ನಷ್ಟು ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಬಾಗಿಲುಗಳ ಹ್ಯಾಂಡಲ್ ಮೇಲೆ `ಸ್ಟೆಪಲ್’ ಎಂಬ ಬ್ಯಾಕ್ಟೀರಿಯಾ ಉದ್ಭವಿಸುತ್ತದೆ. ಒಂದುವೇಳೆ ಅದು ಬಾಯಿ, ಮೂಗಿನ ಮೂಲಕ ಒಳಪ್ರವೇಶಿಸಿದರೆ ನಿಮಗೆ ಉಸಿರಾಟಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಪ್ರತಿದಿನ ಹ್ಯಾಂಡಲನ್ನು ಆ್ಯಂಟಿ ಬ್ಯಾಕ್ಟೀರಿಯಾ ಕ್ಲೀನರ್‌ ನಿಂದ ಸ್ವಚ್ಛಗೊಳಿಸಿ. ಸ್ವಚ್ಛತೆಯ ಪ್ರತಿಕ್ರಿಯೆ ಬಳಿಕ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ.

ಟಾಯ್ಲೆಟ್‌ ನಲ್ಲಿ ರೋಟಾ ವೈರಸ್‌

ಟಾಯ್ಲೆಟ್‌ ಎಂತಹ ಒಂದು ಜಾಗವೆಂದರೆ, ಅಲ್ಲಿ ಹೆಚ್ಚು ತೇಲಾಂಶವಿರುತ್ತದೆ. ಅದು ಬ್ಯಾಕ್ಟೀರಿಯಾ ಉದ್ಭವಿಸಲು ಅನುಕೂಲ ವಾತಾವರಣ ಕಲ್ಪಿಸುತ್ತದೆ. ಹೀಗಾಗಿ ಅದನ್ನು ಬಳಸಿದ ಮೇಲೆ ವೈಪರ್‌ ನ ನೆರವಿನಿಂದ ನೀರು ಹೊರಹಾಕಿ ಅದನ್ನು ಒಣಗಿಸಿ. ಪ್ರತಿಸಲ ಟಾಯ್ಲೆಟ್‌ ಪುಶ್‌ ಬಟನ್‌ ನ್ನು ಮುಟ್ಟಿದ ಬಳಿಕ ಡಿಸ್‌ ಇನ್‌ಫೆಕ್ಟೆಂಟ್‌ ನಿಂದ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಏಕೆಂದರೆ ಅದರಲ್ಲಿ ರೋಟಾ ವೈರಸ್‌ ಇರುತ್ತದೆ. ಅದು ಡಯೆರಿಯಾ ಹಾಗೂ ಪಚನಾಂಗದ ಮೇಲೆ ಪ್ರಭಾವ ಬೀರುತ್ತದೆ. ಟೂತ್‌ ಬ್ರಶ್‌ ಹೋಲ್ಡರನ್ನು ಕೂಡ ನಿಯಮಿತವಾಗಿ ಸ್ವಚ್ಛಗೊಳಿಸಿ. ಟೂತ್‌ ಬ್ರಶ್‌ ಬಳಕೆಯ ಬಳಿಕ ಅದರ ಕ್ಯಾಪ್‌ ನಿಂದ ಅದನ್ನು ಮುಚ್ಚಲು ಮರೆಯಬೇಡಿ. ಇದರಿಂದ ನೀವು ಸ್ವತಃ ರೋಗಾಣುಗಳಿಂದ ದೂರವಿರಲು ಸಾಧ್ಯವಾಗುತ್ತದೆ.

ಕಾರ್ಪೆಟ್‌ ನಲ್ಲಿರುವ ವೈರಸ್‌

ಕಾರ್ಪೆಟ್‌ನಲ್ಲಿ ಇಕೊಲಿ, ನೊರೊ ವೈರಸ್‌ ಹುದುಗಿರುತ್ತವೆ. ಅದು ಸ್ವಚ್ಛವಿದೆ ಎಂದು ನಿಮಗೆ ಅನ್ನಿಸಿದರೂ ಅದರಲ್ಲಿ ಅಡಗಿ ಕುಳಿತಿರುವ ವೈರಸ್‌ ಗಳು ಗಾಳಿಯಲ್ಲಿ ವಿಲೀನಗೊಂಡು, ಬಾಯಿ ಸೇರಿಕೊಂಡು ಹೊಟ್ಟೆಗೆ ಸಂಬಂಧಪಟ್ಟ ರೋಗಗಳಿಗೆ ಕಾರಣವಾಗುತ್ತದೆ.

ರೋಗಾಣುಗಳಿಂದ ರಕ್ಷಿಸಿಕೊಳ್ಳಲು ವ್ಯಾಕ್ಯೂಮ್ ಕ್ಲೀನರ್‌ ನಿಂದ ಕಾರ್ಪೆಟ್‌ ಗಳನ್ನು ಸ್ವಚ್ಛಗೊಳಿಸಿ. ಅದನ್ನು ಡ್ರೈ ಕ್ಲೀನಿಂಗ್ ಮಾಡಿಸಬೇಕೆಂದಿದ್ದರೆ, ಪ್ರೊಫೆಶನಲ್ ಕಾರ್ಪೆಟ್‌ ಕ್ಲೀನರ್‌ ಗಳ ನೆರವು ಪಡೆದುಕೊಳ್ಳಿ ಅಥವಾ ನೀವೇ ಆ್ಯಂಟಿ ಬ್ಯಾಕ್ಟೀರಿಯ್‌ ಕ್ಲೀನರ್‌ ನಿಂದ ಸ್ವಚ್ಛಗೊಳಿಸಿ. ಅದರಿಂದಾಗಿ ಧೂಳು, ಮಣ್ಣು, ಬ್ಯಾಕ್ಟೀರಿಯಾ ನಿವಾರಣೆಗೊಂಡು ನಿಮಗೆ ಅಲರ್ಜಿಯ ರಿಸ್ಕ್ ಇರುವುದಿಲ್ಲ.

ಬೆಡ್‌ ರೂಮಿನ ವಿಶೇಷ ಸ್ವಚ್ಛತೆ

ಬೆಡ್‌ ರೂಮ್ ಎಂತಹ ಒಂದು ಜಾಗವೆಂದರೆ, ಅಲ್ಲಿ ನಾವು ನಮ್ಮಿಚೆಯಂತೆ ಇರುತ್ತೇವೆ. ನೆಮ್ಮದಿಯಿಂದ ನಿದ್ರೆ ಮಾಡುತ್ತೇವೆ. ಖಾಸಗಿ ಕ್ಷಣಗಳ ಖುಷಿ ಪಡೆಯುತ್ತೇವೆ. ಒಂದು ವೇಳೆ ನೀವು ಗಮನಕೊಡದೇ ಹೋದರೆ ಯಾವ ಹೊದಿಕೆಯನ್ನು ನೀವು ಬಳಸುತ್ತೀರೊ ಅದು ಹಾಗೂ ತಲೆ ದಿಂಬುಗಳು, ನಿಮ್ಮನ್ನು ರೋಗಕ್ಕೆ ದೂಡಬಹುದು. ಏಕೆಂದರೆ ಅದರಲ್ಲಿ ಡಸ್ಟ್ ಮೈಟಿಸ್‌ ಹಾಗೂ ಬೇರೆ ಕೆಲವು ರೋಗಾಣುಗಳಿರುತ್ತವೆ. ಅವು ಅಲರ್ಜಿ, ಫಂಗಲ್ ಇನ್‌ ಫೆಕ್ಷನ್‌ ಹಾಗೂ ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ.

ಕಾಲಕಾಲಕ್ಕೆ ನಿಮ್ಮ ಬೆಡ್‌ ನ್ನು ಬಿಸಿಲಿನಲ್ಲಿ ಒಣಗಿಸಿ. ಹೊದಿಕೆ ಹಾಗೂ ದಿಂಬಿನ ಕವರ್‌ ಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಿ. ಈ ರೀತಿಯಲ್ಲಿ ಬೆಡ್‌ ರೂಮ್ ನಿಮ್ಮನ್ನು ರೋಗಗ್ರಸ್ತಗೊಳಿಸದು.

ಶೂ ರಾಕ್‌ ನಲ್ಲಿ ರೋಗಾಣು

ಚಪ್ಪಲಿ, ಶೂಗಳನ್ನು ನೀಟಾಗಿ ಇಡಲು ಪ್ರತಿಯೊಂದು ಮನೆಯಲ್ಲಿ ಶೂ ರಾಕ್‌ ಇರುತ್ತದೆ. ಒಂದು ವೇಳೆ ನೀವು ಅದರ ಮೇಲೆ ಗಮನ ಕೊಡದೇ ಹೋದರೆ, ಅದು ರೋಗಾಣುಗಳ ಗೂಡಾಗುತ್ತದೆ. ಒಂದು ಸಂಶೋಧನೆಯಿಂದ ತಿಳಿದುಬಂದ ಸಂಗತಿಯೆಂದರೆ, ಶೂ ಹಾಗೂ ಚಪ್ಪಲಿಗಳ ಕೆಳಗೆ ಭಾರಿ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ ಅವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅಗತ್ಯ.

ಸಾಧ್ಯವಾದರೆ ಚಪ್ಪಲಿ, ಸ್ಯಾಂಡಲ್ಸ್ ನ್ನು ಮನೆಯ ಹೊರಗೇ ಇಡಿ. ಅದರಲ್ಲಿ ಅಸ್ಟೆರಿಚಿಯೆಕೋಲಿ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಅದು ಮಹಿಳೆಯರಿಗೆ ಹಾನಿಯನ್ನುಂಟು ಮಾಡುವ ಯೂರಿನ್‌ ಇನ್‌ ಫೆಕ್ಷನ್‌ ಗೆ ಕಾರಣವಾಗುತ್ತದೆ. ಹೀಗಾಗಿ ವಾರದಲ್ಲಿ ಒಂದು ದಿನ ನಿಮ್ಮ ಶ್ಯೂ ರಾಕ್‌ ನ್ನು ಡಿಸ್‌ ಇನ್‌ಫೆಕ್ಟೆಂಟ್‌ ಸ್ಪ್ರೇನಿಂದ ಸ್ವಚ್ಛಗೊಳಿಸಿ.

ಫರ್ನಿಚರ್‌ಗಳ ಸ್ವಚ್ಛತೆ

ನಾವು ಮನೆಯಲ್ಲಿ ಬಳಸುವ ಪೀಠೋಪಕರಣಗಳ ಮೇಲೂ ಬ್ಯಾಕ್ಟೀರಿಯಾಗಳು ಇರುತ್ತವೆ. ಅವು ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತವೆ. ನಾವು ಅವುಗಳ ಮೇಲೆ ಕುಳಿತುಕೊಂಡಾಗ ಬಟ್ಟೆ ಮತ್ತು ಕೈಗಳ ಮುಖಾಂತರ ನಮ್ಮ ದೇಹದ ಸಂಪರ್ಕಕ್ಕೆ ಬರುತ್ತವೆ. ಹೀಗಾಗಿ ಕುಶನ್‌ ಕವರ್ಸ್‌ ಹಾಗೂ ಸೋಫಾ ಕವರ್ಸ್‌ ಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಬೇಕು. ಜೊತೆಗೆ ಪೀಠೋಪಕರಣಗಳನ್ನು ವ್ಯಾಕ್ಯೂಮ್ ಕ್ಲೀನರ್‌ ನಿಂದ ಸ್ವಚ್ಛಗೊಳಿಸಿ.

ಬಟ್ಟೆಗಳ ಡಿಸ್‌ ಇನ್‌ಫೆಂಕ್ಷನ್‌

ಕೊರೋನಾದ ಹೆಚ್ಚುತ್ತಿರು ಆತಂಕದ ಕಾರಣದಿಂದ ನೀವು ಮನೆಯಲ್ಲಿಯೇ ಇದ್ದರೆ, ಅತ್ಯಗತ್ಯ ವಸ್ತುಗಳನ್ನು ತರಲು ದಿನಕ್ಕೊಮ್ಮೆಯಾದರೂ ಹೊರಗೆ ಹೋಗಬೇಕಾಗುತ್ತದೆ. ಜೊತೆಗೆ ಮನೆಯಲ್ಲಿಯೇ ಗೊತ್ತಿಲ್ಲದೆಯೇ ರೋಗಾಣುಗಳು ಸಂಪರ್ಕಕ್ಕೆ ಬರುತ್ತವೆ. ಹೀಗಾಗಿ ಮಕ್ಕಳು ಹಾಗೂ ದೊಡ್ಡವರ ಬಟ್ಟೆಗಳನ್ನು ವಿಶೇಷ ರೀತಿಯಲ್ಲಿ ಸ್ವಚ್ಛಗೊಳಿಸಿ. ಅದಕ್ಕಾಗಿ ವಿಶೇಷ ಗುಣಮಟ್ಟದ ಡಿಟರ್ಜೆಂಟ್‌ನ್ನು ಬಳಸಿ ಹಾಗೂ ಎರಡು ಸಲ ನೀರಿನಲ್ಲಿ ಮುಳುಗಿಸಿ ತೆಗೆಯಿರಿ.

ವಾಶಿಂಗ್‌ ಮೆಷಿನ್‌ನಲ್ಲಿ ಬಟ್ಟೆ ಸ್ವಚ್ಛಗೊಳಿಸಲು ನೀರಿನ ತಾಪಮಾನವನ್ನು ಸರಿಯಾಗಿಡಿ. ಏಕೆಂದರೆ ಡಿಟರ್ಜೆಂಟ್‌ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ಕೊಳಕು ಬಟ್ಟೆಗಳನ್ನು ಪ್ರತ್ಯೇಕ ಲ್ಯಾಂಡ್ರಿ ಬ್ಯಾಗ್‌  ನಲ್ಲಿ ಇರಿಸಿ ಒಗೆಯುವ ಸಮಯದಲ್ಲಿಯೇ ಅವನ್ನು ತೆಗೆದುಕೊಳ್ಳಿ.

ಕಂಪ್ಯೂಟರ್‌ ಕೀಬೋರ್ಡ್‌ ನಲ್ಲಿ ರೋಗಾಣು

ಟಾಯ್ಲೆಟ್‌ ಸೀಟಿಗಿಂತಲೂ ಕಂಪ್ಯೂಟರ್‌ ಕೀಬೋರ್ಡ್‌ ಮೇಲೆ ರೋಗಾಣುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಅದನ್ನು ನಾವು ಅತ್ಯಂತ ನಿಕಟ ತೆಗೆದುಕೊಂಡು ಕುಳಿತುಕೊಂಡಿರುತ್ತೇವೆ. ಅಷ್ಟೇ ಅಲ್ಲ, ಮೊಬೈಲ್ ‌ಹಾಗೂ ದಿನ ಬಳಸುವ ಗ್ಯಾಜೆಟ್ಸ್ ನಲ್ಲೂ ಬ್ಯಾಕ್ಟೀರಿಯಾಗಳು ಅಡಗಿ ಕುಳಿತಿರುತ್ತವೆ. ಅವನ್ನು ಬಳಸುವಾಗ ಅವು ನಮ್ಮ ಕೈಗಳ ಮುಖಾಂತರ ದೇಹ ತಲುಪಿ ಹಾನಿಯುಂಟು ಮಾಡುತ್ತವೆ. ನಾವು ರೋಗಗಳಿಂದ ಮುಕ್ತರಾಗಬೇಕೆಂದರೆ ಈ ಗ್ಯಾಜೆಟ್‌ ಗಳನ್ನು ಬಟ್ಟೆ ಅಥವಾ ಕಾಟನ್‌ ನಿಂದ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.

– ರಶ್ಮಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ