“ಅಪ್ಪನ ಮಾತುಗಳಿಂದ ಅವರು ತುಂಬಾ ಡಿಸ್ಟರ್ಬ್ ಆಗಿದ್ದಾರೆಂದು ಗೊತ್ತಾಗುತ್ತಿತ್ತು. ಅವರನ್ನು ಭೇಟಿಯಾಗುವ ಕಾರ್ಯಕ್ರಮ ರೂಪಿಸಬೇಕೆಂದು ನಾನು ಎಷ್ಟೋ ಸಲ ಅಂದುಕೊಳ್ಳುತ್ತೇನೆ. ಆದರೆ ನೌಕರಿಯ ಕೋಳ ನನ್ನನ್ನು ಹೇಗೆ ಕಟ್ಟಿ ಹಾಕಿದೆಯೆಂದರೆ, ಅದರಿಂದ ಹೊರಬರಲು ಆಗುವುದೇ ಇಲ್ಲ,” ಎಂದು ತಂದೆಯೊಂದಿಗೆ ಫೋನ್ ಮಾಡಿ ಅದನ್ನು ಟೇಬಲ್ ಮೇಲೆ ಇಡುತ್ತಾ ಗೌರವ್ ಏನೋ ತೊಂದರೆಗೊಳಗಾದವನಂತೆ ಪತ್ನಿ ಶುಭಾ ಹಾಗೂ ಮಗ ವಿನಯ್‌ಗೆ ಹೇಳಿದ.
“ನಾನು ನಿನ್ನೆ ಅಮ್ಮನಿಗೆ ಫೋನ್ ಮಾಡಿದ್ದೇ. ಇತ್ತೀಚೆಗೆ ಅಪ್ಪ ಏನೋ ಕಳೆದುಕೊಂಡವರಂತೆ ಇರುತ್ತಾರಂತೆ. ಟಿ.ವಿ. ನೋಡ್ತಾ ಇದ್ರೆ. ಎಲ್ಲ ಟಿ.ವಿ ಧಾರಾವಾಹಿಗಳು ಹಾಗೂ ಇತರೆ ಎಲ್ಲ ಕಾರ್ಯಕ್ರಮಗಳನ್ನು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ. ಬಾಲ್ಕನಿಯಲ್ಲಿ ಹೋಗಿ ನಿಂತರೆ ಇಡೀ ಜಗತ್ತೇ ಚಲನಶೀಲವಾಗಿ. ತಾನೊಬ್ಬನೇ ಮಾತ್ರ ಕೈದಿಯಂತೆ ಇಲ್ಲಿ ಪ್ರತ್ಯೇಕವಾಗಿದ್ದೇನೆ.
ಜಗತ್ತಿಗೆ ತನ್ನ ಅವಶ್ಯಕತೆಯೇ ಇಲ್ಲ ಎಂದು ಅವರಿಗೆ ಅನಿಸುತ್ತಿರುತ್ತದಂತೆ,” ಶುಭಾ ಕೂಡ ಗೌರವ್ ಚಿಂತೆಯಲ್ಲಿ ಪಾಲ್ಗೊಂಡಳು.
“ನಾನು ಇವತ್ತು ಪುನಃ ಫೋನ್ ನಲ್ಲಿ ಮಾತನಾಡುತ್ತಾ ಅವರಿಗೆ ನೆನಪಿಸಿದೆ. ಅದೆಷ್ಟೋ ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಅವನ್ನು ಪೂರ್ತಿಗೊಳಿಸಲು ಇಚ್ಛಿಸುತ್ತಿದ್ದೇನೆ. ಅಮ್ಮನ ಕೈ ನೋವನ್ನು ಖಾಯಂ ಆಗಿ ನಿವಾರಿಸುವುದು ಅಪ್ಪನ ಫುಲ್ ಬಾಡಿ ಚೆಕ್ ಅಪ್, ಮನೆಯ ವ್ಯರ್ಥ ಸಾಮಾನುಗಳನ್ನು ಹೊರ ತೆಗೆಯುವುದು….. ಹೀಗೆಲ್ಲ ಎಷ್ಟೋ ಕೆಲಸಗಳ ಪಟ್ಟಿ ಇಟ್ಟುಕೊಂಡಿದ್ದೇನೆ. ಆದರೆ ಅಪ್ಪ ಯಾವುದರಲ್ಲೂ ಆಸಕ್ತಿ ತೋರಿಸುವುದಿಲ್ಲ. ಅವರ ಏಕೈಕ ದೂರು ಎಂದರೆ, ನಾವೆಲ್ಲ ಅಲ್ಲಿಗೆ ಮೇಲಿಂದ ಮೇಲೆ ಏಕೆ ಹೋಗಲಾಗುವುದಿಲ್ಲ ಎನ್ನುವುದೇ ಆಗಿದೆ,” ಗೌರವ್ ಮಾತುಗಳಲ್ಲಿ ನೋವು ಇಣುಕುತ್ತಿತ್ತು.
“ಅತ್ತೆ ಕೂಡ ನಾವು ಅಲ್ಲಿಗೆ ಬರದೇ ಇರುವುದರ ಬಗ್ಗೆಯೇ ಯಾವಾಗಲೂ ಹೇಳುತ್ತಿರುತ್ತಾರೆ. ಪಕ್ಕದ ಮನೆಯವರು ಯಾರಾದರೂ ಬಂದರೆ, ಬಹಳ ದಿನಗಳಿಂದ ಮಗ ಸೊಸೆಯನ್ನು ಕಂಡೇ ಇಲ್ಲ ಎಂದು ಕೇಳುತ್ತಿದ್ದರು ಎಂದು ಅತ್ತೆ ಹೇಳ್ತಾ ಕಣ್ಣೀರು ಹಾಕುತ್ತಿದ್ದರು,” ಎಂದು ಶುಭಾ ವ್ಯಥೆಯಿಂದ ಹೇಳಿದಳು.
“ನಮ್ಮ ಸಮಸ್ಯೆಯನ್ನು ಅಪ್ಪ ಅಮ್ಮನೇ ಅರ್ಥ ಮಾಡಿಕೊಳ್ಳದಿದ್ದರೆ, ಇನ್ನು ಪಕ್ಕದ್ಮನೆಯವರು ಹೇಗೆ ತಾನೇ ಅರ್ಥ ಮಾಡಿಕೊಳ್ಳುತ್ತಾರೆ? ನಾನು ಒಂದು ದಿನ ಆಫೀಸಿಗೆ ಹೋಗದಿದ್ದರೆ ಬಾಸ್ ಗರಂ ಆಗುತ್ತಾರೆ. ನೀನು ಶಾಲೆಗೆ ಎಷ್ಟು ದಿನ ರಜೆ ಹಾಕಲು ಆಗುತ್ತೆ? ವಿನಯ್‌ನ ಶಾಲೆ ಬೇರೆ ಇದೆಯಲ್ಲ. ಈ ಭಾನುವಾರ ನಾವು ಅಲ್ಲಿಗೆ ಹೋಗುವ ಯೋಚನೆ ಮಾಡಬೇಕು,” ಗೌರವ್ ಏನೋ ಯೋಚಿಸುತ್ತಾ ಹೇಳಿದ.
“ಅಜ್ಜಿ ತಾತನನ್ನು ನೋಡಬೇಕೆಂದು ನನಗೂ ಮನಸ್ಸಾಗ್ತಿದೆ. ಆದರೆ ಈ ವೀಕೆಂಡ್‌ನಲ್ಲಿ ಮ್ಯಾಥ್ಸ್ ಟ್ಯೂಶನ್ ನಲ್ಲಿ ಪ್ರಾಬ್ಲಮ್ಸ್ ಬಗ್ಗೆ ಡಿಸ್ಕಶನ್ ಆಗುತ್ತೆ. ಅದನ್ನು ನಾನು ಮಿಸ್ ಮಾಡಿಕೊಳ್ಳುವುದು ಆಗುವುದಿಲ್ಲ,” 12 ವರ್ಷದ ವಿನಯ್‌ನ ಭಾವಭಂಗಿ ಇತ್ತೀಚಿನ ಮಕ್ಕಳು ಓದಿನ ಬಗ್ಗೆ ಅದೆಷ್ಟು ಗಂಭೀರರಾಗಿದ್ದಾರೆ ಎನ್ನುವುದನ್ನು ಬಿಂಬಿಸುತ್ತಿತ್ತು.
ಕುರ್ಚಿಯ ಮೇಲೆ ಕಣ್ಮುಚ್ಚಿಕೊಂಡು ಕುಳಿತು ಬೆರಳುಗಳನ್ನು ಹಿಂದೆ ಮುಂದೆ ಮಾಡಿಕೊಳ್ಳುತ್ತಾ, ಗೌರವ್ ಗಾಢ ಚಿಂತೆಯಲ್ಲಿ ಮುಳುಗಿದ. ಅವನ ತಂದೆ ಅರುಣ್ ರಾವ್ 3 ವರ್ಷಗಳ ಹಿಂದೆ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿ ವರ್ಗಾವಣೆಗೊಂಡು, ಜವಾಬ್ದಾರಿ ನಿಭಾಯಿಸುತ್ತಾ ಅವರು ತಮ್ಮ ಕಾರ್ಯಾವಧಿಯಲ್ಲಿ ಬಹಳ ವ್ಯಸ್ತರಾಗಿರುತ್ತಿದ್ದರು. ನಿವೃತ್ತಿಯ ನಂತರ ಹಾಗೆ ಸುಮ್ಮನೆ ಕುಳಿತುಕೊಳ್ಳುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.
ಮೈಸೂರಿನ ತಮ್ಮ ಪೂರ್ವಿಕರ ಹಳೆಯ ಮನೆಯನ್ನು ಕೆಡವಿ ಕಟ್ಟಿದ ಹೊಸ ರೂಪದ ಮನೆಯಲ್ಲಿ ಕುಟುಂಬದ ಹೆಸರಿನಲ್ಲಿ ಪತ್ನಿ ಮಮತಾ ಮಾತ್ರ ಇದ್ದರು. ಹಿರಿಯ ಮಗಳು ಸುಮತಿ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿ ಇದ್ದಳು. ಹೀಗಾಗಿ ಅರುಣ್‌ಮತ್ತು ಮಮತಾರ ಎಲ್ಲಾ ಅಪೇಕ್ಷೆಗಳು ಒಬ್ಬನೇ ಮಗ ಗೌರವ್ ಮೇಲೆಯೇ ನೆಟ್ಟಿದ್ದವು. ಮೈಸೂರಿನಿಂದ ಬೆಂಗಳೂರಿಗೆ ವಾರಕ್ಕೊಮ್ಮೆ ಬಂದು ಹೋಗಲಾರದಷ್ಟು ದೂರವೇನೂ ಇಲ್ಲ ಎನ್ನುವುದು ಅವರ ಅನಿಸಿಕೆಯಾಗಿತ್ತು. ಗೌರವ್ ವಿವಶನಾಗಿದ್ದ. ಏಕೆಂದರೆ ಇಂದಿನ ಸ್ಪರ್ಧಾತ್ಮಕ ಹಾಗೂ ವ್ಯಸ್ತತೆಯ ದಿನಗಳಲ್ಲಿ ಯಾರ ಬಳಿಯೂ ಸಮಯವೇ ಇರುತ್ತಿರಲಿಲ್ಲ.
ತಿಂಡಿ ತಿಂದು ವಿನಯ್ ತನ್ನ ಕೋಣೆಗೆ ಹೋಗಿ ಪುಸ್ತಕಗಳನ್ನು ತೆರೆದು ಕುಳಿತ. ಶುಭಾ ಬೆಳಗ್ಗೆ ತಿಂಡಿ ಸಿದ್ಧಪಡಿಸಲೆಂದು ಅಡುಗೆ ಮನೆಗೆ ಹೋದಳು. ಗೌರವ್ ತನ್ನ ಯೋಚನೆಯಿಂದ ಹೊರಬಂದು ಲ್ಯಾಪ್ ಟಾಪ್ ತೆಗೆದು ತನಗೆ ಬಂದ ಮೇಲ್ ಗಳಿಗೆ ಉತ್ತರಿಸತೊಡಗಿದ. ದಣಿದು ಸುಸ್ತಾಗಿ ಹೋಗುತ್ತಿದ್ದ ಅವನಿಗೆ ಪ್ರತಿದಿನ ಮಲಗಲು ಬಹಳ ತಡವಾಗಿ ಹೋಗುತ್ತಿತ್ತು.
ಬೆಂಗಳೂರಿನ ಮೂರು ಬೆಡ್ ರೂಮಿನ ಮನೆಯಲ್ಲಿ ವಾಸಿಸುತ್ತಿದ್ದ ಗೌರವ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ. ಪತ್ನಿ ಶುಭಾ ಅಲ್ಲಿಯೇ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ಗೌರವ್ ಬೆಳಗ್ಗೆ 8ಕ್ಕೆ ಹೊರಟರೆ ರಾತ್ರಿ 9ಕ್ಕೆ ಮುಂಚೆ ವಾಪಸ್ ಬರಲು ಆಗುತ್ತಿರಲಿಲ್ಲ. ಒಂದೊಂದು ಸಲ ರಾತ್ರಿ 11ರ ತನಕ ಕೆಲಸ ಮಾಡಬೇಕಾಗಿ ಬರುತ್ತಿತ್ತು. ವಿನಯ್ ಹಾಗೂ ಶುಭಾ ಬೆಳಗ್ಗೆ 7ಕ್ಕೆ ಜೊತೆಜೊತೆಗೆ ಹೊರಡುತ್ತಿದ್ದರು ಹಾಗೂ ಸಂಜೆ ಇಬ್ಬರೂ ಸೇರಿಯೇ ವಾಪಸ್ ಬರುತ್ತಿದ್ದರು. ಅಮ್ಮ ಟೀಚರ್ ಆಗಿದ್ದ ಶಾಲೆಯಲ್ಲಿಯೇ ವಿನಯ್ ಓದುತ್ತಿದ್ದ.
ಬೆಳಗ್ಗೆ ಬೇಗನೇ ಎದ್ದು ಎಲ್ಲರಿಗೂ ತಿಂಡಿ ಸಿದ್ಧಪಡಿಸುವುದು, ವಿನಯ್ ಮತ್ತು ತನಗಾಗಿ ಊಟದ ಡಬ್ಬಿ ಸಿದ್ಧಪಡಿಸಿಕೊಂಡು 10 ನಿಮಿಷಗಳಲ್ಲಿಯೇ ಅವರು ತಯಾರಾಗುತ್ತಿದ್ದಳು. ಆ ಬಳಿಕ ಮನೆಗೆಲಸದವಳು ಬಂದು ಗೌರವ್ ಹೋಗುವ ತನಕ ಪಾತ್ರೆ ಬಟ್ಟೆ ಸ್ವಚ್ಛತೆ ಕೆಲಸ ಮುಗಿಸುತ್ತಿದ್ದಳು. ಶಾಲೆಯಿಂದ ವಾಪಸ್ ಬಂದ ಬಳಿಕ ಅವಳಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತಿರಲಿಲ್ಲ. ಮನೆಗೆಲಸದವಳು ಮಾಡಿಟ್ಟು ಹೋದ ತಿಂಡಿಯನ್ನು ವಿನಯ್‌ಗೆ ಬಿಸಿ ಮಾಡಿಕೊಟ್ಟು, ಅವನನ್ನು ಟ್ಯೂಶನ್ ಗೆ ಬಿಟ್ಟು ಬರುತ್ತಿದ್ದಳು. ಅಲ್ಲಿಂದ ಬಂದ ಬಳಿಕ ತಿಂಡಿ ತಿಂದು ಹೂಗಿಡಗಳಿಗೆ ನೀರು ಹಾಕುತ್ತಿದ್ದಳು. ಅಲ್ಲಿಂದ ಕೆಳಗಿಳಿದು ಬಂದು ಆರ್.ಓ.ನಿಂದ ನೀರನ್ನು ಬಾಟಲ್ ಗೆ ತುಂಬಿಸಿ, ಒಣ ಬಟ್ಟೆಗಳನ್ನು ಇಸ್ತ್ರಿಗೆ ಕೊಡಲು ಹೋಗತ್ತಿದ್ದಳು. ಅಲ್ಲಿಂದ ವಿನಯ್ ನನ್ನು ಕರೆದುಕೊಂಡು ಮನೆಗೆ ಬಂದು ಚಹ ಹೀರುತ್ತಾ ಅವನ ಹೋಂವರ್ಕ್‌ಗೆ ನೆರವಾಗುತ್ತಿದ್ದಳು. ಅದಾದ ನಂತರ ರಾತ್ರಿ ಊಟಕ್ಕೆ ಸಿದ್ಧತೆ ಆರಂಭವಾಗುತ್ತಿತ್ತು. ರಾತ್ರಿ ಊಟದ ಕೆಲಸವನ್ನು ಶುಭಾ ತಾನೊಬ್ಬಳೇ ನಿರ್ವಹಿಸುತ್ತಿದ್ದಳು. ಇದರ ಎರಡು ಮುಖ್ಯ ಕಾರಣಗಳೆಂದರೆ ಮಗ ವಿನಯ್ ಹಾಗೂ ಪತಿ ಗೌರವ್ ಇವರಿಬ್ಬರೂ ಅವಳು ಕೈಯಾರೆ ಮಾಡಿದ ಅಡುಗೆಯನ್ನೇ ಇಷ್ಟಪಟ್ಟು ತಿನ್ನುತ್ತಿದ್ದರು. ಎರಡನೆಯದು, ಅವಳು ಯಾವಾಗಲೂ ಉಳಿತಾಯದ ದಾರಿಯನ್ನೇ ಹುಡುಕುತ್ತಿದ್ದಳು. ಫ್ಲ್ಯಾಟ್‌ಗಾಗಿ ಮಾಡಿದ ಸಾಲದ ಅನೇಕ ಕಂತುಗಳು ಇನ್ನೂ ಹಾಗೆಯೇ ಬಾಕಿ ಇದ್ದವು.
ಗೌರವ್ ಮತ್ತು ಶುಭಾ 10-12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆ ಸಮಯದಲ್ಲಿ ಶುಭಾ ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಗೌರವ್ ಎಂಬಿಎ ಮಾಡಲೆಂದು ಬೆಂಗಳೂರಿಗೆ ಬಂದಿದ್ದ. ಅದು ಮುಗಿದ ಬಳಿಕ ಅಲ್ಲಿಯೇ ಕಂಪನಿಯೊಂದರಲ್ಲಿ ನೌಕರಿ ಸಿಕ್ಕಿತ್ತು. ಮೆಟ್ರೋದಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ಅವರಿಗೆ `ಲವ್ ಅಟ್ ಫಸ್ಟ್ ಸೈಟ್’ ಎಂಬಂತಾಗಿತ್ತು. ಮೊದಲ ನೋಟದ ಪ್ರೀತಿ ಬಹುಬೇಗ ಅವರಿಬ್ಬರು ಜೀವನ ಸಂಗಾತಿಗಳಾಗುವಂತೆ ಮಾಡಿತು.
ಶುಭಾಳ ಮನೆಯವರಿಗೆ ಈ ಮದುವೆಯ ಬಗ್ಗೆ ಯಾವುದೇ ಆಕ್ಷೇಪವಿರಲಿಲ್ಲ. ಮಮತಾ ಕೂಡ ಅವರಿಬ್ಬರ ಮದುವೆಗೆ ತನ್ನ ಒಪ್ಪಿಗೆ ಸೂಚಿಸಿದ್ದರು. ಆದರೆ ಅರುಣ್ ಮಾತ್ರ ಆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಮಮತಾ ತಿಳಿವಳಿಕೆ ಹೇಳಿದ ಬಳಿಕ ಅರುಣ್ ತಮ್ಮ ಒಪ್ಪಿಗೆ ಸೂಚಿಸಿದ್ದ.
ಮದುವೆಯಾದ ಕೆಲವು ದಿನಗಳ ತನಕ ಗೌರವ್ ಶುಭಾಳ ಮನೆಯಲ್ಲಿಯೇ ಉಳಿದುಕೊಂಡಿದ್ದ. ಬಳಿಕ ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಆಫರ್ ದೊರಕಿದ ಬಳಿಕ ಅವನು ಬಾಡಿಗೆ ಮನೆಯೊಂದನ್ನು ಹಿಡಿದು ಇಬ್ಬರೂ ಅಲ್ಲಿ ಶಿಫ್ಟ್ ಆದರು. ಆ ಬಳಿಕ ಶುಭಾ ಆ ಏರಿಯಾದ ಹೆಸರಾಂತ ಶಾಲೆಗಳಿಗೆ ತನ್ನ ಬಯೋಡೇಟಾ ಕಳಿಸಲು ಶುರು ಮಾಡಿದಳು. ಅವಳ ಅನುಭವ ಹಾಗೂ ಅರ್ಹತೆಯನ್ನು ಗಮನಕ್ಕೆ ತೆಗೆದುಕೊಂಡು ಅವಳು ಒಂದು ಶಾಲೆಗೆ ಆಯ್ಕೆಯಾದಳು. ಅಲ್ಲಿಯವರೆಗೆ ವಿನಯ್‌ಗೆ ಎರಡು ವರ್ಷ ಆಗಿತ್ತು. ಹೀಗಾಗಿ ತಾನು ಕಲಿಸುತ್ತಿದ್ದ ಶಾಲೆಯಲ್ಲಿಯೇ ಅವನಿಗೆ ಅಡ್ಮಿಶನ್ ಕೊಡಿಸಿದಳು. ಕೆಲವು ವರ್ಷ ಬಾಡಿಗೆ ಮನೆಯಲ್ಲಿದ್ದು ಗೌರವ್ ಬೆಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ.
ಅಪ್ಪನ ನಿವೃತ್ತಿಯ ಬಳಿಕ, ಅಪ್ಪ ಅಮ್ಮ ಇಬ್ಬರೂ ತನ್ನ ಬಳಿಯೇ ಇರಬೇಕೆಂದು ಗೌರವ್ ಬಯಸುತ್ತಿದ್ದ. ಅದೇ ಕಾರಣದಿಂದ ಅವನು ದೊಡ್ಡ ಫ್ಲಾಟ್ ನ್ನೇ ಖರೀದಿಸಿದ್ದ. ಆದರೆ ಅಪ್ಪ ಅರುಣ್ ಮಾತ್ರ ಮೈಸೂರು ಬಿಟ್ಟು ಬರಲು ಸಿದ್ಧವಿರಲಿಲ್ಲ. ಆರಂಭದ ದಿನಗಳಲ್ಲಿ ಗೌರವ್ ಮೇಲಿಂದ ಮೇಲೆ ತನ್ನ ತಾಯಿ ತಂದೆಯರನ್ನು ಭೇಟಿ ಆಗಲು ಹೋಗುತ್ತಿದ್ದ. ಆಗ ವಿನಯ್ 4ನೇ ಕ್ಲಾಸಿನಲ್ಲಿದ್ದ. ಆ ಬಳಿಕ ಅವನ ಓದಿನ ಜವಾಬ್ದಾರಿ ಹೆಚ್ಚಾಯ್ತು. ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೊರಟಂತೆ, ಅಪ್ಪನನ್ನು ಆಗಾಗ ಭೇಟಿಯಾಗಲು ಮೈಸೂರಿಗೆ ಹೋಗುವುದು ಕಡಿಮೆಯಾಯಿತು. ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳದೆಯೇ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಮಮತಾ ಹಾಗೂ ಅರುಣ್ ಖಿನ್ನರಾಗತೊಡಗಿದರು.
ಆ ದಿನಗಳಲ್ಲಿ ಅವರು ಮೇಲಿಂದ ಮೇಲೆ ಫೋನ್ ಮಾಡಿ ಗೌರವ್ ಗೆ ಬರಲು ಹೇಳುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅರುಣ್‌ಅವರ ಗೆಳೆಯ ನಿಧನರಾಗಿದ್ದರು. ಆ ಸ್ನೇಹಿತರ ಜೊತೆಗೆ ಅರುಣ್ ನಿರಂತರ ಸಂಪರ್ಕದಲ್ಲಿದ್ದರು. ಸ್ನೇಹಿತರ ನಿಧನ ಅರುಣ್‌ಗೆ ಸಾಕಷ್ಟು ಆಘಾತ ಉಂಟು ಮಾಡಿತ್ತು. ಮಮತಾಗೆ ಕೂಡ ಆ ಸುದ್ದಿ ಬಹಳ ಘಾಸಿ ಉಂಟು ಮಾಡಿತ್ತು.
ತನ್ನ ಅಮ್ಮ ಅಪ್ಪ ಚಿಂತಿತರಾಗಿರುವುದನ್ನು ಗಮನಿಸಿದ ಗೌರವ್ ಮೈಸೂರಿಗೆ 2 ದಿನದ ಟೂರ್ ಪ್ರೋಗ್ರಾಮ್ ಹಾಕಿದ್ದ. ಶುಭಾ ಹಾಗೂ ವಿನಯ್ ಕೂಡ ಶಾಲೆಗೆ ರಜೆ ಹಾಕಿದರು. ಗೌರವ್ಗೆ ಸಾಮಾನ್ಯವಾಗಿ ಶನಿವಾರದ ರಜೆಯಿರುತ್ತಿತ್ತು. ಆದರೆ ಕೆಲಸದ ಒತ್ತಡದಿಂದ ಆ ದಿನ ಆಫೀಸ್‌ಗೆ ಹೋಗಿ ಇಲ್ಲಿ ಮನೆಯಿಂದಲೇ ಕೆಲಸ ನಿಭಾಯಿಸಬೇಕಾಗುತ್ತಿತ್ತು. `ನಾನು ಅಲ್ಲಿಂದಲೇ ಕೆಲಸ ಮಾಡಿ ಮುಗಿಸ್ತೀನಿ,’ ಎಂದು ತನಗೆ ತಾನೇ ಹೇಳಿಕೊಳ್ಳುತ್ತ ಲ್ಯಾಪ್ ಟಾಪ್ ನ್ನು ತನ್ನೊಂದಿಗೆ ಇಟ್ಟುಕೊಂಡ.
ಮೂವರು ಮೈಸೂರಿಗೆ ತಲುಪಿದಾಗ ಅರುಣ್ ಹಾಗೂ ಮಮತಾರ ಕಳೆಯೇ ಇಲ್ಲದ ಮನೆಗೆ ಒಮ್ಮೆಲೆ ಕಳೆ ಬಂದಂತಾಯಿತು. ಚಹಾ ಸೇವನೆ ಮಾಡಿ ಶುಭಾ ಅಡುಗೆ ಕೆಲಸದಲ್ಲಿ ನಿರತಳಾದಳು. ವಿನಯ್ ತಾತನಿಗೆ ತನ್ನ ಶಾಲೆ ಹಾಗೂ ಸ್ನೇಹಿತರ ಬಗೆಗೆ ಹೇಳಿಕೊಳ್ಳತೊಡಗಿದ. ಗೌರವ್ ತನ್ನ ಆಫೀಸಿನ ಕೆಲಸ ಆರಂಭಿಸಲೆಂದು ಲ್ಯಾಪ್ ಟಾಪ್ ನ್ನು ಟೇಬಲ್ ಮೇಲೆ ಇಟ್ಟುಕೊಂಡು ಕುಳಿತ.
ಮಗ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ಮಮತಾ, “ನನ್ನ ಮಗ ದೊಡ್ಡ ಹುದ್ದೆಯಲ್ಲಿದ್ದಾನೆ ಎಂಬುದು ನಮಗೆ ಗೊತ್ತು. ಆದರೆ ಇದೆಲ್ಲವನ್ನು ನಮಗೆ ತೋರಿಸುವುದರಿಂದೇನು ಲಾಭ? ನಿನ್ನ ಅಪ್ಪನ ದಿನಗಳು ಎಷ್ಟು ಕಷ್ಟಕರವಾಗಿ ಕಳೆಯುತ್ತಿವೆ ಎನ್ನುವುದು ನಿನಗೆ ಗೊತ್ತಾ? ಮನೆಯೊಳಗೂ ಸಮಾಧಾನವಿಲ್ಲ. ಹೊರಗೂ ನೆಮ್ಮದಿ ಇಲ್ಲ. ಮನೆಯ ಅಕ್ಕಪಕ್ಕದವರು ಯಾರಾದರೂ ಭೇಟಿಯಾಗಲು ಬರುತ್ತಾರಾ ಅಥವಾ ಆಫೀಸಿನ ಯಾರಾದರೂ ಸ್ನೇಹಿತರು ಫೋನ್ ಮಾಡುತ್ತಾರಾ? ಎನ್ನುವುದನ್ನೇ ಕಾಯುವುದಾಗಿದೆ. ಹೀಗೆ ಎಂದಾದರೂ ಆಗಿತ್ತಾ ನೀನೇ ಹೇಳು. ನೀನೀಗ ಕೆಲಸ ನಿಲ್ಲಿಸುವ ಹಾಗೂ ನಿನ್ನ ಈ ದಿನದ ಸಮಯವನ್ನು ಪೂರ್ತಿಯಾಗಿ ಅಪ್ಪನಿಗೆ ಕೊಡು,” ಎಂದು ಹೇಳಿದರು.
ಮಮತಾಳ ಮಾತನ್ನು ಮುಂದುವರಿಸುತ್ತಾ ಅರುಣ್ ಹೇಳಿದರು, “ನಾನು ಸರ್ಕಾರಿ ಇಲಾಖೆಯಲ್ಲಿ ಡೈರೆಕ್ಟರ್ ಹುದ್ದೆಯಲ್ಲಿ ಕೆಲಸ ಮಾಡಿದ್ದೆ. ಆದರೆ ನಾನು ಇಷ್ಟೊಂದು ಕೆಲಸವನ್ನು ಎಂದೂ ಮಾಡಿಲ್ಲ. ನೀನೇಕೆ ಇಷ್ಟೊಂದು ಕೆಲಸವನ್ನು ನಿನ್ನ ಮೈಮೇಲೆ ಎಳೆದುಕೊಳ್ಳುತ್ತೀಯಾ?”
“ಅಪ್ಪಾ, ಪ್ರೈವೇಟ್ ಸೆಕ್ಟರ್ ನಲ್ಲಿ ಈಗ ಎಷ್ಟೊಂದು ಕಾಂಪಿಟೇಶನ್ ಹೆಚ್ಚಿದೆಯೆಂದರೆ, ನಾನು ಸರಿಯಾಗಿ ಕೆಲಸ ಮಾಡದಿದ್ದರೆ ನನ್ನನ್ನು ಬದಲಿಸಲು ಅವರಿಗೆ 2 ದಿನ ಸಹ ಬೇಕಾಗುವುದಿಲ್ಲ. ನಿಮ್ಮ ಮಾತನ್ನು ಗಮನಿಸಿ ನಾನೀಗ ಕೆಲಸ ಮಾಡುವುದಿಲ್ಲ. ಅಂದಹಾಗೆ ನಾವು 12 ಮಾತ್ರ ನಿಮ್ಮೊದಿಗೆ ಇದ್ದರೆ ಏನಾಗುತ್ತದೆ? ನೀವೇ ನಮ್ಮ ಜೊತೆ ಹೊರಡಿ,” ಗೌರವ್ ತನ್ನ ಕೆಲಸ ನಿಲ್ಲಿಸಿ ಲ್ಯಾಪ್ ಟಾಪ್ ಶಟ್ ಡೌನ್ ಮಾಡಿ ನಗುತ್ತಲೇ ಹೇಳಿದ.
“ಎಲ್ಲಿ ಬರಬೇಕು ನಿಮ್ಮ ಮನೆಗೆ ಅಲ್ಲೂ ಕೂಡ ನೀವು ಮೂರು ಜನ ನಿಮ್ಮ ನಿಮ್ಮ ಕೆಲಸಕ್ಕೆ ಹೊರಟುಬಿಡುತ್ತೀರಿ. ನಾನು ಮತ್ತು ಮಮತಾ ಪುನಃ ಏಕಾಂಗಿಯಾಗಿ ಬಿಡುತ್ತೇವೆ. ಇಲ್ಲಾದರೆ ಕನಿಷ್ಠ ಅಕ್ಕಪಕ್ಕದವರಾದರೂ ಭೇಟಿ ಆಗುತ್ತಾರೆ. ನಾನು ಆಗಾಗ ಹಾಲು, ತರಕಾರಿ, ಹಣ್ಣು ತರಲೆಂದು ಹೊರಗಡೆ ಹೋದಾಗ ಯಾರಾದರೂ ಭೇಟಿಯಾಗುತ್ತಾರೆ. ನಿಜವಾದ ಸಮಸ್ಯೆ ಇರೋದು ನಿನ್ನಮ್ಮನಿಗೆ ಇಲ್ಲಿನ ಕಿಟಿ ಪಾರ್ಟಿಗಳಲ್ಲಿ ಚಿಕ್ಕ ವಯಸ್ಸಿನ ಮಹಿಳೆಯರಷ್ಟೇ ಬರುತ್ತಾರೆ. ಅವರ ಜೊತೆ ಬೆರೆಯೋಕೆ ಅಮ್ಮನಿಗೆ ಕಷ್ಟ ಆಗುತ್ತದೆ. ಅವರ ಜತೆ ಮಾತಾಡೋಕೆ ಶುರು ಮಾಡಿದರೆ ಅವರು ತಮ್ಮ ಅತ್ತೆಯಂದಿರ ಬಗ್ಗೆ ಕಂಪ್ಲೇಂಟ್ ಹೇಳಲು ಶುರು ಮಾಡುತ್ತಾರೆ. ಇನ್ನು ತನ್ನ ಸಮವಯಸ್ಕ ಮಹಿಳೆಯರ ಜೊತೆ ಫೋನ್ ನಲ್ಲಿ ಎಷ್ಟು ಹೊತ್ತು ಅಂತಾ ಮಾತಾಡೋಕೆ ಆಗುತ್ತೆ,” ಎಂದು ಹೇಳುತ್ತಾ ಅರುಣ್ ತಮ್ಮ ಪತ್ನಿ ಮಮತಾ ಕಡೆ ನೋಡಿದರು. ಅವರು ಹೌದು ಎನ್ನುವಂತೆ ತಲೆ ಅಲ್ಲಾಡಿಸಿದರು.
ಶುಭಾ ಅಡುಗೆಮನೆಯಲ್ಲಿ ನಿಂತುಕೊಂಡೇ ಅವರ ಮಾತುಗಳನ್ನು ಆಲಿಸುತ್ತಿದ್ದಳು. ಹೊರಗೆ ಬಂದು ತನ್ನ ಬಾಳ ಗೆಳತಿ ಶೀಲಾಳ ಅಮ್ಮನ ಬಗ್ಗೆ ಹೇಳತೊಡಗಿದಳು.
“ಶೀಲಾಳ ಅಪ್ಪ ತೀರಿಕೊಂಡ ನಂತರ ಆಕೆಯ ಅಮ್ಮ ಏಕಾಂಗಿಯಾಗಿಬಿಟ್ಟಿದ್ದರು. ಅವರಿಗೆ ಕೈದೋಟದ ಬಗ್ಗೆ ಬಹಳ ಆಸಕ್ತಿಯಿತ್ತು. ಅವರ ಅಂಗಳದಲ್ಲಿ ಪುಟ್ಟ ಗಾರ್ಡನ್ ಕೂಡ ಇತ್ತು ಅವರು ಫೋನ್ ನಲ್ಲಿ ಗಾರ್ಡನಿಂಗ್ ಕುರಿತಂತೆ ತಮ್ಮ ಸೋದರನ ಜೊತೆ ಆಗಾಗ ಚರ್ಚೆ ನಡೆಸುತ್ತಿದ್ದರು. ಶೀಲಾಳ ಮಾಮ ಕೃಷಿ ವಿ.ವಿ.ಯಲ್ಲಿ ಹಾರ್ಟಿಕಲ್ಚರ್ ಡಿಪಾರ್ಟ್ ಮೆಂಟ್‌ನ ಲೆಕ್ಚರರ್ ಆಗಿದ್ದರು. ಅವರ ಹೇಳಿಕೆಯ ಮೇರೆಗೆ ಆ ವಿಷಯದಲ್ಲಿ ಸಾಕಷ್ಟು ಪ್ರಾವೀಣ್ಯತೆ ಪಡೆದರು. ಗೃಹಿಣಿಯರಿಗಾಗಿ ಯೂಟ್ಯೂಬ್‌ಚಾನೆಲ್ ನಲ್ಲಿ ವಿಡಿಯೋ ಮಾಡಿ ಹಾಕತೊಡಗಿದರು. ಕ್ರಮೇಣ ಅವರ ಜನಪ್ರಿಯತೆ ಎಷ್ಟೊಂದು ಹೆಚ್ಚಾಯಿತೆಂದರೆ, ಜನರು ಅವರ ಬಳಿ ಸಲಹೆ ಕೇಳತೊಡಗಿದರು. ಇದರಿಂದ ಅವರಿಗೆ ಖುಷಿಯಂತೂ ಸಿಕ್ಕೇ ಸಿಕ್ಕಿತು. ಜೊತೆಗೆ ಮನೆಯ ಅಂಗಳದಲ್ಲಿ ಸುಂದರ ತೋಟ ಕೂಡ ನಿರ್ಮಾಣವಾಯಿತು,” ಎಂದು ಸೊಸೆ ಹೇಳುವುದನ್ನು ಇನ್ನೂ ಮುಗಿಸದೇ ಇರುವಾಗವೇ ಅತ್ತೆ ಮಮತಾ ಮಧ್ಯೆ ಪ್ರವೇಶಿಸಿ ಹೇಳಲಾರಂಭಿಸಿದರು.
“ನನಗೂ ಕೂಡ ಅಡುಗೆಯ ಹವ್ಯಾಸವಿದೆ. ನಿಮ್ಮ ಮಾವನಿಗೆ ಎಲ್ಲೆಲ್ಲಿ ಟ್ರಾನ್ಸ್ ಫರ್ ಆಗ್ತಿತ್ತೊ ನಾನು ಆಯಾ ಪ್ರದೇಶದ ಅಡುಗೆಗಳನ್ನು ಕಲಿತುಕೊಂಡೆ. ಪುಣೆಯಲ್ಲಿದ್ದಾಗ ಪೂರಣ್ ಪೋಳಿ, ಡಾಪಾಲ್, ಮಿಸಳ್, ಗುಜರಾತ್‌ನ ಜಾಮ್ ನಗರಕ್ಕೆ ಹೋದಾಗ ಡೋಕ್ಲಾ ಮಾಡುವುದನ್ನು ಕಲಿತೆ. ಬಿಹಾರಕ್ಕೆ ಹೋದಾಗ ಖಾಜಾ, ಬಿಟ್ಟಿ ಚೋಕಾ, ಕೇಸರ್ ಪೇಡಾ, ಹರ್ಯಾಣಕ್ಕೆ ಹೋದಾಗ ಖಡಿ ಪಕೋಡಾ, ಗಾಜರ್ ಮೇಥಿ, ಭಾಜ್ರಾ ಖಿಚಡಿ ಕಲಿತೆ.
“ಪಶ್ಚಿಮ ಬಂಗಾಳಕ್ಕೆ ಹೋದಾಗ ಸಂದೇಶ್….. ಹೀಗೆ ಬಹಳಷ್ಟು ತಿಂಡಿಗಳನ್ನು ಮಾಡಲು ಕಲಿತುಕೊಂಡೆ. ಅಷ್ಟೇ ಅಲ್ಲ, ಭಾರತದಿಂದ ಹೊರಗೆ ಹೋದಾಗ……” ಎಂದು ಹೇಳುತ್ತಿದ್ದಾಗ ಅರುಣ್ ಪತ್ನಿಯ ಮಾತನ್ನು ಅರ್ಧದಲ್ಲಿಯೇ ತಡೆದು, “ಆಗ ನಾವು ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳುತ್ತಿದ್ದೇ. ಅಲ್ಲಿ ನೀನು ಏನು ತಾನೇ ಕಲಿತುಕೊಳ್ಳಲು ಸಾಧ್ಯವಿತ್ತು?” ಎಂದು ಹೇಳಿದರು.
“ನೀವು ಆಫೀಸಿಗೆ ಹೊರಟು ಹೋಗುತ್ತಿದ್ದಂತೆ ನಾನು ಗೆಸ್ಟ್ ಹೌಸ್ ನ ಕಿಚನ್‌ಗೆ ಹೋಗುತ್ತಿದ್ದೆ. ಅಲ್ಲಿನ ಭಾಷೆಯಂತೂ ಗೊತ್ತಿರಲಿಲ್ಲ. ಆದರೆ ಅಲ್ಲಿ ಮಾಡುತ್ತಿದ್ದ ತಿಂಡಿಗಳನ್ನು ನೋಡುತ್ತಿದ್ದೆ. ಅದಕ್ಕೆ ಬಳಸುತ್ತಿದ್ದ ಸಾಮಗ್ರಿಗಳ ಬಗ್ಗೆ ಸನ್ನೆಯಲ್ಲಿಯೇ ಕೇಳುತ್ತಿದ್ದೆ. ಅದಕ್ಕೆ ಆ ಶೆಫ್ ಹರುಕು ಮುರುಕು ಇಂಗ್ಲಿಷ್ ನಲ್ಲಿ ತಿಳಿಸುತ್ತಿದ್ದ.”
ಎಲ್ಲರೂ ಗೊಳ್ಳೆಂದು ನಕ್ಕರು. ಶುಭಾ ಚಪ್ಪಾಳೆ ತಟ್ಟುತ್ತಾ ಹೇಳಿದಳು, “ವಾವ್ ಅತ್ತೆ ಅಲ್ಲಿ ಏನೇನು ಕಲಿತಿರಿ?”
“ಫ್ರಾನ್ಸ್ ನಲ್ಲಿ ಬಣ್ಣ ಬಣ್ಣದ ಮ್ಯಾಕ್ ರೋನ್ ಮತ್ತು ಕ್ರೇಪ್ ಕೇಕ್. ನನಗೆ ಬಗೆ ಬಗೆಯ ಸಾಸ್ ಮತ್ತು ಬ್ರೆಡ್ ತಯಾರಿಸುವ ಬಗ್ಗೆ ಗೊತ್ತು,” ಎಂದರು.
“ಅಜ್ಜಿ, ನಿಮಗೆ ಇಷ್ಟೆಲ್ಲ ಗೊತ್ತಾ? ನನ್ನ ಫ್ರೆಂಡ್ಸ್ ಮುಂದೆ ಹೇಳಿದರೆ ಅವರೆಲ್ಲ ನೀವು ಮಾಡಿದ ತಿಂಡಿ ತಿನ್ನಲು ಹಠ ಹಿಡಿಯುತ್ತಾರೆ,” ವಿನಯ್‌ನ ಮುಖದಲ್ಲಿ ಆಶ್ಚರ್ಯ ಹಾಗೂ ಖುಷಿಯ ಭಾವನೆಗಳು ತೇಲುತ್ತಿದ್ದವು.
“ನೀವು ಮಾಡಿದ ಡಿಶ್ ಗಳನ್ನು ಅಪ್ಪಾಜಿ ಯೂಟ್ಯೂಬ್‌ನಲ್ಲಿ ಹಾಕುತ್ತಾರೆ,” ಎಂದು ಗೌರವ್ ಖುಷಿಯಿಂದ ಹೇಳಿದ.
“ಈ ನೆಪದಲ್ಲಿ ನಮಗೆ ದಿನ ರುಚಿ ರುಚಿಯಾದ ತಿಂಡಿಗಳು ತಿನ್ನಲು ಸಿಗುತ್ತವೆ,” ಎಂದು ಅರುಣ್ ನಗುತ್ತಾ ಹೇಳಿದರು.
ಮನೆಯ ಎಲ್ಲರೂ ಹಬ್ಬದ ರೀತಿಯಲ್ಲಿ ಉತ್ಸವ ಆಚರಿಸುತ್ತಿದ್ದರು. ಮರುದಿನ ವಿನಯ್ ತನ್ನ ತಾತನಿಗೆ ವಿಡಿಯೋ ಸಿದ್ಧಪಡಿಸಿ ಅವನ್ನು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಹೇಗೆ ಮಾಡಬೇಕೆಂದು ಕಲಿಸಿಕೊಡುತ್ತಿದ್ದ.
ಶುಭಾ ಹಾಗೂ ಮಮತಾ ಬಗೆ ಬಗೆಯ ಅಡುಗೆಗಳು ಹಾಗೂ ಅವುಗಳ ತಯಾರಿಕೆ ವಿಧಾನದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಎಲ್ಲರನ್ನೂ ಖುಷಿಯಿಂದ ನೋಡುತ್ತಿದ್ದ ಗೌರವ್ ನಡುವೆ ಸಮಯ ಸಿಕ್ಕಾಗೆಲ್ಲ ತನ್ನ ಆಫೀಸ್ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದ.
ಭಾನುವಾರ ಸಂಜೆ ವಾಪಸ್ ಹೋಗುವ ಮೊದಲು ಶುಭಾ 2 ಟಿಕೆಟ್‌ಗಳನ್ನು ಅತ್ತೆ ಮಮತಾರ ಕೈಗೆ ಹಸ್ತಾಂತರಿಸುತ್ತಾ, “ನಿಮಗೆ ಹಾಗೂ ಮಾವನಿಗೆ ಮಾರಿಷಸ್‌ಗೆ ಹೋಗಲು ಟಿಕೆಟ್ ಕೊಡುತ್ತಿದ್ದೇನೆ. ನೀವು 15 ದಿನ ಆರಾಮವಾಗಿ ಸುತ್ತಾಡಿ ಬನ್ನಿ. ಅಲ್ಲಿ ನಿಮಗೆ ವೀಸಾ ಆನ್ ಅರೈವಲ್ ಸೌಲಭ್ಯವಿದೆ. ಅದಕ್ಕಾಗಿ ನೀವು ಆನ್ ಲೈನ್ ಅರ್ಜಿ ಹಾಕಿದರೆ ಸಾಕು. ನೀವು ಜೀವನವಿಡೀ ಬಹಳ ಬಿಜಿಯಾಗಿಬಿಟ್ಟಿರಿ. ಎಲ್ಲಿಯಾದರೂ ಹೋದರೆ ಅಫಿಶಿಯಲ್ ಟೂರ್ ಮೇಲೆ ಹೋಗುತ್ತಿದ್ದಿರಿ ಈಗ ನೀವು ಫ್ರೀ ಆಗಿರುವಿರಿ ಎಂಜಾಯ್ ಮಾಡಿ ಬನ್ನಿ. ಅದರಿಂದ ನಿಮಗೂ ಖುಷಿ ಸಿಗುತ್ತದೆ, ನಮಗೂ ಖುಷಿ ಆಗುತ್ತದೆ,” ಶುಭಾ ಹೇಳಿದಳು.
“ಈ ವಯಸ್ಸಿನಲ್ಲಿ ನಾವು ಟೂರ್ ಹೋದರೆ ಜನ ಏನು ಅಂದಾರು?” ಎಂದು ಮಮತಾ ಸಂಕೋಚಭರಿತ ಧ್ವನಿಯಲ್ಲಿ ಹೇಳಿದರು.
ಶುಭಾ ಅತ್ತೆಯ ಹತ್ತಿರ ಹೋಗಿ, “ನನ್ನ ಪ್ರೀತಿಯ ಅತ್ತೆ, ನೀವು ಮತ್ತು ಮಾವ ಈವರೆಗೆ ಜವಾಬ್ದಾರಿ ನಿಭಾಯಿಸುತ್ತಾ ಬಂದಿರಿ. ನೀವು ಜೀವವನ್ನೇನೊ ಕಳೆದಿರಿ. ಆದರೆ ಜೀವಿಸಲಿಲ್ಲ. ಯಾರೂ ಏನೇ ಹೇಳಲಿ, ನೀವು ಪರಸ್ಪರ ಕೈಹಿಡಿದು ಹೋಗಿ ಜೀವಿಸಿ ಬನ್ನಿ.”
ಮಮತಾ ಗದ್ಗದಿತರಾದರು. ಅವರು ಏನಾದರೂ ಹೇಳು ಮುಂಚೆ ಗೌರವ್ ತನ್ನ ಬ್ಯಾಗಿನಿಂದ ಒಂದು ಕ್ಯಾಮೆರಾ ಹೊರತೆಗೆದು, “ಅಪ್ಪಾಜಿ, ನಾವು ನಿಮಗಾಗಿ ಈ ಕ್ಯಾಮೆರಾ ಖರೀದಿಸಿದ್ದೇವೆ. ಮಿರರ್ ಲೆಸ್ ಆಗಿರುವ ಕಾರಣದಿಂದ ಇದು ಹಗುರ ಆಗಿದೆ. ಚಿಕ್ಕದೂ ಕೂಡ ಆಗಿದೆ. ಇದರಿಂದ ತೆಗೆಯುವ ಚಿತ್ರಗಳು ಬಹಳ ಸುಂದರವಾಗಿರುತ್ತವೆ. ನೀವು ನನ್ನ ಬಾಲ್ಯದಲ್ಲಿ ಅದೆಷ್ಟೋ ಸುಂದರ ಚಿತ್ರಗಳನ್ನು ಸೆರೆಹಿಡಿದಿದ್ದೀರಿ. ಆದರೆ ಮುಂದೆ ಬಹಳ ಬಿಜಿಯಾದ ಕಾರಣದಿಂದ ನಿಮ್ಮ ಹವ್ಯಾಸಕ್ಕೆ ಕಡಿವಾಣ ಹಾಕಿದಿರಿ. ಈಗ ನೀವು ಪುನಃ ಫೋಟೋ ಸೆರೆಹಿಡಿಯಿರಿ. ನೀವು ಯಾವಾಗಲೂ ಅಂದುಕೊಳ್ತಾ ಇದ್ದಂತೆ ಮಾರಿಷಸ್‌ಗೆ ಹೋಗಿ ಸಾಕಷ್ಟು ಫೋಟೋ ತೆಗೆಯಿರಿ. ಆ ದೇಶವೇ ಅಷ್ಟು ಸೊಗಸಾಗಿದೆ.”
ಮಮತಾ ಹಾಗೂ ಅರುಣ್‌ರ ತೇವಗೊಂಡ ಕಣ್ಣುಗಳಿಂದ ಅಶ್ರು ಕೆನ್ನೆಗುಂಟ ಜಾರಿದಾಗ, ಅವರಲ್ಲಿದ್ದ ತಪ್ಪು ಕಲ್ಪನೆಗಳು ಕೂಡ ಹಾಗೆಯೇ ಸವೆದುಹೋದವು.
ಶುಭಾಳಿಗೆ ಕೆಲದಿನಗಳ ಬಳಿಕ ಮಮತಾ ಕಳಿಸಿದ ಯೂಟ್ಯೂಬ್ ಲಿಂಕ್ ಸಿಕ್ಕಿತು. ಅದರಲ್ಲಿ ಹಮಸ್ ಎಂಬ ಡಿಶ್‌ನ್ನು ಹಲವು ರೀತಿಯಲ್ಲಿ ತಯಾರಿಸುವ ಬಗ್ಗೆ ಹೇಳಿದ್ದರು. `ಹಮಸ್’ ಒಂದು ಬಗೆಯ ಚಟ್ನಿ ಆಗಿದ್ದು, ಅದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಅದನ್ನೇ ಬೇರೆ ಬಗೆಯಲ್ಲಿ ಅಂದರೆ ಕ್ಯಾರೆಟ್, ಬೀಟ್ ರೂಟ್, ಬಟಾಣಿ ಹಾಗೂ ದೊಡ್ಡ ಮೆಣಸಿನಕಾಯಿಯಿಂದ ಮಾಡುವ ಬಗ್ಗೆ ತಿಳಿಸಿದ್ದಾರೆ. ಅದರ ಸೇವನೆಯಿಂದ ತೂಕದ ಮೇಲೆ ನಿಯಂತ್ರಣ ಹೊಂದಬಹುದು ಹಾಗೂ ಪ್ರೋಟೀನ್ ಮತ್ತು ಕ್ಯಾಲ್ಶಿಯಂನಿಂದ ಸಮೃದ್ಧವಾಗಿರುತ್ತದೆ. ಇದು ಮಧುಮೇಹ ರೋಗಿಗಳಿಗೆ ಉಪಯುಕ್ತ ಆಗಿರುತ್ತದೆ.
ಶುಭಾ ಆ ಲಿಂಕ್‌ನ್ನು ತನ್ನ ಗೆಳತಿಯರಿಗೆ ಶೇರ್ ಮಾಡಿದಳು. ಅಷ್ಟೊಂದು ಒಳ್ಳೆಯ ಡಿಶ್ ಮಾಡಿದ್ದಕ್ಕೆ ಎಲ್ಲರೂ ಅವಳ ಅತ್ತೆಗೆ ಅಭಿನಂದನೆ ತಿಳಿಸುತ್ತಿದ್ದರು. ಮುಂದಿನ ವಿಡಿಯೋ ನಿರೀಕ್ಷಿಸುತ್ತಾ ಇದ್ದರು.
ಮಾರಿಷಸ್ ನಿಂದ ಮರಳಿದ ಬಳಿಕ ಅರುಣ್ ತಾವು ತೆಗೆದ ಫೋಟೋಗಳನ್ನು ವಾಟ್ಸ್ ಆ್ಯಪ್ ನಲ್ಲಿ ಕಳಿಸಿದರು. ಆ ಚಿತ್ರಗಳು ಎಷ್ಟು ಜೀವಂತಾಗಿದ್ದುವೆಂದರೆ, ನಾವೇ ಅಲ್ಲಿ ಹೋಗಿ ನೋಡುತ್ತಿರುವಂತೆ ಅನಿಸುತ್ತಿದ್ದವು.
ಮರುದಿನ ಮಮತಾ ಶುಭಾಗೆ ಫೋನ್ ಮಾಡಿ ಅಕ್ಕಪಕ್ಕದ ಮಹಿಳೆಯರು ತನಗೆ ಕುಕರಿ ಕ್ಲಾಸ್ ತೆಗೆದುಕೊಳ್ಳಲು ಕೇಳುತ್ತಿದ್ದಾರೆ ಎಂದು ಹೇಳಿದರು.
ಕೆಲವು ದಿನಗಳ ಬಳಿಕ ಗೌರವ್ ಗೆ ಅರುಣ್ ಕಳಿಸಿದ ಮೇಲ್ ದೊರೆಯಿತು. ಪತ್ರಿಕೆಯೊಂದು ನಡೆಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ತಮಗೆ ಪ್ರಥಮ ಬಹುಮಾನ ಬಂದಿರುವುದಾಗಿ ಹೇಳಿದ್ದರು. ಫೋಟೋ ಜೊತೆಗೆ ಅಪ್ಪ ಬರೆದ ಲೇಖನದ ಪಿಡಿಎಫ್‌ಕೂಡ ಇತ್ತು. ಅದನ್ನು ಓದಿ ಗೌರವ್ಗೆ ಖುಷಿಯ ಜೊತೆ ಹೆಮ್ಮೆ ಕೂಡ ಆಯಿತು. ಆ ಲೇಖನದಲ್ಲಿ ಅರುಣ್ ರ ವೈದ್ಧಾಪ್ಯ ಜೀವನದ ಗಳಿಗೆಗಳನ್ನು ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಎಂದು ಉಲ್ಲೇಖಿಸಿದ್ದರು. ಅದರ ಜೊತೆಗೆ ಈ ಸಮಯದಲ್ಲಿ ಹೇಗೆ ಜೀವಿಸಬೇಕು ಎಂಬ ಬಗ್ಗೆ ತಮ್ಮದೇ ಆದ ಟಿಪ್ಪಣಿಗಳನ್ನು ಬರೆದಿದ್ದರು. ಅದರ ಶೀರ್ಷಿಕೆ `ಈಗಲಾದರೂ ಜೀವಿಸಿ….’ ಎಂದಿತ್ತು.