ಸುನಂದಾ ಡ್ರೆಸ್ಸಿಂಗ್ ಟೇಬಲ್ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಳು. ತಾನು ಚೆನ್ನಾಗಿಯೇ ಕಾಣಿಸುತ್ತಿದ್ದೇನೆ ಎಂದು ಅವಳಿಗೆ ಅನ್ನಿಸಿತು. ತನ್ನ ಶೋಲ್ಡರ್ ಕಟ್ ಕೂದಲಿನಲ್ಲಿ ಬಾಚಣಿಗೆ ಹಾಕಿದಳು. ತನ್ನಿಷ್ಟದ ಪರ್ಫ್ಯೂಮ್ ಹಾಕಿಕೊಂಡಳು. ಸಮಯ 5 ಗಂಟೆ ಆಗುತ್ತಿತ್ತು. ಕಿಟಿ ಪಾರ್ಟಿಗೆ ಹೋಗುವ ಸಮಯವದು. ತನ್ನ ಬ್ಯಾಗಿನಲ್ಲಿ ಫೋನ್ ಹಾಗೂ ಮನೆಯ ಬೀಗದ ಕೈ ಇಟ್ಟುಕೊಂಡಳು. ತನ್ನ ಹೊಸ ಕುರ್ತಾ ಮತ್ತು ಜೀನ್ಸ್ ಮೇಲೆ ಮತ್ತೊಮ್ಮೆ ಕಣ್ಣು ಹರಿಸಿದಳು.
ಆ ಡ್ರೆಸ್‌ನ್ನು ಅವಳು ಕಳೆದ ವಾರವಷ್ಟೇ ಖರೀದಿಸಿದ್ದಳು. ಇಂದು ಅವಳ ಹುಟ್ಟಿದ ದಿನವಾಗಿತ್ತು. ಕಿಟಿ ಪಾರ್ಟಿಗೆ ಹೋಗ್ತಾ ಹೋಗ್ತಾ ಒಂದು ಕೇಕ್ ತೆಗೆದುಕೊಂಡು ಹೋಗಬೇಕು, ಅಲ್ಲಿನ ಸದಸ್ಯರ ಜೊತೆ ಸೇರಿ ಕೇಕ್ ಕತ್ತರಿಸಬೇಕು. ಅದರಿಂದ ಸಾಕಷ್ಟು ಖುಷಿ ಸಿಗುತ್ತದೆ ಎಂದೆಲ್ಲ ಅವಳು ಯೋಚಿಸಿದಳು.
ಅವಳು ತನ್ನ ಕಿಟಿ ಬಳಗದ ಅತ್ಯಂತ ಹಿರಿಯ ಸದಸ್ಯೆ. ಅವಳಿಗೇ ನಗು ಬಂತು. ವಯಸ್ಸಾದವಳು ಏಕೆ? ಇಂದು ಅವಳಿಗೆ 50 ತುಂಬಿತ್ತು. ಆದರೆ ಅಷ್ಟು ವಯಸ್ಸಾದವಳಂತೆ ಕಾಣುತ್ತಿರಲಿಲ್ಲ. ಅವಳು ತನ್ನನ್ನು ತಾನು ಯಂಗ್ ಮತ್ತು ಸ್ಛೂರ್ತಿಶಾಲಿ ಎಂದು ಭಾವಿಸಿದ್ದಳು. ವಯಸ್ಸಿನಿಂದ ಏನು ತಾನೇ ಆಗುತ್ತದೆ? ಈಗ ಹೊರಡಬೇಕು. ಇಲ್ಲವಾದರೆ ತಡವಾಗುತ್ತದೆ ಎಂದು ಯೋಚಿಸಿ ಕೈಯಲ್ಲಿ ಪರ್ಸ್ ಕೈಗೆತ್ತಿಕೊಂಡಳು. ಅಷ್ಟರಲ್ಲಿ ಕಾಲ್ ಬೆಲ್ ಸದ್ದಾಯಿತು.
`ಈ ಹೊತ್ತಿನಲ್ಲಿ ಯಾರು ಬಂದರು?’ ಎಂದು ಯೋಚಿಸುತ್ತಾ ಅವಳು ಬಾಗಿಲು ತೆರೆದಳು.
ಎದುರಿಗಿದ್ದವರನ್ನು ನೋಡಿ ಅವಳ ಹೃದಯ ಒಮ್ಮೆಲೆ ನಿಂತುಹೋಯಿತು. ಎದುರಿಗೆ ಸೋದರತ್ತೆ ಸುಭದ್ರಾ, ಹಿರಿಯ ನಾದಿನಿ ರಮಾ ಹಾಗೂ ಅವಳ ಅಕ್ಕ ಅಂಜಲಿ ನಿಂತಿದ್ದರು.
ಸುನಂದಾಳ ಬಾಯಿಂದ ಯಾವುದೇ ಮಾತು ಹೊರಡಲಿಲ್ಲ. ಆಗ ಸುಭದ್ರಾ, “ಏನು ಮುಖ ನೋಡುತ್ತಿರುವೆ, ಒಳಗೆ ಬರಲು ಹೇಳೋದಿಲ್ವೆ…..?” ಎಂದರು.
“ಬನ್ನಿ….. ಬನ್ನಿ….. ಒಳಗೆ,” ಎಂದು ಹೇಳುತ್ತಾ ಅವಳು ಸೋದರತ್ತೆಯ ಕಾಲಿಗೆ ಬಿದ್ದಳು. ಮೂವರು ಅವಳಿಗೆ ಹುಟ್ಟುಹಬ್ಬದ ವಿಶ್ ಮಾಡುತ್ತಾ ಗಿಫ್ಟ್ ಕೊಟ್ಟರು.
“ನಿನ್ನ ಬರ್ತ್ ಡೇ ಬಹಳ ಒಳ್ಳೆಯ ದಿವಸವೇ ಬಂದಿದೆ. ಇವತ್ತು ಬೆಳಗ್ಗೆಯಷ್ಟೇ ನಮ್ಮ ದೇವಸ್ಥಾನಕ್ಕೆ ಸ್ವಾಮೀಜಿ ಬಂದಿದ್ದಾರೆ. ಮೊದಲು ಅವರ ಪ್ರವಚನ, ನಂತರ ಕೀರ್ತನೆ ಇದೆ. ನಾವು ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ,” ಎಂದು ರಮಾ ಹೇಳಿದಳು.
ಸುನಂದಾ ತಡವರಿಸಿದಳು, “ನಾನು ಕೀರ್ತನೆಗೆ…….?”
“ಹೋಗೋಣ ಬಾ. ಇಡೀ ದಿನ ಏನು ಮಾಡ್ತಾ ಇರ್ತಿಯೋ? ನೀನು ಧರ್ಮದಲ್ಲಿ ಒಂದಷ್ಟು ಮನಸ್ಸು ತೊಡಗಿಸು, ಪುಣ್ಯ ಲಭಿಸುತ್ತೆ. ಬಹಳ ದಿನಗಳ ಬಳಿಕ ಸ್ವಾಮೀಜಿಗಳು ಇಲ್ಲಿಗೆ ಬಂದಿದ್ದಾರೆ. ಇನ್ಯಾವಾಗ ಬರ್ತಾರೊ ಗೊತ್ತಿಲ್ಲ,” ಸುಭದ್ರಾ ಹೇಳಿದರು.
ಸುನಂದಾಳ ಮೂಡ್ ಒಮ್ಮೆಲೆ ಕೆಟ್ಟುಹೋಯಿತು. ಅವಳು ಮನಸ್ಸಲ್ಲೇ ಸ್ವಾಮೀಜಿಯನ್ನು ತೆಗಳಿದಳು. ಅವರು ಇತ್ತೇ ಬರಬೇಕಿತ್ತಾ? ತನಗೆ ಇವತ್ತು ಕಿಟಿ ಪಾರ್ಟಿ ಇದೆ. ಅದನ್ನು ಕೇಳಿಸಿಕೊಂಡರೆ ಬಂದವರು ನೀನು ಪ್ರವಚನ ಕೀರ್ತನೆ ಬಿಟ್ಟು ಕಿಟಿ ಪಾರ್ಟಿಗೆ ಹೇಗಬೇಕಾ ಎಂದು ತನ್ನನ್ನು ಹೀಗಳೆಯುತ್ತಾರೆ. ತನ್ನ ಅಲಂಕಾರ, ಡ್ರೆಸ್ ನೋಡಿ ಅವರು ಮೊದಲೇ ಉರಿಯುತ್ತಾರೆ.
ಅವಳು ಸಿದ್ಧಳಾಗಿರುವುದನ್ನು ಕಂಡು ಅಂಜಲಿ ಕೇಳಿಯೇ ಬಿಟ್ಟಳು, “ಎಲ್ಲೆಲ್ಲೋ ಹೋಗ್ತಿದಿಯಾ?”
“ಹೌದು ಅಕ್ಕಾ. ಒಂದು ಅವಶ್ಯ ಕೆಲಸವಿತ್ತು.”
“ನಿನ್ನ ಅಗತ್ಯ ಕೆಲಸ ನಂತರ ಮಾಡುವೆಯಂತೆ. ಸ್ವಾಮೀಜಿಗಳ ಪ್ರವಚನಕ್ಕಿಂತ ಅಗತ್ಯ ಕೆಲಸ ನಿನಗೆ ಮತ್ತೊಂದಿದೆಯಾ? ಈಗ ನೀನು ನಮ್ಮೊಂದಿಗೆ ಬೇಗ ಹೊರಡು. ತಡ ಮಾಡಿದರೆ ಅಲ್ಲಿ ಕುಳಿತುಕೊಳ್ಳಲು ಜಾಗ ಕೂಡ ದೊರೆಯುವುದಿಲ್ಲ.”
`ಸಿಗದಿದ್ದರೆ ಸರಿ, ಪ್ರವಚನ ಕೀರ್ತನೆಗೆ ನಾನು ಹೋಗುವುದಿಲ್ಲ,’ ಎಂದು ಯೋಚಿಸಿದಳು. ಆದರೆ ಆ ಮೂವರಿಗೆ ಮುಖಾಮುಖಿ ಆ ಮಾತನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಏನು ಮಾಡುವುದೆಂದು ಅವಳು ಯೋಚಿಸುತ್ತಿರುವಾಗಲೇ ಸುಭದ್ರಾ ಹಕ್ಕಿನ ಸ್ವರದಲ್ಲಿ, “ಈಗ ಹೊರಡು,” ಎಂದು ಹೇಳಿದರು.
ಸುನಂದಾ ಮನಸ್ಸಿಲ್ಲದ ಮನಸ್ಸಿಂದ, “ಸರಿ ಹಾಗಾದ್ರೆ, ನಾನು ಕಾರು ತೆಗಿತೀನಿ,” ಎಂದಳು.
“ಹೌದು ಕಾರಿನಲ್ಲಿಯೇ ಹೋಗೋದು ಸರಿ. ನೀನು ಈಗಾಗಲೇ ಸಾಕಷ್ಟು ತಡ ಮಾಡಿಬಿಟ್ಟೆ,” ಎಂದರು ಸುಭದ್ರಾ.
ಸುನಂದಾ ಕಾರು ಹೊರತೆಗೆದಳು. ಮೂವರು ಕುಳಿತರು. ದೇವಸ್ಥಾನ ತಲುಪಿದಾಗ ಅಲ್ಲಿ ಸಾಕಷ್ಟು ಜನಜಂಗುಳಿ ಕಂಡುಬಂತು. ಪುರುಷರ ಸಂಖ್ಯೆ ಅಲ್ಲಿ ಸಾಕಷ್ಟು ಕಡಿಮೆ ಇತ್ತು. ಇದ್ದರೂ ಕೂಡ ವಯಸ್ಸಾದವರು. ಮಹಿಳೆಯರ ಜಾತ್ರೆಯೇ ಅಲ್ಲಿ ಸೇರಿದಂತಿತ್ತು. ಸುನಂದಾ ಮನಸ್ಸಿನಲ್ಲಿಯೇ ಸಿಡಿಯುತ್ತಿದ್ದಳು. ಅವಳು ಮೌನವಾಗಿ ಮೂವರ ಜೊತೆ ಹೋಗಿ ನೆಲಕ್ಕೆ ಹಾಸಿದ್ದ ಟಾರ್ಪಾಲಿನ ಮೇಲೆ ಕುಳಿತಳು. ಅಷ್ಟರಲ್ಲಿ ಸ್ವಾಮೀಜಿ ಬಂದರು. ಎಲ್ಲ ಮಹಿಳೆಯರು ಸ್ವಾಮೀಜಿಗೆ ಜಯಘೋಷ ಮಾಡಿದರು. ಬಳಿಕ ಸ್ವಾಮೀಜಿಗಳು ಪ್ರವಚನ ಶುರು ಮಾಡಿದರು.
ಸುನಂದಾ ಗಲಿಬಿಲಿಗೊಂಡಿದ್ದಳು. ಅವಳಿಗೆ ಪ್ರವಚನ ಕೀರ್ತನೆಗಳಲ್ಲಿ ಮನಸ್ಸು ಎಲ್ಲಿ ನಿಲ್ಲುತ್ತೆ? ಯಾವುದೇ ಸ್ವಾಮೀಜಿಗಳ ಬಗ್ಗೆ ಅವಳಿಗೆ ಶ್ರದ್ಧೆ ಇರಲಿಲ್ಲ. ಅವರೆಲ್ಲ ನಯವಂಚಕರು, ಸುಳ್ಳುಗಾರರು ಎಂದು ಅವಳಿಗೆ ಅನಿಸುತ್ತಿತ್ತು. ಸ್ವಾಮೀಜಿಗಳ ಪ್ರವಚನದ ಒಂದೇ ಒಂದು ಶಬ್ದ ಅವಳ ಕಿವಿಗೆ ಹೋಗುತ್ತಿರಲಿಲ್ಲ. ಕಿಟಿ ಪಾರ್ಟಿ ಶುರುವಾಗಿರಬೇಕು ಅವರೆಲ್ಲ ತನ್ನನ್ನು ನಿರೀಕ್ಷಿಸುತ್ತಿರಬಹುದು ಎನಿಸಿತು. ಅವಳಿಂದು ತನ್ನ ಬರ್ತ್ ಡೇ ಪಾರ್ಟಿಯನ್ನು ಅವರ ಜೊತೆ ಆಚರಿಸಿ ಖುಷಿ ಅನುಭವಿಸಲು ಯೋಚಿಸಿದ್ದಳು. ಇಲ್ಲಿ ಸ್ವಾಮೀಜಿಗಳ ಬೇಸರ ತರಿಸುವ ಪ್ರವಚನ, ನಂತರ ಕೀರ್ತನೆಯಂತೆ.
ಅವರೆಲ್ಲ ಈಗ ಹೌಸಿ ಆಡುತ್ತಿರಬಹುದು. ಆ ಆಟದಲ್ಲಿ ಅವಳಿಗೆ ಅದೆಷ್ಟು ಮಜ ಸಿಗುತ್ತಿತ್ತು, ವರ್ಣಿಸಲು ಆಗದು. ತನ್ನ ಉತ್ಸಾಹವನ್ನು ಅದೆಷ್ಟು ಖುಷಿಯಿಂದ ಸ್ವೀಕರಿಸುತ್ತಿದ್ದರು. ಈಗ ಸ್ನ್ಯಾಕ್ಸ್ ಟೈಮ್ ಆಗುತ್ತಾ ಬಂತು. ಇಂದು ಸ್ನೇಹಾಳ ಮನೆಯಲ್ಲಿ ಪಾರ್ಟಿ ಇದೆ. ಅವಳು ಎಲ್ಲರಿಗಿಂತ ಚಿಕ್ಕ ವಯಸ್ಸಿನವಳು. ಆದರೆ ಅವಳು ಎಲ್ಲರ ಜೊತೆಗೂ ಅದೆಷ್ಟು ಚೆನ್ನಾಗಿ ಬೆರೆಯುತ್ತಾಳೆ. ಇಂದು ಅವಳು ಜಾಮೂನು ಮಾಡಿರಬಹುದು. ಅದೆಷ್ಟು ರುಚಿ ರುಚಿಯಾಗಿರುತ್ತದೆ ಅವಳು ಮಾಡುವ ಜಾಮೂನು. ಸುನಂದಾಳ ಬಾಯಲ್ಲಿ ನೀರೂರಿತು. ಸ್ವಾಮೀಜಿಯವರ ಪ್ರವಚನ ಹಾಗೆಯೇ ಸಾಗಿತ್ತು. `ಈ ಜಗತ್ತು ಒಂದು ರೀತಿಯ ಮಾಯೆ,’ ಸುನಂದಾ ಮನಸ್ಸಿನಲ್ಲಿಯೇ ಅವರನ್ನು ಹಳಿಯ ತೊಡಗಿದಳು.
`ನೀವು ನನ್ನ ಬರ್ತ್ ಡೇ ದಿನದಂದೇ ಏಕೆ ಬಂದಿರುವಿರಿ?’ ಎಂದು ಮನದಲ್ಲೇ ಪ್ರಶ್ನಿಸುತ್ತಾ ತನ್ನಷ್ಟಕ್ಕೆ ತಾನೇ ನಗತೊಡಗಿದಳು.
ಅವಳು ನಗುತ್ತಿರುವುದನ್ನು ಕಂಡು ಅಂಜಲಿ ಕೈ ತಟ್ಟುತ್ತಾ `ಮೌನವಾಗಿ ಕೂತಿರು,” ಎಂದು ಹೇಳಿದಳು.
`ಇನ್ನು ಕೀರ್ತನೆ ಶುರುವಾಗುತ್ತೆ. ಇಲ್ಲಿಂದ ಹೊರಗೆ ಹೋಗುವುದು ಹೇಗೆ?’ ಎಂದು ಯೋಚಿಸಿ ತನ್ನ ಜೊತೆಗಿದ್ದವರ ಕಣ್ಣು ತಪ್ಪಿಸಿ ಅವಳು ಬ್ಯಾಗ್ ನಿಂದ ಮೊಬೈಲ್ ತೆಗೆದಳು. ಅದರ ಮೇಲೆ ಕಣ್ಣು ಹರಿಸಿದಾಗ ಸುನೀತಾಳ ಮಿಸ್ಡ್ ಕಾಲ್ ಇತ್ತು. ಅವಳು ಪುನಃ ಫೋನ್ ಮಾಡುತ್ತಾಳೆಂದು ಇವಳಿಗೆ ಗೊತ್ತಿತ್ತು. ಸುನೀತಾ ಇವಳ ಮೆಚ್ಚಿನ ಗೆಳತಿಯಾಗಿದ್ದಳು. ಈ ಕಿಟಿ ಬಳಗವನ್ನು ಅವರಿಬ್ಬರೇ ಸೇರಿ ಆರಂಭಿಸಿದ್ದರು. ಬಹಳ ಯೋಚಿಸಿ ನಮ್ರ ಓದುಬರಹ ಬಲ್ಲ, ಶಿಷ್ಟಾಚಾರದ ಬಗ್ಗೆ ಗೌರವವಿರುವ ಮಹಿಳೆಯರ ಒಂದು ಗ್ರೂಪ್ ನ್ನು ಮಾಡಿದ್ದಳು.
ಸುನೀತಾಳ ಫೋನ್ ಬಂತು, “ಏನಾಯ್ತು ಸುನಂದಾ? ನೀನೆಲ್ಲಿರುವೆ?”
ಸುನಂದಾ ಆ್ಯಕ್ಟಿಂಗ್ ಮಾಡುತ್ತಾ, ಸುಭದ್ರಾರಿಗೆ ಕೇಳಿಸುವ ಹಾಗೆ, “ಏನು? ಯಾವಾಗ? ಸರಿ ಸರಿ ನಾನೀಗಲೇ ಹೊರಟೆ,” ಎಂದಳು.
ರಮಾ ಮತ್ತು ಅಂಜಲಿ ಅವಳ ಗಾಬರಿಭರಿತ ಸ್ಥಿತಿಯನ್ನು ಕಂಡು, “ಏನಾಯ್ತು?” ಎಂದು ಮೆಲ್ಲನೆ ಕೇಳಿದರು.
“ಪರಿಚಿತರೊಬ್ಬರಿಗೆ ಆ್ಯಕ್ಸಿಡೆಂಟ್ ಆಗಿದೆ. ನಾನು ಹೋಗಬೇಕು,” ಸುನಂದಾ ಗಾಬರಿಯಿಂದ ಹೇಳಿದಳು.
ಸುಭದ್ರಾ ಕೆಂಗಣ್ಣು ಬೀರುತ್ತಾ, “ನೀನು ಸ್ವಲ್ಪ ಹೊತ್ತು ಮೊಬೈಲ್ ಆಫ್ ಮಾಡಬಾರದಿತ್ತಾ…..? ನೀನು ಅಲ್ಲಿ ಹೋಗಿ ಮಾಡುವುದಾದರೂ ಏನು? ಸ್ವಾಮೀಜಿಗಳ…….”
ಸುನಂದಾ ಆಕೆಯ ಪೂರ್ತಿ ಮಾತು ಕೇಳಿಸಿಕೊಳ್ಳದೆಯೇ ಎದ್ದು ನಿಂತು, “ನಾವು ಆಮೇಲೆ ಮಾತಾಡೋಣ,” ಎನ್ನುತ್ತಾ ಹೊರಟಳು.
ಅಲ್ಲಿ ಸೇರಿದ್ದ ಇತರ ಮಹಿಳೆಯರು ಅವಳನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವಳು ಅವರ ಬಗ್ಗೆ ಗಮನ ಕೊಡದೆಯೇ ಹೊರಗೆ ಬಂದು ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಹೆಸರಾಂತ ಕೇಕ್ ಶಾಪ್‌ವೊಂದಕ್ಕೆ ಹೋಗಿ ಕೇಕ್ ಖರೀದಿಸಿ ಸ್ನೇಹಾಳ ಮನೆ ತಲುಪಿದಳು. ಸುನಂದಾಳನ್ನು ನೋಡಿ ಅವರೆಲ್ಲ ಖುಷಿಪಟ್ಟರು.
“ಸುನಂದಾ, ನೀವು ಬಹಳ ತಡಮಾಡಿ ಬಿಟ್ರಿ…..” ಸ್ನೇಹಾ ಹೇಳಿದಳು.
“ನೀವು ಫೋನ್‌ನಲ್ಲಿ ಯಾವಾಗ, ಎಲ್ಲಿ, ಏಕೆ ಎಂದೆಲ್ಲ ಮಾತಾಡ್ತಿದ್ರಲ್ಲ ಯಾಕೆ…..” ಎಂದು ಸುನೀತಾ ಕೇಳಿದಳು.
ಸುನಂದಾ ನಗುತ್ತಾ ಎಲ್ಲ ವಿಷಯವನ್ನು ಹೇಳಿದಳು. ಎಲ್ಲರೂ ನಕ್ಕಿದ್ದೇ ನಕ್ಕಿದ್ದು.
“ಸುನಂದಾ, ನಿಮ್ಮನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಜೀವಂತಿಕೆಯ ಚಿಲುಮೆ ನೀವು,” ಅನಾಮಿಕಾ ಹೇಳಿದಳು.
“ನಾನು ಒ-ಬ್ಬ- ಸ್ವಾ–——–ಜಿಗಾಗಿ ನನ್ನ ಇಂದಿನ ಸುಂದರ ಸಂಜೆ ಹಾಳು ಮಾಡಿಕೊಳ್ಳಲು ತಯಾರಿರಲಿಲ್ಲ.”
“ಯಾಕೆ? ಇವತ್ತೇನು ವಿಶೇಷ…..?” ಎಲ್ಲರೂ ಒಟ್ಟಿಗೆ ಕೇಳಿದರು.
ಸುನಂದಾ ಕೇಕ್ ಟೇಬಲ್ ಮೇಲೆ ಇಡುತ್ತಾ, “ಇವತ್ತು ನನ್ನ ಬರ್ತ್ ಡೇ. ಈ ದಿನವನ್ನು ನಾನು ನಿಮ್ಮೊಂದಿಗೆ ಕಳೆಯಲು ಇಷ್ಟಪಡ್ತೀನಿ,” ಎಂದು ಹೇಳಿದಳು.
ಎಲ್ಲರೂ ಸುನಂದಾಳಿಗೆ ವಿಶ್ ಮಾಡುತ್ತಾ ಅಪ್ಪಿಕೊಂಡರು. ಸುನಂದಾ ಕಣ್ಣು ತುಂಬಿ ಬಂತು, “ನೀವೆಲ್ಲರೂ ನನ್ನ ಕುಟುಂಬದಂತಿರುವಿರಿ. ನಿಮ್ಮೊಂದಿಗೆ ಸಮಯ ಕಳೆಯುತ್ತಾ ನಾನು ಖುಷಿಯಾಗಿರಲು ಇಷ್ಟಪಡ್ತೀನಿ.”
ಎಲ್ಲರೊಂದಿಗೆ ಚೆನ್ನಾಗಿ ಸಮಯ ಕಳೆದು ಅವಳು ತನ್ನ ಮನೆಗೆ ವಾಪಸ್ಸಾದಳು. ಮನೆಗೆ ಬಂದ ಕೂಡಲೇ ಅವಳು ಸ್ವಲ್ಪ ಹೊತ್ತು ಬೆಡ್ ರೂಮಿನಲ್ಲಿ ಮಲಗಿದಳು.
ಅವಳು ಏಕಾಂಗಿಯಾಗಿ-ಯೇ ಇದ್ದಾಳೆ. ಅವಳು 30 ವರ್ಷದವಳಾಗಿದ್ದಾಗಲೇ ಪತಿ ನೀಲಕಾಂತ್ ಕ್ಯಾನ್ಸರ್‌ನಿಂದ ಸಾವಿಗೀಡಾಗಿದ್ದರು. ಆಗ ಅವರ ಏಕೈಕ ಪುತ್ರ ಗೌರವನಿಗೆ 7 ವರ್ಷವಾಗಿತ್ತು. ಸುನಂದಾಳಿಗೆ ಆ ಘಟನೆ ಪರ್ವತವೇ ಮೈಮೇಲೆಯೇ ಕುಸಿದಂತೆ ಮಾಡಿತ್ತು.
ಪತಿಯ ಅಕಾಲಿಕ ಸಾವು ಅವಳನ್ನು ಅಗಾಧ ನೋವಿಗೆ ಸಿಲುಕುವಂತೆ ಮಾಡಿತ್ತು. ಆದರೆ ಮಗ ಗೌರವ್ ನನ್ನು ನೋಡಿ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದಳು. ನೀಲಕಾಂತ್ ಎಂಜಿನಿಯರ್ ಆಗಿದ್ದು. ಅವರ ಉಳಿತಾಯವೆಲ್ಲ ಸುನಂದಾಳಿಗೆ ಹಸ್ತಾಂತರವಾಗಿತ್ತು. ಅವಳು ಆ ಮೊತ್ತವನ್ನು ಬಹಳ ಯೋಚಿಸಿ ಯೋಚಿಸಿ ಖರ್ಚು ಮಾಡುತ್ತಿದ್ದಳು. ಗೌರವ್ ನ ಓದಿಗಾಗಿ ಎಷ್ಟು ಬೇಕೊ ಅಷ್ಟು ಕೊಡುತ್ತಿದ್ದಳು. ಮನೆಯಂತೂ ಅವಳ ಹೆಸರಿನಲ್ಲಿಯೇ ಇತ್ತು.
ಗೌರವ್ ಈಗ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ. ಅವನು 1 ವರ್ಷದ ಮಟ್ಟಿಗೆ ಹೆಂಡತಿ ಕವಿತಾಳ ಜೊತೆಗೆ ತನ್ನ ಕಂಪನಿಯ ವತಿಯಿಂದ ಪ್ರಾಜೆಕ್ಟ್ ವರ್ಕ್ ಗೆಂದು ಆಸ್ಟ್ರೇಲಿಯಾಗೆ ಹೋಗಿದ್ದ.
ದಿನ ಅತ್ತು ಅತ್ತು ಜೀವಿಸುವ ಬದಲು ಅವಳು ತನ್ನ ಜೀವನವನ್ನು ಖುಷಿ ಖುಷಿಯಿಂದ ಕಳೆಯಲು ಇಚ್ಛಿಸುತ್ತಿದ್ದಳು. ಅವಳು ಬೇಡ ಬೇಡ ಎಂದರೂ ಗೌರವ್ ಅವಳ ಖಾತೆಗೆ ಹಣ ಜಮೆ ಮಾಡುತ್ತಲೇ ಇರುತ್ತಿದ್ದ. ಅವರು ಅಮ್ಮ ಮಗನಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಇದ್ದರು. ಗೌರವ್ ಒಬ್ಬ ಒಳ್ಳೆಯ ಮಗ, ಸೊಸೆಯ ಸ್ವಭಾವ ಕೂಡ ಹಾಗೆಯೇ ಇತ್ತು. ಗಂಡನ ಒತ್ತಾಯದ ಮೇರೆಗೆ ಅವಳು ಡ್ರೈವಿಂಗ್, ಕಂಪ್ಯೂಟರ್ ಹೀಗೆ ಏನೆಲ್ಲ ಕಲಿತಿದ್ದಳು.
ಮನೆಗೆಲಸದವಳು ಬಂದು ಸುನಂದಾ ಮನೆಯ ಅಗತ್ಯ ಕೆಲಸ ಮಾಡಿ ಹೋಗುತ್ತಿದ್ದಳು. ಗೌರವ್ ಹಾಗೂ ಕವಿತಾ ಜೊತೆಗೆ ಅವಳು ದಿನ ಮಾತನಾಡುತ್ತಿದ್ದಳು. ಒಟ್ಟಾರೆ ತನ್ನ ಜೀವನದ ಬಗ್ಗೆ ಸುನಂದಾ ತೃಪ್ತಿಯಿಂದಿದ್ದಳು.
ನೀಲಕಾಂತ್ ತನ್ನ ತಂದೆ ತಾಯಿಗಳ ಏಕೈಕ ಪುತ್ರ. ಮಗನ ಸಾವಿನ ಆಘಾತದಿಂದ ಅವನ ತಂದೆತಾಯಿಗಳು ಒಂದೇ ವರ್ಷದಲ್ಲಿ ತೀರಿಹೋದರು. ಹಿರಿಯ ಪುತ್ರ ದೇವರಾಜ್ ಹಾಗೂ ಪತ್ನಿ ರಮಾ ಮತ್ತು ಅವರಿಗೆ ಇಬ್ಬರು ಮಕ್ಕಳು ಸಾರ್ಥಕ್ ಹಾಗೂ ತನುಜಾ. ಇವರಿಗೆ ತಮ್ಮ ಚಿಕ್ಕಮ್ಮ ಸುನಂದಾಳ ಜೊತೆ ಒಳ್ಳೆಯ ನಿಕಟತೆ ಇತ್ತು. ಅವರು ಆಗಾಗ ಭೇಟಿ ಆಗಲು ಬರುತ್ತಿದ್ದರು.
ಅಂಜಲಿಗೆ ಕೆಲವು ದಿನಗಳ ಹಿಂದಷ್ಟೇ ಅದೇ ನಗರಕ್ಕೆ ವರ್ಗವಾಗಿತ್ತು. ಅವರೆಲ್ಲರ ಜೊತೆ ಸುನಂದಾಗೆ ಒಳ್ಳೆಯ ನಿಕಟತೆ ಇತ್ತು. ಆದರೆ ಆ ಮೂವರು ಸತ್ಸಂಗ ಕೀರ್ತನೆ ಎಂದೆಲ್ಲ ಹೇಳಿ ಸಿದ್ಧರಾಗುತ್ತಿದ್ದುದು ಸುನಂದಾಗೆ ಇರುಸುಮುರುಸು ಉಂಟು ಮಾಡುತ್ತಿತ್ತು. ಅವಳಿಗೆ ಇದೆಲ್ಲ ವಿಷಯಗಳಲ್ಲಿ ಆಸಕ್ತಿ ಇರುತ್ತಿರಲಿಲ್ಲ.
ಅವಳು ಅವರನ್ನು ಮುಖಕ್ಕೆ ಹೊಡೆದಂತೆ ಹೇಳಿ ಅವಮಾನ ಮಾಡುವ ಹಾಗೆಯೂ ಇರಲಿಲ್ಲ. ಏಕೆಂದರೆ ಅವರು ನೀಲಕಾಂತ್‌ರ ಸಾವಿನ ಸಮಯದಲ್ಲಿ ಸಾಕಷ್ಟು ಭಾವನಾತ್ಮಕ ಬೆಂಬಲ ಕೊಟ್ಟಿದ್ದರು.
ಮಲಗಿಕೊಂಡೇ ಅವಳು ಯೋಚನೆ ಮಾಡುತ್ತಿದ್ದಳು. ಅವಳು ತನ್ನ -ಜೀವನವನ್ನು ಪುಣ್ಯ ಪ್ರಾಪ್ತಿಗೆಂದು ಯಾವುದೇ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗಿಯಾಗಲು ಇಷ್ಟಪಡುತ್ತಿರಲಿಲ್ಲ. ತನಗೇನು ಇಷ್ಟವಾಗುತ್ತಿತ್ತೊ, ಅದನ್ನೇ ಮಾಡಲು ಅವಳು ಬಯಸುತ್ತಿದ್ದಳು.
ನೀಲಕಾಂತ್ ಕೂಡ ಕೊನೆಯ ಕ್ಷಣದವರೆಗೂ ನೀನು ಖುಷಿಯಿಂದ ಇರಬೇಕು. ಜೀವನ ಚೈತನ್ಯ ಎಂದೂ ಕಳೆದುಕೊಳ್ಳಬಾರದು ಎಂದು ಹೇಳುತ್ತಿದ್ದರು. ಅವಳು ಮೊದಲಿನಿಂದಲೇ ಹಸನ್ಮುಖಿ, ಸದ್ವವರ್ತನೆ ಹಾಗೂ ಎಲ್ಲರ ಜೊತೆಗೆ ಬೆರೆಯುವ ಸ್ವಭಾವದವಳಾಗಿದ್ದಳು. ಹಾಗಾಗಿ ಅವಳು ಎಲ್ಲರ ಹೃದಯ ಗೆದ್ದಿದ್ದಳು.
ಸೋದರತ್ತೆ ಸುಭದ್ರಾ ಹಳೆಯ ವಿಚಾರದವರು. ಅವರ ಗಂಡ ತೀರಿಹೋಗಿದ್ದರು. ಮಗ ಸೊಸೆಯ ಜೊತೆ ವಾಸಿಸುತ್ತಿದ್ದರು. ಅತ್ತೆ ಸೊಸೆ ಯಾವಾಗಲೂ ಪ್ರವಚನ ಸತ್ಸಂಗದಲ್ಲಿ ಕಾಲ ಕಳೆಯುತ್ತಿದ್ದರು.
ಸುನಂದಾಳ ಬಗ್ಗೆ ಎಂದಾದರೊಮ್ಮೆ ಅತೃಪ್ತಿಯ ಧ್ವನಿಯಲ್ಲಿ, “ಸುನಂದಾ, ನೀನೇಕೆ ನಿನ್ನ ಪರಲೋಕ ಹಾಳು ಮಾಡಿಕೊಳ್ಳುತ್ತಿರುವೆ. ನೀಲಕಾಂತ್ ಹೊರಟುಹೋದ. ಇನ್ನು ನೀನು ಧರ್ಮ ಕರ್ಮದಲ್ಲಿಯೇ ಮನಸ್ಸು ತೊಡಗಿಸಬೇಕು. ಆಗ ಮನಸ್ಸು ಶಾಂತವಾಗಿರುತ್ತದೆ,” ಎಂದು ಹೇಳುತ್ತಿದ್ದರು.
ಸುನಂದಾ ಅವರ ವಯಸ್ಸು ಹಾಗೂ ಸಂಬಂಧಕ್ಕೆ ಗೌರವ ಕೊಟ್ಟು ಏನು ಮಾತಾಡದೇ ಸುಮ್ಮನಾಗುತ್ತಿದ್ದಳು. ಒಮ್ಮೊಮ್ಮೆ ಅಷ್ಟೇ ಪ್ರೀತಿಯಿಂದಲೇ, “ಅತ್ತೆ, ಮನಶ್ಶಾಂತಿಗಾಗಿ ನನಗೆ ಯಾವುದೇ ಪ್ರವಚನದ ಅವಶ್ಯಕತೆ ಇಲ್ಲ,” ಎಂದು ಹೇಳುತ್ತಿದ್ದಳು.
ಸುನಂದಾಗೆ ರಮಾ ಹಾಗೂ ಅಂಜಲಿ ಬಗ್ಗೆಯೇ ಹೆಚ್ಚು ಕೋಪ ಬರುತ್ತಿತ್ತು. ಅವರು ಈ ಕಾಲದ ಓದುಬರಹ ಬಲ್ಲವರು. ತಮ್ಮ ಅಮೂಲ್ಯ ಸಮಯವನ್ನು ಯಾವುದೊ ಸ್ವಾಮೀಜಿಗಾಗಿ ಹಾಳು ಮಾಡಿಕೊಳ್ಳುತ್ತಿದ್ದರು. ತನ್ನನ್ನು ಅವರು ಈ ಚಟುವಟಿಕೆಗಾಗಿ ಕರೆದುಕೊಂಡು ಹೋಗದಂತೆ ಅವಳು ಸದಾ ಪ್ರಯತ್ನಶೀಲಳಾಗಿರುತ್ತಿದ್ದಳು.
ಮರುದಿನ ಅವಳು ತಿಂಡಿ ತಿಂದು ಫ್ರೀ ಆದಳು. ಎಂದಿನಂತೆ ವೆಬ್ ಕ್ಯಾಮ್ ಸೆಟ್ ಮಾಡಿಕೊಂಡು ಗೌರವ್ ಹಾಗೂ ಕವಿತಾಳೊಂದಿಗೆ ಮಾತನಾಡತೊಡಗಿದಳು. ಆಸ್ಟ್ರೇಲಿಯಾದ ಕಾಲಮಾನದ ಪ್ರಕಾರ, ಗೌರವ್ ಆ ಸಮಯಕ್ಕೆ ಊಟಕ್ಕೆಂದು ಮನೆಗೆ ಬರುತ್ತಿದ್ದ. ಆಗ ಗೌರವ್ ಅಮ್ಮನ ಜೊತೆ ಅವಶ್ಯವಾಗಿ ಮಾತನಾಡುತ್ತಿದ್ದ. ಮಗ ಸೊಸೆಯ ಜೊತೆ ಮಾತಾಡಿ ಸುನಂದಾ ಇಡೀ ದಿನ ಖುಷಿಯಿಂದಿರುತ್ತಿದ್ದಳು.
“ಅಮ್ಮ ಹೇಗಿತ್ತು ನಿನ್ನ ಬರ್ತ್‌ಡೇ ಸೆಲಬ್ರೇಶನ್?” ಗೌರವ್ ಕೇಳಿದ.
ಸುನಂದಾ ಪ್ರವಚನ ಹಾಗೂ ಕಿಟಿ ಪಾರ್ಟಿಯ ಪ್ರಹಸನದ ಬಗ್ಗೆ ಹೇಳಿದಾಗ, ಅವನು ಜೋರಾಗಿ ನಕ್ಕು, “ಅಮ್ಮ, ನಿಮಗೆ ಯಾರೂ ಸರಿಸಾಟಿ ಇಲ್ಲ. ನೀವು ಯಾವಾಗಲೂ ಹೀಗೆಯೇ ಇರಬೇಕು,” ಎಂದು ಹೇಳಿದ.
ಒಂದಿಷ್ಟು ಮಾತುಕತೆಯ ಬಳಿಕ ಸುನಂದಾ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸತೊಡಗಿದಳು. ದೈಹಿಕವಾಗಿ ಅವಳು ಸಾಕಷ್ಟು ಚಟುವಟಿಕೆಯಿಂದ ಇರುತ್ತಿದ್ದಳು. ಅವಳನ್ನು ನೋಡಿದರೆ ಅವಳಿಗೆ 50 ಆಗಿದೆಯೆಂದು ಯಾರಿಗೂ ಅನಿಸುತ್ತಿರಲಿಲ್ಲ.
ಎಂಎ ಬಿಎಡ್ ಮಾಡಿದ್ದ ಅವಳು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಳು. ಗೌರವ್ ನೌಕರಿ ಸಿಕ್ಕ ಬಳಿಕ ಅಮ್ಮನಿಗೆ ಹೇಳಿ, ಬಹಳಷ್ಟು ಹಠ ಮಾಡಿ, ಅವರಿಗೆ ರಾಜೀನಾಮೆ ಕೊಡಿಸಿ ವಿಶ್ರಾಂತಿ ಪಡೆಯಲು ಹೇಳಿದ್ದ. ಹೀಗಾಗಿ ಅವಳು ತನಗಿಷ್ಟವಾದ ಜೀವನ ನಡೆಸಿದ್ದಳು. ಅಕ್ಕಪಕ್ಕದ ಮನೆಯವರಿಗೆ ಅಗತ್ಯಬಿದ್ದಾಗೆಲ್ಲ ನೆರವಾಗುತ್ತಿದ್ದಳು. ಇಡೀ ಬೀದಿಗೆ ಅವಳು ತನ್ನ ಒಳ್ಳೆಯ ವರ್ತನೆ ಹಾಗೂ ಕೆಲಸ ಕಾರ್ಯಗಳಿಂದ ಸಾಕಷ್ಟು ಹೆಸರು ಗಳಿಸಿದ್ದಳು.
ಸುನಂದಾ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೆ ಸರಿಯುತ್ತಿರುವುದರ ಬಗ್ಗೆ ಒಂದಷ್ಟು ಮಾತನಾಡಿಕೊಳ್ಳುತ್ತಿದ್ದರು. ಆದರೆ ಅವಳು ನಕ್ಕು ನಿರ್ಲಕ್ಷ್ಯ ಮಾಡಿಬಿಡುತ್ತಿದ್ದಳು ಜೀವನ ತನ್ನದು, ತನ್ನ ಇಚ್ಛೆಯಂತೆಯೇ ಜೀವಿಸಬೇಕು. ಸದಾ ಖುಷಿಯಿಂದಿರುವುದು ಅವಳಿಗೆ ಇಷ್ಟವಾಗುತ್ತಿತ್ತು.
ಒಂದು ದಿನ ಸ್ನೇಹಾ ಬಂದು, “ಬರುವ ಭಾನುವಾರ `ವೆಸ್ಟ್ ಇನ್’ನಲ್ಲಿ ನಮ್ಮ ಮ್ಯಾರೇಜ್ ಆನಿವರ್ಸರಿ ಇದೆ. ನೀವು ಅವಶ್ಯ ಬರಬೇಕು,” ಎಂದಳು.
ಸುನಂದಾ ಆ ಆಮಂತ್ರಣವನ್ನು ಖುಷಿಯಿಂದ ಒಪ್ಪಿಕೊಂಡಳು. ಭಾನುವಾರದಂದು ಸಂಪೂರ್ಣ ಕಿಟಿ ಟೀಮ್ ವೆಸ್ಟ್ ಇನ್‌ನಲ್ಲಿತ್ತು. ಪಾರ್ಟಿ ಅದ್ಧೂರಿಯಾಗಿತ್ತು. ಅಲ್ಲಿನ ಅಲಂಕಾರ ಮನಸ್ಸಿಗೆ ಹಿತವನ್ನುಂಟು ಮಾಡುತ್ತಿತ್ತು.
ಜುಲೈ ತಿಂಗಳು. ಮಳೆಯ ಕಾರಣದಿಂದ ಸಮಾರಂಭವನ್ನು ಒಳಗೆ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ಎಲ್ಲರೂ ಸ್ನೇಹಾ ಹಾಗೂ ವಿಪಿನ್‌ಗೆ ಶುಭ ಹಾರೈಸಿ ಗಿಫ್ಟ್ ಕೊಟ್ಟರು. ಎಲ್ಲರನ್ನೂ ಭೇಟಿಯಾಗಲು ಅದೊಂದು ಒಳ್ಳೆಯ ಅವಕಾಶವಾಯಿತು.
ಸ್ನೇಹಾ ಎಲ್ಲರನ್ನೂ ತಾಯಿ ತಂದೆ, ಅತ್ತೆಮಾವನಿಗೆ ಪರಿಚಯಸಿದ್ದಳು. ಕೊನೆಯಲ್ಲಿ ಅವಳು ಸ್ಮಾರ್ಟ್ ಹಾಗೂ ಆಕರ್ಷಕ ವ್ಯಕ್ತಿತ್ವದ ಒಬ್ಬ ವ್ಯಕ್ತಿಯನ್ನು ಎಲ್ಲರಿಗೂ ಭೇಟಿ ಮಾಡಿಸಿದಳು, “ಇವರು ನಮ್ಮ ದೇವ್ ಮಾಮಾ. ಇವರಿಗೆ ಈಗ ಇಲ್ಲಿಯೇ ಟ್ರಾನ್ಸ್ ಫರ್ ಆಗಿದೆ. ಹೀಗಾಗಿ ಇನ್ಮುಂದೆ ನಮ್ಮ ಜೊತೆಗೇ ಇರುತ್ತಾರೆ.”
ದೇವ್ ಎಲ್ಲರಿಗೂ ಕೈ ಜೋಡಿಸಿ ನಮಸ್ಕರಿಸಿದರು. ತಮ್ಮ ಆಕರ್ಷಕ ಮುಗುಳ್ನಗೆ ಹಾಗೂ ಮಾತುಗಳಿಂದ ಅವರು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಡಿನ್ನರ್ ಮುಗಿಯಿತು. ಸುನಂದಾ ಮನೆಗೆ ಹೋಗಲು ಇಚ್ಛಿಸುತ್ತಿದ್ದಳು. ಆಗ ರಾತ್ರಿಯ 12 ಗಂಟೆ. ಅಲ್ಲಿನ ಬೇರೆ ಯಾರಿಗೂ ಮನೆಗೆ ಹೋಗು ಆತುರ ಇರಲಿಲ್ಲ. ಸುನಂದಾ ಸ್ನೇಹಾ ಹಾಗೂ ವಿಪಿನ್‌ಗೆ ಮತ್ತೊಮ್ಮೆ ವಿಶ್ ಮಾಡಿ ಹೊರಗೆ ಬಂದಳು. ಸ್ವಲ್ಪ ದೂರವಷ್ಟೇ ಹೋಗಿದ್ದಳು. ಆಕಸ್ಮಿಕವಾಗಿ ಅವಳ ಕಾರು ನಿಂತುಬಿಟ್ಟಿತು. ಮಳೆ ರಭಸವಾಗಿ ಸುರಿಯುತ್ತಿತ್ತು. ಅವಳು ಬಹಳಷ್ಟು ಪ್ರಯತ್ನ ಮಾಡಿದರೂ ಕಾರು ಸ್ಟಾರ್ಟ್ ಆಗಲಿಲ್ಲ. ಅವಳಿಗೆ ದಿಗಿಲಾಯಿತು. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಏನೂ ತಿಳಿಯದಿದ್ದಾಗ ಅವಳು ಸ್ನೇಹಾಗೆ ತನ್ನ ಸಮಸ್ಯೆ ಹೇಳಿಕೊಂಡಳು.
“ನೀವು ಅಲ್ಲಿಯೇ ಇರಿ, ನಾನು ಈಗಲೇ ಮಾಮಾರನ್ನು ಕಳಿಸಿಕೊಡ್ತೀನಿ.”
“ಬೇಡ ಬೇಡ… ಅವರಿಗೇಕೆ ತೊಂದರೆ?”
“ಅವರಿಗೆ ಏನೂ ತೊಂದರೆಯಾಗುವುದಿಲ್ಲ. ಉಳಿದವರೆಲ್ಲ ಡ್ಯಾನ್ಸ್ ಫ್ಲೋರ್ ನಲ್ಲಿದ್ದಾರೆ. ಮಾಮಾಜಿ ಒಬ್ಬರೇ ಏಕಾಂಗಿಯಾಗಿ ಕುಳಿತಿದ್ದಾರೆ ಅವರು ಬರುತ್ತಾರೆ ನಾನು ಅವರಿಗೆ ನಿಮ್ಮ ನಂಬರ್ ಕೊಡ್ತೀನಿ.”
ಸ್ವಲ್ಪ ಹೊತ್ತಿನಲ್ಲಿಯೇ ದೇವ್ ಅಲ್ಲಿಗೆ ತಲುಪಿದರು. ಅವರು ಫೋನ್‌ನಲ್ಲಿ, “ನೀವು ನಿಮ್ಮ ಗಾಡಿಯನ್ನು ಲಾಕ್ ಮಾಡಿ ನನ್ನ ಗಾಡಿಯಲ್ಲಿ ಬನ್ನಿ. ಮಳೆ ಬಹಳ ಜೋರಾಗಿದೆ. ನಿಮ್ಮ ಕಾರಿನ ಎದುರಿಗೇ ನಿಂತಿರುವ ಕಪ್ಪು ಕಾರಿನಲ್ಲಿ ನಾನಿದ್ದೇನೆ,” ಎಂದರು.
ಕಾರಿನಲ್ಲಿ ಯಾವಾಗಲೂ ಇರುತ್ತಿದ್ದ ಕೋಟು ಕೈಗೆತ್ತಿಕೊಂಡು ಗಾಡಿ ಲಾಕ್ ಮಾಡಿ, ದೇವ್ ಗಾಡಿಯಲ್ಲಿ ಕುಳಿತುಕೊಳ್ಳುತ್ತಾ, ಸುನಂದಾ, “ಸಾರಿ, ನನ್ನಿಂದಾಗಿ ನಿಮಗೆ ತೊಂದರೆಯಾಯಿತು,” ಎಂದು ಹೇಳಿದಳು.
ದೇವ್ ನಗುತ್ತಲೇ, “ನಾನು ಅಲ್ಲಿ ಏಕಾಂಗಿಯಾಗಿಯೇ ಕುಳಿತಿದ್ದೆ. ಮಳೆಯಲ್ಲಿ ಡ್ರೈವಿಂಗ್ ಮಾಡುವುದೆಂದರೆ ನನಗೆ ಬಹಳ ಇಷ್ಟ,” ಎಂದು ಹೇಳಿದರು.
ಸುನಂದಾ ತಮ್ಮ ಮನಿಯ ದಾರಿಯನ್ನು ತೋರಿಸುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಮನೆ ಬಂತು, “ನೀವು ಬಯಸುವುದಾದರೆ, ನಿಮ್ಮ ಕಾರಿನ ಬೀಗದ ಕೈಯನ್ನು ನನಗೆ ಕೊಡಿ. ನಾನೇ ದುರಸ್ತಿ ಮಾಡಿಸಿ ಕೊಡ್ತೀನಿ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಇದ್ದರೆ ಸರಿ,” ಎಂದು ಹೇಳಿದಳು.
“ಓಹ್ ಥ್ಯಾಂಕ್ಸ್ ಎ ಲಾಟ್,” ಎಂದು ಹೇಳುತ್ತಾ ಸುನಂದಾ ತನ್ನ ಕಾರಿನ ಕೀ ಅವರ ಕೈಗೆ ಕೊಟ್ಟಳು.
ದೇವ್ “ಗುಡ್‌ನೈಟ್,” ಹೇಳುತ್ತಾ ಅಲ್ಲಿಂದ ಹೊರಟ.
ಮರುದಿನ ಸಂಜೆ ಸ್ನೇಹಾ ದೇವ್ ಜೊತೆಗೆ ಸುನಂದಾಳನ್ನು ಭೇಟಿಯಾಗಲು ಬಂದಳು. ಇಬ್ಬರೂ ತನ್ನ ಮನೆಗೆ ಬಂದಿರುವುದನ್ನು ನೋಡಿ ಸುನಂದಾ ಖುಷಿಗೊಂಡಳು. ಸ್ನೇಹಾ ದೇವ್ ಗೆ ಸುನಂದಾಳ ಬಗ್ಗೆ ಎಲ್ಲ ವಿಷಯ ತಿಳಿಸಿದ್ದಳು. ಮಾತುಕತೆಯ ಜೊತೆ ಚಹಾ, ಉಪಹಾರವಾಯಿತು.
“ನಾವು ಮಾಮಾಜಿಗೆ ಬೇರೆ ಪ್ಲ್ಯಾಟ್ ತೆಗೆದುಕೊಂಡು ಅಲ್ಲಿಗೆ ಶಿಫ್ಟ್ ಆಗಬೇಡಿ ಎಂದು ಹೇಳುತ್ತಲೇ ಇದ್ದೇವೆ. ಆದರೆ ಇವರು ಹಠಮಾರಿ. ಯಾರ ಮಾತನ್ನೂ ಕೇಳುತ್ತಿಲ್ಲ,” ಎಂದು ಸ್ನೇಹಾ ಹೇಳಿದಳು.
ದೇವ್ ನಗುತ್ತಾ, “ನಿಮ್ಮೆಲ್ಲರಿಗೂ ಪ್ರೈವೆಸಿ ಬೇಕಲ್ಲ ಅದಕ್ಕೆ ಈ ವ್ಯವಸ್ಥೆ,” ಎಂದರು.
ಸುನಂದಾ ನಕ್ಕಳು. ತಕ್ಷಣವೇ ದೇವ್ ಎದ್ದು ನಿಂತು, “ನಾನೀಗ ಹೊರಡ್ತೀನಿ. ನನ್ನ ಹೊಸ ಮನೆಗೆ ಏನೇನು ವಸ್ತುಗಳು ಬೇಕೊ ಅವನ್ನೆಲ್ಲ ಖರೀದಿಸಬೇಕು.”
“ವಿಪಿನ್ ಇನ್ನೇನು ಬರುವ ಹೊತ್ತಾಯ್ತು. ನಾನೂ ಹೊರಡ್ತೀನಿ,” ಸ್ನೇಹಾ ಹೇಳಿದಳು.
ಸುನಂದಾ ಅದಕ್ಕೆ, “ನಾನೂ ಕೂಡ ಮನೆಗೆ ಒಂದಿಷ್ಟು ಸಲಕರಣೆ ಖರೀದಿಸಲು ಹೋಗಬೇಕಿದೆ,” ಎಂದಳು.
“ಹಾಗಾದರೆ ನೀವು ಮಾಮಾ ಜೊತೆ ಹೋಬಹುದಲ್ವಾ? ನಿಮ್ಮ ಬಳಿ ಈಗ ಕಾರು ಕೂಡಾ ಇಲ್ವಲ್ಲಾ….?” ಎಂದಳು ಸ್ನೇಹಾ.
ಸುನಂದಾ ನಿರಾಕರಿಸಿದಾಗ ದೇವ್, “ಬನ್ನಿ ನನ್ನ ಜೊತೆಗೆ. ನನಗೂ ಕಂಪನಿ ಸಿಗುತ್ತೆ,” ಎಂದರು.
ಸುನಂದಾ ಒಪ್ಪಿಗೆ ಸೂಚಿಸುತ್ತಾ, “ನೀವು ಹೋಗಿ ಕಾರಿನಲ್ಲಿ ಕುಳಿತುಕೊಳ್ಳಿ. ನಾನು ರೆಡಿಯಾಗಿ ಬರ್ತೀನಿ,” ಎಂದಳು.
ಸ್ನೇಹಾ ತನ್ನ ಪಾಡಿಗೆ ತಾನು ಹೊರಟು ಹೋದಳು. ದೇವ್ ಸುನಂದಾಳಿಗಾಗಿ ಕಾಯತೊಡಗಿದರು. ಸುನಂದಾ ಸಿದ್ಧಳಾಗಿ ಬಂದಾಗ, ದೇವ್ ಆಕೆಯತ್ತ ಪ್ರಶಂಸೆಭರಿತ ನೋಟ ಬೀರಿದಾಗ ಸುನಂದಾಗೆ ಒಂದಿಷ್ಟು ಸಂಕೋಚವಾಯಿತು. ಮನೆ ಬಿಟ್ಟು ಸ್ವಲ್ಪ ದೂರ ಬಂದಿದ್ದರು. ಅಷ್ಟರಲ್ಲಿ ಜೋರಾಗಿ ಮಳೆ ಬರಲಾರಂಭಿಸಿತು. ಆಗ ದೇವ್ ಸುನಂದಾಳತ್ತ ನೋಡಿ, “ನಾವಿಬ್ಬರೂ ಜೊತಿಗಿದ್ದಾಗೆವಲ್ಲಾ ಯಾವಾಗಲೂ ಮಳೆ ಬರುತ್ತಾ?” ಎಂದು ಕೇಳಿದರು.
ಸುನಂದಾ ಅವರ ಮಾತು ಕೇಳಿಸಿಕೊಂಡು ಜೋರಾಗಿ ನಕ್ಕಳು. ಇಬ್ಬರೂ ಶಾಪಿಂಗ್ ಮಾಡಿದರು. ನಂತರ ಕಾಫಿ ಕುಡಿದರು. ದೇವ್ ಆಡಿದ ಮಾತುಗಳಿಂದ ಅವರು ಏಕಾಂಗಿಯಾಗಿರಬಹುದು ಎನಿಸಿತು. ಅವಳು ಅವರನ್ನು ಹೆಚ್ಚೇನೂ ಕೇಳಲು ಹೋಗಲಿಲ್ಲ. ದೇವ್ ನಿಂದಾಗಿ ಅವಳ ಮನಸ್ಸಿನಲ್ಲಿ ಒಂದಿಷ್ಟು ಸಂಚಲನ ಉಂಟಾಗಿರುವ ಅನುಭವವಾಗುತ್ತಿತ್ತು. ಹೊರಗೆ ಮಳೆ, ಒಳಗೆ ಕಾರಿನಲ್ಲಿ ಕೇಳಿಸುತ್ತಿದ್ದ ಇಂಪಾದ ಹಾಡು, ದೇವ್ ರ ಸೊಗಸಾದ ಮಾತುಕಥೆಯ ಶೈಲಿ ಬಹಳ ಇಷ್ಟವಾಗುತ್ತಿತ್ತು. ನೀಲಕಾಂತ್ ಬಳಿಕ ಮೊದಲ ಬಾರಿಗೆ ಪುರುಷನೊಬ್ಬನ ಸಾಂಗತ್ಯ ಅವಳಲ್ಲಿ ವಿಚಿತ್ರ ಸಂಚಲನ ಹುಟ್ಟಿಸಿತ್ತು.
ಮುಂದಿನ ಸಲದ ಕಿಟಿ ಪಾರ್ಟಿ ಸುರೇಖಾಳ ಮನೆಯಲ್ಲಿ ಏರ್ಪಾಟಾಗಿತ್ತು. ಈ ಸಲ ಸ್ನೇಹಾ ಎಲ್ಲರಿಗೂ ಉತ್ಸಾಹದಿಂದಲೇ, “ನನ್ನ ಮಾಮ ದೇವ್ ಗೆ ಮದುವೆಯಾದ ಒಂದೇ ವರ್ಷದಲ್ಲಿ ಡೈವೋರ್ಸ್ ಆಯಿತು. ನನ್ನ ಅತ್ತೆ ತನ್ನ ಪ್ರೇಮಿಯ ಜೊತೆ ಮದುವೆಯಾಗಲು ಅಪೇಕ್ಷಿಸಿದ್ದರು. ಮಾಮನ ಸಾಂಗತ್ಯವನ್ನು ಒಂದು ದಿನ ಇಷ್ಟಪಡುತ್ತಿರಲಿಲ್ಲ. ಅತ್ತೆಯ ಇಚ್ಛೆಯನ್ನು ಗಮನಿಸಿ ಮರು ಮಾತನಾಡದೆ ಡೈವೋರ್ಸ್ ಕೊಟ್ಟುಬಿಟ್ಟರು. ಬಳಿಕ ಅತ್ತೆ ತನ್ನ ಪ್ರೇಮಿಯನ್ನು ಮದುವೆ ಮಾಡಿಕೊಂಡರು. ಮಾಮ ಬಹುರಾಷ್ಟ್ರೀಯ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಅವರು ಯಾವಾಗಲೂ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.”
ಸುನಂದಾ ಮೌನವಾಗಿ ದೇವ್ ಕಥೆ ಆಲಿಸುತ್ತಿದ್ದಳು. ಸ್ನೇಹಾ ಒಮ್ಮಲೆ ಪ್ರಶ್ನಿಸಿದಳು, “ಸುನಂದಾ, ನಿನ್ನೆ ಮಾಮಾಜಿ ಅವರ ಜೊತೆ ಶಾಪಿಂಗ್ ಹೇಗಾಯ್ತು?”
“ಬಹಳ ಸೊಗಸಾಗಿತ್ತು,” ಎಂದು ಹೇಳುತ್ತಾ ಸುನಂದಾ ಮತ್ತು ಇತರೆ ಮಹಿಳೆಯರು ಮಾತುಕಥೆಯಲ್ಲಿ ತಲ್ಲೀನರಾದರು.
ಮರುದಿನ ಆಫೀಸ್ ಕೆಲಸ ಮುಗಿಸಿಕೊಂಡು ದೇವ್ ಸುನಂದಾಳ ಮನೆಗೆ ಬಂದು ಕಾರಿನ ಕೀ ಕೊಡುತ್ತಾ, “ನಿಮ್ಮ ಕಾರ್ ತಂದಿರುವೆ,” ಎಂದರು.
“ಥ್ಯಾಂಕ್ಸ್. ನೀವು ಕುಳಿತುಕೊಳ್ಳಿ ನಾನು ಚಹಾ ತರ್ತೀನಿ,” ಎಂದಳು.
ಸ್ವಲ್ಪ ಹೊತ್ತಿನಲ್ಲಿ ಸುನಂದಾ ಚಹಾ ತಂದಳು. ಅವಳು ಮಾತಿನ ಮಧ್ಯೆ, “ನೀವೀಗ ಹೇಗೆ ಹೋಗ್ತೀರಾ?” ದೇವ್ ನಗುತ್ತಾ, “ನೀವು ಬಿಡೋಕೆ ಬರಬಹುದ್ವಾ?” ಎಂದರು.
ಅಷ್ಟರಲ್ಲಿ ಸುನಂದಾಳ ಫೋನ್ ರಿಂಗಾಯಿತು. ಆ ಕಡೆಯಿಂದ ಅಂಜಲಿ, “ಸುನಂದಾ, ನೀನು ಬಿಡುವಾಗಿದ್ದೀಯಾ ತಾನೇ?” ಎಂದು ಕೇಳಿದಳು.
ಸುನಂದಾಳ ಕಿವಿ ನಿಮಿರಿದ. “ಯಾಕೆ ಏನಾಯ್ತು? ಏನಾದರೂ ಕೆಲಸವಿತ್ತಾ?”
“ನಾನು ನಿನಗೆ ಈಗಲೇ ಹೇಳ್ತಿರುವೆ. ನನ್ನ ಗೆಳತಿಯ ಮನೆಯಲ್ಲಿ ಕೀರ್ತನೆ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಅವಳು ನಿನಗೂ ಆಹ್ವಾನ ನೀಡಿದ್ದಾಳೆ. ನೀನು ನಾಳೆ ಬರಬೇಕು. ಇಬ್ಬರೂ ಸೇರಿ ಹೋಗೋಣ,” ಎಂದಳು.
“ಇಲ್ಲ ಅಕ್ಕಾ, ನಾಳೆ ನನಗೆ ಬರೋಕೆ ಆಗೋದಿಲ್ಲ. ನನ್ನ ಗಾಡಿ ಬೇರೆ ರಿಪೇರಿಗೆ ಹೋಗಿದೆ. ನಾಳೆಯಂತೂ ನನಗೆ ಸಮಯ ಸಿಗುವುದಿಲ್ಲ. ರೆಗ್ಯುಲರ್ ಚೆಕಪ್‌ಗೆ ಡಾಕ್ಟರ್ ಹತ್ತಿರ ಹೋಗಬೇಕು. ಹಾಗೆಯೇ ಕಾರು ಸಹ ತೆಗೆದುಕೊಂಡು ಬರಬೇಕು. ನಾಳೆ ಬಹಳ ಕೆಲಸಗಳಿವೆ ಅಕ್ಕಾ,” ಎಂದಳು.
ಅಂಜಲಿ ಅತೃಪ್ತಿ ತೋರಿಸುತ್ತಾ ಫೋನ್ ಇಟ್ಟಳು. ಸುನಂದಾ ಫೋನ್ ಕಾಲ್ ಕಟ್ ಆಗುತ್ತಲೇ ಮುಗುಳ್ನಕ್ಕಳು. ಆಗ ದೇವ್, “ನಿಮ್ಮ ಗಾಡಿ ಸರಿ ಆಗಿದೆಯಲ್ಲ……?” ಎಂದು ಕೇಳಿದರು.
ಸುನಂದಾ ನಗುತ್ತಾ ಕೀರ್ತನೆ, ಪ್ರವಚನದಿಂದ ದೂರು ಇರುವ ತನ್ನ ಹವ್ಯಾಸದ ಬಗ್ಗೆ ಹೇಳಿದಾಗ ದೇವ್ ಜೋರಾಗಿ ನಗುತ್ತಾ, “ನೀವು ಸುಳ್ಳನ್ನು ಬಹಳ ಚೆನ್ನಾಗಿ ಹೇಳ್ತೀರಿ,” ಎಂದು ಹೇಳಿದರು. ಇಬ್ಬರೂ ನಗುತ್ತಾ ಮನೆಯಿಂದ ಹೊರಗೆ ಬಂದರು.
ದೇವ್ ಬೇರೆ ಮನೆಗೆ ಶಿಫ್ಟ್ ಆಗಿದ್ದರು. ಸುನಂದಾ ಅವರನ್ನು ಅವರ ಫ್ಲ್ಯಾಟ್ ತನಕ ಬಿಟ್ಟು ಬಂದಳು. ಇಬ್ಬರ ನಡುವೆ ಈವರೆಗೂ ಸಾಕಷ್ಟು ಸ್ನೇಹವಾಗಿತ್ತು. ಯಾವುದೇ ಔಪಚಾರಿಕತೆ ಉಳಿದಿರಲಿಲ್ಲ. ಇಬ್ಬರೂ ಆಗಾಗ ಭೇಟಿ ಆಗುತ್ತಿದ್ದರು. ಜೊತಗೆ ಅಲ್ಲಿಗೆ ಇಲ್ಲಿಗೆ ಹೋಗುತ್ತಿದ್ದರು. ದೇವ್ ಆಗಾಗ ಸ್ನೇಹಾಳ ಮನೆಗೆ ಹೋಗಿ ಬರುತ್ತಿದ್ದರು. ಅವರು ಮನೆಯಲ್ಲಿ ಒಬ್ಬ ಕೆಲಸದವನನ್ನು ಇಟ್ಟುಕೊಂಡಿದ್ದರು. ಅವನು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದ.
ಸುನಂದಾ ತನ್ನ ಮಗ ಗೌರವ್ ಗೆ ದೇವ್ ಬಗ್ಗೆ ಎಲ್ಲ ವಿಷಯ ಹೇಳುತ್ತಿದ್ದಳು. ಅವರನ್ನು ಭೇಟಿಯಾಗುವುದು, ಅಲ್ಲಿ ಇಲ್ಲಿ ಹೋಗುವುದು, ಹೀಗೆ ಎಲ್ಲವನ್ನೂ ಹೇಳುತ್ತಿದ್ದಳು. ಸುನಂದಾಳಿಗೆ ಇತ್ತೀಚೆಗೆ ತನ್ನ ದೇಹಕ್ಕೂ ಕೆಲವು ಅಪೇಕ್ಷೆಗಳಿವೆ, ಆಕಾಂಕ್ಷೆಗಳಿವೆ ಅದಕ್ಕೂ ಸ್ನಿಗ್ಧ ಸ್ಪರ್ಶದ ಅವಶ್ಯಕತ ಇದೆ ಎನಿಸತೊಡಗಿತ್ತು. ಇದು ಜೀವನದ ಸುಂದರ, ರೋಮಾಂಚಕಾರಿ ಸಮಯ ಎಂದು ಅವಳಿಗೆ ಅನಿಸುತ್ತಿತ್ತು. ಅವಳು ಏನೇನು ಯೋಚಿಸಿ ರೋಮಾಂಚನಗೊಳ್ಳುತ್ತಿದ್ದಳೋ ಏನೋ ಸ್ವತಃ ಅವಳಿಗೂ ಗೊತ್ತಾಗುತ್ತಿರಲಿಲ್ಲ.
ದೇವ್ ಹಾಗೂ ಸುನಂದಾಳ ನಡುವಿನ ನಿಕಟತೆ ಹೆಚ್ಚುತ್ತಾ ಹೊರಟಿತ್ತು. ದೇವ್ ಆಫೀಸಿನಲ್ಲಿದ್ದಾಗ ಕೂಡ ಸುನಂದಾಳಿಗೆ ಫೋನ್ ಮಾಡಿ ಅವಳ ಆಗುಹೋಗು, ಅವಳ ಆಸಕ್ತಿ, ಅನಾಸಕ್ತಿಯ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಹೀಗಾಗಿ ಅವರು ಭೇಟಿ ಆಗಲು ಬಂದಾಗೆಲ್ಲ ಅವರು ಅವಳಿಗೆ ಇಷ್ಟವಾಗುತ್ತಿದ್ದುದನ್ನು ತಂದು ಕೊಡುತ್ತಿದ್ದರು. ಅದನ್ನು ಕಂಡು ಸುನಂದಾ ಅಚ್ಚರಿಯಿಂದ ಏನನ್ನೂ ಮಾತನಾಡಲು ಆಗುತ್ತಿರಲಿಲ್ಲ.
ಅದೊಂದು ದಿನ ವಿಪಿನ ಜೊತೆ ವಿಚಾರ ವಿಮರ್ಶೆ ಮಾಡಿ ಸ್ನೇಹಿ ಸುನಂದಾಳನ್ನು ಹೊರತುಪಡಿಸಿ ಕಿಟಿ ಪಾರ್ಟಿಯ ಉಳಿದೆಲ್ಲ ಸದಸ್ಯರನ್ನು ತನ್ನ ಮನೆಗೆ ಆಹ್ವಾನಿಸಿದಳು. ಎಲ್ಲರೂ ಅಚ್ಚರಿಯಿಂದ ಅಲ್ಲಿಗೆ ತಲುಪಿದರು.
“ಏನಾಯ್ತು ಸ್ನೇಹಾ…..? ಫೋನ್‌ನಲ್ಲಿ ಏನನ್ನೂ ಹೇಳಲಿಲ್ಲ. ಆದರೆ ಸುನಂದಾಗೆ ಏನನ್ನೂ ಹೇಳಬಾರದೆಂದು ಏಕೆ ಹೇಳಿದೆ?” ಮಂಜುಳಾ ಕೇಳಿದಳು.
“ಮೊದಲು ಎಲ್ಲರೂ ಸರಿಯಾಗಿ ಉಸಿರಾಡಿ. ನಾನು ಒಂದು ವಿಷಯ ಹೇಳಬೇಕಿದೆ. ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಒಂದು ವಿಷಯ ತಲೆ ತಿನ್ನುತ್ತಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ,” ಎಂದಳು ಸ್ನೇಹಾ.
“ಬೇಗ ಹೇಳು ಸ್ನೇಹಾ….” ಅನಿತಾ ಹೇಳಿದಳು. ಸ್ನೇಹಾ ಗಂಭೀರ ಸ್ವರದಲ್ಲಿ ಮಾತಿಗಾರಂಭಿಸಿದಳು, “ಸುನಂದಾ ಹಾಗೂ ನನ್ನ ದೇವ್ ಮಾಮಾ ಜೊತೆಗಿರುವಾಗ ನೀವು ಅವರನ್ನು ನೋಡಿದ್ದೀರಾ……?” ಎಲ್ಲರೂ “ಹೌದು…. ಹಲವು ಸಲ ನೋಡಿದ್ದೇವೆ,” ಎಂದರು.
“ಇಬ್ಬರೂ ಪರಸ್ಪರ ಜೊತೆಗಿದ್ದಾಗ ಎಷ್ಟು ಚೆನ್ನಾಗಿ ಕಾಣುತ್ತಾರೆ. ಖುಷಿಯಿಂದಿರುತ್ತಾರೆ ಎಂಬುದನ್ನು ಬಹುಶಃ ನೀವು ಗಮನಿಸಿಲ್ಲ ಅನಿಸುತ್ತೆ.”
“ಅಂಥದ್ದೇನಾಯ್ತು? ಸುನಂದಾ ಯಾವಾಗಲೂ ಖುಷಿಯಾಗಿಯೇ ಇರುತ್ತಾರೆ,” ಅನಿತಾ ಹೇಳಿದಳು.
“ನನಗೊಂದು ಯೋಚನೆ ಬಂದಿದೆ. ಸುನಂದಾ ನನ್ನ ಮಾಮಿ ಆದರೆ ಹೇಗಿರುತ್ತೆ ಅಂತಾ…..?”
“ಸ್ನೇಹಾ, ನಿನ್ನ ತಲೆ ಕೆಟ್ಟಿದೆಯಾ? ಸುನಂದಾಗೆ ಈ ವಿಷಯ ಗೊತ್ತಾದ್ರೆ ಅವರೆಷ್ಟು ಬೇಜಾರು ಮಾಡಿಕೊಳ್ಳಬಹುದು.”
“ಬೇಜಾರು ಏಕೆ ಮಾಡಿಕೊಳ್ತಾರೆ? ಅವರು ದೇವ್ ಮಾಮಾ ಜೊತೆ ಖುಷಿಯಾಗಿರುತ್ತಾರೆಂದರೆ. ಅವರು ಮುಂದೆಯೂ ಹಾಗೆಯೇ ಏಕಿರಬಾರದು? ಅವರು ಈವರೆಗೂ ನಮ್ಮೆಲ್ಲರ ಅಗತ್ಯಗಳಿಗೆ ಸ್ಪಂದಿಸಿದ್ದಾರೆ. ನಾವೇಕೆ ಅವರಿಗಾಗಿ ಏನಾದ್ರೂ ಮಾಡಬಾರದು.”
“ಸುನಂದಾಳ ಸುಭದ್ರಾ ಅತ್ತೆ, ಹಿರಿಯ ನಾದಿನಿ ಮತ್ತು ಅಕ್ಕ ಈ ವಿಷಯ ಕೇಳಿಸಿಕೊಂಡು ಅವರಿಗೆ ಏನೆಲ್ಲ ಮಾತನಾಡಬಹುದು ನೀವೇ ಹೇಳಿ.”
“ಇದರಲ್ಲಿ ತಪ್ಪೇನಿದೆ? ನಾನು ನಿಮ್ಮೆಲ್ಲರಿಗಿಂತ ಚಿಕ್ಕವಳು. ನಿಮ್ಮೆಲ್ಲರಲ್ಲಿ ನನ್ನದೊಂದು ವಿನಂತಿ. ನೀವೆಲ್ಲ ನನ್ನ ಜೊತೆಗಿರಿ, ಈಗ ಕಾಲ ಬದಲಾಗಿದೆ. ಸುನಂದಾ ಯಾರ ಹಂಗು ಇಲ್ಲದೆ ಬದುಕಲು ಇಷ್ಟಪಡುತ್ತಾರೆ.”
“ಗೌರವ್ ಬಗ್ಗೆ ನೀನು ಯೋಚಿಸಿದ್ದೀಯಾ?” ಪೂಜಾ ಕೇಳಿದಳು.
ಬಹಳ ಹೊತ್ತಿನಿಂದ ಸುಮ್ಮನೆ ಕುಳಿತಿದ್ದ ಸುನೀತಾ, “ಅವನ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವನು ಬಹಳ ತಿಳಿವಳಿಕೆಯ ಹುಡುಗ. ಅವನು ತನ್ನ ಅಮ್ಮನನ್ನು ಸದಾ ಖುಷಿಯಿಂದ ನೋಡಲು ಇಷ್ಟಪಡುತ್ತಾನೆ,” ಎಂದಳು.
ಬಹಳ ಹೊತ್ತಿನ ತನಕ ವಿಚಾರ ವಿಮರ್ಶೆ ನಡೆಯುತ್ತಲೇ ಇತ್ತು. ಬಳಿಕ ಸುನೀತಾ ಈ ಕುರಿತಂತೆ ಸುನಂದಾಳ ಜೊತೆ ಮಾತನಾಡುವ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಯಿತು.
ಮರುದಿನ ಸುನೀತಾ ಸುನಂದಾಳ ಮನೆಗೆ ಹೋದಳು. ಅದು ಇದು ಮಾತನಾಡುತ್ತಾ, “ದೇವ್ ಹೇಗಿದ್ದಾರೆ? ಭೇಟಿ ಆಗ್ತಾ ಇರ್ತೀರಾ ಅಥವಾ ಇಲ್ವಾ…..?”
ಸುನಂದಾಳ ಬೆಳ್ಳಗಿನ ಮುಖ ದೇವ್ ಹೆಸರು ಕೇಳುತ್ತಿದ್ದಂತೆಯೇ ಕೆಂಪಗಾಯಿತು. ಅವಳು ಅತ್ಯುತ್ಸಾಹದಿಂದ ದೇವ್ ಬಗ್ಗೆ ಮಾತನಾಡತೊಡಗಿದಳು.
ಸುನೀತಾ ಮುಗುಳ್ನಗುತ್ತಾ, “ದೇವ್ ಇಷ್ಟೊಂದು ಒಳ್ಳೆಯರಾಗಿದ್ದರೆ. ಮುಂದೆ ಯೋಚಿಸಬಹುದ್ವಾ….?” ಎಂದು ಕೇಳಿದಳು.
“ನಿನಗೇನು ಹುಚ್ಚಾ? ಈ ರೀತಿ ಯೋಚನೆಯೇಕೆ?”
“ನಮ್ಮೆಲ್ಲರ ಯೋಚನೆ ಅದೇ ಆಗಿದೆ. ನಾನೀಗ ಹೊರಟೆ ನೀನು ಚೆನ್ನಾಗಿ ಯೋಚಿಸು. ಆದರೆ ಸ್ವಲ್ಪ ಬೇಗ. ನಾವು ಬೇಗನೇ ಬರುತ್ತೇವೆ,” ಎಂದು ಹೇಳಿ ಹೊರಟುಹೋದಳು.
ಸುನಂದಾ ಯೋಚನೆಯಲ್ಲಿ ಮುಳುಗೆದ್ದಳು. ಆದರೆ ಅವಳ ಮನಸ್ಸು ಮಾತ್ರ ದೇವ್ ನನ್ನು ತನ್ನ ಜೀವನದಲ್ಲಿ ಎಂದೆಂದಿಗೂ ಸೇರಿಸಿಕೊಳ್ಳಬೇಕು ಎಂದು ಹೇಳುತ್ತಿತ್ತು. ಆದರೆ ಗೌರವ್ ಏನು ಹೇಳುತ್ತಾನೆ? ಸುಭದ್ರಾ ಅತ್ತೆ, ರಮಾ, ಅಂಜಲಿ ಏನು ಹೇಳಬಹುದು? ರಾತ್ರಿ ಇಡೀ ಅಳು ಯೋಚನೆಯಲ್ಲಿ ಮಗ್ಗಲು ಬದಲಿಸುತ್ತಲೇ ಇದ್ದಳು. ಒಮ್ಮೊಮ್ಮೆ ನಿದ್ರೆಯ ಮಂಪರು ಬಂದರೂ ದೇವ್ ಮುಖ ಕಣ್ಮುಂದೆಯೇ ಬರುತ್ತಿತ್ತು.
ಅತ್ತ ವಿಪಿನ್ ಹಾಗೂ ಸ್ನೇಹಾ ದೇವ್ ಜೊತೆ ಮಾತನಾಡಿದರು. ವಯಸ್ಸಿನ ಈ ಹಂತದಲ್ಲಿ ಅವರಿಗೂ ಸಂಗಾತಿಯ ಅಗತ್ಯದ ಅನುಭವವಾಗುತ್ತಿತ್ತು. ಜೀವನದ ಸಮಸ್ತ ಸಂಘರ್ಷಗಳನ್ನು ಎದುರಿಸಿ, ಸದಾ ನಗುತ್ತಾ ಎಲ್ಲರೊಂದಿಗೆ ಬೆರೆಯುವ ಸುನಂದಾ ಅವರ ಹೃದಯದಲ್ಲಿ ಆಗಲೇ ಮನೆ ಮಾಡಿಬಿಟ್ಟಿದ್ದಳು. ಸ್ವಲ್ಪ ಹೊತ್ತು ಯೋಚಿಸಿ ದೇವ್ ತಮ್ಮ ಒಪ್ಪಿಗೆ ಸೂಚಿಸಿದರು.
ಸುನಂದಾ ಗೌರವ್ ನನ್ನು ದಿನ ಸಂಪರ್ಕಿಸುವ ಹೊತ್ತಿಗೆ ಎಲ್ಲರೂ ಅಲ್ಲಿಗೆ ಬಂದರು. ವಿಪಿನ್ ಹಾಗೂ ದೇವ್ ಕೂಡ ಅವರೊಂದಿಗಿದ್ದರು ದೇವ್ ಹಾಗೂ ಸುನಂದಾ ಪರಸ್ಪರ ಕಣ್ಣು ಮಿಲಾಯಿಸಿದಾಗ ಸಂಕೋಚದಿಂದ ತಲೆ ಕೆಳಗೆ ಹಾಕುತ್ತಿದ್ದರು.
“ಸುನಂದಾ, ನೀವು ಪಕ್ಕಕ್ಕೆ ಸರಿಯಿರಿ. ನಾನು ನಿಮ್ಮ ಮಗ ಗೌರವ್ ಜೊತೆ ಮಾತನಾಡ್ತೀನಿ,” ಎಂದು ಹೇಳುತ್ತಾ ವೆಬ್ ಕ್ಯಾಮ್ ನಲ್ಲಿ ಸುನೀತಾ ಗೌರವ್ ಗೆ ಎಲ್ಲ ವಿಷಯ ತಿಳಿಸಿದಳು.
ಸುನಂದಾ ಅತ್ಯಂತ ಸಂಕೋಚದಿಂದಲೇ ಗೌರವ್ ನ ಎದುರು ಬಂದಾಗ, “ಅಮ್ಮಾ, ಏನಿದು ಇಷ್ಟೊಂದು ಒಳ್ಳೆಯ ವಿಷಯವನ್ನು ನಾನು ಎಲ್ಲರಿಗಿಂತ ಕೊನೆಯಲ್ಲಿ ಕೇಳಿಸಿಕೊಳ್ಳುತ್ತಿದ್ದೇನೆ,” ಎಂದ.
ಸುನಂದಾಳ ಕಣ್ಣುಗಳಿಂದ ಭಾವಾತಿರೇಕದ ಹೊಳಪು ಹೊರ ಹೊಮ್ಮಿತು. ಅವಳು ಏನನ್ನೂ ಮಾತನಾಡಲಿಲ್ಲ.
ಸುನೀತಾಳೇ ಗೌರವ್ ನನ್ನು ದೇವ್ ಗೆ ಪರಿಚಯಿಸಿದಳು. ದೇವ್ ರ ಆಕರ್ಷಕ ಸೌಮ್ಯ ಮುಗುಳ್ನಗು ಗೌರವ್ ಗೂ ಬಹಳ ಹಿತಕರ ಎನಿಸಿತು. ಆತ ಈ ಮಾತಿಗೆ ತನ್ನ ಸಮ್ಮತಿ ಸೂಚಿಸಿದಾಗ ಸುನಂದಾಳ ಹೃದಯದ ಮೇಲಿನ ಬಹುದೊಡ್ಡ ಹೊರೆ ಇಳಿದಂತೆ ಭಾಸವಾಯಿತು.
“ಅಮ್ಮಾ, ನೀವು ಅಜ್ಜಿ, ಅತ್ತೆ, ಚಿಕ್ಕಮ್ಮ ಇವರ ಬಗ್ಗೆ ಚಿಂತೆ ಮಾಡಲೇಬೇಡಿ. ನಾನು ಅಲ್ಲಿ ಬಂದಾಗ ಅವರ ಜೊತೆ ಮಾತನಾಡಿ ಅವರನ್ನು ಒಪ್ಪಿಸ್ತೀನಿ. ನೀವು ನಿಮ್ಮದೇ ಆದ ರೀತಿಯಲ್ಲಿ ಜೀವಿಸುವ ಸಂಪೂರ್ಣ ಹಕ್ಕು ಹೊಂದಿರುವಿರಿ. ನನಗಂತೂ ಈಗ ರಜೆಯಿಲ್ಲ. ಆದರೆ ನೀವು ನನಗಾಗಿ ಕಾಯುವುದು ಬೇಡ,” ಎಂದ ಗೌರವ್. ಅವನ ಮಾತುಗಳು ಸುನಂದಾಳ ದೃಢ ನಿಶ್ಚಯವನ್ನು ಇನ್ನಷ್ಟು ಗಟ್ಟಿಗೊಳಿಸಿದ.
ಸ್ನೇಹಾ, ಬಿಪಿನ್ ಹಾಗೂ ದೇವ್ ರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರಟು ಹೋದರು. ವಿಪಿನ್ ಹೇಳಿದ, “ನಾವೀಗ ತಡ ಮಾಡಬಾರದು. ನಾಳೆಯೇ ಮ್ಯಾರೇಜ್ ರಿಜಿಸ್ಟ್ರಾರ್ ಆಫೀಸಿಗೆ ಹೋಗೋಣ.”
ಮರುದಿನ ಬೆಳಗ್ಗೆ ಸುನಂದಾ ಸಿದ್ಧಳಾಗತೊಡಗಿದಳು. ಹಲವು ವರ್ಷಗಳ ಹಿಂದೆ ನೀಲಕಾಂತ್ ಕೊಟ್ಟಿದ್ದ ಕೆಂಪು ಸೀರೆಯನ್ನು ಕೈಗೆತ್ತಿಕೊಂಡು ಉಟ್ಟುಕೊಳ್ಳಲು ಯೋಚಿಸಿದಳು. ಆದರೆ ಮರುಕ್ಷಣವೇ ಇದು ಬೇಡ. ಯಾವುದಾದರೂ ತಿಳಿ ಬಣ್ಣದ ಸೀರೆ ಉಡಬೇಕು ಮನಸ್ಸಿಗೊಪ್ಪದಿದ್ದರೂ ಸರಿ. ವಯಸ್ಸಿಗೆ ತಕ್ಕಂತೆಯೇ ಇರಬೇಕು. ದೇವ್ ಗೂ ತನ್ನ ಬಗ್ಗೆ ಅಪೇಕ್ಷೆಗಳಿರಬಹುದೆ? ಸ್ತ್ರೀಯ ಬಗ್ಗೆ ಜನರು ಅಷ್ಟೊಂದು ನಕಾರಾತ್ಮಕ ಭ್ರಮೆಗಳನ್ನು ಏಕೆ ಇಟ್ಟುಕೊಳ್ಳುತ್ತಾರೊ? ಯಾರಾದರೂ ಏಕೆ ಯೋಚಿಸುವುದಿಲ್ಲ? ವಯಸ್ಸಾದ ಮಹಿಳೆಯರೂ ಕೂಡ.
ಮುಂದೆ ಏನಾದರೂ ಯೋಚಿಸು ಮೊದಲೇ ಅವಳೇ ಸ್ವತಃ ನಕ್ಕಳು. ವಯಸ್ಸಾದವಳು ವಯಸ್ಸಿನಿಂದ ಏನಾಗುತ್ತದೆ. ನೀಲಕಾಂತ್‌ರ ಮುಖ ಅವಳ ಕಣ್ಣುಗಳನ್ನು ಮಂಜಾಗಿಸಿತು. ನೀಲಕಾಂತ ಅವಳನ್ನು ಸದಾ ಖುಷಿಯಿಂದಿಡಲು ಬಯಸುತ್ತಿದ್ದರು. ಹೀಗಾಗಿ ಈಗ ಅವಳು ಖುಷಿಯಿಂದಿದ್ದಳು. ಎಲ್ಲ ಸಂದೇಹಗಳು, ತರ್ಕ ವಿತರ್ಕಗಳಲ್ಲಿ ಮುಳುಗೇಳುತ್ತ ಅವಳು ಸಿದ್ಧಳಾದಳು. ಡೋರ್ ಬೆಲ್ ಸದ್ದಾಯಿತು. ಅವಳು ಬಾಗಿಲು ತೆರೆದಳು. ದೇವ್ ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದರು.