ಟೇಸ್ಟಿ ಟೇಸ್ಟಿ ಪಾವ್ ಭಾಜಿ

ಸಾಮಗ್ರಿ : 250 ಗ್ರಾಂ ಸಿಪ್ಪೆ ಹೆರೆದ ನೀಟಾಗಿ ತುರಿದ ಸೋರೆಕಾಯಿ, 2 ಕ್ಯಾರೆಟ್‌ ತುರಿ, 1 ಸಣ್ಣ ಹೂಕೋಸು, 8-10 ಬೀನ್ಸ್, ಅರ್ಧ ಕಪ್‌ ಹಸಿ ಬಟಾಣಿ ಕಾಳು, 250 ಗ್ರಾಂ ಹುಳಿ ಟೊಮೇಟೊ ಪೇಸ್ಟ್, 4-5 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪಾವ್ ‌ಭಾಜಿ ಮಸಾಲ, ಟೊಮೇಟೊ ಕೆಚಪ್‌, ಪನೀರ್‌ ಕ್ಯೂಬ್ಸ್, ಒಂದಿಷ್ಟು ಹೆಚ್ಚಿದ ಕೂ.ಸೊಪ್ಪು, ಪುದೀನಾ, ಕರಿಬೇವು, 6 ಪಾವ್ ‌ಬನ್‌, ಅರ್ಧ ಸೌಟು ಬೆಣ್ಣೆ.

ವಿಧಾನ : ಎಲ್ಲಾ ತರಕಾರಿ ಹೆಚ್ಚಿ, ಬೇಕಾದ್ದು ತುರಿದಿಡಿ. ಈಗ ಕುಕ್ಕರಿಗೆ ಅರ್ಧ ಕಪ್‌ ನೀರು ಬೆರೆಸಿ ತರಕಾರಿ ಬೇಯಿಸಿ. ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಹೂಕೋಸು, ಸೋರೆ, ಕ್ಯಾರೆಟ್‌ ತುರಿ ಹಾಕಿ ಬಾಡಿಸಿ. ನಂತರ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಮಸಾಲೆ ಸೇರಿಸಿ ಕೆದಕಬೇಕು. ಜೊತೆಗೆ ಬೇರೆ ಬೇಯಿಸಿಕೊಂಡ ಬೀನ್ಸ್, ಬಟಾಣಿ, ಪನೀರ್‌ ಸಹ ಸೇರಿಸಿ ಕೈಯಾಡಿಸಿ. ಹೀಗೆ ಎಲ್ಲ ಸಿದ್ಧಗೊಂಡಾಗ ಸ್ಟೀಲ್ ಮ್ಯಾಶರ್ ಬಳಸಿ ಮ್ಯಾಶ್‌ ಮಾಡಿ. ಮತ್ತೆ ಕೆದಕುತ್ತಾ ಟೊಮೇಟೊ ಕೆಚಪ್‌, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು ಸೇರಿಸಿ. ನಂತರ ತವಾ ಬಿಸಿ ಮಾಡಿ, ಬೆಣ್ಣೆ ಸವರಬೇಕು. ಇದರ ಮೇಲೆ ಪಾವ್ ‌ಭಾಜಿ ಮಸಾಲೆ ಉದುರಿಸಿ, ಗುಂಡಗೆ ಕತ್ತರಿಸಿದ ಪಾವ್ ‌ಬನ್ ಇರಿಸಿ, ಬಿಸಿ ಮಾಡಿ. ಇವನ್ನು ಕೆಳಗಿಳಿಸಿ, ಮ್ಯಾಶ್‌ ಮಾಡಿದ ಮಸಾಲೆ ತುಂಬಿಸಿ, ಸವಿಯಿರಿ.

ಕಾರ್ನ್ಕೋನ್

cookry-2

ಕೋನ್ಸಾಮಗ್ರಿ : ಅರ್ಧ ಕಪ್‌ ಮೈದಾ, ತುಸು ತುಪ್ಪ, ಓಮ, ಉಪ್ಪು, ಕರಿಯಲು ಎಣ್ಣೆ, ಕೋನ್‌ ಅಚ್ಚು.

ಕಾರ್ನ್ಮಿಶ್ರಣದ ಸಾಮಗ್ರಿ : ಅರ್ಧ ಕಪ್‌ ಬೆಂದ ಸಿಹಿ ಕಾರ್ನ್‌, ಅರ್ಧ ಕಪ್‌ ಬೆಂದ ಹಸಿರು ಬಟಾಣಿ, ಹೆಚ್ಚಿದ ಟೊಮೇಟೊ, ಈರುಳ್ಳಿ, ತುಸು ಬೆಣ್ಣೆ, ಹೆಚ್ಚಿದ ಕೊ.ಸೊಪ್ಪು, ಸಲಾಡ್‌ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ನಿಂಬೆರಸ.

ವಿಧಾನ : ಮೈದಾಗೆ ಓಮ, ಉಪ್ಪು, ತುಸು ನೀರು ಬೆರೆಸಿ ಮೃದು ಪೂರಿ ಹಿಟ್ಟಿನಂತೆ ಕಲಸಿಡಿ. ಇದಕ್ಕೆ ತುಪ್ಪ ಸವರಿ ಚೆನ್ನಾಗಿ ನಾದಿಕೊಳ್ಳಿ ನೆನೆಯಲು ಬಿಡಿ. ನಂತರ ಇದರಿಂದ 2 ಭಾಗ ಮಾಡಿ, ಉದ್ದಕ್ಕೆ ಬರುವಂತೆ ತುಸು ಲಟ್ಟಿಸಿ. ಇದರ ಮಧ್ಯೆ ಮಧ್ಯೆ ಪೋರ್ಕ್‌ ನಿಂದ ಚುಚ್ಚಿ ರಂಧ್ರ ಮಾಡಿ, 4 ಭಾಗ ಮಾಡಿ. ಪ್ರತಿ ಭಾಗವನ್ನೂ ಅಚ್ಚಿಗೆ ಹಾಕಿ, ಅಂಚು ಬಿಡದಂತೆ, ಒದ್ದೆ ಕೈಯಿಂದ ಅಂಟಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅಚ್ಚು ಅದಕ್ಕೆ ಹಾಕಿ ಮಂದ ಉರಿಯಲ್ಲಿ ಕರಿಯಿರಿ. ಒಂದು ಬಟ್ಟಲಿಗೆ ಸಿಹಿ ಕಾರ್ನ್‌ ಜೊತೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು, ನಿಂಬೆ ರಸ ಹಿಂಡಿಕೊಳ್ಳಿ. ಪ್ರತಿ ಕೋನಿಗೂ ತುಸು ಸಲಾಡ್‌ ಎಲೆ ಹಾಕಿ, ಅದರ ಮೇಲೆ ಚಿತ್ರದಲ್ಲಿರುವಂತೆ ಮಿಶ್ರಣ ತುಂಬಿಸಿ. ಸ್ಪೈಸಿ ಕಾರ್ನ್‌ ವಿತ್‌ ಕೋನ್‌ ರೆಡಿ! ತಕ್ಷಣ ಸವಿಯಲು ಕೊಡಿ.

ಸೀಮೆಗೆಡ್ಡೆಯ ತೊವ್ವೆ

cookry-3

ಮೂಲ ಸಾಮಗ್ರಿ : 250 ಗ್ರಾಂ ಬೆಂದ ಸೀಮೆಗೆಡ್ಡೆ, ಅರ್ಧ ಕಪ್‌ ಕಡಲೆಹಿಟ್ಟು, 1-2 ಕಪ್‌ ಹುಳಿ ಮೊಸರು, ತುಸು ಕಾರ್ನ್‌ ಫ್ಲೋರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಉದ್ದಕ್ಕೆ ಹೆಚ್ಚಿದ 2-3 ಹಸಿ ಮೆಣಸು, 2 ಚಿಟಕಿ ಅರಿಶಿನ.

ಒಗ್ಗರಣೆಗೆ ಸಾಮಗ್ರಿ : ಅರ್ಧ ಚಿಕ್ಕ ಸೌಟು ಎಣ್ಣೆ, ತುಸು ತುಪ್ಪ, 5-6 ಎಸಳು ಕರಿಬೇವು, ತುಸು ಸಾಸುವೆ, ಜೀರಿಗೆ, ಸೋಂಪು, ಓಮ, ಇಂಗು, ಖಾರದ ಪುಡಿ, 2 ಒಣ ಮೆಣಸಿನಕಾಯಿ.

ವಿಧಾನ : ಒಂದು ಬಟ್ಟಲಿಗೆ ಕಡಲೆಹಿಟ್ಟು, ಮೊಸರು, ತುಸು ನೀರು, ಉಪ್ಪು, ಖಾರ, ಅರಿಶಿನ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಬೆಂದ ಸೀಮೆಗೆಡ್ಡೆಯ ಸಿಪ್ಪೆ ಸುಲಿದು, ತುಸು ಮ್ಯಾಶ್‌ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ, ತುಪ್ಪ ಬಿಸಿ ಮಾಡಿ ಮ್ಯಾಶ್ ಮಾಡಿದ್ದನ್ನು ಲಘು ಫ್ರೈ ಮಾಡಿ ತೆಗೆಯಿರಿ. ಅದೇ ಎಣ್ಣೆಗೆ ಇಂಗು ಮತ್ತಿತರ ಸಾಮಗ್ರಿ ಹಾಕಿ ಒಗ್ಗರಣೆ ಕೊಡಿ. ಮಂದ ಉರಿ ಮಾಡಿ ಇದರಲ್ಲಿ ಕಡಲೆ ಹಿಟ್ಟಿನ ಮಿಶ್ರಣ ಹಾಕಿ ಕೆದಕಬೇಕು. ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಇದಕ್ಕೆ ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆ ಇರಿಸಿ ತುಪ್ಪ ಬಿಸಿ ಮಾಡಿ, ಒಣಮೆಣಸು, ಖಾರದ ಪುಡಿ ಹಾಕಿ ಒಗ್ಗರಣೆ ಕೊಟ್ಟು ಅದನ್ನು ಇದಕ್ಕೆ ಬೆರೆಸಿರಿ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಈ ಬಿಸಿ ತೊವ್ವೆ ಸವಿಯಲು ಕೊಡಿ. ಜೊತೆಗೆ ಹಪ್ಪಳ, ಸಂಡಿಗೆ ಇರಲಿ.

ಸೋರೆಯ ಸ್ವಾದಿಷ್ಟ ಪುಡ್ಡಿಂಗ್

cookry-4

ಸಾಮಗ್ರಿ : 1 ಸಣ್ಣ ಸೋರೆಕಾಯಿಯ ತುರಿ, 200 ಗ್ರಾಂ ತುರಿದ ಪನೀರ್‌, ಅರ್ಧ ಲೀ. ಗಟ್ಟಿ ಹಾಲು, ಅರ್ಧ ಕಪ್‌ ಹಾಲಿನಪುಡಿ, 1 ಕಪ್‌ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್‌), 10-12 ಎಸಳು ಕೇಸರಿ (ಹಾಲಲ್ಲಿ ನೆನೆಸಿಡಿ), ತುಸು ಏಲಕ್ಕಿಪುಡಿ, ತುಪ್ಪ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಸೋರೆ ತುರಿ ಬಾಡಿಸಿ. ಇದಕ್ಕೆ ಅರ್ಧ ಭಾಗ ಹಾಲು ಬೆರೆಸಿ, ಮಂದ ಉರಿಯಲ್ಲಿ ಹದನಾಗಿ ಬೇಯಿಸಿ. ನಂತರ ಇದಕ್ಕೆ ಪನೀರ್‌ ತುರಿ, ಸಕ್ಕರೆ (ರುಚಿಗೆ ತಕ್ಕಂತೆ), ಮತ್ತಷ್ಟು ಹಾಲು ಬೆರೆಸಿ ಕೈಯಾಡಿಸುತ್ತಾ ಕುದಿಸಿರಿ. ನಂತರ ನೆನೆಸಿದ ಕೇಸರಿ ಹಾಕಿ ಕೆದಕಿರಿ. ಅರ್ಧ ಭಾಗ ಹಾಲು ಹಿಂಗಿದಾಗ, ಅರ್ಧದಷ್ಟು ದ್ರಾಕ್ಷಿ ಗೋಡಂಬಿ ಮಿಶ್ರಣ ಹಾಕಿ ಬೆರೆಸಿರಿ. ಹೀಗೆ ಹಲ್ವಾ ತರಹ ಗಟ್ಟಿಯಾದಾಗ ಕೆಳಗಿಳಿಸಿ ತುಸು ಆರಲು ಬಿಡಿ. ಇದನ್ನು ಬಟ್ಟಲಿಗೆ ಹಾಕಿಕೊಂಡು, ಉಳಿದ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಸೋರೆಯ ಕಟ್ಲೆಟ್

cookry-5

ಮೂಲ ಸಾಮಗ್ರಿ : 1 ಸಣ್ಣ ಸೋರೆಕಾಯಿಯ ತುರಿ, ಅರ್ಧ ಕಪ್‌ ಹುರಿಗಡಲೆಯ ಪುಡಿ, ಬ್ರೆಡ್‌ ಕ್ರಂಬ್ಸ್, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಹೆಚ್ಚಿದ ತುಸು ಕೊ.ಸೊಪ್ಪು.

ಹೂರಣದ ಸಾಮಗ್ರಿ : 100 ಗ್ರಾಂ ಪನೀರ್‌ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಹೆಚ್ಚಿದ ಒಣದ್ರಾಕ್ಷಿ, ಪುದೀನಾ, ತುಸು ತುಪ್ಪ.

ವಿಧಾನ : ತುರಿದ ಸೋರೆಯನ್ನು ಹಿಂಡಿ ತೇವಾಂಶ ಬೇರ್ಪಡಿಸಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ. ಅದೇ ತರಹ ಪನೀರ್‌ಗೂ ಹೂರಣದ ಸಾಮಗ್ರಿ ಬೆರೆಸಿಡಿ. ಸೋರೆ ತುರಿಯಿಂದ ಸಣ್ಣ ನಿಂಬೆ ಗಾತ್ರದ ಉಂಡೆ  ಹಿಡಿದು, ಅದರಲ್ಲಿ  ದೊಡ್ಡ ಗೋಲಿ ಗಾತ್ರ ಪನೀರ್‌ ಉಂಡೆ ಇರಿಸಿ. ಇದನ್ನು ಚಪ್ಪಟೆ ಮಾಡಿ, ಬೇಕಾದ ಆಕಾರ ಕೊಡಿ. ಇದನ್ನು ಅಳ್ಳಕ ತವಾಗೆ ಹಾಕಿ, ಚೆನ್ನಾಗಿ ಶ್ಯಾಲೋ ಫ್ರೈ ಮಾಡಿ. ಟೊಮೇಟೊ ಸಾಸ್‌ ಜೊತೆ ಬಿಸಿಯಾಗಿ ಸವಿಯಲು ಕೊಡಿ.

ಬೇಬಿಕಾರ್ನ್ಮಂಚೂರಿಯನ್

cookry-6

ಸಾಮಗ್ರಿ : 200 ಗ್ರಾಂ ಬೇಬಿಕಾರ್ನ್‌, ಅರ್ಧರ್ಧ ಕಪ್‌ ಕಾರ್ನ್‌ ಫ್ಲೋರ್‌, ಕಡಲೆಹಿಟ್ಟು, ಮೈದಾ, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಕರಿಯುಲು ಎಣ್ಣೆ.

ಇತರೆ ಸಾಮಗ್ರಿ : ರುಚಿಗೆ ತಕ್ಕಷ್ಟು ಟೊಮೇಟೊ ಸಾಸ್‌, ಸೋಯಾ ಸಾಸ್‌, ರೆಡ್‌ ಚಿಲೀ ಸಾಸ್‌, ವೈಟ್‌ ವಿನಿಗರ್‌, 2 ಚಮಚ ಕಾರ್ನ್‌ ಫ್ಲೋರ್‌, ಹೆಚ್ಚಿದ 2-3 ಈರುಳ್ಳಿ, ತುಸು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ರೀಫೈಂಡ್‌ ಎಣ್ಣೆ, ಉಪ್ಪು.

ವಿಧಾನ : ಮೂಲ ಸಾಮಗ್ರಿಯ 4 ಬಗೆ ಹಿಟ್ಟು, ಉಪ್ಪು, ಮೆಣಸು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಲ್ಲಿ ಹೆಚ್ಚಿದ ಬೇಬಿ ಕಾರ್ನ್‌ ಹಾಕಿ, ಕಾದ ಎಣ್ಣೆಯಲ್ಲಿ ಒಂದೊಂದಾಗಿ ಅದ್ದಿ ಬಿಡುತ್ತಾ ಕರಿಯಿರಿ. ಒಂದು ಚಿಕ್ಕ ಬಾಣಲೆಯಲ್ಲಿ ಅರ್ಧ ಚಿಕ್ಕ ಸೌಟು ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಎಲ್ಲಾ ಬಗೆಯ ಸಾಸ್‌ ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಇದಕ್ಕೆ ಅರ್ಧ ಕಪ್‌ ನೀರಲ್ಲಿ ಕದಡಿದ ಕಾರ್ನ್‌ ಫ್ಲೋರ್‌ ಬೆರೆಸಿ ಕೆದಕಿರಿ. ನಂತರ ಕರಿದ ಕಾರ್ನ್‌ಬೆರೆಸಿ ಮಂದ ಉರಿಯಲ್ಲಿ ಕೆದಕಿರಿ. ಮಿಶ್ರಣ ಕಾರ್ನ್‌ಗೆ ಚೆನ್ನಾಗಿ ಮೆತ್ತಿಕೊಂಡಾಗ ಕೆಳಗಿಳಿಸಿ. ಇದನ್ನು ಸರ್ವಿಂಗ್‌ ಡಿಶ್‌ಗೆ ಹಾಕಿರಿಸಿ, ಮೇಲೆ ಕೊ.ಸೊಪ್ಪು ಉದುರಿಸಿ, ನಿಂಬೆರಸ ಹಿಂಡಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸ್ಟಾರ್ಟರ್‌ ಸವಿಯಲು ಕೊಡಿ.

ಸ್ಟಫ್ಡ್ ಸೀಮೆಗೆಡ್ಡೆ

cookry-7

ಸಾಮಗ್ರಿ : 300 ಗ್ರಾಂ ಸೀಮೆಗೆಡ್ಡೆ (ಬೇಯಿಸಿ, ಸಿಪ್ಪೆ ಸುಲಿದಿಡಿ), 4 ಈರುಳ್ಳಿ, ತುಸು ಓಮ, ಅರಿಶಿನ, ಧನಿಯಾಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ ಜೀರಿಗೆ ಪುಡಿ, ಅಮ್ಚೂರ್‌ ಪುಡಿ, 2 ಇಡಿ ಮೆಣಸು, ಅರ್ಧ ಸೌಟು ಎಣ್ಣೆ.

ವಿಧಾನ : ಶುಚಿಗೊಳಿಸಿದ ಸೀಮೆಗೆಡ್ಡೆ ಒಂದು ಪಕ್ಕಕಿಡಿ. ಡ್ರೈ ಮಸಾಲೆ, ಉಪ್ಪು ಬೆರೆಸಿರಿ. ಪ್ರತಿ ಗೆಡ್ಡೆಗೂ ಪೋರ್ಕಿನಿಂದ ಚುಚ್ಚಿ ಒಳಭಾಗಕ್ಕೆ ಆದಷ್ಟೂ ಈ ಮಸಾಲೆ ತುಂಬಿಸಿ. ಗೆಡ್ಡೆ ಇಡಿಯಾಗಿ ಇರುವಂತೆ ಎಚ್ಚರವಹಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಣಮೆಣಸು, ಓಮ ಹಾಕಿ ಚಟಪಟಾಯಿಸಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಗೆಡ್ಡೆ ಬೆರೆಸಿ ಮಂದ ಉರಿಯಲ್ಲಿ ಬಾಡಿಸಿ. ಕೆಳಗಿಳಿಸಿ, ಚಿತ್ರದಂತೆ ಅಲಂಕರಿಸಿ, ನಿಂಬೆರಸ ಹಿಂಡಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ