ಬೀಟ್ರೂಟ್ಹಲ್ವಾ ವಿತ್ಐಸ್ಕ್ರೀಂ

ಸಾಮಗ್ರಿ : 1 ಕಿಲೋ ಮಧ್ಯಮ ಗಾತ್ರದ ಬೀಟ್‌ ರೂಟ್‌, 300 ಗ್ರಾಂ ಸಿಹಿ ಖೋವಾ, 700 ಗ್ರಾಂ ಸಕ್ಕರೆ, 250 ಗ್ರಾಂ ತುಪ್ಪ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 1 ಕಪ್‌), ತುಸು ಏಲಕ್ಕಿ ಪುಡಿ, ಕೇದಗೆ ಎಸೆನ್ಸ್, ರುಚಿಗೆ ತಕ್ಕಷ್ಟು ವೆನಿಲಾ ಐಸ್‌ ಕ್ರೀಂ, ಕೊಬ್ಬರಿ ತುರಿ.

ವಿಧಾನ : ಮೊದಲು ಬೀಟ್‌ ರೂಟ್‌ ಸಿಪ್ಪೆ ಹೆರೆದು ಕುಕ್ಕರ್‌ ನಲ್ಲಿ 1 ಸೀಟಿ ಬರುವಂತೆ ಹಾಲಲ್ಲಿ ಇಡಿಯಾಗಿ ಬೇಯಿಸಿ. ಕೆಳಗಿಳಿಸಿ, ಆರಿದ ನಂತರ ನೀಟಾಗಿ ತುರಿದಿಡಿ. ದಪ್ಪ ತಳದ ಬಾಣಲೆಯಲ್ಲಿ ಮೊದಲು ಅರ್ಧ ಸೌಟು ತುಪ್ಪ ಬಿಸಿ ಮಾಡಿ ದ್ರಾಕ್ಷಿ ಗೋಡಂಬಿಗಳನ್ನು ಹುರಿದು ತೆಗೆಯಿರಿ. ನಂತರ ಅದಕ್ಕೆ ಮತ್ತಷ್ಟು ತುಪ್ಪ ಹಾಕಿ, ತುರಿದ ಬೀಟ್‌ ರೂಟ್‌ ಸೇರಿಸಿ ಹದನಾಗಿ ಬಾಡಿಸಿ. ಅದು ತುಸು ಡ್ರೈ ಆದಾಗ, ಇದಕ್ಕೆ ಸಕ್ಕರೆ, ಮಸೆದ ಖೋವಾ ಸೇರಿಸಿ ಮತ್ತೆ ಕೈಯಾಡಿಸಿ. 5 ನಿಮಿಷ ಬಿಟ್ಟು ಏಲಕ್ಕಿಪುಡಿ, ಎಸೆನ್ಸ್, ಗೋಡಂಬಿಗಳನ್ನು ಸೇರಿಸಿ ಕೆದಕಿ ಕೆಳಗಿಳಿಸಿ. ಇದನ್ನು ಸರ್ವಿಂಗ್‌ ಬಟ್ಟಲಿಗೆ ಹಾಕಿ, ಜೊತೆಗೆ ಐಸ್‌ ಕ್ರೀಂ ಸಹಿತ ಸರ್ವ್ ಮಾಡಿ.

ಫ್ರೋಝನ್ಫಿರನಿ ಕೇಕ್

Frozen-phirni-cake-(1)

ಸಾಮಗ್ರಿ : 2 ಲೀ ಹಾಲು, 500 ಗ್ರಾಂ ಮಸೆದ ಖೋವಾ, 300 ಗ್ರಾಂ ಬೆಲ್ಲದ ಪುಡಿ, 1 ಕಪ್‌ ಡ್ರೈ ಫ್ರೂಟ್ಸ್, ಅಗತ್ಯವಿದ್ದಷ್ಟು ಅಕ್ಕಿ ಹಿಟ್ಟು, ತುಪ್ಪ, ಏಲಕ್ಕಿ ಪುಡಿ, ಕೋಕೋ ಪೌಡರ್‌, ಅಲಂಕರಿಸಲು ಒಂದಿಷ್ಟು ಸೀಡ್ಲೆಸ್‌ ದಾಳಿಂಬೆ ಹರಳು.

ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಕೈಯಾಡಿಸುತ್ತಾ ಅರ್ಧದಷ್ಟು ಹಿಂಗುವವರೆಗೂ ಕುದಿಸಬೇಕು. ನಂತರ ಅಕ್ಕಿ ಹಿಟ್ಟು ಬೆರೆಸಿ ಮತ್ತೆ 5-6 ನಿಮಿಷ ಕೈಯಾಡಿಸಿ. ನಂತರ ಮಂದ ಉರಿ ಮಾಡಿಕೊಂಡು ಇದಕ್ಕೆ ಮಸೆದ ಖೋವಾ, ಬೆಲ್ಲದ ಪುಡಿ, ಕೋಕೋ ಪೌಡರ್‌, ನಂತರ ತುಪ್ಪ ಹಾಸಿ ನಿಧಾನವಾಗಿ ಕೈಯಾಡಿಸಿ. ಆಮೇಲೆ ಇದಕ್ಕೆ ಏಲಕ್ಕಿ ಪುಡಿ, ಎಸೆನ್ಸ್, ದ್ರಾಕ್ಷಿ ಗೋಡಂಬಿಗಳನ್ನು ಹಾಕಿ ಮತ್ತಷ್ಟು 5 ನಿಮಿಷ ಕೆದಕಬೇಕು. ಕೆಳಗಿಳಿಸಿ, ಚೆನ್ನಾಗಿ ಆರಿದ ನಂತರ ನಿಮ್ಮಿಷ್ಟದ ಅಚ್ಚಿಗೆ ಹಾಕಿ, ಫ್ರಿಜ್‌ ನಲ್ಲಿರಿಸಿ 180 ಡಿಗ್ರಿ ತಾಪಮಾನದಲ್ಲಿ ಸೆಟ್‌ ಮಾಡಿ. ನಂತರ ಚಿತ್ರದಲ್ಲಿರುವಂತೆ ಅಚ್ಚಿನಿಂದ ಪ್ಲೇಟಿಗೆ ರವಾನಿಸಿ, ಅದರ ಮೇಲೆ ದಾಳಿಂಬೆ ಹರಳಿನಿಂದ ಅಲಂಕರಿಸಿ, ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ, ಸವಿಯಲು ಕೊಡಿ.

ಗುಲಾಬಿ ಹಲ್ವಾ

Gulabi-halwa

ಸಾಮಗ್ರಿ : 1 ಕಿಲೋ ತಾಜಾ ಗುಲಾಬಿ ದಳಗಳು, 2 ಲೀ. ಗಟ್ಟಿ ಹಾಲು, 2 ಕಪ್‌ ಮಸೆದ ಖೋವಾ, 4-5 ಚಮಚ ಕೋಕೋನಟ್ ಪೌಡರ್‌, 1-2 ಕಪ್‌ ಸಕ್ಕರೆ, 2 ಕಪ್‌ ಗೋಡಂಬಿ ತರಿ (ತುಪ್ಪದಲ್ಲಿ ಹುರಿದು ತರಿ ಮಾಡಿ), ಅರ್ಧ ಕಪ್‌ ಸೂರ್ಯಕಾಂತಿ ಬೀಜ, ತುಸು ಏಲಕ್ಕಿ ಪುಡಿ, ರೋಸ್‌ ಎಸೆನ್ಸ್, ಧಾರಾಳ ತುಪ್ಪ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಶುಚಿಗೊಳಿಸಿದ ಗುಲಾಬಿ ದಳಗಳನ್ನು ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಕಾಯಿಸಿದ ಹಾಲು ಬೆರೆಸಿ, ಅರ್ಧದಷ್ಟು ಹಿಂಗುವವರೆಗೂ ಕುದಿಸಬೇಕು. ಇದನ್ನು ಕೆಳಗಿಳಿಸಿ ಬೇರೆ ಬಟ್ಟಲಿಗೆ ಹಾಕಿಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ, ಅದಕ್ಕೆ ಗುಲಾಬಿ ಮಿಶ್ರಣ ಸೇರಿಸಿ ಮಿಶ್ರಣ ಗಟ್ಟಿ ಆಗುವವರೆಗೂ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಮಸೆದ ಖೋವಾ, ಕೋಕೋನಟ್‌ ಪೌಡರ್‌, ಸಕ್ಕರೆ, ಗೋಡಂಬಿ ತರಿ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಸೂರ್ಯಕಾಂತಿ ಬೀಜ, ಏಲಕ್ಕಿ, ಎಸೆನ್ಸ್ ಬೆರೆಸಿ 5 ನಿಮಿಷ ಮತ್ತೆ ಕೆದಕಿರಿ. ನಡುನಡುವೆ ತುಪ್ಪ ಬೆರೆಸುತ್ತಿರಿ. ಇದೀಗ ಗುಲಾಬಿ ಹಲ್ವಾ ರೆಡಿ!

ಪಿಸ್ತಾ ಹಲ್ವಾ ವಿತ್ಕ್ರೀಂ

Pista-Halwa-&-Cream

ಸಾಮಗ್ರಿ : 1 ಕಿಲೋ ಪಿಸ್ತಾ, 500 ಗ್ರಾಂ ಖೋವಾ, 250 ಗ್ರಾಂ ಸಕ್ಕರೆ, 300 ಗ್ರಾಂ ತುಪ್ಪ, 1 ಕಪ್‌ ಡ್ರೈ ಫ್ರೂಟ್ಸ್, 1 ಲೀ. ಕುಕಿಂಗ್ ಕ್ರೀಂ, 100 ಗ್ರಾಂ ಕೋಕೋನಟ್‌ ಪೌಡರ್‌, ಅಲಂಕರಿಸಲು ಒಂದಿಷ್ಟು ರೆಡ್‌ ಜೆಲ್ಲಿ.

ವಿಧಾನ : ಮೊದಲು ಪಿಸ್ತಾವನ್ನು ಕಾದಾರಿದ ಹಾಲಿನಲ್ಲಿ 2-3 ಗಂಟೆ ನೆನೆಸಿಡಿ. ನಂತರ ಮಿಕ್ಸಿಯಲ್ಲಿ ತರಿಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ ಹುರಿದು ತೆಗೆಯಿರಿ. ನಂತರ ಇದಕ್ಕೆ ಪಿಸ್ತಾ ತರಿ ಪೇಸ್ಟ್ ಹಾಕಿ ಬಾಡಿಸಿ. ನಡುನಡುವೆ ತುಪ್ಪ ಬೆರೆಸುತ್ತಾ, ಕೋಕೋನಟ್‌ ಪೌಡರ್‌ ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ಅರ್ಧ ಭಾಗ ಖೋವಾ ಹಾಕಿ ಕೆದಕಿರಿ. ನಂತರ ಸಕ್ಕರೆ, ಡ್ರೈ ಫ್ರೂಟ್ಸ್ ಹಾಕಿ ಬೇಗ ಬೇಗ ಕೈಯಾಡಿಸಿ ಕೆಳಗಿಳಿಸಿ. ಆರಿದ ಮೇಲೆ ಬೇಕಾದ ಅಚ್ಚಿಗೆ ಹಾಕಿ, ಫ್ರಿಜ್‌ನಲ್ಲಿರಿಸಿ ಸೆಟ್‌ ಮಾಡಿ, ಕೇಕ್‌ನ್ನು ಪ್ಲೇಟ್‌ ಮೇಲೆ ಡೀ ಮೋಲ್ಡ್ ‌ಮಾಡಿ. ಇದೀಗ ಕೇಕ್‌ ರೆಡಿ.

ಕ್ರೀಂ ಹೀಗೆ ಮಾಡಿ

ಒಂದು ಬಾಣಲೆಗೆ ಮೊದಲು ಮಸೆದ ಖೋವಾ ಹಾಕಿ ಕೆದಕಬೇಕು. ನಂತರ ಇದಕ್ಕೆ ಕ್ರೀಂ ಬೆರೆಸಿ ಮಂದ ಉರಿಯಲ್ಲಿ ನಿಧಾನವಾಗಿ ಕೆದಕಬೇಕು. ಗಟ್ಟಿಯಾದಾಗ ಕೆಳಗಿಳಿಸಿ, ಆರಿಸಿ, ಕೇಕ್‌ ಮೇಲೆ ಹರಡಿರಿ. ನಂತರ ಇದನ್ನು 1 ಗಂಟೆ ಫ್ರಿಜ್‌ ನಲ್ಲಿರಿಸಿ ಸೆಟ್‌ ಮಾಡಿ. ಆಮೇಲೆ ಚಿತ್ರದಲ್ಲಿರುವಂತೆ ಇದರ ಮೇಲೆ ಪಿಸ್ತಾ ಪೌಡರ್‌, ರೆಡ್‌ಜೆಲ್ಲಿ ಉದುರಿಸಿ ಸವಿಯಲು ಕೊಡಿ.

ಕೇಸರಿಯಾ ಘೇವರ್

Ghewaar

ಘೇವರ್ಗಾಗಿ ಸಾಮಗ್ರಿ : 2 ಕಪ್‌ ಮೈದಾ, 3 ಕಪ್‌ ಕಾದಾರಿದ ಹಾಲು, 1 ಚಮಚ ಕಾರ್ನ್‌ ಫ್ಲೋರ್‌, ಕರಿಯಲು ತುಪ್ಪ.

ಪಾಕದ ಸಾಮಗ್ರಿ : 2 ಕಪ್‌ ಸಕ್ಕರೆ, ತುಸು ಏಲಕ್ಕಿಪುಡಿ, ಅಗತ್ಯವಿದ್ದಷ್ಟು ನೀರು.

ಕೇಸರಿಯಾ ರಬಡಿಗಾಗಿ ಸಾಮಗ್ರಿ : 1 ಲೀ. ಗಟ್ಟಿ ಹಾಲು, ಕೆಲವು ಎಸಳು ಕೇಸರಿ, ರುಚಿಗೆ ತಕ್ಕಷ್ಟು ಸಕ್ಕರೆ, ಹುರಿದ ಡ್ರೈ ಫ್ರೂಟ್ಸ್.

ಪಾಕ ವಿಧಾನ : ಮೊದಲು ಒಂದು ಚಿಕ್ಕ ಬಾಣಲೆಯಲ್ಲಿ ಸಕ್ಕರೆ, ನೀರು, ಏಲಕ್ಕಿಪುಡಿ ಬೆರೆಸಿ, ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಹೀಗೆ ಒಂದೆಳೆ ಪಾಕ ತಯಾರಾದ ನಂತರ, ಕೆಳಗಿಳಿಸಿ ತಣ್ಣಗಾಗಲು ಬಿಡಿ.

ಘೇವರ್ಗಾಗಿ ವಿಧಾನ : ಒಂದು ಬಟ್ಟಲಿಗೆ ಕಾರ್ನ್‌ ಫ್ಲೋರ್‌, ಕಾದಾರಿದ ಹಾಲು, ತುಸು ತುಪ್ಪ, ಮೈದಾ ಬೆರೆಸಿ, ಒಂದು ಚೂರೂ ಗಂಟಿಲ್ಲದಂತೆ ಆಗುವವರೆಗೂ ಚೆನ್ನಾಗಿ ಕೈಗಳಿಂದ ಮಸೆದು, ಬೆರೆಸಿಕೊಳ್ಳಿ. ಅಗತ್ಯವೆನಿಸಿದರೆ ಇನ್ನಷ್ಟು ಹಾಲು ಬೆರೆಸಿ. ಆಮೇಲೆ 2 ಕಪ್‌ ನೀರು ಬೆರೆಸಿರಿ. ಇಡ್ಲಿ ಹಿಟ್ಟಿನ ಹದ ಬರಲಿ. ಇದನ್ನು ತಂಪಾಗಿರುವ ಕಡೆ ಸ್ವಲ್ಪ ಹೊತ್ತಿರಿಸಿ. ಈಗ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದರ ಮಧ್ಯೆ ಘೇವರ್‌ ಅಚ್ಚು ಮುಕ್ಕಾಲು ಭಾಗ ತುಪ್ಪದಲ್ಲಿ ಮುಳುಗುವಂತೆ ಇರಿಸಿ. (ಘೇವರ್‌ ಅಚ್ಚು ರೆಡಿಮೇಡ್‌ ಲಭ್ಯ). ತುಪ್ಪ ಸಾಕಷ್ಟು ಬಿಸಿ ಆದಾಗ, ಸೌಟಿನಿಂದ ಮೈದಾ ಮಿಶ್ರಣ ತೆಗೆದುಕೊಂಡು ಅಚ್ಚಿಗೆ ತೆಳು ಪದರ ಬರುವಂತೆ ಬಿಡಬೇಕು. ಇದು ತುಸು ಸೆಟ್‌ ಆಗಲು ಬಿಡಿ. ಕೆಳಗಿನಿಂದ ಮೇಲ್ಭಾಗಕ್ಕೆ ಬರುವಂತೆ ಮಿಶ್ರಣ ಹರಡಿರಿ. ಹೀಗೆ 6-7 ಸಲ ರಿಪೀಟ್‌ ಮಾಡಿ. ನಂತರ ಅಚ್ಚಿನ ನಡುಮಧ್ಯೆ ಸ್ಟಿಕ್‌ನಿಂದ ರಂಧ್ರ ಮಾಡಿ. ಉರಿ ತುಸು ದೊಡ್ಡದು ಮಾಡಿ, ಇದನ್ನು ಬೇಯಿಸಿ. ನೀವು ಬೇಕಾದರೆ ಮೇಲ್ಭಾಗದಿಂದ ಇನ್ನಷ್ಟು ತುಪ್ಪ ಹಾಕಬಹುದು. ಈಗ ಸ್ಟಿಕ್‌ ನೆರವಿನಿಂದ ಕರಿದು ತಯಾರಾದ ಘೇವರ್‌ನ್ನು ನಿಧಾನವಾಗಿ  ಮುರಿಯದಂತೆ ಮೇಲೆ ತೆಗೆಯಿರಿ, ಒಂದು ಪ್ಲೇಟ್‌ ಮೇಲೆ ಇರಿಸಿರಿ. ಹೀಗೆ ಹಲವು ಘೇವರ್‌ಗಳನ್ನು ತಯಾರಿಸಿ ನಂತರ ಇವನ್ನೆಲ್ಲ ಸಕ್ಕರೆ ಪಾಕದಲ್ಲಿ ನೆನೆಹಾಕಿ, ಎಲ್ಲವನ್ನೂ ಹೀರಿಕೊಳ್ಳುವಂತೆ ಮಾಡಿ. ಪಕ್ಕದ ಒಲೆಯಲ್ಲಿ ಇದೇ ಸಮಯದಲ್ಲಿ ಹಾಲು ಕಾಯಿಸಿ ಅರ್ಧ, ಮುಕ್ಕಾಲು ಭಾಗ ಹಿಂಗುವಂತೆ ಮಾಡಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ, ಹಾಲಲ್ಲಿ ನೆನೆದ ಕೇಸರಿ ಬೆರೆಸಿರಿ. ಮತ್ತಷ್ಟು ಗಟ್ಟಿ ಆದ ಮೇಲೆ ಇಳಿಸಿರಿ. ಹೀಗೆ ರೆಡಿಯಾದ ಕೇಸರಿ ರಬಡಿಯನ್ನು ಪಾಕದಲ್ಲಿ ನೆನೆದ ಘೇವರ್‌ ಮೇಲೆ ಹರಡಿ, ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ