ಮದುವೆ ಅಂದ ಮೇಲೆ ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ, ದಕ್ಷಿಣದ ನವ ವಧು ಸಹ ಉತ್ತರದ ಲೆಹಂಗಾ ತೊಡುವುದೇ ಫ್ಯಾಷನ್. ಆದರೆ ಅಂಥ ಭಾರಿ, ದುಬಾರಿ ಲೆಹಂಗಾ ಒಂದೇ ದಿನಕ್ಕಷ್ಟೇ ಸೀಮಿತ ಆಗಬೇಕೇ? ಮದುವೆ ನಂತರದ ಮಾಮೂಲಿ ದಿನಗಳಿಗಾಗಿ ಇಂಥ ಭಾರಿ ಡ್ರೆಸ್ ಧರಿಸಿ ಏನು ಮಾಡುವುದು?
ಹೀಗಾಗಿ, ಇಂಥ ಭಾರಿ ಅದೂ ದುಬಾರಿ ಲೆಹಂಗಾ ಬೇಕಿತ್ತೇ ಎನಿಸುತ್ತದೆ. ನೀವು ಬಯಸಿದರೆ ಇದೇ ಒಂದು ಲೆಹಂಗಾವನ್ನೇ ಬೇರೆ ಬೇರೆ ವಿಧದಲ್ಲಿ ಮರು ಬಳಕೆ ಮಾಡಬಹುದು. ಅದೂ ಯಾರಿಗೂ ಗೊತ್ತಾಗದ ಹಾಗೆ! ಇಲ್ಲಿದೆ ನೋಡಿ ಲೆಹಂಗಾ ಮರುಬಳಕೆಯ 9 ವಿಧಾನಗಳು :
ಲೆಹಂಗಾ ವಿತ್ ಸ್ಲೀವ್ ಲೆಸ್ ಚೋಲಿ
ಸ್ಲೀವ್ ಲೆಸ್ ಚೋಲಿಯ ಫ್ಯಾಷನ್ ನಿಮ್ಮನ್ನು ಸ್ಟೈಲಿಶ್ ಮಾಡುವುದಷ್ಟೇ ಅಲ್ಲ, ಬದಲಿಗೆ ನಿಮ್ಮ ಲೆಹಂಗಾದ ಮರುಬಳಕೆಗೆ ಒಂದು ಅವಕಾಶ ಕೊಡುತ್ತದೆ. ಹೀಗಾಗಿ ನೀವು ವೆಡ್ಡಿಂಗ್ ಲೆಹಂಗಾದ ಚೋಲಿಯಿಂದ ಸ್ಲೀವ್ಸ್ ತೆಗೆದುಬಿಡಿ. ಆಗ ನಿಮ್ಮ ನಳಿದೋಳುಗಳ ಸೌಂದರ್ಯ ಹೊಸ ಲುಕ್ಸ್ ನೀಡುತ್ತವೆ. ನೀವು ಬೇರೆ ಬೇರೆ ಬಣ್ಣದ ಸ್ಲೀವ್ ಲೆಸ್ ಚೋಲಿ ಸಹ ರೆಡಿ ಮಾಡಿಸಿ. ಇದನ್ನು ಧರಿಸಿ ನೀವು ಯಾವುದೇ ಶುಭ ಸಮಾರಂಭಕ್ಕೆ ಹೋದರೂ, ಇದು ನಿಮ್ಮ ಧಾರೆಯ ದಿನದ್ದು ಎಂದು ಯಾರೂ ಗುರುತಿಸಲಾರರು. ಅದರ ಚೋಲಿಯ ಲುಕ್ ಸಂಪೂರ್ಣ ಬದಲಾಗಿರುವುದೇ ಇದಕ್ಕೆ ಕಾರಣ. ನಂತರ ಇದೇ ಚೋಲಿಯನ್ನು ನೀವು ಬೇರೆ ಬೇರೆ ಸೀರೆಗಳ ಜೊತೆ ಉಟ್ಟರೆ, ಡಿಫರೆಂಟ್ ಲುಕ್ಸ್ ನಿಮ್ಮದಾಗುತ್ತದೆ.
ಚೋಲಿ ವಿತ್ ಪ್ಲೇನ್ ಲೆಹಂಗಾ
ಭಾರಿ ಎನಿಸುವ ಲೆಹಂಗಾವನ್ನು ಒಮ್ಮೆ ಧರಿಸಿದ ಮೇಲೆ, ಮತ್ತೊಂದು ಫಂಕ್ಷನ್ ಗೆ ಬೇಡ ಎನಿಸುತ್ತದೆ. ಆದರೆ ಅದೇ ಲೆಹಂಗಾ ಜೊತೆ ಪ್ರಯೋಗ ನಡೆಸಿದರೆ, ನಿಮ್ಮ ಲೆಹಂಗಾ ಹೊಸತಾಗುವುದಲ್ಲದೇ, ನಿಮಗೆ ಹೊಸ ಲುಕ್ಸ್ ದೊರಕುತ್ತದೆ. ಚೋಲಿ ವಿಷಯಕ್ಕೆ ಬಂದಾಗ, ಬ್ರೈಡಲ್ ಲೆಹಂಗಾದ ಚೋಲಿ ಬಲು ಹೆವಿ ಶಿಮರಿ ಎನಿಸುತ್ತದೆ, ಅದರೊಂದಿಗೆ ಲೆಹಂಗಾ ಸಹ ಭಾರಿ ಆಗಿರುತ್ತದೆ. ಹೀಗಾಗಿ ನೀವು ನಿಮ್ಮ ಚೋಲಿಯನ್ನು ರೀಯೂಸ್ ಮಾಡಬಹುದು. ಉದಾ : ನಿಮ್ಮದು ಗ್ರೀನ್ ಕಲರ್ ನ ಹೆವಿ ಚೋಲಿ ಆಗಿದ್ದರೆ ನೀವು ಅದರೊಂದಿಗೆ ಪ್ಲೇನ್ ರೆಡ್ ಕಲರ್‌ನ ಲೆಹಂಗಾ ರೆಡಿ ಮಾಡಿಸಿ, ಅದರ ಜೊತೆ ನೆಟೆಡ್ ದುಪಟ್ಟಾ ಧರಿಸಬಹುದು. ಇದರಿಂದ ನಿಮ್ಮ ಲೆಹಂಗಾ ಸಾಕಷ್ಟು ಬ್ಯೂಟಿಫುಲ್ ಎನಿಸುವುದರೊಂದಿಗೆ, ತುಸು ಹಗುರವಾಗಿಯೂ ಇರುವುದರಿಂದ, ಅದನ್ನು ಧರಿಸಿ ಓಡಾಡುವುದು ನಿಮಗೆ ಸುಲಭವಾಗುತ್ತದೆ. ಬಯಸಿದರೆ ನೀವು ಚೋಲಿ ಬಣ್ಣದ್ದೇ ಪ್ಲೇನ್ ಲೆಹಂಗಾ ರೆಡಿ ಮಾಡಿಸಿ, ಮ್ಯಾಚಿಂಗ್ ದುಪಟ್ಟಾ ಕೊಳ್ಳಬಹುದು. ಇದರಿಂದ ನೀವು ಸಮಾರಂಭದ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ.
ಡ್ರೇಪಿಂಗ್ ವಿಧಾನ ಬದಲಾಯಿಸಿ
ಲೆಹಂಗಾ ಅಥವಾ ಮೇಕಪ್ ಇರಲಿ, ಪ್ರತಿ ಹೆಣ್ಣೂ ಪಾರ್ಟಿಯಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಂಗೊಳಿಸಲು ಬಯಸುತ್ತಾಳೆ. ಆಗ ಮಾತ್ರ ತನ್ನ ಲುಕ್ಸ್ ರಿಪೀಟ್ ಆಗದು ಎಂದವಳಿಗೆ ಗೊತ್ತು, ಆಗ ಪ್ರತಿ ಸಲ ಡಿಫರೆಂಟ್ ಆಗಿ ಕಂಗೊಳಿಸುತ್ತಾಳೆ. ಹೀಗಾಗಿ ನೀವು ಕ್ರಿಯಾಶೀಲರಾಗಿ ಚಿಂತಿಸಿದರೆ, ನಿಮ್ಮ ಮದುವೆಯ ಲೆಹಂಗಾವನ್ನೇ ಬೇರೆ ಬೇರೆ ರೀತಿಯಲ್ಲಿ ಡ್ರೇಪ್ ಮಾಡಿ, ನಿಮ್ಮಿಷ್ಟದ ಲುಕ್ಸ್ ಹೊಂದಿರಿ. ನೀವು ಗುಜರಾತಿ ಲುಕ್ಸ್ ಬಯಸಿದರೆ, ಗುಜರಾತಿ ಶೈಲಿಯಲ್ಲಿ ದುಪಟ್ಟಾ ಡ್ರೇಪ್ ಮಾಡಿ. ಸಿಂಪಲ್ ಸ್ವೀಟ್ ಲುಕ್ಸ್ ಬಯಸಿದರೆ, ಒನ್ ಸೈಡ್ ದುಪಟ್ಟಾವನ್ನು ಕೇವಲ ಪಿನ್ ಬಳಸಿ ಟಕ್ ಮಾಡಿ. ಬಂಗಾಳಿ ಲುಕ್ಸ್ ಬಯಸಿದರೆ, ದುಪಟ್ಟಾವನ್ನು ಅದೇ ಶೈಲಿಯಲ್ಲಿ ತೊಡಬೇಕು. ಬೇಕಾದರೆ ನೀವು ಲೆಹಂಗಾವನ್ನೇ ಸೀರೆಯ ಲುಕ್ ಗಾಗಿ ಒನ್ ಸೈಡ್ ಪಿನ್ ನಿಂದ ಟಕ್ ಮಾಡಿ, ಎರಡನೇ ಬದಿ ಅದನ್ನು ಒಳಭಾಗಕ್ಕೆ ಫೋಲ್ಡ್ ಮಾಡಿ. ಒಂದು ಪಕ್ಷ ನೆಟೆಡ್ ದುಪಟ್ಟಾ ಆದರೆ, ಅದನ್ನು ನೀವು ಎರಡೂ ಭುಜಗಳ ಮೇಲೆ ಹೊದ್ದು, ಅದಕ್ಕೆ ಶ್ರಗ್ ನಂಥ ಲುಕ್ ನೀಡಿ, ಲೆಹಂಗಾವನ್ನು ಹೆಚ್ಚು ಆಕರ್ಷಕಗೊಳಿಸಿ. ನಿಮ್ಮ ಡ್ರೇಪಿಂಗ್ ವಿಧಾನ ಬದಲಾಗುತ್ತಿರಲಿ, ಆಗ ನಿಮ್ಮ ಲೆಹಂಗಾ ನಿತ್ಯ ಹೊಸದರಂತೆ ಮಿಂಚುತ್ತಿರುತ್ತದೆ.
ಪ್ಲೇ ವಿತ್ ದುಪಟ್ಟಾ
ಸಾಮಾನ್ಯವಾಗಿ ಲೆಹಂಗಾ ಜೊತೆ ಧರಿಸಿದ ದುಪಟ್ಟಾ ಕೇವಲ ಆ ಲೆಹಂಗಾಗೆ ಮಾತ್ರ ಸೂಕ್ತವಾಗುತ್ತದೆ ಅಂತಾರೆ. ಆದರೆ ತುಸು ಕ್ರಿಯಾಶೀಲರಾಗಿ ಚಿಂತಿಸಿದರೆ ಬೇಕಾದಷ್ಟು ಅವಕಾಶಗಳು ಇವೆ. ಇದರಿಂದ ನಿಮ್ಮ ಲೆಹಂಗಾ ಬೇರೆ ಬೇರೆ ಸಂದರ್ಭಗಳಿಗೆ ಮರುಬಳಕೆ ಆಗುತ್ತಿರುತ್ತದೆ. ಪಾರ್ಟಿಗಳಿಗೂ ನೀವು ಇದನ್ನು ಧರಿಸಿ ನಲಿಯಬಹುದು. ಬೇರೆ ಡ್ರೆಸ್ ಗೂ ಹೊಂದುತ್ತದೆ. ಏಕೆಂದರೆ ವೆಡ್ಡಿಂಗ್ ಲೆಹಂಗಾದ ದುಪಟ್ಟಾಗೆ ವಿಶೇಷ ಹೆವಿ ಲುಕ್ಸ್ ಕೊಟ್ಟಿರುತ್ತಾರೆ. ಆಗ ಲೆಹಂಗಾ ಹೆಚ್ಚು ಕಳೆಗಟ್ಟುತ್ತದೆ. ಹೀಗಾಗಿ ನೀವು ನಿಮ್ಮ ಹೆವಿ ದುಪಟ್ಟಾವನ್ನು ಡಿಸೈನರ್ ಕುರ್ತಿ ಯಾ ಒನ್ ಪೀಸ್ ಡ್ರೆಸ್ ಮಾಡಿಸಿ. ಇಲ್ಲವೇ ಈ ದುಪಟ್ಟಾವನ್ನು ಪ್ಲೇನ್ ಸಿಲ್ಕ್ ಸೂಟ್ ಜೊತೆ ಸಹ ಧರಿಸಬಹುದು, ಆಗ ಹೆಚ್ಚು ಟ್ರೆಂಡಿ ಎನಿಸುತ್ತದೆ. ದುಪಟ್ಟಾವನ್ನು ಶ್ರಗ್, ಟ್ರಾನ್ಸ್ ಪೆರೆಂಟ್ ಜ್ಯಾಕೆಟ್ ತರಹ ಮಾಡಿಸಿ, ಅದನ್ನು ಶಾರ್ಟ್ ಯಾ ಲಾಂಗ್ ಕುರ್ತಿ ಜೊತೆ ಧರಿಸಿ ನಲಿಯಬಹುದು.
ಕ್ಯಾರಿ ವಿತ್ ಲಾಂಗ್ ಕುರ್ತಿ
ನಿಮ್ಮ ಲೆಹಂಗಾ ಸಹ ಬಹಳ ದಿನಗಳಿಂದ ವಾರ್ಡ್ ರೋಬ್ ನಲ್ಲೇ ಇದ್ದುಬಿಟ್ಟಿದ್ದರೆ, ಇನ್ನು ಮತ್ತೆ ಧರಿಸಿದರೆ ಎಲ್ಲರೂ ರಿಪೀಟ್ ಡ್ರೆಸ್ ಅಂತ ಆಡಿಕೊಳ್ತಾರೆ ಎಂದು ಭಾವಿಸಿದರೆ, ಹೆವಿ ಲುಕ್ಸ್ ಎನಿಸಿದರೆ, ನೀವು ಕ್ರಿಯಾಶೀಲರಾಗಿ ಚಿಂತಿಸಿ ಮುಂದುವರಿಯಿರಿ. ನೀವು ಅದರ ಹೆವಿ ಚೋಲಿ ನೋಡಿ ಬೇಸರಗೊಂಡಿದ್ದರೆ, ನೀವು ನಿಮ್ಮ ಲೆಹಂಗಾ ಮೇಲೆ ಲಾಂಗ್ ಕುರ್ತಿ ಸ್ಟೈಲ್ ಧರಿಸಿರಿ. ನೀವು ನಿಮ್ಮ ಲೆಹಂಗಾಗೆ ಮ್ಯಾಚ್ ಆಗುವಂಥ ಫ್ರಂಟ್ ಓಪನ್ ಸ್ಲಿಟ್ ವುಳ್ಳ ಶಿಫಾನ್, ಶಿಮರಿ ಉಡುಗೆಗಳ ಕುರ್ತಿ ಮಾಡಿಸಿ. ಇದು ವಿಭಿನ್ನ ಸ್ಟೈಲ್ ಹೊಂದಿರುವುದರ ಜೊತೆ, ಇಂದಿನ ಫ್ಯಾಷನ್‌ನಲ್ಲಿ ನಂ.1 ಎನಿಸಿದೆ.
ಲೆಹಂಗಾ ಲಾಂಗ್ ಜ್ಯಾಕೆಟ್
ನೀವು ನಿಮ್ಮ ಲೆಹಂಗಾಗೆ ಚಾರ್ಮಿಂಗ್ ಲುಕ್ಸ್ ನೀಡಬಯಸಿದರೆ, ನಿಮ್ಮ ವೆಡ್ಡಿಂಗ್ ಲೆಹಂಗಾಗೆ ಲಾಂಗ್ ನೆಟೆಡ್ ಜ್ಯಾಕೆಟ್ ಜೊತೆ ಧರಿಸಿ, ಅದರ ಪೂರ್ತಿ ಲುಕ್ಸ್ ಬದಲಾಯಿಸಿ. ಆಗ ಅದು ಲಾಂಗ್ ಕುರ್ತಿ ತರಹವೇ ಲುಕ್ ನೀಡುತ್ತದೆ. ಇದಕ್ಕೆ ನೀವು ನಿಮ್ಮ ವೆಡ್ಡಿಂಗ್ ದುಪಟ್ಟಾ ಧರಿಸುವ ಅಗತ್ಯ ಇಲ್ಲ. ಲೆಹಂಗಾಗೆ ವೈಬ್ರೆಂಟ್ ಎಫೆಕ್ಟ್ ನೀಡಬಯಸಿದರೆ, ಜ್ಯಾಕೆಟ್ ಕಲರ್ ಲೆಹಂಗಾಗೆ ಹೊಂದುವಂತಿರಲಿ. ಇದನ್ನು ನೀವು ಧರಿಸಿದರೆ ಬಿಲ್ ಕುಲ್ ಹೊಸ ಡ್ರೆಸ್ ಧರಿಸಿದ ಅನುಭವ ಆಗುತ್ತದೆ, ಬಹಳ ಕಂಫರ್ಟೆಬಲ್ ಎನಿಸುತ್ತದೆ. ಇದನ್ನು ನೀವು ಹಬ್ಬಗಳಲ್ಲಿ, ಶುಭ ಸಮಾರಂಭಗಳಲ್ಲಿ ಎಲ್ಲಿಯಾದರೂ ಧರಿಸಬಹುದು.
ಮಿಕ್ಸ್ ಮ್ಯಾಚ್ ವಿತ್ ಬ್ಲೌಸ್
ಇತ್ತೀಚೆಗೆ ಪ್ಲಾಜೋ ಬಹಳ ಟ್ರೆಂಡಿನಲ್ಲಿದೆ. ಇದನ್ನು ಬೇರೆ ಬೇರೆ ಸಂದರ್ಭದಲ್ಲಿ ಬಳಸುತ್ತಾ ಡಿಫರೆಂಟ್ ಲುಕ್ಸ್ ಗಳಿಸಿ. ಪ್ಲಾಜೋವನ್ನು ಕುರ್ತಿ ಜೊತೆ ಧರಿಸಿದರೆ, ನಿಮಗೆ ಟ್ರೆಡಿಶನಲ್ ಲುಕ್ ಸಿಗುತ್ತದೆ. ಬದಲಿಗೆ ಇದನ್ನು ಕ್ರಾಪ್ ಟಾಪ್ ಜೊತೆ ಧರಿಸಿದರೆ, ನಿಮಗೆ ಪಾರ್ಟಿ ಲುಕ್ ಸಿಗುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ಇದ್ದರೆ, ನೀವು ನಿಮ್ಮ ವೆಡ್ಡಿಂಗ್ ಲೆಹಂಗಾದ ಟಾಪ್ ನ್ನು ಟ್ರೌಸರ್ ಜೊತೆ ಹೊಂದುವಂತೆ ಧರಿಸಿದರೆ, ಮಾಡ್ ಲುಕ್ಸ್ ನಿಮ್ಮದಾಗುತ್ತದೆ. ಜೊತೆಗೆ ನಿಮಗಾಗಿ ಒಂದು ವಿಭಿನ್ನ ಟ್ರೆಂಡಿ ಔಟ್ ಫಿಟ್ ರೆಡಿ ಮಾಡಿದಂತಾಯಿತು. ಮಾರುಕಟ್ಟೆಯಲ್ಲಿ ನಿಮಗೆ ಬಗೆಬಗೆಯ ಡಿಸೈನಿನ ಪ್ಲಾಜೋ ಲಭ್ಯ, ನಿಮ್ಮ ಆಯ್ಕೆಗೆ ತಕ್ಕಂತೆ ಆರಿಸಿಕೊಳ್ಳಿ.
ಬಾರ್ಡರ್ಸ್ ನ ಮರುಬಳಕೆ
ನಿಮ್ಮ ಲೆಹಂಗಾದ ಭಾರಿ ಬಾರ್ಡರ್ಸ್ ನೋಡಿ ನೋಡಿ ಎಂದಿನ ಸಮಾರಂಭಗಳಿಗೆ ಅದನ್ನು ಧರಿಸುವುದು ಹೇಗೆ ಎಂದುಕೊಂಡಿರಾ? ಹೀಗಾಗಿ ನೀವು ನಿಮ್ಮ ಲೆಹಂಗಾದ ಬಾರ್ಡರ್ಸ್ ನ್ನು ಟೇಲರ್ ನಿಂದ ತೆಗೆಸಿ, ನಿಮ್ಮ ಬೇರೆ ಡ್ರೆಸ್ ಗೆ ಅಳವಡಿಸಿ. ಇದರಿಂದ ನಿಮ್ಮ ಲೆಹಂಗಾ ಸಿಂಪಲ್ ಆಗುತ್ತದೆ, ಇದರಿಂದಾಗಿ ಅದನ್ನು ನೀವು ಯಾವುದೇ ಪಾರ್ಟಿಗಾದರೂ ಧರಿಸಬಹುದು. ಈ ರೀತಿ ಬಾರ್ಡರ್ ನ ಮರುಬಳಕೆಯಿಂದ ನಿಮ್ಮ ಹಣ ದಂಡ ಆಗಲ್ಲ.
ಲೆಹಂಗಾದ ಲೇಯರ್ಸ್ ತೆಗೆಸಿಬಿಡಿ
ಬ್ರೈಡಲ್ ಲೆಹಂಗಾದ ಲುಕ್ಸ್ ಸುಧಾರಿಸಲು ಅದಕ್ಕೆ ನೆಟ್, ಫ್ರಿಲ್ ಅವಳಡಿಸುತ್ತಾರೆ. ಆಗ ಅದನ್ನು ಧರಿಸಿದಾಗ, ಹಿಗ್ಗಿರುವಂತೆ ಅನಿಸುತ್ತದೆ. ಉತ್ತಮ ಲುಕ್ಸ್ ನೀಡುತ್ತದೆ. ಪ್ರತಿ ನವ ವಧು ತನ್ನ ಧಾರೆಯ ಲೆಹಂಗಾ ಆರಿಸುವಾಗ ಗಮನಿಸುವ ಮುಖ್ಯ ವಿಷಯ ಅಂದ್ರೆ, ಅದರಲ್ಲಿ ಹೆಚ್ಚೆಚ್ಚು ಫ್ಲೇಯರ್ಸ್ ಇರಲಿ ಅಂತ. ಆದರೆ ಇದೇ ಫ್ಲೇಯರ್ಡ್ ಲೆಹಂಗಾ, ಮದುವೆ ನಂತರದ ಮಾಮೂಲಿ ದಿನಗಳಿಗೆ ಸೂಟ್ ಆಗಲ್ಲ ಅನಿಸುತ್ತೆ. ಹೀಗಾಗಿ ನೀವು ನಿಮ್ಮ ಲೆಹಂಗಾವನ್ನು ವೈಟ್ ವಿಭಿನ್ನಗೊಳಿಸ ಬಯಸಿದರೆ, ಅದರ ಮೇಲೆ ಲೇಯರ್ಸ್, ಬುಟ್ಟಾಗಳನ್ನು ತೆಗೆಸಿಬಿಡಿ. ವಿಭಿನ್ನ ವಿಧದಲ್ಲಿ ಧರಿಸಿ, ಪಾರ್ಟಿಗಳ ಕೇಂದ್ರಬಿಂದು ಎನಿಸಿರಿ.
– ಪಾರ್ವತಿ ಭಟ್
ಲೆಹಂಗಾವನ್ನು ಬಾಡಿಗೆಗೂ ಕೊಡಿ
ನಿಮ್ಮ ಧಾರೆಯ ಲೆಹಂಗಾ ಬಹಳ ವರ್ಷಗಳಿಂದ ಹಾಗೆ ಒಂದು ಕಡೆ ಬಿದ್ದಿದೆಯಾ? ಮುಂದೆ ಅದನ್ನು ಬಳಸಲು ನಿಮಗೆ ಮನಸ್ಸಿಲ್ಲ ಎನಿಸಿದರೆ, ಅದನ್ನು ಆನ್ ಲೈನ್ ಸೈಟ್ಸ್ ಗಮನಿಸಿ, ಬಾಡಿಗೆಗೂ ಕೊಡಬಹುದು. ಇದರಿಂದ ನಿಮ್ಮ ಲೆಹಂಗಾ ಬೇಕಾರಾಗುವುದಿಲ್ಲ. ಹಣ ಸಿಗುತ್ತಿರುತ್ತದೆ. ಇದೆಲ್ಲ ಜಂಜಾಟ ಬೇಡವೆನಿಸಿದರೆ ಮಾರಿಬಿಡುವುದೇ ಲೇಸು.