ಮದುವೆ ಅಂದ ಮೇಲೆ ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ, ದಕ್ಷಿಣದ ನವ ವಧು ಸಹ ಉತ್ತರದ ಲೆಹಂಗಾ ತೊಡುವುದೇ ಫ್ಯಾಷನ್. ಆದರೆ ಅಂಥ ಭಾರಿ, ದುಬಾರಿ ಲೆಹಂಗಾ ಒಂದೇ ದಿನಕ್ಕಷ್ಟೇ ಸೀಮಿತ ಆಗಬೇಕೇ? ಮದುವೆ ನಂತರದ ಮಾಮೂಲಿ ದಿನಗಳಿಗಾಗಿ ಇಂಥ ಭಾರಿ ಡ್ರೆಸ್ ಧರಿಸಿ ಏನು ಮಾಡುವುದು?
ಹೀಗಾಗಿ, ಇಂಥ ಭಾರಿ ಅದೂ ದುಬಾರಿ ಲೆಹಂಗಾ ಬೇಕಿತ್ತೇ ಎನಿಸುತ್ತದೆ. ನೀವು ಬಯಸಿದರೆ ಇದೇ ಒಂದು ಲೆಹಂಗಾವನ್ನೇ ಬೇರೆ ಬೇರೆ ವಿಧದಲ್ಲಿ ಮರು ಬಳಕೆ ಮಾಡಬಹುದು. ಅದೂ ಯಾರಿಗೂ ಗೊತ್ತಾಗದ ಹಾಗೆ! ಇಲ್ಲಿದೆ ನೋಡಿ ಲೆಹಂಗಾ ಮರುಬಳಕೆಯ 9 ವಿಧಾನಗಳು :
ಲೆಹಂಗಾ ವಿತ್ ಸ್ಲೀವ್ ಲೆಸ್ ಚೋಲಿ
ಸ್ಲೀವ್ ಲೆಸ್ ಚೋಲಿಯ ಫ್ಯಾಷನ್ ನಿಮ್ಮನ್ನು ಸ್ಟೈಲಿಶ್ ಮಾಡುವುದಷ್ಟೇ ಅಲ್ಲ, ಬದಲಿಗೆ ನಿಮ್ಮ ಲೆಹಂಗಾದ ಮರುಬಳಕೆಗೆ ಒಂದು ಅವಕಾಶ ಕೊಡುತ್ತದೆ. ಹೀಗಾಗಿ ನೀವು ವೆಡ್ಡಿಂಗ್ ಲೆಹಂಗಾದ ಚೋಲಿಯಿಂದ ಸ್ಲೀವ್ಸ್ ತೆಗೆದುಬಿಡಿ. ಆಗ ನಿಮ್ಮ ನಳಿದೋಳುಗಳ ಸೌಂದರ್ಯ ಹೊಸ ಲುಕ್ಸ್ ನೀಡುತ್ತವೆ. ನೀವು ಬೇರೆ ಬೇರೆ ಬಣ್ಣದ ಸ್ಲೀವ್ ಲೆಸ್ ಚೋಲಿ ಸಹ ರೆಡಿ ಮಾಡಿಸಿ. ಇದನ್ನು ಧರಿಸಿ ನೀವು ಯಾವುದೇ ಶುಭ ಸಮಾರಂಭಕ್ಕೆ ಹೋದರೂ, ಇದು ನಿಮ್ಮ ಧಾರೆಯ ದಿನದ್ದು ಎಂದು ಯಾರೂ ಗುರುತಿಸಲಾರರು. ಅದರ ಚೋಲಿಯ ಲುಕ್ ಸಂಪೂರ್ಣ ಬದಲಾಗಿರುವುದೇ ಇದಕ್ಕೆ ಕಾರಣ. ನಂತರ ಇದೇ ಚೋಲಿಯನ್ನು ನೀವು ಬೇರೆ ಬೇರೆ ಸೀರೆಗಳ ಜೊತೆ ಉಟ್ಟರೆ, ಡಿಫರೆಂಟ್ ಲುಕ್ಸ್ ನಿಮ್ಮದಾಗುತ್ತದೆ.
ಚೋಲಿ ವಿತ್ ಪ್ಲೇನ್ ಲೆಹಂಗಾ
ಭಾರಿ ಎನಿಸುವ ಲೆಹಂಗಾವನ್ನು ಒಮ್ಮೆ ಧರಿಸಿದ ಮೇಲೆ, ಮತ್ತೊಂದು ಫಂಕ್ಷನ್ ಗೆ ಬೇಡ ಎನಿಸುತ್ತದೆ. ಆದರೆ ಅದೇ ಲೆಹಂಗಾ ಜೊತೆ ಪ್ರಯೋಗ ನಡೆಸಿದರೆ, ನಿಮ್ಮ ಲೆಹಂಗಾ ಹೊಸತಾಗುವುದಲ್ಲದೇ, ನಿಮಗೆ ಹೊಸ ಲುಕ್ಸ್ ದೊರಕುತ್ತದೆ. ಚೋಲಿ ವಿಷಯಕ್ಕೆ ಬಂದಾಗ, ಬ್ರೈಡಲ್ ಲೆಹಂಗಾದ ಚೋಲಿ ಬಲು ಹೆವಿ ಶಿಮರಿ ಎನಿಸುತ್ತದೆ, ಅದರೊಂದಿಗೆ ಲೆಹಂಗಾ ಸಹ ಭಾರಿ ಆಗಿರುತ್ತದೆ. ಹೀಗಾಗಿ ನೀವು ನಿಮ್ಮ ಚೋಲಿಯನ್ನು ರೀಯೂಸ್ ಮಾಡಬಹುದು. ಉದಾ : ನಿಮ್ಮದು ಗ್ರೀನ್ ಕಲರ್ ನ ಹೆವಿ ಚೋಲಿ ಆಗಿದ್ದರೆ ನೀವು ಅದರೊಂದಿಗೆ ಪ್ಲೇನ್ ರೆಡ್ ಕಲರ್‌ನ ಲೆಹಂಗಾ ರೆಡಿ ಮಾಡಿಸಿ, ಅದರ ಜೊತೆ ನೆಟೆಡ್ ದುಪಟ್ಟಾ ಧರಿಸಬಹುದು. ಇದರಿಂದ ನಿಮ್ಮ ಲೆಹಂಗಾ ಸಾಕಷ್ಟು ಬ್ಯೂಟಿಫುಲ್ ಎನಿಸುವುದರೊಂದಿಗೆ, ತುಸು ಹಗುರವಾಗಿಯೂ ಇರುವುದರಿಂದ, ಅದನ್ನು ಧರಿಸಿ ಓಡಾಡುವುದು ನಿಮಗೆ ಸುಲಭವಾಗುತ್ತದೆ. ಬಯಸಿದರೆ ನೀವು ಚೋಲಿ ಬಣ್ಣದ್ದೇ ಪ್ಲೇನ್ ಲೆಹಂಗಾ ರೆಡಿ ಮಾಡಿಸಿ, ಮ್ಯಾಚಿಂಗ್ ದುಪಟ್ಟಾ ಕೊಳ್ಳಬಹುದು. ಇದರಿಂದ ನೀವು ಸಮಾರಂಭದ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ.
ಡ್ರೇಪಿಂಗ್ ವಿಧಾನ ಬದಲಾಯಿಸಿ
ಲೆಹಂಗಾ ಅಥವಾ ಮೇಕಪ್ ಇರಲಿ, ಪ್ರತಿ ಹೆಣ್ಣೂ ಪಾರ್ಟಿಯಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಂಗೊಳಿಸಲು ಬಯಸುತ್ತಾಳೆ. ಆಗ ಮಾತ್ರ ತನ್ನ ಲುಕ್ಸ್ ರಿಪೀಟ್ ಆಗದು ಎಂದವಳಿಗೆ ಗೊತ್ತು, ಆಗ ಪ್ರತಿ ಸಲ ಡಿಫರೆಂಟ್ ಆಗಿ ಕಂಗೊಳಿಸುತ್ತಾಳೆ. ಹೀಗಾಗಿ ನೀವು ಕ್ರಿಯಾಶೀಲರಾಗಿ ಚಿಂತಿಸಿದರೆ, ನಿಮ್ಮ ಮದುವೆಯ ಲೆಹಂಗಾವನ್ನೇ ಬೇರೆ ಬೇರೆ ರೀತಿಯಲ್ಲಿ ಡ್ರೇಪ್ ಮಾಡಿ, ನಿಮ್ಮಿಷ್ಟದ ಲುಕ್ಸ್ ಹೊಂದಿರಿ. ನೀವು ಗುಜರಾತಿ ಲುಕ್ಸ್ ಬಯಸಿದರೆ, ಗುಜರಾತಿ ಶೈಲಿಯಲ್ಲಿ ದುಪಟ್ಟಾ ಡ್ರೇಪ್ ಮಾಡಿ. ಸಿಂಪಲ್ ಸ್ವೀಟ್ ಲುಕ್ಸ್ ಬಯಸಿದರೆ, ಒನ್ ಸೈಡ್ ದುಪಟ್ಟಾವನ್ನು ಕೇವಲ ಪಿನ್ ಬಳಸಿ ಟಕ್ ಮಾಡಿ. ಬಂಗಾಳಿ ಲುಕ್ಸ್ ಬಯಸಿದರೆ, ದುಪಟ್ಟಾವನ್ನು ಅದೇ ಶೈಲಿಯಲ್ಲಿ ತೊಡಬೇಕು. ಬೇಕಾದರೆ ನೀವು ಲೆಹಂಗಾವನ್ನೇ ಸೀರೆಯ ಲುಕ್ ಗಾಗಿ ಒನ್ ಸೈಡ್ ಪಿನ್ ನಿಂದ ಟಕ್ ಮಾಡಿ, ಎರಡನೇ ಬದಿ ಅದನ್ನು ಒಳಭಾಗಕ್ಕೆ ಫೋಲ್ಡ್ ಮಾಡಿ. ಒಂದು ಪಕ್ಷ ನೆಟೆಡ್ ದುಪಟ್ಟಾ ಆದರೆ, ಅದನ್ನು ನೀವು ಎರಡೂ ಭುಜಗಳ ಮೇಲೆ ಹೊದ್ದು, ಅದಕ್ಕೆ ಶ್ರಗ್ ನಂಥ ಲುಕ್ ನೀಡಿ, ಲೆಹಂಗಾವನ್ನು ಹೆಚ್ಚು ಆಕರ್ಷಕಗೊಳಿಸಿ. ನಿಮ್ಮ ಡ್ರೇಪಿಂಗ್ ವಿಧಾನ ಬದಲಾಗುತ್ತಿರಲಿ, ಆಗ ನಿಮ್ಮ ಲೆಹಂಗಾ ನಿತ್ಯ ಹೊಸದರಂತೆ ಮಿಂಚುತ್ತಿರುತ್ತದೆ.