ಅಶ್ವಿನಿ ತಾಯಿಯಾಗಲು ಬಯಸಿದ್ದಳು. ಆದರೆ ವೈದ್ಯರು ಹೇಳಿದ ವಿಷಯ ಕೇಳಿ ಅವಳು ದಂಗಾಗಿ ಹೋದಳು. ಅವಳು ಮೆನೋಪಾಸ್ ನತ್ತ ಸಾಗುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದರು. ಆದರೆ ಅವಳಿಗಾಗ ವಯಸ್ಸು ಕೇವಲ 32.
“ನನ್ನ ಗುರುತನ್ನು ನನ್ನ ಸ್ತ್ರೀತ್ವದ ಗುಣಗಳಿಂದ ಅಳೆಯಬೇಡಿ. ಅದು ಕೇವಲ ನನ್ನ ಅಸ್ತಿತ್ವದ ಒಂದು ಭಾಗ. ಜೀವನದಲ್ಲಿ ಇನ್ನೂ ಬಹಳಷ್ಟು ಆಗುಹೋಗುಗಳನ್ನು ನೋಡುವುದಿದೆ. ಅದಕ್ಕೆಲ್ಲ ನಾನು ಸನ್ನದ್ಧಳಾಗಿರುವೆ.” ಇಂದು ಪಾರ್ಟಿಯಲ್ಲಿ ಎಲ್ಲರೂ ನನ್ನ ಬಣ್ಣ ರೂಪದ ಬಗ್ಗೆಯೇ ಪ್ರಶಂಸೆ ಮಾಡುತ್ತಿದ್ದರು. ನಿರ್ಮಲಾ ಹೇಳಿದಳು, “ಅಕ್ಕಾ, ನಿಮ್ಮ ವಯಸ್ಸು ರಿವರ್ಸ್ ಗೇರ್ನಲ್ಲಿ ಚಲಿಸುತ್ತಿದೆ. ನಿಮಗೆ 4 ವರ್ಷದ ಮಗಳಿದ್ದಾಳೆಂದು ಹೇಳೋಕೇ ಆಗದು.”
ಸುಜಾತಾ ಕೂಡ ನಗುತ್ತಾ ಹೇಳಿದಳು, “ನಿಮ್ಮ ತ್ವಚೆಯಿಂದ ನಿಮ್ಮ ವಯಸ್ಸೇ ಗೊತ್ತಾಗುವುದಿಲ್ಲ. ಇದು ಸಂತೂರ್ ಸೋಪ್ ನ ಚಮತ್ಕಾರ!” ಮತ್ತೊಮ್ಮೆ ಎಲ್ಲರೂ ಸೇರಿ ನಕ್ಕಿದ್ದರಿಂದ ಅನುಶ್ರೀ ಅಕ್ಕನ ಡ್ರಾಯಿಂಗ್ ರೂಮ್ ಪ್ರತಿಧ್ವನಿಸಿತು.
ನಾನೂ ಕೂಡ ಮುಗುಳ್ನಗುತ್ತಾ ಎಲ್ಲ ಹೊಗಳಿಕೆಗಳ ಮಜ ಪಡೆಯುತ್ತಲಿದ್ದೆ. 32 ವರ್ಷದ ಸಾಧಾರಣ ಬಣ್ಣ ರೂಪದ ಮಹಿಳೆ. ಯಾವಾಗಿನಿಂದ ನಾನು ನೌಕರಿ ಮಾಡಲು ಆರಂಭಿಸಿರುವೆನೋ, ಆಗಿನಿಂದ ಕೈ ಸ್ವಲ್ಪ ಮುಕ್ತವಾಗಿದೆ. ನನ್ನ ನಿರ್ವಹಣೆ ಅನ್ನಿ ಅಥವಾ ನನ್ನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡಲು ಆರಂಭಿಸಿರುವೆ. ಇದರ ಪರಿಣಾಮವೆಂಬಂತೆ 2 ವರ್ಷಗಳಲ್ಲಿಯೇ ನನಗೆ ನಾನೇ ತಂಗಿಯೆಂಬಂತೆ ಗೋಚರಿಸುತ್ತಿರುವೆ.
ನನ್ನ ಹೆಸರು ಅಶ್ವಿನಿ. ನಾನು ಒಂದು ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವೆ. ಮದುವೆಗೂ ಮುಂಚೆ ನಾನು ಕೋಲಿನ ಹಾಗೆ ತೆಳ್ಳಗಿದ್ದೆ. ನಾನು ಕೇವಲ ಕೂದಲು ಕತ್ತರಿಸಿಕೊಳ್ಳಲೆಂದು ಪಾರ್ಲರ್ಗೆ ಹೋಗುತ್ತಿದ್ದೆ. ಏಕೆಂದರೆ ಆಗ ಹುಡುಗಿಯರು ಪಾರ್ಲರ್ ಗೆ ಹೋಗುವುದು ಅಷ್ಟೊಂದು ಒಳ್ಳೆಯದೆಂದು ಭಾವಿಸುತ್ತಿರಲಿಲ್ಲ. ಹುಬ್ಬು ಹಾಗೂ ತುಟಿಯ ಮೇಲ್ಭಾಗದಲ್ಲಿ ಕೂದಲಿನ ಸ್ಪಷ್ಟ ರೂಪ ಎದ್ದು ಕಾಣುತ್ತಿತ್ತು. ಆದರೂ ನಾನು ಒಳ್ಳೆಯ ಹುಡುಗಿಯೆಂಬ ಕಾರಣಕ್ಕೆ ಮೀಸೆ ಅಥವಾ ಹುಬ್ಬಿಗೆ ಎಂದೂ ಕೈ ಹಾಕಿರಲಿಲ್ಲ. ಬಟ್ಟೆಗಳನ್ನು ಕೂಡ ನನಗಿಂತ ಸ್ವಲ್ಪ ಓವರ್ ಸೈಜ್ ಆಗಿರುವುದನ್ನೇ ತೊಡುತ್ತಿದ್ದೆವು.
ಏಕೆಂದರೆ ನನ್ನ ತೆಳ್ಳನೆಯ ಕಾಯನ್ನು ಮುಚ್ಚಿಡ ಬೇಕೆನ್ನುವುದು ನನ್ನ ಧೋರಣೆಯಾಗಿತ್ತು. ಇಂತಹ ಸ್ಥಿತಿಯಲ್ಲಿ 10 ಸಲ ನಾನು ವಧು ಪರೀಕ್ಷೆಯಲ್ಲಿ ಫೇಲ್ ಆಗಿದ್ದೆ. ನನ್ನ ಪತಿ ಗಿರೀಶ್ಗೆ ಈ ಸಂಬಂಧದಲ್ಲಿ ಅದೇನು ಲಾಭ ಕಂಡಿತೊ ಏನೋ ಅವರು ನನ್ನನ್ನು ನೋಡುತ್ತಲೇ ಇಷ್ಟಪಟ್ಟರು.
ಅಂದಹಾಗೆ, ಗಿರೀಶ್ ಹೀರೋ ಥರ ಇದ್ದರೆಂದು ಭಾವಿಸಬೇಡಿ. ಅವರೂ ಕೂಡ ನನ್ನ ಹಾಗೆಯೇ ಸಾಧಾರಣ ಬಣ್ಣದ ವ್ಯಕ್ತಿ. ಆದರೆ ಈ ದೇಶದಲ್ಲಿ ಸರಿಯಾಗಿ ಗಳಿಸುವ ಹುಡುಗನಿಗೆ ಬೆಲೆ ಇದ್ದೇ ಇರುತ್ತದೆ. ನನಗೂ ಖುಷಿಯಾಗಿತ್ತು. ನಾನು ಮೊದಲ ಬಾರಿ ಫೇಶಿಯಲ್ ಬ್ಲೀಚ್ ವ್ಯಾಕ್ಸಿಂಗ್ ಮುಂತಾದವುಗಳನ್ನು ಮಾಡಿಸಿಕೊಂಡೆವು. ನನ್ನ ದೇಹದ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಸಿಕೊಂಡೆ. ಮದುವೆಯಲ್ಲಿ ನಾನು ಬಹಳ ಸುಂದರವಾಗಿ ಕಾಣಿಸುತ್ತಿದ್ದೆ ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡಿ ಹಾಗೂ ನನ್ನ ಗೆಳತಿಯರು ಕೂಡ ಅದನ್ನೇ ಹೇಳುತ್ತಿದ್ದರು.
ಮದುವೆಯ ಬಳಿಕ ಗಿರೀಶ್ ಹಾಗೂ ಅವನ ಕುಟುಂಬದವರು ನನಗೆ ಪ್ರೀತಿ ಹಾಗೂ ವಿಶ್ವಾಸದ ರೆಕ್ಕೆ ಕಟ್ಟಿದರು. ಅದರ ಬಲದ ಮೇಲೆ ನಾನು ಆಕಾಶದಲ್ಲಿ ತೇಲಲು ತೊಡಗಿದ್ದೆ. ಗಿರೀಶ್ ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಎಸ್ಡಿಎ ಹುದ್ದೆಯಲ್ಲಿದ್ದರು. ಆದರೂ ಅವರು ನನ್ನ ಖರ್ಚು ವೆಚ್ಚಗಳ ಮೇಲೆ ಎಂದೂ ಮಿತ ಹಾಕಲಿಲ್ಲ. ನಾನು ಪ್ರತಿ ತಿಂಗಳೂ ಪಾರ್ಲರ್ ಗೆ ಹೋಗುತ್ತಿದ್ದೆ ಹಾಗೂ ಹೊಸ ಹೊಸ ಡಿಸೈನಿನ ಯಾವುದೇ ಡ್ರೆಸ್ ಬಂದರೂ ಅದನ್ನು ಅವಶ್ಯವಾಗಿ ಖರೀದಿಸುತ್ತಿದ್ದೆ.
ಇದಾದ 2 ವರ್ಷಗಳೊಳಗೇ ದೀಪಾ ನನಗೆ ತಾಯ್ತನದ ಸುಖ ತಂದುಕೊಟ್ಟಳು. ಅದರ ಜೊತೆ ಜೊತೆಗೇ ಜವಾಬ್ದಾರಿಗಳು ಹಾಗೂ ಖರ್ಚುಗಳು ಕೂಡ ಹೆಚ್ಚಿದ. ಗಿರೀಶ್ ಹೇಳಿಕೆಯ ಮೇರೆಗೆ ನೌಕರಿಗಾಗಿ ಪ್ರಯತ್ನ ಮಾಡಿದೆ. ಹೆಸರಾಂತ ಶಾಲೆಯೊಂದರಲ್ಲಿ ಶಿಕ್ಷಕಿಯ ನೌಕರಿ ಸಿಕ್ಕಿತು. ದೀಪಾಳನ್ನು ನೋಡಿಕೊಳ್ಳಲು ಅವಳ ಅಜ್ಜಿ ತಾತ ಇದ್ದರು.
ಜೀವನದ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯದ ಅನುಭವ ಮಾಡಿಕೊಳ್ಳುವ ಅವಕಾಶ, ನನ್ನ ಅಸ್ತಿತ್ವದ ಪರಿಚಯ ಮಾಡಿಕೊಳ್ಳುವ ಸದವಕಾಶ. ಆರಂಭದಲ್ಲಿ ಪ್ರತಿ ಕೆಲಸದಲ್ಲೂ ಗಾಬರಿ ಅನಿಸುತ್ತಿತ್ತು.
ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಲ್ಯಾಪ್ ಟಾಪ್ ನಲ್ಲಿ ಮಾಡಬೇಕಿತ್ತು. ಬಹಳ ಹಿಂದೆಯೇ ಮಾಡಿದ್ದ ಕಂಪ್ಯೂಟರ್ ಕೋರ್ಸ್ ಈಗ ಕೆಲಸಕ್ಕೆ ಬಂದಿತ್ತು. ಒತ್ತಡ ಹಾಗೂ ಹೊಸ ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಲೇ 1 ತಿಂಗಳು ಕಳೆಯಿತು. ಮೊದಲ ತಿಂಗಳ ಸಂಬಳ ಕೈಗೆ ಬರುತ್ತಿದ್ದಂತೆ ಒತ್ತಡ ಹಾಗೂ ಅನಿಶ್ಚಿತತೆಯ ಮೋಡಗಳು ಬದಿಗೆ ಸರಿದವು. ಹೊಸ ಜನರು ಸ್ನೇಹದೊಂದಿಗೆ ಜೀವನವನ್ನು ಹೊಸ ರೀತಿಯಲ್ಲಿ ನೋಡಲು ಆರಂಭ ಮಾಡಿದೆ. ನಿಜ ಅರ್ಥದಲ್ಲಿ ಹೇಳಬೇಕೆಂದರೆ, ಎಲ್ಲ ಸರಿಯಾಗಿಯೇ ನಡೆದಿತ್ತು. ಇವತ್ತು ಗಿರೀಶ್ ನ ಅಕ್ಕನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಈ ಎಲ್ಲ ಪ್ರಶಂಸೆಗಳಿಂದ ಆನಂದ ಅನುಭವಿಸುತ್ತಿದ್ದೆವು. ನನಗೆ ಇಷ್ಟೊಂದು ಒಳ್ಳೆಯ ಕುಟುಂಬವನ್ನು ದಯಪಾಲಿಸಿದ್ದಕ್ಕೆ ನಾನು ಅದೃಷ್ಟಕ್ಕೆ ಧನ್ಯವಾದ ಕೂಡ ಹೇಳುತ್ತಿದ್ದೆ. ರಾತ್ರಿ ಬಹಳ ದಣಿದು ನಾನು ಇನ್ನೇನು ಮಲಗಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ಗಿರೀಶ್ನನ್ನ ಸನಿಹ ಬರಲು ಸನ್ನಾಹ ನಡೆಸಿದ್ದರು. ಆಗ ನಾನು ಅಷ್ಟೇ ನಮ್ರ ಧ್ವನಿಯಲ್ಲಿ ಹೇಳಿದೆ, “ಗಿರೀಶ್, ನನಗೆ ಮನಸ್ಸಿಲ್ಲ. 10 ದಿನಗಳ ಮೇಲಾಯ್ತು. ಈವರೆಗೆ ಡೇಟ್ ಆಗಿಲ್ಲ.”
ಗಿರೀಶ್ ಖುಷಿಗೊಂಡು ಹೇಳಿದರು, “ಕಂಗ್ರಾಟ್ಸ್! ದೀಪಾಗೆ ತಮ್ಮನೋ, ತಂಗಿಯೋ ಬರಬಹುದು. ಅಮ್ಮಅಪ್ಪನ ಮನದಾಸೆ ಈಡೇರುತ್ತೆ.”
ನಾನು ಗಿರೀಶ್ ಕೈಯನ್ನು ಹಿಂದಕ್ಕೆ ತಳ್ಳುತ್ತಾ ಹೇಳಿದೆ, “ನಾನು ಈಗಲೇ ಎರಡನೇ ಮಗು ಬಯಸುವುದಿಲ್ಲ ಎನ್ನುವುದು ನಿಮಗೇ ಗೊತ್ತಿದೆ. ಇಲ್ಲದಿದ್ದರೆ ನನ್ನ ಕನ್ಛರ್ಮೇಶನ್ ತಪ್ಪಿ ಹೋಗುತ್ತೆ.”
ಗಿರೀಶ್ ಪ್ರೀತಿಯಿಂದ ತಲೆ ನೇವರಿಸುತ್ತಾ ಹೇಳಿದರು, “ಇದೆಲ್ಲ ಒತ್ತಡದ ಕಾರಣದಿಂದ ಆಗುತ್ತಿದೆ. ಬಾ ನಾನು ನಿನ್ನ ತಲೆಗೆ ಎಣ್ಣೆ ಮಸಾಜ್ ಮಾಡ್ತೀನಿ.”
ಹಾಗೆಯೇ ನೋಡ ನೋಡಿದಂತೆ 10 ದಿನ ಕಳೆದುಹೋದವು. ಮಾರುಕಟ್ಟೆಯಲ್ಲಿ ಲಭ್ಯವಾಗುವ ಪ್ರೆಗ್ನೆನ್ಸಿ ಕಿಟ್ನಿಂದ ಟೆಸ್ಟ್ ಮಾಡಿಕೊಂಡೆ. ಅದರ ಪರಿಣಾಮ ನೆಗೆಟಿವ್ ಬಂತು.
ಭಾನುವಾರದಂದು ಗಿರೀಶ್ ಹಾಗೂ ನಾನು ಡಾಕ್ಟರ್ ಬಳಿ ಹೋದೆವು. ಡಾಕ್ಟರ್ ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಕೆಲವು ಟೆಸ್ಟ್ ಗಳನ್ನು ಮಾಡಿಸಲು ಹೇಳಿದರು. ಮಂಗಳಾರದಂದು ಅದರ ರಿಪೋರ್ಟ್ ಬಂತು. ರಿಪೋರ್ಟ್ ನೋಡಿ ಡಾಕ್ಟರ್ ರ ಹಣೆಯ ಮೇಲೆ ಚಿಂತೆಯ ಗೆರೆಗಳು ಮೂಡಿದವು.
ವೈದ್ಯರು ತಮ್ಮ ಕನ್ನಡಕ ತೆಗೆದು ಸ್ನೇಹದ ಸ್ವರದಲ್ಲಿ ಆದರೆ ಗಂಭೀರ ಧ್ವನಿಯಲ್ಲಿ, “ಈ ಎಲ್ಲ ರಿಪೋರ್ಟ್ಗಳು ಪೆರಿಮೆನೊಪಾಸ್ಕಡೆ ಬೆರಳು ಮಾಡಿ ತೋರಿಸುತ್ತವೆ. ನಿಮಗೆ ಪ್ರಿಮೆಚ್ಯೂರ್ ಓವೇರಿಯನ್ ಫೇಲ್ಯೂರ್ ಆಗಿದೆ,” ಹೇಳಿದರು.
ಈ ಬಿರುಗಾಳಿ ನನ್ನ ಜೀವನದಲ್ಲಿ ಏಕೆ ಮತ್ತು ಹೇಗೆ ಬಂತು ಎಂದು ನನಗೆ ಅರ್ಥವಾಗಿರಲಿಲ್ಲ. ಈವರೆಗೆ ನಾನು ಪರಿಪೂರ್ಣ ಸ್ತ್ರೀ ಆಗಿದ್ದೆ. ಈವರೆಗೆ ನಾನು ನನ್ನ ಸ್ತ್ರೀ ಜೀವನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡಿರಲಿಲ್ಲ. ನನ್ನ ದೇಹ ಮೆನೋಪಾಸ್ನತ್ತ ಅದೂ ಕೂಡ 32ನೇ ವಯಸ್ಸಿನಲ್ಲಿ…… ಇದನ್ನು ನನಗೆ ನಂಬಲು ಕೂಡ ಆಗುತ್ತಿರಲಿಲ್ಲ.
ಈ ವಯಸ್ಸಿನಲ್ಲಿ ಬಹಳಷ್ಟು ಹುಡುಗಿಯರು ಮದುವೆ ಕೂಡ ಆಗಿರುವುದಿಲ್ಲ. ಒಡೆದ ಮನಸ್ಸಿನೊಂದಿಗೆ, ಅರೆಬರೆ ದೇಹ ಹೊತ್ತುಕೊಂಡು ನಾನು ಗಿರೀಶ್ ಜೊತೆಗೆ ಮನೆಗೆ ಬಂದೆ. ಅತ್ತೆ, ಮಾವು, ಬಹಳ ಆಸೆಗಣ್ಣಿನಿಂದ ಗಿರೀಶ್ ನತ್ತ ನೋಡುತ್ತಿದ್ದರು. ಏನಾದರೂ ಖುಷಿಯ ಸುದ್ದಿ ಕೇಳಬೇಕೆಂಬ ಅಪೇಕ್ಷೆಯಿಂದ ಅವರು ಕಾಯುತ್ತಿದ್ದರು. ಅಷ್ಟರಲ್ಲಿಯೇ ಗಿರೀಶ್, “ಏನೂ ವಿಶೇಷತೆ ಇಲ್ಲ,” ಎಂದು ಹೇಳಿದರು.
ನಾನು ಗಿರೀಶ್ಗೆ, “ನೀವು ಸುಳ್ಳೇಕೆ ಹೇಳಿದಿರಿ? ನಾನು ಇನ್ಮುಂದೆ ತಾಯಿ ಆಗುವುದೇ? ಇಲ್ಲವೆಂದು ನೀವೇಕೆ ಹೇಳಲಿಲ್ಲ?” ಎಂದು ಕೇಳುತ್ತಿದ್ದಂತೆ ತೀವ್ರ ನೋವಿನ ಅಲೆ ನನ್ನೊಳಗೆ ದಾಳಿ ಇಟ್ಟಿತು.
ಮೊದಲು ನನಗೆ ತಾಯಿಯಾಗುವ ಯಾವುದೇ ಆಸೆ ಇರಲಿಲ್ಲ. ಆದರೆ ಈಗ ಮತ್ತೊಮ್ಮೆ ತಾಯಿಯಾಗಲಾರೆ ಎಂದು ತಿಳಿದು ಬಿಕ್ಕಳಿಸುತ್ತಿದ್ದೆ. ಎಲ್ಲಕ್ಕೂ ಹೆಚ್ಚು ನನ್ನನ್ನು ಕಾಡುತ್ತಿದ್ದುದು ಏನೋ ಒಂದು ರಿಕ್ತತೆ. ಕಳೆದುಕೊಂಡ ಭಾವನೆ. ನಾನು ಸ್ತ್ರೀ ಆಗಿರುವುದರ ಗುರುತು ನನ್ನಿಂದ ದೂರ ದೂರ ಹೊರಟು ಹೋಗುತ್ತಿತ್ತು. ಅದೂ ಕೂಡ 32ರ ಹರೆಯದಲ್ಲೇ. ನಾನು ಸಂಜೆಯಾದರೂ ಕೋಣೆಯಿಂದ ಹೊರಬರದೇ ಇದ್ದಾಗ ಅತ್ತೆ ನನ್ನ ಕೋಣೆಯೊಳಗೆ ಬಂದರು. ಅವರನ್ನು ನೋಡಿ ನಾನು ವಿಚಲಿತಳಾದೆ.
ಅವರು ಬಹಳ ಪ್ರೀತಿಯಿಂದ ನನ್ನ ತಲೆ ಸರುತ್ತಾ ನನ್ನನ್ನು ಕೇಳಿದಾಗ, ನನ್ನನ್ನು ನಾನು ತಡೆದುಕೊಳ್ಳಲಾಗಲಿಲ್ಲ. ಅಳುತ್ತಲೇ ನಾನು ಅವರಿಗೆ ಎಲ್ಲ ವಿಷಯ ಅರುಹಿದೆ. ಅವರು ಏನೂ ಮಾತಾಡದೇ ಕೋಣೆಯಿಂದ ಹೊರಹೋದರು. ನಾನು ಅವರಿಂದ ಇಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಅವರಿಗೆ ಇನ್ನೊಬ್ಬ ಮೊಮ್ಮಗಳನ್ನೋ, ಮೊಮ್ಮಗನನ್ನೋ ಕೊಡಲು ಆಗುತ್ತಿರಲಿಲ್ಲ. ಅಲ್ಲ, ಅವರಿಗೇಕೆ ನನ್ನ ಹಂಗು ಇರಬೇಕು? ಇದನ್ನೆಲ್ಲ ಯೋಚಿಸುತ್ತ, ಅಳುತ್ತಾ ನನಗೆ ಬಿಕ್ಕು ಬರತೊಡಗಿತು.
ನನಗೆ ಅಷ್ಟೊಂದು ಬೆವರು ಏಕೆ ಬರುತ್ತಿತ್ತು. ನಾನೇಕೆ ಅಷ್ಟೊಂದು ಸಿಡಿಮಿಡಿಗೊಳ್ಳುತ್ತಿದ್ದೆ. ಗಿರೀಶ್ನ ಸಹವಾಸ ನನಗೇಕೆ ಕಷ್ಟಕರ ಆಗುತ್ತಿತ್ತು ಎಂದು ನನಗೀಗ ಅರ್ಥ ಆಗತೊಡಗಿತು. ನಾನು ಇದೆಲ್ಲವನ್ನು ನನ್ನ ದೈನಂದಿನ ಒತ್ತಡದೊಂದಿಗೆ ಲಿಂಕ್ ಮಾಡಿಕೊಂಡು ನೋಡುತ್ತಿದ್ದ. ಆದರೆ ವಾಸ್ತವ ಕಾರಣ ಪೆರಿಮೆನೋಪಾಸ್ ಆಗಿತ್ತು.
ಮರುದಿನ ನಾನು ಶಾಲೆಗೆ ಹೋದಾಗ ನನ್ನ ಅತ್ಯಂತ ಆತ್ಮೀಯ ಸಹೋದ್ಯೋಗಿಗೆ ಈ ಬಗ್ಗೆ ಹೇಳಿದಾಗ, ನನ್ನ ಬಗ್ಗೆ ಅವರ ಕಣ್ಣಲ್ಲಿ ಚಿಂತೆ ಹಾಗೂ ಕರುಣೆಯ ಮಿಶ್ರಭಾವ ಕಂಡು ಬಂದರೂ, ಅವರು ನಗುತ್ತಲೇ ಹೇಳಿದರು, “ಒಳ್ಳೆಯದೇ ಆಯ್ತು ಬಿಡು, ಇನ್ಮುಂದೆ ನಿನಗೆ ತಿಂಗಳು ತಿಂಗಳು ಸ್ಯಾನಿಟರಿ ಪ್ಯಾಡ್ ಖರೀದಿಸುವ ಖರ್ಚು ಉಳಿತಾಯ ಆಗುತ್ತೆ.”
ನನಗೆ ಎಲ್ಲೆಡೆಯೂ ಸಹಾನುಭೂತಿ ದೊರಕುತ್ತಿತ್ತು, “ಪಾಪ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸ್ಥಿತಿ ಬರಬಾರದಿತ್ತು. ಇನ್ನು ಗಂಡನನ್ನು ಹೇಗೆ ಸಂಭಾಳಿಸುತ್ತಾಳೊ ಏನೊ?”
“ನೋಡು ಅಶ್ವಿನಿ, ನೀನು ತಕ್ಷಣದಿಂದಲೇ ಜಿಮ್ ಗೆ ಹೋಗುವುದು ಒಳ್ಳೆಯದು. ಏಕೆಂದರೆ ಈ ಹಂತದಲ್ಲಿ ಬೇಗ ತೂಕ ಹೆಚ್ಚಾಗುತ್ತದೆ. ಮಂಡಿನೋವು ಈಗಲೇ ಆರಂಭವಾದರೆ ಕಷ್ಟ. ಹಾಗಾಗಿ ನೀನು ಹಾರ್ಮೋನ್ ರೀಪ್ಲೇಸ್ ಮೆಂಟ್ ಥೆರಪಿ ತೆಗೆದುಕೊ.”
ನನ್ನ ತಲೆ ಚಕ್ರದ ಹಾಗೆ ತಿರುಗುತ್ತಿತ್ತು. ದಿನ ನನ್ನ ಸನಿಹ ಬರಲು ಹಾತೊರೆಯುತ್ತಿದ್ದ ನನ್ನ ಪ್ರೀತಿಯ ಪತಿ 15 ದಿನಗಳಿಂದ ನನ್ನ ಹತ್ತಿರ ಕೂಡ ಸುಳಿದಿರಲಿಲ್ಲ. ಅದರ ಕಾರಣ ನನಗೆ ಗೊತ್ತು. ನಾನಿನ್ನು ಅವರಿಗೆ ಸುಖ ಕೊಡುವುದಿಲ್ಲ ಎನ್ನುವುದು ಅವರಿಗೂ ಗೊತ್ತು. ಅದೇಕೋ ಏನೋ, ಎಳೆಯುತ್ತಿರುತ್ತಾರೆ. ನಾನೇನಾದರೂ ಹೇಳೋಕೆ ಹೋದರೆ ತಕ್ಷಣವೇ ಹೇಳಿಬಿಡುತ್ತಾರೆ. ಈಗ ಅತ್ತು ಕರೆದು ಮಾಡಿದರೆ ಏನು ಪ್ರಯೋಜನ? ಈಗ ಹೇಗಿದೆಯೋ ಹಾಗೆ ಇರು. ಅದನ್ನು ಒಪ್ಪಿಕೊಂಡು ಮುಂದೆ ಸಾಗ್ತಾ ಇರು.
ನನ್ನ ಮನಸ್ಸಿನ ಮಾತನ್ನು ನಾನ್ಹೇಗೆ ಅವರಿಗೆ ತಿಳಿಸಿ ಹೇಳಲಿ? ಹಸಿರು ತುಂಬಿಕೊಳ್ಳುವ ಮೊದಲೇ ನಾನು ಬಂಜರಾಗಿಬಿಟ್ಟೆ ಅನಿಸುತ್ತದೆ. ಅದನ್ನು ಒಪ್ಪಿಕೊಳ್ಳಲು ನನ್ನ ಮನಸ್ಸಿಗೆ ಬಹಳ ಕಷ್ಟಕರ ಅನಿಸುತ್ತಿದೆ. ನನ್ನ ಯೌವನ ಕಾಲ ಬಹುಬೇಗ ಬಂದು ಹೋಯಿತು ಅಂತಾ ಅನ್ನಿಸಿದೆ. ಅದು 47-48ನೇ ವಯಸ್ಸಿನ ಬಳಿಕ ಬರುತ್ತದೆ. ಆದರೆ 17-18 ವರ್ಷಗಳ ಮುಂಚೆಯೇ ನನ್ನ ಜೀವನದಲ್ಲಿ ಬಂದುಬಿಟ್ಟಿದೆ.
ದೈಹಿಕವಾಗಿ ಅಲ್ಲ, ಮಾನಸಿಕವಾಗಿ ದುರ್ಬಲವಾಗಿದ್ದೇನೆ ಎಂದು ನನಗನ್ನಿಸತೊಡಗಿದೆ. ಅತ್ತ ಗಿರೀಶ್ತನ್ನನ್ನು ತಾನು ಒಂದು ಮಿತಿಯೊಳಗೆ ಕಟ್ಟಿ ಹಾಕಿಕೊಂಡಿದ್ದ. ದಿನವಿಡೀ ಲ್ಯಾಪ್ ಟಾಪ್ ನಲ್ಲಿ ಅದೇನು ಕೆಲಸ ಮಾಡುತ್ತಿದ್ದನೊ ಏನೋ? ಅತ್ತ ಅತ್ತೆ ಏನೂ ಹೇಳಲಿಲ್ಲ. ಆದರೆ ಅವರು ನನ್ನ ಬಗ್ಗೆ ಖುಷಿಯಿಂದಿಲ್ಲ ಎನಿಸುತ್ತಿತ್ತು ಅಥವಾ ಅದು ನನ್ನ ಭ್ರಮೆ ಆಗಿರುತ್ತಿತ್ತೋ ಏನೋ? 1 ತಿಂಗಳಾಗುತ್ತ ಬಂದಿತ್ತು ಮತ್ತು ನಾನು ನನ್ನ ಮನಸ್ಸಿಗೆ ಇನ್ಮುಂದೆ ಇದೇ ನನ್ನ ಜೀವನ ಎಂದು ತಿಳಿಹೇಳಿದ್ದೆ. ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಳ್ಳುತ್ತಿದ್ದೆ. ಸುಕ್ಕುಗಳೇನಾದರೂ ನನ್ನನ್ನು ಸುತ್ತುರಿಯುತ್ತಿವೆಯೇ ಎಂದು. ವೇಗವಾಗಿ ನಡೆಯಲು ಹೆದರುತ್ತಿದ್ದೆ. ಏಕೆಂದರೆ ಬಿದ್ದು ಮೂಳೆ ಮುರಿಯದಿರಲಿ ಎಂದು. ಮುಟ್ಟು ನಿಂತ ಬಳಿಕ ಮೂಳೆಗಳು ಬಹುಬೇಗ ದುರ್ಬಲವಾಗುತ್ತವೆ ಎಂದು ಅವರಿವರು ಹೇಳುವುದನ್ನು ಕೇಳಿದ್ದೆ.
1 ತಿಂಗಳು ಮುಗಿದ ಬಳಿಕ ನಾನು ಇಂದು ಶಾಲೆಗೆ ಸಿದ್ಧಳಾಗಿ ಹೋದೆ. ಪುರುಷರ ದೃಷ್ಟಿಯಲ್ಲಿ ನನಗಾಗಿ ಪ್ರಶಂಸೆಯ ಭಾವನೆ ಕಂಡುಕೊಂಡೆ. ನನಗೆ ಬಹಳ ಹಿತಕರವೆನಿಸಿತು. ಈಗಲೂ ನಾನು ಅಂದ ಕಳೆದುಕೊಂಡಿಲ್ಲ ಅನಿಸಿತು. ಇಂದು ನನ್ನ ಮನಸ್ಸು ಸ್ಥಿಮಿತದಲ್ಲಿತ್ತು. ಹೀಗಾಗಿ ದೀಪಾಳನ್ನು ಪಾರ್ಕ್ಗೆ ಕರೆದುಕೊಂಡು ಹೋದೆ. ಅತ್ತೆ ನನ್ನ ಕಡೆ ಮುಗುಳ್ನಗುತ್ತಾ ಹೇಳಿದರು,
“ಹೀಗೆಯೇ, ನೀನು ಮೌನವಾಗಿದ್ದರೆ ಇಡೀ ಮನೆಯೇ ಮೌನವಾಗಿರುತ್ತದೆ. ಏರಿಳಿತವೇ ಜೀವನ ಅಲ್ವೇ? ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊ.” ನಾನು ತಣ್ಣಗಿನ ಧ್ವನಿಯಲ್ಲಿ ಹೇಳಿದೆ, “ಆದರೆ ಅತ್ತೆ, ಇದಕ್ಕೆ ಪರಿಹಾರವೇ ಇರದಿದ್ದರೆ….?”
ಅವರು ಮುಗುಳ್ನಗುತ್ತಾ, “ಅಂದರೆ ಯಾವುದೇ ಸಮಸ್ಯೆ ಇಲ್ಲ ಅಂತ ಅರ್ಥ,” ಎಂದು ಹೇಳಿದರು.
ರಾತ್ರಿ 10 ಗಂಟೆಯಾದರೂ ಗಿರೀಶ್ಇನ್ನೂ ಮನೆಗೆ ಬಂದಿರಲಿಲ್ಲ. ಇವತ್ತು ಅವರು ಬರುತ್ತಿದ್ದಂತೆ ನಾನು ಅವರನ್ನು ತಡೆದು ನಿಲ್ಲಿಸಿ, “ನಿಮಗೆ ಒಂದು ಕುಟುಂಬವಿದೆ ಎನ್ನುವುದು ನೆನಪಿದೆಯೇ?” ಎಂದು ಕೇಳಿದೆ.
“ಹೌದು ಚೆನ್ನಾಗಿ ನೆನಪಿದೆ. ಒಂದು ಕುಟುಂಬ ಇದೆ ಹಾಗೂ ಜೊತೆಗೆ ಅತ್ತು ಕರೆಯುವ ದುರ್ಬಲ ಮನಸ್ಸಿನ ಹೆಂಡತಿ ಕೂಡ,” ಎಂದು ಗಿರೀಶ್ವ್ಯಂಗ್ಯದ ಧ್ವನಿಯಲ್ಲಿ ಹೇಳಿದರು.
ನಾನು ನಿಂತಲ್ಲೇ ಗಿರೀಶ್ರನ್ನು ನೋಡತೊಡಗಿದೆ. ಎಲ್ಲಿ ಹೋಯಿತು ಆ ಪ್ರೀತಿ ಹಾಗೂ ಮನವೊಲಿಸುವ ಮನಸ್ಸು? ಮಹಿಳೆ ಹಾಗೂ ಪುರುಷನ ನಡುವಿನ ಸಂಬಂಧ ಕೇವಲ ದೇಹಕ್ಕಷ್ಟೇ ಸೀಮಿತವೇ? ನನಗೆ ದೇಹದಿಂದ ಬೆವರಿನ ವಾಸನೆ ಬರುತ್ತಿತ್ತು. ಹೀಗಾಗಿ ಸ್ನಾನ ಮಾಡಲು ಹೋದೆ. ಕನ್ನಡಿಯಲ್ಲಿ ಮತ್ತೊಮ್ಮೆ ಹುಚ್ಚಿಯ ಹಾಗೆ ನೋಡಿಕೊಳ್ಳತೊಡಗಿದೆ. ದೇಹದಲ್ಲಿ ಇನ್ನೂ ಕಸುವು ಇದೆ. ಆದರೆ 3-4 ವರ್ಷಗಳ ಬಳಿಕ ದೇಹ ತನ್ನ ಅಂದಚೆಂದ ಕಳೆದುಕೊಳ್ಳಬಹುದು. ಆಗ ಈಸ್ಟ್ರೋಜೆನ್ ಹಾರ್ಮೋನ್ ನಿರ್ಮಾಣ ಪ್ರಕ್ರಿಯೆಯೇ ನಿಂತು ಹೋಗಿರಬಹುದು.
ಹೊರಗೆ ಬಂದಾಗ ಗಿರೀಶ್ ಗಾಢ ನಿದ್ರೆಯಲ್ಲಿದ್ದರು. ಆಗ ನನಗೆ ಹೇಳಬೇಕೆನಿಸಿತು, `ಗಿರೀಶ್ ನನಗೆ ನಿಮ್ಮ ಅವಶ್ಯಕತೆ ತುಂಬಾ ಇದೆ. ನೀವು ನನ್ನನ್ನು ಏಕಾಂಗಿಯಾಗಿ ಬಿಟ್ಟುಬಿಡಬೇಡಿ.’
ಇವತ್ತು ಪುನಃ ಗಿರೀಶ್ಬಹಳ ತಡವಾಗಿ ಮನೆಗೆ ಬಂದರು. ಆದರೆ ನಾನಿವತ್ತು ಏನೂ ಹೇಳದೇ ಅವರಿಗೆ ಊಟಕ್ಕೆ ತಟ್ಟೆ ಹಾಕಿದೆ. ಊಟ ಮಾಡುತ್ತಲೇ ಗಿರೀಶ್, “ನನಗೆ ನಿನ್ನೊಂದಿಗೆ ಕೆಲವು ಮಹತ್ವದ ವಿಷಯದ ಬಗ್ಗೆ ಚರ್ಚೆ ಮಾಡಬೇಕಿದೆ. ನಾಳೆಯ ಡಿನ್ನರ್ಗೆ ಹೊರಗೆ ಹೋಗೋಣ,” ಎಂದು ಹೇಳಿದರು.
ನನ್ನ ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಗಿರೀಶ್ಬೇರೆ ಯಾರೊಂದಿಗಾದರೂ ನಿಕಟ ಆಗುತ್ತಿದ್ದಾರೆಯೇ? ಒಂದುವೇಳೆ ಹೌದು ಎಂದಾದರೆ ನಾನು ಅವರಿಗೆ ಒಪ್ಪಿಗೆ ಕೊಡ್ತೀನಿ. ಅವರ ಸುಖ ಕಿತ್ತುಕೊಳ್ಳುವ ಯಾವ ಹಕ್ಕೂ ಕೂಡ ನನಗಿಲ್ಲ. ಇಡೀ ರಾತ್ರಿ ಅದೇ ಕನವರಿಕೆಯಲ್ಲಿ ಕಳೆದುಹೋಯಿತು. ಬೆಳಗ್ಗೆ ನನ್ನನ್ನು ನಾನು ಸಿದ್ಧಳಾಗಿಸಿಕೊಂಡೆ.
ಮರುದಿನ ಗಿರೀಶ್ಸರಿಯಾದ ಸಮಯಕ್ಕೆ ಮನೆಗೆ ಬಂದರು. ಆ ಬಳಿಕ ನಮ್ಮ ಮನೆಯಿಂದ ಹೊರಟ ಕಾರು ನೇರವಾಗಿ, ಒಂದು ದೊಡ್ಡ ಕಟ್ಟಡದ ಎದುರು ನಿಂತುಕೊಂಡಿತು. ನಾವು ಲಿಫ್ಟ್ ನಲ್ಲಿ ಮೇಲಕ್ಕೆ ಹೋದಾಗ ಅದು ಒಬ್ಬ ಕೌನ್ಸೆಲರ್ಆಫೀಸ್ಎಂದು ತಿಳಿಯಿತು. ನಾನು ಗಿರೀಶ್ ರತ್ತ ನೋಡಿದೆ. ಗಿರೀಶ್ನನ್ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬ ಸುಂದರ ಹಾಗೂ ತಿಳಿವಳಿಕೆಯುಳ್ಳ ಮಹಿಳೆ ಇದ್ದರು. ಗಿರೀಶ್ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಬಳಿಕ ನನ್ನತ್ತ ನೋಡುತ್ತಾ, “ಅಶ್ವಿನಿ, ನೀನು ಇವರೊಂದಿಗೆ ಮಾತಾಡ್ತಾ ಇರು. ನಾನು ಸ್ವಲ್ಪ ಹೊತ್ತಿನಲ್ಲಿಯೇ ಬರ್ತೀನಿ,” ಎಂದರು.
ಕೌನ್ಸೆಲರ್ ಜೊತೆ ನಾನು ನನ್ನ ಮನಸ್ಸಿನ ಎಲ್ಲ ಸಂಗತಿಗಳನ್ನು ಹೇಳಿಕೊಂಡೆ. ಅವರು ಏನನ್ನೂ ಮಾತನಾಡದೇ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಬಳಿಕ ಅವರು ನನಗೆ, “ಅಶ್ವಿನಿ, ನೀವು ಸ್ತ್ರೀ ಆಗಿರುವುದಕ್ಕೆ ಮೊದಲು ಒಬ್ಬ ಮನುಷ್ಯಳಾಗಿರುವಿರಿ. ನಿಮ್ಮ ಗುರುತು, ಅಸ್ತಿತ್ವ ಕೇವಲ ಸ್ತ್ರೀತ್ವಕ್ಕೆ ಸೀಮಿತವಾಗಿಲ್ಲ.
“ನೀವು ಈ ಹಂತವನ್ನು ಎಲ್ಲರಿಗಿಂತಲೂ ಸ್ವಲ್ಪ ಮೊದಲೇ ದಾಟಿ ಹೋಗಬೇಕಿದೆ ಎನ್ನುವುದು ಸತ್ಯ. ಆದರೆ ಆಹಾರದಲ್ಲಿ ಅಷ್ಟಿಷ್ಟು ಬದಲಾವಣೆ, ಒಂದಿಷ್ಟು ವ್ಯಾಯಾಮ ಮಾಡುವುದರಿಂದ ನಿಮ್ಮ ಜೀವನ ಸರಿಯಾದ ದಾರಿಗೆ ಬರುತ್ತದೆ. ಇದು ಜೀವನದ ಒಂದು ಹೊಸ ಅಧ್ಯಾಯ. ಇದನ್ನು ಅರಿತುಕೊಳ್ಳಿ. ಸ್ವೀಕರಿಸಿ ಹಾಗೂ ಮುಗುಳ್ನಗುತ್ತಲೇ ಮುಂದೆ ಸಾಗಿ,” ಎಂದು ಹೇಳಿದರು.
ಸ್ವಲ್ಪ ಹೊತ್ತಿನ ಬಳಿಕ ಗಿರೀಶ್ಅಲ್ಲಿಗೆ ಬಂದರು. ಆ ಬಳಿಕ ನಾವು ಬಹಳ ದಿನಗಳ ನಂತರ ಇಬ್ಬರೂ ಜೊತೆಗೂಡಿ ಡಿನ್ನರ್ ಎಂಜಾಯ್ ಪಡೆಯಲಿದ್ದೆವು. ಗಿರೀಶ್ ನನ್ನತ್ತ ಪ್ರೀತಿಯಿಂದ ನೋಡುತ್ತಿದ್ದರು.
ನಾನು ಅವರಿಗೆ ಮೆಲ್ಲನೆಯ ಧ್ವನಿಯಲ್ಲಿ, “ಏನು ಹೇಳಬೇಕಾಗಿತ್ತು ಹೇಳಿ,” ಎಂದೆ.
“ಗಮನವಿಟ್ಟು ಕೇಳು. ಮಾತಿನ ಮಧ್ಯೆ ತಡೆಯಬಾರದು. ನೀನು ನನ್ನ ಜೀವನದ ಮಹತ್ವದ ಅಧ್ಯಾಯ. ನೀನು ಸ್ತ್ರೀ ನಾನು ಪುರುಷ. ಹಾಗೆಂದೇ ಸಮಾಜ ನಮ್ಮನ್ನು ವಿವಾಹದ ಬಂಧನದಲ್ಲಿ ಬಂಧಿಸಿದೆ. ಆದರೆ ನೀನು ನನ್ನ ದೃಷ್ಟಿಯಲ್ಲಿ ಕೇವಲ ಒಬ್ಬ ಸ್ತ್ರೀ ಅಲ್ಲ, ನನ್ನ ಶಕ್ತಿ ಕೂಡ. ನಾನು ಯಾವುದಾದರೂ ಸಮಸ್ಯೆಯಿಂದ ತೊಳಲಾಡುತ್ತಿದ್ದರೆ, ನೀನು ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡುತ್ತೀಯಾ ಅಥವಾ ನನ್ನ ಜೊತೆಗೆ ನಿಲ್ಲುತ್ತೀಯಾ?” ಎಂದು ಕೇಳಿದರು.
“ನಾನು ನಿಮ್ಮ ಜೊತೆಗೆ ನಿಲ್ಲಲು ಇಷ್ಟಪಡುತ್ತೇನೆ. ಆದರೆ ನೀವು ನನ್ನನ್ನು ನಿಮ್ಮಿಂದ ಬಹಳ ದೂರ ಇಟ್ಟಿರುವಿರಿ. ನನ್ನ ಆಚೆ ಈಚೆ ಎಷ್ಟೊಂದು ನಕಾರಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿಕೊಂಡು ಬಿಟ್ಟಿದ್ದೇನೆಂದರೆ, ನಾನು ಇಷ್ಟಪಟ್ಟೂ ಕೂಡ ನಿಮಗೆ ಸಹಾಯ ಮಾಡಲು ಆಗುವುದಿಲ್ಲ,” ಎಂದೆ.
ನಾನು ಕಣ್ಣಲ್ಲಿ ನೀರು ತುಂಬಿಕೊಂಡು, “ನೀವು ಸ್ವತಃ ನನ್ನಿಂದ ದೂರ ಇರುತ್ತೀರಾ?”
ಆ ಮಾತಿಗೆ ಗಿರೀಶ್ ನಗುತ್ತಲೇ, “ಹುಚ್ಚಿ, ನಿನ್ನ ಅಳು ಅಭ್ಯಾಸದ ಕಾರಣದಿಂದ ನಾನು ನಿನ್ನಿಂದ ಒಂದಿಷ್ಟು ಅಂತರ ಕಾಪಾಡಿಕೊಳ್ಳುತ್ತೇನೆ. ನಿನ್ನ ಕಾರಣದಿಂದ ಅಲ್ಲ. ಅದು ಜೀವನದ ಒಂದು ಘಟ್ಟ. ಅದು ಹೆಚ್ಚು ಸುತ್ತಿ ಬಳಸುವಂಥದ್ದಾದರೆ ಏನಾಯ್ತು, ನಾವಿಬ್ಬರೂ ಸೇರಿ ಅದನ್ನು ಪಾರು ಮಾಡೋಣ. ನೀನು ಕೇವಲ ಒಂದು ದೇಹವಷ್ಟೇ ಅಲ್ಲ, ಅದಕ್ಕೂ ಮೀರಿದ ಒಂದು ಹೆಗ್ಗುರುತು ನಿನ್ನದಾಗಿದೆ.
“ಸ್ಪೀಡ್ ಬ್ರೇಕ್ ಮೇಲೆ ನಿಲ್ಲಬೇಕಾಗುತ್ತಲ್ಲ. ಆದರೆ ಜಾಗ್ರತೆಯಿಂದ ನಡೆದರೆ, ಅದನ್ನು ಸುಲಭವಾಗಿ ಪಾರು ಮಾಡುತ್ತೇವಲ್ಲ,” ಎಂದು ಹೇಳಿದರು.
ಗಿರೀಶ್ನ ಮಾತುಗಳಿಂದ ಒಂದು ವಿಷಯವಂತೂ ನನಗೆ ಸ್ಪಷ್ಟವಾಗಿತ್ತು, ಹೇಗಾಯ್ತು, ಏನಾಯ್ತು ಎಂಬುದಕ್ಕಿಂತ ಹೆಚ್ಚಾಗಿ ಆ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದೇ ಮಹತ್ವದ್ದಾಗಿತ್ತು.
ಇಂದು ಆ ಮಾತಿಗೆ 3 ವರ್ಷಗಳೇ ಕಳೆದುಹೋಗಿವೆ. ನಾನು ಈಗಲೂ ಮುಟ್ಟಂತ್ಯದ ಸ್ಥಿತಿಯಲ್ಲಿಯೇ ಸಾಗುತ್ತಿದ್ದೇನೆ. ವೈದ್ಯರ ಸಲಹೆ ಹಾಗೂ ಸೂಕ್ತ ಆಹಾರಗಳಿಂದ ಸಾಕಷ್ಟು ಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ಈಗ ನನ್ನ ತೂಕ ಮೊದಲಿಗಿಂತ ಕಡಿಮೆಯಾಗಿದೆ. ನನ್ನ ಚರ್ಮ ಕೂಡ ಹೊಳೆಯುತ್ತಿದೆ. ನನ್ನನ್ನು ನಾನು ಮೆನೋಪಾಸ್ಗೆ ಸನ್ನದ್ಧುಗೊಳಿಸಲು ಇಡೀ ಆಹಾರವನ್ನೇ ಬದಲಿಸಿಬಿಟ್ಟಿರುವೆ. ನಾನು ಹೇಗಿದ್ದೀನೊ ಹಾಗೆ ಸ್ವೀಕಾರ ಮಾಡಿದ್ದೇನೆ. ಈ ಯೋಚನೆ ಅನುಸರಿಸುತ್ತಿದ್ದಂತೆ ಎಲ್ಲವೂ ಬದಲಾಗಿ ಹೋಯಿತು. ನನ್ನ ಅಸ್ತಿತ್ವದ ಗುರುತು ಕೂಡ ಬದಲಾಗಿ ಹೋಯಿತು.