“ದೈನಂದಿನ ಕಿರಿಕಿರಿಯಿಂದ ನಾನು ಬೇಸತ್ತು ಹೋಗಿರುವೆ. ನನಗಿಷ್ಟವಾದುದನ್ನು ತಿನ್ನಲು ಆಗುವುದಿಲ್ಲ. ಧರಿಸಲು ಆಗುವುದಿಲ್ಲ. ಯಾವಾಗ ನೋಡಿದರೂ ನಿರ್ಬಂಧ. ಯಾರಾದರೂ ಎಷ್ಟು ಅಂತ ಸಹಿಸಿಕೊಳ್ತಾರೆ….?”

ಮಧ್ಯಾಹ್ನ 2 ಗಂಟೆಯಾಗುತ್ತಾ ಬಂದಿತ್ತು. ಊಟ ಮುಗಿಸಿ ಕಾವ್ಯಾ ಮಂಚದ ಮೇಲೆ ಹಾಗೆಯೇ ವಿಶ್ರಾಂತಿ ಪಡೆಯುತ್ತಿದ್ದ. ಅಷ್ಟರಲ್ಲಿ ಹಿರಿಯ ಅಕ್ಕ ನಳಿನಿಯ ಫೋನ್‌ ಬಂತು ಇಬ್ಬರೂ ಅಕ್ಕ ತಂಗಿಯರು ತಮ್ಮ ತಮ್ಮ ಅತ್ತೆ ಮನೆ ಪುರಾಣ ಪಠಣ ಮಾಡತೊಡಗಿದರು.

“ಅತ್ತೆಯ ಕಾಟವನ್ನು ನೀನೇಕೆ ಸಹಿಸಿಕೊಳ್ಳುತ್ತಿಯೋ? ಅಭಯ್‌ ಗೆ ಇದೆಲ್ಲವನ್ನು ಏಕೆ ಹೇಳುವುದಿಲ್ಲ? ನಾನಂತೂ ನನ್ನ ಗಂಡನಿಂದ ಯಾವ ಮಾತನ್ನು ಬಚ್ಚಿಡುವುದಿಲ್ಲ. ಮಲಗುವ ಮುನ್ನ ಅವರ ಅಮ್ಮನ ಅಂದಿನ ಸಂಪೂರ್ಣ ವಿವರ ಅವರ ಮುಂದೆ ತೆರೆದಿಡ್ತೀನಿ. ಎಲ್ಲಿಯವರೆಗೆ ಅವರು ನನ್ನ ಮಾತಿಗೆ `ಹ್ಞೂಂ’ ಎಂದು ಹೇಳುವುದಿಲ್ಲವೋ, ಅಲ್ಲಿಯವರೆಗೆ ಅವರು ನನ್ನನ್ನು ಮುಟ್ಟಲು ಅವಕಾಶ ಸಿಗುವುದಿಲ್ಲ,” ಎಂದು ನಳಿನಿ ತನ್ನ ಅನುಭವದ ಕಡತ ಬಿಚ್ಚಿಟ್ಟಳು.

“ಅಕ್ಕಾ, ಅಭಯ್‌ ಮಮ್ಮಾಸ್‌ ಬಾಯ್‌. ತನ್ನ ಅಮ್ಮನ ವಿರುದ್ಧ ಅವರು ಒಂದೇ ಒಂದು ಶಬ್ದ ಕೇಳಲು ಇಷ್ಟಪಡುವುದಿಲ್ಲ. ಅದಕ್ಕೆ ತದ್ವಿರುದ್ಧ ಎಂಬಂತೆ ಅವರೇ ನನಗೆ ಹೊಂದಾಣಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ಅತ್ತೆ ಮನೆಯ ಬಾಬತ್ತಿನಲ್ಲಿ ನೀನು ಬಹಳ ಅದೃಷ್ಟವಂತೆ. ನಿನ್ನ ಗಂಡ ನೀನು ಹೇಳಿದಂತೆ ಕುಣಿಯುತ್ತಾನೆ. ನನಗೆ ಯಾವಾಗ ಒಳ್ಳೆಯ ದಿನಗಳು ಬರುತ್ತವೆ ಏನೋ…..” ಎಂದು ಹೇಳುತ್ತ ಗಾಢ ಉಸಿರು ಎಳೆದುಕೊಂಡಳು.

“ಅದಂತೂ ಇದೆ. ನಾನು ಅವರನ್ನು ಹಾಗೆಯೇ ನನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದೇನೆ. ಈಗಾಗಲೇ ನಿನ್ನ ಭಾವನಿಂದ ಎರಡು ಸಲ ಫೋನ್‌ ಬಂದಿದೆ. ನನ್ನನ್ನು ಬಿಟ್ಟು ಅವರಿಗೆ ನೆಮ್ಮದಿಯೇ ಇಲ್ಲ,” ನಳಿನಿ ಖುಷಿಯಿಂದ ಹೇಳಿಕೊಂಡಳು.

“ಸರಿ. ಸರಿ…. ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಅತ್ತೆ ಮಹಾರಾಣಿಯ ಕಾಫಿ ಟೈಮ್ ಆಗಲಿದೆ. ನನಗಂತೂ ಒಂದಷ್ಟು ಹೊತ್ತು ನೆಮ್ಮದಿಯಿಂದ ಮಲಗಲು ಕೂಡ ಅವಕಾಶ ಸಿಗುವುದಿಲ್ಲ……” ತನ್ನನ್ನು ತಾನು ಹಳಿದುಕೊಳ್ಳುತ್ತಾ ಕಾವ್ಯಾ ಫೋನ್‌ ಕಟ್ ಮಾಡಿದಳು. ಬಳಿಕ ಅವಳು ಎ.ಸಿ.ಯ ಕೂಲಿಂಗ್‌ ಇನ್ನಷ್ಟು ಹೆಚ್ಚಿಸಿಕೊಂಡು ಹೊದಿಕೆ ಮೈಮೇಲೆ ಎಳೆದುಕೊಂಡಳು.

ಕಾವ್ಯಾಳಿಗೆ ಅಭಯ್‌ ಜೊತೆ ಮದುವೆಯಾಗಿ 3 ವರ್ಷಗಳೇ ಆಗಿವೆ. ಅಭಯ್‌ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ಸಂಬಳ ಪರವಾಗಿಲ್ಲ. ಅಮ್ಮ ಅಪ್ಪ ಜೊತೆಗೆ ಇರುವುದರಿಂದ ಅವನಿಗೆ ಮನೆ ಬಾಡಿಗೆ, ನೀರು, ವಿದ್ಯುತ್‌ ಖರ್ಚು, ಪಡಿತರ ಹೀಗೆ ಯಾವುದರ ಖರ್ಚನ್ನು ಕೈಯಿಂದ ಭರಿಸಬೇಕಾಗಿ ಬರುವುದಿಲ್ಲ. ಅವನ ಖರ್ಚುಗಳೇನಿದ್ದರೂ ತನ್ನ ವೈಯಕ್ತಿಕ ಖರ್ಚುಗಳಿಗೆ ಹಾಗೂ ಕಾವ್ಯಾಳ ಅಗತ್ಯಗಳಿಗಾಗಿ ಮಾತ್ರ. ಮದುವೆಗೂ ಮುಂಚೆ ಕಾವ್ಯಾ ತನ್ನ ಕನಸಿನ ಜೀವನದ ಕಲ್ಪನೆ ಮಾಡಿಕೊಂಡಿದ್ದಳು. ಪತಿಯ ಜೊತೆ ಮೋಜು ಮಸ್ತಿ ಮಾಡುತ್ತಿರಬೇಕು ಎಂದು ಅವಳು ಅಂದುಕೊಂಡಿದ್ದಳು. ಅವಳ ಕನಸಿನ ಲೋಕದಲ್ಲಿ ಅತ್ತೆ ಮಾವರೆಂಬ ಖಳನಾಯಕರು ಇರಲೇ ಇಲ್ಲ.

ತನ್ನದೇ ಗೂಡಿನ ಕನಸು ಹೊತ್ತು ಕಾವ್ಯಾ ಅತ್ತೆಮನೆಯ ಹೊಸ್ತಿಲು ತುಳಿದಿದ್ದಳು. ಆದರೆ ಅಭಯ್‌ ಗೆ ಏಕಾಂಗಿಯಾಗಿ ಇದ್ದುಕೊಂಡು ವೈವಾಹಿಕ ಜೀವನದ ಮೋಜು ಮಜ ಪಡೆದುಕೊಳ್ಳುವ ಯಾವ ಅಪೇಕ್ಷೆಯೂ ಇಲ್ಲ ಎನ್ನುವುದು ಅವಳಿಗೆ ಗೊತ್ತಾಗಿ, ಅವಳ ಆಸೆಗೆ ತಣ್ಣಿರೆರಚಿದಂತಾಯ್ತು. ಅವಳು ಯಾವಾಗಲಾದರೊಮ್ಮೆ ತನ್ನ ಅಮ್ಮನಿಗೆ ತನ್ನ ಗೋಳನ್ನು ಹೇಳಿಕೊಂಡು, ತನ್ನ ಮನಸ್ಸು ಹಗುರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಅಮ್ಮನೆಂದೂ ಅವಳ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ ಹಾಗೂ ಬೇರೆ ಮನೆ ಮಾಡಿಕೊಂಡು ಹೋಗಬೇಕೆನ್ನುವ ಕನಸಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ.

“ಅತ್ತೆ ಮನೆಯೆನ್ನುವುದು ಚೆಂಡು ಹೂವಿನಂತೆ. ಕೆಲವು ಹೂಗಳು ಚಿಕ್ಕವು, ಮತ್ತೆ ಕೆಲವು ಹೂಗಳು ದೊಡ್ಡವು. ಆದರೆ ಎಲ್ಲವನ್ನು ಒಗ್ಗೂಡಿಸಿ ಪೋಣಿಸಿದಾಗ, ಅದರ ಅಂದ ಎಲ್ಲರೂ ನೋಡುವಂತೆ ಇರುತ್ತದೆ.” ಅಮ್ಮ ಅವಳಿಗೆ ಯಾವಾಗಲೂ ತಿಳಿಸಿ ಹೇಳುತ್ತಿದ್ದರು. ಆದರೆ ಕಾವ್ಯಾ ಅದಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಇತ್ತೀಚೆಗಂತೂ ಅವಳು ಅಮ್ಮನೊಂದಿಗೆ ಮಾತನಾಡುವಾಗ ಅಳೆದೂ ತೂಗಿ ಮಾತನಾಡುತ್ತಿದ್ದಳು. ಆದರೆ ತನ್ನ ಅಕ್ಕನೊಂದಿಗೆ ಮಾತ್ರ ಏನೆಲ್ಲ ವಿಷಯಗಳನ್ನು ಚರ್ಚಿಸುತ್ತಿದ್ದಳು. ಬೇರೆ ಮನೆ ಮಾಡುವ ಬಗೆಗೆ ಅವಳ ಸಲಹೆ ಪಡೆಯುತ್ತಿದ್ದಳು.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡಿದವರು ಎದುರು ಮನೆಗೆ ಬಾಡಿಗೆಗೆ ಬಂದಿದ್ದ ಸಂದೀಪ್‌ ಹಾಗೂ ಸೌಮ್ಯಾ ದಂಪತಿಗಳು. ಸಂದೀಪ್‌ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಸೌಮ್ಯಾ ಒಮ್ಮೆ ಜೀನ್ಸ್ ಧರಿಸಿದರೆ ಮತ್ತೊಮ್ಮೆ ಶಾರ್ಟ್ಸ್ ಧರಿಸುತ್ತಿದ್ದಳು. ಮತ್ತೊಮ್ಮೆ ಯಾವುದಾದರೂ ವೆಸ್ಟರ್ನ್‌ ಪೋಷಾಕು ಧರಿಸುತ್ತಿದ್ದಳು. ಅವಳನ್ನು ನೋಡಿ ಕಾವ್ಯಾಳಿಗೆ ಅಚ್ಚರಿಯಾಯಿತು. ಸ್ಟೈಲಿಶ್‌ ಹೇರ್‌ ಕಟ್‌ ಹಾಗೂ ಮೇಕಪ್‌ ನಿಂದ ಮುಖ ನಳನಳಿಸುತ್ತಿತ್ತು.

ಇದೇ ನಿಜವಾದ ಜೀವನ. ಇದರ ಮಜ ಪಡೆಯದಿದ್ದರೆ ಹೇಗೆ? ನಾನೇನು ಹಿಂದಿನ ಜೀವನದಲ್ಲಿ ಅದೇನು ಕರ್ಮ ಮಾಡಿ ಬಂದಿದ್ದೆನೋ ಏನೋ, ಹಾಗೆಂದೇ ನನ್ನ ಕೈಕಾಲುಗಳಿಗೆ ಈ ನಿರ್ಬಂಧದ ಬೇಡಿಗಳು ಹಾಕಲ್ಪಟ್ಟಿವೆ ಎಂದು ಅವಳು ಯೋಚಿಸುತ್ತಿದ್ದಳು. ದಿನ ಹೀಗೆ ಯೋಚಿಸಿ ಯೋಚಿಸಿ ಅವಳು ತೆಳ್ಳಗಾಗತೊಡಗಿದಳು. ಇದು ಮುಚ್ಚಿಟ್ಟುಕೊಳ್ಳುವ ವಿಷಯವೇನೂ ಆಗಿರಲಿಲ್ಲ. ಹೀಗಾಗಿ ಅಕ್ಕನಿಗೆ ಈ ಬಗ್ಗೆ ಉಪ್ಪು ಖಾರ ಸವರಿ ವಿವರಣೆ ಕೊಟ್ಟಳು.

“ನಿನ್ನ ಬಳಿಯೇ ಬಾವಿ ಇದೆ. ನೀನು ನೀರಿಗಾಗಿ ಊರಲ್ಲೆಲ್ಲ ಅಲೆದಾಡುತ್ತಿರುವೆ. ನೀನು ಇವತ್ತಿನಿಂದಲೇ ಸೌಮ್ಯಾಳೊಂದಿಗೆ ಸ್ನೇಹ ಬೆಳೆಸು. ವೈಭವದ ಜೀವನ ನಡೆಸುವ ಟಿಪ್ಸ್ ಪಡೆದುಕೊ,” ಎಂದು ನಳಿನಿ ಸಲಹೆ ಕೊಟ್ಟುಬಿಟ್ಟಳು.

ಮರುದಿನದಿಂದಲೇ ಕಾವ್ಯಾ, ಸೌಮ್ಯಾಳೊಂದಿಗೆ ಹತ್ತಿರವಾಗಲು ಪ್ರಯತ್ನ ಆರಂಭಿಸಿದಳು. ಸೌಮ್ಯಾ ಸಹ ಅಂತಹ ಸ್ನೇಹದ ನಿರೀಕ್ಷೆಯಲ್ಲಿದ್ದಳು. ಹಾಯ್‌ ಹಲೋನಿಂದ ಆರಂಭವಾದ ಅವರ ಮಾತುಕತೆ ಕ್ರಮೇಣ ತುಂಬಾ ಆಪ್ತವಾಯಿತು. ಬಹುಬೇಗನೇ ಇಬ್ಬರೂ ತುಂಬಾ ನಿಕಟವಾದರು. ಒಮ್ಮೆ ಕಾವ್ಯಾ ಸೌಮ್ಯಾಳ ಬಳಿ ಹೋದರೆ, ಮತ್ತೊಮ್ಮೆ ಸೌಮ್ಯಾ ಕಾವ್ಯಾಳ ಬಳಿ ಹೋಗಿಬರುತ್ತಿದ್ದರು…..

“ನೋಡು ಕಾವ್ಯಾ, ಗಂಡ ಎನ್ನುವ ಪ್ರಾಣಿಯನ್ನು ನಿನ್ನ ಬೆರಳ ಮೇಲೆ ಕುಣಿಸಬೇಕೆಂದರೆ, ಅಷ್ಟಿಷ್ಟು ಸರ್ಕಸ್‌ ಮಾಡಲೇಬೇಕು. ನೀನು ಯಾವಾಗಲು ಮಾಮೂಲು ಸೀರೆಯಲ್ಲಿಯೇ ಇರ್ತಿಯಾ. ಪಾಪ ನಿನ್ನ ಗಂಡನಿಗೆ ನಿನ್ನನ್ನು ಮಾಡೆಲ್ ‌ರೀತಿಯಲ್ಲಿ ಕಾಣಬೇಕಂತ ಆಸೆ ಇರುತ್ತಲ್ಲ. ಯಾವಾಗಾದರೂ ಒಂದಿಷ್ಟು ಬೋಲ್ಡ್ ಆಗುವ, ಹೊಸದೇನನ್ನಾದರೂ ಟ್ರೈ ಮಾಡು. ಆಮೇಲೆ ನೋಡು, ಅಭಯ್‌ ನಿನ್ನ ಮೇಲೆ ಹೇಗೆ ಮುಗಿಬೀಳ್ತಾನೆ ಅಂತ,” ಹಿಂದೆ ನಳಿನಿ ಹೇಳಿದ ಹಾಗೆಯೇ ಸೌಮ್ಯಾ ಸಲಹೆ ಕೊಟ್ಟಳು.

“ನಾನೇನೂ ಬೋಲ್ಡ್ ಧರಿಸೋಕೆ ಆಗುತ್ತೆ. ಅಭಯ್‌ ನೋಡು ಮುಂಚೆಯೇ ಅವನ ತಾಯಿ ತಂದೆ ಅದನ್ನು ನೋಡಿಬಿಡ್ತಾರೆ. ಆಮೇಲೆ ದೊಡ್ಡ ಗಲಾಟೆಯನ್ನು ಮಾಡ್ತಾರೆ. ನಮ್ಮ ಓಣಿಯ ಎಲ್ಲರೂ ಉಚಿತವಾಗಿ ಅದರ ಮಜ ಪಡೆಯುತ್ತಾರೆ.”

ಹಾಗಿದ್ರೆ ನಿನಗೊಂದು ಉಪಾಯ. ಕೈಕೇಯಿ ದಶರಥನಿಗೆ ತನ್ನ ಷರತ್ತುಗಳಿಂದ ಹೇಗೆ ಒಪ್ಪಿಸಿದ್ದಳೊ, ಹಾಗೆಯೇ ನೀನೂ ಕೂಡ ಯಾವುದಾದರೂ ಸೂಕ್ತ ಸಂದರ್ಭ ಆಯ್ಕೆ ಮಾಡಿಕೊ. ಮೊದಲು ಸ್ವಲ್ಪ ಸಡಿಲ ಬಿಡು. ಬಳಿಕ ನಿಧಾನವಾಗಿ ಎಳೆದುಕೊಳ್ಳಬೇಕು. ಆಗ ನೋಡು, ನಾನು ಹೇಳಿದಂತೆ ಆಗದಿದ್ರೆ ಕೇಳು.”

ಕಾವ್ಯಾ ಸಂದರ್ಭಕ್ಕಾಗಿ ತಡಕಾಡತೊಡಗಿದಳು. ಬಹುಶಃ ಈ ಸಲ ಕಾವ್ಯಾಳ ಮನಸ್ಸಿಗೆ ತಕ್ಕಂತೆಯೇ ಆಗಲಿದೆ ಎನಿಸಿತು. ಕೆಲವೇ ದಿನಗಳಲ್ಲಿ ಅವಳು ಮನೆಯಲ್ಲೊಂದು ಸುದ್ದಿ ಅರುಹಿದಳು. ಮೂರನೇ ಪೀಳಿಗೆಯ ಆಗಮನ ಆಗಲಿದೆ ಎನ್ನುವುದೇ ಆ ಸುದ್ದಿಯಾಗಿತ್ತು. ಅತ್ತೆ ಆ ದಿನದಿಂದಲೇ ಇನ್ಮುಂದೆ ನೀನು ಯಾವುದೇ ಭಾರದ ಕೆಲಸ ಮಾಡಬಾರದೆಂದು ಸೂಚನೆ ಕೊಟ್ಟರು. ಮಾವ ಕೂಡ ಖುಷಿಯಿಂದ ತೇಲಿಹೋದರು. ಅಭಯ್‌ ಗಂತೂ ಈಗ ಹೆಂಡತಿಯ ಮೇಲೆ ಪ್ರೀತಿ ಉಕ್ಕಿ ಬರತೊಡಗಿತು. ಅವನು ತನ್ನ ಸ್ನೇಹಿತರ ಜೊತೆ ಕಡಿಮೆ ಬೆರೆಯತೊಡಗಿದ. ಬರಲಿರುವ ತನ್ನ ಕಂದನಿಗಾಗಿ ಆಗಲೇ ಆಟಿಕೆಗಳನ್ನು ತಂದು ಇಡತೊಡಗಿದ. ಅವಳ ಬೇಕು ಬೇಡಗಳನ್ನೆಲ್ಲ ಈಡೇರಿಸತೊಡಗಿದ. ಕಾವ್ಯಾಳಿಗೆ ಖುಷಿಯಿಂದ ಕುಣಿದಾಡುವಂತಾಯಿತು. ಈ ನಗು ಖುಷಿಯ ನಡುವೆ ಷಡ್ಯಂತ್ರ ಕೂಡ ಮೊಳಕೊಡೆಯುತ್ತಿತ್ತು.

8 ತಿಂಗಳು ಮುಗಿಯಿತು. ಕಾವ್ಯಾಳಿಗೆ ಮಡಿಲು ತುಂಬುವ ವಿಧಿ ವಿಧಾನಗಳು ನಡೆದವು. ಮರುದಿನ ಅವಳು ತವರಿಗೆ ಹೋಗಬೇಕಿತ್ತು. ಇಡೀ ರಾತ್ರಿ ಅಭಯ್‌ ಅವಳಿಗೆ ಹಾಗಿರಬೇಕು, ಹೀಗಿರಬೇಕು, ಅದನ್ನು ತಿನ್ನು ಇದನ್ನು ತಿನ್ನು ಎಂಬಂತಹ ಸೂಚನೆಗಳನ್ನು ಕೊಡುತ್ತಲೇ ಇದ್ದ. ಅಭಯ್‌ ಮಾತನಾಡುತ್ತಲೇ ಇದ್ದ. ಕಾವ್ಯಾ ಕೇಳಿಸಿಕೊಳ್ಳುವ ನಾಟಕ ಮಾಡುತ್ತಿದ್ದಳು. ಅವಳ ತಲೆಯಲ್ಲಿ ಬೇರೊಂದು ಕುತಂತ್ರವೇ ನಡೆಯುತ್ತಿತ್ತು.

ಗರ್ಭಾವಸ್ಥೆಯ ಸಮಯ ಪರಿಪೂರ್ಣ ಆದಾಗ ಕಾವ್ಯಾ ಗಂಡು ಮಗುವಿಗೆ ಜನ್ಮ ನೀಡಿದಳು. ಎರಡೂ ಕುಟುಂಬದಲ್ಲಿ ಸಂತೋಷದ ಅಲೆ ತೇಲಿತು. ಸಿಹಿ ವಿತರಣೆ ಕೂಡ ಆಯಿತು. ಅಜ್ಜಿ ತಾತಾ ಕೂಡ ಮೊಮ್ಮಗನನ್ನು ನೋಡಲು ಓಡೋಡಿ ಬಂದರು. ಅಭಯ್‌ ಗೆ ತನ್ನ ಕರುಳ ಕುಡಿಯನ್ನು ನೋಡದೇ ಇರಲು ಆದೀತಾ? ಅವನು ಕಾವ್ಯಾಳ ತವರಿಗೆ ಬಂದ. ಮಗುವನ್ನು ನೋಡುವ ತವಕ ಅವನಿಗೆ ಹೆಚ್ಚಾಗಿತ್ತು. ಅವಳ ಕೈಯಿಂದ ಮಗುವನ್ನು ತನ್ನ ಕೈಗೆ ತೆಗೆದುಕೊಳ್ಳಲು ನೋಡಿದ. ಆದರೆ ಕಾವ್ಯಾ ಮಗುವನ್ನು ಅವನ ಕೈಗೆ ಕೊಡದೆ ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಳು. ಅಭಯ್‌ ಅವಳತ್ತ ಪ್ರಶ್ನಾರ್ಥಕವಾಗಿ ನೋಡಿದ.

“ಅಷ್ಟೊಂದು ಸುಲಭವಾಗಿ ಮಗುವನ್ನು ನಿಮ್ಮ ಕೈಗೆ ಕೊಡಲಾಗುವುದಿಲ್ಲ ಮಹಾಶಯರೇ…..!” ಎಂದು ಕಾವ್ಯಾ ನಾಟಕೀಯವಾಗಿ ಹೇಳಿದಳು.

“ ಈ ಅಮೂಲ್ಯ ರತ್ನಕ್ಕೆ ಬದಲಿಗೆ ಏನು ಬೇಕಾದರೂ ಕೇಳಿ ರಾಣಿಯವರೇ,” ಅಭಯ್‌ ಕೂಡ ಅವಳ ಮಾತಿನಂತೆ ಹೇಳಿದ.

“ನೀವು ನಿಜವಾದ ಗಂಡಸೇ ಆಗಿದ್ದರೆ ಸುಳ್ಳು ಭರವಸೆ ಕೊಡಬಾರದು,” ಕಾವ್ಯಾ ಅವನ ಪುರುಷತ್ವಕ್ಕೆ ಸವಾಲೆಸೆದಳು.

“ಪ್ರಾಣ ಹೋದರೂ ಸರಿ ನಿನ್ನ ಮಾತು ನಡೆಸಿಕೊಡ್ತೀನಿ,” ಎಂದು ಹೇಳುತ್ತ ಅವನು ಅವಳ ಮಾತನ್ನು ಚಾಲೆಂಜ್‌ ಆಗಿ ಸ್ವೀಕರಿಸಿದ. ಆ ವಿಧವಾಗಿ ಕಾವ್ಯಾ ಅರ್ಥಪೂರ್ಣ ರೀತಿಯಲ್ಲಿ ಮುಗುಳ್ನಗುತ್ತಾ ಪುಟ್ಟ ಕಂದನನ್ನು ತಂದೆಯ ಮಡಿಲಿಗೆ ಕೊಟ್ಟಳು.

ಅಭಯ್‌ ಮಗುವನ್ನು ಸ್ಪರ್ಶಿಸುತ್ತಾ ಭಾರಿ ಸಂತಸದಿಂದ ಒಮ್ಮೆ ಅದರ ಕೆನ್ನೆಯನ್ನು ಸವರಿದ, ಮತ್ತೊಮ್ಮೆ ಅದರ ಪುಟ್ಟ ಬೆರಳುಗಳನ್ನು ಮುಟ್ಟಿ ನೋಡಿ ಚಕಿತಗೊಂಡ.

“ಈಗ ಈ ರಾಜ ಖುಷಿಗೊಂಡ. ರಾಣಿಯ ಅಪೇಕ್ಷೆ ಏನು ಅಂತ ನಾನು ತಿಳಿದುಕೊಳ್ಳಬಹುದೇ?” ಎಂದು ಮಗುವಿನ ಪುಟ್ಟ ಕಣ್ಣುಗಳನ್ನು ಗಮನಿಸುತ್ತಾ ಕೇಳಿದ.

“ನಮ್ಮದೇ ಆದ ವಿಶ್ವ….. ಅಲ್ಲಿ ನಾವು ಮೂವರು ಮಾತ್ರ ಇರಬೇಕು,” ಕಾವ್ಯಾ ತನ್ನ ಮಾತನ್ನು ಸ್ಪಷ್ಟಪಡಿಸಿದಳು.

ಅಭಯ್‌ ನ ಕೈಕಾಲುಗಳು ಒಮ್ಮೆಲೇ ನಡುಗಿಹೋದ. ಕ್ಷಣಾರ್ಧದಲ್ಲಿಯೇ ಅವನಿಗೆ ವನವಾಸದ ಸ್ಥಿತಿ ಕಣ್ಮುಂದೆ ಬಂತು. ಮಗುವಿನ ಮೇಲಿನ ಹಿಡಿತ ಸಡಿಲವಾಗಿತ್ತು. ಅಷ್ಟರಲ್ಲಿ ಅಮ್ಮ ಬಂದು ಮಗುವನ್ನು ಎತ್ತಿಕೊಂಡರು. ಬಹುಶಃ ಅಮ್ಮ ಕಾವ್ಯಾಳ ಮಾತು ಕೇಳಿಸಿಕೊಂಡಿದ್ದರು ಅನಿಸುತ್ತೆ. ಅಭಯ್‌ ಅವರ ಕಣ್ತಪ್ಪಿಸಿ ಅಲ್ಲಿಂದ ಹೊರನಡೆದ.

ಲೂಟಿಗೊಳಗಾದ ಪ್ರಯಾಣಿಕರಂತೆ ಮೂವರು ಅಲ್ಲಿಂದ ಹೊರಟರು. ಮಗು ಹುಟ್ಟಿದ ಖುಷಿ ಸಪ್ಪೆಯಾಯಿತು. ತಿಂಗಳಾಗುವಷ್ಟರಲ್ಲಿ ಗಂಡಹೆಂಡತಿಯ ಮಾತುಕತೆಯಲ್ಲಿ ಯಾವುದೇ ಸ್ವಾರಸ್ಯ ಉಳಿದಿರಲಿಲ್ಲ. ಮುನಿಸಿಕೊಳ್ಳುವುದು, ಮನ್ನಿಸುವುದು, ತಂಟೆ ತಕರಾರು ಯಾವುದೂ ಇರಲಿಲ್ಲ. ಎಲ್ಲ ಒಂದು ರೀತಿಯ ಯಾಂತ್ರಿಕತೆ. ಅಮ್ಮನಿಗೆ ಒಂದು ರೀತಿಯ ಇಕ್ಕಟ್ಟು. ಅಭಯ್‌ ನಿಗೆ ಒಂದು ರೀತಿಯ ಸಂಕಷ್ಟ. ಅವನಿಗೆ ಮಧ್ಯ ಮಾರ್ಗವೇ ಗೋಚರಿಸುತ್ತಿರಲಿಲ್ಲ.

ಅಭಯ್‌ ಗೆ ಅತ್ತೆಮನೆಯಿಂದ ಮಗುವಿನ ನಾಮಕರಣದ ಆಮಂತ್ರಣ ಬಂದಿತು. ಎಲ್ಲರೂ ಅಲ್ಲಿಗೆ ಹೋಗಿದ್ದರು. ಆದರೆ ಮನಸ್ಸಿಲ್ಲದ ಮನಸ್ಸಿಂದ ಮಗುವಿಗೆ `ಮನು’ ಎಂದು ಹೆಸರಿಟ್ಟರು.

“ಕಾವ್ಯಾ, ಅಭಯ್‌ ಟ್ರಾನ್ಸ್ ಫರ್‌ ತೆಗೆದುಕೊಂಡಿದ್ದಾನೆ. ಮಗುವಿನೊಂದಿಗೆ ನೀನು ಅವನ ಜೊತೆ ಹೋಗಬೇಕು,” ಹೊರಡುವ ಮುನ್ನ ಅತ್ತೆಯ ಬಾಯಿಂದ ಈ ಅಮೃತವಚನದ ಮೇಲೆ ಅವಳಿಗೆ ನಂಬಿಕೆಯೇ ಬರಲಿಲ್ಲ. ಅವಳು ಗಂಡ ಅಭಯ್‌ ಕಡೆ ನೋಡಿದಾಗ, ಅವನು ಮುಖ ಸೊಟ್ಟಗೆ ಮಾಡಿ ನಿಂತುಕೊಂಡಿದ್ದ.

“ನೀವೇಕೆ ಅಷ್ಟು ಮನಸ್ಸಿಗೆ ಖೇದ ಮಾಡಿಕೊಳ್ತೀರಿ? ನಾವು ಮುಕ್ತ ವಾತಾವರಣದಲ್ಲಿ ರೆಕ್ಕೆ ಪಸರಿಸಿದಾಗ ಆವಕಾಶ ಎಷ್ಟು ವಿಶಾಲವಾಗಿದೆ ಎನ್ನುವುದು ಖಾತ್ರಿಯಾಗುತ್ತದೆ,” ಕಾವ್ಯಾ ಗಂಡನತ್ತ ತಿರುಗಿ ಅವನಿಗೆ ಭರವಸೆ ತುಂಬು ಪ್ರಯತ್ನ ಮಾಡಿದಳು.

3 ತಿಂಗಳ ಮನುವನ್ನು ಕರೆದುಕೊಂಡು ಕಾವ್ಯಾ ತನ್ನ ಕನಸಿನ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಳು. ಅದು ನೆಲವಾಗಿರದೆ, ಆಕಾಶವಾಗಿತ್ತು. ಕಾವ್ಯಾಳ ಅಭಿಲಾಷೆಗಳ ರೆಕ್ಕೆಗಳು ಈಗ ಬಲಿತಿದ್ದವು. `ನಾವಿಬ್ಬರು ನಮಗೊಬ್ಬರು’ ಎಂಬ ಕಲ್ಪನೆ ಮಾಡಿಕೊಳ್ಳುತ್ತ ಕಾವ್ಯಾ ಖುಷಿಯನ್ನು ದ್ವಿಗುಣಗೊಳಿಸುತ್ತಾ ಹೊರಟಿದ್ದಳು. ಅವಳು ಪರ್ಸ್‌ ನ್ನು ಒಂದೆಡೆ ಇಟ್ಟು ಮಗುವನ್ನು ತೊಟ್ಟಿಲಿಗೆ ಹಾಕಿ, ಇಡೀ ಮನೆಯೆಲ್ಲಾ ಸುತ್ತುಹಾಕಿ `ಸ್ವೀಟ್‌ ಹೋಮ್’ನ ಫೀಲಿಂಗ್‌ ಮಾಡಿಕೊಳ್ಳತೊಡಗಿದಳು.

`ಹಾಗೆ ನೋಡಿದರೆ ಇದು ಒಂದು ರೀತಿಯಲ್ಲಿ ನನ್ನ ಗೃಹಪ್ರವೇಶವೇ ಆಗಿದೆ. ಇವತ್ತಿನ ದಿನವನ್ನು ನಾನೇಕೆ ವಿಶೇಷವಾಗಿಸಿಕೊಳ್ಳಬಾರದು…..’ ತನ್ನ ಗೆಲುವಿನ ಖುಷಿಯನ್ನು ಆಚರಿಸಿಕೊಳ್ಳಲು ಕಾವ್ಯಾ ಅಡುಗೆಮನೆಯತ್ತ ಹೆಜ್ಜೆ ಹಾಕಿದಳು. ಅಲ್ಲಿ ತನಗೆ ಬೇಕಾದ್ದನ್ನು ಹುಡುಕಿದಳು. ಆದರೆ ಅವಳಿಗೆ ಅದಾವುದೂ ಕೈಗೆ ಸಿಗಲಿಲ್ಲ.

subah-dophar-or-sham-story2-b

`ಹೊಸಬರ ಅಡುಗೆಮನೆ ಇರುವುದು ಹೀಗೆಯೇ…’ ಎಂದು ಕಾವ್ಯಾ ತನಗೆ ತಾನೇ ಹೇಳಿಕೊಳ್ಳುತ್ತಾ ಮುಗುಳ್ನಕ್ಕಳು. ಕೇಸರಿಭಾತ್‌ ಮಾಡೋಣವೆಂದು ಅವಳು ಪ್ಯಾನ್‌ ಒಲೆಯ ಮೇಲೆ ಇಟ್ಟು ತುಪ್ಪ ಹಾಕಿದಳು. ಅಷ್ಟರಲ್ಲಿ ಮನು ಅಳತೊಡಗಿದ. ಆಗ ಅಭಯ್‌ ಬಾತ್‌ ರೂಮಿನಲ್ಲಿದ್ದ. ಕಾವ್ಯಾ ಮಗುವನ್ನು ಸಮಾಧಾನ ಮಾಡಲೆಂದು ಹೊರಗೆ ಬರುವ ಗಡಿಬಿಡಿಯಲ್ಲಿ ಗ್ಯಾಸ್‌ ಬಂದ್ ಮಾಡುವುದನ್ನು ಮರೆತಿದ್ದಳು. ವಾಪಸ್‌ ಬಂದಾಗ ಅಲ್ಲಿನ ಸ್ಥಿತಿ ಕಂಡು ತಲೆ ಚಚ್ಚಿಕೊಳ್ಳುವಂತಾಯಿತು. ಪ್ಯಾನ್‌ ನಲ್ಲಿ ಹಾಕಿದ್ದ ತುಪ್ಪಕ್ಕೆ ಬೆಂಕಿ ಆರಿಸಿಕೊಂಡುಬಿಟ್ಟಿತ್ತು. ತಕ್ಷಣವೇ ಅಲ್ಲಿಗೆ ಧಾವಿಸಿದ ಅಭಯ್‌ ಸಿಲಿಂಡರ್‌ ಬಂದ್‌ ಮಾಡಿ ಪ್ಯಾನ್‌ ನ್ನು ಒಂದು ಮೂಲೆಗೆ ಎಸೆದ. ಇಲ್ಲದಿದ್ದರೆ ದೊಡ್ಡ ಅನಾಹುತವೇ ಆಗುವುದರಲ್ಲಿತ್ತು. ಆ ಬಳಿಕ ಅದೇನೊ ಒಂದು ಮಾಡಿಕೊಂಡು ತಿಂದು ಅಭಯ್‌ಆಫೀಸಿಗೆ ಹೊರಟ.

ಮಧ್ಯಾಹ್ನ 2 ಗಂಟೆಯಾಗುತ್ತಾ ಬಂದಿತ್ತು. ಆದರೆ ಕಾವ್ಯಾಳಿಗೆ ಈವರೆಗೆ ಸ್ನಾನ ಮಾಡಲು ಸಮಯ ಸಿಕ್ಕಿರಲಿಲ್ಲ. ಮನು ಕಣ್ಮುಚ್ಚಿ ನಿದ್ರಿಸುತ್ತಿದ್ದಾನೆಂದು ಗೊತ್ತಾದಾಗ ಅವಳು ಸ್ನಾನದ ಮನೆಗೆ ಹೋದಳು. ಆ ವಿಷಯ ಅದ್ಹೇಗೆ ಮನುವಿಗೆ ಗೊತ್ತಾಯಿತೋ ಏನೋ ಅವನು ಎದ್ದು ಅಳಲು ಶುರು ಮಾಡಿದ.

`ಅಲ್ಲಿ ಆಗಿದ್ದರೆ ಇವನನ್ನು ನೋಡಿಕೊಳ್ಳಲು ಒಬ್ಬರಾದರೂ ಇರುತ್ತಿದ್ದರು…..’ ಕಾವ್ಯಾಳ ಮನಸ್ಸಿನಲ್ಲಿ ಇಡೀ ಚಿತ್ರಣ ಕಣ್ಮುಂದೆ ಹಾದು ಹೋಯಿತು.

`ಗುಲಾಬಿ ಹೂ ಬೇಕಿದ್ದರೆ ಮುಳ್ಳನ್ನು ಸ್ವೀಕರಿಸಲೇ ಬೇಕು ಕಾವ್ಯಾ ರಾಣಿ,’ ಅವಳು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಳು. ಅವಳು ಇಷ್ಟು ಬೇಗ ಪರಾಜಯ ಸ್ವೀಕರಿಸಲು ಸಿದ್ಧಳಿರಲಿಲ್ಲ. ಅವಳು ಒಂದು ಉಪಾಯ ಮಾಡಿದಳು ತೊಟ್ಟಿಲನ್ನು ಬಾಥ್‌ ರೂಮಿನ ಬಾಗಿಲ ಬಳಿಯೇ ಇಟ್ಟುಕೊಂಡು ಆತುರಾತುರದಲ್ಲಿ ಸ್ನಾನದ ಶಾಸ್ತ್ರ ಪೂರೈಸಿದಳು. ಗಡಿಬಿಡಿಯಲ್ಲಿ ಗೌನ್‌ ಧರಿಸಿ, ಒಂದಿಷ್ಟು ತಿಂಡಿ ತಿಂದಳು. ಬಳಿಕ ಕಾವ್ಯಾ ಮನುವನ್ನು ಹಾಸಿಗೆಯ ಮೇಲೆ ಮಲಗಿಸಿ ತಾನೂ ಮಲಗಿದಳು. ದಿನದ ಮೊದಲ ಮೆಟ್ಟಿಲು ಪಾರಾಯಿತು. ಮುಂದಿನ ಘಟನೆಗಳು ಮುಂದುವರಿಯಬೇಕಿತ್ತು……

ಸಂಜೆ ಅಭಯ್‌ ವಾಪಸ್ಸಾದಾಗ ಕಾವ್ಯಾ ಹಳೆಯ ಗೌನ್‌ ನಲ್ಲಿ ಆಲಸ್ಯವನ್ನೇ ಹೊದ್ದುಕೊಂಡವಳಂತೆ ಹಾಸಿಗೆಯ ಮೇಲೆ ಕುಳಿತಿದ್ದಳು. ಮನು ಅವಳ ಕೈಯಲ್ಲಿಯೇ ಇದ್ದ. ಗಂಡ ಬಂದುದನ್ನು ಕಂಡು ಮಗುವನ್ನು ಅವನ ಕೈಗೆ ಕೊಟ್ಟು ಚಹಾ ಮಾಡಲೆಂದು ಅಡುಗೆ ಮನೆಗೆ ಹೋದಳು. ಅಭಯ್‌ ಚಹಾ ಕುಡಿಯುತ್ತಿರುವಾಗಲೇ ಇಡೀ ದಿನದ ಘಟನಾವಳಿಗಳನ್ನು ಅವನ ಮುಂದೆ ಒಪ್ಪಿಸಿದಳು. ಅವನು ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

`ಅಮ್ಮನ ಮಗ….’ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾ, “ನೋಡಿ, ಇವತ್ತು ನನಗೆ ಅಡುಗೆ ಮಾಡುವ ಯಾವ ಆಸಕ್ತಿಯೂ ಇಲ್ಲ. ಹೊರಗೆ ಹೋಗಿ ಊಟ ಮಾಡೋಣ. ಅಂದಹಾಗೆ ಪಿಜ್ಜಾ ತಿಂದು ಬಹಳ ದಿನಗಳೇ ಆದವು,” ಎಂದು ಹೇಳುತ್ತಿದ್ದಂತೆ ಅಭಯ್‌ ಮೇಲೆದ್ದು, “ಬಾ ಹೋಗೋಣ,” ಎಂದ.

“ಬಾನಿಗೊಂದು ಎಲ್ಲೆ ಎಲ್ಲಿದೆ…..” ಎಂದು ಹಾಡು ಗುನುಗುನಿಸುತ್ತಾ, ಮನುವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಅಭಯ್‌ ನ ಸೊಂಟ ಬಳಸಿ ಬೈಕ್‌ ಮೇಲೆ ಜುಮ್ಮೆಂದು ಹೊರಟಳು. ಅಭಯ್‌ ನ ದೇಹದಿಂದ ಹೊರಹೊಮ್ಮುತ್ತಿದ್ದ ಪರ್ಫ್ಯೂಮ್ ಮತ್ತು ಬೆವರಿನ ಮಿಶ್ರ ವಾಸನೆ ಅವಳನ್ನು ಉನ್ಮತ್ತಳಾಗಿಸಿತ್ತು. ಆದರೆ ಆಭಯ್‌ ಮಾತ್ರ ಮೌನವಾಗಿಯೇ ಕುಳಿತಿದ್ದ. ಇನ್ನಷ್ಟು ಹೊತ್ತು ಹೀಗೆಯೇ ಗಾಳಿಯಲ್ಲಿ ತೇಲುತ್ತಾ ಸಾಗುತ್ತಿರಬೇಕೆಂದು ಕಾವ್ಯಾ ಬಯಸುತ್ತಿದ್ದಳು. ಆದರೆ ಕೆಲವೇ ನಿಮಿಷಗಳಲ್ಲಿ ಅಭಯ್‌ ಬೈಕ್‌ ನ್ನು ಒಂದು ಪಿಜ್ಜಾ ಹಟ್‌ ಮುಂದೆ ನಿಲ್ಲಿಸಿದ.

ಅದೆಷ್ಟೋ ತಿಂಗಳುಗಳ ಬಳಕ ಔಟಿಂಗ್‌ ಮಜಾ ಸಿಕ್ಕಿತ್ತು. ಕಾವ್ಯಾ, ಆನಿಯನ್‌, ಕ್ಯಾಪ್ಸಿಕಂ, ಟೊಮೆಟೊ ಪಿಜ್ಜಾ ವಿತ್‌ ಡಬ್ಬಲ್ ಚೀಸ್‌ ತಿಂದಳು. ಜೊತೆಗೆ ಫ್ರೆಂಚ್‌ ಫ್ರೈಸ್‌ ಮತ್ತು ಗಾರ್ಲಿಕ್‌ ಬ್ರೆಡ್‌ ಕೂಡ ತಿಂದಳು. ಮನು ಸ್ವಲ್ಪ ಹೊತ್ತು ಶಾಂತನಾಗಿದ್ದ. ಬಳಿಕ ಅತ್ತು ರಂಪ ಮಾಡತೊಡಗಿದಾಗ ಹಾಲು ಕುಡಿಸಿದಳು. ಅಮ್ಮನ ಮಡಿಲು ಸಿಗುತ್ತಿದ್ದಂತೆ ಅವನು ಅಲ್ಲಿಯೇ ಮಲಗಿಬಿಟ್ಟ.

ಮನೆ ತಲುಪುತ್ತಿದ್ದಂತೆ ಕಾವ್ಯಾ ನಿದ್ರೆಗೆ ಶರಣಾದಳು. ದಿನವಿಡಿಯ ದಣಿವು ಅವಳನ್ನು ನಿದ್ರೆಗೆ ಜಾರುವಂತೆ ಮಾಡಿತು. ಅಭಯ್ ಅವಳ ಕಡೆಯೇ ನೋಡುತ್ತಾ ಹಾಗೆ ಕುಳಿತುಬಿಟ್ಟ. ಕಾವ್ಯಾ ನಿದ್ರೆಗೆ ಜಾರಿ ಸ್ವಲ್ಪ ಹೊತ್ತು ಕೂಡ ಆಗಿರಲಿಲ್ಲ ಅಷ್ಟರಲ್ಲಿಯೇ ಮನು ಕಿರಿಕಿರಿ ಮಾಡತೊಡಗಿದ. ಅರ್ಧ ಅರ್ಧ ಗಂಟೆಗೊಮ್ಮೆ ಹಾಸಿಗೆ ಒದ್ದೆ ಮಾಡಿದ. ಭೇದಿ ಕೂಡ ಆಯಿತು. ಅವನ ಬಟ್ಟೆ ಬದಲಿಸಿ ಬದಲಿಸಿ ಕಾವ್ಯಾ ಸುಸ್ತಾಗಿ ಹೋದಳು. ಅಭಯ್‌ಅವನಿಗೆ ಔಷಧಿ ಹಾಕಿದ. ಆದರೆ ಔಷಧಿ ಅಷ್ಟು ಬೇಗ ಕೆಲಸ ಮಾಡಲಿಲ್ಲ. ಆ ಬಳಿಕ ಅದ್ಹೇಗೊ ನಿದ್ರೆಗೆ ಜಾರಿದ. ಕಾವ್ಯಾ ಕೂಡ ನಿದ್ರಿಸಿದಳು. ಬೆಳಗ್ಗೆ ಎಚ್ಚರವಾದಾಗ 8 ಗಂಟೆ ಆಗಿತ್ತು. ಅಭಯ್‌ ಆಫೀಸಿಗೆ ಹೋಗಲು ರೆಡಿಯಾಗಿದ್ದ.

“ನೋಡಿ, ನೀವು ಇವತ್ತು ಹೊರಗೆ ತಿಂಡಿ ತಿಂದುಕೊಳ್ಳಿ,” ಎಂದು ಕಾವ್ಯಾ ಅಪರಾಧೀ ಪ್ರಜ್ಞೆಯಿಂದ ಹೇಳಿದಳು.

“ಇನ್ನು ಮುಂದೆ ಏನೇನಾಗುತ್ತೋ ನೋಡಬೇಕು…..” ಎಂದು ರಾತ್ರಿಯ ಘಟನೆಯನ್ನು ನೆನಪಿಸಿಕೊಂಡು ಅಭಯ್ ಬಡಬಡಿಸಿದ.

ಗಂಡ ಆಫೀಸಿಗೆ ಹೋಗುತ್ತಿದ್ದಂತೆ ನಳಿನಿಗೆ ಫೋನ್‌ ಮಾಡಿ ರಾತ್ರಿಯ ಘಟನೆಯನ್ನು ವಿವರಿಸಿದಳು.

“ಅದು ಮಜಾಕ್ಕೆ ದೊರೆತ ಸಜೆ ರಾಣಿ. ಏನನ್ನಾದರೂ ಪಡೆದುಕೊಳ್ಳಬೇಕೆಂದರೆ ಒಂದಿಷ್ಟು ಕಳೆದುಕೊಳ್ಳಲೇಬೇಕು…..” ಅಕ್ಕ ಅವಳನ್ನು ರೇಗಿಸಿದಾಗ ಕಾವ್ಯಾ ಏನೂ ಮಾತಾಡಲಿಲ್ಲ.

“ನಿನ್ನೆ ನೀನು ಮನಸೋಕ್ತವಾಗಿ ತಿಂದ ಪಿಜ್ಜಾ ಮಗುವಿಗೆ ಪಚನ ಆಗಿಲ್ಲ ಅನಿಸುತ್ತೆ. ಅದೇ ಕಾರಣದಿಂದ ಮಗುವಿಗೆ ರಾತ್ರಿ ಅನೇಕ ಸಲ ಭೇದಿ ಆಗಿದೆ….” ಅಲ್ಲಿಗೆ ಸೌಮ್ಯಾ ಕೂಡ ಕಾನ್ಛರೆನ್ಸಿಂಗ್‌ ಮುಖಾಂತರ ಅವರ ಮಾತುಕತೆಯಲ್ಲಿ ಸೇರಿಕೊಂಡಿದ್ದಳು.

“ಇದೊಂದು ಹೊಸ ಸಮಸ್ಯೆ ಬಂತಲ್ಲ. ನನ್ನ ಮನಸ್ಸಿಗೆ ಇಷ್ಟ ಆಗುವುದನ್ನು ಕೂಡ ನಾನು ತಿನ್ನುವು ಹಾಗಿಲ್ಲ….” ಎನ್ನುತ್ತಾ ಕಾವ್ಯಾ ಮನುವಿನ ಕಡೆ ನೋಡಿದಳು.

“ನೀನು ಒಂದು ಕೆಲಸ ಮಾಡು ಕಾವ್ಯಾ, ಮಗುವಿಗೆ ಬಾಟಲ್ ಹಾಲು ಕೊಡಲು ಶುರು ಮಾಡು,” ನಳಿನಿ ಮತ್ತೊಂದು ಸಲಹೆ ಕೊಟ್ಟಳು.

“ಆದರೆ ಡಾಕ್ಟರ್‌ ತಿಂಗಳು ಮಗುವಿಗೆ ಎದೆಹಾಲು ಕುಡಿಸಲೇಬೇಕು ಅಂತಾರಲ್ಲ…..” ಕಾವ್ಯಾ ತನ್ನ ಸಂದೇಹ ಹೇಳಿಕೊಂಡಳು.

“ನೀನಂತೂ ಮಹಾಜ್ಞಾನಿಯೇ ಆಗಿಬಿಟ್ಟೆ. ಯಾವ ತಾಯಿ ಮಕ್ಕಳಿಗೆ ಜನ್ಮ ಕೊಡುತ್ತಲೇ ಅಸು ನೀಗುತ್ತಾಳೊ, ಅಂತಹ ಮಕ್ಕಳು ಹೇಗೆ ಬದುಕುಳಿಯುತ್ತವೆ ಎನ್ನುವುದು ನಿನಗೆ ಗೊತ್ತಿರಬೇಕಲ್ಲ…..”

ಸೌಮ್ಯಾಳ ಹೇಳಿಕೆ ಕಾವ್ಯಾಳಿಗೆ ಒಂದಿಷ್ಟೂ ಇಷ್ಟವಾಗಲಿಲ್ಲ. ಆದರೆ ಮನುವಿಗೆ ಬಾಟಲ್ ಹಾಲು ಕುಡಿಸಬೇಕೆಂಬ ವಿಚಾರ ಅವಳ ಮನಸ್ಸಿನಲ್ಲಿ ಫಿಟ್‌ ಆಗಿ ಕುಳಿತುಬಿಟ್ಟಿತು. ಮರುದಿನ ಅಭಯ್‌ ಆಫೀಸಿಗೆ ಹೋಗುತ್ತಿದ್ದಂತೆ ಕಾವ್ಯಾ ಫೀಡಿಂಗ್‌ ಬಾಟಲ್ ತೆಗೆದುಕೊಂಡು ಬಂದು ಅದರಲ್ಲಿ ಹಾಲು ಕುಡಿಸಿದಳು.

ಕಾವ್ಯಾ ಮಗುವಿನ ಗಂಟಲಲ್ಲಿ ಎರಡು ಹನಿ ಹಾಲು ಇಳಿಸಿ ತನ್ನ ಯಶಸ್ಸಿನ ಬಗ್ಗೆ ತಾನೇ ತನ್ನ ಬೆನ್ನು ತಟ್ಟಿಕೊಂಡಳು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಮನು ಕುಡಿದ ಹಾಲನ್ನೆಲ್ಲ ವಾಂತಿ ಮಾಡಿಕೊಂಡ. ದಿಂಬು ಸಹಿತ, ಹೊದಿಕೆ ಕೂಡ ಒದ್ದೆಯಾಯಿತು. ಅವನು ಜೋರಾಗಿ ಅಳಲಾರಂಭಿಸಿದ. ಅದು ಇನ್ನೊಂದು ದೊಡ್ಡ ಸಮಸ್ಯೆಯಂತೆ ಕಾಣಿಸಲಾರಂಭಿಸಿತು.

ಮಗುವಿಗೆ ಮತ್ತೆ ಹಸಿವಾಗಿರಬೇಕು ಎಂದು ಯೋಚಿಸಿ ಅವಳು ಪುನಃ ನಿಪ್ಪಲನ್ನು ಬಾಯಿಗಿಟ್ಟಳು. ಮಗುವಿಗೆ ಅದು ಪಚನ ಆಗಲಿಲ್ಲ. 2-3 ಗಂಟೆಗಳಲ್ಲಿ ಅದು ಭೇದಿಯ ರೂಪದಲ್ಲಿ ಹೊರಗೆ ಹೋಯಿತು.

`ಬಹುಶಃ ಸಂಕಷ್ಟಗಳು ನನ್ನ ಬೆನ್ನು ಬಿಡುವ ಹಾಗೆ ಕಾಣಿಸುತ್ತಿಲ್ಲ,’ ಎಂದು ಕಾವ್ಯಾ ತನಗೆ ತಾನೇ ಹೇಳಿಕೊಂಡಳು. ಆದರೆ ಸಂಜೆಯಾಗುತ್ತಿದ್ದಂತೆ ಪುನಃ ಅಲಂಕರಿಸಿಕೊಂಡು ಸ್ವಾತಂತ್ರ್ಯದ ಆನಂದ ಅನುಭವಿಸಲು ಸಜ್ಜಾದಳು. ಅಭಯ್‌ ಆಫೀಸಿನಿಂದ ಬರುತ್ತಿದ್ದಂತೆ ಮೂವರು ಪುನಃ ಹೊರಗೆ ಸುತ್ತಾಡಲು ಹೊರಟರು.

ಮನುವಿಗೆ ಈಗಲೂ ಬಾಟಲ್ ಹಾಲು ಅಷ್ಟಾಗಿ ಪಚನ ಆಗುತ್ತಿರಲಿಲ್ಲ. ಆದರೂ ಕಾವ್ಯಾ ತನ್ನ ಸೋಲೊಪ್ಪಿಕೊಂಡಿರಲಿಲ್ಲ. ಆ ಕಡೆ ಈ ಕಡೆ ಓಲಾಡುತ್ತಾ ಗಾಡಿ ಚಲಿಸುತ್ತಿತ್ತು. ಒಂದೆಡೆ ಸ್ವಾತಂತ್ರ್ಯ ಮುಕ್ತ ವಾತಾರಣವಿತ್ತು. ಇನ್ನೊಂದೆಡೆ ಜವಾಬ್ದಾರಿಯ ಕೈಕೋಳವಿದ್ದವು. ಯಾವಾಗಲಾದರೂ ಕಾವ್ಯಾ ರೆಕ್ಕೆ ಪಸರಿಸಿಕೊಂಡು ಖುಷಿಪಡುತ್ತಿದ್ದರೆ, ಮರುಕ್ಷಣವೇ ಅವಳ ರೆಕ್ಕೆಗಳು ಮುರುಟುತ್ತಿದ್ದವು. ಈ ರೀತಿ ಬಿಸಿಲು ನೆರಳೆನ್ನುತ್ತ ಅವಳ ದಿನಗಳು ಕಳೆಯುತ್ತಿದ್ದವು. ಆದರೆ ನೆಮ್ಮದಿಯ ರಾತ್ರಿಗಳಿಗಿಂತ, ನೋವಿನ ರಾತ್ರಿಗಳೇ ಹೆಚ್ಚಾಗತೊಡಗಿದ್ದವು.

2 ತಿಂಗಳಾಗುತ್ತ ಬಂದಿತ್ತು. ಅತ್ತೆ ಮಾತ್ರ ಒಂದು ಸಲ ಬಂದು ಮೊಮ್ಮಗನನ್ನು ನೋಡಿಕೊಂಡು ಹೋಗಲಿಲ್ಲ. ಕೇವಲ ಫೋನ್ ನಲ್ಲಿ ಮಾತ್ರ ಅವನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಮನು ಬೆಳೆಯುತ್ತಾ ಹೋದಂತೆ ಅವನನ್ನು ಏಕಾಂಗಿಯಾಗಿ ಸಂಭಾಳಿಸುವುದು ಬಹಳ ಕಷ್ಟಕರ ಎನಿಸತೊಡಗಿತು. ಒಮ್ಮೊಮ್ಮೆ ಅವನು ರಾತ್ರಿಯಿಡೀ ಅಳುತ್ತಿರುತ್ತಾನೆ. ಮತ್ತೊಮ್ಮೆ ಹಾಲು ಕುಡಿಯದೇ ಹಠ ಮಾಡುತ್ತಿರುತ್ತಾನೆ. ಒದ್ದೆ ಡೈಪರ್‌ ಗಳನ್ನು ಬದಲಿಸುವುದು ಅವಳಿಗೆ ಕಷ್ಟಕರವಾಗಿ ಪರಿಣಮಿಸುತ್ತಿತ್ತು.

ಇತ್ತೀಚೆಗೆ ಎಲ್ಲೂ ಹೋಗಲು ಆಗಿರಲಿಲ್ಲ. ಸೌಮ್ಯಾಳ ಫೋನ್‌ ಬಂದಿರಲಿಲ್ಲ. ನಳಿನಿಯ ಜೊತೆ ಚಾಟ್‌ ಮಾಡಲು ಸಾಧ್ಯವಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವಳು ಸಕ್ರಿಯಳಾಗಿರಲಿಲ್ಲ. ಬ್ಯೂಟಿ ಪಾರ್ಲರ್‌ ಗೆ ಹೋಗಿ ತಿಂಗಳುಗಳೇ ಆಗಿಹೋಗಿತ್ತು. ದಿನವಿಡೀ ಮನುವಿನ ಚಾಕರಿ ಮಾಡುವುದೇ ಆಗುತ್ತಿತ್ತು. ನಿದ್ರೆಯ ಕೊರತೆಯಿಂದ ಬಳಲುತ್ತಿದ್ದ ಕಾವ್ಯಾ ನಿದ್ದೆ ಮಾಡುವ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದಳು. ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳು ಈಡೇರದೇ ಅಭಯ್‌ ಕೂಡ ಇತ್ತೀಚೆಗೆ ಅಷ್ಟಿಷ್ಟು ಸಿಡಿಮಿಡಿಗೊಳ್ಳುತ್ತಿದ್ದ. ಮುಕ್ತ ವಾತಾವರಣದಲ್ಲಿ ಹಾರಬೇಕೆಂದು ಕನಸು ಕಾಣುತ್ತಿದ್ದ ಕಾವ್ಯಾ ತನ್ನದೇ ಇಚ್ಛೆಗಳ ವರ್ತುಲದಲ್ಲಿ ಖೈದಿಯಾಗಿ ಉಳಿದಿದ್ದಳು.

ಇತ್ತೀಚೆಗೆ ಮನು ಹೆಚ್ಚು ಕಿರಿಕಿರಿ ಮಾಡುತ್ತಿದ್ದ. ಇಡೀ ದಿನ ಅವನ ರೋದನೆ ನಿಲ್ಲುತ್ತಲೇ ಇರಲಿಲ್ಲ. ಅವನನ್ನು ಏಕಾಂಗಿಯಾಗಿ ಬಿಟ್ಟು ಕೆಲಸದಲ್ಲಿ ಮಗ್ನಳಾದರೆ ಅವನು ಬಾಯಲ್ಲಿ ಏನನ್ನಾದರೂ ಹಾಕಿಕೊಂಡುಬಿಡುತ್ತಿದ್ದ. ಕಳೆದ 2 ದಿನಗಳಿಂದ ಲೂಸ್‌ ಮೋಶನ್‌ ಎಷ್ಟೊಂದು ಹೆಚ್ಚಾಗಿ ಬಿಟ್ಟಿತ್ತಿಂದರೆ ಡ್ರಿಪ್ಸ್ ಹಾಕಿಸುವ ಸ್ಥಿತಿ ಬಂದಿತ್ತು. ಗಾಬರಿಗೊಂಡ ಕಾವ್ಯಾ ಸಮೀಪದಲ್ಲಿಯೇ ಇದ್ದ ಡಾಕ್ಟರ್‌ ಬಳಿ ಹೋದಳು.

ಡಾಕ್ಟರ್‌ ಮಗುವನ್ನು ಪರೀಕ್ಷಿಸಿ ನೋಡಿ, “ಮಗುವಿಗೆ ಹಲ್ಲು ಹುಟ್ಟುವ ಸಮಯವಿದು. ದವಡೆಯಲ್ಲಿ ಕೆರೆತ ಉಂಟಾಗುವ ಕಾರಣದಿಂದ ಮಗುವಿಗೆ ಯಾವಾಗಲೂ ಬಾಯಲ್ಲಿ ಏನನ್ನಾದರೂ ಹಾಕಿಕೊಂಡು ಅಗಿಯುತ್ತಿರಬೇಕು ಅನಿಸುತ್ತೆ. ಹೀಗಾಗಿ ಅವು ಬಾಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಾಕಿಕೊಳ್ಳುತ್ತವೆ. ಅದೇ ಕಾರಣದಿಂದ ಮಗುವಿಗೆ ಇನ್‌ ಫೆಕ್ಷನ್‌ಆಗಿದೆ. ನೀವು ಮಗುವಿಗೆ ಆಟಿಕೆಗಳಲ್ಲಿ ಮಗ್ನವಾಗುಂತೆ ಮಾಡಿ ಹಾಗೂ ಅದನ್ನು ಏಕಾಂಗಿಯಾಗಿ ಬಿಡಬೇಡಿ,” ಎಂದು ಸಾಕಷ್ಟು ಸಲಹೆ ನೀಡಿದರು.

ನಾವು ಮೂವರಷ್ಟೇ ಇರಬೇಕೆಂದು ನಿರ್ಧರಿಸಿದವಳು ನಾನೇ. ಈಗ ನಾಲ್ಕನೇ ವ್ಯಕ್ತಿಯನ್ನು ಎಲ್ಲಿಂದ ಕರೆಸಲಿ….? ಕಾವ್ಯಾಳಿಗೆ ಅಳು ಬಂದುಬಿಟ್ಟಿತು. ಅವಳಿಗೀಗ ಅತ್ತೆಯ ನೆನಪು ಬರುತ್ತಿತ್ತು. ಆದರೆ ತನ್ನದೇ ಇಚ್ಛೆಯಂತೆ ಇವರು ಹಠ ಮಾತ್ರ ಇನ್ನೂ ಕಡಿಮೆಯಾಗಿರಲಿಲ್ಲ.

8 ತಿಂಗಳ ಮನು ಈಗ ಅಂಬೆಗಾಲಿನಲ್ಲಿ ಓಡಾಡುತ್ತಿದ್ದ. ಮಲಗಿ ಎದ್ದು ನಡೆದಾಡಲು ಶುರು ಮಾಡಿದರೆ ನಿಲ್ಲುವ ಮಾತೇ ಇರುತ್ತಿರಲಿಲ್ಲ. ಮನೆಯ ಎಲ್ಲಾ ಸಾಮಾನುಗಳು ಇದ್ದ ಕಡೆ ಇರುತ್ತಿರಲಿಲ್ಲ. ಎಲ್ಲವೂ ಚೆಲ್ಲಾಪಿಲ್ಲಿ. ಒಮ್ಮೊಮ್ಮೆ ಅಭಯನ ಪುಸ್ತಕಗಳು, ಕಾಗದ ಪತ್ರಗಳು ಕೂಡ ಅವನ ಕೈಗೆ ಸಿಕ್ಕು ಚಿಂದಿಚಿಂದಿಯಾಗುತ್ತಿದ್ದವು. ಅವನ ಹಿಂದೆ ಓಡಾಡಿ ಕಾವ್ಯಾಳಿಗೂ ಸುಸ್ತಾಗಿ ಹೋಗುತ್ತಿತ್ತು.

ಅದೊಂದು ದಿನ ಮಧ್ಯಾಹ್ನ ಕಾವ್ಯಾ ಮನುವಿನ ಜೊತೆಗೆ ನಿದ್ರೆಗೆ ಜಾರಿದ್ದಳು. ಮನುವಿಗೆ ಯಾವಾಗ ಎಚ್ಚರವಾಯಿತೊ ಏನೋ, ಅವಳಿಗೆ ಗೊತ್ತೇ ಆಗಲಿಲ್ಲ. ಮಂಚದಿಂದ ಕೆಳಗೆ ಇಳಿಯುವ ಪ್ರಯತ್ನದಲ್ಲಿ ಅವನು ಮುಗ್ಗರಿಸಿ ಬಿದ್ದು ಮಂಚದ ತುದಿ ಅವನ ಹಣೆಗೆ ತಗುಲಿ ರಕ್ತ ಒಸರತೊಡಗಿತು. ಮಗುವಿನ ಆಕ್ರಂದನ ಕಾವ್ಯಾಳನ್ನು ನಿದ್ರೆಯಿಂದ ಎಚ್ಚರಿಸಿತು. ಮಗುವಿನ ಹಣೆಯಿಂದ ರಕ್ತ ಬರುವುದನ್ನು ಕಂಡು ಅವಳ ಧೈರ್ಯ ಕುಸಿದುಹೋಯಿತು. ಅವಳು ತಕ್ಷಣವೇ ಅಭಯ್‌ ಗೆ ಫೋನ್‌ ಮಾಡಿದವಳೇ ತಾನೇ ಸ್ವತಃ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಳು.

“ತಲೆಗೆ ಬಲವಾಗಿ ಪೆಟ್ಟಾಗಿದೆ. 4 ಹೊಲಿಗೆ ಹಾಕಬೇಕಾಗುತ್ತೆ. ನಾನು ನಿಮಗೆ ಮೊದಲೇ ಹೇಳಿದ್ದೆ, ಮಗುವನ್ನು ಏಂಕಾಗಿಯಾಗಿ ಬಿಡಬೇಡಿ ಎಂದು. ಈ ವಯಸ್ಸಿನಲ್ಲಿ ಮಕ್ಕಳು ಬಹಳ ಚಂಚಲವಾಗಿರುತ್ತವೆ. ಅವರನ್ನು ಹದ್ದುಗಣ್ಣಿನಿಂದ ಕಾಯಬೇಕಾಗುತ್ತದೆ,” ಎಂದು ಡಾಕ್ಟರ್‌ ಹೇಳುತ್ತಿದ್ದಂತೆ ಕಾವ್ಯಾಳ ಕಣ್ಣಲ್ಲಿ ಗಂಗೆಯೇ ಪ್ರತ್ಯಕ್ಷಳಾದಳು.

“ನಿನ್ನಿಂದ ಮಗುವನ್ನು ನಿರ್ವಹಿಸಲು ಆಗುವುದಿಲ್ಲ. ಈಗಲೇ ಅಮ್ಮನಿಗೆ ಫೋನ್‌ ಮಾಡು,” ಎಂದು ಅಭಯ್‌ ಜೋರಾಗಿಯೇ ಹೇಳಿದ. ಅವನು ತನ್ನ ಧ್ವನಿಯನ್ನು ಇನ್ನಷ್ಟು ಏರಿಸಬೇಕೆನ್ನುವಷ್ಟರಲ್ಲಿ, ಆಸ್ಪತ್ರೆಯ ಶಿಷ್ಟಾಚಾರಗಳು ಅವನ ನೆನಪಿಗೆ ಬಂದು ತನ್ನ ಬಾಯಿಗೆ ಸೈಲೆನ್ಸರ್‌ ಹಾಕಿಕೊಳ್ಳುವಂತಾಯಿತು. ಮಗುವಿನ ಈ ಸ್ಥಿತಿಗೆ ಅವನು ಕಾವ್ಯಾಳನ್ನೇ ಕಾರಣಕರ್ತಳಾಗಿಸಿದ್ದ. ಕಾವ್ಯಾ ತಕ್ಷಣವೇ ಮೊಬೈಲ್ ‌ತೆಗೆದು ಅತ್ತೆಗೆ ಫೋನ್‌ ಮಾಡಿದಳು.

“ಇಲ್ಲಿ ನೆಟ್‌ ವರ್ಕ್‌ ಸಿಗ್ತಾ ಇಲ್ಲ. ನಾನು ಹೊರಗೆ ಹೋಗಿ ಮಾತಾಡ್ತೀನಿ,” ಕಾವ್ಯಾಳಿಗೆ ಅವಳ ಅಹಂ ಬಹಳಷ್ಟು ನೆಪ ಹುಡುಕಲು ಕಲಿಸಿಬಿಟ್ಟಿತು.

“ನೋಡು ಸೌಮ್ಯಾ, ಬಹು ದೊಡ್ಡ ಸಮಸ್ಯೆ ಆಗಿಬಿಟ್ಟಿದೆ. ಅಭಯ್‌ ತನ್ನ ತಾಯಿ ತಂದೆಯರನ್ನು ಕರೆಸಲು ಹೊರಟಿದ್ದಾರೆ. ನಾನೀಗ ಏನು ಮಾಡಲಿ ಹೇಳು? ಅವರನ್ನು ಬರದಂತೆ ಹೇಗೆ ತಡೆಯಬೇಕು?” ಕಾವ್ಯಾ ಸೌಮ್ಯಾಳಿಗೆ ತನ್ನೆಲ್ಲ ಘಟನಾವಳಿಗಳನ್ನು ವಿವರಿಸಿದಳು.

“ಕಾವ್ಯಾ, ನಾನೀಗ ನನ್ನ ಅತ್ತೆ ಮನೆಗೆ ಬಂದಿರುವೆ. ಇಲ್ಲಿ ಏನೂ ಮಾತಾಡೋಕೆ ಆಗುವುದಿಲ್ಲ. ನೀನು ನಳಿನಿಗೆ ಫೋನ್‌ ಮಾಡಿ ಕೇಳು…..”

ಸೌಮ್ಯಾ ಅವಳ ಮಾತು ಪೂರ್ಣಗೊಳಿಸುವ ಮೊದಲೇ ಹೇಳಿಬಿಟ್ಟಳು.“ನೀನು ಮತ್ತು ಅತ್ತೆ ಮನೆ? ನಿನಗಂತೂ ಅತ್ತೆ ಮಾವನ ಜೊತೆಗೆ ಇರುವುದು ಇಷ್ಟವಾಗುತ್ತಿರಲಿಲ್ಲ ಅಲ್ವೇ…… ಆಕಸ್ಮಿಕವಾಗಿ ನಿನ್ನ ಈ ನಿರ್ಧಾರ…. ನಿನ್ನ ಆರೋಗ್ಯ ಸರಿಯಿದೆ ತಾನೇ…..?” ಈಗ ಅಚ್ಚರಿಗೊಳ್ಳುವ ಸರದಿ ಕಾವ್ಯಾಳದ್ದಾಗಿತ್ತು.

“ಹೌದು ಕಾವ್ಯಾ. ನಾನೂ ಕೂಡ ನಿನ್ನದೇ ಶ್ರೇಣಿಯಲ್ಲಿ ಬರಲಿದ್ದೇನೆ. ನಿನ್ನ ಪರಿಸ್ಥಿತಿ ನೋಡಿ ನನಗೂ ಸರಿಯಾಗಿ ಅರ್ಥವಾಯಿತು. ಕೆಲವು ದಿನಗಳ ಹನಿಮೂನ್‌ ಅವಧಿಯೇನೊ ಸರಿ. ಖಾಯಂ ಆಗಿ ಕುಟುಂಬದವರಿಂದ ದೂರ ಇರುವುದು ಸರಿಯಲ್ಲ. ಭವಿಷ್ಯದಲ್ಲಿ ಅವರ ಅಗತ್ಯ ಉಂಟಾಗುತ್ತದೆ,” ಎಂದು ಹೇಳಿದಾಗ ಸೌಮ್ಯಾಳ ಮಾತಿನಲ್ಲಿ ಸ್ವಾರ್ಥವಿದೆ ಎಂದು ಗೊತ್ತಾಯಿತು.

ತಾನು ಯಾವ ಟೊಂಗೆಯನ್ನು ಆಸರೆಯಾಗಿಸಿಕೊಳ್ಳಬೇಕೆಂದಿದ್ದೆನೋ ಅದೇ ಟೊಂಗೆಗೆ ಕೊಡಲಿಯೇಟು ಬಿದ್ದಂತೆ ಕಾವ್ಯಾಳಿಗೆ ಅನಿಸಿತು.

ಅಷ್ಟೊತ್ತಿನ ತನಕ ಅಭಯ್‌ ತನ್ನ ತಾಯಿ ತಂದೆಗೆ ಫೋನ್‌ ಮಾಡಿಬಿಟ್ಟಿದ್ದ. ಸಂಜೆಯಾಗುವ ಹೊತ್ತಿಗೆ ಅಜ್ಜಿ ತಾತಾ ತಮ್ಮ ಮೊಮ್ಮಗನನ್ನು ನೋಡಿಕೊಳ್ಳಲು ಹಾಜರಾದರು. ಮನುವಿಗೆ ಈವರೆಗೆ ತನ್ನ ಅಪ್ಪ ಅಮ್ಮನ ಜೊತೆಗೆ ಇದ್ದು ಅಭ್ಯಾಸವಾಗಿತ್ತು. ಹೀಗಾಗಿ ಅಪರಿಚಿತ ಮುಖಗಳನ್ನು ನೋಡಿ ಅವನು ಕಾವ್ಯಾಳ ಮಡಿಲಲ್ಲಿ ಅವಿತುಕೊಂಡು ಕುಳಿತ. ಆದರೆ ರಕ್ತಸಂಬಂಧ ಯಾವಾಗಲೂ ತನ್ನತ್ತ ಸೆಳೆದುಕೊಳ್ಳದೇ ಇರದು ಎಂಬಂತೆ, ರಾತ್ರಿಯಾಗುವ ಹೊತ್ತಿಗೆ ಅಜ್ಜಿ ತಾತನೊಂದಿಗೆ ಬೆರೆತು, ರಾತ್ರಿ ಅವರ ಜೊತೆಯೇ ಮಲಗಿದ.

ಮರುದಿನ ಬೆಳಗ್ಗೆ ಕಾವ್ಯಾಳ ಮುಖದಲ್ಲಿ ಕಳೆ ಬಂತು ಹಾಗೂ ಅಭಯ್‌ ನ ತುಟಿಯಲ್ಲಿ ನಗು ಅರಳಿತು. ಅದೆಷ್ಟೋ ತಿಂಗಳ ಬಳಿಕ ನಿಶ್ಚಿಂತತೆಯನ್ನು ಕಂಡರು.

ಮೊಮ್ಮಗನ ಹಿಂದೆ ಓಡಾಡುತ್ತಾ ಅಜ್ಜಿ ತಾತನ ಮಂಡಿನೋವು ಎಲ್ಲಿಯೋ ಮಾಯವಾಗಿ ಹೋಯಿತೊ ಏನೋ. ಹಾಲು ಬ್ರೆಡ್ ಹಾಗೂ ಹೊರಗಿನ ತಿಂಡಿ ತಿಂದು ದಿನ ದೂಡುತ್ತಿದ್ದ ಅವರ ಅಡುಗೆಮನೆಯಲ್ಲೀಗ ವಿಶಿಷ್ಟ ತಿಂಡಿಗಳು ತಯಾರಾಗತೊಡಗಿದವು. ಮನು ಈಗ ಬಾಟಲ್ ಹಾಲು ಬಿಟ್ಟು ಬಟ್ಟಲಲ್ಲಿ ಹಾಲು ಕುಡಿಯಲು ಆರಂಭಿಸಿದ್ದ. ಅಜ್ಜಿ ತಾತಾರೊಂದಿಗೆ ಹೊರಗೆ ಹೋಗಲು ಕಾಡುತ್ತಿದ್ದ.

“ನೀನು ಈ ರೀತಿ ಅಡುಗೆ ಮಾಡಿ ಹಾಕ್ತಾ ಇದ್ರೆ ನಾನು ದಢೂತಿಯಾಗಿ ಬಿಡ್ತೀನಿ,” ಎಂದು ಅಭಯ್‌ ಕಾವ್ಯಾಳಿಗೆ ಹೇಳಿದಾಗ, ಕಾವ್ಯಾಳಿಗೆ ದಾಂಪತ್ಯದ ನಿಜವಾದ ಸ್ವಾರಸ್ಯ ಅರ್ಥವಾಯಿತು.

`ನಾಣ್ಯದ ಇನ್ನೊಂದು ಮುಖ ನನಗೆ ಈವರೆಗೆ ಕಂಡಿರಲಿಲ್ಲ. ನಾನು ಅದೆಷ್ಟು ದೊಡ್ಡ ತಪ್ಪು ಮಾಡ್ತಿದ್ದೆ,’ ಎಂದು ಕಾವ್ಯಾ ತನ್ನನ್ನು ತಾನು ಶಪಿಸಿಕೊಂಡಳು.

“ಮಗುವಿನ ಜೊತೆ 10 ದಿನ ಕಳೆದದ್ದು ಗೊತ್ತೇ ಆಗಲಿಲ್ಲ. ನಾವೀಗ ವಾಪಸ್ಸಾಗಬೇಕು,” ಎಂದು ಬೆಳಗ್ಗೆ ಟಿಫನ್‌ ಮಾಡುತ್ತಾ ಮಾವ ಹೇಳಿದಾಗ, ಕಾವ್ಯಾಳಿಗೆ ಆತಂಕ ಉಂಟಾಯಿತು. ಅವಳು ದಿಗ್ಭ್ರಮೆಯಿಂದ ಅತ್ತೆಯ ಕಡೆ ನೋಡಿದಳು.

“ಹೌದು, ಮನು ಜೊತೆ ನಾನೂ ಮಗುವಾಗಿ ಹೋಗಿದ್ದೆ. ಆದರೂ ಕೂಡ…. ಮಕ್ಕಳಿಗೆ ಅವರದೇ ಆದ ರೀತಿಯಲ್ಲಿ ಜೀವಿಸಲು ಅವಕಾಶ ಕೊಡಬೇಕು,” ಮಾವ ಚಹಾ ಕುಡಿಯುತ್ತಾ ಹೇಳಿದಾಗ, ಅತ್ತೆ ಕೂಡ ಅವರ ಮಾತಿಗೆ ತಮ್ಮ ಒಪ್ಪಿಗೆ ಸೂಚಿಸಿದರು.

“ಊರಿಗೆ ಹೋಗಲೇಬೇಕು. ಆದರೆ ನೀವಷ್ಟೇ ಅಲ್ಲ, ನಾವು ಕೂಡ ನಿಮ್ಮ ಜೊತೆಗೇ ಬರ್ತೀವಿ. ನಾನು ಪುನಃ ನಮ್ಮ ಜಿಲ್ಲಾ ಕೇಂದ್ರಕ್ಕೆ ಟ್ರಾನ್ಸ್ ಫರ್‌ ಕೇಳಿದ್ದೇನೆ. ಅದು ಓಕೆ ಆಗುವ ತನಕ ನೀವು ನಮ್ಮ ಜೊತೆಗೇ ಇರಬೇಕು…..” ಅಭಯ್‌ ಹೇಳಿದಾಗ ಕಾವ್ಯಾ ಅಚ್ಚರಿಯಿಂದ ಅವನ ಕಡೆ ನೋಡಿದಳು.

“ಹಾಸಿಗೆ ಎಷ್ಟೇ ಆರಾಮದಾಯಕವಾಗಿದ್ದರೂ ಮಗ್ಗಲು ಬದಲಿಸದೇ ಮಲಗಲು ಆಗುವುದಿಲ್ಲ. ಹಾಗೆಯೇ ಕುಟುಂಬದಲ್ಲಿ ಕೂಡ ಎಷ್ಟೇ ಸುಖವಿದ್ದರೂ ಮತ್ತೊಬ್ಬರ ಆಶ್ರಯ ಬೇಕೇಬೇಕು,” ಎಂದು ಅಜ್ಜಿ ಹೇಳಿದರು.

“ಹೌದು, ಬೆಳಗ್ಗೆ ಹಾರಿಹೋದ ಹಕ್ಕಿಗಳು ಸಂಜೆ ಮನೆಗೆ ವಾಪಸ್ಸಾಗುತ್ತವೆ. ಒಮ್ಮೊಮ್ಮೆ ರಾತ್ರಿ ತಡವಾಗಬಹುದು. ಆದರೆ ಮರಳುವುದು ಗೂಡಿಗೇ ಅಲ್ವೇ?” ತಾತಾ ಮುಗುಳ್ನಕ್ಕರು.

ಮನು ತನ್ನ ಅಪ್ಪನ ಕೈಬೆರಳು ಹಿಡಿದು ತಾತನ ಪಕ್ಕದಲ್ಲಿ ನಿಂತಿದ್ದ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂವರು ಮುಗುಳ್ನಗುತ್ತಾ ಎಂದಿನಂತೆ ಸಾಗಿತ್ತು…..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ