ಗುಂಡ ಆಫೀಸಿನಿಂದ ಸಂಜೆ ಮನೆಗೆ ಮರಳಿದಾಗ ಇಡೀ ಮನೆ ರಣರಂಗವಾಗಿತ್ತು, ಎಲ್ಲೆಲ್ಲೂ ಗಲೀಜು ಹರಡಿ ಹೋಗಿತ್ತು.

ಮಕ್ಕಳಿಬ್ಬರೂ ಕೊಳಕು ಬಟ್ಟೆಯಲ್ಲೇ, ಕೆದರಿದ ತಲೆ, ಸಿಂಬಳ ಸುರಿಸಿಕೊಂಡು ಆಟ ಆಡುತ್ತಿದ್ದರು. ಮನೆ ತುಂಬಾ ಅವರ ಆಟಿಕೆಗಳು ಹರಡಿಹೋಗಿದ್ದವು. ಒಗೆದ ಬಟ್ಟೆಗಳು ಮಡಿಸದೆ ಸೋಫಾ ಮೇಲೆ, ಟೂಥ್‌ ಪೇಸ್ಟ್, ಬ್ರಶ್‌, ಸೋಪು ಇತ್ಯಾದಿ ಡೈನಿಂಗ್‌ ಟೇಬಲ್ ಮೇಲೆ ಹರಡಿದ್ದವು. ಮಕ್ಕಳು ತಿಂದು ಬಿಸಾಡಿದ ಬಿಸ್ಕೆಟ್‌ ರಾಪರ್‌, ಸಿಹಿ ತಿನಿಸುಗಳ ಕವರ್‌, ಚೆಲ್ಲಾಡಿದ್ದವು ಕಡಲೆಪುರಿ ನೆಲದಲ್ಲಿ ಅನಾಥವಾಗಿ ಬಿದ್ದಿತ್ತು.

ಗುಂಡನಿಗಂತೂ ಇದನ್ನೆಲ್ಲ ಕಂಡು ಗಾಬರಿಯೇ ಆಯ್ತು. ಬಹುಶಃ ಹೆಂಡತಿಗೆ ಜ್ವರ ಬಂದು ತೀರಾ ಮಲಗಿಬಿಟ್ಟಿದ್ದಾಳೇನೋ ಎನಿಸಿತು. ಒಳಗೆ ಹೋಗಿ ನೋಡಿದರೆ ಅವಳು ಆರಾಮಾಗಿ ಮಲಗಿ, ಮೊಬೈಲ್ ‌ನಲ್ಲಿ ವಿಡಿಯೋ ನೋಡುತ್ತಿದ್ದಾಳೆ!

ಗುಂಡನನ್ನು ನೋಡುತ್ತಲೇ ಪುಟ್ನಂಜಿ ಆನಂದದಿಂದ ಕೇಳಿದಳು, “ಡಾರ್ಲಿಂಗ್‌, ಹೇಗಿತ್ತು ಈ ದಿನ ಆಫೀಸ್‌ ಕೆಲಸ?”

ಕಕ್ಕಾಬಿಕ್ಕಿಯಾಗುತ್ತಾ ಗುಂಡ ಪ್ರಶ್ನಿಸಿದ, “ಡಿಯರ್‌, ನೀನು ಹುಷಾರಾಗಿದ್ದಿ ತಾನೇ? ಇದ್ಯಾಕೆ ಮನೆ ಹೀಗೆ ಹಾಳು ಕೊಂಪೆ ಆಗಿದೆ?”

“ಪ್ರತಿ ದಿನ ಆಫೀಸಿನಿಂದ ಬಂದು ಕಾಫಿ ಕುಡಿಯುತ್ತಾ ನೀವು ಹೇಳುವುದು ಒಂದೇ ಮಾತು, ಇಡೀ ದಿನ ಏನು ಮಾಡ್ತಾ ಇರ್ತೀಯಾ…. ಕೆಲಸವಿಲ್ಲ, ಕಾರ್ಯವಿಲ್ಲ ಅಂತ…. ಇವತ್ತು ಅದನ್ನು ನಿಜವಾಗಿಸೋಣ ಅಂತ ಏನೂ ಮಾಡದೆ ಹಾಯಾಗಿ ಕುಳಿತಿದ್ದೇನೆ ರಾತ್ರಿ ಡಿನ್ನರ್‌ ಗೆ ಯಾವ ಹೋಟೆಲ್ ‌ಗೆ ಕರೆದುಕೊಂಡು ಹೋಗ್ತೀರಿ?” ಎನ್ನುವುದೇ?

ಆಸ್ಟ್ರೇಲಿಯಾ ತುಂಬಾ ದುಬಾರಿ ದೇಶವಾದರೂ, ಅಲ್ಲಿನ ಸಾಮಾನ್ಯ ನಾಗರಿಕರಿಗಾಗಿ ಅವರ ಆರೋಗ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಕಾಳಜಿ ಮತ್ತು ಗುಣಮಟ್ಟ ಅತ್ಯುನ್ನತ!

ಒಮ್ಮೆ ಉ.ಕರ್ನಾಟಕದ ಮಧ್ಯಮ ವರ್ಗದ ಕುಟುಂಬವೊಂದು ರಜೆಗಾಗಿ 15 ದಿನಗಳ ಮಟ್ಟಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದಿತ್ತು. ದಂಪತಿ, ಅವರ ತಂದೆ, ಮೊಮ್ಮಕ್ಕಳು ಕಾರಿನಲ್ಲಿ ಸಿಡ್ನಿಯಿಂದ ಮೆಲ್ಬೋರ್ನ್‌ ಗೆ ಸುತ್ತಾಟಕ್ಕೆಂದು ಹೊರಟಿದ್ದರು.

ಇವರ ಹಿಂದಿದ್ದ ಕಾರಿನಲ್ಲಿ  80+ ಆಸ್ಟ್ರೇಲಿಯನ್‌ ಅಜ್ಜಿ ಸಹ ಮೆಲ್ಬೋರ್ನ್‌ ಗೆ ಹೊರಟು ಇವರ ಹಿಂದೆಯೇ ಬರುತ್ತಿದ್ದರು. ಈ ಮೊಮ್ಮಕ್ಕಳು ಆ ಅಜ್ಜಿಗೆ ಆಗಾಗ ಸ್ನೇಹದಿಂದ ಕೈ ಬೀಸುತ್ತಾ ಹುರಿದುಂಬಿಸುತ್ತಿದ್ದರು. ಆ ಅಜ್ಜಿಗೂ ಖುಷಿಯೋ ಖುಷಿ!

ಸ್ವಲ್ಪ ಹೊತ್ತಿನಲ್ಲಿಯೇ ಈ ಅಜ್ಜಿ ಗಮನಿಸುತ್ತಿದ್ದಂತೆ, ಭಾರತೀಯ ಕುಟುಂಬದ ಹಿರಿಯ ತಾತಾ, ಕಿಟಕಿ ಹೊರಗೆ ತಲೆ ಹಾಕಿ ಆಗಾಗ ರಕ್ತ ವಾಂತಿ ಕಾರತೊಡಗಿದರು! ಇದು ಆಗಾಗ ಪುನರಾವರ್ತನೆಗೊಂಡಾಗ ಬೀ ಶಾಕ್‌ ಆದ ಅಜ್ಜಿ, ಭಾರತೀಯ ಕುಟುಂಬ ಹೊಸಬರೆಂದು ಗುರುತಿಸಿ, ಅವರ ಸಹಾಯಕ್ಕೆ ತಕ್ಷಣ ಸಜ್ಜಾದರು.

ತಮ್ಮ ಕಾರನ್ನು ಬದಿಗೆ ನಿಲ್ಲಿಸಿ ಅಜ್ಜಿ ತುರ್ತು ಕರೆ ಮಾಡಿದರು. ಕ್ಷಣಾರ್ಧದದಲ್ಲಿ ಆಸ್ಟ್ರೇಲಿಯನ್‌ ಸರ್ಕಾರದ ಹೆಲಿಕಾಪ್ಟರ್ ಆ್ಯಂಬುಲೆನ್ಸ್ ಕಾಣಿಸಿಕೊಂಡು ತಾತನ ಕಾರಿನ ಮುಂದೆ ಬಂದು ನಿಂತು, ಇವರನ್ನು ತಡೆಯಿತು. ಅದರಲ್ಲಿದ್ದ ಉನ್ನತ ವೈದ್ಯಕೀಯ ಸಿಬ್ಬಂದಿ, ತಕ್ಷಣ ತಾತನ ಹೃದಯಬಡಿತ ಇತ್ಯಾದಿ ತಪಾಸಣೆಗೆ ಬೇಕಾದ ಚಿಕಿತ್ಸೆ ನೀಡಿ, ಆಮ್ಲಜನಕದ ವ್ಯವಸ್ಥೆ ಮಾಡಿದರು. ಆ ಕಡೆಯಿಂದ ವಿಡಿಯೋದಲ್ಲಿ ಕಾಣಿಸಿದ ತಜ್ಞರು, ಎಲ್ಲಾ ಸೂಚನೆ ನೀಡಿ, ಆಪತ್ಕಾಲದಲ್ಲಿ ಅತಿ ಸುರಕ್ಷಿತವಾಗಿ ಜೀವ ಕಾಪಾಡಿದರು. ಸಮಯಕ್ಕೆ ಸಹಕರಿಸಿದ ಆ ಅಜ್ಜಿಗೆ ವಂದಿಸಿ ಇವರನ್ನು ಬೀಳ್ಕೊಂಡರು. ಈ ಎಲ್ಲಾ ಸೇವೆಗಾಗಿ ನಮ್ಮ ಭಾರತೀಯ ಕುಟುಂಬಕ್ಕೆ ಕೇವಲ 3,500 ಡಾಲರ್‌ (ಸುಮಾರು ರೂ. 2,75,000/) ಮಾತ್ರ ಖರ್ಚಾಯಿತು.

ಅವರೆಲ್ಲ ಹೊರಡುವವರೆಗೂ ತೆಪ್ಪಗಿದ್ದ ಮಗರಾಯ, ಜಿಹ್ವಾ ಚಾಪಲ್ಯದ ವೃದ್ಧ ತಂದೆಯತ್ತ ರೇಗಿದ, “ಏನಪ್ಪ ನೀನು, ಎಲೆ ಅಡಕೆ ಮೆಲ್ಲುತ್ತಾ, ಎಲ್ಲೆಂದರಲ್ಲಿ ಉಗುಳಬೇಡ ಅಂದ್ರೆ ಕೇಳಲ್ಲ!”

ಮುಂಜಾನೆ 3 ಗಂಟೆ ಸಮಯ. ಪತ್ನಿ ಕಣ್ಣು ಬಿಡುತ್ತಾ ಏನೋ ವ್ಯತ್ಯಾಸ ಆಗಿದೆಯಲ್ಲ ಮನೆಯಲ್ಲಿ ಎಂದು ನೋಡಿದರೆ ಡಕಾಯಿತರು ಇವರೆಲ್ಲರ ತಲೆಗೆ ಗುರಿಯಿರಿಸಿ. ಮೊದಲು 2 ಹಣ, ಒಡವೆ, ದುಬಾರಿ ವಸ್ತು ಒಪ್ಪಿಸಲು ಹೇಳಿದರು.

ಇವರನ್ನೆಲ್ಲ ಕಟ್ಟಿ ಹಾಕಿ, ಅವರು ಬೇಕಾದ್ದು ದೋಚಿಕೊಂಡರೂ ತೃಪ್ತರಾಗದೆ, “ರೀ, ಮೇಡಂ, ಅಮೆರಿಕಾದಿಂದ ನಿಮ್ಮಣ್ಣ ಕಳಿಸಿದ್ದ 1.5 ಲಕ್ಷದ ಇಬ್ಬರ ಐ ಫೋನ್‌, ನಿಮ್ಮ ಪತಿ ಆ್ಯನಿವರ್ಸರಿಗೆ ಕೊಡಿಸಿದ್ದ 10 ಲಕ್ಷದ ಆ ಹೊಸ ನೆಕ್ಲೆಸ್‌ ಎಲ್ಲಿ ಕೊಡ್ತೀರಾ…..? ಶೂಟ್‌ಮಾಡ್ಬೇಕಾ?” ಎಂದಾಗ ಹಾಸಿಗೆ ಕೆಳಗೆ ಅಡಗಿಸಿದ್ದ ಅವನ್ನು ತೆಪ್ಪಗೆ ಒಪ್ಪಿಸಿ ಆಕೆ ಕೇಳಿದಳು, “ಆದರೆ….. ಇದೆಲ್ಲ ನಿಮಗೆ ಹೇಗೆ ಗೊತ್ತಾಯಿತು?”

ಅದಕ್ಕೆ ಅವರು ಗಹಗಹಿಸಿ ನಗುತ್ತಾ, “ನಮ್ಮನ್ನು ಯಾರು ಅಂದುಕೊಂಡ್ರಿ? ನಾವು ನಿಮ್ಮ ಅಚ್ಚುಮೆಚ್ಚಿನ ಫೇಸ್‌ ಬುಕ್‌ ಫ್ರೆಂಡ್ಸ್! ಹೀಗೆ ರೆಗ್ಯುಲರ್‌ ಆಗಿ ಮುಂದಕ್ಕೂ ಎಲ್ಲವನ್ನೂ ಅಪ್‌ ಡೇಟ್‌ ಮಾಡುತ್ತಿರಿ!” ಎನ್ನುವುದೇ!

ಪತ್ನಿ : ರೀ, ನೀವು ಮಹಾ ಬುದ್ಧಿವಂತರು ಅಂತ ಸದಾ ಕೊಚ್ಚಿಕೊಳ್ತೀರಲ್ಲ, ನನ್ನ ಈ ಪ್ರಶ್ನೆಗೆ ಉತ್ತರಿಸಿ ನೋಡೋಣ…..

ಪತಿ : ಏನದು ನಿನ್ನ ತರಲೆ ಪ್ರಶ್ನೆ

ಪತ್ನಿ : ಎಲ್ಲಾ ದೇವರ ಪಟಗಳಲ್ಲೂ ಪತ್ನಿಯರ ಜೊತೆ ನಿಂತ ಪತಿರಾಯರ ಕೈಗಳಲ್ಲಿ ಆಯುಧ ಇದ್ದೇ ಇರುತ್ತದೆ. ಆದರೆ ರಾಧೆ ಜೊತೆಗೆ ಇರುವ ಕೃಷ್ಣನ ಕೈಲಿ ಕೊಳಲು ಮಾತ್ರ ಇರುತ್ತಲ್ಲ ಏಕೆ….?

ಪತಿ : ಚಿನ್ನಾ, ಅವರೆಲ್ಲ ತಂತಮ್ಮ ಪತ್ನಿಯರ ಜೊತೆ ನಿಂತಿದ್ದರಿಂದ ಸಹಜವಾಗಿ ಆತ್ಮರಕ್ಷಣೆಗೆ ಆಯುಧ ಹಿಡಿದಿದ್ದಾರೆ. ಆದರೆ ಕೃಷ್ಣ ಪ್ರೇಯಸಿ ರಾಧೆಯ ಜೊತೆಗೆ ನಿಂತಿರುವುದರಿಂದ ರೊಮ್ಯಾಂಟಿಕ್‌ ಆಗಿ ಕೊಳಲು ಒಂದಿದ್ದರೆ ಬೇಕಾದಷ್ಟಾಯಿತು!

ಯಾರ ಹೆಂಡ್ತಿ ಚೆನ್ನಾಗಿ ಅಡುಗೆ ಮಾಡ್ತಾಳೋ ಅವರ ಜೀವನ ಸುಗ್ಗಿ!

ಯಾರ ಹೆಂಡತಿಗೆ ಅಡುಗೆಯೇ ಬರಲ್ವೋ ಅವರ ಜೀವನ ಬರೀ ಹೋಟ್ಲು ಮ್ಯಾಗಿ!

ಯಾರ ಹೆಂಡತಿ ಅಡುಗೆಮನೆಗೆ ಹೋಗಲ್ವೋ ಅವರ ಜೀವನ ಪೂರ್ತಿ ಝೋಮ್ಯಾಟೋ ಸ್ವಿಗ್ಗಿ!

ಯಾರಿಗೆ ಮದುವೆಯೇ ಆಗಿಲ್ಲವೋ ಅವರು ಎಲ್ಲಿ ಬೇಕಾದರೂ ನುಗ್ಗಿ ತಿಂದು ಹಿಗ್ಗಿ!

ಯಾರ ಹೆಂಡ್ತಿ ಚೆನ್ನಾಗಿ ಅಡುಗೆ ಮಾಡ್ತಾರೋ ಅಂಥವರು ನಿಯತ್ತಿನಿಂದ ನಡೆಯಿರಿ ತಗ್ಗಿ  ಬಗ್ಗಿ!

ಕೊರೋನಾ ಕಾಟದ ಮಧ್ಯೆಯೂ ಮದುವೆ ಮಂಟಪ ಕಿಕ್ಕಿರಿದು ತುಂಬಿತ್ತು. ಇನ್ನೇನು ಮಾಂಗಲ್ಯ ಧಾರಣೆ ಆಗಬೇಕು ಎನ್ನುವಾಗ, ಪುರೋಹಿತರು ಗಟ್ಟಿಯಾಗಿ ಹೇಳತೊಡಗಿದರು, “ಮಹಾ ಜನರಲ್ಲಿ ವಿನಂತಿ…ಇತ್ತೀಚೆಗೆ ಎಲ್ಲೆಲ್ಲೂ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾಂಗೋಪಾಂಗವಾಗಿ ಮದುವೆ ನಡೆದು 3-4 ತಿಂಗಳಲ್ಲೇ ವಿಚ್ಛೇದನ ಆಗುವ ಬದಲು ಈ ಮದುವೆ ಯಾರಿಗೆ ಇಷ್ಟವಿಲ್ಲವೋ, ಏನಾದರೂ ಆಕ್ಷೇಪಣೆ ಇದೆಯೋ ತಕ್ಷಣ ಮುಂದೆ ಬಂದು ಹೇಳಿಬಿಡಿ….”

ಕಿಕ್ಕಿರಿದ ಅಷ್ಟೂ ಜನರ ನಡುವೆ ನುಗ್ಗಿಕೊಂಡು ಒಬ್ಬ ಯುವತಿ ಕಂಕುಳಲ್ಲಿ ಕೈಗೂಸನ್ನು ಹೊತ್ತು, ಕಷ್ಟಪಟ್ಟು ವೇದಿಕೆ ಕಡೆ ನುಗ್ಗಿ ಬರತೊಡಗಿದಾಗ, ಸಹಜವಾಗಿ ಸೂಕ್ಷ್ಮ ಗ್ರಹಿಸಿದ ಜನಜಂಗುಳಿ ಆಕೆ ವೇದಿಕೆ ಸಮೀಪಿಸಲು ಜಾಗ ಬಿಟ್ಟಿತು.

ಎಲ್ಲರೂ ತಕ್ಷಣ ವರನ ಕಡೆ ತಿರುಗಿ ಕೆಕ್ಕರಿಸಿಕೊಂಡು ನೋಡತೊಡಗಿದರು. ಹಲವರು ಈ ಮದುವೆ ನಡೆದಂತೆಯೇ ಎಂದು ಮುಸಿ ಮುಸಿ ನಗತೊಡಗಿದರು, ವಧು ಅವಳ ತಾಯಿ ತಂದೆ ಕಂಬನಿ ಮಿಡಿಯತೊಡಗಿದರೆ, ವರನ ತಾಯಿ ತಂದೆ ಕಕ್ಕಾಬಿಕ್ಕಿ!

ವರ ಕಣ್ಕಣ್ಣು ಬಿಡುತ್ತಿದ್ದಂತೆಯ ವಧುವಿನ ಅಣ್ಣ ತಮ್ಮ ಮಚ್ಚು ಹಿಡಿದು ಅವನ ರುಂಡ ಚೆಂಡಾಡಲು ಸಿದ್ಧರಾದರು. ವಧು ನೇರವಾಗಿ ವರನ ಕಪಾಳಕ್ಕೆ 4 ಬಾರಿಸಿದಳು.

ಮದುವೆ ಮಂಟಪದಲ್ಲಿ ಸ್ಮಶಾನ ಮೌನ ಆವರಿಸಲು, ಪುರೋಹಿತರು ಮಗು ಹೊತ್ತ ಆ ಯುವತಿಯನ್ನು ಸಾವಧಾನವಾಗಿ ಕೇಳಿದರು, “ಈ ಮದುವೆಯಿಂದ ನಿನಗೆ ಏನಾದರೂ ಸಮಸ್ಯೆ ಇದೆಯೇ….?”

“ಇಲ್ಲ ಸ್ವಾಮಿ…. ನಾನು ಹಿಂದೆ ನಿಂತಿದ್ದೆ. ನೀವು ಏನು ಹೇಳ್ತಿದ್ದೀರೋ ಕೇಳಿಸಿಕೊಳ್ಳೋಣ ಅಂತ ಮುಂದೆ ನುಗ್ಗಿ ಬಂದೆ… ಅಲ್ಲಿ ಏನೂ ಕೇಳಿಸುತ್ತಿರಲಿಲ್ಲ…..” ಎನ್ನುವುದೇ?

ರೋಗಿ : ಡಾಕ್ಟರ್‌, ನನ್ನ ಸೇವೆ ಶುಶ್ರೂಷೆಗೆ ಸುಂದರ ಯುವ ನರ್ಸ್‌ ನ್ನೇ ನೇಮಿಸಿರಿ.

ಡಾಕ್ಟರ್‌ : ರಾಯರೇ, ಈಗಾಗಲೇ ನಿಮಗೆ 80+ ಈ ವಯಸ್ಸಲ್ಲಾ ನೀವು ಹೀಗೇ ಕೇಳೋದು….

ರೋಗಿ : ಅದು ಹಾಗಲ್ಲ, ಹೀಗಾದರೂ ನನ್ನ ಮಗ ನನ್ನನ್ನು ನೋಡಲು ಆಸ್ಪತ್ರೆಗೆ ಬರಲೀ ಅಂತ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ