ಕೊರೋನಾದ ದಿನಗಳ ಒಂದ ಘಟನೆ. ಕೊರೋನಾ ವೈರಸ್‌ ನ ಭೀತಿಯ ಕಾರಣದಿಂದ ವರ ಜೋಸೆಪ್‌ ಕಾರ್ಯಕ್ರಮಗಳಿಂದ ದೂರ ಇರುವುದಾಗಿ ಹೇಳಿಕೊಂಡರು. ಅವರು ವಿಡಿಯೋ ಕಾಲ್ ‌ಮುಖಾಂತರ ಕಲ್ಯಾಣ ಮಂಟಪದಲ್ಲಿ ಉಪಸ್ಥಿತರಿದ್ದ ಅತಿಥಿಗಳ ಎದುರು ತಮ್ಮ ಮದುವೆಯ ಸ್ಪೀಚ್‌ ಕೊಟ್ಟರು ಹಾಗೂ ವಿಡಿಯೋ ಕಾಲ್ ನಲ್ಲಿ ಎಲ್ಲ ಅತಿಥಿಗಳು ಅವರಿಗೆ ಶುಭ ಹಾರೈಸಿದರು.

ಕಾಂಗ್‌ ಟಿಂಗ್‌ ನ ಮನೆ ಹುವಾನ್‌ ಪ್ರಾಂತ್ಯದಲ್ಲಿದೆ. ಲೂನಾರ್‌ ನ್ಯೂ ಇಯರ್‌ ಗಾಗಿ ಇಬ್ಬರು ಜನವರಿ 24ಕ್ಕೆ ಚೀನಾಗೆ ಬಂದಿದ್ದರು. ಜನವರಿ 30ಕ್ಕೆ ಅವರು ಸಿಂಗಪುರಕ್ಕೆ ಮರಳಿದರು.

ಫೆಬ್ರವರಿ 2 ರಂದು ಅವರ ಮದುವೆಯಾಗಲಿತ್ತು. ಮದುವೆ ಸಮಾರಂಭಕ್ಕಾಗಿ ಸಿಂಗಪುರದಲ್ಲಿ ಒಂದು ಹೋಟೆಲಿನಲ್ಲಿ ವಿಶೇಷ ಬುಕ್ಕಿಂಗ್‌ ಮಾಡಲಾಗಿತ್ತು. ಅಂದಹಾಗೆ ಜೋಸೆಫ್‌ ಹಾಗೂ ಕಾಂಗ್‌ ನ ಮದುವೆ ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಚೀನಾದಲ್ಲಿ ನಡೆದಿತ್ತು. ಆದರೆ ಆ ಸಮಯದಲ್ಲಿ ಉಪಸ್ಥಿತರಿರಲು ಸಾಧ್ಯವಾಗದೇ ಇದ್ದವರಿಗಾಗಿ ಈ ಎರಡನೇ ಸಲದ ಮದುವೆ ವ್ಯವಸ್ಥೆ ಮಾಡಲಾಗಿತ್ತು.

ಜೋಸೆಫ್‌ ಹಾಗೂ ಕಾಂಗ್‌ ಚೀನಾದಿಂದ ಮರಳಿದ ಬಳಿಕ ಮದುವೆ ಆಗುತ್ತಿದ್ದುದರಿಂದ ಅವರ ಮದುವೆಗೆ ಬರಲು ಅನೇಕರು ನಿರಾಕರಿಸಿದ್ದರು. ಏಕೆಂದರೆ ಚೀನಾವೇ ಕೊರೋನಾದ ಜನ್ಮ ಸ್ಥಳವಾಗಿತ್ತು ಹಾಗೂ ಇಲ್ಲಿಯತನಕ ಅಲ್ಲಿ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಜೋಸೆಫ್‌ ಹೋಟೆಲಿ‌ನಲ್ಲಿ ಮದುವೆ ದಿನಾಂಕ ಮುಂದೂಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಹೋಟೆಲ್ ‌ಆಡಳಿತ ಮಂಡಳಿ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆಗ ಆ ಜೋಡಿ ತಾವು ಮದುವೆ ಆಗುವುದಂತೂ ಪಕ್ಕಾ. ಆದರೆ ಅತಿಥಿಗಳ ಎದುರು ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದರು.

ಕೊರೋನಾ ಕಾರಣದಿಂದ ವಿಧಿಸಲಾದ ನಿರ್ಬಂಧಗಳ ಕಾರಣದಿಂದ ಕಾಂಗ್‌ ನ ತಾಯಿ ತಂದೆಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಫೆ.2ರ ಮದುವೆಯಲ್ಲಿ 190 ಅತಿಥಿಗಳಷ್ಟೇ ಪಾಲ್ಗೊಂಡಿದ್ದರು. ಜೋಸೆಫ್‌ ಹಾಗೂ ಕಾಂಗ್‌ ಹೋಟೆಲಿ‌ನ ತಮ್ಮ ಕೋಣೆಯಿಂದ ವಿಡಿಯೋ ಕಾನ್‌ ಫ್ರೆನ್ಸಿಂಗ್‌ ಮುಖಾಂತರ ಮದುವೆಯ ಸ್ಪೀಚ್‌ ಕೊಟ್ಟರು ಹಾಗೂ ಎಲ್ಲ ಅತಿಥಿಗಳಿಗೆ ಧನ್ಯವಾದ ತಿಳಿಸಿದರು. ಆಮಂತ್ರಣ ರದ್ದು ಮಾಡಿದ್ದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಡಿ. ಕೊರೋನಾದಿಂದ ಪಾರಾಗಲು ನನ್ನ ಮಗಳ ಮದುವೆಯಲ್ಲಿ ಭಾಗಹಿಸಬೇಡಿ. ನಾವು ಈ ಸಮಾರಂಭವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಿದ್ದೇವೆ. ಅದರ ಜೊತೆ ಜೊತೆಗೆ ರಿಸೆಪ್ಶನ್‌ ಕ್ಯಾನ್ಸಲ್ ಮಾಡಿದ್ದೇವೆ. ಹೀಗಾಗಿ ನಿಮ್ಮನ್ನು ನೀವು ಅಪಾಯಕ್ಕೆ ದೂಡಿಕೊಂಡು ಮದುವೆಗೆ ಬರುವ ಅಗತ್ಯವಿಲ್ಲ.

ಇದು ಒಬ್ಬ ತಂದೆಯ ಸಂದೇಶ. ಅವರು ಮದುವೆಗೂ ಮುನ್ನ ಅತಿಥಿಗಳಿಗೆ ಆಹ್ವಾನ ನೀಡಿದ್ದರು ಹಾಗೂ ಆ ಬಳಿಕ ತಾವೇ ಮದುವೆಗೆ ಬರದಿರಲು ಮೇಲ್ಕಂಡ ರೀತಿಯಲ್ಲಿ ಸಂದೇಶ ಕಳಿಸಿದರು.

ಕೊಲ್ಹಾಪುರದಲ್ಲಿ ವಾಸಿಸುವ ಸಂಜಯ್‌ ಶೀಲಾ ತಮ್ಮ ಮಗಳ ಮದುವೆಗಾಗಿ ಸುಮಾರು 3000ದಷ್ಟು ಆಮಂತ್ರಣ ಪತ್ರಿಕೆಗಳನ್ನು ವಿತರಿಸಿದ್ದರು. ಮದುವೆಗೆ ಅವಶ್ಯ ಬನ್ನಿ ಎನ್ನುವುದು ಅವರ ಆಗ್ರಹವಾಗಿತ್ತು. ಆದರೆ ಸರ್ಕಾರ ಜಾರಿಗೊಳಿಸಿದ ನಿಯಮಗಳಿಂದ ಹೆಚ್ಚು ಜನರು ಒಂದೇ ಕಡೆಗೆ ಸೇರಬಾರದೆಂದು ನಿರ್ಬಂಧ ಹೇರಿತು.

ಯಾವುದೇ ಒಬ್ಬ ಹುಡುಗ ಅಥವಾ ಹುಡುಗಿಗೆ ಮದುವೆಯೆನ್ನುವುದು ಅವರ ಜೀವನದ ಒಂದು ವಿಶೇಷ ಸಂದರ್ಭವಾಗಿರುತ್ತದೆ. ಅವರು ಹಲವು ತಿಂಗಳುಗಳ ಮುಂಚಿನಿಂದಲೇ ಮದುವೆಗೆ ಸಿದ್ಧತೆ ಆರಂಭಿಸುತ್ತಾರೆ. ಹೀಗೆಯೇ ರಶ್ಮಿ ಹಾಗೂ ಕಿರಣ್‌ ಕೂಡ ತಮ್ಮ ಮದುವೆಯ ಬಗ್ಗೆ ಹೆಚ್ಚು ಉತ್ಸಾಹಿತರಾಗಿದ್ದರು.

ಇಬ್ಬರೂ ಕೊಲ್ಹಾಪುರದಲ್ಲಿ ವಾಸಿಸುವವರಾಗಿದ್ದರು. ಮದುವೆ ದಿನಾಂಕ ನಿರ್ಧಾರವಾದಾಗಿನಿಂದ ಅವರಿಬ್ಬರೂ ಆ ದಿನಕ್ಕಾಗಿ ನಿರೀಕ್ಷೆ ಮಾಡುತ್ತಿದ್ದರು. ಜವಳಿ, ಆಭರಣ ಖರೀದಿ, ಅತಿಥಿಗಳ ಲಿಸ್ಟ್ ಸಿದ್ಧಪಡಿಸುವುದು, ಮ್ಯಾಚಿಂಗ್‌ ಡ್ರೆಸ್‌ ಗೆ ಆರ್ಡರ್‌ ಕೊಡುವುದು… ಹೀಗೆ ಎಲ್ಲದರಲ್ಲೂ ಭಾವೀ ದಂಪತಿಗಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು.

ಇಬ್ಬರ ಮನೆಯವರು ಕೂಡ ಮದುವೆಯ ಸಿದ್ಧತೆಯಲ್ಲಿ ಹಗಲು ರಾತ್ರಿ ತೊಡಗಿಕೊಂಡಿದ್ದರು. ರಶ್ಮಿ ಹಾಗೂ ಕಿರಣ್‌ ಆಮಂತ್ರಣ ಪತ್ರಿಕೆಯನ್ನು ತಾವೇ ಆಯ್ಕೆ ಮಾಡಿದ್ದರು. ಎರಡು ಕುಟುಂಬದವರೂ ತಮ್ಮ ತಮ್ಮ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ಕಳಿಸಿಕೊಟ್ಟಿದ್ದರು. ವಾಟ್ಸ್ ಆ್ಯಪ್‌ ನಲ್ಲೂ ಮದುವೆ ಆಮಂತ್ರಣ ಕಳಿಸಿಕೊಟ್ಟಿದ್ದರು. ಮದುವೆಯ ಸಂಪೂರ್ಣ ಸಿದ್ಧತೆ ಹೆಚ್ಚು ಕಡಿಮೆ ಆಗಿಬಿಟ್ಟಿತ್ತು.

ಇಂತಹ ಸಮಯದಲ್ಲಿ ಕೊರೋನಾ ವೈರಸ್‌ ಹಾವಳಿ ಆರಂಭವಾಗಿದ್ದರಿಂದ ಸರ್ಕಾರ ಮಾಲ್ ‌ಗಳು, ಥಿಯೇಟರ್‌ ಗಳು, ಶಾಲೆ ಕಾಲೇಜು ಹಾಗೂ ಸಾರ್ವನಿಕ ಸ್ಥಳಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಆಗ ಎರಡೂ ಕುಟುಂಬದವರಿಗೆ ಮದುವೆ ಸಮಾರಂಭವನ್ನು ನಡೆಸುವುದಾ? ಬಿಡುವುದಾ? ಎಂಬ ಚಿಂತೆ ಕಾಡತೊಡಗಿತು. ಕೊನೆಯಲ್ಲಿ ಅವರು ಮದುವೆಯನ್ನು ಸರಳವಾಗಿ ನಡೆಸಲು ನಿರ್ಧರಿಸಿದರು.

ಬದಲಾದ ವಾತಾವರಣ

ಅದೇ ರೀತಿ ದಾವಣಗೆರೆಯಲ್ಲಿ ವಾಸಿಸುವ ರಿಜ್ವಾನ್‌ ಶೇಖ್‌ ಮದುವೆ ಏಪ್ರಿಲ್ ‌ನಲ್ಲಿ ನಡೆಯಲಿತ್ತು. ಮದುವೆ ಹಾಗೂ ರಿಸೆಪ್ಶನ್ ಎರಡೂ ಏಪ್ರಿಲ್ ‌ರಂದು ನಡೆಸಲು ನಿರ್ಧರಿಸಲಾಗಿತ್ತು. ಏಪ್ರಿಲ್ ರಂದು ಲೀಮಾ ನಡೆಯಲಿತ್ತು. ಆದರೆ ಕೊರೋನಾದ ಕಾರಣದಿಂದ ಅತ್ಯಂತ ಕಡಿಮೆ ಜನರ ಉಪಸ್ಥಿತಿಯಲ್ಲಿ ಮದುವೆ ನಡೆಸಲಾಯಿತು. ರಿಸೆಪ್ಶನ್‌ ಹಾಗೂ ಲೀಮಾನ್ನು ರದ್ದುಪಡಿಸಲಾಯಿತು. ಹನಿಮೂನ್‌ಗಾಗಿ ಮಾಡಲಾದ ಬುಕ್ಕಿಂಗ್‌ ನ್ನು ಕೂಡ ರದ್ದುಗೊಳಿಸಲಾಯಿತು.

ಇದೇ ಸ್ಥಿತಿ ನಿಕಿತಾಳದ್ದು ಕೂಡ ಆಯಿತು. ಹುಬ್ಬಳ್ಳಿಯ ಸಮೀಪ ವಾಸಿಸುವ ನಿಕಿತಾಳ ಮದುವೆ ಮೇ 18ಕ್ಕೆ ನಡೆಯಬೇಕಿತ್ತು. ನಿಕಿತಾಳಿಗೆ ಮದುವೆ ಸಮಾರಂಭ ರದ್ದುಪಡಿಸುವುದು ಸಾಧ್ಯವಿರಲಿಲ್ಲ. ಆದರೆ ಅವರು ತಮ್ಮ ಹನಿಮೂನ್‌ ಟಿಕೆಟ್‌ ಗಳನ್ನು ರದ್ದುಪಡಿಸಿದರು.

ಅವರು ಮೇ 19ಕ್ಕೆ ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿತ್ತು. ಅದಕ್ಕೆ ಖರ್ಚು ಮಾಡಿದ್ದ 62,000 ರೂ. ಫ್ಲೈಟ್‌ ಖರ್ಚು ಮಾತ್ರ ವ್ಯರ್ಥವಾಗಿ ಹೋಯಿತು.

ಮದುವೆ ಸಮಾರಂಭಗಳಲ್ಲಿ ಕಲ್ಯಾಣ ಮಂಟಪಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಮದುವೆಗೆ ಬಂದವರಲ್ಲಿ ಯಾರಿಗೆ ಕೊರೋನಾ ಪಾಸಿಟಿವ್ ‌ಇದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸಮಾರಂಭವನ್ನು ಅತ್ಯಂತ ಸರಳವಾಗಿ ನಡೆಸಬೇಕಾಗುತ್ತದೆ ಮತ್ತು ಸಾಮಾಜಿಕ ಅಂತರದ ಬಗ್ಗೆ ಪರಿಪೂರ್ಣ ಗಮನ ಕೊಡಬೇಕಾಗುತ್ತದೆ. ಅತಿಥಿಗಳು ಮದುವೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ವಿಡಿಯೋ ಸಂದೇಶದ ಮುಖಾಂತರ ತಮ್ಮ ಶುಭ ಹಾರೈಕೆಗಳನ್ನು ತಿಳಿಸುವುದು ಸೂಕ್ತವೆನಿಸುತ್ತದೆ.

ಅಂದಹಾಗೆ, ಕೊರೋನಾದಿಂದ ಜೀವನ ಹಾಗೂ ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಸಾಕಷ್ಟು ಬದಲಾವಣೆಗೊಂಡಿದೆ ಮದುವೆಗಳು ಕೂಡ ಅದಕ್ಕೆ ಹೊರತಾಗಿಲ್ಲ. ಈಗ ಮದುವೆಗಳನ್ನು ಅದ್ಧೂರಿಯಾಗಲ್ಲ, ಜಾಣತನದಿಂದ ಅವನ್ನು ಸ್ಮರಣಾರ್ಹಗೊಳಿಸಬೇಕಾದ ಕಾಲ. ಕೊರೋನಾ ಕಾಲ ನಮಗೆ ಸಾಕಷ್ಟು ಪಾಠ ಕಲಿಸಿದೆ.

ಕಡಿಮೆ ಖರ್ಚಿನಲ್ಲಿ ಮದುವೆ

ನೀವು ಮೊದಲೆಂದಾದರೂ ಕೇವಲ 50-100 ಜನರ ಎದುರು ಮದುವೆ ಮಾಡಿ ಮುಗಿಸುತ್ತೇನೆಂದು ಯೋಚಿಸಿದ್ದಿರಾ? ಬಹಳ ಮುಂಚಿನಿಂದಲೇ ಜನರ ಮನಸ್ಸಿನಲ್ಲಿ ಕುಳಿತಿರುವ ಒಂದು ವಿಚಾರವೆಂದರೆ, ತಮ್ಮ ಮಗ ಅಥವಾ ಮಗಳ ಮದುವೆಗೆ ಹೆಚ್ಚೆಚ್ಚು ಜನರನ್ನು ಕರೆಸಬೇಕು. ತಮ್ಮ ವೈಭವವನ್ನು ತೋರಿಸಬೇಕು ಎಂಬ ಇಚ್ಛೆ ಇರುತ್ತದೆ. ಮದುವೆಯ ಊಟದ ಮೆನುಗಳದ್ದೇ ಆಗಿರಬಹುದು ಅಥವಾ ಅಲಂಕಾರದ್ದೇ ಆಗಿರಬಹುದು. ರಿಸೆಪ್ಶನ್‌ ಆಗಿರಬಹುದು ಅಥವಾ ಇತರ ಕಾರ್ಯಕ್ರಮಗಳು ಜನರು ಇತರರೆದುರು ತಮ್ಮದನ್ನು ತೋರಿಸಿಕೊಳ್ಳುವ ಮನೋಭಾವ ಪ್ರದರ್ಶಿಸುತ್ತಾರೆ. ಅವರು ಒಂದಕ್ಕಿಂತ ಒಂದು ಊಟದ ಮೆನು ಹೆಚ್ಚಾಗಿ ಸಿದ್ಧಪಡಿಸುತ್ತಾರೆ. ಏಕೆಂದರೆ ದೀರ್ಘಕಾಲದ ತನಕ ಜನರು ಪಾರ್ಟಿಯನ್ನು ನೆನಪಿಡಬೇಕೆಂಬುದು ಅವರ ಯೋಚನೆಯಾಗಿರುತ್ತದೆ.

ಒಂದು ವಿಷಯ ನಾವು ಯೋಚಿಸಲೇಬೇಕು. ಅಡುಗೆ ಪದಾರ್ಥಗಳಿಗಾಗಿ ನಾವು ಎಷ್ಟೇ ಖರ್ಚು ಮಾಡಿದರೂ, ಅದರಲ್ಲಿ ಏನಾದರೂ ಕೊರತೆ ಆಗಿಯೇ ಆಗುತ್ತದೆ. ಜನರೂ ಕೂಡ ನಿಮ್ಮ ಊಟದ ವ್ಯವಸ್ಥೆಯನ್ನು ಎರಡೇ ದಿನಗಳಲ್ಲಿ ಮರೆತುಬಿಡುತ್ತಾರೆ. ಮತ್ತೆ ಎಲ್ಲಿಯಾದರೂ ಮದುವೆ ಊಟ ಮಾಡಿ ಬಂದರೆ ಅದರ ಬಗ್ಗೆ ಹೊಗಳಿಕೆ ಶುರು ಮಾಡುತ್ತಾರೆ.

ಸ್ವಲ್ಪ ಹೊತ್ತು ಯೋಚಿಸಿ, ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ಆತಿಥ್ಯ ನೀಡುವವನಿಗೆ ಏನು ತಾನೇ ಸಿಗುತ್ತದೆ? ಒಂದೆರಡು ದಿನಗಳ ಹೊಗಳಿಕೆಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ಎಷ್ಟರಮಟ್ಟಿಗೆ ಸರಿ?

ಏನೂ ಕೊರತೆ ಆಗದಿರಲೆಂದು…..

IB139696-139696161019747-SM479493

ಅಲಂಕಾರದ ನಿಟ್ಟಿನಲ್ಲೂ ಅದನ್ನೇ ನೋಡಲಾಗುತ್ತದೆ. ಮನೆಯನ್ನು ವಧುವಿನಂತೆ ಸಿಂಗರಿಸುವ ಪ್ರಯತ್ನದಲ್ಲಿ ನಾವು ನಮ್ಮ ಬಜೆಟ್‌ ಕಡೆ ಗಮನ ಕೊಡುವುದೇ ಇಲ್ಲ. ಅದಕ್ಕೂ ಮೇಲಾಗಿ ಪೂಜಾರಿ ಪುರೋಹಿತರಿಗಾಗಿ ದಾನದಕ್ಷಿಣೆಗೆಂದು ಯಥೇಚ್ಛವಾಗಿ ಖರ್ಚು ಮಾಡುತ್ತೇವೆ. ಪುರೋಹಿತರ ಮುಖದಲ್ಲಿ ನಾವು ಒಂದೇ ಒಂದು ಅಸಮಾಧಾನದ ಗೆರೆಯನ್ನು ಕಾಣಲು ಇಷ್ಟಪಡುವುದಿಲ್ಲ.

ಅವರ ಆಶೀರ್ವಾದ ಪಡೆದುಕೊಳ್ಳಲು ಯಥೇಚ್ಛವಾಗಿ ಅವರ ಜೇಬು ಭರ್ತಿ ಮಾಡುತ್ತೇವೆ. ಪ್ರತಿಯೊಂದು ಬಗೆಯ ಧಾರ್ಮಿಕ  ವಿಧಿ ವಿಧಾನಗಳನ್ನು ಯಾವುದೇ ಪ್ರಶ್ನೆ ಮಾಡದೇ, ಮಾಡಿ ಮುಗಿಸುತ್ತೇವೆ. ಆ ನಿಟ್ಟಿನಲ್ಲಿ ನಮ್ಮಿಂದ ಯಾವುದೇ ತಪ್ಪು ಆಗದಿರಲಿ ಎಂಬುದೇ ನಮ್ಮ ಮುಖ್ಯ ಧ್ಯೇಯವಾಗಿರುತ್ತದೆ. ವಧುವರರಿಗೆ ಪುರೋಹಿತರ ಆಶೀರ್ವಾದ ದೊರೆತು, ಅವರ ಜೀವನ ಸುಖಮಯವಾಗಿ ಕಳೆಯಬೇಕೆಂಬುದೇ ನಮ್ಮ ಇಚ್ಛೆಯಾಗಿರುತ್ತದೆ.

ಆದರೆ ಸ್ವಲ್ಪ ಯೋಚಿಸಿ, ನಿಜವಾಗಿಯೂ ಹೀಗಾಗಿ ಬಿಡುತ್ತದೆಯೇ? ಮದುವೆಯಲ್ಲಿ ಎಷ್ಟೇ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿರಬಹುದು ಪುರೋಹಿತರು ಹೇಳಿದಂತೆಯೇ ಎಲ್ಲವನ್ನೂ ಮಾಡಿ ಮುಗಿಸಿರಬಹುದು. ಆದರೆ ಜೀವನದಲ್ಲಿ ಏನು ನಡೆಯಬೇಕಿರುತ್ತದೋ ಅದೇ ನಡೆಯುತ್ತದೆ.

ಅದೆಷ್ಟೇ ಗ್ರಹ ನಕ್ಷತ್ರಗಳು, ಜಾತಕ ಮತ್ತು ರೀತಿ ರಿವಾಜುಗಳ ಬಗ್ಗಿ ಕಾಳಜಿ ವಹಿಸಿರಬಹುದು. ಆದರೂ ಸಂಬಂಧ ಮುರಿದುಬೀಳುವುದು, ವಿಚ್ಛೇದನ, ಜಗಳಗಳು ನಡೆದೇ ನಡೆಯುತ್ತವೆ. ಅವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆಗ ನಿಮಗೆ ಅನಗತ್ಯವಾಗಿ ಹಣ ಏಕಾದರೂ ಖರ್ಚು ಮಾಡಿದೆವೋ ಎಂದು ಅನಿಸದೇ ಇರಲಾರದು. ಹಾಗಾಗಿ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಬೇಕು. ಸರಳವಾಗಿ ಮದುವೆ ನಡೆಸಲು ಯೋಚಿಸಿ ಯೋಚಿಸಿ ಭಾರಿ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸುವುದಕ್ಕಿಂತ ನಿಮಗೆ ಬೇಕಾದ ಸೀಮಿತ ಜನರನ್ನು ಆಹ್ವಾನಿಸಿ ಮದುವೆ ಕಾರ್ಯ ನೆರವೇರಿಸುವುದು ಜಾಣತನ.

ಅದರಿಂದಾಗಿ ಭವಿಷ್ಯಕ್ಕಾಗಿ ಹಣ ಉಳಿದಾಗ ನೀವು ನಿಶ್ಚಿಂತರಾಗಿರಲು ಸಾಧ್ಯವಾಗುತ್ತದೆ. ಅನಾವಶ್ಯಕ ಓಡಾಟ ಹಾಗೂ ಮಾನಸಿಕ ಕಿರಿಕಿರಿಯಿಂದಲೂ ಪಾರಾಗಬಹುದು. ಕೊರೋನಾ ಪೂರ್ತಿ ತೊಲಗುವವರೆಗೆ ನೀವು ಹೀಗೆ ಮಾಡಲೇಬೇಕಾಗುತ್ತದೆ.

ಸುತ್ತಾಟಕ್ಕೆ ಕೊಕ್

ಕೊರೋನಾ ಕಾಲದಲ್ಲಿ ಸಂಗಾತಿಯ ಬಗ್ಗೆ ಹೆಚ್ಚು ಅಪೇಕ್ಷೆ ಇಟ್ಟುಕೊಳ್ಳದೆ, ಅವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡುವ ಮದುವೆಗಳು ಮಾತ್ರ ಯಶಸ್ವಿಯಾಗುತ್ತವೆ. ಮದುವೆಯ ಬಳಿಕ ಹನಿಮೂನ್‌ ಗಾಗಿ ಭಾರಿ ಹಣ ಖರ್ಚು ಮಾಡುತ್ತಿದ್ದ ದಿನಗಳನ್ನು ಸದ್ಯಕ್ಕಂತೂ ಮರೆತುಬಿಡಿ. ಈಗ ಮದುವೆಯ ಬಳಿಕ ನೇರವಾಗಿ ಗಂಡನ ಮನೆ, ಅತ್ತೆ ಮಾವ, ನಾದಿನಿ ಮೈದುನ ಇವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಅದೇ ನಿಮ್ಮ ಜೀವನಕ್ಕೆ ಖುಷಿ ತುಂಬುತ್ತದೆ. ಈ ಕಲೆಯನ್ನು ಕರಗತ ಮಾಡಿಕೊಂಡು ನೀವು ದೀರ್ಘಾವಧಿಯ ತನಕ ಸುಖೀ ಜೀವನದ ಆನಂದ ಪಡೆಯಬಹುದು. ನಾದಿನಿ ಮೈದುನರನ್ನು ಸೋದರ ಸೋದರಿ ಎಂಬಂತೆ ಭಾವಿಸಿ ನೀವು ಅಷ್ಟಿಷ್ಟು ದುಃಖ ನುಂಗಿಕೊಳ್ಳಲು ಕಲಿತರೆ, ಅವರ ಖುಷಿಗೆ ಹೆಚ್ಚು ಪ್ರಾಧಾನ್ಯತೆ ಕೊಡಲು ಆರಂಭಿಸಿದರೆ, ನಿಮ್ಮ ಜೀವನದಲ್ಲಿ ಎಂದೂ ಒತ್ತಡವನ್ನು ಎದುರಿಸಬೇಕಾಗಿ ಬರುವುದಿಲ್ಲ. ನೀವು ಅವರ ಜೊತೆ ಸಮಯ ಕಳೆದರೆ, ಅವರಿಗಾಗಿ ಏನನ್ನಾದರೂ ಮಾಡಿದರೆ, ನಿಮ್ಮ ಸಂಬಂಧ ಮತ್ತಷ್ಟು ಮಾಧುರ್ಯತೆ ಪಡೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ನೋ ಆಫೀಸ್‌, ನೋ ತವರುಮನೆ

ಕೊರೋನಾದ ಅಬ್ಬರ ಕಡಿಮೆಯಾದರೂ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ಇದೆ. ಹಾಗಾಗಿ ಎಷ್ಟೋ ಆಫೀಸುಗಳು ಇನ್ನೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಟ್ಟಿವೆ. 24 ಗಂಟೆ ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಇರುವುದರಿಂದ ಪ್ರಯಾಣ ಅಪರೂಪಕ್ಕೆಂಬಂತೆ ಆಗುತ್ತದೆ. ತವರಿಗೂ ಯಾವಾಗ ಬೇಕೆಂದಾಗ ಹೋಗಲು ಆಗುವುದಿಲ್ಲ. ಅತ್ತೆ ಮನೆಯವರಾಗಲಿ, ತವರಿನವರಾಗಲಿ ನೀವು ಹೆಚ್ಚು ಪ್ರಯಾಣ ಮಾಡಬೇಡಿ ಎಂದೇ ಸಲಹೆ ಕೊಡುತ್ತಾರೆ. ತವರಿಗೆ ಹೋಗಲು ಆಗುತ್ತಿಲ್ಲ ಎಂಬ ಖೇದವನ್ನು ಇಟ್ಟುಕೊಳ್ಳದೆ, ನಿಮ್ಮ ಕಾರ್ಯಕೌಶಲದಿಂದ ಮನೆಯವರ ಹೃದಯ ಗೆಲ್ಲಲು ಪ್ರಯತ್ನಿಸಿ.

ಮನೆಯಲ್ಲೇ ಇರುವ ಅವಕಾಶವನ್ನು ನೀವು ನಿಮಗಾಗಿ ದೊರೆತ ವಿಶಿಷ್ಟ ಸಮಯ ಎಂದು ಭಾವಿಸಿ, ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಿ. ಒಮ್ಮೆ ಹೀಗಾಗಿಬಿಟ್ಟರೆ, ಮುಂದಿನ ಜೀವನದಲ್ಲಿ ಅದರ ಲಾಭ ನಿಮಗೆ ಸಿಕ್ಕೇ ಸಿಗುತ್ತದೆ.

ಕೊರೋನಾದ ತೂಗುಗತ್ತಿ

ಮದುವೆಯ ಬಳಿಕ ಕೊರೋನಾದ ತೂಗುಗತ್ತಿ ಯಾವಾಗಲೂ ನಮ್ಮ ತಲೆ ಮೇಲೆ ನೇತಾಡುತ್ತಿರುತ್ತದೆ. ಗಿಫ್ಟ್ ಪ್ಯಾಕ್ ತೆರೆಯಬೇಕೆಂದರೆ ಕೊರೋನಾ ಭೀತಿ, ಹೊರಗೆಲ್ಲಾದರೂ ಸುತ್ತಾಡಲು ಹೋಗಬೇಕೆಂದರೆ ಕೊರೋನಾ ಕರಿನೆರಳು, ಎಲ್ಲಿಯಾದರೂ ಏನನ್ನಾದರೂ ತಿನ್ನಲು ಹೋಗಬೇಕೆಂದರೆ ಕೊರೋನಾದ ತೂಗುಗತ್ತಿ ಸದಾ ನಮ್ಮ ಮುಂದೆ ನೇತಾಡುತ್ತಿರುತ್ತದೆ. ಸಂಬಂಧಿಕರು ಮದುವೆಯ ಬಳಿಕ ನವವಿವಾಹಿತರನ್ನು ಊಟಕ್ಕೆಂದು ಆಹ್ವಾನಿಸುತ್ತಾರೆ. ಇದರಿಂದ ಪರಿಚಯದ ಜೊತೆಗೆ ಪ್ರೀತಿ ಹೆಚ್ಚುತ್ತದೆ. ಆದರೆ ಕೊರೋನಾದ ಬಳಿಕ ಅದೆಲ್ಲ ಸಂಪ್ರದಾಯ ಪಾಲಿಸಲು ಆಗುತ್ತಿಲ್ಲ. ಈಗ ನೀವೇ ಊಟ ತಯಾರಿಸಬೇಕು, ನೀವೇ ಬಡಿಸಬೇಕು. ಅದಕ್ಕಾಗಿ ನೀವು ಬಹಳಷ್ಟು ನೈಪುಣ್ಯತೆ ಬೆಳೆಸಿಕೊಳ್ಳಬೇಕಿದೆ.

ಈಗ ಯಾವುದೇ ಸಂದರ್ಭದಲ್ಲಾದರೂ ಕೊರೋನಾದ ತೂಗುಗತ್ತಿ ನಿಮ್ಮ ತಲೆಯ ಮೇಲೆ ನೇತಾಡುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ನೀವು ಸಂಬಂಧಿಕರ ಜೊತೆ ವಾಟ್ಸ್ ಆ್ಯಪ್‌/ ಫೋನ್‌/ ಝೂಮ್ ಮೀಟಿಂಗ್‌ ಮುಖಾಂತರ ಸಂಪರ್ಕ ಪಡೆಯಬಹುದು. ನಿಮ್ಮ ಊಟ ತಿಂಡಿಯ ಅಭ್ಯಾಸವನ್ನು ನಿಮ್ಮ ಕೈಯಾರೆ ಮಾಡಿಕೊಳ್ಳುವುದರ ಮೂಲಕ ಪೂರೈಸಿಕೊಳ್ಳಬೇಕಿದೆ. ಅದರಲ್ಲಿ ವಿಶಿಷ್ಟ ಖುಷಿ ಇದೆ. ಹಾಗಾಗಿ ಗಾಬರಿ ಬೇಡ. ಕೊರೋನಾ ಕಾಲದಲ್ಲಿ ಮದುವೆಯನ್ನು ಹೊಸ ರೀತಿಯಲ್ಲಿ ಅರ್ಥೈಸಿಕೊಳ್ಳಿ ಹಾಗೂ ಅದರಿಂದ ಪಾಠ ಕಲಿತುಕೊಳ್ಳಿ.

ಗೌರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ