`ಪ್ರೀತಿ ಸುಲಭದ ಸಂಗತಿಯಲ್ಲ,’ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ತಂದೆ ತಾಯಿ, ಸಂಬಂಧಿಕರು, ಸಮಾಜ, ಜಾತಿ, ಧರ್ಮ ಈ ಎಲ್ಲದರ ಗೋಡೆಯನ್ನು ಹಾರಿ ಪ್ರೇಮಿಗಳು ಒಂದಾಗುವುದು ಸುಲಭ ಅಲ್ಲ. ಆದರೆ ಈ ಎಲ್ಲ ಅಡೆತಡೆಗಳನ್ನು ಪಾರು ಮಾಡಿ ಯಾರು ಒಂದಾಗುತ್ತಾರೋ, ತಮ್ಮ ಗುರಿ ಸಾಧಿಸಿಬಿಡುತ್ತಾರೊ ಅವರು ನಾವು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಕುಟುಂಬದ ಜವಾಬ್ದಾರಿ ಅವರ ಹೆಗಲಿಗೆ ಒತ್ತಡ ಹೇರುತ್ತಾ ಹೋದಂತೆ, ಅವರಿಗೆ ಮದುವೆ ಎನ್ನುವುದು ಒಂದು ಬಂಧನ ಎಂಬಂತೆ ಭಾಸವಾಗುತ್ತದೆ. ಆಗ ಅವರಿಗೆ ಮದುವೆಗೂ ಮೊದಲ ದಿನಗಳೇ ಚೆನ್ನಾಗಿದ್ದವು ಎಂದು ಅನಿಸಲಾರಂಭಿಸತೊಡಗುತ್ತದೆ.

ಮುನಿಸಿಕೊಳ್ಳುವುದು, ರಮಿಸುವುದು, ಪರಸ್ಪರರ ಮುಂದೆ ಪ್ರೀತಿ ವ್ಯಕ್ತಪಡಿಸುವುದು ಇವೆಲ್ಲ ಅವರಿಗೆ ವ್ಯರ್ಥ ಸಂಗತಿಗಳು ಎನಿಸುತ್ತವೆ. ಮದುವೆಯಾದ 3-4 ವರ್ಷಗಳಲ್ಲಿ ಅವರ ವೈವಾಹಿಕ ಜೀವನ ರೋಮಾಂಚಕತೆಯನ್ನು ಕಳೆದುಕೊಂಡುಬಿಡುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಾರೆ. ಅಂದಹಾಗೆ, ಜಗಳ ಕೂಡ ಪ್ರೀತಿಯ ಒಂದು ಭಾಗವೇ ಹೌದು. ಪ್ರೀತಿಯಲ್ಲಿ ಅಷ್ಟಿಷ್ಟು ಮುನಿಸು, ಕೋಪ ಎಲ್ಲವೂ ಇರುತ್ತದೆ. ಆದರೆ ಇದೆಲ್ಲ ಮಿತಿ ಮೀರಿದಾಗ ವಿಷಯ ವಿಚ್ಛೇದನದ ತನಕ ತಲುಪುತ್ತದೆ.

ಪ್ರಿಯಾ ಹಾಗೂ ಸನತ್‌ ನಡುವೆಯೂ ಇದೇ ರೀತಿ ಆಯಿತು. ಕುಟುಂಬ ಹಾಗೂ ಸಮಾಜವನ್ನು ಧಿಕ್ಕರಿಸಿ ಇಬ್ಬರೂ ಒಂದಾದರು. ಜೀವನದಲ್ಲಿ ಹೊಸ ರಂಗು ತುಂಬಿದರು. ಕ್ರಮೇಣ ಅವರ ಪ್ರೀತಿಯ ರಂಗು ಇಳಿಯತೊಡಗಿತು. ತಮ್ಮ ಸಂಬಂಧ ಅವರಿಗೆ ಬೇಸರ ಹುಟ್ಟಿಸತೊಡಗಿತು. ಪ್ರೀತಿಗೀತಿ ಅವರಿಗೆ ವ್ಯರ್ಥ ಎನಿಸತೊಡಗಿತು. ಪ್ರೀತಿ ಮಾಡುವವರೆಗೆ ಎಲ್ಲವೂ ಸರಿಯಿತ್ತು. ಆದರೆ ಮದುವೆ ಮಾಡಿಕೊಂಡು ತಾವು ತಪ್ಪು ಮಾಡಿದೆವು ಎನಿಸಲಾರಂಭಿಸಿತು.

ಸಂಬಂಧದಲ್ಲಿ ರೊಮ್ಯಾನ್ಸ್ ಜಾಗೃತಗೊಳಿಸಿ

ಮದುವೆಗೂ ಮುನ್ನ ಇಬ್ಬರು ಪ್ರೇಮಿಗಳೂ ಪರಸ್ಪರರಿಗಾಗಿ ಜೀವ ಕೊಡಲು ಕೂಡ ಸಿದ್ಧರಿರುತ್ತಾರೆ. ಇಬ್ಬರಿಗೂ ಪರಸ್ಪರರ ಒಂದೊಂದು ಮಾತು ಕೂಡ ಖುಷಿ ಕೊಡುತ್ತದೆ. ಆದರೆ ಮದುವೆಯ ಬಳಿಕ ಈ ಎಲ್ಲ ಸಂಗತಿಗಳು ಬೋರ್‌ ಹೊಡೆಸುತ್ತವೆ. ಇದು ಪ್ರತಿಯೊಬ್ಬ ದಂಪತಿಗಳ ಜೀವನದಲ್ಲಿ ಘಟಿಸುವಂಥದ್ದು. ಆದರೆ ಇದರರ್ಥ ಜಗಳವಾಡಿ ನೀವು ಬೇರೆ ಆಗಬೇಕು ಎಂದಲ್ಲ, ನಂತರ ಪಶ್ಚಾತ್ತಾಪ ಪಡಬೇಕು ಎಂದೂ ಅಲ್ಲ, ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸಂಬಂಧವನ್ನು ಪುನಃ ರೊಮ್ಯಾಂಟಿಕ್‌ ಆಗಿಸಬಹುದು.

ದಾಂಪತ್ಯದಲ್ಲಿ ಹೊಸ ಶಕ್ತಿ ತುಂಬುವುದು ಕಷ್ಟದ ಸಂಗತಿಯಲ್ಲ. ಅದಕ್ಕಾಗಿ ಅಷ್ಟಿಷ್ಟು ಬದಲಾವಣೆ ಹಾಗೂ ತಿಳಿವಳಿಕೆ ಬೇಕು. ಇದರಿಂದ ನಿಮ್ಮ ಸಂಗಾತಿಗೆ ಖುಷಿ ದೊರೆಯುವುದಲ್ಲದೆ, ನಿಮ್ಮ ಸಂಬಂಧದಲ್ಲೂ ಹೊಸತನ ಮರುಕಳಿಸುತ್ತದೆ. ನಿಮ್ಮ ಪ್ರೀತಿಯ ತೋಟ ಮತ್ತೆ ಹೊಸತನದಿಂದ ಕಂಗೊಳಿಸಬಹುದು. ಸಂಬಂಧಗಳು ಆಗುವುದೇ ನಿಭಾಯಿಸಲೆಂದೇ ಹೊರತು, ಚಿಕ್ಕಪುಟ್ಟ ಮಾತುಗಳಿಗೆ ಸಂಬಂಧ ಮುರಿದುಕೊಳ್ಳುವುದಕ್ಕಲ್ಲ. ಗಂಡಹೆಂಡತಿ ಇಬ್ಬರೂ ಈ ಸಂಗತಿಯನ್ನು ಅರಿತುಕೊಳ್ಳುವುದು ಅತ್ಯವಶ್ಯ.

ಮದುವೆಯ ಬಳಿಕ ಪ್ರತಿಯೊಬ್ಬ ದಂಪತಿಗಳ ಜವಾಬ್ದಾರಿ ಹೆಚ್ಚುತ್ತದೆ. ಕೆಲಸದ ಒತ್ತಡದಿಂದ ನೀವು ಪರಸ್ಪರರಿಗಾಗಿ ಹೆಚ್ಚು ಸಮಯ ಕೊಡಲು ಆಗುವುದಿಲ್ಲ. ಆದರೆ ಇದರರ್ಥ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ ಎಂದು ಭಾವಿಸಬಾರದು. ಗಂಡಹೆಂಡತಿ ಎಷ್ಟೇ ಬಿಜಿಯಾಗಿದ್ದರೂ ಪರಸ್ಪರಿಗಾಗಿ ಸಮಯ ಕೊಡಬೇಕು. ಪ್ರತಿದಿನ ಸಾಧ್ಯವಾಗದಿದ್ದರೂ, ವಾರಕ್ಕೆ 1 ಸಲವಾದರೂ ಹೊರಗೆ ಹೋಗಿಬನ್ನಿ. ಸ್ಪರ್ಶ, ಅಪ್ಪುಗೆ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಇವೆಲ್ಲ ನಿಮ್ಮ ಸಂಬಂಧದಲ್ಲಿ ಹೊಸತನದ ಮೆರುಗು ನೀಡುತ್ತದೆ.

ಮೊದಲು ನೀವು ಪ್ರೇಮಿಗಳಾಗಿದ್ದಿರಿ. ಈಗ ಗಂಡಹೆಂಡತಿಯಾಗಿರುವಿರಿ. ಜೀವನದಲ್ಲಿ ಅಷ್ಟಿಷ್ಟು ಬದಲಾವಣೆ ಬರುವುದು ಸ್ವಾಭಾವಿಕ ಎನ್ನುವುದು ನೆನಪಿರಲಿ. ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಪಟ್ಟಂತೆ ಮುನಿಸಿಕೊಳ್ಳುವುದು, ಮನ್ನಿಸುವುದು ಇದ್ದೇ ಇರುತ್ತದೆ. ಆದರೆ ಸಣ್ಣ ವಿಷಯವನ್ನು ಗುಡ್ಡ ಮಾಡುವುದು ಸರಿಯಲ್ಲ. ಅದರಿಂದ ಸಂಬಂಧದಲ್ಲಿ ಬಿರುಕು ಬರಲಾರಂಭಿಸುತ್ತದೆ. ಮದುವೆಗೂ ಮುಂಚೆ ಕುಟುಂಬದವರ ವಿರೋಧ ಲೆಕ್ಕಿಸದೇ ಇಬ್ಬರು ಪ್ರೇಮಿಗಳು ಒಂದಾಗುತ್ತಾರೆ. ಮದುವೆಯ ಬಳಿಕ ಅದೇ ಕುಟುಂಬದ ಕುರಿತಂತೆ ಇಲ್ಲಿ ಪರಸ್ಪರರ ಅಹಂನ ಕಾರಣದಿಂದ ಇಬ್ಬರ ನಡುವೆ ಮತಭೇದ ಉಂಟಾಗುತ್ತದೆ. ಇಂಥದರಿಂದ ನಿಮ್ಮನ್ನು ಕಾಪಾಡಿಕೊಳ್ಳಿ. ಏಕೆಂದರೆ ನಿಮ್ಮ ಸಂಬಂಧ ಅಮೂಲ್ಯ. ದಿನದ ಆರಂಭವನ್ನು ಸಂಗಾತಿಗೆ ಒಂದು ಚುಂಬನ ನೀಡುವುದರ ಮೂಲಕ ಆರಂಭಿಸಿ. ಆ ಬಳಿಕ ನೀವೆಷ್ಟು ಉತ್ಸಾಹದಿಂದ ಕೆಲಸ ಮಾಡುವಿರಿ ಎಂಬುದನ್ನು ನೀವೆ ಕಂಡುಕೊಂಡು ಆಶ್ಚರ್ಯಪಡುವಿರಿ.

ಗಂಡಹೆಂಡತಿಗೆ ತಮ್ಮದೇ ಆದ ಒಂದು ಕೋಣೆ ಇರಬೇಕು. ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಬೆಡ್‌ ರೂಮನ್ನು ಅಲಂಕರಿಸಿ. ಹೂಗಳುಳ್ಳ ಹೊದಿಕೆ ಹಾಸಿ. ಸುವಾಸನೆ ಬೀರುವ ಚಿಕ್ಕ ಚಕ್ಕ ಕ್ಯಾಂಡಲ್ ಗಳನ್ನು ಉರಿಸಿ. ಸಂಗಾತಿ ನಿಮ್ಮ ಬಗ್ಗೆ ಉತ್ಸಾಹ ತೋರದಿದ್ದರೆ ಹೇಳಿ.

ಸಂಗಾತಿಯನ್ನು ತಬ್ಬಿಕೊಂಡು ಹಳೆಯ ದಿನಗಳನ್ನು ನೆನಪಿಸಿಕೊಳ್ಳಿ. ಒಂದು ದಿನ ಭೇಟಿಯಾಗದಿದ್ದರೆ ನೀವಿಬ್ಬರು ಎಷ್ಟು ಚಡಪಡಿಸುತ್ತಿದ್ದಿರಿ ಎನ್ನುವುದನ್ನು ನೆನಪಿಸಿಕೊಳ್ಳಿ. ಮನೆಯವರೆಲ್ಲ ನಿದ್ರೆಗೆ ಜಾರಿದ ನಂತರ ನೀವಿಬ್ಬರೂ ಕದ್ದುಮುಚ್ಚಿ ಮಾತನಾಡಿದ್ದನ್ನು, ಚಾಟಿಂಗ್‌ ಮಾಡಿದ್ದನ್ನು, ರಜೆ ದಿನಗಳೆಂದು ಹೊರಗಡೆ ಸುತ್ತಾಡುತ್ತಿದ್ದುದನ್ನು ನೆನಪಿಸಿ. ಆ ಮಾತುಗಳು ಈಗಲೂ ನಿಮಗೆ ಅದೆಷ್ಟು ಕಚಗುಳಿ ಇಡುತ್ತವೆ ಎನ್ನುವುದನ್ನು ಕಂಡುಕೊಳ್ಳಿ.

ಹಾಸಿಗೆಗೆ ಹೋಗುವ ಮುನ್ನ ಸಂಗಾತಿಯ ಮೂಡ್‌ ತಿಳಿದುಕೊಳ್ಳಿ. ಬಳಿಕ ಚುಂಬನ, ಸ್ಪರ್ಶದ ಮುಖಾಂತರ ಒಬ್ಬರ ಕಣ್ಣಲ್ಲಿ ಮತ್ತೊಬ್ಬರು ಇಣುಕಿ ನೋಡಿ ಇದು ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ.

ಉತ್ತುಂಗ ಸುಖದ ಬಳಿಕ ಗಂಡಹೆಂಡತಿ ಮಗ್ಗಲು ಬದಲಿಸಿ ಮಲಗುತ್ತಾರೆ. ಹೀಗೆ ಮಾಡದೆ ಪರಸ್ಪರರ ಬಾಹುಗಳಲ್ಲಿ ಬಂಧಿಸಿ ಪ್ರೀತಿಭರಿತ ಮಾತುಗಳನ್ನಾಡಿ.

ಎಷ್ಟು ಸಾಧ್ಯವೋ ಅಷ್ಟು ಜೊತೆಗಿರಲು ಪ್ರಯತ್ನಿಸಿ. ಮುಂಜಾನೆಯ ಚಹಾ ಅಥವಾ ತಿಂಡಿಯನ್ನು ಜೊತೆ ಜೊತೆಗೆ ಸೇವಿಸಿ. ಮಧ್ಯಾಹ್ನದ ಊಟದ ಸಮಯದಲ್ಲಿ ಹಿಂದೆ ಕಳೆದ ದಿನಗಳ ನೆನಪು ಮಾಡಿಕೊಳ್ಳಿ. ಸಂಗಾತಿಯ ಮುಖದಲ್ಲಿ ಖುಷಿಯ ಗೆರೆಗಳು ಮೂಡದೇ ಇರುವುದಿಲ್ಲ.

ಗಂಡಹೆಂಡತಿಯ ನಡುವೆ ಸಮಾಗಮ ಪ್ರಮುಖ ಪಾತ್ರ ವಹಿಸುತ್ತದೆ. ಅದು ಇಬ್ಬರ ನಡುವಿನ ಬಾಂಧವ್ಯ ಗಟ್ಟಿಗೊಳಿಸುತ್ತದೆ. ಹೀಗಾಗಿ ಅದರ ಬಗ್ಗೆ ಅಸಡ್ಡೆ ತೋರಬೇಡಿ. ಅವಕಾಶ ಸಿಕ್ಕಾಗೆಲ್ಲ ಪ್ರೀತಿಯನ್ನು ಅನುಭವಿಸಿ.

ಲೈಂಗಿಕ ತಜ್ಞರ ಪ್ರಕಾರ, ಗಂಡಹೆಂಡತಿಯ ನಡುವೆ ಬೆಡ್‌ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಬ್ಬರ ನಡುವೆ ಮನಸ್ತಾಪ ಬಂದಾಗ ಸಂಬಂಧದ ವ್ಯಾಖ್ಯೆಯೇ ಬದಲಾಗಿಬಿಡುತ್ತದೆ. ನಿಮ್ಮಿಬ್ಬರ ನಡುವೆ ಎಷ್ಟೇ ಮನಸ್ತಾಪ ಉಂಟಾದರೂ, ನೀವು ಹಾಸಿಗೆ ಬದಲಾಯಿಸುವ ಬಗ್ಗೆ ಮಾತ್ರ ಯಾವುದೇ ಕಾರಣಕ್ಕೂ ಯೋಚಿಸಬೇಡಿ.

ಕೆ. ಸುಮತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ