ಯಾರಾದರೂ ಅತಿಥಿಗಳು ನಮ್ಮ ಮನೆಗೆ ಬಂದಾಗ ಸಹಜವಾಗಿ ಅವರಿಗೆ ಟೀ ಅಥವಾ ಕಾಫಿ ಕೊಟ್ಟು ಸತ್ಕರಿಸುತ್ತೇವೆ. ಮಳೆ ಬರುತ್ತಿದ್ದಾಗಂತೂ ಬಿಸಿ ಬಿಸಿ ಬೋಂಡ ಪಕೋಡ ಜೊತೆ ಬಿಸಿಯಾದ ಒಂದೊಂದೇ ಹನಿ ಚಹಾ ಗುಟುಕರಿಸುತ್ತಿದ್ದರೆ, ಅದರ ಸವಿ ಬಲ್ಲವರೇ ಬಲ್ಲರು! ಬಹಳ ಸುಸ್ತಾಗಿ, ಕೆಲಸದ ಒತ್ತಡ ಹೆಚ್ಚಾಗಿ ಬ್ರೇಕ್ ಬೇಕಾದಾಗ 1 ಕಪ್ ಆಹ್ಲಾದಕರ ಚಹಾ ಬೇಕೇಬೇಕು ಎನಿಸುತ್ತದೆ. ಚಹಾ ಕುಡಿಯಲು ನೆಪ ಹುಡುಕುವುದೇ ಬೇಡ. ಯಾವಾಗ ಬೇಕಾದರೂ ಎಲ್ಲಾದರೂ ಸರಿ, ಚಹಾ ಗುಟುಕರಿಸಲು ಜೀವ ಹಾತೊರೆಯುತ್ತಿರುತ್ತದೆ.
ಹಳೆ ಗೆಳೆಯರು ಅಪರೂಪಕ್ಕೆ ಸಿಕ್ಕಾಗ ಮಾತುಕಥೆ, ಹರಟೆಗೆ ಜೊತೆಗೆ ಚಹಾ ಇರಲೇಬೇಕು. ಅದು ಸಾಧಾರಣ ಟೀ ಅಂಗಡಿ, ದರ್ಶಿನಿ, ರೆಸ್ಟೋರೆಂಟ್ ಅಥವಾ ಸ್ಟಾರ್ ಹೋಟೆಲ್ ಯಾವುದೇ ಇರಲಿ, ಮೊದಲು ನೆನಪಾಗುವುದೇ ಚಹಾ! ಇದನ್ನು ತಯಾರಿಸುವ ವಿಧಾನ ಬೇರೆ ಬೇರೆ ಇರಬಹುದು. ಚೀನಾದಲ್ಲಿ ಇದಕ್ಕೆ ವೆಲ್ ಕಂ ಡ್ರಿಂಕ್ ಎನ್ನುತ್ತಾರೆ, ಜಪಾನಿನಲ್ಲಿ ಅತಿಥಿಗಳು ಬಂದಾಗ ಟೀ ಇಲ್ಲದೆ ಅವರನ್ನು ಎದುರುಗೊಳ್ಳುವಂತೆಯೇ ಇಲ್ಲ.
ಚಹಾದ ಇತಿಹಾಸ
ಇದರ ಇತಿಹಾಸ ಬಹಳ ಪುರಾತನವಾದುದು. ಎಲ್ಲಕ್ಕೂ ಮೊದಲು ಚೀನಾದಲ್ಲಿ ಚಹಾ ಕುಡಿಯುವ ರೂಢಿ ಜಾರಿಗೆ ಬಂತಂತೆ. ನಂತರ 6ನೇ ಶತಮಾನದಲ್ಲಿ ಚೀನಾದಿಂದ ಅದು ಜಪಾನಿಗೆ ಹೋಯಿತು. ಅದು ಅಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 19ನೇ ಶತಮಾನದಲ್ಲಿ ಇದು ಏಷ್ಯಾ ಖಂಡಕ್ಕೆ ಬಂದಿಳಿಯಿತು. ಅಂದು ಭಾರತದಲ್ಲಿ ಶುರುವಾದ ಚಹಾದ ಬೆಳೆ ಇಂದು ವಿಶ್ವದಲ್ಲೇ ಭಾರತಕ್ಕೆ ಅತ್ಯಧಿಕ ಚಹಾ ಉತ್ಪಾದಿಸುವ ರಾಷ್ಟ್ರ ಎಂಬ ಬಿರುದು ತಂದುಕೊಟ್ಟಿದೆ.
ಚಹಾದ ಲಾಭಗಳು
ಚಹಾ ನಮ್ಮ ಮನಸ್ಸನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಆ್ಯಂಟಿ ಇನ್ ಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಡಯಾಬಿಟಿಕ್ ನಂಥ ಗುಣಗಳಿಂದ ಸಮೃದ್ಧವಾಗಿದೆ. ಹಲ್ಲುಗಳಿಗೂ ಇದು ಪೂರಕ. ಚಹಾದಲ್ಲಿ ಪೊಟ್ಯಾಶಿಯಂ ಸಹಿತ ಅನೇಕ ಖನಿಜ ಪದಾರ್ಥಗಳಿವೆ. ಚಹಾದಲ್ಲಿನ ಕೆಟ್ಯಾಚಿನ್, ಪಾಲಿಫಿನಾಲ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಇದನ್ನು ಆರೋಗ್ಯಕರ ಆಗಿಸಿದೆ. ಭಾರತದಲ್ಲಿ ಇದನ್ನು ಉ. ಭಾರತದ ಕೌಸಾನಿ, ದ.ಭಾರತದ ನಾಲ್ಕೂ ರಾಜ್ಯಗಳು, ಪೂ.ಭಾರತದಲ್ಲಿ ಡಾರ್ಜಿಲಿಂಗ್, ಅಸ್ಸಾಂ, ಈಶಾನ್ಯ ರಾಜ್ಯಗಳು ಮತ್ತು ನೀಲಗಿರಿ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ಬ್ಲ್ಯಾಕ್ ಟೀ :
ಇದನ್ನು ಆಕ್ಸಿಡೇಶನ್ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಟೆನೆನ್ ಪ್ರಮಾಣ (ಕಾಫಿಯಲ್ಲಿ ಕೆಫೀನ್‌ಇರುವಂತೆ) 50-65% ಇರುತ್ತದೆ. ಇದು ಚಹಾದ ಅತ್ಯಂತ ಕಾಮನ್ ವೆರೈಟಿ ಆಗಿದೆ. ವಿಶ್ವವಿಡೀ ಸುಮಾರು 75% ಮಂದಿ ಇದನ್ನೇ ಬಳಸುತ್ತಾರೆ. ಇದರಲ್ಲಿ ಹಾಲು, ಸಕ್ಕರೆ ಇರುವುದಿಲ್ಲ. ನಮ್ಮ ಭಾರತದಲ್ಲಿ ಹಾಗೆ ಬೆರೆತ ಚಹಾ ಹೆಚ್ಚು ಜನಪ್ರಿಯ.
ಲಾಭ : ಇದು ಹೃದ್ರೋಗದ ಅಪಾಯಗಳನ್ನು ದೂರವಿಡುತ್ತದೆ. ಡಯಾಬಿಟೀಸ್ ರೋಗಿಗಳಿಗೂ ಇದು ಲಾಭಕರ. ಇದು ರೋಮ ರಂಧ್ರಗಳಲ್ಲಿ ಹೆಚ್ಚಿನ ಬಿಗಿವು ತರುತ್ತದೆ ಹಾಗೂ ಕೆಂಪು ರಕ್ತಕಣಗಳ ರಕ್ಷಣೆ ಮಾಡುತ್ತದೆ.
ಓವಾಂಗ್ ಟೀ : ಚೀನೀ ಭಾಷೆಯಲ್ಲಿ ಓವಾಂಗ್ ಎಂದರೆ ಬ್ಲ್ಯಾಕ್ ಡ್ರಾಗನ್. ಟೆನೆನ್ ದೃಷ್ಟಿಯಿಂದ ನೋಡಿದಾಗ ಅದರ ಪ್ರಮಾಣ ಇದರಲ್ಲಿ ಬ್ಲ್ಯಾಕ್ ಟೀ ಗ್ರೀನ್ ಟೀ ಮಧ್ಯೆ ಬರುತ್ತದೆ. ಇದಕ್ಕೆ ತನ್ನದೇ ಆದ ಅದ್ಭುತ ಪರಿಮಳವಿದೆ. ಹಾಗೆ ನೋಡಿದರೆ ಇದು ಬ್ಲ್ಯಾಕ್ ಟೀ ತರಹವೇ ಇರುತ್ತದೆ. ಆದರೆ ಇದರ ಫರ್ಮೆಂಟೇಶನ್ ಕಡಿಮೆ ಕಾಲಾವಧಿಗೆ ಸೀಮಿತ, ಆ ಕಾರಣದಿಂದ ಇದರ ರುಚಿ ವಿಭಿನ್ನ. ಇದರ ಒಂದು ಕಪ್ ನಲ್ಲಿ ಟೆನೆನ್ ಪ್ರಮಾಣ 30 ಮಿ.ಗ್ರಾಂ ಇರುತ್ತದೆ.
ಲಾಭ : ಇದು ದೇಹದ ತೂಕ ತಗ್ಗಿಸಲು ಪೂರಕ, ಫ್ಯಾಟ್ ತಗ್ಗಿಸುತ್ತದೆ. ಚರ್ಮದ ಮೇಲೆ ಏಜಿಂಗ್ ರಿಯಾಕ್ಷನ್ ತಗ್ಗಿಸಬಲ್ಲದು. ಕ್ಯಾನ್ಸರ್, ಹೃದ್ರೋಗಗಳಿಂದ ಕಾಪಾಡಬಲ್ಲದು.
ಗ್ರೀನ್ ಟೀ :
ಇದರಲ್ಲಿ ಟೆನೆನ್ ಪಾತ್ರ ಕೇವಲ 10-30% ಇರುತ್ತದೆ. ರುಚಿಗಾಗಿ ಇದಕ್ಕೆ ನಿಂಬೆರಸ, ಪುದೀನಾ ಯಾ ಜೇನು ಬೆರೆಸಿಕೊಳ್ಳಬಹುದು, ಆದರೆ ಸಕ್ಕರೆಯಲ್ಲ.
ಲಾಭ : ಕೆಟ್ಯಾಚಿನ್ ಎಂಬ ಹೆಸರಿನ ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾದ ಇದು, ಕ್ಯಾನ್ಸರ್ ನಿಂದ ಹೃದ್ರೋಗದವರೆಗೂ ಎಲ್ಲದರಿಂದಲೂ ಇದು ದೂರವಿಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪ್ರತಿದಿನ 1 ಕಪ್‌ಗ್ರೀನ್ ಟೀ ಕುಡಿಯುವುದರಿಂದ ಕಾರ್ಡಿಯೋ ವ್ಯಾಸ್ಕ್ಯುಲಾರ್ ರೋಗಗಳ ಅಪಾಯ 15% ತಗ್ಗುತ್ತದೆ. ದೇಹದ ಬೊಜ್ಜು ಕರಗಿಸಲು ದಿನಕ್ಕೆ 3 ಸಲ ಗ್ರೀನ್ ಟೀ ಸೇವಿಸಬೇಕು. ಚೀನಾ ಜಪಾನಿನ ಅತ್ಯಧಿಕ ಮಂದಿ ಗ್ರೀನ್ ಟೀ ಸೇವಿಸುತ್ತಾರೆ.
ಮಸಾಲ ಟೀ :
ಈ ಬಗೆಯಲ್ಲಿ ಕಪ್ಪು ಮೆಣಸು, ಲವಂಗ, ಏಲಕ್ಕಿ, ಚಕ್ಕೆ, ಶುಂಠಿ ಇತ್ಯಾದಿಗಳನ್ನು ಅರೆದು ಬಳಸುತ್ತಾರೆ. ಇಂಥ ಮಸಾಲೆಯನ್ನು ಮೊದಲೇ ರೆಡಿ ಮಾಡಿಟ್ಟಿರುತ್ತಾರೆ. ಚಹಾ ತಯಾರಿಸುವಾಗ ಟೀ ಪುಡಿ ಜೊತೆ ಇದನ್ನು ಬೆರೆಸಿ ಕುದಿಸಲಾಗುತ್ತದೆ. ಹೀಗಾಗಿ ಮಸಾಲೆಯ ಘಮಲೂ ಚಹಾಕ್ಕೆ ಬರುತ್ತದೆ. ಇದನ್ನು ಬಲು ಸ್ವಾದಿಷ್ಟ ಚಹಾ ಎಂದು ಸೇವಿಸುತ್ತಾರೆ.
ಲೈಟ್ ಟೀ : ಇದಂತೂ ಬಲು ಮೈಲ್ಡ್ ಫ್ಲೇವರ್ ಎಂದು ಹೆಸರಾಗಿದೆ. ಇದರ ರುಚಿಯೂ ಅಮೋಘ. ಇದರ 1 ಕಪ್ ನಲ್ಲಿ ಕೇವಲ 15 ಮಿ.ಗ್ರಾಂ. ಟೆನೆನ್ ಇರುತ್ತದಷ್ಟೆ.
ಲಾಭ : ಇದು ಹೃದ್ರೋಗಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಶಕ್ತಿ ಕೊಡುತ್ತದೆ. ಕೊಲೆಸ್ಟ್ರಾಲ್ ತಗ್ಗಿಸಲು ಪೂರಕ.
ಹರ್ಬಲ್ ಟೀ :
ಇದು ಮೂಲತಃ ಕೆಲವು ಡ್ರೈ ಫ್ರೂಟ್ಸ್ ಹರ್ಬ್ಸ್ ಕಾಂಬಿನೇಷನ್ ಹೊಂದಿರುತ್ತದೆ. ಇದರಲ್ಲಿ ಟೆನೆನ್ ಇರುವುದಿಲ್ಲ. ಸಕ್ಕರೆಯ ಅಗತ್ಯವೂ ಇಲ್ಲ. ಇದರಲ್ಲಿ ವಿಭಿನ್ನ ಪರಿಮಳ ತೇಲಿ ಬರುತ್ತದೆ.
ಲಾಭ : ಒಂದು ಅಧ್ಯಯನದ ಪ್ರಕಾರ, ಪ್ರತಿದಿನ ಇದರ 2-3 ಕಪ್ ಸೇವನೆಯಿಂದ, ಹೈ ಬಿಪಿ ಇರುವವರಿಗೆ ಅದನ್ನು ಕಂಟ್ರೋಲ್ ಮಾಡಲು ಸಹಕಾರಿ ಎನಿಸಿದೆ.
ಲೆಮನ್ ಟೀ : ಇದೀಗ ಫ್ಯಾಷನ್. ಇದರಲ್ಲಿ ಸಕ್ಕರೆ ಯಾ ಜೇನು, ಪುದೀನಾ, ಒಣ ಶುಂಠಿ, ಮೆಣಸು ಇತ್ಯಾದಿ ಸೇರ್ಪಡುತ್ತವೆ. ಯಾರಿಗೆ ಯಾವುದು ಬೇಕೋ ಬೆರೆಸಿಕೊಳ್ಳಬಹುದು. ಈ ಟೀ ಬಲು ಲಾಭಕರ. ನಿಂಬೆಯ ಗುಣಗಳಿರುವುದರಿಂದ ಅದರ ಲಾಭವನ್ನೂ ಇಲ್ಲಿ ಪಡೆಯಬಹುದಾಗಿದೆ.
ಇದೇ ತರಹ ಮಲ್ಲಿಗೆಯನ್ನು ಕುದಿಸಿ ಅದರ ಸೋಸಿದ ನೀರನ್ನು ಬ್ಲ್ಯಾಕ್ ಟೀಗೆ ಬೆರೆಸಿ `ಜ್ಯಾಸ್ಮಿನ್ ಟೀ’ ಕುಡಿಯುವ ಪರಿಪಾಠ ಉಂಟು.
– ಗಿರಿಜಾ ಶಂಕರ್