– ರಾಘವೇಂದ್ರ ಅಡಿಗ ಎಚ್ಚೆನ್.
ರಾಜ್ಯ ಸರ್ಕಾರವು ಇತ್ತೀಚೆಗಷ್ಟೆ ಸಿನಿಮಾ ಟಿಕೆಟ್ ದರಗಳನ್ನು ಇಳಿಸಿ ಆದೇಶ ಹೊರಡಿಸಿತ್ತು. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳು 200 ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಸಿನಿಮಾ ಟಿಕೆಟ್ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಕಡಿಮೆ ಸೀಟಿನ ಐಶಾರಾಮಿ ಚಿತ್ರಮಂದಿರಗಳಿಗೆ ಮಾತ್ರವೇ ಇದರಿಂದ ವಿನಾಯಿತಿ ನೀಡಲಾಗಿತ್ತು.
ರಾಜ್ಯ ಸರ್ಕಾರದ ಈ ಆದೇಶವನ್ನು ಸಿನಿಮಾ ಪ್ರೇಮಿಗಳು, ಫಿಲಂ ಚೇಂಬರ್ ಮತ್ತು ಕೆಲ ಹಿರಿಯ ಕಲಾವಿದರು ಸ್ವಾಗತಿಸಿದ್ದರು. ಆದರೆ ಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್, ವಿಕೆ ಫಿಲಮ್ಸ್ ಮತ್ತು ಮಲ್ಟಿಪ್ಲೆಕ್ಸ್ನವರು ವಿರೋಧ ವ್ಯಕ್ತಪಡಿಸಿ, ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿದ್ದರು.
ಇದೀಗ ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ‘ಕಾಂತಾರ: ಚಾಪ್ಟರ್ 1’ ರಿಲೀಸ್ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್, ವಿ ಕೆ ಫಿಲ್ಮ್ಸ್ ಮತ್ತು ಸಿನಿಪ್ಲೆಕ್ಸ್ ಪ್ರೈವೆಟ್ ಲಿಮಿಟೆಡ್ ಹೈಕೋರ್ಟ್ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ಭಾಗವಾಗಿ ಮಧ್ಯಂತರ ಕೋರಿಕೆಗೆ ಸಂಬಂಧಿಸಿದ ವಿಚಾರಣೆ ನಡೆಸಿ, ಕಾಯ್ದಿರಿಸಿದ ಆದೇಶವನ್ನು ನ್ಯಾಯಮೂರ್ತಿ ರವಿ ಹೊಸಮನಿ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿದೆ. ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ತಡೆ ಕೋರಿರುವ ಮಧ್ಯಂತರ ಕೋರಿಕೆಯನ್ನು ಪುರಸ್ಕರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ.