`ಕಲಾದೇವತೆ ಎಲ್ಲರಿಗೂ ಒಲಿಯುವುದಿಲ್ಲ’ ಎಂಬುದು ಜಗಜ್ಜನಿತವಾದ ಮಾತು. ಅದರೊಟ್ಟಿಗೆ ಅದೃಷ್ಟ ಇರಬೇಕು. ಸತತ ಪರಿಶ್ರಮ, ಗುರಿಮುಟ್ಟುವ ಅಚಲವಾದ ನಂಬಿಕೆ, ದೈವಾನುಗ್ರಹವಿದ್ದರೆ ಸಾಧನೆ ಕಠಿಣವಲ್ಲ. ಅಪ್ಪನ ಬೈಗುಳಗಳ ನಡುವೆಯೂ ಇಂದು ಕರ್ನಾಟಕವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಮಾಡಿರುವ ಅಚ್ಚ ಕನ್ನಡದ ನೆಚ್ಚಿನ ಮಗಳಿವಳು. ವೇದಿಕೆಗೆ ಬಂದರೆಂದರೆ ಸಾಕು ಅಭಿಮಾನಿಗಳ ಹುರಿದುಂಬಿಸುವಂತಹ ಚಪ್ಪಾಳೆ ವಿಷಿಲ್ ಗಳ ಸುರಿಮಳೆ. ಇವರ ಸಿಗ್ನೇಚರ್‌ ಡೈಲಾಗ್ ಹೇಳಿದರೆ ಬಹುಶಃ ನಿಮಗೆಲ್ಲ ಇವರು ಯಾರೆಂದು ತಿಳಿದೇ ಬಿಡುತ್ತದೆ……

`ದೇವಾ, ಚಿಕ್ಕ ವಯಸ್ಸಿನಲ್ಲೇ ನನ್ನ ಬಾಲ್ಯ ಕಳ್ಕೊಂಡೆ, ಆಮೇಲೆ ನನ್ನಾಟ ಸಾಮಾನ್‌ ಕಳ್ಕೊಂಡೆ, ಲೈಫ್ಲೀ ನನ್ನ ಯೌವನನ್ ಕಳ್ಕೊಂಡೆ, ಈಗ್‌ ನನ್‌ ಬಾಯ್‌ ಫ್ರೆಂಡನ್ನೂ ಕಳ್ಕೊಂಡಿದ್ದೀನಿ. ನನ್ನತ್ತೆ ಇನ್ನೂ ಕಣ್ಣಿಗ್‌ ಬಿದ್ದಿಲ್ವಾ ಗೋವಿಂದಾ…. ಗೋವಿಂದಾ….’ ಗೊತ್ತಾಗಿರಲೇಬೇಕು ಇಷ್ಟೊತ್ತಿಗೆ, ಹೌದು ಇದು ನೀವೆಣಿಸಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ, ಅಪ್ಪಟ ದೇಸೀ ಪ್ರತಿಭೆ, ಅರಳು ಹುರಿದಂತೆ ಮಾತನಾಡುವ ಕಾಮಿಡಿ ಶೋಗಳ ಹೀರೋಯಿನ್‌ ನಯನಾ ಶರತ್‌ ರ ಡೈಲಾಗ್‌ ಗಳೇ!

ಅದ್ಭುತ ಪ್ರತಿಭೆ ಮಾತಿನ ಮಲ್ಲಿ ಹಾಸ್ಯಭರಿತ ಡೈಲಾಗ್‌ ಗಳ ಕ್ವೀನ್‌!

IMG-20181225-WA0019

ತಾಯಿ ಹಾಸನದ ಕುಸುಮಾ, ತಂದೆ ಹುಬ್ಬಳ್ಳಿಯ ಹನುಮಂತಪ್ಪ. ಚಿಕ್ಕಪ್ಪನ ಹೆಂಡತಿ ಮಡಿಕೇರಿಯರಾದರೆ ಅಣ್ಣನ ಹೆಂಡತಿ ಮಂಗಳೂರಿನವರು ಇನ್ನು ಪತಿದೇವರು ಮಂಡ್ಯದವರು. ಹಾಗಾಗಿ ವಿಭಿನ್ನ ಕನ್ನಡ ಭಾಷೆಗಳ ಸಂಗಮ ಇವರ ಕುಟುಂಬ, ಆದರೂ ನೆಲೆಸಿರೋದು ಮಾತ್ರ ಮಹಾನಗರಿ ಬೆಂಗಳೂರಿನಲ್ಲೇ! ರಾಷ್ಟ್ರೀಯ ವಿದ್ಯಾಲಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ!

ಎ.ಪಿ.ಎಸ್‌ ಕಾಲೇಜಿನ ಪ್ರಾಡಕ್ಟ್! ಬಿ.ಕಾಂ ಪದವೀಧರೆ.

ಬಾಲ್ಯ

ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಪೇಂಟ್‌ ಕಂಟ್ರಾಕ್ಟರ್‌ಆಗಿದ್ದರೂ ಅಂತಹ ಸ್ಥಿತಿತರೇನಿರಲಿಲ್ಲ. ಈ ದಂಪತಿಗಳಿಗೆ ಇಬ್ಬರೇ ಮಕ್ಕಳು. ತಂದೆಯ ಬಾಸಿಂಗ್‌ ಆಡಳಿತ, ಕುಟುಂಬದಲ್ಲಿ ಗಟ್ಟಿಯಾಗಿತ್ತು. ಕೂಡು ಕುಟುಂಬವಾದ್ದರಿಂದ ಜನರೂ ಹೆಚ್ಚು, ಕೆಲಸ ಹೆಚ್ಚು! ತಂದೆ ರಾಜ್‌ ಕುಮಾರರ ಕಟ್ಟಾಭಿಮಾನಿ. `ಸಿಲ್ಲಿ ಲಲ್ಲಿ’ ಸೀರಿಯಲ್ ತುಂಬಾ ಇಷ್ಟಪಟ್ಟು ನೋಡುತ್ತಿದ್ದರು. ಹಾಗೇ ರಾಜ್‌ ಅಭಿನಯದ ಚಿತ್ರಗಳನ್ನು ನೋಡಲು ಹುರಿದುಂಬಿಸುತ್ತಿದ್ದರು.

ತಂದೆಯವರು, ಚಿಂದೋಡಿ ಲೀಲಾ ಮನೆಯಲ್ಲೇ ಬೆಳೆದವರು. ಆ ಕುಟುಂಬವೇ ಕಲಾಕ್ಷೇತ್ರಕ್ಕೆ ಸೀಮಿತವಾಗಿದ್ದ ಕುಟುಂಬ. ಆಗೆಲ್ಲ ಲೀಲಾ ಮೇಡಂ, ಪಾತ್ರ ಮಾಡುವಂತೆ ಬಹಳವೇ ಪ್ರೋತ್ಸಾಹ ನೀಡುತ್ತಿದ್ದರಾದರೂ ಇವರು ಸ್ಟೇಜ್‌ ಹತ್ತಲು ಹಿಂದೇಟು ಹಾಕುತ್ತಿದ್ದರು.

ಆಗೊಮ್ಮೆ ಈಗೊಮ್ಮೆ ಪಾತ್ರ ಮಾಡಿದ್ದು ಉಂಟು. ಅದನ್ನೆ ಜೀವನನ್ನಾಗಿಸಿಕೊಳ್ಳಲಿಲ್ಲ ಅಷ್ಟೇ! ಈ ಕ್ಷೇತ್ರವೇ ಬೇಡವೆಂದು ದೂರ ನಿಂತುಬಿಟ್ಟರು. ಅದೇಕೋ ಅವರಿಗೆ ಬಣ್ಣ ಹಚ್ಚೋದಂದರೆ ಇಷ್ಟವಿರಲಿಲ್ಲ. ಹಾಗಾಗಿ ಮಕ್ಕಳಿಗೆ ಆಸಕ್ತಿಯಿದ್ದರೂ ಪ್ರೋತ್ಸಾಹಿಸದೆ, ಓದಿ ಬೆಳೆಯಲಿ ಎಂಬ ಆಸೆ ಹೊತ್ತಿದ್ದರು.

IMG-20190306-WA0042

ನಯನಾ ಮೂರು ನಾಲ್ಕನೇ ತರಗತಿಯವರಿದ್ದಾಗಲೇ ಮಿಮಿಕ್ರಿಯಲ್ಲಿ ಪ್ರವೀಣರಾಗಿದ್ದರು. ವಿಲ್ಸನ್‌ ಗಾರ್ಡನ್ನಿನ ನರ್ಮದಾ ಶಾಲೆಯಲ್ಲಿದ್ದಾಗ ಧೀರೇಂದ್ರ ಗೋಪಾಲ್, ವಿಷ್ಣು, ಅಂಬರೀಷ್‌, ದಿನೇಶ್‌, ಕಲ್ಪನಾ, ರಾಜ್‌ರವರುಗಳ ಮಿಮಿಕ್ರಿ ಮಾಡುತ್ತಾ ಶಹಭಾಷ್‌ ಗಿರಿ ಪಡೆಯುತ್ತಿದ್ದರು. ಓದಿನ ಜೊತೆಗೆ, ಶಾಲೆಯ ಇತರೆ ಚಟುವಟಿಕೆಗಳಲ್ಲಿ ಬಹಳವೇ ಆಸಕ್ತಿಯಿಂದ ಭಾಗವಹಿಸುತ್ತಿದ್ದರಾದರೂ, ಕೊಂಚ ಭಯ, ಕಾರಣ ತಂದೆ ಬಹಳ ಸ್ಟ್ರಿಕ್ಟ್ ಆಗಿದ್ದರು. ಓದು ಬಿಟ್ಟು ಬೇರೆ ಕ್ಷೇತ್ರ ಬೇಡವೇ ಬೇಡ ಎಂದಿದ್ದರು.

ಹಾಗಾಗಿ ಇದಕ್ಕೆಲ್ಲ ಪ್ರೋತ್ಸಾಹವಿರಲಿಲ್ಲ! ಭರತನಾಟ್ಯ ಕಲಿಯಲು ಆಸಕ್ತಿಯಿದ್ದರೂ, ಅಪ್ಪನ ಅನುಮತಿ ಇರಲಿಲ್ಲ. ಕದ್ದುಮುಚ್ಚಿ ತರಗತಿಗೆ ಹೋಗುತ್ತಿದ್ದದ್ದು ಒಮ್ಮೆ ಅಪ್ಪನಿಗೆ ತಿಳಿದುಬಿಟ್ಟಿತು, ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಜೊತೆಗೆ ಫೀಸ್‌ ಎಂದು ಕೇಳಿ ಹೃದಯಾಘಾತವೇ ಆಗಿಹೋಯಿತಂತೆ ಅವರಿಗೆ!

ಈ ಹುಡುಗಿಯಲ್ಲಿನ ಆಸಕ್ತಿ ಕಂಡು ಭರತನಾಟ್ಯದ ಗುರುಗಳಾದ ಭರತ್‌ ಅಯ್ಯರ್‌ ಅರ್ಧ ಫೀಸ್‌ ಕೊಡಿ ಸಾಕು, ಆದರೆ ಹುಡುಗಿಯನ್ನು ಮಾತ್ರ ಬಿಡಿಸಬೇಡಿ ಎಂದು ಬೇಡಾಡಿದರಂತೆ. ಹಾಗೂ ಹೀಗೂ ನಾಲ್ಕು ತಿಂಗಳು ಕಳೆಯಿತು. ಇಲ್ಲಿದ್ರೆ ತಾನೇ ಇವಳ ಆಟ ಎಂದು ತಂದೆ ಮನೆಯನ್ನೇ ಬದಲಿಸಿ ಬೇರೆ ಕಡೆಗೆ ಹೊರಟುಬಿಟ್ಟರು. ಅದೂ ಹನ್ನೆರಡು ಮಂದಿ ಇದ್ದ ಕೂಡು ಕುಟುಂಬದೊಡನೆ! ಇದು ಇವರ ಖಡಕ್‌ ಅಪ್ಪನ ಖಡಕ್‌ ಜೀವನ!

IMG-20200614-WA0017

ಶಾಲೆಯಲ್ಲಿ ನಡೆಯುತ್ತಿದ್ದ ಕಥೆ, ಪ್ರಬಂಧ, ಕವನ ಸ್ಪರ್ಧೆಗಳಲ್ಲಿ ನಯನಾ ಬಹಳ ಚುರುಕು. ಹೋದೆಡೆಯೆಲ್ಲಾ ಬಹುಮಾನ ಖಚಿತ! ಈ ಹಂತದಲ್ಲಿ ವೇದಿಕೆ ಹೆದರಿಕೆ ಮಾಯವಾಗಿತ್ತು. ಸುಲಲಿತವಾಗಿ ಲೀಲಾಜಾಲವಾಗಿ ಮಾತನಾಡುತ್ತ ಬೆಳೆದಳು ಹುಡುಗಿ. ಮಾತೇ ಬಂಡವಾಳ ಇವರಿಗೆ!

ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಮತ್ತೆ ಡ್ಯಾನ್ಸ್ ಕ್ಲಾಸಿಗೆ ಹೋಗುವ ಆಸೆ ಮೂಡಿತು. ಕಾಲೇಜು ದಿನಗಳು ಅಮ್ಮನನ್ನು ಬೇಡಿ ಕಾಡಿ ಅಪ್ಪನಿಗೆ ತಿಳಿಯದಂತೆ ಮತ್ತೆ ಕದ್ದುಮುಚ್ಚಿ ಡ್ಯಾನ್ಸ್ ಕ್ಲಾಸಿನ ಅಭ್ಯಾಸ ಪ್ರಾರಂಭವಾಯಿತು. ಸ್ವಲ್ಪ ದಿನದಲ್ಲೇ ತಂದೆಗೆ ತಿಳಿದು, ದೂರ್ವಾಸರೇ ಆಗಿಹೋದರು. ಹೊಡೆದು ಬಡಿದು ಬಿಡಿಸಿಬಿಟ್ಟರು. ಅಲ್ಲಿಗೆ ಅದಕ್ಕೂ ತಿಲಾಂಜಲಿ ಇಟ್ಟಾಯಿತು. ಸರಿ ಎನ್‌ಸಿಸಿ ಸೇರಲು ತುಂಬಾ ಇಷ್ಟ. ಅದಕ್ಕೂ ತಂದೆಯ ಪ್ರೋತ್ಸಹವಿರಲಿಲ್ಲ. ಶಾಲಾ ಕಾಲೇಜು ಕಾಲೇಜಿನ ಇತರೆ ಚಟುವಟಿಕೆಗಳಲ್ಲಿ ಭಾಗಹಿಸೋದು ಸುತಾರಾಂ ಇಷ್ಟವಿರಲಿಲ್ಲ! ಓದಿ ಉದ್ಧಾರವಾಗಲಿ ಎಂಬ ಆಸೆ ತಂದೇದು ಎಂಬುದು ಈಗ ಅರ್ಥ ಆಗುತ್ತೆ.

ತಂದೆಗೆ ಆಗ ಇದ್ದದ್ದು ಮಕ್ಕಳ ಮೇಲಿನ ಅತಿಯಾದ ಕಾಳಜಿ ಎಂಬುದು ಸ್ಪಷ್ಟವಾಗುತ್ತದೆ. ಡಿಗ್ರಿ ಓದುತ್ತಿದ್ದ ದಿನಗಳ. ಎನ್‌.ಸಿ.ಸಿ ಯಿಂದ ದೆಹಲಿಗೆ ಹೋಗಿ ಬಂದದ್ದು ಒಂದು ವಿಶೇಷವೇ ಹೌದು. ಅದರಲ್ಲಿ ಕಾಲೇಜಿಗೇ ಎನ್‌.ಸಿ.ಸಿಯಿಂದ ದೆಹಲಿಗೆ ಹೋಗಿ ಬಂದದ್ದು ಒಂದು ವಿಶೇಷವೇ ಹೌದು. ಅರಲ್ಲಿ ಕಾಲೇಜಿಗೇ ಆರ್‌.ಡಿ.ಸಿ ಮುಗಿಸಿ ಬಂದ ಮೊದಲ ಮಹಿಳಾ ಕ್ಯಾಂಡಿಡೇಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಬಹಳವೇ ಖುಷಿ ಕೊಟ್ಟಿತು. ಪ್ರೋತ್ಸಾಹಿಸುವ ಸ್ನೇಹ ಬಳಗವಿದ್ದದ್ದು ಎಷ್ಟೋ ಬಲ ಕೊಟ್ಟಿತ್ತು? ಎನ್ನುತ್ತಾರೆ ನಯನಾ!

ಕಿರುತೆರೆಯ ನಂಟು

IMG-20200903-123636_Bokeh

ಅಲ್ಲಿಂದ ಪ್ರಾರಂಭವಾಯಿತು ಇವರ ಪಯಣ. ಬೆಂಗಳೂರಿನ ಬನಶಂಕರಿಯ ನಿವಾಸಿಯಾದ್ದರಿಂದ, ಆ ಭಾಗದವರಿಗೆ ಬರುತ್ತಿದ್ದ ತಿರುಮಲ ಚಾನೆಲ್ ನಲ್ಲಿ ಹಾಡೊಂದು ಹಾಡಲು ಹೋಗಿ ನಿರೂಪಕಿಯಾಗಿ ಆಯ್ಕೆಯಾದದ್ದು ಖುಷಿ ಕೊಟ್ಟಿತಾದರೂ, ಗಂಧಗಾಳಿ ಗೊತ್ತಿಲ್ಲ. ಆದರೂ ಧೈರ್ಯದಿಂದ ಮುನ್ನುಗ್ಗಿದರು. ಒಂದು ಪ್ರೋಗ್ರಾಂಗೆ ರೂ. 100 ಸಂಭಾವನೆ, ಅರ್ಧ ಗಂಟೆಗೆ ಇಷ್ಟು ಸಂಭಾವನೆ ಎಂದು ಜಂಭ ಪಡುತ್ತಿದ್ದರಂತೆ. ಆಗೆಲ್ಲ ನಯನಾರರದ್ದು ಫುಲ್ ಬ್ಯುಸಿ ಷೆಡ್ಯೂಲ್‌. ಟಿ.ವಿ. ಶೋಗಳಾದ, ಸಾಯಿ ಕಟಾಕ್ಷ ಬೆಳಗ್ಗೆ 7-8, 9.15-12.30 ಕಾಲೇಜ್‌, ಮತ್ತೆ 1.00-1.30 ಡಾಕ್ಟರ್‌ ಲೈಫ್‌, ಟಿವಿ ಶೋ, ಮತ್ತೆ ಕಾಲೇಜ್‌ ಮತ್ತೆ ಸಂಜೆ 5ಕ್ಕೆ ಮ್ಯೂಸಿಕ್‌ ಅಡ್ಡ!

ಒಟ್ಟಿನಲ್ಲಿ ದಿನಕ್ಕೆ ಮುನ್ನೂರು ಸಂಪಾದಿಸುತ್ತಿದ್ದರು. ಇದನ್ನು ಅಪ್ಪನಿಗೆ ಕೊಟ್ಟರೆ ಎಷ್ಟೋ ಉಪಯೋಗಕ್ಕೆ ಬರುತ್ತೆ ಎಂದೆಣಿಸಿದ್ದರು. ಮೊದಲ ತಿಂಗಳು ರೂ. 7000 ಸಂಬಳ ದೊರೆಯಿತು. ಎಷ್ಟು ಎಣಿಸಿದರೂ ತೃಪ್ತಿಯಾಗಲಿಲ್ಲ. ತಿರುಗಿ ಮರುಗಿ ಎಣಿಸುತ್ತಲೇ ಇದ್ದರಂತೆ. ಸರಿ ಅದನ್ನು ಒಂದು ಎನ್ವಲಪ್ಪಿಗೆ ಹಾಕಿ ಅಪ್ಪನಿಗೆ ಕೊಟ್ಟು ನಮಸ್ಕರಿಸಿ `ನಂದಪ್ಪಾ ನಂದು’ ಎನ್ನುತ್ತಾ ಜಂಭಪಟ್ಟರು. ಅಪ್ಪನಿಗೆ ಸಿಟ್ಟಿದ್ದರೂ ಕೂಡಾ ಅಲ್ಲಿ ಮಗಳಿಗೆ ನಿರಾಸೆ ಮಾಡಲಿಲ್ಲ.

ಹೇಗೆಂದರೆ ಏನೂ ಮಾತನಾಡದೆ ಒಳ ಸರಿದುಬಿಟ್ಟದ್ದೇ ಪ್ರೋತ್ಸಾಹ ಎಂದುಕೊಂಡರಂತೆ ನಯನಾ! ಸರಿ ಅವತ್ತು ಪಾರ್ಟಿ ಏನ್ಗೊತ್ತಾ ಬೇಲ್ ಪುರಿ ಪಾರ್ಟಿ! ಎನ್ನುತ್ತಾ ನಕ್ಕರು. ಅಷ್ಟೊತ್ತಿಗಾಗಲೇ ಅಪ್ಪ ಕೊಂಚ ತಣ್ಣಗಾಗಿದ್ದರು. ಮಗಳ ಬೆಳವಣಿಗೆಯ ಹಂತ ಕಂಡು ಪ್ರೋತ್ಸಾಹವಿಲ್ಲದಿದ್ದರೂ ಬೈಗುಳ ಕಡಿಮೆಯಾಗಿತ್ತು. ಇಲ್ಲಿಂದ ಪ್ರಾರಂಭವಾದ ಇವರ ಕಲಾಜೀವನದ ಹಾದಿಗೆ ಮತ್ತಷ್ಟು ಆಫರ್‌ ಗಳು ಬರಲಾರಂಭಿಸಿತು. ಅವಕಾಶಗಳನ್ನು ಉಪಯೋಗಿಸಿಕೊಂಡು ಬೆಳೆಯಲಾರಂಭಿಸಿದರು. ಪ್ರಭಾವಿ ಮಾಧ್ಯಮವಾದ ಟಿವಿ ಚಾನಲ್ ಗಳೆಡೆಗೆ ಪಾದ ಬೆಳೆಸಿದರು.

IMG-20200925-WA0081

ಒಂದೆರಡು ಇಂಟರ್‌ ವ್ಯೂಗಳು ನಡೆಯಿತು. ಯಾಕೋ ನೆಗೆಟಿವ್ ‌ಪ್ರತಿಕ್ರಿಯೆಗಳೇ ಬರಲಾರಂಭಿಸಿತು. ನಿನ್ನಲ್ಲಿ ಗ್ಲಾಮರ್‌ ಇಲ್ಲ, ಕಲರ್‌ ಇವಳಲ್ಲ, ರೂಪವಿಲ್ಲ, ಹೈಟಿಲ್ಲ ಜೊತೆಗೆ ಗಂಡಸಿನ ಧ್ವನಿ ಬೇರೆ. ಮನಸಿಗೆ ತುಂಬಾ ನೋವಾಯಿತು. ರೆಸ್ಪೆಕ್ಟ್ ಹೊರಟುಹೋಯಿತು. `ಕಲೆಗೆ ಬೆಲೆ ಇಲ್ಲ ಅನ್ನೋದು’ ಪ್ರೂವ್ ‌ಆಗೇಹೋಯಿತು. ಬಾಹ್ಯ ಸೌಂದರ್ಯಕ್ಕಷ್ಟೇ ಬೆಲೆ! ಈ ಆಕರ್ಷಕ ಲೋಕದಲ್ಲಿ ಎಂಬ ನಿಲುವಿಗೆ ಮನಸು ಬಂದು ನಿಂತಿತು.

ಕಾಮಿಡಿ ಕಿಲಾಡಿಗಳ ನಂಟು

ಅಪ್ಪನ ವಿರೋಧದ ನಡುವೆಯೂ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ನೆಗೆಟಿವ್ ‌ಕಮೆಂಟ್ಸ್ ನ್ನು ಅರಗಿಸಿಕೊಳ್ಳೋಕ್ಕೆ ತುಂಬಾನೆ ಕಷ್ಟವಾಯಿತು. ಆದರೂ ಪ್ರಯತ್ನ ಬಿಡಲಿಲ್ಲ. ಕೆಲವು ಟಿವಿ ಶೋಗಳ ಆಡಿಷನ್‌ ಗಳಿಗೆ ಹೋಗೋದು, ಫಲಿತಾಂಶ ನಪಾಸು ಎಂದಾಗ ಬೇಸರವಾಗುತ್ತಿತ್ತು. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂದೆಣಿಸುತ್ತ ಮುಂದಡಿಯಿಡುತ್ತಿದ್ದರೂ, ಮನದಲ್ಲಿ ಸಣ್ಣ ಖಿನ್ನತೆ ಮೂಡಿತ್ತು. ಸ್ವಲ್ಪ ದಿನ ಎಲ್ಲದರಿಂದ ದೂರ ಉಳಿದುಬಿಟ್ಟರು. ಆಗಲೇ ಝೀ ಟಿವಿಯಲ್ಲಿ ಕಾಮಿಡಿ ಕಿಲಾಡಿಗಳು ಆಡಿಷನ್‌ ನ ಪ್ರೋಮೋ ಬಿತ್ತರವಾಗುತ್ತಿತ್ತು.  ಸ್ನೇಹಿತರು ಬಲವಂತಪಡಿಸುತ್ತ, `ಇದೊಂದು ಬಾರಿ ಬಂದುಬಿಡೇ ಪ್ಲೀಸ್‌, ಆಮೇಲೆ ನಿನ್ನನ್ನು ಬಲವಂತಪಡಿಸೋಲ್ಲ’ ಎಂದು ಗೋಗರೆದರೂ, `ಅಯ್ಯೋ ಬಿಡ್ರೇಮಾ, ಅಲ್ಲೂ ಅದೇ ನೆಗೆಟಿವ್ ‌ರಿಪ್ಲೈ ಇರುತ್ತೆ’ ಎನ್ನುತ್ತಾ ಒಪ್ಪದೇ ಹೋದರು ನಯನಾ. ಸ್ನೇಹಿತರೆಲ್ಲ ಸೇರಿಕೊಂಡು ಒಂದು ಪ್ಲಾನ್‌ ಮಾಡಿದರು. ಸೆಪ್ಟೆಂಬರ್‌ ಇವರ ಹುಟ್ಟುಹಬ್ಬ. ಜೊತೆಗೆ ಅಂದೇ ಆಡಿಷನ್‌ ಕೂಡಾ ಇದ್ದದ್ದು. ಗೆಳತಿಯರು ಅಂದು ಒಳ್ಳೆ ಹೋಟೆಲಿನಲ್ಲೇ ಟ್ರೀಟ್‌ ಕೊಡಿಸಬೇಕೆಂದು ಮೊಡು ಹಿಡಿದು ಕೂತರು. ಹಾಗಾಗಿ ಕಾಲೇಜ್‌ ಬಂಕ್‌ ಮಾಡಬೇಕೆಂದು ಒತ್ತಾಯಪಡಿಸುತ್ತಿದ್ದರು. ಆ ಭಯದಲ್ಲೇ ಬಂಕ್‌ ಮಾಡಿ ಸ್ನೇಹಿತರೊಟ್ಟಿಗೆ ಆಟೋ ಹತ್ತಿ ಹೋಟೆಲಿನ ಕಡೆಗೆ ದಾರಿ ಬೆಳೆಸಿದರು. ಆದರೆ ಆ ಆಟೋ ಹೋಟೆಲ್ ಇರುವ ಏರಿಯಾಗಳನ್ನು ಬಿಟ್ಟು ಬೇರೆ ದಿಕ್ಕಿನೆಡೆಗೆ ಸಾಗುತ್ತಿರುವುದು ಗಮನಿಸಿದ ನಯನಾರಿಗೆ ಗಾಬರಿಯಾಯಿತು. ಅಪ್ಪನ ರೌದ್ರ ಮುಖ ಕಣ್ಣ ಮುಂದೆ ಪಾಸಾದಾಗಲಂತೂ ಭಯವೇ ಆಗಿ ಹೋಯಿತು. ಎಲ್ಲಿಗೆ ಹೋಗುತ್ತಿರುವುದೆಂದು ತಿಳಿಯದೇ ಹೋದಾಗ ಕಂಗಾಲಾದರು. ಸ್ಟುಡಿಯೋ ತಲುಪಿದಾಕ್ಷಣ ನಯನಾ ಇವರಿಗೆ ಆಶ್ಚರ್ಯವಾಯಿತು. ಕ್ಷಣ ಮಾತ್ರದಲ್ಲಿ ತಿಳಿಯಿತು. ಇವರೆಲ್ಲ ಸೇರಿಕೊಂಡು ಕರೆದುಕೊಂಡು ಬಂದಿರುವುದು ಕಾಮಿಡಿ ಕಿಲಾಡಿಗಳು ಆಡಿಷನ್‌ ಗೆ ಎಂದು. ಇಂಥ ಅಪೂರ್ವ ಸ್ನೇಹವನ್ನೆಂದಿಗೂ ಮರೆಯಲಾರೆ ಎನ್ನುತ್ತಾ ಕೊಂಚ ಭಾವುಕರಾದರು. ಇವರ ತರಹೇವಾರಿ ಕನ್ನಡದ ಪ್ರಯೋಗ ಈ ವೇದಿಕೆಯಲ್ಲಿ ಅನಾವರಣಗೊಂಡಿತು.

IMG-20200925-WA0110

ಎಲ್ಲಾ ಕಡೆ ಆದಂತೆ ಇಲ್ಲಿಯೂ ನಿರಾಸೆಯೇ ಕಟ್ಟಿಟ್ಟ ಬುತ್ತಿಯೆಂದೆಣಿಸಿ ತನ್ನ `ಪರ್ಫಾರ್ಮೆನ್ಸ್’ ಮುಗಿಸಿ, ಉತ್ತರಕ್ಕೂ ಕಾಯದೆ ಹೊರನಡೆದರು. ಅಷ್ಟರಲ್ಲಿ ಡೈರೆಕ್ಟರ್‌ ಸತೀಶ್‌ ಹೊರಬಂದು, ನಡೆದು ಹೋಗುತ್ತಿದ್ದ ಇವರನ್ನು ಕೂಗಿ ಕರೆದು `ಚೆನ್ನಾಗಿತ್ತು ನಿಮ್ಮ ನಟನೆ’ ಎಂದಷ್ಟೇ ಹೇಳಿದರು. ಸಂಜೆ ಎಲ್ಲರೂ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಸಮಯ. ಅಮ್ಮನ ಫೋನಿಗೆ ಕಾಲ್ ‌ಬಂತು. ನಯನಾ ಅವರಾ? ಎಂದಾಗ ಭಯ ದ್ವಿಗುಣವಾಯಿತು.

ಕಾಲೇಜಿನಿಂದ ಫೋನ್‌ ಬಂದಿದೆ, ಬಂಕ್‌ ಮಾಡಿದ್ದಕ್ಕೆ, ಲೆಕ್ಚರರ್‌ ಫೋನ್‌ ಮಾಡಿರೋದು ಎಂದೆಣಿಸಿದರು. ಅಷ್ಟರಲ್ಲಿ ಅಲ್ಲಿಂದ ಉತ್ತರ ಬರುತ್ತಿತ್ತು. ನೀವು ಕಾಮಿಡಿ ಕಿಲಾಡಿಗಳಿಗೆ ಸೆಲೆಕ್ಟ್ ಆಗಿರುವಿರಿ ಎಂದದ್ದೇ ತಡ, ಖುಷಿಗೆ ಕುಣಿದು ಕುಪ್ಪಳಿಸಿದ್ದರು, ಮೊಬೈಲ್ ‌ಬಿಸಾಡಿದ್ದರು, ವಾಸ್ತವಕ್ಕೆ ಬಂದಾಗ ತಿಳಿಯಿತು, ಮೊಬೈಲ್ ‌ಚೂರುಚೂರಾಗಿತ್ತು. ತನಗರಿವಿಲ್ಲದಂತೆಯೇ ಸ್ಟೆಪ್‌ ಗಳು ಕುಣಿದಾಡಿದವು. ನಂತರ ಚಿಕ್ಕಪ್ಪ ಸಿಮ್ ತೆಗೆದು ಮಗದೊಂದು ಫೋನಿಗೆ ಹಾಕಿ, ಝೀ ಚಾನೆಲ್ ‌ಗೆ ಫೋನಾಯಿಸಿ ಮಾತನಾಡಿದರು. ಪೂರ್ತಿ ವಿಷಯ ತಿಳಿದುಕೊಂಡರು. ಆ ಸಮಯ ಫ್ರೆಂಡ್ಸ್ ಗಂತೂ ಮನಸಾರೆ ಅದೆಷ್ಟು ಥ್ಯಾಂಕ್ಸ್ ಹೇಳಿದರೋ ಅವರಿಗೇ ಗೊತ್ತಿಲ್ಲವಂತೆ! ಸರಿ ನಂತರ ಎಂ.ಜಿ ರೋಡಿನ ಆಫೀಸಿಗೆ ಆಡಿಷನ್‌ ಗೆ ಕರೆದರು. ಅಲ್ಲಿಯೂ ಇವರನ್ನು ಬಹಳ ಜನ ಗುರುತು ಹಿಡಿದು ಮಾತನಾಡಿಸಿದಾಗ ಖುಷಿಯೆನಿಸಿತು.

ಅಲ್ಲಿಂದ ಟಾಸ್ಟ್ ಎಂದರೆ ಎಂಟು ಪೇಜಿನ ಸ್ಕ್ರಿಪ್ಟ್ ಕೊಟ್ಟು ಓದಲು ಹೇಳಿದ್ದು. ಸಮಯ ಬೇರೆ ಮೀರುತ್ತಿದೆ. ಇಲ್ಲಿಗೆ ಬಂದಾಗಲೂ ತಂದೆಗೆ ತಿಳಿಸಿರಲಿಲ್ಲ. ಇನ್ನೇನು ಬೈಯುತ್ತಾರೆಂಬ ಅಳುಕು ಮನದಲ್ಲಿ. ಇಲ್ಲೂ ಆಯ್ಕೆಯಾಗಿ ಬಿಟ್ಟರು. ಇವರ ಆನಂದಕ್ಕೆ ಪಾರವೇ ಇರಲಿಲ್ಲ. ಕನಸು ನನಸಾದ ಸಮಯಕ್ಕೆ ಖುಷಿ ಇಮ್ಮಡಿಯಾಯಿತು. ಸರಿ ಅದೇ ಖುಷಿಯಲ್ಲಿ ಮನೆಗೆ ಬಂದು ತಂದೆಗೆ ಹೇಳಿದರು. ಅಂಥ ಕೋಪ ಏನೂ ಮಾಡಿಕೊಳ್ಳದೆ ಬೈಯದೇ ಹೋದದ್ದೇ ಪ್ರೋತ್ಸಾಹ ಎಂದುಕೊಂಡು ಮುಂದೆ ಸಾಗಿದರು.

ಪ್ರತಿಭೆಗೆ ಸಿಕ್ಕ ಅವಕಾಶಗಳು

ವಾರ ವಾರ ತಮ್ಮ ಪ್ರತಿಭೆಯ ಅನಾವರಣವಾಗುತ್ತ ತೀರ್ಪುಗಾರರ ಮೆಚ್ಚುಗೆ ಪಡೆಯುತ್ತ ಸಾಗಿದರು. ತಮ್ಮ ಹಾಸ್ಯಭರಿತ ಮಾತು ನಟನೆಯಿಂದ ಜನ ಮೆಚ್ಚುಗೆ ಪಡೆದರು. ಇಂದಿಗೂ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾರೆ.

ಅರಳು ಹುರಿದಂಥ ಮಾತು, ಚುರುಕಾದ ನಡೆ, ಅದ್ಭುತ ಅಭಿನಯದೊಟ್ಟಿಗೆ ಕರ್ನಾಟಕದ ಮನೆ ಮಾತಾದರು. ಇಡೀ ಕರುನಾಡ ಜನತೆಯೇ ಇವರ ಅಭಿನಯವನ್ನು ನೋಡಿ ಮೆಚ್ಚಿದೆ. ಜಗ್ಗೇಶ್‌, ರಕ್ಷಿತಾ, ಯೋಗೇಶ್‌ ಭಟ್ಟರ ಮುಂದಾಳತ್ವದಲ್ಲಿ ನಡೆದ ಮೊದಲ ಸೀಸನ್‌ ನ ಮೊದಲ ರನ್ನರ್‌ ಅಪ್‌ ಆದ ಹೆಗ್ಗಳಿಕೆ. ನಂತರ ಕಿಲಾಡಿ ಕುಟುಂಬ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಮಜಾ ಟಾಕೀಸ್‌…… ಹೀಗೆ ಸಾಗಿತು ಪಯಣ. ಪ್ರಸ್ತುತ `ಕುಕ್ಕೂ ವಿತ್‌ ಕಿರಿಕ್ಕು’ನಲ್ಲಿ ಮಿಂಚುತ್ತಿದ್ದಾರೆ.

ಇದುವರೆವಿಗೂ ನಟಿಸಿದ ಚಲನಚಿತ್ರಗಳೆಂದರೆ ಸೀತಾರಾಮ ಕಲ್ಯಾಣ, ಅನಂತು ವರ್ಸಸ್‌ ನುಸ್ರತ್‌, ಶಿವಾರ್ಜುನ, ಲೌಡ್‌ ಸ್ಪೀಕರ್‌, ಠಕ್ಕರ್‌, ಜಂತರ್‌ ಮಂತರ್‌, ಒಡೆಯ, ಆನ್‌ ದ ವೇ, ಬೈ ಟು ಲವ್…. ಯೋಗರಾಜ ಭಟ್ಟರ ನೇತೃತ್ವದಲ್ಲಿ ಯೂನಿಕ್ ಕ್ಯಾರೆಕ್ಟರ್‌, ಧಮಾಕ, ಆರ್‌.ಸಿ. ಬ್ರದರ್ಸ್, ಜಂಬೂ ಸರ್ಕಸ್‌, ಸುವರ್ಣದಲ್ಲಿ ಬರುತ್ತಿರುವ ಧಾರಾವಾಹಿ ಯಡೆಯೂರು ಶ್ರೀ ಸಿದ್ಧಲಿಂಗೇಶ್ವರದಲ್ಲಿ ನೆಗೆಟಿವ್ ‌ರೋಲ್ ‌ಬಹಳವೇ ಚಾಲೆಂಜಿಂಗ್‌ ಆಗಿದೆ ಎನ್ನುತ್ತಾರೆ. ತಮ್ಮ ಹಾಸ್ಯ ಚಟಾಕಿಗಳ ನಟನೆಯಿಂದ ಕರ್ನಾಟಕದೆಲ್ಲೆಡೆ ಅಲ್ಲದೆ ಡೆಲ್ಲಿ, ಬಾಂಬೆ, ಚಂಡೀಗರ್ ನಲ್ಲೂ ಬಹಳಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ದುಬೈ ಅನುಭವವಂತೂ ಅದ್ಭುತ. ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದು, ವಿದೇಶವೊಂದನ್ನು ಕಂಡದ್ದು, ಅಲ್ಲಿನ ಕನ್ನಡದ ಜನರ ಪ್ರೀತಿ ವಿಶ್ವಾಸಗಳು, ಅವರ ಆದರಾತಿಥ್ಯಗಳು ಮರೆಯಾರದಂಥದ್ದು, ಎಂದು ಬಹಳ ಹೆಮ್ಮೆಯಿಂದ ನುಡಿದರು.

KamidiKiladi

ಬೆಳೆಯುತ್ತಿರುವ ಈ ಹಂತದಲ್ಲಿ ಹಲವಾರು ಪ್ರಸಿದ್ಧ ನಾಮಧೇಯರ ಪರಿಚಯ ಸಿಗುತ್ತಿದ್ದರೂ ಎಲ್ಲೂ ಇನ್‌ ಫ್ಲೂಯೆನ್ಸ್ ಮೇಲೆ ಸಾಗದೆ ತನ್ನದೇ ಪ್ರತಿಭೆಯಿಂದ ಮುನ್ನುಗುತ್ತಿದ್ದಾರೆ ಈ ಅಪ್ಪಟ ದೇಸೀ ಪ್ರತಿಭೆ. ಇಂತಹ ಈ ಕಲಾವಿದೆಗೆ ಮತ್ತಷ್ಟು ಮಗದಷ್ಟು ಉತ್ತಮ ಅವಕಾಶಗಳು ದೊರೆಯುವಂತಾಗಲಿ, ಇವರ ಭವಿಷ್ಯ ಉಜ್ವಲವಾಗಲಿ. ಟಿಕ್‌ ಟಾಕ್‌ ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವರು. ಇವರದೇ ಅಭಿಮಾನ ಬಳಗವನ್ನೂ ಹೊಂದಿರುವರು. ಕಲೆ ಇವರಲ್ಲಿ ನೆಲೆ ನಿಂತಿದೆ. ಹೊರ ಬರೋ ಅವಕಾಶಗಳನ್ನು ಹುಡುಕಿ ಬರುವಂತಾಗಲಿ. ಬೆಳೆದಿರುವ ಬೆಳೆಯುತ್ತಿರುವ ಇನ್ನೂ ಬೆಳೆಯಬೇಕೆಂದಿರುವ ಈ ಅದ್ಭುತ ಪ್ರತಿಭೆಗೆ ಕನಸುಗಳು ಬಹಳಷ್ಟಿವೆ. ಮಾಡಬೇಕೆಂದಿರುವ ಪಾತ್ರಗಳ ಕಲ್ಪನೆಗಳಿವೆ. ಉತ್ತಮ ಅವಕಾಶಗಳು ಹುಡುಕಿ ಬರಬೇಕಷ್ಟೆ.

ಸಂದ ಗೌರವ ಪ್ರಶಸ್ತಿಗಳು

ಝೀ ಚಾನೆಲ್ ‌ರವರಿಂದ `ಅಪ್‌ ಕಮಿಂಗ್‌ ಬೆಸ್ಟ್ ಫೀಮೇಲೆ ‌ಕಮೆಡಿಯನ್‌’ ಪ್ರಶಸ್ತಿ `ಸುವರ್ಣ ಸ್ತ್ರೀ’ ಪ್ರಶಸ್ತಿ ಮುಖ್ಯವಾದವು. ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳು ದೊರೆತಿರುವುದು. ಇವರ ಈ ಎಲ್ಲ ಬೆಳವಣಿಗೆಗೆ ತಂದೆ ತಾಯಿ, ಪತಿ, ಸೋದರ ಹಾಗೂ ಕುಟುಂಬದ ಸಂಪೂರ್ಣ ಸಹಕಾರವಿರುವುದು. ಈ ಪ್ರತಿಭೆಗೆ ಮತ್ತಷ್ಟು ಮಗದಷ್ಟು ಅವಕಾಶಗಳು ದೊರೆಯುವಂತಾಗಲಿ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತ ನಮ್ಮ ನಾಡಿನ ಕಣ್ಮಣಿಯಾಗಲಿ ಶುಭವಾಗಲಿ ನಯನಾ ಎಂದು ಹಾರೈಸುತ್ತಾಳೆ ಗೃಹಶೋಭಾ!

ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ