ಜೀವನದ ಒಂದು ಹಂತದಲ್ಲಿ ನಮಗೆ ಎಂತಹ ಒಂದು ಸ್ಥಿತಿ ಬರುತ್ತದೆಂದರೆ, ನಾವು ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತ ದಣಿದುಹೋಗುತ್ತೇವೆ. ಜೊತೆಗೆ ಒತ್ತಡ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಅದರಿಂದಾಗಿ ನಮ್ಮೊಳಗಿನ ಸ್ವಾಭಾವಿಕ ಶಕ್ತಿ ಮತ್ತು ಉತ್ಪಾದಕತೆಯ ಮಟ್ಟ ಕಡಿಮೆಯಾಗುತ್ತದೆ. ಈ ಕಾರಣದಿಂದ ಬೇರೆಯವರ ಆಸೆ. ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ಅನಿಸತೊಡಗುತ್ತದೆ. ಅದರಿಂದ ನಮಗೆ ತೊಂದರೆಯಲ್ಲಿ ಸಿಲುಕಿಕೊಂಡಂತೆ ನಿರಾಶೆಯಾದವರಂತೆ ಅನಿಸುತ್ತದೆ. ನಮ್ಮನ್ನು ನಾವು ಫೇಲ್ಯೂರ್‌, ಅಸಮರ್ಥರಂತೆ ಭಾವಿಸಿಬಿಡುತ್ತೇವೆ. ಈ ಸ್ಥಿತಿಯನ್ನು `ಬರ್ನ್‌ ಔಟ್‌’ ಸ್ಥಿತಿ ಎಂದು ಹೇಳಲಾಗುತ್ತದೆ. ಇದೇನು ಮಾನಸಿಕ ರೋಗವಲ್ಲ. ಆದರೆ ಕೆಟ್ಟ ಮಾನಸಿಕ ಸ್ಥಿತಿಯ ಪರಿಣಾಮವಂತೂ ಹೌದು.

ಬರ್ನ್‌ ಔಟ್‌ ಸ್ಥಿತಿ ಯಾರಿಗೆ ಬೇಕಾದರೂ ಬರಬಹುದು. ಒಬ್ಬ ಮಹಿಳೆ ಅನೇಕ ವರ್ಷಗಳಿಂದ ಕುಟುಂಬ ಹಾಗೂ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದ್ದಾಳೆ. ಆದರೂ ಅವಳಿಗೆ ಯಾವುದೇ ಪ್ರಶಂಸೆ ಸಿಗುತ್ತಿಲ್ಲ ಅಥವಾ ಯಾವುದೊ ಒಬ್ಬ ಕೆಲಸಗಾರ ಪ್ರಾಮಾಣಿಕತೆ ಹಾಗೂ ಪರಿಶ್ರಮಪಟ್ಟು ದುಡಿಯುತ್ತಿದ್ದಾನೆ. ಅಗತ್ಯ ಇದ್ದರೂ ರಜೆ ತೆಗೆದುಕೊಳ್ಳುವುದಿಲ್ಲ. ಆದರೆ ಮಾಲೀಕರಿಂದ ಪ್ರಶಂಸೆಯ ಯಾವುದೇ ಮಾತು ಕೇಳಿ ಬರುವುದಿಲ್ಲ. ಅದೇ ರೀತಿ ವಿದ್ಯಾರ್ಥಿಯೊಬ್ಬ ಹಗಲು ರಾತ್ರಿ ಓದುತ್ತಾನೆ. ಆದರೂ ಒಳ್ಳೆಯ ಪರಿಣಾಮ ದಕ್ಕುವುದಿಲ್ಲ. ಇವು ಅಂತಹ ಕೆಲವು ಉದಾಹರಣೆಗಳು.

ಬರ್ನ್‌ ಔಟ್‌ ಸ್ಥಿತಿ ಪರಸ್ಪರ ಪ್ರೀತಿ ಹಾಗೂ ಬೆಂಬಲವಿಲ್ಲದೆ ಸಂಬಂಧಗಳಲ್ಲೂ ಬರಬಹುದು. ಆಗ ಸಂಬಂಧವನ್ನು ಹೇಗೋ ಮುಂದುವರಿಸಿಕೊಂಡು ಹೋಗಲಾಗುತ್ತದೆ.

ಕಾರಣ

ಬರ್ನ್‌ ಔಟ್‌ ಗೆ ಕಾರಣಗಳು ಹಲವು. ಒತ್ತಡ, ಅಗತ್ಯಕ್ಕಿಂತ ಹೆಚ್ಚು ಹೊಣೆಗಾರಿಕೆ ಪ್ರಶಂಸೆ ದೊರಕದಿರುವುದು, ಅನಗತ್ಯ ಅಪೇಕ್ಷೆಗಳ ಜೊತೆ ಜೊತೆಗೆ ಜೀವನವನ್ನು ನೋಡು ದೃಷ್ಟಿಕೋನ ಹಾಗೂ ಜೀವನಶೈಲಿ ಕೂಡ ಕಾರಣವಾಗಿರಬಹುದು. ನಿಮಗೆ ನಿಮ್ಮ ಕೆಲಸದಲ್ಲಿ ಸಂತೃಪ್ತಿ ಇಲ್ಲ, ಸಾಕಷ್ಟು ವಿಶ್ರಾಂತಿ ದೊರಕುವುದಿಲ್ಲ, ಬೇರೆಯವರ ಸಹಕಾರ ದೊರಕುವುದಿಲ್ಲ. ನಿಮ್ಮ ಸಮಸ್ಯೆಗಳನ್ನು ಯಾರ ಮುಂದೆಯೂ ಹೇಳಿಕೊಳ್ಳಲು ಆಗುವುದಿಲ್ಲವೆಂದರೆ ನೀವು ಕೂಡ ಬರ್ನ್‌ ಔಟ್‌ ಗೆ ಸಿಲುಕಬಹುದು.

ಬರ್ನ್‌ ಔಟ್‌ ಗೆ ಸಿಲುಕಿದ ವ್ಯಕ್ತಿಗೆ ಸಾಕಷ್ಟು ದಣಿವಿನ ಅನುಭವ ಉಂಟಾಗುತ್ತದೆ. ಹಸಿವು ಹೊರಟು ಹೋಗುತ್ತದೆ. ಅನಾರೋಗ್ಯ ಪೀಡಿತರಾಗಬಹುದು. ಉತ್ಸಾಹ ಕುಂದುತ್ತದೆ. ಸಕಾರಾತ್ಮಕ ಯೋಚನೆ ಮಾಡಲಾಗುವುದಿಲ್ಲ. ತನ್ನ ಮೇಲೆ ತನಗೇ ಅಪನಂಬಿಕೆಯಾಗುತ್ತದೆ. ನಿರಾಶೆಯಲ್ಲಿ ಮುಳುಗಿ ಯಾವುದೇ ತಪ್ಪು ನಿರ್ಧಾರ ಕೈಗೊಳ್ಳಬಹುದು.

ಹೊರಬರುವುದು ಹೇಗೆ?

ಈ ಸಮಸ್ಯೆ ಯಾವುದೇ ವಯಸ್ಸಿನಲ್ಲಾದರೂ ಬರಬಹುದು. ಪ್ರಯತ್ನಪಟ್ಟರೆ ಅದರಿಂದ ಹೊರಬರಬಹುದು. ಈ ಕುರಿತಂತೆ ಡಾ. ನಂದಿನಿ ಕೆಳಕಂಡ ಸಲಹೆ ಕೊಟ್ಟಿದ್ದಾರೆ.

ಇಂತಹ ಸ್ಥಿತಿಯಲ್ಲಿ ನಿಮಗೆ ಅತ್ಯಂತ ಆಪ್ತರ, ಸ್ನೇಹಿತರ, ಸಂಗಾತಿಯರ ಜೊತೆ ಮನಬಿಚ್ಚಿ ಮಾತಾಡಿ.

ನಿಮ್ಮ ಕುಟುಂಬದವರ ಜೊತೆ ಮಾತಾಡಿ, ಸಕಾರಾತ್ಮಕ ಯೋಚನೆ ಹೊಂದಿ ಹಾಗೂ ಜೀವನದ ಆನಂದ ಪಡೆದುಕೊಳ್ಳಲು ಪ್ರಯತ್ನಿಸಿ.

ಕೆಲಸದ ಸ್ಥಳದಲ್ಲಿ ಯಾರೊಂದಿಗೂ ವೈರ ಕಟ್ಟಿಕೊಳ್ಳಬೇಡಿ. ಅವರ ಜೊತೆ ಸ್ನೇಹ ಸಂಬಂಧ ವರ್ಧಿಸಿಕೊಳ್ಳಿ. ಇದರಿಂದ ನಿಮಗೆ  ಕೆಲಸದಲ್ಲಿ  ದಣಿವು ಎನಿಸುವುದಿಲ್ಲ.

ನಕಾರಾತ್ಮಕ ಯೋಚನೆಯುಳ್ಳ ವ್ಯಕ್ತಿಗಳಿಂದ ಆದಷ್ಟು ದೂರ ಇರಿ. ನೀವು ಅಂತಹ ವ್ಯಕ್ತಿಯ ಜೊತೆ ಕೆಲಸ ಮಾಡುತ್ತಿದ್ದರೆ, ಆ ವ್ಯಕ್ತಿಯ ಜೊತೆ ಆದಷ್ಟು ಕಡಿಮೆ ಸಮಯ ಕಳೆಯಿರಿ.

ಹೊಸ ಸ್ನೇಹಿತರನ್ನು ಹೊಂದಿ. ನಿಮ್ಮ ಸಾಮಾಜಿಕ ವಲಯ ವಿಸ್ತರಿಸಿಕೊಳ್ಳಿ.

ಕೆಲಸದ ಬಗೆಗಿನ ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ. ಕೆಲಸದ ಬಗ್ಗೆ ನಿಯಂತ್ರಣ  ಹೊಂದಲು ಪ್ರಯತ್ನಿಸಿ.

ಜೀವನದಲ್ಲಿ ಸಮತೋಲನ ಸಾಧಿಸಲು ಪ್ರಯತ್ನಿಸಿ. ಒಂದು ವೇಳೆ ನಿಮಗೆ ನಿಮ್ಮ ಕೆಲಸ ಇಷ್ಟವಾಗದಿದ್ದರೆ ಜೀವನದಲ್ಲಿ ಬೇರೆ ರೀತಿಯ ಆನಂದ ಪಡೆಯಲು ಪ್ರಯತ್ನಿಸಿ. ನಿಮ್ಮ ಹವ್ಯಾಸಕ್ಕೆ ತಕ್ಕಂತೆ ಏನನ್ನಾದರೂ ಹೊಸದನ್ನು ಮಾಡಬಹುದು.

ನಿಮಗಾಗಿಯೂ ಒಂದಿಷ್ಟು ಸಮಯ ಮೀಸಲಿಟ್ಟುಕೊಳ್ಳಿ. ಬರ್ನ್‌ ಔಟ್‌ ನಿಂದ ಹೊರಬರುವುದು ಕಷ್ಟಕರ. ಆದರೆ ಕಾಲಕಾಲಕ್ಕೆ ಕೆಲಸದಿಂದ ಒಂದಿಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಆ ಸ್ಥಿತಿಯಿಂದ ನಿಮ್ಮನ್ನು ನೀವು ಹೊರತರಲು ಪ್ರಯತ್ನಿಸಿ.

`ಇಲ್ಲ’ ಎನ್ನಲು ಸಹ ಕಲಿತುಕೊಳ್ಳಿ. ಒಂದು ವೇಳೆ ನಿಮಗಿದು ಕಷ್ಟಕರ ಎನಿಸಿದರೆ, ಒಂದು ಕ್ಷಣ ಯೋಚಿಸಿ, ವಾಸ್ತವದಲ್ಲಿ ನಾನು ಏನನ್ನು ಮಾಡಬೇಕು ಎಂದು ಯಾವ ಕೆಲಸ ನಿಮಗೆ ಇಷ್ಟವಿಲ್ಲವೋ ಅದಕ್ಕೆ ಸ್ಪಷ್ಟವಾಗಿ ಇಲ್ಲವೆಂದು ಹೇಳಿ.

ಹೀಗೆ ಬದಲಿಸಿ ಜೀವನಶೈಲಿ

ನಿಮ್ಮನ್ನು ನೀವು ರಿಲ್ಯಾಕ್ಸ್ ಮಾಡಿಸಿಕೊಳ್ಳಲು ಸಮಯ ಮೀಸಲು ಇಟ್ಟುಕೊಳ್ಳಿ. ಅದಕ್ಕೆ ಧ್ಯಾನ, ವ್ಯಾಯಾಮ ಸೂಕ್ತ.

ಕೆಲಸದ ಅವಧಿಯಲ್ಲಿ ಆಗಾಗ 10 ನಿಮಿಷ ಬ್ರೇಕ್‌ ತೆಗೆದುಕೊಳ್ಳಿ. ಇದರಿಂದ ನಿಮ್ಮ ಮೂಡ್‌ಚೆನ್ನಾಗಿರುತ್ತದೆ.

ಕಾರ್ಬೊಹೈಡ್ರೇಟ್‌ ಸೇವನೆ ಪ್ರಮಾಣ ಕಡಿಮೆಗೊಳಿಸಿ. ಇವು ನಿಮ್ಮ ಎನರ್ಜಿ ಹೆಚ್ಚಿಸುವ ಬದಲು ಕಡಿಮೆಗೊಳಿಸುತ್ತದೆ.

ಕೆಫಿನ್‌, ಕೆಮಿಕಲ್ ಪ್ರಿಸರ್ ವೇಟಿವ್ ‌ಯುಕ್ತ ಖಾದ್ಯ ಪದಾರ್ಥಗಳಿಂದಲೂ ದೂರವಿರಿ.

ಒಮೇಗಾ 3 ಫ್ಯಾಟಿ ಆ್ಯಸಿಡ್‌ ಯುಕ್ತ ಖಾದ್ಯ ಪದಾರ್ಥ ಸೇವಿಸಿ. ಇವುಗಳಿಂದ ಮೂಡ್‌ ಸರಿಹೋಗುತ್ತದೆ.

ಜೀವನಕ್ಕೆ ಸಕಾರಾತ್ಮಕ ದಿಸೆ ಕೊಡುವುದರಿಂದ ನಿಮ್ಮೊಳಗೆ ಹೊಸ ಎನರ್ಜಿ ಬರುತ್ತದೆ ಅಷ್ಟೇ ಅಲ್ಲ, ಬೇರೆಯವರಿಂದ ಹೊಸ ಹೊಸದನ್ನು ಕಲಿಯುವ ಅವಕಾಶ ದೊರಕುತ್ತದೆ.

ಆಶಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ