ನಾಳೆಯ ದಿನ ಏನೋ ನಡೆಯಲಿದೆ ಎಂದು ನನಗೆ ಅರ್ಥವಾಗಿದೆ. ನಾನು ಮುಂಗಾಲಿನ ಮೇಲೆ ನಿಂತು ಮೂಗು ತೂರಿಸಿ ವಿಷಯ ತಿಳಿಯಲು ಪ್ರಯತ್ನಿಸುತ್ತಿದ್ದೆ. ಮನೆಯ ಜವಾಬ್ದಾರಿ ನನ್ನದೇ ತಾನೇ…..? ಇಲ್ಲಿರುವ ಎಲ್ಲರ ಧ್ವನಿಗಳನ್ನೂ ನಾನು ಗುರುತಿಸಬಲ್ಲೆ. ಪಿಂಕಿಯ ಸ್ನೇಹಿತರೆಲ್ಲ ನನಗೆ ಗೊತ್ತು. ಶೇಖರ್‌ ಮತ್ತು ಮಾಯಾರಿಗೆ ನಾನು ಪ್ರೀತಿಪಾತ್ರ. ನಾನು ಅವರ ಮೂರನೆಯೇ ಮಗನೆಂದು ಪಿಂಕಿ ಹಲವು ಸಲ ಹೇಳಿದ್ದುಂಟು ಅವರ ಮುಖಭಾವವನ್ನು ನೋಡಿಯೇ ನಾನು ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬಲ್ಲ.

“ಪಿಂಕಿ, ಎಲ್ಲ ಸ್ನೇಹಿತರನ್ನೂ ಸೇರಿಸಿ ಮನೆಯಲ್ಲಿ ಗುಂಪು ಮಾಡಬೇಡ. ನಿನ್ನ ಜೊತೆಗೆ ಬೇಕಾದರೆ ಅಂಜಲಿ ಮತ್ತು ರಶ್ಮಿಯನ್ನು ಕರೆ. ಬೇರೆಯವರು ಬೇಡ.”

“ಮಮ್ಮೀ…. ನಾನೇನು ಚಿಕ್ಕ ಮಗುವೇ, ಆಫೀಸ್‌ ಗೆ ಹೋಗುತ್ತೇನೆ. ಇಷ್ಟೊಂದು ಉಪದೇಶ ಕೊಡಬೇಕಾ?”

ಶೇಖರ್‌ ಕೂಡಲೇ ಎಂದಿನಂತೆ ಪಿಂಕಿಯ ಪರವಹಿಸಿ ಹೇಳಿದರು, “ಮಾಯಾ, ಪಿಂಕಿ ದೊಡ್ಡವಳಾಗಿದ್ದಾಳೆ. ಹೇಗಿರಬೇಕು ಅನ್ನುವುದು ಅವಳಿಗೆ ಗೊತ್ತು. ನ್ಯೂ ಇಯರ್‌ ಗೆ ನಾವು ಹೊರಗೆ ಹೋಗುತ್ತಿದ್ದೇವೆ. ಮನೆಯಲ್ಲಿ ಅವಳೊಬ್ಬಳೇ ಯಾಕಿರಬೇಕು? ಸ್ನೇಹಿತರ ಜೊತೆ ಎಂಜಾಯ್‌ ಮಾಡಲಿ…. ಅದರಲ್ಲಿ ತಪ್ಪೇನಿದೆ?”

“ನಾನು ಮನೆಯಲ್ಲಿರುವಾಗ ಫ್ರೆಂಡ್ಸ್ ಎಲ್ಲ ಬರಲಿ. ನಾನೇನೂ ಹೇಳುವುದಿಲ್ಲ. ಆದರೆ ನಾನಿಲ್ಲದಿರುವಾಗ ಅಂದರೆ ನನಗೆ ಯೋಚನೆ ಆಗುತ್ತದೆ. ರಾಹುಲ್ ಕೂಡ ಫ್ರೆಂಡ್ಸ್ ಜೊತೆ ಗೋವಾಗೆ ಹೋಗಿದ್ದಾನೆ. ಅವನಿದ್ದರೆ ಏನೂ ಚಿಂತೆ ಇರುತ್ತಿರಲಿಲ್ಲ.”

ಪಿಂಕಿ ಎದ್ದು ಬಂದು ಮಾಯಾರ ಕುತ್ತಿಗೆಯನ್ನು ಬಿಗಿದಪ್ಪಿ ಹೇಳಿದಳು, “ಓ.ಕೆ. ಮಮ್ಮಿ, ನೀವು ಆರಾಮಾಗಿ ಹೋಗಿ ಬನ್ನಿ. ಇಲ್ಲಿ ಗುಂಪು ಸೇರಿಸುವುದಿಲ್ಲ. ಸರೀನಾ…..?”

ಮಾಯಾ ಸಮಾಧಾನಗೊಂಡು ಪಿಂಕಿಯ  ಕೆನ್ನೆಗೆ ಮುತ್ತಿಟ್ಟರು. ನಾನು ಅಲ್ಲೇ ನಿಂತು ಈ ಸ್ವಾರಸ್ಯಕರ ದೃಶ್ಯವನ್ನು ನೋಡಿದೆ. ಶೇಖರ್‌ ಪ್ರೀತಿಯಿಂದ ನನ್ನ ತಲೆ ನೇವರಿಸಿದರು. ನಾನು ಅವರಿಗೆ ಒತ್ತಿಕೊಂಡು ನಿಂತೆ.

ಶೇಖರ್‌ ಮತ್ತು ಮಾಯಾ ಪ್ರತಿ ವರ್ಷ ನ್ಯೂ ಇಯರ್‌ ನಂದು ಮನೆಯಲ್ಲೇ ಇರುತ್ತಿದ್ದರು. ಆದರೆ ಈ ವರ್ಷ ತಮ್ಮ ಸ್ನೇಹಿತರೊಂದಿಗೆ ಮುಂಬೈಗೆ ಹೊರಟಿದ್ದಾರೆ. ರಾಹುಲ್ ‌ಈಗಾಗಲೇ ಆಫೀಸಿನಿಂದ ರಜೆ ಪಡೆದು ಗೋವಾಗೆ ಹೋಗಿದ್ದಾನೆ. ಅವನಿಗೆ ಹೆಚ್ಚು ಅಡೆತಡೆಗಳಿಲ್ಲ. ಆದರೆ ಪಿಂಕಿ…. ಜಾಣೆ ಹುಡುಗಿ…..  ಪ್ರತಿ ವರ್ಷ ಅಂಜಲಿಯ ಮನೆಯಲ್ಲಿ ನ್ಯೂ ಇಯರ್‌ ಪಾರ್ಟಿ ನಡೆಯುತ್ತಿತ್ತು. ಅವಳಿಗೆ ಹೊರಗಡೆಗಿಂತ ತನ್ನ ಮನೆಯಲ್ಲೇ ಸ್ನೇಹಿತರನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತಾಳೆ. ನನಗೆ ಇದು ಸರಿ ಎನ್ನಿಸುತ್ತದೆ. ಆದರೆ ಮಾಯಾ ಇದನ್ನು ಒಪ್ಪುವುದಿಲ್ಲ. ಪಿಂಕಿ ಏನಾದರೂ ನ್ಯೂ ಇಯರ್‌ ಪಾರ್ಟಿಗೆಂದು ಅಂಜಲಿಯ ಮನೆಗೆ ಹೋಗಿಬಿಟ್ಟರೆ ನಾನಿಲ್ಲಿ ಒಂಟಿಯಾಗಿಬಿಡುತ್ತೇನೆ. ಇದುವರೆಗೆ ನಾನು ಎಂದೂ ಒಂಟಿಯಾಗಿಲ್ಲ.

ಶೇಖರ್‌ ಮತ್ತು ಮಾಯಾ ಹೊರಟರು. ಪಿಂಕಿ ನನ್ನನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದು ಮಾಡಿದಳು, “ಡೋಂಟ್‌ ವರಿ ಬಂಟಿ ನೀನು ಒಂಟಿಯಾಗಿರುವುದಿಲ್ಲ. ನಾನು ಎಲ್ಲಿಗೂ ಹೋಗುವುದಿಲ್ಲ. ಮನೆಯಲ್ಲೇ ಪಾರ್ಟಿ ಮಾಡೋಣ,” ಅವಳು ನನ್ನ ಮನಸ್ಸಿನ ಮಾತನ್ನು ಅದು ಹೇಗೋ ಅರ್ಥ ಮಾಡಿಕೊಂಡಿದ್ದಳು.

ನನಗಂತೂ ಸಮಾಧಾನವಾಯಿತು. ನಾನು ಅಲ್ಲೇ ನೆಲದ ಮೇಲೆ ಕಾಲು ಚಾಚಿ ಮಲಗಿದೆ.

ಪಿಂಕಿ ಸೋಫಾದ ಮೇಲೆ ಕುಳಿತು ಫೋನ್‌ ಎತ್ತಿಕೊಂಡಳು. ಸ್ಪೀಕರ್‌ ಆನ್‌ ಮಾಡಿ ಖುಷಿಯಾಗಿ ಉಲಿದಳು, “ಅಂಜಲಿ, ಗುಡ್ ನ್ಯೂಸ್‌. ಈ ಸಲ ನ್ಯೂ ಇಯರ್‌ ಪಾರ್ಟಿ ನಮ್ಮ ಮನೆಯಲ್ಲಿ!”

“ವಾವ್‌…. ಅಂಕಲ್ ಆಂಟಿ ಹೊರಟರೇನು?”

“ಹೌದು. ಹೇಳು, ಯಾರು ಯಾರನ್ನು ಕರೊಯೋಣ?”

“ನಮ್ಮ ಇಡೀ ಗ್ರೂಪ್‌.”

“ಸರಿ. ಡಿನ್ನರ್‌ ಆರ್ಡರ್‌ ಮಾಡೋಣ, ಮೂವಿ ನೋಡೋಣ…. ನೀನೇ ಎಲ್ಲರಿಗೂ ತಿಳಿಸು. ಎಲ್ಲರೂ ಸಾಯಂಕಾಲ ಬಂದುಬಿಡಿ.”

ನನ್ನ ಕಿವಿ ನೆಟ್ಟಗಾಯಿತು. ನನಗೆ ಗೊತ್ತು. ಮೂವಿ ಅಂದರೆ ಈ ಪಿಂಕಿ `ಓಂ ಶಾಂತಿ ಓಂ’ ಹಾಕುತ್ತಾಳೆ. ಅವಳು ಶಾರೂಖ್‌ ಖಾನ್‌ ನ ದೊಡ್ಡ ಫ್ಯಾನ್‌. ಒಳ್ಳೆಯದಾಯಿತು. ಪ್ರತಿವರ್ಷ ಶೇಖರ್‌ ಮತ್ತು ಮಾಯಾ ಹಾಕುವ ಟಿವಿಯ ನ್ಯೂ ಇಯರ್‌ ಪ್ರೋಗ್ರಾಂಗಿಂತ ಇದು ಚೆನ್ನಾಗಿರುತ್ತದೆ.

ಅವರು ಹಾಕುವ ಟಿವಿ ಪ್ರೋಗ್ರಾಂನ್ನು ಪ್ರತಿದಿನ ನೋಡಿ ನನಗೆ ಬೇಸರವಾಗಿಬಿಟ್ಟಿದೆ. ಶೇಖರ್‌ ಅಂತೂ ರಿಟೈರ್‌ ಆದ ಮೇಲೆ `ಸಾವಧಾನ್‌ ಇಂಡಿಯಾ,’ `ಕ್ರೈಮ್ ಪ್ಯಾಟ್ರೋಲ್‌’ನಂತಹ ನೀರಸ ಕಾರ್ಯಕ್ರಮ ನೋಡುತ್ತಾರೆ. ಆಮೇಲೆ ಇಬ್ಬರೂ ಅಂತಹ ವಿಷಯದ ಬಗ್ಗೆಯೇ ಮಾತನಾಡತೊಡಗುತ್ತಾರೆ. ಈಗಲೂ ಅಷ್ಟೇ, ಹೊರಡುವಾಗ ಪಿಂಕಿಗೆ ಎಷ್ಟು ಬುದ್ಧಿ ಹೇಳುತ್ತಿದ್ದರು. `ಕಾಲ ಕೆಟ್ಟಿದೆ, ಯಾರನ್ನೂ ನಂಬು ಹಾಗಿಲ್ಲ, ಸ್ನೇಹಿತರೂ ಶತ್ರುಗಳಾಗುತ್ತಾರೆ……’ ಇತ್ಯಾದಿ ಇತ್ಯಾದಿ.

ಪಿಂಕಿ ಜಾಣೆ. ಅವರು ಹೇಳಿದ್ದನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಹೊರಗೆ ಬಿಡುತ್ತಾಳೆ. ಇದು ಕ್ರೈಮ್ ಪ್ಯಾಟ್ರೋಲ್ ಪ್ರಭಾವ ಎಂದು ಅವಳಿಗೆ ಗೊತ್ತು. ಇಲ್ಲದಿದ್ದರೆ ಅವಳು ಪಾರ್ಟಿ ಮಾಡುತ್ತಲ್ ಇರಲಿಲ್ಲ. ಅವಳ ಸ್ನೇಹಿತರೂ ಒಳ್ಳೆಯವರು. ಅವರೆಲ್ಲ ಸೇರಿದಾಗ ಮನೆಯಲ್ಲಿ  ಯೌವನದ ಕಳೆ ತುಂಬುತ್ತದೆ. ವಾವ್‌! ಇಂದು ರಾತ್ರಿ ಮಜವಾಗಿರುತ್ತದೆ….. ನಾನೀಗ ಸ್ವಲ್ಪ ನಿದ್ರೆ ಮಾಡಬೇಕು.

ನನಗೆ ಸ್ವಲ್ಪ ನಿದ್ರೆ ಹತ್ತುತ್ತಿದ್ದಂತೆ, ಪಿಂಕಿ ಫೋನ್‌ ನಲ್ಲಿ ಸಂಜಯ್‌ ನ ಜೊತೆ ಮೆನು ಬಗ್ಗೆ ಮಾತನಾಡತೊಡಗಿದಳು. ಶೇಖರ್ ಮತ್ತು ಮಾಯಾ ಮನೆಯಲಿಲ್ಲದಿದ್ದರೆ ಪಿಂಕಿಯ ಫೋನ್‌ ಸ್ಪೀಕರ್‌ ಆನ್‌ ಆಗಿರುತ್ತದೆ. ಆದ್ದರಿಂದ ನನಗೆ ಎಲ್ಲ ಮಾತೂ ಕೇಳಿಸುತ್ತದೆ. ರಾಹುಲ್ ‌ಸಹ ಸ್ಪೀಕರ್‌ ಆನ್‌ ಮಾಡಿರುತ್ತಾನೆ. ಅವನ ವಿಷಯವೆಲ್ಲ ನನಗೆ ಗೊತ್ತು. ಅವನು ಗೋವಾಗೆ ಹೋಗಿರುವುದು ಸ್ನೇಹಿತರ ಜೊತೆಯಲ್ಲಿಲ್ಲ. ಗರ್ಲ್ ಫ್ರೆಂಡ್‌ ಪ್ರೀತಿಯ ಜೊತೆ, ಈ ವಿಷಯ ನನಗೆ ಮಾತ್ರ ಗೊತ್ತು.

ಪಿಂಕಿ ಪಾರ್ಟಿಯ ಸಿದ್ಧತೆ ಮಾಡುವುದರಲ್ಲಿ ಮಗ್ನಳಾಗಿದ್ದಳು…. ಇಲ್ಲಿ ಕೆಲಸವೇನೂ ಮಾಡುತ್ತಿಲ್ಲ. ಸೋಫಾದಲ್ಲಿ ಒರಗಿ ಫೋನ್ ಮಾಡುತ್ತಲೇ ಪಾರ್ಟಿಯ ನಡೆಸಿಬಿಡುತ್ತಾಳೆ. ಅವಳು ಫೋನ್‌ ಮಾಡುವುದು, ಚ್ಯಾಟ್‌ ಮಾಡುವುದು, ವೀಡಿಯೋ ನೋಡುವುದು, ಪುಸ್ತಕ ಓದುವುದು ಎಲ್ಲ ಸೋಫಾದ ಮೇಲೆಯೇ ….. ಅವಳಿದ್ದರೆ ಬಹಳ ಚೆಂದ…. ಅವಳು ಮೂಡ್‌ ಚೆನ್ನಾಗಿದ್ದರೆ ನನ್ನನ್ನು ಸುಮ್ಮನೆ ಕೂರಲು ಬಿಡುವುದಿಲ್ಲ…. ಚೆನ್ನಾಗಿ ಆಟವಾಡಿಸುತ್ತಾಳೆ.

ಹೇಗೆ ಆಡಿಸುತ್ತಾಳೆ ಎಂದು ಹೇಳಲೇನು? ಸೋಫಾ ಮೇಲೆ ಮಲಗಿಕೊಂಡೇ ಮತ್ತೆ ಮತ್ತೆ ಚೆಂಡನ್ನು ಎಸೆಯುತ್ತಾಳೆ. `ಬಂಟಿ ಹೋಗು…. ಬಾಲ್ ‌ತೆಗೆದುಕೊಂಡು ಬಾ…. ವೆರಿಗುಡ್‌’ ಎನ್ನುತ್ತಿರುತ್ತಾಳೆ. ಒಮ್ಮೆ ಇತ್ತ….. ಒಮ್ಮೆ ಅತ್ತ….. ಟೇಬಲ್ ಕೆಳಗಡೆ ಒಮ್ಮೆ, ಸೋಫಾ ಕೆಳಗೆ ಮತ್ತೊಮ್ಮೆ…. ಚೆನ್ನಾಗಿ ಓಡಾಡಿಸಿ ತಲೆ ಕೆಡುವುವಂತೆ ಮಾಡುತ್ತಾಳೆ. ಆದರೂ ಅದೊಂದು ರೀತಿಯಲ್ಲಿ ಮಜವಾಗಿರುತ್ತದೆ.

ಪಿಂಕಿ ಈಗ ಊಟದ ಆರ್ಡರ್‌ ಮಾಡುತ್ತಿದ್ದಾಳೆ. ನನ್ನ ಕಿವಿ ಚುರುಕಾಯಿತು. ಇಲ್ಲಿ ಮನೆಯಲ್ಲಿ ಎಲ್ಲರೂ ವೆಜಿಟೇರಿಯನ್ಸ್ ರಾಹುಲ್ ಕೆಲವು ದಿನ ನನಗಾಗಿ ನಾನ್‌ ವೆಜ್‌ ಪ್ಯಾಕ್‌ ಮಾಡಿಸಿ ತರುತ್ತಾನೆ. ಅವನು ಹೊರಗೆ ನಾನ್‌ ವೆಜ್‌ ತಿನ್ನುವನೆಂದು ಮನೆಯಲ್ಲಿ ಯಾರಿಗೂ ತಿಳಿದಿಲ್ಲ. ಅದು ನನಗೆ ಮಾತ್ರ ಗೊತ್ತು. ಅವನು ನಾನ್‌ ವೆಜ್‌ ಹೊಡೆದು ಬಂದನೆಂದರೆ, ನನಗೆ ವಾಸನೆಯಿಂದಲೇ ಪತ್ತೆಯಾಗುತ್ತದೆ. ಅವನು ನನಗೂ ಅದನ್ನು ಪ್ಯಾಕ್‌ ಮಾಡಿಸಿ ತಂದ ದಿನ ನನಗೆ ಪಾರ್ಟಿ. ಮಾಯಾ ಮಾಡುವ ಗಂಜಿ, ಚಪಾತಿಯೂ ರುಚಿಯಾಗಿರುತ್ತದೆ. ಆದರೆ ಅದನ್ನೇ ದಿನ ತಿನ್ನುವುದೆಂದರೆ…. ನನಗೂ ಚೇಂಜ್‌ ಬೇಕಲ್ಲವೇ?

ಪಿಂಕಿ ಫೈನೈಸ್‌ ಮಾಡುತ್ತಿದ್ದಾಳೆ…. ಪಿಜ್ಜಾ, ಚಿಕನ್‌ ಬಿರಿಯಾನಿ, ವೆಜ್‌ ಬಿರಿಯಾನಿ, ಕೂಲ್ ಡ್ರಿಂಕ್ಸ್, ಐಸ್‌ ಕ್ರೀಂ….. ಅವಳ ಮೆನು ಲಿಸ್ಟ್ ನನಗೆ ಆಸಕ್ತಿಕರವಾಗಿ ತೋರಲಿಲ್ಲ. ಇರಲಿ, ಚಿಕನ್‌ ಬಿರಿಯಾನಿ ಉಂಟಲ್ಲ, ಸಂಜೆ, ಚಪಾತಿಗಿಂತ ವಾಸಿ.

ಪಿಂಕಿ ನನ್ನನ್ನು ಎತ್ತಿ ತಬ್ಬಿಕೊಂಡಳು.

“ರಾತ್ರಿ ಒಳ್ಳೆ ಪಾರ್ಟಿ ಇದೆ. ನಿನಗೆ ಚಿಕನ್‌ ಬಿರಿಯಾನಿ ಸಿಗುತ್ತದೆ. ಓ.ಕೆ.ನಾ?” ನಾನು ತಲೆ, ಬಾಲ ಅಲ್ಲಾಡಿಸಿದೆ, ಪಿಂಕಿಯ ಕೈ ನೆಕ್ಕಿದೆ.

“ನಡಿ, ಈಗ ಊಟ ಮಾಡಿ ಸ್ವಲ್ಪ ಮಲಗೋಣ. ಸಾಯಂಕಾಲಕ್ಕೆ ಫ್ರೆಶ್‌ ಆಗಿರಬಹುದು.”

ಪಿಂಕಿ ಇಬ್ಬರಿಗೂ ಊಟ ತಂದಳು. ನನ್ನ ಬಟ್ಟಲಿಗೆ ಗಂಜಿ, ಅನ್ನ ಸುರಿದು, ತನ್ನ ಪ್ಲೇಟನ್ನು ಹಿಡಿದು ಸೋಫಾದ ಮೇಲೆ ಕುಳಿತಳು. ಅವಳು ಸರಳ ಸ್ವಭಾವದವಳು. ತಾಯಿ ಮಾಡಿದ ಅಡುಗೆಯನ್ನು ಮಾತಿಲ್ಲದೆ ತಿನ್ನುತ್ತಾಳೆ. ಅದೇ  ರಾಹುಲ್ ‌ನನ್ನು ಒಪ್ಪಿಸವುದು ಕಷ್ಟ.

“ಏನಮ್ಮಾ , ಈ ಸಪ್ಪೆ ಸಾರು ತಿನ್ನಲು ನಾನೇನು ಕಾಯಿಲೆಯವನಾ?” ಎನ್ನುತ್ತಾನೆ. ಅದನ್ನು ಕೇಳಿ ನನಗೆ ಜೋರಾಗಿ ನಗು ಬರುತ್ತದೆ.

ಊಟ ಮಾಡಿ ನಾವಿಬ್ಬರೂ ಮಲಗಿದೆ. ಬಹಳ ತಿಂಗಳುಗಳ ನಂತರ ನಾನಿಂದು 2 ಗಂಟೆ ಕಾಲ ಗಡದ್ದಾಗಿ ನಿದ್ರೆ ಮಾಡಿದೆ. ದಿನ ಇಂತಹ ನಿದ್ರೆ ಮಾಡುವ ಅದೃಷ್ಟ ನನಗೆಲ್ಲಿದೆ? ಆ ಕ್ರೈಮ್ ಪ್ಯಾಟ್ರೋಲ್ ನ ಶಬ್ದ….. ಮನೆಯ ಮೂಲೆ ಮೂಲೆಯಲ್ಲೂ ಮಲಗಲು ಪ್ರಯತ್ನಿಸಿದ್ದೇನೆ….. ನಿದ್ರೆ ಮಾಡಲು ಸಾಧ್ಯವಾಗುವುದೇ ಇಲ್ಲ.

ಸಾಯಂಕಾಲ ಪಿಂಕಿ ನನ್ನನ್ನು ಹೊರಗಡೆ ಕರೆದುಕೊಂಡು ಹೋದಳು. ಪಕ್ಕದ ಅಪಾರ್ಟ್‌ ಮೆಂಟ್‌ ನ ಆಂಟಿ, “ಪಿಂಕಿ, ನ್ಯೂ ಇಯರ್‌ ಪಾರ್ಟಿ ಎಲ್ಲಿ?” ಎಂದು ಕೇಳಿದರು. ಕಿಲಾಡಿ ಪಿಂಕಿ ಮುಗ್ಧ ಮುಖಭಾವ ಪ್ರದರ್ಶಿಸುತ್ತಾ, “ಪಾರ್ಟಿ ಏನಿಲ್ಲ ಆಂಟಿ. ಮನೆಯಲ್ಲೇ ಇರುತ್ತೇನೆ,” ಎಂದಳು. ಇವರೆಲ್ಲ ಮಾಯಾರ ಗೆಳತಿಯರಲ್ಲವೇ? ಒಂದು ರೀತಿಯಲ್ಲಿ ರಿಪೋರ್ಟರ್‌ ಗಳಂತೆ ಎಂಬುದು ಪಿಂಕಿಗೆ ಚೆನ್ನಾಗಿ ಗೊತ್ತು.

ಪಿಂಕಿ ಸ್ನಾನ ಮಾಡಿ ಸಿದ್ಧಳಾಗುತ್ತಿದ್ದಾಳೆ. ಫೋನ್‌ ಕರೆಗಳು ಬರುತ್ತಿವೆ. ಪಾರ್ಟಿಗೆ ಒಂದು ಖಾಲಿ ಮನೆ ಸಿಕ್ಕಿರುವುದರಿಂದ ಎಲ್ಲರೂ ಖುಷಿಯಾಗಿದ್ದಾರೆ. 8 ಗಂಟೆಯ ಹೊತ್ತಿಗೆ ಎಲ್ಲರೂ ಬಂದರು. ಅಂಜಲಿ, ಸಂಜಯ್‌, ರಶ್ಮಿ, ಟೋನಿ, ಮಧು, ರೀಟಾ, ಆರತಿ, ಸ್ನೇಹಾ…… ಇವರೆಲ್ಲ ನನಗೆ ಬಹಳ ಇಷ್ಟ.

ಟೋನಿ ಬರುತ್ತಿದ್ದಂತೆ ನನ್ನ ಮುಂದೆ ನೆಲದ ಮೇಲೆ ಕುಳಿತು ನನ್ನನ್ನು ಆಟವಾಡಿಸತೊಡಗಿದ, “ಹಲೋ ಬಂಟಿ, ಮಿಸ್‌ ಯೂ ಯಾರ್‌.”

ಟೋನಿ ಯಾವಾಗಲೂ ಹೀಗೇ ಹೇಳುತ್ತಾನೆ. ನನಗೂ `ಮಿಸ್‌ ಯೂ ಟೂ, ಆಗಾಗಾ ಬರುತ್ತಿರು,’ ಎಂದು ಹೇಳುವ ಬಯಕೆ…. ಆದರೆ ಹೇಳಲಾರೆ. ಮಾತು ನನ್ನ ಬಾಯಿಯಲ್ಲೇ ಉಳಿಯುತ್ತದೆ. ಉಳಿದವರೂ `ಹಲೋ ಬಂಟಿ’ ಎಂದು ಮೈ ಸವರಿದರು.

ಸೆಲ್ಛಿಯ ಗೀಳಿರುವ ಆರತಿ ನನ್ನ ಜೊತೆ ಫೋಟೋಗಳನ್ನು ತೆಗೆದುಕೊಂಡಳು. ನಾನು ಒಳ್ಳೆಯ ಪೋಸ್‌ ಕೊಟ್ಟೆ. ನನಗೆ ಇದು ಚೆನ್ನಾಗಿ ಅಭ್ಯಾಸವಾಗಿದೆ. ರಾಹುಲ್ ‌ಮತ್ತು ಪಿಂಕಿಯ ಸ್ನೇಹಿತರೆಲ್ಲ ನನ್ನೊಂದಿಗೆ ಸೆಲ್ಛೀ ತೆಗೆದುಕೊಳ್ಳುತ್ತಾರೆ. ಆಗ ನಾನೊಬ್ಬ ಸ್ಟಾರ್‌ ಎಂಬಂತಹ ಅನುಭವವಾಗುತ್ತದೆ.

9 ಗಂಟೆಗೆ ಡಿನ್ನರ್‌ ಡೆಲಿವರಿ ಆಯಿತು. ರಶ್ಮಿ, “ಊಟ ಬಿಸಿಯಾಗಿದೆ. ಮೊದಲು ಊಟ ಮಾಡೋಣವೇನು?” ಎಂದಳು.

ಪಿಂಕಿ ಯೋಚಿಸುವ ರೀತಿಯೇ ಬೇರೆ. “ರಾತ್ರಿ ಇಡೀ ಪಾರ್ಟಿ ಮಾಡುತ್ತೇವೆ. ಮತ್ತೆ ಹಸಿವಾದರೆ….?” ಎಂದಳು.

ಸಂಜಯ್‌, “ನ್ಯೂ ಇಯರ್‌ ಟೈಮ್ ತಾನೇ? ಮತ್ತೆ ಬೇಕಾದರೆ ತರಿಸೋಣ,” ಎಂದು ಹೇಳಿದ.

ಫುಡ್‌ ಪ್ಯಾಕೆಟ್‌ ಗಳನ್ನು ಬಿಚ್ಚಿದರು. ಪಿಂಕಿ ಮೊದಲು ಚಿಕನ್‌ ಬಿರಿಯಾನಿಯನ್ನು ನನ್ನ ಬಟ್ಟಲಿಗೆ ಹಾಕಿದಳು. `ಥ್ಯಾಂಕ್ಯೂ ಪಿಂಕೀ,’ ಎನ್ನುತ್ತಾ ನಾನು ಬಟ್ಟಲಿಗೆ ಬಾಯಿ ಹಚ್ಚಿದೆ. ಎಂತಹ ರುಚಿ…. ಎಲ್ಲವನ್ನೂ ಮುಗಿಸಿಯೇ ನಾನು ತಲೆ ಎತ್ತಿದೆ. ಎಲ್ಲ ಮಕ್ಕಳೂ ಡ್ರಾಯಿಂಗ್‌ ರೂಮ್ ನಲ್ಲಿ ಊಟ ಮಾಡುತ್ತಿದ್ದರು.

ಮಧು ನನ್ನ ಹತ್ತಿರ ಬಂದು, “ಬಂಟಿ, ಪಿಜ್ಜಾ ಬೇಕಾ?” ಎಂದು ಕೇಳಿದ. ನಾನು ಅಲ್ಲಿಂದ ದೂರ ಹೋದೆ. ಬಿರಿಯಾನಿ ತಿಂದ ಮೇಲೆ ಪಿಜ್ಜಾ ಯಾರಿಗೆ ಬೇಕು? ಬಾಯಲ್ಲಿ ಒಳ್ಳೆಯ ರುಚಿ ಉಳಿದಿದೆ.

ಪಿಂಕಿ ಎಲ್ಲರನ್ನೂ ಉದ್ದೇಶಿಸಿ, “ಪ್ಲೀಸ್‌ ಎಲ್ಲರೂ ನಿಮ್ಮ ನಿಮ್ಮ ಪ್ಲೇಟ್‌ ಮತ್ತು ಕಪ್‌ ತೊಳೆದಿಡಿ. ಮಿಕ್ಕೆಲ್ಲವನ್ನೂ ಡಸ್ಟ್ ಬಿನ್‌ ಗೆ ಹಾಕಿ. ನಾವು ಪಾರ್ಟಿ ಮಾಡಿದ್ದೇವೆ ಅಂತ ಮಮ್ಮಿಗೆ ಗೊತ್ತಾಗಬಾರದು. ಎಲ್ಲರೂ ಸೇರಿದ್ದೇವೆ ಅಂದರೆ ಅವರಿಗೆ ಯೋಚನೆ ಆಗುತ್ತದೆ.”

“ಡೋಂಟ್‌ ವರಿ. ನಾವು ಎಲ್ಲವನ್ನೂ ಸರಿ ಮಾಡುತ್ತೇವೆ,” ಎಂದಳು ರಶ್ಮಿ.

ಎಲ್ಲರೂ ಹರಟೆ ಹೊಡೆಯುತ್ತಾ, 10 ಗಂಟೆಯವರೆಗೆ ನಿಧಾನವಾಗಿ ಊಟ ಮಾಡಿದರು. ಇವರದು ಒಂದು ಬೇರೆಯದೇ ಪ್ರಪಂಚ…. ಬೇರೆ ಬೇರೆ ವಿಷಯಗಳು…. ಸಿನಿಮಾಗಳು, ಹೊಸ ಹಾಡುಗಳು…. ತಮ್ಮ ತಮ್ಮ ಆಫೀಸಿನ ತಮಾಷೆ ಮಾತುಗಳು, ಅವರ ಮಾತುಗಳಿಂದ ಸಂಜಯ್‌ ರಶ್ಮಿಯ ಬಾಯ್‌ ಫ್ರೆಂಡ್‌ ಮತ್ತು ಟೋನಿ ಆರತಿಯ ಬಾಯ್‌ ಫ್ರೆಂಡ್‌ ಎಂದು ನನಗೆ ಚೆನ್ನಾಗಿ ಅರ್ಥವಾಯಿತು.

“ಬೆಳಗ್ಗೆ 8 ಗಂಟೆಯ ಹೊತ್ತಿಗೆ ಎಲ್ಲರೂ ಹೊರಟುಬಿಡಿ. 9 ಗಂಟೆಗೆ ಕೆಲಸದವಳು ಬರುತ್ತಾಳೆ…. ಅವಳು ಮಮ್ಮಿಗೆ ಹೇಳಿಬಿಡುತ್ತಾಳೆ,” ಎಂದು ಪಿಂಕಿ ಮತ್ತೆ ಸೂಚನೆ ನೀಡಿದಳು.

“ಡೋಂಟ್‌ ವರಿ ಯಾರ್‌. ಪಾರ್ಟಿ ಮಾಡಲು ಒಂದು ಮನೆ ಸಿಕ್ಕಿದೆಯಲ್ಲ, ಅದೇ ದೊಡ್ಡದು. ನ್ಯೂ ಇಯರ್‌ ಗೆ ಹೋಟೆಲ್ ‌ನಲ್ಲಿ ವೇಟಿಂಗ್‌ ಬಹಳ ಇರುತ್ತದೆ. ಆರಾಮವಾಗಿ ಊಟ ಮಾಡಿದೆ. ಈಗ ಟೈಮ್ ಪಾಸ್‌ ಮಾಡೋಣ.”

“ಮೂವಿ ನೋಡೋಣ,” ಪಿಂಕಿ ಹೇಳಿದಳು.

mini-ki-n-y-party-story2

ನಾನು ಕಿವಿ ನಿಮಿರಿಸಿದೆ. ಇವಳು ಗ್ಯಾರಂಟಿ `ಓಂ ಶಾಂತಿ ಓಂ’ ಹಾಕುತ್ತಾಳೆ. ನನಗಂತೂ ಅದರ ಡೈಲಾಗ್ಸ್ ಬಾಯಿಪಾಠವಾದಂತಿದೆ.

ಎಲ್ಲರೂ ಅವರವರ ಇಷ್ಟವನ್ನು ಹೇಳತೊಡಗಿದರು. ನಾನು ಆರಾಮವಾಗಿ ಕುಳಿತೆ. ಯಾರ ಮಾತೂ ನಡೆಯುವುದಿಲ್ಲ ಎಂದು ನನಗೆ ಗೊತ್ತು. ಪಿಂಕಿ ಶಾರೂಖ್‌ ನದಲ್ಲದೆ ಬೇರೆಯದನ್ನು ನೋಡುವುದಿಲ್ಲ. 20 ನಿಮಿಷಗಳ ಚರ್ಚೆಯ ನಂತರ `ಓಂ ಶಾಂತಿ ಓಂ’ ನೋಡುವುದೆಂದು ತೀರ್ಮಾನವಾಯಿತು.

ನೋಡಿದಿರಾ? ನಾನು ಬೆಳಗ್ಗೆಯಿಂದ ಅಂದುಕೊಂಡಂತೆಯೇ ಆಯಿತು. ಕಿಲಾಡಿ ಪಿಂಕಿ, ಹೇಗೆ ತನಗೆ ಬೇಕಾದಂತೆ ಮಾಡಿಸಿಕೊಳ್ಳುತ್ತಾಳೆ….. ಆದರೆ ಅವಳು ಒಳ್ಳೆಯ ಹುಡುಗಿ. ಸ್ನೇಹಿತರೆಲ್ಲ ಅವಳನ್ನೇ ಇಷ್ಟಪಡುತ್ತಾರೆ.

ಮೂವಿ ಯಾವುದೆಂದು ತಿಳಿದ ಮೇಲೆ ನಾನು ಮೆಲ್ಲನೆ ರೂಮ್ ಗೆ ಹೋಗಿ ಮಂಚದ ಕೆಳಗೆ ತೂರಿಕೊಂಡೆ. ಬಹುಶಃ ಅಲ್ಲಿಗೆ ಟಿವಿ ಶಬ್ದ ಕಡಿಮೆ ಕೇಳಬಹುದು ಎಂದು ನನ್ನ ಆಲೋಚನೆ.

“ಬಂಟಿ ಬಾ, ಮೂವಿ ನೋಡೋಣ. ಎಲ್ಲಿದ್ದೀಯಾ ನೀನು?” ಟೋನಿಯ ಧ್ವನಿ ಕೇಳಿಸಿತು.

`ಅಯ್ಯೋ, ನೀವೆಲ್ಲ ನೋಡಿ ಸಾಕು. ನಾನು ಅದನ್ನು ಒಂದು 10 ಸಲ ನೋಡಿರಬಹುದು….. ನಾನು ಪಿಂಕಿ ಜೊತೆಗೇ ಇರುವನಲ್ಲವೇ ನನ್ನನ್ನು ಬಿಟ್ಟುಬಿಡಿ,’ ಎಂದು ಹೇಳಿದೆ.

ಅಷ್ಟರಲ್ಲಿ ಮಧು ಸಹ, “ಕಮ್ ಬಂಟಿ….. ಕಮ್,” ಎಂದು ಕರೆದ.

`ಕರೆಯುತ್ತಾ ಇದ್ದಾರೆ. ನಾನು ಹೋಗಲೇಬೇಕು,’ ಎಂದುಕೊಳ್ಳುತ್ತಾ ನಾನು ಡ್ರಾಯಿಂಗ್‌ ರೂಮ್ ಗೆ ಹೋಗಿ ಮಕ್ಕಳ ಬಳಿ ನಿಂತೆ.

ಮಧು ನನ್ನನ್ನು ತಬ್ಬಿಕೊಂಡು, “ಬಾ ಬಂಟಿ, ಮೂವಿ ನೋಡೋಣ,” ಎಂದ.

ಪಿಂಕಿಯ ಮೂಡ್‌ ಚೆನ್ನಾಗಿದೆಯೆಂದರೆ, ನನಗೀಗ ಹೊಂದಿಕೆಯಾಗುತ್ತದೆ. `ನಾನು ಈ ಮೂವಿ ನೋಡುವುದಿಲ್ಲ. ಅದರ ಪ್ರತಿಯೊಂದು ಸೀನ್‌ ನನಗೆ ಗೊತ್ತಿದೆ. ಪ್ಲೀಸ್‌ ನನ್ನನ್ನು ಬಿಟ್ಟುಬಿಡಿ,’ ಎಂದು ಹೇಳಿದೆ.

ಆದರೆ ಎಲ್ಲಿ ಹೋಗುವುದು, ಪಿಂಕಿ ತನ್ನ ದಿಂಬನ್ನು ನನ್ನ ಬಳಿಯೇ ನೆಲದ ಮೇಲೆ ಹಾಕಿ, “ಬಾ ಬಂಟಿ, ನೀನಿಲ್ಲದೆ ಮೂವಿ ನೋಡಿದರೆ ಖುಷಿಯೇ ಆಗುವುದಿಲ್ಲ,” ಎಂದಳು.

ಇನ್ನೆಲ್ಲಿ ಹೋಗಲಿ? ನಾನು ಬಿಗಿಯಾಗಿ ಕಣ್ಣು ಮುಚ್ಚಿ ಮಲಗಿದೆ. ಆದರೆ ಕಿವಿಗಳು ತೆರೆದೇ ಇವೆಯಲ್ಲ. ಡೈಲಾಗ್‌ ಕಿವಿಗೆ ಬೀಳುತ್ತಲೇ ಇದೆ. ಶಾರೂಖ್‌ ಖಾನ್‌ ಮೂವಿಯ ಡೈಲಾಗ್‌ ಬಗ್ಗೆ ಒಂದು ಟೆಸ್ಟ್ ಇಟ್ಟರೆ, ಅದರಲ್ಲಿ ನನಗೇ ಫಸ್ಟ್ ಪ್ರೈಜ್‌. ಆದರೆ ಅದರ ಕ್ರೆಡಿಟ್‌ ಪಿಂಕಿಗೇ ಸೇರಬೇಕು.

12 ಗಂಟೆಗೆ 2 ನಿಮಿಷ ಇರುವಾಗ ಟಿ.ವಿ ಆಫ್‌ ಮಾಡಿದರು. `ಹ್ಯಾಪಿ ನ್ಯೂ ಇಯರ್‌’ ಸದ್ದಿನಿಂದ ಡ್ರಾಯಿಂಗ್‌ ರೂಮ್ ಮೊಳಗಿತು. ಎಲ್ಲರೂ ಪರಸ್ಪರ ಆಲಂಗಿಸಿದರು. ನನಗೂ ಎಲ್ಲರೂ `ಹ್ಯಾಪಿ ನ್ಯೂ ಇಯರ್‌’ ಹೇಳಿದರು. ಈ ಆಧುನಿಕ ಮಕ್ಕಳಿಗೆ ಮ್ಯಾನರ್ಸ್ ಇದೆ.

“ಈಗ ಡ್ಯಾನ್ಸ್ ಮಾಡೋಣ,” ರೀಟಾ ಹೇಳಿದಳು.

ರೀಟಾಳಿಗೆ ಡ್ಯಾನ್ಸಿನಲ್ಲಿ ಆಸಕ್ತಿ ಇದೆ ಎಂದು ನನಗೆ ಗೊತ್ತಿತ್ತು. ಅವಳು ಡ್ಯಾನ್ಸ್ ಕ್ಲಾಸ್‌ ಗೆ ಸಹ ಸೇರಿದ್ದಳು. ನಾನು ಡ್ಯಾನ್ಸ್ ನೋಡಲೆಂದು ಮೂಲೆಗೆ ಹೋಗಿ ಕುಳಿತೆ. ಈ ಮಕ್ಕಳ ಡ್ಯಾನ್ಸ್ ಬಲು ಚೆಂದ. ಫರ್ನೀಚರ್‌ ನ್ನೆಲ್ಲ ಒಂದು ಪಕ್ಕಕ್ಕೆ ತಳ್ಳಿ ಡ್ಯಾನ್ಸ್ ಮಾಡಲು ಜಾಗ ಮಾಡಲಾಯಿತು.

ಪಿಂಕಿ ಡ್ಯಾನ್ಸಿಗೆ ಯಾವ  ಮ್ಯೂಸಿಕ್‌ ಹಾಕುತ್ತಾಳೆಂದು ನನಗೆ ಗೊತ್ತು. ಅವಳು ಈಚಿನ ದಿನಗಳಲ್ಲಿ `ಬಾದ್‌ ಶಾಹ್‌’ನ ಹಾಡನ್ನೇ ಕೇಳುತ್ತಿರುತ್ತಾಳೆ. ಆ ಹಾಡಿಗೆ ಮಕ್ಕಳೆಲ್ಲ ನರ್ತಿಸಲು ಪ್ರಾರಂಭಿಸಿದರು. ಚೆನ್ನಾಗಿ ಮಾಡುತ್ತಿದ್ದಾರೆ. ಟೋನಿ…. ಕೊಂಚ ದಪ್ಪ, ಆದರೂ ಸೂಪರ್‌ ಆಗಿ ಡ್ಯಾನ್ಸ್ ಮಾಡುತ್ತಾನೆ. ಎಲ್ಲರೂ ರೀಟಾಳ ಸ್ಟೆಪ್‌ ಗಳನ್ನು ಕಾಪಿ ಮಾಡುತ್ತಿದ್ದಾರೆ. ಅವಳು ಕ್ಲಾಸ್‌ ಗೆ ಹೋಗಿ ಕಲಿಯುತ್ತಿದ್ದಾಳಲ್ಲ. ಪಿಂಕಿ ಸಹ ಹೊಸ ಬಗೆಯ ಡ್ಯಾನ್ಸ್ ಮಾಡುತ್ತಿದ್ದಾಳೆ. ಅದು ಅವಳದೇ ಸ್ಟೈಲ್. ಅದನ್ನು ಯಾರೂ ಕಾಪಿ ಮಾಡಬಾರದು. ಅವಳು ಏನೇ ಮಾಡಿದರೂ ಚೆನ್ನಾಗಿ ಮಾಡುತ್ತಾಳೆ.

ಡ್ಯಾನ್ಸ್ ಪ್ರಾರಂಭವಾಯಿತೆಂದರೆ, ಬೇಗನೆ ಮುಗಿಯುವುದಿಲ್ಲ. ಮಧ್ಯೆ ಮಧ್ಯೆ ಕೂಲ್ ‌ಡ್ರಿಂಕ್ಸ್ ಕುಡಿಯುತ್ತಾ ಡ್ಯಾನ್ಸ್ ಮಾಡಿದರು. 2 ಗಂಟೆಯವರೆಗೂ ನೃತ್ಯ ಕಾರ್ಯಕ್ರಮ ನಡೆಯಿತು. ಅಲ್ಲ…. ತಾಯಿ ಹೇಳಿದ ಒಂದೆರಡು ಕೆಲಸ ಮಾಡುವ ಹೊತ್ತಿಗೆ ಪಿಂಕಿ ಸುಸ್ತಾಗುತ್ತಾಳೆ. ಆದರೆ ಈಗ ನೋಡಿ, ಏನೇ ಆಗಲಿ, ಪಾರ್ಟಿ ಚೆನ್ನಾಗಿ ನಡೆಯಿತು. ಇಲ್ಲದಿದ್ದರೆ, ಪ್ರತಿ ವರ್ಷದಂತೆ ಟಿವಿಯಲ್ಲಿ ಬರುವ ಬೋರಿಂಗ್‌ ನ್ಯೂ ಇಯರ್‌ ಪ್ರೋಗ್ರಾಂ ನೋಡಬೇಕಾಗಿತ್ತು.

ಡ್ಯಾನ್ಸ್ ಪ್ರೋಗ್ರಾಂ ನಂತರ ಎಲ್ಲರೂ ಮಲಗಲು ಹೊರಟರು. ಪಿಂಕಿಯ ಬೆಡ್‌ ಮೇಲೆ 3 ಜನ ಹುಡುಗಿಯರು….. ಉಳಿದವರು ಕೆಳಗೆ ಕಾರ್ಪೆಟ್‌ ಹಾಸಿಕೊಂಡು ಮಲಗಿದರು. ಗಂಡು ಹುಡುಗರು ಶೇಖರ್‌ ಮತ್ತು ಮಾಯಾರ ಬೆಡ್‌ ರೂಮ್ ನಲ್ಲಿ ಮಲಗಿದರು. ಅವರೆಲ್ಲರ ಮಲಗುವ ವ್ಯವಸ್ಥೆ ಆದ ಮೇಲೆ ನಾನೂ ಡ್ರಾಯಿಂಗ್‌ ರೂಮ್ ನಲ್ಲಿ ನನ್ನ ಜಾಗದಲ್ಲಿ ಮಲಗಿದೆ. ಟೋನಿ ಅಲ್ಲೇ ಸೋಫಾದ ಮೇಲೆ ಮಲಗಿದ್ದ. ಅವನು ಗೊರಕೆ ಹೊಡೆಯುವನೆಂದು ಅವನನ್ನು ಪ್ರತ್ಯೇಕವಾಗಿ ಮಲಗಲು ಕಳುಹಿಸಿದ್ದರು. ಆದರೆ ನಾನು ಸಿಕ್ಕಿಕೊಂಡೆ. ಅವನ ಗೊರಕೆಯಿಂದ ನನಗೆ ನಿದ್ರೆ ಹತ್ತಲಿಲ್ಲ.

ಪಿಂಕಿಯ ಅಲಾರ್ಮ್ ಗಂಟೆಗೆ ಹೊಡೆಯಿತು. ಕೂಡಲೇ ಮನೆಯಲ್ಲಿ ಗಡಿಬಿಡಿಯ ವಾತಾವರಣ ಏರ್ಪಟ್ಟಿತು. ಕೆಲವೇ ನಿಮಿಷಗಳಲ್ಲಿ ಎಲ್ಲರೂ ಸೇರಿ ಮನೆಯನ್ನು ಮೊದಲಿದ್ದಂತೆ ವ್ಯವಸ್ಥೆಗೊಳಿಸಿದರು. ಮತ್ತೊಮ್ಮೆ ಎಲ್ಲರೂ ಪರಸ್ಪರ `ಹ್ಯಾಪಿ ನ್ಯೂ ಇಯರ್‌’ ಎಂದು ಹೇಳುತ್ತಾ ತಮ್ಮ ಮನೆಗಳಿಗೆ ತೆರಳಿದರು. ಪಿಂಕಿ ನನ್ನನ್ನು ಹೊರಗೆ ಸುತ್ತಾಡಿಸಿ ಬಂದಳು. ಆ ಹೊತ್ತಿಗೆ ಕೆಲಸದ ಭವಾನಿ ಬಂದಳು. ಪಿಂಕಿ ಅವಳಿಗೂ ನ್ಯೂ ಇಯರ್‌ ವಿಶ್‌ ಹೇಳಿದಳು.

“ಪಿಂಕಿ, ನ್ಯೂ ಇಯರ್‌ ಗೆ ಎಲ್ಲೂ ಹೋಗಲಿಲ್ಲವೇ? ಫ್ರೆಂಡ್ಸ್ ಬಂದಿದ್ದರಾ?” ಭವಾನಿ ಕೇಳಿದಳು.

“ಇಲ್ಲ ಭವಾನಿ,” ಎನ್ನುತ್ತಾ ಪಿಂಕಿ ನನ್ನತ್ತ ನೋಡಿ ಕಣ್ಣು ಹೊಡೆದಳು. ನಾನೂ ಕಣ್ಣು ಹೊಡೆದು ನನ್ನ ಕಾಲೆತ್ತಿ ಪ್ರತಿಕ್ರಿಯಿಸಿದೆ.

“ಓ ಬಂಟಿ, ಐ ಲವ್ ಯೂ,” ಪಿಂಕಿ ನನ್ನನ್ನು ತಟ್ಟಿದಳು.

`ಲವ್ ಯೂ ಟೂ ಪಿಂಕಿ.’

“ಪಾರ್ಟಿ ಮಜವಾಗಿತ್ತು ಅಲ್ಲವೇ?” ಪಿಂಕಿ ನನ್ನ ಕಿವಿಯಲ್ಲಿ ಕೇಳಿದಳು. “ಹೌದು. ಬಹಳ ಮಜವಾಗಿತ್ತು,” ನಾನು ಬಾಲ ಅಲ್ಲಾಡಿಸಿದೆ.

ಯುವ ಜನರ ಕಲರವದೊಂದಿಗೆ ನನ್ನ ಹೊಸ ವರ್ಷದ  ಪ್ರಾರಂಭ ಚೆನ್ನಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ