`ಅದೆಷ್ಟು ಸಂತಸದ ದಿನಗಳಾಗಿದ್ದ ಅವು……’ ಕಳೆದ ದಿನಗಳನ್ನು ಜ್ಞಾಪಿಸಿಕೊಂಡಾಗ ಯಾಮಿನಿಯ ಕಂಗಳು ತುಂಬಿಬಂದವು.

ಕಾಲೇಜಿಗೆ ಸೇರಿದ್ದ ಪ್ರಾರಂಭದ ದಿನಗಳು. ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರೂ ಒಬ್ಬರಿಗೊಬ್ಬರ ಪರಿಚಯವಿರಲಿಲ್ಲ. ನಿಧಾನವಾಗಿ ಪರಿಚಯ ಮಾಡಿಕೊಂಡು ಅವರು ಗೆಳೆತನ ಬೆಳೆಸತೊಡಗಿದರು. ಆದರೆ ನಾಲ್ಕಾರು ದಿನಗಳು ಕಳೆದರೂ ಯಾಮಿನಿಗೆ ಸರಿಹೊಂದುವ ಮಿತ್ರರು ದೊರೆತಿರಲಿಲ್ಲ.

ಒಂದು ದಿನ ಯಾಮಿನಿ ಕಾಲೇಜು ತಲುಪುವಾಗ ರೋಹಿತ್‌ ಕಾಲೇಜಿನ ಗೇಟ್‌ ಬಳಿ ಸಿಕ್ಕಿದ. ಅವನು ನಗೆ ಬೀರಿ `ಹಲೋ,’ ಎಂದು ತನ್ನ ಪರಿಚಯ ಹೇಳಿದ. ಅವನ ನಡವಳಿಕೆ ಯಾಮಿನಿಗೆ ಬಹಳ ಇಷ್ಟವಾಯಿತು.

“ನನ್ನ ಹೆಸರು ಯಾಮಿನಿ. ನಾನು ಶಾರದಾ ಕಾಲೇಜಿನಿಂದ ಬಂದಿದ್ದೇನೆ,” ಅವಳು ರೋಹಿತ್‌ ಗೆ ತನ್ನ ಪರಿಚಯ ತಿಳಿಸಿಕೊಟ್ಟಳು.

ಪಾಠದ ವಿಷಯದಲ್ಲಿ ರೋಹಿತ್‌ ಬಹಳ ಚುರುಕಾಗಿದ್ದ. ಲೆಕ್ಚರರ್‌ ಕೇಳುವ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರ ಕೊಡುತ್ತಿದ್ದ. ಅವನ ಜಾಣತನ ಮತ್ತು ವಿಷಯದ ಬಗೆಗಿನ ಆಳವಾದ ಜ್ಞಾನ ಯಾಮಿನಿಯ ಮನಸ್ಸನ್ನು ಸೆಳೆಯಿತು.

ಬಿಡುವಿನ ಸಮಯದಲ್ಲಿ ಒಮ್ಮೆ ರೋಹಿತ್‌ ಯಾಮಿನಿಯನ್ನು ಕಾಫಿಗೆ ಕರೆದ. ಯಾಮಿನಿಗೆ ಇಲ್ಲವೆನ್ನಲಾಗಲಿಲ್ಲ. ಇಬ್ಬರೂ ಕ್ಯಾಂಟೀನ್‌ ಗೆ ಹೋಗಿ ಕುಳಿತರು. ಕಾಫಿ ಕುಡಿಯುವಾಗ ರೋಹಿತ್‌ ಎವೆಯಿಕ್ಕದೆ ಯಾಮಿನಿಯನ್ನೇ ನೋಡುತ್ತಿದ್ದ. ಯಾಮಿನಿಗೆ ಅವನ ದೃಷ್ಟಿಯನ್ನು ಎದುರಿಸುವುದು ಕಷ್ಟವಾಯಿತು. ಆದರೆ ಅವಳ ಎದೆಯಲ್ಲಿ ಸಂತಸದ ಸುಂಟರಗಾಳಿ ಅಲೆ ಎಬ್ಬಿಸಿತು.

ಕ್ಲಾಸ್‌ ಮುಗಿಸಿ ಮನೆಗೆ ಹೋಗುವಾಗ ರೋಹಿತ್‌ ಹತ್ತಿರ ಬಂದು ಪ್ರೀತಿಯಿಂದ `ಬೈ’ ಹೇಳಿದ. ಯಾಮಿನಿ ಮೈ ನವಿರೆದ್ದಿತು. ರಾತ್ರಿಯೆಲ್ಲ ಅವಳ ಕಣ್ಮುಂದೆ ರೋಹಿತನ ಮುಖವೇ ತೇಲಿ ಬರುತ್ತಿತ್ತು. ಕಣ್ಣು ಮುಚ್ಚಿದರೆ, ಅವನು ಜೊತೆಯಲ್ಲಿರುವಂತೆಯೇ ಭಾಸವಾಗುತ್ತಿತ್ತು.

ಮರುದಿನ ಬೆಳಗ್ಗೆ ಎಚ್ಚರವಾದಾಗ ಎಂದಿನಂತೆ ಯಾಮಿನಿ ತನ್ನ ಮೊಬೈಲ್ ‌ಚೆಕ್‌ ಮಾಡಿದಳು, “ಗುಡ್‌ ಮಾರ್ನಿಂಗ್‌. ಹ್ಯಾವ್ ‌ಎ ನೈಸ್‌ ಡೇ,’ ಎಂದು ರೋಹಿತ್‌ ಮೆಸೇಜ್‌ ಮಾಡಿದ್ದ.

ಯಾಮಿನಿ ಬಹಳ ಹೊತ್ತು ಆ ಮೆಸೇಜ್‌ ನ್ನು ನೋಡುತ್ತಾ ಕುಳಿತಿದ್ದಳು. ಅವಳಿಗೆ ರೋಮಾಂಚನವಾಗುತ್ತಿತ್ತು. ಅದಕ್ಕೆ ಉತ್ತರ ಕಳುಹಿಸಬೇಕೆಂದುಕೊಂಡಳು. ಆದರೆ ಏನೆಂದು ಕಳುಹಿಸುವುದು ಎಂದು ಯೋಚಿಸುತ್ತಾ ಕುಳಿತಳು. ಟೈಪ್‌ ಮಾಡಲು ಹೋದರೆ ಅವಳ ಬೆರಳು ನಡುಗತೊಡಗಿತು.

ಅವಳು ಮತ್ತೆ ಆ ಮೆಸೇಜ್‌ ನ್ನು ನೋಡುತ್ತಾ ಕುಳಿತಳು. ಒಂದು ಸುಂದರವಾದ ಉತ್ತರ ಕೊಡಬೇಕೆಂಬ ಆಸೆ, ಆದರೆ ಏನೂ ಹೊಳೆಯುತ್ತಿಲ್ಲ. ಕಡೆಗೆ, `ವೆರಿ ಗುಡ್‌ ಮಾರ್ನಿಂಗ್‌’ ಎಂದು ಟೈಪ್‌ ಮಾಡಿ ಕಳುಹಿಸಿದಳು.

ಯಾಮಿನಿಯ ಬಾಳು ಒಂದು ಹೊಸ ತಿರುವು ಪಡೆದಿತ್ತು. ರೋಹಿತ್‌ ನನ್ನು ಭೇಟಿ ಮಾಡುವುದು, ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಪ್ರೀತಿಯಿಂದ ಮಾತನಾಡುವುದು ನಿತ್ಯ ಪದ್ಧತಿಯಾಯಿತು. ರೋಹಿತ್‌ ನಿಂದಾಗಿ ಯಾಮಿನಿಗೆ ಕಾಲೇಜ್‌ ಒಂದು ಅತ್ಯಂತ ಪ್ರಿಯ ಸ್ಥಾನವಾಯಿತು. ಪರಸ್ಪರ ಭೇಟಿ ಮಾಡದಿದ್ದರೆ ಇಬ್ಬರಿಗೂ ನೆಮ್ಮದಿ ಇರುತ್ತಿರಲಿಲ್ಲ. ಲೆಕ್ಚರರ್‌ ಬಾರದೆ ಕ್ಲಾಸ್ ಇಲ್ಲದಿದ್ದಾಗ, ಇಬ್ಬರೂ ಹತ್ತಿರದ ಪಾರ್ಕ್‌ ಅಥವಾ ಮಾಲ್ ‌ಗೆ ಹೋಗಿ ಸುತ್ತಾಡಿ ಬರುತ್ತಿದ್ದರು. ದಿನಗಳು ಮಜವಾಗಿ ಕಳೆಯುತ್ತಿದ್ದವು. ಕಾಲೇಜಿನಲ್ಲಿ ಅವರ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದ. ಆದರೆ ಅವರು ಅದನ್ನು ಲೆಕ್ಕಿಸಲಿಲ್ಲ.

ರೋಹಿತ್‌ ನೊಂದಿಗೆ ಮಾತನಾಡುವಾಗ ಯಾಮಿನಿಗೆ ಅವನ ಬಗ್ಗೆ ತಿಳಿದ ವಿಷಯವೆಂದರೆ, ಚಿಕ್ಕಂದಿನಲ್ಲಿಯೇ ಅವನ ತಾಯಿ ತಂದೆಯರು ಅಪಘಾತವೊಂದರಲ್ಲಿ ಅಸುನೀಗಿದ್ದರು. ಊರಿನಲ್ಲಿದ್ದ ಚಿಕ್ಕಪ್ಪ ಚಿಕ್ಕಮ್ಮ ಅವನನ್ನು ಬೆಳೆಸಿದ್ದರು. ಇಲ್ಲಿ ಅವನು ಬಾಡಿಗೆ ಕೋಣೆಯೊಂದರಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ರೋಹಿತ್‌ ಬಹಳ ಬುದ್ಧಿವಂತ ವಿದ್ಯಾರ್ಥಿ. ಅವನ ಸ್ನೇಹದಿಂದ ಯಾಮಿನಿಗೆ ಹೆಚ್ಚು ಅನುಕೂಲವಾಗಿತ್ತು. ಪಾಠ ಪ್ರವಚನ ವಿಷಯದಲ್ಲಿ ಅವಳಿಗೆ ರೋಹಿತ್‌ ನಿಂದ ಬಹಳ ಸಹಾಯ ಸಿಗುತ್ತಿತ್ತು.

ವಾರಾಂತ್ಯದ ರಜೆ ಮುಗಿಸಿ ಯಾಮಿನಿ ಕಾಲೇಜಿಗೆ ಹೋದಾಗ, ರೋಹಿತ್‌ ಕಾಲೇಜಿಗೆ ಬಂದಿರಲಿಲ್ಲ. ವಿರಾಮದ ನಂತರ ಅವನು ಬಾರದಿದ್ದಾಗ ಯಾಮಿನಿ ತಡೆಯಲಾರದೆ ಅವನಿಗೆ ಫೋನ್‌ ಮಾಡಿದಳು. ಆದರೆ ಅವನು ಫೋನ್‌ ಕರೆಗೆ ಉತ್ತರಿಸಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದ ನಂತರ ಕಡೆಗೊಮ್ಮೆ ಅತ್ತ ಕಡೆಯಿಂದ ಅವನ ಆಳವಾದ  ಧ್ವನಿ ಕೇಳಿ ಬಂತು, “ಯಾಮಿನಿ, ನನಗೆ ಜ್ವರ ಬಂದಿದೆ. ಕಾಲೇಜಿಗೆ ಬರಲು ಆಗುತ್ತಿಲ್ಲ.”

ಇದನ್ನು ಕೇಳಿ ಯಾಮಿನಿ ಗಾಬರಿಯಾದಳು, “ಡಾಕ್ಟರ್‌ ಹತ್ತಿರ ಹೋಗಿದ್ದೆಯಾ?” ಎಂದು ಕಕ್ಕುಲತೆಯಿಂದ ಕೇಳಿದಳು.

“ಮಾತ್ರೆ ತೆಗೆದುಕೊಂಡಿದ್ದೇನೆ. ನೀನೇನೂ ಯೋಚನೆ ಮಾಡಬೇಡ. ಹುಷಾರಾದ ಕೂಡಲೇ ಕಾಲೇಜಿಗೆ ಬರುತ್ತೇನೆ,” ಎಂದ.

ಮರುದಿನ ರೋಹಿತ್‌ ಕಾಲೇಜಿಗೆ ಬರಲಿಲ್ಲ. ಯಾಮಿನಿಗೆ ಪಾಠದಲ್ಲಿ ಮನಸ್ಸು ನಿಲ್ಲಲಿಲ್ಲ. ಅವನ ಯೋಚನೆಯೇ ಎಡಬಿಡದೆ ಕಾಡಿತು, `ರೋಹಿತ್‌ ಹೇಗಿದ್ದಾನೋ, ಜ್ವರ ಹೆಚ್ಚಾಗಿದೆಯೋ ಏನೋ, ಒಬ್ಬನೇ ಹೇಗೆ ಇದ್ದಾನೆ? ಊಟಕ್ಕೆ ಏನು ಮಾಡುತ್ತಾನೆ? ಹೋಗಿ ಅವನನ್ನು ನೋಡಬೇಕು,’ ಎಂದುಕೊಂಡಳು.

ರೋಹಿತ್‌ ಹಿಂದೊಮ್ಮೆ ಹೇಳಿದ್ದ ಗುರುತಿನ ಮೇಲೆ ಯಾಮಿನಿ ಕಷ್ಟಪಟ್ಟು ಅವನ ಕೋಣೆಯನ್ನು ತಲುಪಿದಳು. ಒಂದಷ್ಟು ಸಲ ಬಾಗಿಲು ತಟ್ಟಿದ ನಂತರ ರೋಹಿತ್‌ ಮೆಲ್ಲನೆ ಎದ್ದು ಬಂದು ಬಾಗಿಲು ತೆರೆದ. ಜ್ವರದಿಂದ ಅವನ ಮೈ ಸುಡುತ್ತಿತ್ತು. ಹಾಸಿಗೆಯ ಮೇಲೆ ಕುಳಿತುಕೊಳ್ಳಲೂ ಅವನಿಗೆ ಆಗುತ್ತಿರಲಿಲ್ಲ.

ಅವನ ಸ್ಥಿತಿ ಕಂಡು ಯಾಮಿನಿಗೆ ದುಃಖ, ಕೋಪ ಒಟ್ಟಿಗೆ ಬಂದವು. “ಇಷ್ಟೊಂದು ಜ್ವರ ಇದೆ. ನೀನು ಕೇಳಲೇ ಇಲ್ಲವಲ್ಲ. ಮಾತ್ರೆ ತೆಗೆದುಕೊಂಡೆಯಾ? ಮನೆಯವರಿಗೆ ತಿಳಿಸಿದ್ದೀಯಾ?” ಎಂದು ಕೇಳಿದಳು.

ರೋಹಿತ್‌ ಅರೆತೆರೆದ ಕಣ್ಣುಗಳಿಂದ ಅವಳನ್ನು ನೋಡುತ್ತಾ, “ಇಲ್ಲ…. ಚಿಕ್ಕಪ್ಪನಿಗೆ ತೊಂದರೆ ಕೊಡಲು ಮನಸ್ಸಾಗಲಿಲ್ಲ. ಡಾಕ್ಟರ್‌ ಹತ್ತಿರ ಹೋಗಲು ಶಕ್ತಿ ಇಲ್ಲ.”

ಎರಡೇ ದಿನಗಳಿಗೆ ರೋಹಿತ್‌ ಬಲಹೀನನಾಗಿದ್ದ. ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಮೂಡಿತ್ತು. ಅವನು ಏನೂ ತಿಂದಿರಲಿಲ್ಲ. ಏಕೆಂದರೆ ಅವನೇ ಸ್ವತಃ ಅಡುಗೆ ಮಾಡಿಕೊಳ್ಳಬೇಕಾಗಿತ್ತು. ಹೋಟೆಲ್ ‌ನಿಂದ ತಂದಿದ್ದ ತಿಂಡಿ ಸ್ಟೂಲ್ ಮೇಲೆ ಇತ್ತು. ಅದೂ ಒಣಗಿಹೋಗಿತ್ತು. ಅರ್ಧ ಖಾಲಿಯಾಗಿದ್ದ ಬಿಸ್ಕೆಟ್‌ ಪ್ಯಾಕೆಟ್‌ ಒಂದು ಪಕ್ಕದಲ್ಲಿತ್ತು. ಕೋಣೆಯ ಸಾಮಾನುಗಳೆಲ್ಲ ಅಸ್ತವ್ಯಸ್ತವಾಗಿ ಬಿದ್ದಿದ್ದವು.

ಇದನ್ನೆಲ್ಲ ನೋಡಿ ಯಾಮಿನಿಗೆ ಸುಮ್ಮನೆ ಕೂರಲಾಗಲಿಲ್ಲ. ಅವಳು ಕೋಣೆಯನ್ನು ಸ್ವಚ್ಛಗೊಳಿಸತೊಡಗಿದಳು. ರೋಹಿತ್‌ ಬೇಡ ಬೇಡವೆಂದು ತಡೆಯಲು ಪ್ರಯತ್ನಿಸಿದ. ಆದರೆ ಅವನಿಗೆ ಮಲಗಲು ಹೇಳಿ ಅವಳು ತನ್ನ ಕೆಲಸ ಮುಂದುವರಿಸಿದಳು. ಆಮೇಲೆ ಅಂಗಡಿಗೆ ಹೋಗಿ ಬ್ರೆಡ್‌ ಮತ್ತು ಹಾಲನ್ನು ತಂದು ಅವನಿಗೆ ತಿನ್ನಿಸಿದಳು. ಆದರೆ ರೋಹಿತ್‌ಗೆ ಹೆಚ್ಚು ತಿನ್ನಲಾಗಲಿಲ್ಲ.

ಯಾಮಿನಿ ಹತ್ತಿರದಲ್ಲಿದ್ದ ಕ್ಲಿನಿಕ್‌ ಗೆ ಹೋಗಿ ಮಾತ್ರೆ ತಂದು ರೋಹಿತ್‌ ಗೆ ಕೊಟ್ಟಳು. ಸಾಯಂಕಾಲದವರೆಗೂ ಅವನ ಬಳಿಯೇ ಕುಳಿತಳು. ತನಗಾಗಿ ಇವಳು ಎಷ್ಟೆಲ್ಲ ಮಾಡುತ್ತಿದ್ದಾಳೆಂದು ರೋಹಿತ್‌ ಗೆ ಕಣ್ಣು ತುಂಬಿ ಬಂದಿತು. “ನನ್ನ ಕೈಲಾದಷ್ಟು ಮಾಡುತ್ತೇನೆ. ನೀನು ನೊಂದುಕೊಳ್ಳಬೇಡ,” ಎಂದು ಅವಳು ರೋಹಿತ್‌ ಗೆ ಸಮಾಧಾನ ಹೇಳಬೇಕಾಯಿತು.

“ನೀನೆಷ್ಟು ಒಳ್ಳೆಯವಳು ಯಾಮಿನಿ. ಅಪ್ಪ ಅಮ್ಮ ಚಿಕ್ಕಂದಿನಲ್ಲೇ ನನ್ನನ್ನು ಬಿಟ್ಟು ಹೊರಟುಹೋದರು. ನನಗೆ ಪ್ರೀತಿ ಎನ್ನುವುದೇ ತಿಳಿದಿಲ್ಲ. ಅದಕ್ಕಾಗಿ ನಾನು ಕಾತರಿಸುತ್ತಿದ್ದೆ. ಚಿಕ್ಕಪ್ಪ, ಚಿಕ್ಕಮ್ಮ ನನ್ನನ್ನು ಬೆಳೆಸಿದರು ನಿಜ. ಆದರೆ ನಾನು ಅವರಿಗೆ ಒಂದು ಹೊರೆಯಾಗಿದ್ದೆ. ಅವರಿಂದ ನನಗೆಂದೂ ಪ್ರೀತಿ ಸಿಗಲಿಲ್ಲ. ನೀನು ನನಗೆ ಪರಿಚಯವಾದ ಮೇಲೆ, ನನ್ನ ಜೀವನದಲ್ಲಿ ನೀನು ಬಂದ ಮೇಲೆ ಪ್ರೀತಿ ಏನು ಅನ್ನುವುದು ನನಗೆ ತಿಳಿಯಿತು. ನಿನ್ನ ಪ್ರೀತಿ, ನಿನ್ನ ಉಪಚಾರ ಎಲ್ಲವನ್ನು ನೋಡಿದಾಗ ನನ್ನ ಅಪ್ಪ ಅಮ್ಮನ ನೆನಪಾಗುತ್ತಿದೆ,” ರೋಹಿತ್‌ ಕೆನ್ನೆ ಮೇಲೆ ನೀರು ಹರಿಯಿತು.

“ಸಾಕು ರೋಹಿತ್‌, ಇದನ್ನೆಲ್ಲ ಯೋಚಿಸುವ ಸಮಯ ಇದಲ್ಲ. ನಿನ್ನ ಆರೋಗ್ಯದ ಕಡೆ ಗಮನ ಕೊಡು. ನೀನು ಒಂಟಿ ಅಂತ ಅಂದುಕೊಳ್ಳಬೇಡ. ನಾನು ನಿನ್ನ ಜೊತೆ ಇರುತ್ತೇನೆ,” ಎಂದು ಹೇಳುತ್ತಾ ಯಾಮಿನಿ ತನ್ನ ದುಪ್ಪಟ್ಟಾದಿಂದ ಅವನ ಕಣ್ಣೀರು ಒರೆಸಿದಳು.

ರೋಹಿತ್‌ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗಿದ. ಯಾಮಿನಿ ಅವನ ಬಳಿಯೇ ಕುಳಿತಿದ್ದಳು. ಸಂಜೆಯಾಗುತ್ತಿದ್ದಂತೆ ಔಷಧಿಯ ಪ್ರಭಾವದಿಂದ ರೋಹಿತ್‌ ಬೆವರಿದ. ಜ್ವರ ಕೊಂಚ ಕಡಿಮೆಯಾಗಿತ್ತು. ಯಾಮಿನಿ ಹೊರಡಲು ಎದ್ದಳು.

“ನಾನೀಗ ಹೊರಡುತ್ತೇನೆ. ರಾತ್ರಿ ಬ್ರೆಡ್‌ ಮತ್ತು ಹಾಲು ತಿಂದು ಮಾತ್ರೆ ತೆಗೆದುಕೊ. ಏನಾದರೂ ತೊಂದರೆ ಆದರೆ ಫೋನ್ ಮಾಡು, ಸಂಕೋಚಪಟ್ಟುಕೊಳ್ಳಬೇಡ.”

ಯಾಮಿನಿ ಮನೆಗೆ ಹೋದ ಮೇಲೆಯೂ ಅವನದೇ ಚಿಂತೆ ಕಾಡುತ್ತಿತ್ತು. ರಾತ್ರಿ ಎಲ್ಲರೂ ಮಲಗಿದ ಮೇಲೆ ರೋಹಿತ್‌ ಗೆ ಫೋನ್ ಮಾಡಿ ವಿಚಾರಿಸಿದಳು. ಆರಾಮವಾಗಿದ್ದೇನೆಂದು ಅವನು ತಿಳಿಸಿದಾಗ ಯಾಮಿನಿಗೆ ನೆಮ್ಮದಿಯಾಯಿತು.

ಮರುದಿನ ಅವಳು ರೋಹಿತ್‌ ನನ್ನು ನೋಡಲು ಹೋದಳು. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅವನಿಗೆ ತಿನ್ನಲು ತಿಂಡಿಯನ್ನು ತೆಗೆದುಕೊಂಡು ಬಂದಿದ್ದಳು. ಸಂಜೆಯವರೆಗೂ ಅವನ ಜೊತೆ ಇದ್ದಳು.

ಅಂತೂ ನಾಲ್ಕನೆಯ ದಿನ ರೋಹಿತ್‌ ಗೆ ಜ್ವರ ಬಿಟ್ಟಿತು. ಯಾಮಿನಿಯ ಸಾನ್ನಿಧ್ಯ ಅವನಿಗೆ ಹೊಸ ಹುರುಪನ್ನು ನೀಡಿತ್ತು. 5ನೇ ದಿನ ಅವನು ಕಾಲೇಜಿಗೆ ಬಂದಾಗ ಯಾಮಿನಿಗೆ ಬಹಳ ಸಂತೋಷವಾಯಿತು. ಇದಾದ ನಂತರ ಯಾಮಿನಿ ಮತ್ತು ರೋಹಿತ್‌ ಈಗ ಅತ್ಯಂತ ಆತ್ಮೀಯರಾಗಿದ್ದರು.

ಹೀಗೇ 3 ವರ್ಷಗಳು ಉರುಳಿದ್ದು ಅರಿವಾಗಲೇ ಇಲ್ಲ. ಸಂತಸದ ಹಕ್ಕಿ ಪಟಪಟನೆ ರೆಕ್ಕೆ ಬಡಿದು ಹಾರುತ್ತಿತ್ತು. ಡಿಗ್ರಿಯ ಕೊನೆಯ ಪರೀಕ್ಷೆ ಮುಗಿದು ವಿದ್ಯಾಭ್ಯಾಸ ಒಂದು ಹಂತ ಮುಟ್ಟಿದಾಗ ವಿದ್ಯಾರ್ಥಿ ಮಿತ್ರರು ಚದುರುವ ದಿನ ಸಮೀಪಿಸಿತು. ತಮ್ಮ ತಮ್ಮ ಆಯ್ಕೆಯಂತೆ ಅವರೆಲ್ಲ ಬೇರೆ ಬೇರೆಯಾದರು.

ರೋಹಿತ್‌ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿಗೆ ಅರ್ಜಿ ಸಲ್ಲಿಸಿದ. ಆದರೆ ಯಾಮಿನಿಗೆ ಆ ಅವಕಾಶವಿರಲಿಲ್ಲ. ಅವಳ ಮನೆಯವರು, `ಡಿಗ್ರಿ ಮಾಡಿದ್ದಾಯಿತು ಸಾಕು,’ ಎಂದಾಗ ಅವಳು ಮನೆಯಲ್ಲಿಯೇ ಉಳಿಯಬೇಕಾಯಿತು. ರೋಹಿತ್‌ ನನ್ನು ಭೇಟಿ ಮಾಡುವುದು ಕಷ್ಟವಾಯಿತು. ಅವಳಿಗೆ ಸದಾ ರೋಹಿತ್‌ ನ ನೆನಪು ಕಾಡುತ್ತಿತ್ತು. ಅವನ ಜೊತೆಯಿಲ್ಲದೆ ಅವಳಿಗೆ ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ.

ಯಾಮಿನಿ ತಾಯಿ ತಂದೆಗೆ ಒಬ್ಬಳೇ ಮಗಳು. ಮಗಳ ಮದುವೆ ಮಾಡಿ ಜವಾಬ್ದಾರಿ ಮುಗಿಸಬೇಕೆಂದು ತಾಯಿ ತಂದೆ ಯೋಚಿಸಿದರು. ಆದ್ದರಿಂದಲೇ ಅವಳ ವಿದ್ಯಾಭ್ಯಾಸವನ್ನು ಅಲ್ಲಿಗೆ ನಿಲ್ಲಿಸಿ ಯೋಗ್ಯ ಹುಡುಗರ ಬಗ್ಗೆ ವಿಚಾರಿಸತೊಡಗಿದರು.

ಈಗ ಯಾಮಿನಿ ಕಾರಣವಿಲ್ಲದೆ ಮನೆಯಿಂದ ಹೊರಗೆ ಹೋಗುವಂತಿರಲಿಲ್ಲ. ರೋಹಿತ್‌ ನನ್ನು ನೋಡದೆ ದಿನಗಳು ವರ್ಷಗಳಾದಂತೆ ಅವಳಿಗೆ ಭಾಸವಾಯಿತು. ಅವನನ್ನು ಭೇಟಿ ಮಾಡುವಂತಿರಲಿಲ್ಲ. ಅವನನ್ನು ಸಂಪರ್ಕಿಸಲು ಮೊಬೈಲ್ ಫೋನ್‌ ಒಂದೇ ಸಾಧನವಾಗಿತ್ತು. ಸಾಧ್ಯವಾದಾಗೆಲ್ಲ ರೋಹಿತ್‌ ಗೆ ಫೋನ್‌ ಮಾಡುತ್ತಿದ್ದಳು. `ನಿನ್ನನ್ನು ಬಿಟ್ಟಿರಲಾರೆ. ಏನಾದರೂ ಮಾಡು,’ ಎಂದು ಕೇಳುತ್ತಿದ್ದಳು. ಆದರೆ ರೋಹಿತ್‌ ಅಸಹಾಯಕನಾಗಿದ್ದ.

ಮನೆಯಲ್ಲಿ ತಾಯಿ ತಂದೆ ಮದುವೆಯ ಬಗ್ಗೆ ಚರ್ಚಿಸುತ್ತಿದ್ದರೆ, ಯಾಮಿನಿಗೆ ಸಂಕಟವಾಗುತ್ತಿತ್ತು. ರೋಹಿತ್‌ ನಿಂದ ದೂರವಾಗುವ ಯೋಚನೆ ಬಂದಾಗ ಅವಳು ತಳಮಳಿಸುತ್ತಿದ್ದಳು. ರೋಹಿತ್‌ ನ ಬಗ್ಗೆ ತಾಯಿ ತಂದೆಗೆ ತಿಳಿಸುವ ಧೈರ್ಯ ಅವಳಿಗಿರಲಿಲ್ಲ. ಅವಳ ತಂದೆ ಪೊಲೀಸ್‌ ಇಲಾಖೆಯಲ್ಲಿದ್ದರು. ಜೋರು ಜಬರ್ದಸ್ತಿನ ವ್ಯಕ್ತಿ. ಮಗಳ ಮೇಲೆ ಎಂದೂ ಕೋಪ ತೋರಿಸಿಲ್ಲದಿದ್ದರೂ, ಅವರ ಸ್ವಭಾವನ್ನರಿತಿದ್ದ ಯಾಮಿನಿ ತಂದೆಯ ಮುಂದೆ ಚಕಾರವೆತ್ತಲು ಅಂಜುತ್ತಿದ್ದಳು.

ಮದುವೆಗೆ ಅನೇಕ ಪ್ರಸ್ತಾಪಗಳು ಬಂದರೂ ಒಂದಲ್ಲ ಒಂದು ಕಾರಣದಿಂದ ಅವು ಸರಿಹೊಂದುತ್ತಿರಲಿಲ್ಲ. ಹೀಗೆ ವರ್ಷವೇ ಕಳೆದುಹೋಯಿತು. ಕಡೆಗೆ ಡಾಕ್ಟರ್‌ ವರನ ಸಂಬಂಧ ಸರಿಹೋಗಬಹುದೆಂಬ ಸೂಚನೆ ಕಂಡು ಬಂದಾಗ ಯಾಮಿನಿ ಅಧೀರಳಾದಳು. ಹೇಗೋ ಮಾಡಿ ರೋಹಿತ್‌ ನನ್ನು ಭೇಟಿ ಮಾಡಿ ಅಳುತ್ತಳುತ್ತ ವಿಷಯ ತಿಳಿಸಿದಳು. ಅದನ್ನು ಕೇಳಿ ರೋಹಿತ್ ಕೂಡ ವಿಹ್ವಲನಾದ.

“ರೋಹಿತ್‌, ನೀನು ನಮ್ಮ ತಂದೆಯೊಡನೆ ನನ್ನನ್ನು ಮದುವೆ ಮಾಡಿಕೊಡಲು ಕೇಳು. ನೀನಿಲ್ಲದೆ ನಾನು ಬದುಕಿರಲಾರೆ,” ಎಂದು ಹೇಳಿದಳು.

ರೋಹಿತ್‌ ಕೊಂಚ ಯೋಚಿಸುತ್ತಾ ನಿರಾಶೆಯ ಧ್ವನಿಯಲ್ಲಿ, “ಯಾಮಿನಿ, ಬದುಕಿನಲ್ಲಿ ನನ್ನವರೆಂಬುವರು ಯಾರೂ ಇಲ್ಲ. ನನಗೇ ನಿಲ್ಲಲು ಸರಿಯಾದ ನೆಲೆಯಿಲ್ಲ. ನನ್ನ ವಿದ್ಯಾಭ್ಯಾಸ ಮುಗಿದಿಲ್ಲ. ಹೀಗಿರುವಾಗ ನಾನು ಯಾವ ಬಾಯಿಂದ ನಿನ್ನನ್ನು ಮದುವೆ ಮಾಡಿಕೊಡಲು ಕೇಳಲಿ? ನನ್ನ ಕಾಲ ಮೇಲೆ ನಾನು ನಿಲ್ಲುವಂತೆ ಆಗುವವರೆಗೆ ನೀನು ಹೇಗಾದರೂ ಮಾಡಿ ಮದುವೆಯನ್ನು ಮುಂದೂಡಿಸು. ಆಮೇಲೆ ನಾನೇ ಬಂದು ನಿನ್ನ ಕೈ ಹಿಡಯಲು ಅನುಮತಿ ಪಡೆಯುತ್ತೇನೆ,” ಎಂದ.

“ಹಾಗೇ ಮಾಡಲು ಸಾಧ್ಯವಿದ್ದಿದ್ದರೆ ನಾನು ಖಂಡಿತ ಮಾಡುತ್ತಿದ್ದೆ. ಅಯ್ಯೋ…. ನನ್ನಿಂದ ಏನು ಮಾಡಲೂ ಆಗುತ್ತಿಲ್ಲ. ನಿನಗೋಸ್ಕರ ನಾನು ಕಡೆ ಗಳಿಗೆಯವರೆಗೂ ಕಾಯುತ್ತೇನೆ. ನಿನ್ನನ್ನು ಬಿಟ್ಟು ನಾನು ಬೇರೆಯವರನ್ನು ಮದುವೆಯಾಗುವುದಿಲ್ಲ. ನೀನು ಸಿಗದಿದ್ದರೆ ನಾನು ಪ್ರಾಣ ಬಿಡುತ್ತೇನೆ,” ಯಾಮಿನಿಯ ರೋದನಕ್ಕೆ ಕೊನೆಯಿರಲಿಲ್ಲ.

ಹೆದರಿದ ರೋಹಿತ್‌, “ದುಡುಕಬೇಡ ಯಾಮಿನಿ. ನಿನ್ನನ್ನು ಬಿಟ್ಟಿರಲು ನನ್ನಿಂದಲೂ ಆಗದು. ಆದರೆ ನಾವು ಸ್ವಲ್ಪ ಕಾಯಬೇಕಾಗುತ್ತದೆ. ನನಗೊಂದು ಕೆಲಸ ದೊರೆತ ಕೂಡಲೇ ನಾನು ನಿಮ್ಮ ಮನೆಗೆ ಬರುತ್ತೇನೆ,” ಎಂದ.ರೋಹಿತನಿತ್ತ ಆಶ್ವಾಸನೆಯಿಂದ ಯಾಮಿನಿಗೆ ಕೊಂಚ ನೆಮ್ಮದಿಯಾಯಿತು. ಇಷ್ಟು ದಿನಗಳು ಕಾಲ ತಳ್ಳಿದಂತೆ ಇನ್ನಷ್ಟು ದಿನಗಳು ಮದುವೆ ಮುಂದೆ ಹೋಗುತ್ತಿರಲಿ ಎಂದು ಪ್ರಾರ್ಥಿಸುತ್ತಾ ಅವಳು ಮನೆ ಸೇರಿದಳು.

ಆದರೆ ಅವಳ ಪ್ರಾರ್ಥನೆ ಫಲಿಸಲಿಲ್ಲ. ಕೆಲವು ದಿನಗಳ ನಂತರ, ಯಾಮಿನಿಯನ್ನು ನೋಡಲು ಹುಡುಗನ ಕಡೆಯವರು ಬರುವ ಭಾನುವಾರ ಬರುವರೆಂದು ಅವಳ ತಾಯಿ ತಿಳಿಸಿದರು. ಯಾಮಿನಿಗೆ ಭೂಮಿ ಬಿರಿದಂತೆ ಭಯವಾಯಿತು. ಅವಳು ದಿಕ್ಕು ತೋಚದೆ ರೋಹಿತ್‌ ಗೆ ಫೋನ್‌ ಮಾಡಿದಳು. ಆದರೆ ಇದೇನಾಯಿತು? ಯಾಮಿನಿ ಪದೇ ಪದೇ ಕಾಲ್ ‌ಮಾಡಿದರೂ ರಿಂಗ್ ಆಗುತ್ತಿದೆಯೇ ಹೊರತು ರೋಹಿತ್‌ ರಿಸೀವ್ ‌ಮಾಡುತ್ತಿಲ್ಲ. ರೋಹಿತ್‌ ಗೆ ಏನಾಗಿದೆ? ಫೋನ್‌ ಏಕೆ ತೆಗೆಯುತ್ತಿಲ್ಲ ಎಂದು ಅವಳಿಗೆ ಚಿಂತೆಯಾಯಿತು.

ಬಹುಶಃ ಅವನು ಯಾವುದೋ ಕೆಲಸದಲ್ಲಿ ತೊಡಗಿರಬಹುದು ಎಂದುಕೊಂಡು ಯಾಮಿನಿ ಒಂದಷ್ಟು ಹೊತ್ತಿನ ನಂತರ ಕಾಲ್ ಮಾಡಿದಳು. ಆದರೆ ಆಗಲೂ ಅವನು ರಿಸೀವ್ ‌ಮಾಡಲಿಲ್ಲ, ಎಂದೂ ಹೀಗಾಗಿರಲಿಲ್ಲ. ಯಾಮಿನಿ ಫೋನ್‌ ಮಾಡಿದಾಗೆಲ್ಲ ಅವನು ತಕ್ಷಣ ರಿಸೀವ್ ‌ಮಾಡುತ್ತಿದ್ದ. ಮಿಸ್ಡ್ ಕಾಲ್ ‌ಕಂಡರೆ ತಾನೇ ಕಾಲ್ ‌ಬ್ಯಾಕ್‌ ಮಾಡುತ್ತಿದ್ದ. ಆದರೆ ಈಗ…..? ನಡುರಾತ್ರಿಯಾದರೂ ರೋಹಿತ್‌ ಸಂಪರ್ಕಕ್ಕೆ ಸಿಗದಿದ್ದಾಗ ಅವಳು ಹತಾಶಳಾದಳು. ಆದರೆ ಪ್ರಯತ್ನ ಮಾತ್ರ ಬಿಡಲಿಲ್ಲ. ಕಡೆಗೆ ಫೋನ್‌ ಸ್ವಿಚ್‌ ಆಫ್ ಎಂಬ ಸಂದೇಶ ಬಂದಾಗ ಅವಳ ಕಣ್ಣೀರು ಕಟ್ಟೆ ಒಡೆಯಿತು.

ಮಾರನೆಯ ದಿನ ತಂದೆ ಡ್ಯೂಟಿಗೆ ಹೋದ ನಂತರ ಯಾಮಿನಿ ಏನೋ ಒಂದು ನೆಪ ಮಾಡಿಕೊಂಡು, ಮನೆಯಿಂದ ಹೊರಗೆ ಹೊರಟು ರೋಹಿತನ ಕೋಣೆಯ ಬಳಿ ಬಂದಳು. ಬಾಗಿಲಿಗೆ ಬೀಗ ಬಿದ್ದಿರುವುದನ್ನು ಕಂಡು ಅವಳ ಎದೆ ಧಸಕ್‌ ಎಂದಿತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅವನು ರೂಮ್ ಖಾಲಿ ಮಾಡಿ ಹೊರಟುಹೋದನೆಂದು ತಿಳಿದುಬಂದಿತು. ಎಲ್ಲಿಗೆ ಹೋದನೆಂದು ಹೇಳುವವರಿಲ್ಲ. ಅವಳು ನಿರಾಶೆಯಿಂದ ಕುಸಿದು ಕುಳಿತಳು. ಈಗ ಏನು ಮಾಡಲಿ? ಯಾರನ್ನು ಕೇಳಲಿ? ರೋಹಿತ್‌ ಒಂದು ಮಾತು ತಿಳಿಸದೇ ಹೊರಟು ಹೋಗಿರುವನಲ್ಲ! ಅವನು ಹೀಗೆ ಮಾಡಬಹುದೆಂದು ಯಾಮಿನಿಗೆ ನಂಬಲು ಸಾಧ್ಯವಾಗಲಿಲ್ಲ.

ಭಾನುವಾರ ಬೆಳಗಾಗುತ್ತಿದ್ದಂತೆ ಅವಳ ಎದೆ ಡವಗುಟ್ಟಿತು. ರಾತ್ರಿಯೆಲ್ಲ ಅವಳಿಗೆ ನಿದ್ರೆ ಬಂದಿರಲಿಲ್ಲ. ಹುಡುಗನ ಕಡೆಯವರು ಒಪ್ಪಿಬಿಟ್ಟರೆ ಏನು ಮಾಡುವುದು? ತಾನು ಬೇಡವೆನ್ನಲು ಏನು ಕಾರಣ ಕೊಡುವುದು? ಯಾಮಿನಿಗೆ ಒಂದೂ ತಿಳಿಯದಾಯಿತು. ಅವರಿಗೇನಾದರೂ ತೊಂದರೆಯಾಗಿ ಇಲ್ಲಿಗೆ ಬರುವುದು ತಪ್ಪಲಿ ಎಂದು ಆಶಿಸಿದಳು.

ಆದರೆ ಅವಳ ಆಶೆ ಈಡೇರಲಿಲ್ಲ. ತಾಯಿಯ ಆದೇಶದಂತೆ ಒಲ್ಲದ ಮನಸ್ಸಿನಿಂದ ಅಲಂಕರಿಸಿಕೊಂಡಳು. ಬಂದವರ ಮುಂದೆ ಕೂರಬೇಕಾದಾಗ ಅವಳ ಹೃದಯ ಚೀರಿತು. ರೋಹಿತ್‌ ನಿಂದ ದೂರ ಉಳಿಯಲು ಅವಳಿಂದಾಗುತ್ತಿಲ್ಲ. ಆದರೆ ಅವಳೇನು ಮಾಡಬಲ್ಲಳು? ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೋಹಿತ್‌ ಅವಳಿಗೆ ಯಾವೊಂದೂ ವಿಚಾರ ತಿಳಿಸದೆ ಮಾಯವಾಗಿದ್ದ. ಅವನು ಕೇವಲ ಪ್ರೀತಿಯ ಆಟವಾಡಿದನೇ? ಪ್ರೀತಿಯನ್ನು ಮುನ್ನಡೆಸುವ ಮತ್ತು ಜವಾಬ್ದಾರಿ ಹೊರುವ ಸಮಯ ಬಂದಾಗ ಅವಳ ಕೈ ಬಿಟ್ಟು ಹೊರಟುಹೋಗಿದ್ದ. ಇದೆಂತಹ ಪ್ರೀತಿ ಅವನದು?

ಹುಡುಗನ ಕಡೆಯರಿಗೆ ತಾನು ಒಪ್ಪಿಗೆಯಾಗದಿರಲಿ ಎಂದು ಯಾಮಿನಿ ಬಯಸುತ್ತಿದ್ದರೆ, ಅವಳ ಬಯಕೆಗೆ ಕೊಡಲಿ ಪೆಟ್ಟುಬಿದ್ದಿತು. ಹುಡುಗಿ ತಮಗೆಲ್ಲ ಒಪ್ಪಿಗೆ ಎಂದು ಅವರ ಕಡೆಯಿಂದ ಸಂದೇಶ ಬಂದಿತು. ರೋಹಿತ್‌ ನನ್ನು ಬಿಟ್ಟು ಬೇರೆ ಯಾರಿಗೂ ಅವಳು ಮನಸ್ಸು ಕೊಡಲಾರಳು. ಆದರೆ ರೋಹಿತ್‌ ಅದಾವ ಲೋಕದಲ್ಲಿ ಮರೆಯಾಗಿರುವನೋ ಗೊತ್ತಿಲ್ಲ. ತನ್ನ ಪ್ರೀತಿಯ ಕಟ್ಟಡ ಕುಸಿಯುವುದನ್ನು ಅವಳಿಂದ ತಡೆಯಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವಳು ಒಂಟಿಯಾಗಿ ತನ್ನ ಭಾವನೆಗಳೊಂದಿಗೆ ತೊಳಲಬೇಕಾಗಿದೆ. ರೋಹಿತ್‌ ಹೀಗೇಕೆ ಮಾಡಿದ? ತನ್ನ ಪ್ರೀತಿಯನ್ನು ಅವನು ಟೈಮ್ ಪಾಸ್‌ ಗೆಂದು ಬಳಸಿಕೊಂಡನೇ? ಯಾಮಿನಿ ಮನದಲ್ಲೇ ಮಿಡುಕಿ ಗೋಳಿಟ್ಟಳು.

ಮನೆಯಲ್ಲಿ ಸಂತೋಷ ಹರಡಿತ್ತು. ಯಾಮಿನಿಯ ತಾಯಿ ತಮ್ಮ ನೆಂಟರಿಷ್ಟರಿಗೆ ಫೋನ್‌ ಮಾಡಿ ವಿಷಯ ತಿಳಿಸುತ್ತಿದ್ದರು. ಅವಳ ತಂದೆ ವಿವಾಹದ ಏರ್ಪಾಟುಗಳ ಬಗ್ಗೆ ಆಲೋಚಿಸುತ್ತಿದ್ದರು. ಆದರೆ ಯಾಮಿನಿಯ ಮನಸ್ಸು ನರಳುತ್ತಿತ್ತು. ಅವಳ ಮನದ ತುಂಬ ರೋಹಿತನೇ ತುಂಬಿದ್ದ. ಅವನನ್ನು ಮರೆಯಲು ಅವಳಿಗಾಗುತ್ತಿಲ್ಲ. ಹಾಗಿರುವಾಗ ಬೇರೆಯವರನ್ನು ವರಿಸುವುದು ನ್ಯಾಯವೇ ಎಂದು ಚಿಂತಿಸಿ ಬಳಲಿದಳು.

ಕಪ್ಪನೆಯ ಕಾರ್ಮೋಡದಂಚಿನಲ್ಲಿ ಇದ್ದಕ್ಕಿದ್ದಂತೆ ಸೂರ್ಯಕಿರಣ ಮೂಡಿಬಂದಿತು. ವರನ ಕಡೆಯವರು ಏಕೋ ಹಿಂದೆಗೆಯುತ್ತಿರುವ ಸೂಚನೆ ತೋರಿತು. ನಂತರ ತಿಳಿದು ಬಂದ ಸುದ್ದಿಯೆಂದರೆ, ಹೆಚ್ಚಿನ ವರದಕ್ಷಿಣೆಯ ಆಸೆಯಿಂದ ಅವರು ಬೇರೆಯ ಕಡೆ ವಿವಾಹ ನಿಶ್ಚಯ ಮಾಡಿಕೊಂಡರೆಂಬುದು. ದೊಡ್ಡದೊಂದು ಆಪತ್ತು ಕಳೆದಂತೆ ಯಾಮಿನಿ ನಿಡಿದಾದ ಉಸಿರುಬಿಟ್ಟಳು. ಅನೇಕ ದಿನಗಳ ನಂತರ ಅವಳ ತುಟಿಯ ಮೇಲೆ ಮುಗುಳ್ನಗೆ ಮೂಡಿತು.

ಮದುವೆ ಮುರಿದು ಹೋದದ್ದು ಮನೆಯವರಿಗೆ ಆಘಾತವಾದರೂ ಯಾಮಿನಿಗೆ ಸಮಾಧಾನ ತಂದಿತ್ತು. ಆದರೆ ಅವಳ ಒಂದೇ ಯೋಚನೆಯೆಂದರೆ ರೋಹಿತ್‌ ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬುದು. ರೋಹಿತ್‌ ನ ಯೋಚನೆ ಮಾಡುತ್ತಾ ಮಾಡುತ್ತಾ ಅವಳು ವಿಹ್ವಲಗೊಂಡಳು. ಹೇಳದೆ ಅವನೆಲ್ಲಿಗೆ ಹೋದ? ಅವನ ಫೋನ್‌ ಏಕೆ ಸ್ವಿಚ್‌ ಆಫ್‌ ಆಗಿದೆ? ಇದನ್ನೇ ಚಿಂತಿಸುತ್ತಾ ದಿನಕಳೆದಂತೆ ಅವಳ ಅಶಾಂತಿ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಅವಳಿಗೆ ರೋಹಿತ್‌ ತನಗೆ ಮೋಸ ಮಾಡಿರುವನೇ ಎಂಬ ಸಂಶಯ ಸುಳಿಯುತ್ತಿತ್ತು.

ಫೋನ್‌ ಸಂಪರ್ಕ ಸಿಗಲಿಲ್ಲವಾಗಿ ಅವಳು ಫೇಸ್‌ ಬುಕ್‌ ನಲ್ಲಿ ಮೆಸೇಜ್‌ ಹಾಕಿದಳು. ಆದರೆ ಅದಕ್ಕೆ ಯಾವ ಉತ್ತರವೂ ಬರಲಿಲ್ಲ. ನಂತರದಲ್ಲಿ ರೋಹಿತ್‌ ಫೇಸ್‌ ಬುಕ್‌ ನಲ್ಲಿಯೂ ಬ್ಲಾಕ್‌ ಮಾಡಿಬಿಟ್ಟಿದ್ದ. ಯಾರಿಗಾಗಿ ಅವಳು ಅಶಾಂತಿಯಿಂದ ತಹತಹಿಸುತ್ತಿದ್ದಳೋ ಅವನು ದೂರವಾಗುವ ಪ್ರಯತ್ನ ಮಾಡುತ್ತಲೇ ಇರುವುದನ್ನು ಕಂಡು ಅವಳಿಗೆ ಬಹಳ ಕೋಪ ಬಂದಿತು.

ತಾನು, ತನ್ನ ಸಹಜವಾದ ಇಷ್ಟವಿಲ್ಲದಿದ್ದರೆ ಮೊದಲೇ ದೂರವಿರಬೇಕಾಗಿತ್ತು. ಈ ರೀತಿ ಪ್ರೀತಿ ತೋರಿಸಿ ಆಟವಾಡಬೇಕೇ? ಏನೂ ಹೇಳದೆ ಕಳ್ಳನ ಹಾಗೆ ಮಾಯವಾಗುವುದು ಹೇಡಿತನ. ತಾನು ಅವನ ಮೇಲೆ ವಿಶ್ವಾಸವಿರಿಸಲೇಬಾರದಿತ್ತು.

ಯಾಮಿನಿಯ ಮನಸ್ಸು ಕೋಪದಿಂದ, ಅಸಹಾಯಕತೆಯಿಂದ ತಳಮಳಿಸುತ್ತಿತ್ತು. ರೋಹಿತ್‌ ನ ಮೇಲೆ ಕೋಪ ಮಾಡಿಕೊಂಡರೂ ಅವನ ನೆನಪು ಮಾತ್ರ ದೂರವಾಗುತ್ತಿರಲಿಲ್ಲ. ಯಾವ ಕೆಲಸದಲ್ಲಿಯೂ ಮನಸ್ಸು ನಿಲ್ಲುತ್ತಿರಲಿಲ್ಲ. ಸುಮ್ಮನೆ ಕುಳಿತಿದ್ದರೆ ಅವಳಿಗೇ ಅರಿವಿಲ್ಲದೆ ಕಣ್ಣೀರು ಸುರಿಯುತ್ತಿತ್ತು. ಕಾಲ ಕಳೆಯಲು ಟಿವಿ ಮುಂದೆ ಕೂರುತ್ತಿದ್ದಳು. ಬರಿದೇ ಚಾನೆಲ್ ‌ಬದಲಾಯಿಸುತ್ತಿದ್ದಳು, ನೋಡುತ್ತಿರಲಿಲ್ಲ. ಮೊಬೈಲ್ ‌ಚೆಕ್‌ ಮಾಡುತ್ತಿದ್ದಳು, ಬಾಲ್ಕನಿಯಲ್ಲಿ ನಿಂತು ಆಕಾಶವನ್ನು ದಿಟ್ಟಿಸುತ್ತಿದ್ದಳು.

ಯಾಮಿನಿಯ ಮನಸ್ಸು ಸದಾಕಾಲ `ರೋಹಿತ್‌….. ರೋಹಿತ್‌….’ ಎಂದು ಜಪಿಸುತ್ತಿತ್ತು. ಯಾರೂ ಹತ್ತಿರದಲ್ಲಿ ಇಲ್ಲದಿರುವಾಗ ಅವಳು ಮೆಲುದನಿಯಲ್ಲಿ ಅವನನ್ನು ಕರೆಯುತ್ತಿದ್ದಳು. ನನ್ನ ಕರೆ ರೋಹಿತನಿಗೆ ಮುಟ್ಟುವುದೇ? ಅವನು ಮತ್ತೆ ನನ್ನ ಬಳಿಗೆ ಬರುವನೇ? ಈ ವೇಳೆಗೆ ಅವನು ಹೊಸ ಜೀವನ ಪ್ರಾರಂಭಿಸಿಬಿಟ್ಟಿದ್ದರೆ….. ಯಾಮಿನಿಗೆ ಭಯವಾಯಿತು. ಅವಳು ಮತ್ತೆ ಸಮಾಧಾನ ಮಾಡಿಕೊಂಡಳು. ಇಲ್ಲ, ರೋಹಿತ್‌ ಅಂಥವನಲ್ಲ….. ಅವನು ಖಂಡಿತವಾಗಿ ಒಂದು ದಿನ ಬರುತ್ತಾನೆ. ನನ್ನನ್ನು ಜೊತೆಯಲ್ಲಿ ಕರೆದೊಯ್ಯುತ್ತಾನೆ.

ಸಮಯ ಸರಿದಂತೆ ಯಾಮಿನಿಯ ಮನಸ್ಸು ನಿರಾಶೆಯ ಕೂಪದಲ್ಲಿ ಮುಳುಗತೊಡಗಿತು. ರೋಹಿತ್‌ ನ ನಂಬರ್‌ ಹೊರತು ಅವಳ ಮೊಬೈಲ್ ‌ನಲ್ಲಿ ಬೇರೆ ಯಾರ ಸಂಪರ್ಕ ಇರಲಿಲ್ಲ. ಕಡೆಗೆ ಅವನ ಸಂಪರ್ಕ ಕಡಿದುಹೋಯಿತು. ಇದುವರೆಗೆ ಪ್ರತಿದಿನ, ಪ್ರತಿ ನಿಮಿಷ ಅಲನಿಗೆ ಕಾಲ್ ‌ಮಾಡುವುದು ಅಥವಾ ಅವನ ಕರೆಯನ್ನು ನಿರೀಕ್ಷಿಸುವುದು ಇದೇ ಅವಳ ದಿನಚರಿಯಾಗಿತ್ತು.

ತಿಂಗಳುಗಳ ಕಾಲ ಅವನ ಕರೆಗಾಗಿ ಕಾಯ್ದು ನಿರಾಶಾಳಾಗಿ ಮೊಬೈಲ್ ಮುಟ್ಟುವುದನ್ನೇ ಬಿಟ್ಟುಬಿಟ್ಟಿದ್ದಳು. ಮೊಬೈಲ್ ಫೋನ್‌ಮೇಲೆ ಅವಳಿಗೆ ತಿರಸ್ಕಾರ ಹುಟ್ಟಿತು. ಒಂದು ದಿನ ಕೋಪದಿಂದ ಅವಳು ರೋಹಿತ್‌ ನ ನಂಬರನ್ನು ತನ್ನ ಫೋನ್‌ ನಿಂದ ತೆಗೆದು ಹಾಕಿದಳು. ದಿನಗಳು ಉರುಳಿದವು. ಒಂದು ದಿನ ಯಾಮಿನಿಯ ತಂದೆಗೆ ವರ್ಗಾವಣೆಯ ಆದೇಶ ಬಂದಿತು. ಅವರನ್ನು ಮೈಸೂರಿನ ಇಲಾಖೆಗೆ ವರ್ಗ ಮಾಡಲಾಗಿತ್ತು.

ಯಾಮಿನಿಯ ಮನಸ್ಸಿನಲ್ಲಿ ರೋಹಿತ್‌ ನನ್ನು ಸೇರುವೆನೆಂಬ ಭರವಸೆ ಕರಗುತ್ತಾ ಬಂದಿತು. ತಾಯಿ ತಂದೆಯೊಡನೆ ಮೈಸೂರಿಗೆ  ಬಂದಾಗ ಅವಳಿಗೆ, ಹೊಸ ಸ್ಥಳದಲ್ಲಿ ತನ್ನ ಕಳೆದ ಬದುಕಿನ ನೆನಪನ್ನು ಮರೆಯುವುದು ಸಾಧ್ಯವಾಗಬಹುದು ಎಂದು  ಅನ್ನಿಸಿತು.

ಮೈಸೂರಿನ ವೈಭಯುತ ಅರಮನೆಯ ನೋಟದಿಂದ ಅವಳ ಮನಸ್ಸು ಖಿನ್ನವಾಗುತ್ತಿತ್ತು. ಸುತ್ತಲೂ ವೈಭೋಗದ ಪ್ರತೀಕ ಕಾಣುತ್ತಿದ್ದರೆ, ಅವಳಿಗೆ ಮನಸ್ಸಿನಾಳದಲ್ಲಿ ತನ್ನ ಪ್ರೀತಿಯ ಸಮಾಧಿ ಗೋಚರಿಸುತ್ತಿತ್ತು.

ಮನೆಯಲ್ಲಿ ಮತ್ತೆ ಮದುವೆಯ ಮಾತುಕಥೆ ಪ್ರಾರಂಭವಾಯಿತು. ಯಾಮಿನಿಗೆ ಪ್ರೀತಿ, ಮದುವೆ, ಸಂಸಾರ ಎಲ್ಲದರ ಮೇಲೂ ತಿರಸ್ಕಾರ ಹುಟ್ಟಿತು. ತನ್ನ ಮದುವೆಯ ವಿಷಯ ಮಾತನಾಡುವುದೇ ಬೇಡವೆಂದು ಅವಳು ಎಲ್ಲರಿಗೂ ಹೇಳಿಬಿಟ್ಟಳು.

waha-aakash-aur-story-2

ಜಾಗ ಬದಲಾದರೂ, ಊರು ದೂರಾದರೂ ನೆನಪು ದೂರಾಗಲಿಲ್ಲ. `ರೋಹಿತ್‌ ಗೆ ನನ್ನ ನೆನಪು ಉಳಿದಿದೆಯೇ? ಅವನ ಪ್ರೀತಿ ಒಂದು ನಾಟಕವಾಗಿದ್ದರೆ, ನನ್ನನ್ನು ಮರುಳು ಮಾಡಿ ನಂಬಿಸಿದ್ದೇಕೆ? ಕಡೆಗಾದರೂ ಒಮ್ಮೆ ನಿಜ ವಿಷಯ ತಿಳಿಸಿದ್ದರೆ ಸಾಕಿತ್ತು. ನಾನು ಇಷ್ಟೊಂದು ಸಂಕಟ ಪಡಬೇಕಿರಲಿಲ್ಲ. ಪ್ರೀತಿ ಅಮರ ಎನ್ನುವ ಭ್ರಮೆ ದೂರವಾಗಿರುತ್ತಿತ್ತು.’

ಯಾಮಿನಿ ಈ ಮೊದಲೇ ಮನೆಯಿಂದ ಹೊರಗೆ ಹೋಗುವುದು ಕಡಿಮೆಯಾಗಿತ್ತು. ಮೈಸೂರಿಗೆ ಬಂದ ಮೇಲಂತೂ ಹೊಸ ಜಾಗ, ಹೊಸ ಜನ. ಹೀಗಾಗಿ ಸದಾ ಮನೆಯಲ್ಲೇ ಕುಳಿತು ತನ್ನ ಭಗ್ನಪ್ರೇಮದ ಸುಳಿಯಲ್ಲಿ ಸುತ್ತುತ್ತಿದ್ದಳು.

ಒಂದು ದಿನ ತಾಯಿ ಅವಳು ತಮ್ಮ ಜೊತೆ ಪಕ್ಕದ ಮನೆಗೆ ಬರುವಂತೆ ಒತ್ತಾಯಿಸಿದರು. ನೆರೆಮನೆಯ ಸಂಧ್ಯಾ ಆಂಟಿಯ ಮಗಳನ್ನು ನೋಡಲು ಹುಡುಗ ಬರಲಿದ್ದ.

ವಧುಪರೀಕ್ಷೆ ವಿವಾಹ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರೆ ಮಗಳ ಮನಸ್ಸು ಸರಿಹೋಗಬಹುದೆಂಬ ವಿಚಾರ ತಾಯಿಯದು. ಅದಕ್ಕಾಗಿ ಅವರು ಯಾಮಿನಿಗೆ ಹುಡುಗಿಯನ್ನು ಸಿಂಗರಿಸುವ ಜವಾಬ್ದಾರಿ ವಹಿಸಿದರು. ರೋಹಿತ್‌ ದೂರವಾದಂದಿನಿಂದ ಅಲಂಕಾರವನ್ನೇ ಮರೆತಿದ್ದ ಯಾಮಿನಿ, ಈಗ ಹುಡುಗಿಗೆ ಮಾತ್ರ ಚೆನ್ನಾಗಿ ಶೃಂಗಾರ ಮಾಡಿದಳು.

ಹುಡುಗನ ಕಡೆಯವರು ಬಂದರು. ಸಂಧ್ಯಾ ಆಂಟಿ ಯಾಮಿನಿಗೆ ಮಗಳನ್ನು ಕರೆತರಲು ಹೇಳಿದರು. ಹುಡುಗಿಯನ್ನು ಸಂಧ್ಯಾ ಆಂಟಿಯ ಜೊತೆಯಲ್ಲಿ ಕಳುಹಿಸಿದ ಯಾಮಿನಿ ಬಾಗಿಲಲ್ಲಿ ನಿಂತಳು.

ಎದುರಿಗೆ ಸೋಫಾದ ಮೇಲೆ ಕುಳಿತಿದ್ದ ಹುಡುಗನನ್ನು ನೋಡಿ ಯಾಮಿನಿಯ ಎದೆ ಬಡಿತ ನಿಂತಂತಾಯಿತು. ತಲೆ ಗಿರ್‌ ಎಂದು ಸುತ್ತಿ ಬಂತು. ಮರುಕ್ಷಣದಲ್ಲಿ ಅವಳು ಬವಳಿ ಬಿದ್ದಳು.

ಯಾರಿಗಾಗಿ ಅವಳು ಕ್ಷಣ ಕ್ಷಣ ಕಾಯುತ್ತಿದ್ದಳೋ, ಯಾರಿಗಾಗಿ ಕಣ್ಣೀರ ಕೋಡಿ ಹರಿಸಿದಳೋ, ಯಾರು ಅವಳ ಶಾಂತಿ, ನೆಮ್ಮದಿಯನ್ನು ಕಳೆದಿದ್ದನೋ, ಆ ವಿಶ್ವಾಸಘಾತ ರೋಹಿತ್‌ ಸಂಭಾವಿತ ವ್ಯಕ್ತಿಯಂತೆ ವಧು ಪರೀಕ್ಷೆಗೆ ಬಂದು ಕುಳಿತಿದ್ದ.

“ಯಾಮಿನಿ….. ಯಾಮಿನಿ…. ಕಣ್ಣು ತೆರೆ…” ಯಾಮಿನಿಯ ಮುಖದ ಮೇಲೆ ನೀರ ಹನಿ ಸಿಂಪಡಿಸಲಾಯಿತು. ಪರಿಚಿತ ಮಧುರ ಧ್ವನಿಯನ್ನು ಕೇಳಿ ಅವಳು ಮೆಲ್ಲನೆ ಕಣ್ಣು ತೆರೆದಳು.

“ರೋ….. ರೋಹಿತ್‌……?”

“ಹೌದು ಯಾಮಿನಿ…… ನಾನು ನಿನ್ನ ರೋಹಿತ್‌…..”

ಯಾಮಿನಿಯ ಕಣ್ಣಿನಿಂದ ನೀರು ಹರಿಯಿತು, “ನನಗೆ ಒಂದು ಮಾತು ತಿಳಿಸದೆ ಇಷ್ಟು ದಿನ ಎಲ್ಲಿಗೆ ಹೊರಟುಹೋಗಿದ್ದೆ ರೋಹಿತ್? ನಾನು ನಿನಗಾಗಿ ಎಷ್ಟು ಹುಡುಕಿದ್ದೇನೆ. ಎಷ್ಟು ಅತ್ತಿದ್ದೇನೆ, ಎಷ್ಟು ಸಂಕಟ ಪಟ್ಟಿದ್ದೇನೆ ಅಂತ ನಿನಗೇನು ಗೊತ್ತು? ನಾನು ಬೇಡವಾಗಿದ್ದರೆ ಹೇಳಿಬಿಡಬೇಕಿತ್ತು. ನಾನು ಹುಚ್ಚಿಯ ಹಾಗೆ ನಿನ್ನ ಪ್ರೀತಿಗಾಗಿ ಹಂಬಲಿಸುತ್ತಿದ್ದೆ. ನೀನೇಕೆ ನನಗೆ ವಿಶ್ವಾಸದ್ರೋಹ ಮಾಡಿದೆ?” ಅವಳು ಒಂದೇ ಉಸಿರಿನಲ್ಲಿ ಹೇಳಿದಳು.

“ನಾನೂ ನಿನಗಾಗಿ ಬಹಳ ಸಂಕಟ ಪಟ್ಟಿದ್ದೇನೆ ಯಾಮಿನಿ. ನಾವು ಕಡೆಯ ಸಲ ಭೇಟಿ ಮಾಡಿದ್ದು ನಿನಗೆ ನೆನಪಿದೆಯಾ?” ಎಂದು ಕೇಳಿದ.

“ಹೌದು. ನೆನಪಿದೆ…..”

“ಆ ದಿಸ ನೀನು ಹೋದ ಮೇಲೆ ನಿನ್ನ ತಂದೆ 4-5 ಜನರ ಜೊತೆ ಅಲ್ಲಿಗೆ ಬಂದರು. ಅವರೆಲ್ಲ ಪೊಲೀಸ್‌ ಯೂನಿಫಾರ್ಮ್ ನಲ್ಲಿದ್ದರು.”

“ಹ್ಞಾಂ…..” ಯಾಮಿನಿ ಆಶ್ಚರ್ಯದಿಂದ ಕಣ್ಣರಳಿಸಿದಳು.

ರೋಹಿತ್‌ ಮಾತು ಮುಂದುವರಿಸಿದ,  “ನಿಮ್ಮ ತಂದೆಯ ಕೊಲೀಗ್‌ ಒಬ್ಬರು, ನಾವಿಬ್ಬರೂ ಪಾರ್ಕ್‌ ನಲ್ಲಿ ಭೇಟಿ ಮಾಡಿದ್ದನ್ನು ನೋಡಿ ನಿಮ್ಮ ತಂದೆಗೆ ತಿಳಿಸಿಬಿಟ್ಟಿದ್ದರಂತೆ. ಅದಕ್ಕೆ ಅವರಿಗೆ ಬಹಳ ಕೋಪ ಬಂದಿತ್ತು. ನಾನು ಇನ್ನೆಂದಿಗೂ ನಿನ್ನನ್ನು ಭೇಟಿ ಮಾಡಬಾರದು, ಸಂಪರ್ಕಿಸಬಾರದು. ಹಾಗೆ ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೆಲ್ಲ ಚೆನ್ನಾಗಿ ಬೆದರಿಕೆ ಹಾಕಿದರು.  ಅವರು ನನ್ನನ್ನು ನಿನ್ನಿಂದ ದೂರ ಮಾಡಿ ಬೇಗ ನಿನಗೆ ಮದುವೆ ಮಾಡಿಬಿಡಬೇಕು ಅಂತ ಅಂದುಕೊಂಡಿದ್ದರು. ಈಗ ನೀನೇ ಹೇಳು ಯಾಮಿನಿ, ಅಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕಿತ್ತು? ನಿಮ್ಮ ತಂದೆ ಪೊಲೀಸ್‌ ಇಲಾಖೆಯವರು. ಅಂಥವರನ್ನು ಎದುರಿಸುವ ಸಾಮರ್ಥ್ಯ ಆಗ ನನಗಿರಲಿಲ್ಲ. ನನ್ನಿಂದ ನಿನಗೆ ಏನೂ ತೊಂದರೆ ಆಗಬಾರದು ಅನ್ನುವುದಕ್ಕೋಸ್ಕರ ನಿನ್ನಿಂದ ನಾನು ದೂರ ಹೋಗಬೇಕಾಯಿತು. ಅದಲ್ಲದೆ, ನನಗೆ ಬೇರೆ ದಾರಿಯೇ ಇರಲಿಲ್ಲ.

“ಅದಕ್ಕೆ ನಾನು ನನ್ನ ಸಿಮ್ ಕಾರ್ಡ್‌ ನ್ನು ಮುರಿದು ಎಸೆದೆ. ಎದೆಯನ್ನು ಕಲ್ಲು ಮಾಡಿಕೊಂಡು ಆ ಊರನ್ನೇ ಬಿಟ್ಟುಬಿಟ್ಟೆ. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಅಸಿಸ್ಟೆಂಟ್‌ ಕಮೀಷನರ್‌ ಸ್ಥಾನಕ್ಕೆ ಆರಿಸಲ್ಪಟ್ಟೆ. ಅಂತಹ ಉತ್ತಮ ಉದ್ಯೋಗ ದೊರೆತರೂ ನೀನಿಲ್ಲದ ನೋವು ಸದಾ ನನ್ನನ್ನು ಕೊರೆಯುತ್ತಿತ್ತು. ಸದಾ ನಿನ್ನ ನೆನಪು ಕಾಡುತ್ತಿತ್ತು. ಆದರೆ ನಿನಗೆ ಮದುವೆಯಾಗಿರಬಹುದೆಂದು ನೋವನ್ನು ತಡೆಯಲು ಪ್ರಯತ್ನಿಸುತ್ತಿದ್ದೆ. ಆದರೂ ನನಗೆ, ನೀನು ನನ್ನವಳು ಎಂದೇ ಅನ್ನಿಸುತ್ತಿತ್ತು. ಅದಕ್ಕಾಗಿ ನಿಮ್ಮ ಮನೆಗೂ ಹೋಗಿದ್ದೆ. ಆದರೆ ನೀವೆಲ್ಲ ಬೇರೆ ಊರಿಗೆ ಹೋಗಿಬಿಟ್ಟಿದ್ದಿರಿ.

“ನಿಮ್ಮನ್ನೆಲ್ಲ ಹುಡುಕುವ ಪ್ರಯತ್ನ ಮಾಡಿದರೂ ಅದು ಫಲಿಸಲಿಲ್ಲ. ಕಡೆಗೆ ಚಿಕ್ಕಪ್ಪನ ಒತ್ತಾಯಕ್ಕೆ ಮಣಿದು ಅವರ ಮಾತಿಗೆ ಒಪ್ಪಿದೆ. ಹಾಗಾಗಿ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ದೇವರ ದಯೆಯಿಂದ ನೀನು ನನಗೆ ಸಿಕ್ಕಿದ್ದೀಯ. ಇನ್ನು ಯಾರೂ ನಮ್ಮನ್ನು ಬೇರೆ ಮಾಡಲಾರರು.

“ನೀನು ತಲೆ ಸುತ್ತಿ ಬಿದ್ದಾಗಲೇ ನೀನು ಇನ್ನೂ ನನ್ನ ನೆನಪಿನಲ್ಲೇ ಕೊರಗುತ್ತಿರುವೆ ಎಂದು ತಿಳಿದುಹೋಯಿತು. ಆಗ ನಿನ್ನ ತಾಯಿ ತಂದೆಯರಿಗೆ ನಡೆದ ವಿಷಯವೆಲ್ಲ ತಿಳಿಸಿದೆ, ಅವರ ಆಸೆಯಂತೆ ನಿನ್ನ ತಂಟೆಗೆ ಬರದೆ ಪ್ರಾಮಾಣಿಕನಾಗಿದ್ದ ನನ್ನನ್ನು, ನಿನ್ನ ಪ್ರೇಮವೇ ಹೀಗೆ ನನ್ನನ್ನು ಸಂಧಿಸುವಂತೆ ಮಾಡಿತು ಎಂಬುದನ್ನು ಅವರು ಒಪ್ಪಿಕೊಂಡರು.

“ಸಂಧ್ಯಾ ಆಂಟಿ ಮನೆಯರಿಗೂ ವಿಷಯ ಅರ್ಥವಾಯಿತು. ಆ ಹುಡುಗಿ ತನಗೆ ಈ ಮದುವೆ ಬೇಡವೆಂದಳು. ನಿಮ್ಮ ತಾಯಿತಂದೆಯರ ಒಪ್ಪಿಗೆಯಿಂದಲೇ ನಾವೀಗ ಮದುವೆ ಆಗುತ್ತಿದ್ದೇವೆ…..” ರೋಹಿತ್‌ ಪ್ರೀತಿಯಿಂದ ಆನಂದಬಾಷ್ಪ ಸುರಿಸಿದ.

ರೋಹಿತನ ಬಾಯಿಂದ ಸತ್ಯಸಂಗತಿಯನ್ನು ಕೇಳಿ ಯಾಮಿನಿಯ ಮನಸ್ಸು ಹಗುರವಾಯಿತು. ನಿಜವಾದ ಪ್ರೀತಿ ಅಮರ ಎಂದು ಮನದಟ್ಟಾಯಿತು. ತನ್ನ ತಂದೆ ರೋಹಿತ್‌ ನನ್ನು ಬೆದರಿಸಿ ಬಂದಿದ್ದರು ಎಂದು ಕೇಳಿ ಅವಳಿಗೆ ಅಚ್ಚರಿಯಾಯಿತು. ಇಷ್ಟೆಲ್ಲ ವಿಷಯ ತಿಳಿದ ಮೇಲೆ ನನ್ನ ರೋಹಿತ್‌ ವಿಶ್ವಾಸದ್ರೋಹಿಯಲ್ಲ ಎಂದು ಖಾತ್ರಿಯಾಗಿ ಅವನ ಬಗ್ಗೆ ಹೆಮ್ಮೆ ಮೂಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ