`ಅದೆಷ್ಟು ಸಂತಸದ ದಿನಗಳಾಗಿದ್ದ ಅವು......' ಕಳೆದ ದಿನಗಳನ್ನು ಜ್ಞಾಪಿಸಿಕೊಂಡಾಗ ಯಾಮಿನಿಯ ಕಂಗಳು ತುಂಬಿಬಂದವು.
ಕಾಲೇಜಿಗೆ ಸೇರಿದ್ದ ಪ್ರಾರಂಭದ ದಿನಗಳು. ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರೂ ಒಬ್ಬರಿಗೊಬ್ಬರ ಪರಿಚಯವಿರಲಿಲ್ಲ. ನಿಧಾನವಾಗಿ ಪರಿಚಯ ಮಾಡಿಕೊಂಡು ಅವರು ಗೆಳೆತನ ಬೆಳೆಸತೊಡಗಿದರು. ಆದರೆ ನಾಲ್ಕಾರು ದಿನಗಳು ಕಳೆದರೂ ಯಾಮಿನಿಗೆ ಸರಿಹೊಂದುವ ಮಿತ್ರರು ದೊರೆತಿರಲಿಲ್ಲ.
ಒಂದು ದಿನ ಯಾಮಿನಿ ಕಾಲೇಜು ತಲುಪುವಾಗ ರೋಹಿತ್ ಕಾಲೇಜಿನ ಗೇಟ್ ಬಳಿ ಸಿಕ್ಕಿದ. ಅವನು ನಗೆ ಬೀರಿ `ಹಲೋ,' ಎಂದು ತನ್ನ ಪರಿಚಯ ಹೇಳಿದ. ಅವನ ನಡವಳಿಕೆ ಯಾಮಿನಿಗೆ ಬಹಳ ಇಷ್ಟವಾಯಿತು.
``ನನ್ನ ಹೆಸರು ಯಾಮಿನಿ. ನಾನು ಶಾರದಾ ಕಾಲೇಜಿನಿಂದ ಬಂದಿದ್ದೇನೆ,'' ಅವಳು ರೋಹಿತ್ ಗೆ ತನ್ನ ಪರಿಚಯ ತಿಳಿಸಿಕೊಟ್ಟಳು.
ಪಾಠದ ವಿಷಯದಲ್ಲಿ ರೋಹಿತ್ ಬಹಳ ಚುರುಕಾಗಿದ್ದ. ಲೆಕ್ಚರರ್ ಕೇಳುವ ಪ್ರಶ್ನೆಗಳಿಗೆಲ್ಲ ಪಟಪಟನೆ ಉತ್ತರ ಕೊಡುತ್ತಿದ್ದ. ಅವನ ಜಾಣತನ ಮತ್ತು ವಿಷಯದ ಬಗೆಗಿನ ಆಳವಾದ ಜ್ಞಾನ ಯಾಮಿನಿಯ ಮನಸ್ಸನ್ನು ಸೆಳೆಯಿತು.
ಬಿಡುವಿನ ಸಮಯದಲ್ಲಿ ಒಮ್ಮೆ ರೋಹಿತ್ ಯಾಮಿನಿಯನ್ನು ಕಾಫಿಗೆ ಕರೆದ. ಯಾಮಿನಿಗೆ ಇಲ್ಲವೆನ್ನಲಾಗಲಿಲ್ಲ. ಇಬ್ಬರೂ ಕ್ಯಾಂಟೀನ್ ಗೆ ಹೋಗಿ ಕುಳಿತರು. ಕಾಫಿ ಕುಡಿಯುವಾಗ ರೋಹಿತ್ ಎವೆಯಿಕ್ಕದೆ ಯಾಮಿನಿಯನ್ನೇ ನೋಡುತ್ತಿದ್ದ. ಯಾಮಿನಿಗೆ ಅವನ ದೃಷ್ಟಿಯನ್ನು ಎದುರಿಸುವುದು ಕಷ್ಟವಾಯಿತು. ಆದರೆ ಅವಳ ಎದೆಯಲ್ಲಿ ಸಂತಸದ ಸುಂಟರಗಾಳಿ ಅಲೆ ಎಬ್ಬಿಸಿತು.
ಕ್ಲಾಸ್ ಮುಗಿಸಿ ಮನೆಗೆ ಹೋಗುವಾಗ ರೋಹಿತ್ ಹತ್ತಿರ ಬಂದು ಪ್ರೀತಿಯಿಂದ `ಬೈ' ಹೇಳಿದ. ಯಾಮಿನಿ ಮೈ ನವಿರೆದ್ದಿತು. ರಾತ್ರಿಯೆಲ್ಲ ಅವಳ ಕಣ್ಮುಂದೆ ರೋಹಿತನ ಮುಖವೇ ತೇಲಿ ಬರುತ್ತಿತ್ತು. ಕಣ್ಣು ಮುಚ್ಚಿದರೆ, ಅವನು ಜೊತೆಯಲ್ಲಿರುವಂತೆಯೇ ಭಾಸವಾಗುತ್ತಿತ್ತು.
ಮರುದಿನ ಬೆಳಗ್ಗೆ ಎಚ್ಚರವಾದಾಗ ಎಂದಿನಂತೆ ಯಾಮಿನಿ ತನ್ನ ಮೊಬೈಲ್ ಚೆಕ್ ಮಾಡಿದಳು, ``ಗುಡ್ ಮಾರ್ನಿಂಗ್. ಹ್ಯಾವ್ ಎ ನೈಸ್ ಡೇ,' ಎಂದು ರೋಹಿತ್ ಮೆಸೇಜ್ ಮಾಡಿದ್ದ.
ಯಾಮಿನಿ ಬಹಳ ಹೊತ್ತು ಆ ಮೆಸೇಜ್ ನ್ನು ನೋಡುತ್ತಾ ಕುಳಿತಿದ್ದಳು. ಅವಳಿಗೆ ರೋಮಾಂಚನವಾಗುತ್ತಿತ್ತು. ಅದಕ್ಕೆ ಉತ್ತರ ಕಳುಹಿಸಬೇಕೆಂದುಕೊಂಡಳು. ಆದರೆ ಏನೆಂದು ಕಳುಹಿಸುವುದು ಎಂದು ಯೋಚಿಸುತ್ತಾ ಕುಳಿತಳು. ಟೈಪ್ ಮಾಡಲು ಹೋದರೆ ಅವಳ ಬೆರಳು ನಡುಗತೊಡಗಿತು.
ಅವಳು ಮತ್ತೆ ಆ ಮೆಸೇಜ್ ನ್ನು ನೋಡುತ್ತಾ ಕುಳಿತಳು. ಒಂದು ಸುಂದರವಾದ ಉತ್ತರ ಕೊಡಬೇಕೆಂಬ ಆಸೆ, ಆದರೆ ಏನೂ ಹೊಳೆಯುತ್ತಿಲ್ಲ. ಕಡೆಗೆ, `ವೆರಿ ಗುಡ್ ಮಾರ್ನಿಂಗ್' ಎಂದು ಟೈಪ್ ಮಾಡಿ ಕಳುಹಿಸಿದಳು.
ಯಾಮಿನಿಯ ಬಾಳು ಒಂದು ಹೊಸ ತಿರುವು ಪಡೆದಿತ್ತು. ರೋಹಿತ್ ನನ್ನು ಭೇಟಿ ಮಾಡುವುದು, ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಪ್ರೀತಿಯಿಂದ ಮಾತನಾಡುವುದು ನಿತ್ಯ ಪದ್ಧತಿಯಾಯಿತು. ರೋಹಿತ್ ನಿಂದಾಗಿ ಯಾಮಿನಿಗೆ ಕಾಲೇಜ್ ಒಂದು ಅತ್ಯಂತ ಪ್ರಿಯ ಸ್ಥಾನವಾಯಿತು. ಪರಸ್ಪರ ಭೇಟಿ ಮಾಡದಿದ್ದರೆ ಇಬ್ಬರಿಗೂ ನೆಮ್ಮದಿ ಇರುತ್ತಿರಲಿಲ್ಲ. ಲೆಕ್ಚರರ್ ಬಾರದೆ ಕ್ಲಾಸ್ ಇಲ್ಲದಿದ್ದಾಗ, ಇಬ್ಬರೂ ಹತ್ತಿರದ ಪಾರ್ಕ್ ಅಥವಾ ಮಾಲ್ ಗೆ ಹೋಗಿ ಸುತ್ತಾಡಿ ಬರುತ್ತಿದ್ದರು. ದಿನಗಳು ಮಜವಾಗಿ ಕಳೆಯುತ್ತಿದ್ದವು. ಕಾಲೇಜಿನಲ್ಲಿ ಅವರ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದ. ಆದರೆ ಅವರು ಅದನ್ನು ಲೆಕ್ಕಿಸಲಿಲ್ಲ.