“ನೀನು ಖಂಡಿತಾ ನಂಬುವುದಿಲ್ಲ. ಆದರೆ ಕೆಲವು ದಿನಗಳಿಂದ ನಾನು ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಾ, ನಿನ್ನನ್ನೇ ಬಹಳ ನೆನಪಿಸಿಕೊಳ್ಳುತ್ತಿದ್ದೆ,” ವಿಕ್ರಂ ಹೇಳಿದ.

“ಹೌದೇ…..?” ಮುಗ್ಧಳಂತೆ ಕೇಳಿದಳು ಚಿತ್ರಾ.

“ನೀನು….. ಹೀಗೆ….. ಇದ್ದಕ್ಕಿದ್ದಂತೆ ಎಲ್ಲಿಂದ ಬಂದಿರುವೆ?”

“ಯಾವುದೋ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಹಾಗೇ ಇಲ್ಲಿ ನನಗೆ ಬೇಕಾದವರನ್ನು ಭೇಟಿ ಆಗಬೇಕಾಗಿತ್ತು. ಆದರೆ ಆ ಕೆಲಸ ಆಗಲಿಲ್ಲ ಬಿಡು. ಮತ್ತೆ ಬೆಂಗಳೂರಿನಷ್ಟು ದೂರ ಬಂದಿರುವಾಗ ನಿನ್ನನ್ನು ಮೀಟ್‌ ಮಾಡಿಕೊಂಡೇ ಹೋಗೋಣ ಎನಿಸಿತು. ನಿನ್ನ ಆಫೀಸಿಗೆ ಬಂದು ಯಾವುದೋ ಜಮಾನಾ ಆಯ್ತು. ಹೇಗೆ ನಡೀತಿದೆ ಎಲ್ಲಾ…..?”

“ಆಫೀಸ್‌ ಸಿಬ್ಬಂದಿ ನಿನ್ನ ಬಹಳ ಮಿಸ್‌ ಮಾಡಿಕೊಳ್ಳುತ್ತಿರುತ್ತಾರೆ,” ಎಂದ ವಿಕ್ರಂ. ದೊಡ್ಡ ಜೋಕ್‌ ಹೇಳಿದವನಂತೆ ಜೋರಾಗಿ ನಕ್ಕ. ಅವನು ಬಹಳ ಉತ್ಸಾಹಿ ಹಾಗೂ ಪ್ರೊಫೆಶನಲ್ ವ್ಯಕ್ತಿ ಆಗಿರುವುದರ ಜೊತೆ ಬಲು ಯಶಸ್ವೀ ಬಿಸ್‌ ನೆಸ್‌ ಮ್ಯಾನ್ ಆಗಿದ್ದ.

“ಓಹೋ ವಿಕ್ರಂ, ಇನ್ನೂ ನೀನು ನಿನ್ನ ಆ ಹಳೆ ಫ್ಲರ್ಟಿಂಗ್‌ ನೇಚರ್‌ ಬಿಟ್ಟಿಲ್ಲ ಬಿಡು,” ಚಿತ್ರಾ ನಗುತ್ತಾ ಹೇಳಿದಳು.

“ಓ…. ಕಮಾನ್‌ ಯಾರ್‌….. ನಿಮ್ಮಂಥ ಬ್ಯೂಟಿಫುಲ್ ಹುಡುಗಿಯರ ಕಷ್ಟವೇ ಇದು! ಯಾರಾದರೂ ಸಹಜವಾಗಿ ಆತ್ಮೀಯತೆ ವ್ಯಕ್ತಪಡಿಸಿದರೂ ಅದನ್ನು ಫ್ಲರ್ಟಿಂಗ್‌ ಅಂತಾನೇ ತಗೋತೀರಿ.”

“ನಿಜ ಹೇಳ್ತಿದ್ದೀಯ ವಿಕ್ರಂ……. ಬ್ಯೂಟಿ ಆಗಿರುವ ಹಿಂದಿನ ಕಷ್ಟ ನಿನಗೇನು ಗೊತ್ತು…..”

“ಓಹ್‌…. ಈಗ ನೀನು ದಯವಿಟ್ಟು ನಿನ್ನ ಆ ಗ್ರೇಟ್‌ ಫಿಲಾಸಫಿ ಶುರು ಮಾಡಬೇಡ,” ವಿಕ್ರಂ ಹೃದಯ ಮುಟ್ಟಿಕೊಳ್ಳುತ್ತಾ ನಾಟಕೀಯವಾಗಿ ಹೇಳಿದ.

“ಸಾಕು ಸಾಕು ನಿನ್ನ ಡ್ರಾಮಾ ಎಲ್ಲಾ…. ನೀನಂತೂ ನಯಾಪೈಸಾನೂ ಬದಲಾಗಿಲ್ಲ ಬಿಡು!” ಎಂದು ಕಿಲಕಿಲ ನಕ್ಕಳು ಚಿತ್ರಾ.

“ಕಾಲಕ್ಕೆ ತಕ್ಕ ಹಾಗೆ ಬದಲಾಗುವ ನಿನ್ನಂಥ ಊಸರವಳ್ಳಿ ಅಲ್ಲ ಬಿಡು ನಾನು,” ಎಂದ ವಿಕ್ರಂ.

“ಅರೆ…. ಇಷ್ಟು ವರ್ಷ ಆದ ಮೇಲೆ ಹೈದರಾಬಾದ್‌ ನಿಂದ ನಿನ್ನನ್ನು ನೋಡಲೆಂದು ಇಷ್ಟು ದೂರದ ಬೆಂಗಳೂರಿಗೆ ಬಂದಿದ್ದೇನೆ…. ಏನಾದರೂ ಊಟಗೀಟ ಕೊಡಿಸ್ತೀಯಾ ಅಥವಾ ಮಾತಿನಲ್ಲೇ ಹೊಟ್ಟೆ ತುಂಬಿಸಿ ಕಳುಹಿಸ್ತೀಯಾ?” ಬೇಕೆಂದೇ ಅವನ ಮಾತನ್ನು ನಿರ್ಲಕ್ಷಿಸುತ್ತಾ ಮಾತಿನ ಗಮನ ಬೇರೆಡೆ ಹರಿಯುವಂತೆ ಮಾಡಿದಳು.

“ಓಹ್‌…. ಐ ಆ್ಯಮ್ ಸಾರಿ, ನಿನ್ನನ್ನು ನೋಡಿ ಆತಿಥ್ಯ ನಡೆಸುವುದನ್ನೂ ಮರೆತುಬಿಟ್ಟೆ. ಮೊದಲು ಒಂದು ಕಪ್‌ ಸ್ಟ್ರಾಂಗ್‌ ಬಿಸಿ ಕಾಫಿ ಆಗಲಿ, ಏನಂತೀಯಾ?”

“ಎಲ್ಲಿ ನಿನ್ನ ಆಫೀಸಿನ ಆ ಹಳೆಯ ಭಟ್ಟ….. ಗುಂಡಪ್ಪ, ಇನ್ನೂ ಇದ್ದಾನಾ? ಒಂದೊಂದು ಸಲ ಆ ಮಾರಾಯ ಕಹಿ ಕಷಾಯ ಕುಡಿಸಿಬಿಡ್ತಿದ್ದ.”

“ಹ್ಞಾಂ….. ಹ್ಞಾಂ….. ಈಗಲೂ ಅವನೇ ಇದ್ದಾನೆ. ಇರಲಿ, ನಿನಗಾಗಿ ನಾನೇ ಬ್ರೂ ಕಾಫಿ ರೆಡಿ ಮಾಡ್ತೀನಿ ಇರು. ಹಾಲಂತೂ ಒಳ್ಳೆ ಗಟ್ಟೀದೇ ಇದೆ.”

“ಏ…. ಸಾಕು ಸುಮ್ನಿರಪ್ಪಾ…. ನಿನ್ನ ಸ್ಟಾಫ್‌ ಏನು ಅಂದುಕೊಳ್ಳಬೇಕು? ತಮ್ಮ ಬಾಸ್‌ ಕೈಲೇ ಕಾಫಿ ಮಾಡಿಸಿದಳು ಅಂದುಕೊಳ್ಳುವುದಿಲ್ಲವೇ? ಇಲ್ಲೇ ಕೂರು ಮಾರಾಯ.”

“ಛೇ….ಛೇ….. ಅಂಥ ದೊಡ್ಡ ವಿಷಯವೇನಲ್ಲ ಬಿಡು. ಇದೋ 5 ನಿಮಿಷದಲ್ಲಿ ಕಾಫಿ ಆಯ್ತು ಅಂದುಕೋ. ಆಫೀಸ್‌ ಕಿಚನ್‌ ನಲ್ಲಿ ನಾನೇ ಸಿದ್ಧಪಡಿಸುವೆ. ಅವನೇ ತಂದು ಸರ್ವ್ ಮಾಡ್ತಾನಷ್ಟೆ,” ಎಂದು ವಿಕ್ರಂ ಹೊರಟೇಬಿಟ್ಟ.

ಚಿತ್ರಾ ಸಹ ಎದ್ದು ಕೋರಮಂಗಲದ ಪಾಷ್‌ ಏರಿಯಾದಲ್ಲಿದ್ದ ಆ 8ನೇ ಅಂತಸ್ತಿನ ಆಫೀಸಿನ ಬಾಲ್ಕನಿಯಲ್ಲಿ ನಿಂತು ಹೊರಗೆ ನೋಡತೊಡಗಿದಳು. ಹಿಂದೊಮ್ಮೆ ಅವಳು ಕೆಲಸ ಮಾಡುತ್ತಿದ್ದ ಆಫೀಸ್‌ ಇದೇ ಬಿಲ್ಡಿಂಗ್‌ ನಲ್ಲಿತ್ತು, ಅದೂ ಸೇಮ್ ಫ್ಲೋರ್‌ ನಲ್ಲಿ. ಅವಳು ವಿಕ್ರಮನನ್ನು ಭೇಟಿ ಆಗಿ ಕಾಫಿ, ಊಟಕ್ಕೆ ಒಟ್ಟಿಗೆ ಹೊರಡುತ್ತಿದ್ದರು. ಸಂಜೆ ಆಫೀಸ್‌ ಬಿಡುವುದು ಹೇಗೂ ತಡ ಆಗುತ್ತಿತ್ತು, ಆಗ ವಿಕ್ರಮನ ಬೈಕ್‌ ನಲ್ಲೇ ಲಿಫ್ಟ್ ಪಡೆದು 8 ಗಂಟೆ ಮೇಲೆ ಹೊರಡುತ್ತಿದ್ದಳು. ಕಾರು ತಂದ ದಿನ ಮಾತ್ರ ಇಬ್ಬರೂ ಬೇರೆ ಬೇರೆಯಾಗಿ ಹೊರಡುತ್ತಿದ್ದರು, ಪಾರ್ಕಿಂಗ್‌ ನಲ್ಲಿ ಒಂದಿಷ್ಟು ಹರಟೆ ಆಗುತ್ತಿತ್ತು.

ಇಡೀ ಬಿಲ್ಡಿಂಗ್‌ ಮಾತ್ರವಲ್ಲದೆ, ಸುತ್ತಮುತ್ತಲಿನ ಏರಿಯಾದಲ್ಲಿ ಎಲ್ಲರೂ ಇವರಿಬ್ಬರ ಮಧ್ಯೆ ಅಫೇರ್‌ ನಡೆಯುತ್ತಿದೆ ಎಂದೇ ಭಾವಿಸಿದ್ದರು. ಅಷ್ಟು ಸಲ ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಆದರೆ….

“ಓ…. ನೀನು ಮತ್ತೆ ನಿನ್ನ ಅದೇ ಹಳೆಯ ಫೇವರಿಟ್‌ ಜಾಗದಲ್ಲಿ ನಿಂತಿದ್ದೀಯ.”

“ಹ್ಞೂಂ…. ಕಾಫಿ ಆಯ್ತೆ?”

“ಇನ್ನೇನು ಮತ್ತೆ? ಮೇಡಂ ನೀವು ನನ್ನ ಪ್ರೀತಿ ಗುರುತಿಸಲಿಲ್ಲ…. ನಾನು ಉತ್ತಮ ಹಸ್ಬೆಂಡ್‌ ಮೆಟೀರಿಯಲ್‌ ಆಗಿದ್ದೆ.”

“ಹಾ…ಹ್ಹ…..ಹಾ” ಚಿತ್ರಾ ಜೋರಾಗಿ ನಕ್ಕಳು.

“ನಿಜವೋ…..ಸುಳ್ಳೋ….  ಈಗಂತೂ ಹ್ಞೂಂ ಅಂದುಬಿಡು.”

ಅಷ್ಟರಲ್ಲಿ ಗುಂಡಪ್ಪ ಕಾಫಿ ಇಟ್ಟುಹೋದ.

“ಈಗ ಯಾವ ವಿಷಯಕ್ಕೆ ಹ್ಞೂಂ ಅನ್ನಬೇಕು?”

“ನನ್ನ ಮದುವೆ ಆಗಲಿಕ್ಕೆ!”

ಕಾಫಿ ಕಪ್‌ ಎತ್ತಿಕೊಂಡವಳ ಕೈ ಗಡಗಡ ನಡುಗಿತು. “ಇನ್ನೂ ಆ ಹುಚ್ಚು ಬಿಟ್ಟಿಲ್ಲವೇ?”

“ಹೇಗೆ ಬಿಟ್ಟಾತು? ಮೊದಲಿನಿಂದ ನಿನ್ನ ಹುಚ್ಚ ತಾನೇ?”

“ನಾನೀಗ 3 ವರ್ಷದ ಮಗನ ತಾಯಿ….. ಮರೆತಿದ್ದರೆ ಸ್ವಲ್ಪ ನೆನಪಿಸಿಕೋ…..”

“ಎಲ್ಲಾ ಗೊತ್ತಿದೆ ಬಿಡು…. ಅದರಲ್ಲಿ ನನಗೇನೂ ಪ್ರಾಬ್ಲಂ ಇಲ್ಲ…. ಅವನನ್ನು ಬಿಟ್ಟಿರಲು ಆಗಲ್ಲ ಅಂದ್ರೆ ಜೊತೆಗೇ ಕರೆದುಕೊಂಡು ಬಾ.”

“ಹೌದಾ….. ಬಹಳ ಚೆನ್ನಾಗಿದೆ! ಆಹಾ, ಎಂಥ ಒಳ್ಳೆಯ ಆಫರ್‌…. ಮತ್ತೆ ನಾನು ಈ ಆಫರ್‌ ಒಪ್ಪಿಕೊಳ್ಳುತ್ತೇನೆ ಅಂತ ನಿನಗೆ ಯಾಕೆ ಅನ್ನಿಸಿತು?”

“ನಿನ್ನ ಮದುವೆ ಆಗಿ ಹೈದರಾಬಾದ್‌ಗೆ ಹೋಗಿ ಎಷ್ಟೋ ವರ್ಷಗಳಾದ ಮೇಲೆ ಇಲ್ಲಿಗೆ ಬಂದಿದ್ದಿ….. ನೀನು ಅಲ್ಲಿ ಸುಖವಾಗಿಲ್ಲ ಅಂತ ನಿನ್ನ ಈ ಕಂಗಳೇ ಹೇಳುತ್ತಿವೆ ಹಾಗೂ ಈಗಲೂ ನನ್ನನ್ನೇ ಲವ್ ಮಾಡ್ತಿದ್ದಿ ಅಂತಾನೂ ಹೇಳ್ತಿವೆ. ನಿನ್ನ ಫೇಸ್‌ ರೀಡಿಂಗ್ ಈಗಲೂ ಮಾಡಬಲ್ಲೇ ಬೇಬಿ.”

“ಸೋ ವಾಟ್‌?”

“ಅಂದ್ರೆ ಈಗಲೂ ನೀನೂ ನನ್ನ ಲವ್ ಮಾಡುತ್ತಿರುವುದು ನಿಜ ಅಂತ ಒಪ್ಪಿಕೊಂಡೆ ತಾನೇ?”

“ಅದು ಹಾಗಲ್ಲ…. ನಾನು ನಿನ್ನನ್ನೂ ಲವ್ ಮಾಡಬಲ್ಲೆ ಅಂತ ಒಪ್ತೀನಿ.”

“ವಾಹ್‌…. ವಾಹ್‌!”

“ಒಂದೇ ಸಲ ಇಬ್ಬಿಬ್ಬರನ್ನು ಲವ್ ಮಾಡಬಹುದು ಅನ್ನೋದು ನನಗಂತೂ ಗೊತ್ತಿರಲಿಲ್ಲವಪ್ಪ,” ವಿಕ್ರಂ ಹೇಳಿದ.

“ವಾಟ್‌ ಈಸ್‌ ದಿಸ್‌ ಯಾರ್‌…..ಎಷ್ಟೋ ದಿನಗಳಾದ ಮೇಲೆ ಬಂದಿದ್ದೇನೆ, ನೀನೇನೋ ಹಳೆ ಜಗಳ ತೆಗೆದೆ.”

ವಿಕ್ರಂ ನಿದ್ದೆಯಿಂದ ಜಾಗೃತನಾದವನಂತೆ, “ಸಾರಿ…. ಸಾರಿ…. ನಾನು ನಿನ್ನನ್ನು ಮತ್ತಷ್ಟು ದುಃಖಿ ಮಾಡುತ್ತಿದ್ದೇನೆ, ಆ ಹಕ್ಕು ಮಾತ್ರ ಎಂದಿದ್ದರೂ ನಿನ್ನದು.”

“ವಿಕ್ರಂ, ನಿನಗೆ ಚೆನ್ನಾಗಿ ಗೊತ್ತು. ನಾನು ಆದಿತ್ಯನನ್ನೇ ಪ್ರೇಮಿಸುವುದು, ಅವನು ನನ್ನ ಗಂಡ ಅಂತ. ಅವನು ಯಾವುದೇ ಕಾಂಪ್ಲಿಕೇಶನ್ಸ್ ಇಲ್ಲದ ಮನುಷ್ಯ. ಅವನಿಗೆ ಹರ್ಟ್‌ ಆಗುವ ರೀತಿಯಲ್ಲಿ ನಡೆದುಕೊಳ್ಳಲು ನನಗೆ ಒಂದು ಚೂರು ಇಷ್ಟವಿಲ್ಲ. ನಿನ್ನ ಈ ತರಹದ ಚುಚ್ಚು ಮಾತುಗಳಿಂದಲೇ ನಾನು ನಿನ್ನ ಫೋನ್‌ ರಿಸೀವ್ ‌ಮಾಡುವುದನ್ನು ನಿಲ್ಲಿಸಿದ್ದು…. ಮತ್ತೆ ಈಗ ಇಲ್ಲಿಗೆ ಬಂದು ತಪ್ಪು ಮಾಡಿದೆನೇನೋ ಅನಿಸುತ್ತಿದೆ….”

ಅವಳ ಈ ಮಾತುಗಳಿಗೆ ವಿಕ್ರಂ ಬಹಳ ಗಂಭೀರನಾದ. ತನ್ನ ಸೀಟಿನಿಂದ ಎದ್ದು ಆ ಮೂಡ್‌ ಕೊಡಲು ಅವನು ಕಿಟಕಿಯ ಬಳಿ ಹೋಗಿ ನಿಂತ. ನಂತರ ಬೀರು ಬಳಿ ಹೋಗಿ ಅದರ ಬಾಗಿಲು ತೆರೆದ. ಅದರ ಪೂರ್ತಿ ಡ್ರಿಂಕ್ಸ್ ಬಾಟಲಿ ಇದ್ದವು. ಆ ಮಿನಿ ಬಾರ್ ಕಂಡು ಚಿತ್ರಾ ಹೌಹಾರಿದಳು.

“ಇದೇನಿದು ವಿಕ್ರಂ? ಇದೆಲ್ಲ ಯಾವಾಗಿನಿಂದ?”

“ಏನು ಮಾಡಲಿ…. ನೀನು ಬಿಟ್ಟು ಹೋದಾಗಿನಿಂದ ಇದೇ ನನ್ನ ದೋಸ್ತಿ….. ಇದೇ ನನ್ನ ಆಸ್ತಿ!”

“ಇದೆಂಥ ತಮಾಷೆಯ ಮಾತು ವಿಕ್ರಂ…..?”

“ನನ್ನ ಜೀವನವೇ ಒಂದು ತಮಾಷೆ ಆಗಿಹೋಗಿದೆಯಲ್ಲ…..”

“ಓ….. ಈ ಮೂಲಕ ನನ್ನನ್ನು ಎಮೋಷನಲ್ ಬ್ಲ್ಕಾಕ್‌ ಮೇಲ್ ಮಾಡೋಣ ಅಂತೀಯೇನು? ನಿನ್ನಿಂದಲೇ ನಾನು ಕುಡುಕ ಆದೆ ಅಂತ ಹೇಳ್ತಿದ್ದೀಯಾ?”

“ಅಂದ್ರೆ…. ನಿನಗೇನೂ ವ್ಯತ್ಯಾಸ ಅನಿಸಲಿಲ್ಲ ತಾನೇ?”

“ಖಂಡಿತಾ ನಯಾ ಪೈಸೆಯಷ್ಟೂ ಇಲ್ಲ!” ಚಿತ್ರಾ ಮುಖ ಸೊಟ್ಟಗೆ ಮಾಡಿಕೊಳ್ಳುತ್ತಾ ಹೇಳಿದಳು.

“ನೀನು ತುಂಬಾ ಸ್ಟ್ರಾಂಗ್‌ ಹೆಡೆಡ್‌ ಹುಡುಗಿ ಅಂತ ನನಗೆ ಗೊತ್ತಿದೆ ಬಿಡು….. ಇದು ನಿನ್ನನ್ನು ನನ್ನ ಹತ್ತಿರಕ್ಕೆ ತರಲಾರದು ಬಿಡು. ಬದಲಿಗೆ ನೀನು ಇರಿಟೇಟ್‌ ಆಗಿ ಇನ್ನಷ್ಟು ದೂರ ಹೋಗಿಬಿಡುವೆ. ಇನ್ನಿದಕ್ಕಿಂತ ಎಷ್ಟು ದೂರ ಅಂತ ಓಡಬಲ್ಲೆ……?”

ಪೇಲವ ನಗೆ ನಕ್ಕ.“ನಿನ್ನ ಎಂಗೇಜ್‌ ಮೆಂಟ್‌ ಆಯ್ತು ಅಂತ ಯಾರೋ ಹೇಳಿದರಲ್ಲ? ನಿನಗೆ ಕಂಗ್ರಾಟ್ಸ್ ಹೇಳೋಣಾಂತ್ಲೇ ನಾನು ಈಗ ಬಂದಿದ್ದು….”

“ವಾಹ್‌… ವಾಟ್‌ ಎ ಪಿಟಿ! ಗಾಯದ ಮೇಲೆ ಉಪ್ಪು ಹಾಕಲು ಬಂದೆನೋ ಅಥವಾ ನಿನ್ನ ಅಪರಾಧಿಪ್ರಜ್ಞೆ ತಗ್ಗಿಸಿಕೊಳ್ಳಲೋ…..?”

“ಹೌದು ಬಿಡು, ಇಲ್ಲಿಗೆ ಬಂದು ನಾನು ದೊಡ್ಡ ತಪ್ಪು ಮಾಡಿದೆ.”

“ಅದು ನಿಜ…. ಕ್ಷಣ ಕ್ಷಣಕ್ಕೂ ನಿನ್ನ ಇರಿಟೇಷನ್‌ ಹೆಚ್ಚುತ್ತಲೇ ಇದೆ.”

“ಸರಿ ಬಿಡು…. ಬಂದ ದಾರಿಗೆ ಸುಂಕವಿಲ್ಲ ಅಂತ ಹಾಳಾಗಿ ಹೋಗ್ತೀನಿ.”

“ನಿನಗೆ ಸರಿ ಅನಿಸಿದ್ದನ್ನು ಮಾಡು, ಮೊದಲಿನಿಂದ ಅದೇ ತಾನೇ ಮಾಡುತ್ತಿದ್ದಿ…..”

ಚಿತ್ರಾ ಅಲ್ಲಿಂದ ಹೊರಡಲು ಎದ್ದು ನಿಂತಳು. ವಿಕ್ರಮನ ಚಿಂತೆ ಇನ್ನಷ್ಟು ಹೆಚ್ಚಿತು.

“ಕೇಳಿಲ್ಲಿ…..”

“ಇನ್ನೂ ಏನಾದರೂ ಬಾಕಿ ಉಳಿದಿದೆ ಅಂತೀಯಾ?”

“ನನ್ನನ್ನು ನೀನು ಡಿಚ್‌ ಮಾಡಿದ್ದೇಕೆ?”

“ನೀನು ಹೆಚ್ಚು ಪವರ್‌ ಫುಲ್ ಆಗಿದ್ದೆ.”

“ಪವರ್‌ ಫುಲ್ ಆದದ್ದಕ್ಕೆ ನನಗೆ ಇಂಥ ಶಿಕ್ಷೆಯೇ? ಇದು ನ್ಯಾಯವೇ?”

“ಅದೇನೋ ಗೊತ್ತಿಲ್ಲ, ಆದರೆ ಆದಿತ್ಯ ಬಹಳ ಎಮೋಶನಲ್ ವ್ಯಕ್ತಿ. ಅವನಿಗೆ ಚಿಕ್ಕಂದಿನಿಂದಲೂ ಹಾರ್ಟ್‌ ಪ್ರಾಬ್ಲಂ ಇದೆ. ಇದನ್ನು ನಾನು ನಿನಗೆ ಮೊದಲೇ ತಿಳಿಸಿದ್ದೇನೆ.”

“ಇದೆಲ್ಲ ನಿನಗೆ ಮೊದಲೇ ನೆನಪಿರಲಿಲ್ಲವೇ?”

“ವಿಕ್ರಂ, ಇದೆಂಥ ಅಧಿಕಪ್ರಸಂಗತನ ನಿನ್ನದು? ದಾರಿ ಬಿಡು, ನಾನೀಗ ಹೊರಡಬೇಕು.“

“ಇಲ್ಲ ಚಿತ್ರಾ….. ಇವತ್ತು ನೀನು ವಿವರಿಸಿಯೇ ಹೋಗಬೇಕು.”

“ವಿಕ್ರಂ, ನಾನು ಈ ಊರಿಗೆ ಓದಲೆಂದು ಬಂದಿದ್ದೆ. ಒಳ್ಳೆ ಕೆಲಸ ಸಿಕ್ಕಿದ್ದರಿಂದ ಇಲ್ಲೇ ಉಳಿದುಬಿಟ್ಟೆ. ಆದಿತ್ಯ ಮತ್ತು ನಾನು ಬಾಲ್ಯದಿಂದ ಒಡನಾಡಿಗಳು. ಅವನ ಪ್ರೀತಿ ನನಗೆ ಬಾಲ್ಯದ ಹುಚ್ಚು ಎನಿಸಿತ್ತು. ಅವನು ಆ ವಿಷಯದಲ್ಲಿ ಮುಂದೆ ಇಷ್ಟು ಸೀರಿಯಸ್‌ ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಅವನು ಅಲ್ಲೇ ಹೈದರಾಬಾದ್‌ ನಲ್ಲಿ ಉಳಿದ, ನಾನು ಡಿಗ್ರಿ, ಕೆಲಸ ಅಂತ ಬೆಂಗಳೂರಿಗೆ ಅಂಟಿಕೊಂಡೆ. ಆಗ ನಿನ್ನ ಪ್ರೀತಿ ಎದುರಾಯಿತು. ಈ ನಗರದಲ್ಲಿ ನನ್ನವರು ಅಂತ ಯಾರೂ ಇರಲಿಲ್ಲ.

“ಹಾಗಾಗಿ ಅದರಲ್ಲಿ ನಾನು ಜಾಸ್ತಿ ಇನ್‌ ವಾಲ್ವ್ ‌ಆದೆ. ಆದರೆ ನೀನು ಮದುವೆ ಬಗ್ಗೆ ಇಷ್ಟು ಸೀರಿಯಸ್‌ ಆಗ್ತೀಯ ಅಂತ ಎದುರು ನೋಡಿರಲಿಲ್ಲ. ನಾನೂ ಮದುವೆ ಬಗ್ಗೆ ಎಂದೂ ಸೀರಿಯಸ್‌ ಆದವಳೇ ಅಲ್ಲ. ನೀನೂ ಸಹ ನನ್ನ ಬಳಿ ಅಂಥ ಯಾವ ವಿಚಾರದ ಪ್ರಸ್ತಾಪ ಮಾಡಿರಲಿಲ್ಲ. ಅದೇ ತರಹ ನಮ್ಮಿಬ್ಬರ ನಡುವಿನ ಗಡಿ ನಾವೆಂದೂ ದಾಟಿರಲಿಲ್ಲ.”

“ಇಷ್ಟೆಲ್ಲ ಒಡನಾಟ ಬೆಳೆದ ಮೇಲೆ ಮದುವೆ ಬಗ್ಗೆ ಬಾಯಿಬಿಟ್ಟು ಹೇಳಬೇಕೇ?” ವಿಕ್ರಮ ಚೀರಾಡಿದ.

“ಇಲ್ಲಿನ ಎಲ್ಲರಿಗೂ ನಾವಿಬ್ಬರೂ ಪ್ರೇಮದಲ್ಲಿ ಎಷ್ಟು ಮುಳುಗಿದ್ದೇವೆ ಎಂಬುದು ಚೆನ್ನಾಗಿಯೇ ಗೊತ್ತಿತ್ತು…. ನೀನೇ ಬೇಕೂಂತ ಎಲ್ಲವನ್ನೂ ನಿರ್ಲಕ್ಷಿಸಿದೆ. ಆ ಆದಿತ್ಯನ ಸಂಬಂಧ ಬಂದಾಗ ನನ್ನನ್ನು ಒಂದೇ ಕ್ಷಣದಲ್ಲಿ ಕಡೆಗಣಿಸಿಬಿಟ್ಟೆ! ಹಾಳಾಗಿ ಹೋಗಲಿ ಅಂತ ಒಂದು ವೆಡ್ಡಿಂಗ್‌ ಕಾರ್ಡ್‌ ಕಳುಹಿಸಿದೆ……” ವರ್ಷಗಳ ಕೋಪ ಲಾವಾ ರಸವಾಗಿ ಸಿಡಿದಿತ್ತು.

ಚಿತ್ರಾ ಸುಮ್ಮನೆ ನಿಂತಿದ್ದಳು.

“ಏನಾದರೂ ಹೇಳು…!”

“ಇನ್ನೇನು ಬಾಕಿ ಉಳಿದಿದೆ ಅಂತ ಹೇಳಲಿ? ಆದಿತ್ಯ ಪ್ರಪೋಸ್‌ ಮಾಡಿದ. ಅವನ ಮಾತಿಗೆ ಇಲ್ಲ ಅಂತ ಹೇಳಿ ಅವನನ್ನು ಹರ್ಟ್ ಮಾಡಲಾರದೇ ಹೋದೆ. ನನ್ನ ಅವನ ಕುಟುಂಬಗಳು ಅಲ್ಲೇ ಉಳಿದಿದ್ದವು. ಅಪ್ಪ ಈ ಮದುವೆಯ ಪ್ರಸ್ತಾಪ ಮುಂದಿಟ್ಟಾಗ ಯಾವ ಬಾಯಲ್ಲಿ ಬೇಡ ಅನ್ನಲಿ? ಆದಿತ್ಯನಂತೂ ಹಲವು ವರ್ಷಗಳಿಂದ ನನಗಾಗಿ ಕಾದಿದ್ದ. ನಾನು ಸೆಟಲ್ ಆದ ತಕ್ಷಣ ಮದುವೆ ಅಂತ ಎರಡೂ ಮನೆಯವರು ಮೊದಲಿನಿಂದ ತಯಾರಾಗಿದ್ದರು. ಅವನನ್ನು ನಾನು 15 ವರ್ಷಗಳಿಂದ ಬಲ್ಲೇ. ನಿನ್ನನ್ನು ಕೇವಲ 1 ವರ್ಷದಿಂದ ಮಾತ್ರ…. ನಿನ್ನ ಬಗ್ಗೆ ನಾನು ಯಾವ ಖಾತ್ರಿಯನ್ನೂ ಹೊಂದಿರಲಿಲ್ಲ. ನೀನು ಜಾಲಿ ಮೂವಿಂಗ್‌ ಪವರ್‌ ಫುಲ್ ಫೆಲೋ ಅಂತವೇ ಭಾವಿಸಿದ್ದೆ, ಬೇಗ ಮೂವ್ ‌ಆನ್‌ ಆಗುವಂಥ…..”

“ಮೂವ್ ‌ಆನ್‌!” ವಿಕ್ರಮನಿಗಂತೂ ಸಿಟ್ಟು ಕೆಂಡಾಮಂಡಲ ಉಕ್ಕಿ ಬಂತು.

“ಮೂವ್ ‌ಆನ್‌ ಮೈ ಫುಟ್‌! ಬ್ಲಡೀ ಹೆಲ್‌….. ನಿನ್ನನ್ನು ಪ್ರೇಮಿಸಿದ ತಪ್ಪಿಗೆ ಜೀವನವಿಡೀ ಅನುಭವಿಸಬೇಕು. ಅದರ ಬದಲು ಹುಡುಗಿಯರ ತರಹ ನಿನ್ನ ಮುಂದೆ ಗೊಳೋ ಅಂತ ಅತ್ತುಬಿಟ್ಟಿದ್ದರೆ, ನನ್ನ ಹೃದಯ ಹಗುರ ಆಗುತ್ತಿತ್ತೇನೋ…. ಆಗ ಕನಿಷ್ಠ ನೀನು ಬಿಟ್ಟು ಹೋಗುತ್ತಿರಲಿಲ್ಲ.”

ವಿಕ್ರಂ ಇನ್ನೂ ಹೀಗೆ ಬಡಬಡಿಸುತ್ತಲೇ ಇದ್ದ. ಚಿತ್ರಾ ಅದಾವ ಮಾಯದಲ್ಲಿ ಅಲ್ಲಿಂದ ಹೊರಟುಹೋಗಿದ್ದಳೋ ಅವನಿಗೆ ಗೊತ್ತಾಗಲೇ ಇಲ್ಲ.

“ಹಲೋ….. ಇನ್ನೂ ಯೋಚನೆಗಳ ಗುಂಗಲ್ಲೇ ಕಾಲ ಕಳೆಯುತ್ತಿದ್ದೀಯಾ?” ಮತ್ತೆ ಅಲ್ಲಿಗೆ ಮರಳಿದ ಚಿತ್ರಾಳ ಪ್ರಶ್ನೆ ಅವನನ್ನು ವಾಪಸ್ಸು ಈ ಲೋಕಕ್ಕೆ ತಂದಿತು. ಅವನು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದ.

“ನೀನಿನ್ನೂ ಹೊರಡಲಿಲ್ಲವೇ?”

“ನಾನು ಪರ್ಸ್‌ ಮರೆತುಬಿಟ್ಟಿದ್ದೆ. ಅದನ್ನು ತೆಗೆದುಕೊಂಡು ಹೋಗಲು ಬಂದೆ.”

“ಕೇವಲ ಪರ್ಸೇ?”

“ಹೌದು, ಕೇವಲ ಪರ್ಸ್‌,” ಅವಳು ಹೊರಗೆ ಹೆಜ್ಜೆ ಇಡುತ್ತಾ, “ಟೇಕ್‌ ಗುಡ್‌ ಕೇರ್‌ ಆಫ್‌ ಯುವರ್‌ ಸೆಲ್ಫ್,” ಎಂದಳು.

ಬಂದ್‌ ಆದ ಲಿಫ್ಟ್ ಒಳಗೆ ಅವಳ ಕಣ್ಣೀರು ತುಳುಕಿತ್ತು.

“ಇಲ್ಲಿ ಕಳೆದುಕೊಂಡದ್ದೇನೋ ಬಹಳ ಉಂಟು ವಿಕ್ರಂ. ಆದರೆ ಎಲ್ಲವನ್ನೂ ಮರಳಿ ಜೋಡಿಸಿಕೊಳ್ಳುವಷ್ಟು ನನ್ನ ಕೈ ದೊಡ್ಡದಲ್ಲ. ಕೆಲವೊಂದನ್ನು ಹೊಂದಲು ಕೆಲವನ್ನು ಬಿಡಲೇಬೇಕು!”

“ಸಾರ್‌…. ನೀವು ಮೊದಲಿನಿಂದಲೂ ಈ ಮೇಡಂ ಅವರನ್ನು ಬಹಳ ಲವ್ ಮಾಡ್ತಿದ್ದಿರಿ ಅಲ್ಲವೇ?” ಬಹಳ ಹಳೆ ಮನುಷ್ಯ ಜವಾನ ಗುಂಡಪ್ಪ ಪ್ರಶ್ನಿಸಿದ. ಅವನಿಗೆ ಅಷ್ಟು ಸಲಿಗೆ ಮೊದಲಿನಿಂದ ಇತ್ತು.

“ಲವ್ವೋ ಗಿವ್ವೋ ಗೊತ್ತಿಲ್ಲ ಗುಂಡಪ್ಪ….. ಆದರೆ ಕಾಲೇಜಿನಿಂದ ಹುಡುಗಿಯರು ನಾನು ಅಂದ್ರೆ ಹಿಂದೆ ಬೀಳೋರು. ಇವಳು ಮಾತ್ರ ನನ್ನನ್ನೇ ಬಿಟ್ಟು ಹೋದದ್ದು ಯಾಕೆ ಅಂತ ಇನ್ನೂ ಗೊತ್ತಾಗುತ್ತಿಲ್ಲ…..”

ವಿಕ್ರಮನ ಮಾತಿಗೆ ಮುಕ್ತಾಯವಿರಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ