ಗಂಡ ಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲ ಹಾಗೂ ಭಾವನಾತ್ಮಕವಾಗಿರುತ್ತದೆ. ಮೊದಲು ಅವಿಭಕ್ತ ಕುಟುಂಬಗಳ ಕಾಲದಲ್ಲಿ ಸಂಬಂಧದಲ್ಲಿ ಅಷ್ಟಿಷ್ಟು ಏರಿಳಿತ ಆಗುತ್ತಿತ್ತು. ಆದರೆ ಈಗ ಒಟ್ಟು ಕುಟುಂಬಗಳ ಕಾಲ ಹೊರಟುಹೋಗಿ ಪುಟ್ಟ ವಿಭಕ್ತ ಕುಟುಂಬಗಳ ಯುಗ ಶುರುವಾಗಿದೆ. ಅದಕ್ಕೆ ಹೆಗಲು ಕೊಡುವ ಕೆಲಸ ಗಂಡ ಹೆಂಡತಿ ಇಬ್ಬರ ಮೇಲೂ ಬಿದ್ದಿದೆ. ಇಂತಹ ಸ್ಥಿತಿಯಲ್ಲಿ ಹೆಂಡತಿ ಅಡುಗೆಮನೆಗೆ ಅಂಟಿಕೊಂಡು ಕುಳಿತಿರುವುದು ಕುಟುಂಬಕ್ಕೆ ಹಿತಕರವಲ್ಲ. ಇಂದಿನ ಕಾಲದಲ್ಲಿ ಹೆಂಡತಿಯ ಜವಾಬ್ದಾರಿಗಳು ಗಂಡನಿಗಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿವೆ.

ಗಂಡ ಕೆಲಸ ಮಾಡಿ ಹಣವನ್ನು ತರುತ್ತಾನೆ. ಅದೇ ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಮನೆ, ಸಂಬಂಧಿಕರು, ಅಕ್ಕಪಕ್ಕದವರು ಹೀಗೆ ಎಲ್ಲರ ಜೊತೆ ನಿಕಟ ಸಂಬಂಧ ಕಾಯ್ದುಕೊಳ್ಳುವುದು ಅವಳ ಕೆಲಸವಾಗಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಗಳಿಸಿದ ಹಣದಲ್ಲಿ ಒಂದಿಷ್ಟು ಮೊತ್ತವನ್ನು ಉಳಿಸುವುದು ಕೂಡ ಅವಳ ಕರ್ತವ್ಯದ ಪಟ್ಟಿಯಲ್ಲಿ ಸೇರಿಕೊಂಡಿದೆ. ಇಂದಿನ ಸ್ಮಾರ್ಟ್‌ ವೈಫ್‌ ಕೇವಲ ಹೌಸ್‌ ವೈಫ್‌ ಆಗಿರುವಲ್ಲಿ ಸಂತೋಷಪಡುವುದಿಲ್ಲ. ಅವಳು ಒಬ್ಬ ಒಳ್ಳೆಯ ಹೌಸ್‌ ಮ್ಯಾನೇಜರ್‌ ಕೂಡ ಆಗಿದ್ದಾಳೆ.

ಕುಟುಂಬದ ಯಶಸ್ವಿ ಚುಕ್ಕಾಣಿ

ಭಾವನಾ ಮತ್ತು ಗಿರೀಶ್‌ ಮದುವೆಯ ಬಳಿಕ ಮಳವಳ್ಳಿಯಿಂದ ಬೆಂಗಳೂರಿಗೆ ಬಂದರು. ಗಿರೀಶ್‌ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ. 25,000 ರೂ. ಸಂಬಳ ಬರುತ್ತಿತ್ತು. 6,000 ರೂ.ಗಳಲ್ಲಿ ಒಂದು ಪುಟ್ಟ ಮನೆ ಬಾಡಿಗೆ ಹಿಡಿದು ತಮ್ಮ ಸಂಸಾರಚಕ್ರ ಆರಂಭಿಸಿದರು. ಇಷ್ಟೊಂದು ದೊಡ್ಡ ಮೊತ್ತ ಬಾಡಿಗೆಗೆ ಹೋಗುತ್ತಿರುವುದು ಭಾವನಾಗೆ ಏಕೋ ಸರಿ ಬರಲಿಲ್ಲ. ಅವಳು ಸರ್ಕಾರಿ ಯೋಜನೆಯಲ್ಲಿ ದೊರಕುವ ಮನೆಗಳ ಬಗ್ಗೆ ಗಮನಹರಿಸಿದಳು. ಅಕ್ಕಪಕ್ಕದವರಿಗೂ ಸಹ ಆಕೆ ಆ ಬಗ್ಗೆ ಮಾಹಿತಿ ಕೊಡಲು ಕೋರಿದಳು.

1 ತಿಂಗಳ ಬಳಿಕ ಭಾವನಾಗೆ ತಿಳಿದು ಬಂದ ವಿಚಾರವೆಂದರೆ ಸರ್ಕಾರಿ ಗೃಹ ಯೋಜನೆಯಲ್ಲಿ ಕೆಲವರು ಮನೆಯನ್ನು ಬುಕ್ ಮಾಡಿದ್ದರು. ಆದರೆ ಅಲನ್ನು ಖರೀದಿಸಿರಲಿಲ್ಲ. ಸರ್ಕಾರ ಅಂತಹ ಮನೆಗಳನ್ನು ಪುನಃ ಮಾರಾಟ ಮಾಡಲು ಯೋಜಿಸಿದೆ ಎಂದು ತಿಳಿಯಿತು. ಮನೆಯ ಒಟ್ಟು ಮೊತ್ತದಲ್ಲಿ ಶೇ.25 ರಷ್ಟನ್ನು ಮೊದಲೇ ಕೊಡುವುದು ಉಳಿದ ಮೊತ್ತವನ್ನು ಕಂತಿನಲ್ಲಿ ಕೊಡುವುದೆಂದು ತಿಳಿಸಲಾಗಿತ್ತು. ಆರಂಭಿಕ ಮೊತ್ತ 1,50,000 ರೂ. ಕೊಡಬೇಕಿತ್ತು. ತಿಂಗಳ ಕಂತು 4,000 ರೂ. ಕೊಡಬೇಕಿತ್ತು. ಅಷ್ಟೊಂದು ಮೊತ್ತವನ್ನು ಈಗ ಎಲ್ಲಿಂದ ತರುವುದೆಂದು ಗಿರೀಶ್‌ ಪತ್ನಿಗೆ ಕೇಳಿದ, “ಈಗ ನಾವು ಹೇಗೂ 6,000 ರೂ. ಬಾಡಿಗೆ ಕೊಡುತ್ತಿದ್ದೇವೆ. ಆ ಮೊತ್ತವಂತೂ ಉಳಿಯುತ್ತದೆ. ನಾನು 1 ಲಕ್ಷ ರೂ.ತನಕ ವ್ಯವಸ್ಥೆ ಮಾಡ್ತೀನಿ, ನೀವು 50,000 ರೂ. ವ್ಯವಸ್ಥೆ ಮಾಡಿ,” ಎಂದು ಹೇಳಿದಳು.

ಕೆಲವೇ ತಿಂಗಳಲ್ಲಿ ಹಣ ಪಾವತಿ ಮುಗಿಸಿದ ಅವರು ತಮ್ಮದೇ ಆದ ಮನೆಯನ್ನು ಹೊಂದಿದರು.

ಅದೊಂದು ದಿನ ಗಿರೀಶ್‌ ಭಾವನಾಳನ್ನು ಒಂದು ಮದುವೆ ಪಾರ್ಟಿಗೆ ಕರೆದುಕೊಂಡು ಹೋಗಲು ಬಂದ. ಅವಳು ಸಿದ್ಧಳಾಗಿ ಬಂದಾಗ ಅವಳಲ್ಲಿ ಏನೋ ವ್ಯತ್ಯಾಸ ಕಂಡುಬಂತು.

“ನಿನ್ನ ಆಭರಣಗಳೆಲ್ಲಿ?” ಎಂದು ಅವನು ಕೇಳಿದಾಗ, “ನಾನು ಮನೆ ಖರೀದಿಗೆ ಕೊಟ್ಟ 1 ಲಕ್ಷ ರೂ. ಆ ಆಭರಣಗಳನ್ನು ಮಾರಿಯೇ ಕೊಟ್ಟದ್ದು,” ಎಂದು ಪತ್ನಿ ಹೇಳಿದಾಗ ಅವನಿಗೆ ಅವಳ ಬಗ್ಗೆ ಹೆಮ್ಮೆ ಅನಿಸಿತು.

ಉಳಿತಾಯದಲ್ಲಿಯೇ ಬದುಕು ಬಂಗಾರ

SM273287-(1) (1)

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಕುಟುಂಬವೆಂಬ ಚಕ್ಕಡಿಯನ್ನು ಎಳೆಯುವ ಮೂಲಮಂತ್ರವೆಂದರೆ ಉಳಿತಾಯ. ಯಾವ ಕುಟುಂಬಗಳಲ್ಲಿ ಧಾರಾಳ ಹಣ ಬರುತ್ತಿರುತ್ತೊ, ಅಲ್ಲಿಯೂ ಕೂಡ ಹಣ ಉಳಿತಾಯದ ಬಗ್ಗೆ ಕಾಳಜಿ ವಹಿಸಬೇಕು. ಸ್ಮಾರ್ಟ್‌ ವೈಫ್ ಹಣಕಾಸು ಸಚಿವೆಯ ತರಹ ತನ್ನ ಮನೆಯ ಬಜೆಟ್‌ ನ್ನು ರೂಪಿಸಬೇಕು. ಇಡೀ ತಿಂಗಳು ಆಗುವ ಖರ್ಚನ್ನು ಒಂದು ಕಡೆ ಬರೆದಿಡಬೇಕು. ಆದ್ದರಿಂದ ಯಾವುದಕ್ಕೆ ಕಡಿಮೆ ಖರ್ಚು ಮಾಡಿ ಉಳಿತಾಯ ಮಾಡಬಹುದು ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ. ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ತುರ್ತಾಗಿ ಬರುವ ಖರ್ಚುಗಳಿಗಾಗಿ ಉಳಿತಾಯ ಮಾಡಿ ಇಡುವುದು ಅತ್ಯವಶ್ಯ. ಏಕೆಂದರೆ ತುರ್ತು ಸಮಯದಲ್ಲಿ ಬರುವ ಖರ್ಚುಗಳಿಗೆ ಅವರಿವರ ಬಳಿ ಕೈಯೊಡ್ಡುವ ಸ್ಥಿತಿ ಉಂಟಾಗಬಾರದು.

ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಬ್ಯಾಂಕು ಅಥವಾ ಅಂಚೆ ಕಛೇರಿಯಲ್ಲಿ ಆರ್‌ ಡಿ ರೂಪದಲ್ಲಿ ತುಂಬುತ್ತ ಹೋಗಿ. ಇತ್ತೀಚೆಗೆ ಮ್ಯೂಚ್ಯುವಲ್ ‌ಫಂಡ್‌ ಗಳಿಂದಲೂ ಒಳ್ಳೆ ರಿಟರ್ನ್ಸ್ ಪಡೆಯಬಹುದು. ಸ್ಮಾರ್ಟ್‌ ಹೆಂಡತಿ ಪ್ರತಿ ತಿಂಗಳೂ ನಿಗದಿಪಡಿಸಿದ ಖರ್ಚಿನಲ್ಲಿ ಒಂದಿಷ್ಟಾದರೂ ಉಳಿತಾಯ ಮಾಡಿ ತೋರಿಸುತ್ತಾಳೆ.

ಗಂಡ, ಕುಟುಂಬದವರು ಹಾಗೂ ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಔಷಧಿಗಳ ಖರ್ಚು ಕೂಡ ಕಡಿಮೆಯಾಗುತ್ತದೆ. ಇದು ಒಂದು ರೀತಿಯಲ್ಲಿ ಉಳಿತಾಯವೇ ಹೌದು. ಬಹಳಷ್ಟು ರೋಗಗಳನ್ನು ಸ್ವಚ್ಛತೆಯ ಮುಖಾಂತರ ದೂರ ಇಡಬಹುದು. ಮನೆಗೆ ಬೇಕಾಗುವ ವಸ್ತುಗಳನ್ನು ಸ್ವಲ್ಪ ಜಾಣತನ ಉಪಯೋಗಿಸಿ ಖರೀದಿಸಿದರೆ ಬಹಳಷ್ಟು ಮೊತ್ತವನ್ನು ಉಳಿಸಬಹುದು. ಇತ್ತೀಚೆಗೆ ಮಾಲ್ ‌ಗಳು ಸಾಕಷ್ಟು ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ, ಅಲ್ಲಿಗೆ ಹೋಗಿ ಖರೀದಿ ಮಾಡುವುದರಿಂದ ಹೆಚ್ಚಿನ ಉಳಿತಾಯ ಮಾಡಬಹುದು.

ಸಮಾಜದ ಹೆಗ್ಗುರುತು ಸ್ಮಾರ್ಟ್ವೈಫ್

ಇತ್ತೀಚೆಗೆ ಬಹಳಷ್ಟು ಜನರು ತಮ್ಮ ತಂದೆತಾಯಿ ಒಡಹುಟ್ಟಿದವರಿಂದ ದೂರದ ನಗರದಲ್ಲಿ ವಾಸಿಸುತ್ತಾರೆ. ಇಂತಹದರಲ್ಲಿ ಅವರಿಗೆ ಸ್ನೇಹಿತರನ್ನು ಭೇಟಿಯಾಗಲು ಹೆಚ್ಚು ಸಮಯವಿರುತ್ತದೆ. ಇಲ್ಲಿಯೇ ಅವರು ತಮ್ಮ ಕಷ್ಟಸುಖ ಹಂಚಿಕೊಳ್ಳುತ್ತಾರೆ. ಪರಸ್ಪರರನ್ನು ಭೇಟಿಯಾಗಲೆಂದೇ ಕೆಲವು ಜನರು ಪಾರ್ಟಿಗಳನ್ನು ಏರ್ಪಡಿಸುತ್ತಾರೆ. ಅಲ್ಲಿ ಮಹಿಳೆಯರ ನಡುವೆಯೇ ಅಘೋಷಿತ ಸ್ಪರ್ಧೆ ಏರ್ಪಡುತ್ತದೆ. ಯಾರ ಪತ್ನಿ ಯಾವ ಡ್ರೆಸ್‌ ಧರಿಸಿದ್ದಾಳೆ, ಆಕೆಯ ವರ್ತನೆ ಹೇಗಿದೆ ಎಂದೆಲ್ಲ ಚರ್ಚೆ ನಡೆಯುತ್ತದೆ.

ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಅದರ ರೀತಿ ನೀತಿಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ತೆರನಾದ ಪಾರ್ಟಿಗಳಿಂದ ಕೆಲವೊಂದು ಜನರ ಒಳ್ಳೆಯ ಸ್ನೇಹ ಲಭಿಸುತ್ತದೆ. ಗಂಡಸರು ಈ ರೀತಿಯ ಸಾಮಾಜಿಕ ಸಂಬಂಧಗಳನ್ನು ಅಷ್ಟೊಂದು ಒಳ್ಳೆಯ ರೀತಿಯಲ್ಲಿ ನಿರ್ವಹಿಸುವುದಿಲ್ಲ.

ಸ್ಮಾರ್ಟ್‌ ಪತ್ನಿ ಈ ಕೊರತೆಯನ್ನು ನಿವಾರಿಸಿ ಪ್ರಗತಿಯ ದಾರಿಯಲ್ಲಿ ಸಾಗಲು ಗಂಡನಿಗೆ ನೆರವಾಗುತ್ತಾಳೆ. ಆಫೀಸಿನ ಸಹೋದ್ಯೋಗಿಗಳ ಪಾರ್ಟಿಗೂ ಹೋಗಬೇಕು. ಅಲ್ಲೂ ಕೂಡ ಒಳ್ಳೆಯ ಸಂಬಂಧಗಳು ಏರ್ಪಡುತ್ತವೆ.

ಸ್ನೇಹಾ ಮುಂದುವರಿಸಿಕೊಂಡು ಹೋಗಲು ಇತ್ತೀಚೆಗೆ ಎಸ್‌ ಎಂ ಎಸ್‌, ವಾಟ್ಸ್ ಆ್ಯಪ್‌, ಫೇಸ್‌ ಬುಕ್‌ ತುಂಬಾ ಸಹಕಾರಿ ಆಗಿವೆ. ಅದರ ಲಾಭ ಪಡೆದುಕೊಳ್ಳಬೇಕು. ಪ್ರತಿಯೊಂದು ಕಡೆ ಸಂಬಂಧಗಳ ಗೌರವದ ಬಗ್ಗೆ ಕಾಳಜಿ ವಹಿಸಬೇಕು.

ಶೈಲಶ್ರೀ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ