ನವಜಾತ ಶಿಶುವಿನ ತ್ವಚೆ ಅತ್ಯಂತ ಮೃದುವಾಗಿರುತ್ತದೆ. ಜೊತೆಗೆ ಸಂವೇದನಾಶೀಲ ಕೂಡ ಆಗಿರುತ್ತದೆ. ಸೋಪ್, ಡಿಟರ್ಜೆಂಟ್, ಆಯಿಲ್ ಪೌಡರ್ ಮತ್ತು ಬಟ್ಟೆ ಇವುಗಳಲ್ಲಿನ ರಾಸಾಯನಿಕ ಅಂಶಗಳು ಕಂದನ ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಅವುಗಳಿಂದಾಗಿ ಮಗುವಿನ ತ್ವಜೆಗೆ ಉರಿತ, ಡ್ರೈನೆಸ್, ರಾಶೆಸ್ ಸಮಸ್ಯೆಗಳು ಆಗಬಹುದು. ಅದೇ ರೀತಿ ಮಗುವಿಗೆ ಸುವಾಸನಾಯುಕ್ತ ಬೇಬಿ ಪ್ರಾಡಕ್ಟ್ಸ್ ಕೂಡ ಬಳಸದಿರಿ. ಮಗುವಿನ ತ್ವಚೆಯನ್ನು ಮೃದುವಾಗಿಡಲು ಈ ಕೆಳಕಂಡ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಸ್ನಾನ ಮಾಡಿಸುವುದು : ಹುಟ್ಟಿದ ಮೊದಲ ತಿಂಗಳು ಮಗುವಿಗೆ ವಾರದಲ್ಲಿ 3-4 ಸಲ ಸ್ಪಾಂಜ್ ಬಾಥ್ ಮಾಡಿಸಿ. ಹಾಲು ಕುಡಿಸಿದ ಬಳಿಕ ಮಗುವಿನ ಬಾಯಿಯನ್ನು ಚೆನ್ನಾಗಿ ಒರೆಸಿ. ಡೈಪರ್ ಬದಲಿಸಿದ ಬಳಿಕ ಸ್ಪಾಂಜ್ ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. 2ನೇ ತಿಂಗಳಿನಲ್ಲಿ ಮಗುವಿಗೆ ಸಾಧಾರಣ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಮೈಲ್ಡ್ ಸೋಪ್, ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್ ಮುಂತಾದವುಗಳ ಬಳಕೆ ಮಾಡಲೇ ಬೇಡಿ. ಅವು ಮಗುವಿನ ಸಂವೇದನಾಶೀಲ ತ್ವಚೆಗೆ ಹಾನಿಯನ್ನುಂಟು ಮಾಡಬಹುದು. ಸ್ನಾನ ಮಾಡಿಸಿದ ಬಳಿಕ ಮೃದುವಾದ ಟವೆಲ್ ನಿಂದ ನಿಧಾನವಾಗಿ ಒರೆಸಿ.
ಪೌಡರ್ ಹೇಗೆ ಲೇಪಿಸಬೇಕು? : ಪುಟ್ಟ ಶಿಶುಗಳಿಗಾಗಿಯೇ ತಯಾರಿಸಲಾದ ಟ್ಯಾಲ್ಕಮ್ ಪೌಡರ್ ನ್ನೇ ಬಳಸಿ. ಸುವಾಸನಾಯುಕ್ತ, ರಾಸಾಯನಿಕ ಮಿಶ್ರಣವುಳ್ಳ ಪೌಡರ್ ಲೇಪಿಸಬೇಡಿ. ಡೈಪರ್ ಏರಿಯಾದಲ್ಲಿ ಪೌಡರ್ ಹಾಕಬೇಡಿ.
ಮಸಾಜ್ : ನವಜಾತ ಹಾಗೂ ಚಿಕ್ಕ ಮಕ್ಕಳ ಚರ್ಮ ಅತ್ಯಂತ ಸೂಕ್ಷ್ಮ. ಹೀಗಾಗಿ ಮಸಾಜ್ ಮಾಡುವ ಮುನ್ನ ಹೇಗೆ ಮಾಡಬೇಕು, ಯಾವ ತೆರನಾದ ಆಯಿಲ್ ಬಳಸಬೇಕು, ಎಷ್ಟು ನಿಮಿಷಗಳ ಕಾಲ ಮಸಾಜ್ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಅದರ ಜೊತೆ ಜೊತೆಗೆ ಯಾವ ಸಂದರ್ಭದಲ್ಲಿ ಮಸಾಜ್ ಮಾಡಬಾರದು ಎನ್ನುವುದನ್ನೂ ತಿಳಿದುಕೊಂಡಿರುವುದೂ ಕೂಡ ಒಳ್ಳೆಯದು. ಮಗುವಿನ ವಿಶೇಷ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಸಾಜ್ ನ ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದು.
ಮಸಾಜ್ ನ ಸಾಮಾನ್ಯ ವಿಧಿವಿಧಾನಗಳನ್ನೇ ಅನುಸರಿಸಿ. ಆದರೆ ರಾಸಾಯನಿಕಗಳನ್ನು ಬಳಸಿದ ಆಯಿಲ್ ಬಳಸಬೇಡಿ. ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮಕ್ಕಳ ಎಳೆಯ ತ್ವಚೆಗೆ ಉತ್ತಮ. ಮಗುವನ್ನು ದೊಡ್ಡ ಟವೆಲ್ ಮೇಲೆ ಮಲಗಿಸಿ ಮಸಾಜ್ ಮಾಡಿ.
ಡೈಪರ್ ಮತ್ತು ನ್ಯಾಪಿ : ಮಗುವಿಗೆ ನ್ಯಾಪಿ ಖರೀದಿಸುವಾಗ ಅದರ ಗಾತ್ರ ಹಾಗೂ ಹೀರಿಕೊಳ್ಳುವ ಶಕ್ತಿಯ ಬಗ್ಗೆ ಗಮನಿಸಿ. ಅದರ ಫ್ಯಾಬ್ರಿಕ್ ಮಗುವಿನ ಸಂವೇದನಾಶೀಲ ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡಬಾರದು.
ಹವಾಮಾನ ಯಾವುದೇ ಆಗಿರಲಿ, ಕಾಟನ್ ಅಥವಾ ಲಿನಿನ್ ನ್ಯಾಪಿ ಸೂಕ್ತವಾಗಿರುತ್ತದೆ. ಉತ್ತಮ ಗುಣಮಟ್ಟದ ಡಿಸ್ಪೋಸೆಬಲ್ ನ್ಯಾಪಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿ 3-4 ಗಂಟೆಗೊಮ್ಮೆ ನ್ಯಾಪಿ ಬದಲಿಸಬೇಕು, ಹೆಚ್ಚೆಂದರೆ 6 ಗಂಟೆ ನ್ಯಾಪಿಯನ್ನು ಎಷ್ಟು ಬೇಗ ಬದಲಿಸುತ್ತೀರೊ, ಸೋಂಕು ತಗುಲುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ.
ಕಾಟನ್ ನ್ಯಾಪಿಗಳು ಮಗುವನ್ನು ಶುಷ್ಕ ಮತ್ತು ಕಂಫರ್ಟೆಬಲ್ ಆಗಿ ಇಡಬಲ್ಲವು. ಇವು ಮೃದು ಮೈಕ್ರೊಫೈಬರ್ ನಿಂದ ತಯಾರಿಸಲಾಗಿದ್ದು, ಅವುಗಳ ಹೀರಿಕೊಳ್ಳುವ ಸಾಮರ್ಥ್ಯ ಚೆನ್ನಾಗಿರುತ್ತದೆ.
ಈ ಸಂಗತಿಗಳು ಕೂಡ ಗಮನದಲ್ಲಿರಲಿ
ಬಟ್ಟೆ : ಮಗುವಿಗೆ ಖರೀದಿಸುವ ಬಟ್ಟೆಗಳು ಅದಕ್ಕೆ ಎಷ್ಟು ಸುಂದರವಾಗಿ ಕಾಣುತ್ತವೆ ಎನ್ನುವುದರ ಮೇಲಲ್ಲ, ಆ ಮಗುವಿನ ದೇಹಕ್ಕೆ ಎಷ್ಟು ಮೃದುತ್ವ, ಹಿತಕರ ಅನುಭವ ನೀಡುತ್ತವೆ ಎನ್ನುವುದರ ಮೇಲೆ ಖರೀದಿಸಿ. ಅವನ್ನು ಸ್ವಚ್ಛಗೊಳಿಸುವುದು ಕೂಡ ಸುಲಭವಾಗಿರಬೇಕು.
ಮಗುವಿಗೆ ಕಾಟನ್ ಬಟ್ಟೆಗಳೇ ಹೆಚ್ಚು ಸೂಕ್ತ. ಮೇಲೆ, ಕೆಳಗೆ ಬೇರೆ ಬೇರೆ ಬಟ್ಟೆ ಖರೀದಿಸುವ ಬದಲು ಒನ್ ಪೀಸ್ ಬಟ್ಟೆ ಖರೀದಿಸಿ. ಇದನ್ನು ಹಾಕುವುದು, ತೆಗೆಯುವುದು ಸುಲಭ. ಅದರಿಂದ ತ್ವಚೆಗೆ ಯಾವುದೇ ಘರ್ಷಣೆ ಆಗುವುದಿಲ್ಲ. ಮಗುವಿಗೆ ಹವಾಮಾನಕ್ಕನುಗುಣವಾಗಿ ಚಡ್ಡಿ ಅಥವಾ ಉದ್ದನೆಯ ಬಟ್ಟೆ ತೊಡಿಸಬೇಕು. ಅದು ಹೆಚ್ಚು ಬಿಗಿ ಆಗಿರಬಾರದು ಅಥವಾ ಎಲಾಸ್ಟಿಕ್ ಹಾಕಿದ್ದು ಇರಬಾರದು.
ಹೇಗೆ ಸ್ವಚ್ಛಗೊಳಿಸುವುದು? : ಮಗುವಿನ ಚರ್ಮ ಸಂವೇದನಾಶೀಲ ಆಗಿರುತ್ತದೆ. ಹೀಗಾಗಿ ಬಣ್ಣದ ಅಥವಾ ಸುವಾಸನೆಯುಳ್ಳ ಡಿಟರ್ಜೆಂಟ್ ಬಳಸದೆ ಸಾಮಾನ್ಯ ಡಿಟರ್ಜೆಂಟ್ ಬಳಸಬೇಕು. ಉಣ್ಣೆ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಡಿಟರ್ಜೆಂಟ್ ಬಳಸುವುದು ಸೂಕ್ತ. ಬಟ್ಟೆ ಸ್ವಚ್ಛಗೊಳಿಸಿದ ಬಳಿಕ ನೀರಿನಲ್ಲಿ ಚೆನ್ನಾಗಿ ಕಲಕಿ. ಏಕೆಂದರೆ ಅದರಲ್ಲಿನ ಡಿಟರ್ಜೆಂಟ್ ಅಂಶ ಸಂಪೂರ್ಣವಾಗಿ ಹೊರಟುಹೋಗಬೇಕು. ಮಗುವಿನ ತ್ವಚೆ ಹೆಚ್ಚು ಸಂವೇದನಾಶೀಲವಾಗಿದ್ದಲ್ಲಿ `ಬೇಬಿ ಸ್ಪೆಸಿಫಿಕ್ ಡಿಟರ್ಜೆಂಟ್’ ಬಳಸಬೇಕು.
ರಾಶೆಸ್ ಏಕೆ ಆಗುತ್ತದೆ? : ಸತತವಾಗಿ ನ್ಯಾಪಿ ಧರಿಸುವುದರಿಂದ ಮಗುವಿನ ಪೃಷ್ಠ ಹಾಗೂ ತೊಡೆಯ ಭಾಗದಲ್ಲಿ ರಾಶೆಸ್ ಬೀಳುತ್ತವೆ. ಎಲ್ಲಿ ರಾಶೆಸ್ ಇರುತ್ತವೋ, ಅಲ್ಲಿ ತ್ವಚೆ ಮಡಚುತ್ತದೆ. ರಾಶೆಸ್ ಉಂಟಾಗಲು ಮುಖ್ಯ ಕಾರಣ ತೇವಾಂಶ. ಎರಡನೇ ಮುಖ್ಯ ಕಾರಣವೆಂದರೆ, ನ್ಯಾಪಿಯನ್ನು ತುಂಬಾ ಬಿಗಿಯಾಗಿ ಕಟ್ಟಿರುವುದು ಹಾಗೂ ಸೋಪ್ ಅಂಶವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು.
ರಾಶೆಸ್ ಆಗದಿರಲು ಏನು ಮಾಡಬೇಕು?: ಮಗುವಿಗೆ ಈ ಸಮಸ್ಯೆ ಆಗದಿರಲು ನ್ಯಾಪಿ ಹಾಕಿರುವ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅಲ್ಲಿ ಒದ್ದೆ ಇರದಂತೆ ನೋಡಿಕೊಳ್ಳಿ. ಒದ್ದೆ ನ್ಯಾಪಿಯನ್ನು ತಕ್ಷಣವೇ ಬದಲಿಸಿ. ನಂತರ ಸಾಧಾರಣ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
ಮಗುವಿಗೆ ಬಹಳ ಬಿಸಿ ಇರದ ನೀರಲ್ಲಿ ಮೈಲ್ಡ್ ಸೋಪ್ ಬಳಸಿ ಸ್ನಾನ ಮಾಡಿಸಿ.
ಮಗುವಿನ ಮೈ ಚೆನ್ನಾಗಿ ಒಣಗಿದ ಬಳಿಕವೇ ಬಟ್ಟೆ ಹಾಕಿ.
24 ಗಂಟೆಯಲ್ಲಿ ಕನಿಷ್ಠ 8 ಗಂಟೆಯಷ್ಟಾದರೂ ನ್ಯಾಪಿ ರಹಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ಮಗುವಿನ ಚರ್ಮಕ್ಕೆ ಉಸಿರಾಡಿಸಲು ಅವಕಾಶ ದೊರಕುತ್ತದೆ.
ರಾಶೆಸ್ ಆದಾಗ ಏನು ಮಾಡಬೇಕು?
ರಾಶೆಸ್ ಆದ ಜಾಗದಲ್ಲಿ ಆ್ಯಲೋವೇರಾ ಜೆಲ್ ಲೇಪಿಸಿ.
ಪೆಟ್ರೋಲಿಯಂ ಜೆಲ್ಲಿ ಸಹ ಲೇಪಿಸಬಹುದು.
ಟ್ಯಾಲ್ಕಮ್ ಪೌಡರ್ ಕೂಡ ಹಾಕಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಹಾಕಬೇಡಿ. ಹಾಗೆ ಮಾಡಿದರೆ ಅದರ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಮಗುವಿನ ಪೃಷ್ಠ ಭಾಗ, ತೊಡೆ ಹಾಗೂ ಗುಪ್ತಾಂಗದ ಸಮೀಪ ಕೆಂಪು ಗುರುತುಗಳು ಕಂಡುಬಂದರೆ ಮನೆ ಉಪಾಯ ಅನುಸರಿಸಿ.
ಒಂದು ವೇಳೆ ಏಳು ದಿನಗಳಲ್ಲಿ ಈ ಗುರುತುಗಳು ಕಡಿಮೆಯಾಗದಿದ್ದಲ್ಲಿ ಮಗುವನ್ನು ವೈದ್ಯರ ಬಳಿ ಹೋಗಿ ತೋರಿಸಿ.
– ಡಾ. ವಿಮಲಾ ರಾವ್