ಪುಟ್ಟ ಗುಬ್ಬಿಯೊಂದು ಒಣಹುಲ್ಲು, ಕಡ್ಡಿಗಳನ್ನು ಆಯ್ದು ಆಯ್ದು ತಂದು ಗೂಡು ಕಟ್ಟುತ್ತಿರುವುದನ್ನು ಕಂಡು ದೀಪಾಳ ತುಟಿಯ ಮೇಲೆ ನಗು ಅರಳಿತು. ಅವಳ ಕೈ ಸಹಜವಾಗಿ ತನ್ನ ಉಬ್ಬಿದ ಹೊಟ್ಟೆಯನ್ನು ಸವರಿತು. ಇನ್ನೂ ಕೆಲವೇ ದಿನಗಳಲ್ಲಿ  ಪುಟ್ಟದೊಂದು ಕಂದ ಈ ಅಂಗಳದಲ್ಲಿ ಆಡುವುದನ್ನು ಎಣಿಸಿ ಅವಳ ಮನ ಮಮತೆಯಿಂದ ಬಿರಿಯಿತು. ತಂತಿಯ ಮೇಲಿದ್ದ ಒಣಗಿದ ಬಟ್ಟೆಗಳನ್ನೆಲ್ಲ ತಂದು ಮಡಿಸಿಟ್ಟಳು. ಅದೇ ಸಮಯಕ್ಕೆ ಕರೆಗಂಟೆ ಬಾರಿಸಿತು.

“ಇಷ್ಟು ಬೇಗನೆ ಮನೆಗೆ ಬಂದಿರುವೆಯಲ್ಲ….” ಒಳಗೆ ಬರುತ್ತಾ ಭಾಸ್ಕರ್‌ ಕೇಳಿದ.

“ಇವತ್ತು ಮೈ ಸರಿಯಿರಲಿಲ್ಲ….. ಅದಕ್ಕೇ ಕೆಲಸಕ್ಕೆ ಹೋಗುವುದಕ್ಕೆ ಮನಸ್ಸಾಗಲಿಲ್ಲ,” ದೀಪಾ ಉತ್ತರಿಸಿದಳು.

ತನಗೆ ಆರೋಗ್ಯ ಚೆನ್ನಾಗಿರಲಿಲ್ಲವೆಂದು ಕೇಳಿ ಭಾಸ್ಕರ್‌ ಹತ್ತಿರ ಬಂದು ಮೈದಡವುತ್ತಾನೆಂಬ ಆಶಯದಿಂದ ದೀಪಾ ಪತಿಯ ಪಕ್ಕದಲ್ಲೇ ನಿಂತಳು. ಆದರೆ ಭಾಸ್ಕರ್‌ ಏನೂ ಪ್ರತಿಕ್ರಿಯಿಸದೆ ಕೈಕಾಲು ತೊಳೆಯಲು ಬಾತ್‌ ರೂಮ್ ನತ್ತ ನಡೆದಾಗ ದೀಪಾ ಪೆಚ್ಚಾಗಿ ಅಡುಗೆಮನೆಗೆ ಹೋದಳು.

ಮದುವೆಯಾದ 4 ವರ್ಷಗಳ ಬಳಿಕ ದೀಪಾ ಗರ್ಭಿಣಿಯಾಗಿದ್ದಳು. ಅವಳ ಸಂತೋಷ ಮುಗಿಲು ಮುಟ್ಟಿತ್ತು. ಆದರೆ ಭಾಸ್ಕರ ವಿಶೇಷ ಪ್ರಭಾವಿತನಾಗಿರಲಿಲ್ಲ. ದೀಪಾ ತಾನೊಬ್ಬಳೇ ಡಾಕ್ಟರ್‌ ಬಳಿ ಚೆಕಪ್‌ ಗಾಗಿ ಹೋಗುತ್ತಿದ್ದಳು. ತನ್ನ ಆಹಾರ ಪಾನೀಯಗಳ ಬಗ್ಗೆ ಗಮನವಿರಿಸಿದ್ದಳು. ಎಂದಾದರೂ ಭಾಸ್ಕರನೊಡನೆ ತನ್ನ ಕಷ್ಟ ಸುಖ ಹಂಚಿಕೊಳ್ಳಲು ಹೋದರೆ, ತಾನು ಕೆಲಸದಲ್ಲಿ ಅತ್ಯಂತ ವ್ಯಸ್ತನಾಗಿರುವೆನೆಂದು ಹೇಳುತ್ತಾ ಅವನು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದ. ದೀಪಾ ಕೊಂಚ ಬೇಸರದಿಂದಲೇ ದಿನ ಕಳೆಯುತ್ತಿದ್ದಳು. ಮಗು ಹುಟ್ಟಿದ ಮೇಲೆ ಪತಿಗೆ ತನ್ನ ಕುಡಿಯ ಮೇಲೆ ಪ್ರೀತಿ ಹುಟ್ಟಬಹುದು. ಅವನು ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬಹುದೆಂಬ ಭರವಸೆಯ ಮೇಲೆ ಅವಳು ಎಲ್ಲ ಕೆಲಸವನ್ನೂ ತನ್ನ ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದಳು.

ದೀಪಾವಳಿಗೆ ಹೊರಗೆ ದುಡಿಯಬೇಕಾದ ಪ್ರಮೇಯವೇನಿರಲಿಲ್ಲ. ಭಾಸ್ಕರನ ಸಂಪಾದನೆಯೇ ಚೆನ್ನಾಗಿತ್ತು. ಮನೆಯಲ್ಲಿ ಒಬ್ಬಳೇ ಕುಳಿತು ಮಾಡುವುದೇನು ಎಂದು ಪಾರ್ಲರ್‌ ನ ಕೆಲಸಕ್ಕೆ ಹೋಗುತ್ತಿದ್ದಳು. ಗರ್ಭಿಣಿಯಾದ ನಂತರ ಅವಳು ಕೆಲಸ ಮಾಡುತ್ತಿದ್ದಳು. ಪಾರ್ಲರ್‌ ನ ಒಡತಿಗೆ ಇವಳನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಇವಳ ಕೈ ಚಳಕದಿಂದ ಗ್ರಾಹಕರ ಸಂಖ್ಯೆ ಏರಿತ್ತು. ದೀಪಾಳ ಈಗಿನ ಸ್ಥಿತಿಯಲ್ಲಿ ಪಾರ್ಲರ್‌ ನ ಒಡತಿ ಮತ್ತು ಉಳಿದ ಹುಡುಗಿಯರು ಅವಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಅವಳ ಆರೋಗ್ಯ ಸರಿಯಿಲ್ಲದಾಗ ಅಥವಾ ಆಯಾಸವಾದಾಗ ರಜೆ ಪಡೆಯಲು ಏನೂ ತೊಂದರೆ ಇರಲಿಲ್ಲ.

ಭಾಸ್ಕರ್‌ ಒಂದು ಪ್ರೈವೇಟ್‌ ಕಂಪನಿಯ ಮ್ಯಾನೇಜರ್‌ ಆಗಿದ್ದ. ಅವನ ಅಧೀನದಲ್ಲಿ 24 ಜನರು ಕೆಲಸ ಮಾಡುತ್ತಿದ್ದರು. ಅವನ ಆಫೀಸಿನಲ್ಲಿ ಒಂದು ಕಸ್ಟಮರ್‌ ಸರ್ವೀಸ್‌ ಹುದ್ದೆ ಖಾಲಿಯಾಗಿತ್ತು. ಅದಕ್ಕಾಗಿ ಜಾಹೀರಾತು ನೀಡಲಾಗಿತ್ತು. ಆ ಜಾಹೀರಾತಿಗೆ ಅರ್ಜಿ ಸಲ್ಲಿಸಿದ್ದರಲ್ಲಿ ಊರ್ಮಿಳಾ ಕೂಡ ಒಬ್ಬಳು. ಸಂದರ್ಶನಕ್ಕಾಗಿ ಅವಳು ಬಂದಾಗ, ಅವಳ ಮಧುರ ಧ್ವನಿ, ಆಕರ್ಷಕ ವ್ಯಕ್ತಿತ್ವ ಮತ್ತು ಹಿಂದಿನ ಅನುಭವದ ಆಧಾರದ ಮೇಲೆ ಅವಳನ್ನು ಆರಿಸಿಕೊಳ್ಳಲಾಯಿತು.

ಊರ್ಮಿಳಾಳಿಗೆ ತನ್ನ ಸೌಂದರ್ಯದ ಬಗ್ಗೆ ಅಪಾರ ಹೆಮ್ಮೆ ಮತ್ತು ಭರವಸೆ. ವೈಯ್ಯಾರ, ಬಿನ್ನಾಣಗಳನ್ನು ಪ್ರದರ್ಶಿಸಿ ತನಗೆ ಬೇಕಾದುದನ್ನು ಪಡೆದುಕೊಳ್ಳಬಹುದು ಎಂಬುದನ್ನು ತನ್ನ ಹಿಂದಿನ ಅನುಭವಗಳಿಂದ ಅವಳು ಚೆನ್ನಾಗಿ ತಿಳಿದಿದ್ದಳು. ಕೆಳ ಮಧ್ಯಮ ವರ್ಗಕ್ಕೆ ಸೇರಿದ್ದ ಅವಳು ಉತ್ತಮ ಮಟ್ಟದ ಜೀವನ ನಡೆಸುವ ಕನಸು ಕಂಡಿದ್ದಳು. ಹೊಸ ಆಫೀಸಿಗೆ ಸೇರಿದ ಕೆಲವೇ ದಿನಗಳಲ್ಲಿ ಭಾಸ್ಕರ್‌ ತನಗೆ ಮರುಳಾಗಿರುವುದನ್ನು ಕಂಡುಕೊಂಡಳು. ಅದರ ಲಾಭ ಪಡೆಯುವಲ್ಲಿ ಅವಳು ಹಿಂದುಳಿಯಲಿಲ್ಲ.

ಊರ್ಮಿಳಾ ತನ್ನ ಯೌವನ ಮತ್ತು ಹಾವಭಾವಗಳಿಂದ ಭಾಸ್ಕರನ ಮನಸ್ಸನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಳು. ಇಬ್ಬರೂ ಪರಸ್ಪರ ಹತ್ತಿರಾಗ ತೊಡಗಿದರು. ಆಫೀಸಿನ ಸಮಯದ ನಂತರ ಇಬ್ಬರೂ ಹೊರಗೆ ಸುತ್ತಾಡುತ್ತಿದ್ದರು. ಭಾಸ್ಕರ ಅವಳನ್ನು ಫೈವ್ ಸ್ಟಾರ್‌ ಹೋಟೆಲ್ ‌ಗಳಿಗೆ ಡಿನ್ನರ್‌ ಗಾಗಿ ಕರೆದೊಯ್ಯುತ್ತಿದ್ದ. ಅವಳನ್ನು ಸಂತೋಷಪಡಿಸಲು ಬೆಲೆಬಾಳುವ ಉಡುಗೊರೆಗಳನ್ನು  ಕೊಡುತ್ತಿದ್ದ. ಅವಳನ್ನು ಸಂಪೂರ್ಣವಾಗಿ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಉದ್ದೇಶ ಭಾಸ್ಕರನದು. ಅವನೇಕೆ ತನ್ನ ಸುತ್ತ ದುಂಬಿಯಂತೆ ಸುತ್ತುತ್ತಿರುವನೆಂದು ಊರ್ಮಿಳಾಳಿಗೆ ಚೆನ್ನಾಗಿ ಅರ್ಥವಾಗಿತ್ತು.

ಹಿಂದೆ ಭಾಸ್ಕರ್‌ ಆಫೀಸ್‌ ನಿಂದ ಬೇಗನೆ ಮನೆಗೆ ಬರುತ್ತಿದ್ದಾಗ, ಪತಿ ಪತ್ನಿಯರು ಜೊತೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಈಗ ದೀಪಾ ಸಾಕಷ್ಟು ಸಮಯ ಅವನಿಗಾಗಿ ಕಾದು, ಆಮೇಲೆ ಒಬ್ಬಳೇ ಊಟ ಮಾಡಿ ಮಲಗುತ್ತಿದ್ದಳು. ಕಳೆದ ಕೆಲವಾರು ದಿನಗಳಿಂದ ಅವನ ರೀತಿಯೇ ಬದಲಾಗಿತ್ತು. ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಹೋಗುತ್ತಿದ್ದ. ಈ ಬದಲಾವಣೆಯನ್ನು ಅರ್ಥ ಮಾಡಿಕೊಂಡಿಲ್ಲದ ದೀಪಾ ಪುಟ್ಟ ಕಂದನ ಕಲ್ಪನಾಲೋಕದಲ್ಲಿ ಮುಳುಗಿದ್ದಳು.

ಒಂದು ದಿನ ದೀಪಾ ಒಗೆಯುವ ಬಟ್ಟೆಗಳನ್ನು ತೆಗೆಯುತ್ತಿರುವಾಗ ಭಾಸ್ಕರನ ಪ್ಯಾಂಟ್‌ ಜೇಬಿನಲ್ಲಿ 2 ಸಿನಿಮಾ ಟಿಕೆಟ್‌ ಗಳು ಸಿಕ್ಕಿದವು. ಅವಳಿಗೆ ಆಶ್ಚರ್ಯವಾಯಿತು. ಭಾಸ್ಕರನಿಗೆ ಸಿನಿಮಾ ನೋಡುವ ಆಸಕ್ತಿ ಇರಲಿಲ್ಲ. ಯಾವುದಾದರೂ ಒಳ್ಳೆಯ ಸಿನಿಮಾ ಬಂದಾಗ ದೀಪಾ ಬಲವಂತ ಮಾಡಿ ಅವನನ್ನು ಕರೆದುಕೊಂಡು ಹೋಗುತ್ತಿದ್ದುದುಂಟು.

ಭಾಸ್ಕರನನ್ನು ಈ ಬಗ್ಗೆ ಕೇಳಿದಾಗ, ಅವನು ಕೊಂಚ ತಬ್ಬಿಬ್ಬಾದ. ನಂತರ ಸಾವರಿಸಿಕೊಂಡು ಆಫೀಸಿನ ಸಹೋದ್ಯೋಗಿಯೊಬ್ಬರ ಒತ್ತಾಯದಿಂದಾಗಿ ಹೋದೆನೆಂದು ಹೇಳಿದ. ವಿಷಯ ಅಲ್ಲಿಗೇ ನಿಂತಿತು.

ಇದಾದ ಕೆಲವು ದಿನಗಳ ನಂತರ, ಆಭರಣಗಳ ಅಂಗಡಿಯ ಒಂದು ಚೀಟಿ ಸಿಕ್ಕಿತು. ಸಂಶಯಗೊಂಡ ದೀಪಾ ಆ ಬಗ್ಗೆ ಪ್ರಶ್ನೆಗಳನ್ನು ಕೇಳಿದಳು. ಊರ್ಮಿಳಾಳಿಗೆ ಬರ್ತ್‌ ಡೇ ಗಿಫ್ಟ್ ಗೆಂದು ಒಂದು ಚಿನ್ನದ ಉಂಗುರ ಮಾಡಲು ಕೊಟ್ಟಿದ್ದ. ಆದರೆ ದೀಪಾಳ ಕೈಗೆ ಈ ಚೀಟಿ ಸಿಕ್ಕಿದ್ದರಿಂದ ಭಾಸ್ಕರ್‌, ತನ್ನ ಸ್ನೇಹಿತನೊಬ್ಬ ಪತ್ನಿಗೆ ಸರ್‌ ಪ್ರೈಸ್‌ ಮಾಡಲು ಚೀಟಿಯನ್ನು ತನ್ನ ಕೈಗೆ ಕೊಟ್ಟಿರುವನೆಂದು ಸುಳ್ಳು ಹೇಳಿ ಅವಳನ್ನು ಸಮಾಧಾನಪಡಿಸಿದ. ಈ ಘಟನೆಯ ನಂತರ ಭಾಸ್ಕರ ಎಚ್ಚೆತ್ತುಕೊಂಡ. ತನ್ನ ಜೇಬಿನಲ್ಲಿ ಯಾವುದೇ ಕುರುಹು ಉಳಿಯದಂತೆ ನೋಡಿಕೊಂಡ.

ದೀಪಾ ಹೆರಿಗಾಗಿ ತವರುಮನೆಗೆ ಹೋದಳು. ಅಲ್ಲಿ ಒಂದು ಗಂಡುಮಗುವಿನ ಜನನವಾಯಿತು. 4 ದಿನಗಳು ಹೆಂಡತಿ ಮಗುವಿನೊಂದಿಗಿದ್ದು ಭಾಸ್ಕರ ಹಿಂದಿರುಗಿದ. ಪತ್ನಿ ಇಲ್ಲದುದರಿಂದ ಅವನೀಗ ಸ್ವತಂತ್ರ ಹಕ್ಕಿಯಂತೆ ಮನಸೋ ಇಚ್ಛೆ ನಡೆಯತೊಡಗಿದ. ಊರ್ಮಿಳಾಳ ಮೇಲಿನ ಮೋಹದ ಹುಚ್ಚು ತಲೆಗೇರಿತ್ತು. ಆಫೀಸಿನಲ್ಲಿ ಜನರು ಅವರಿಬ್ಬರ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ಆದರೆ ಅವನಿಗೆ ಅವರ ಪರಿವೆಯೇ ಇರಲಿಲ್ಲ.

ದೀಪಾ ತನ್ನ ಮುದ್ದು ಮಗುವಿನ ಪ್ರೀತಿ, ಆರೈಕೆಯಲ್ಲಿ ಮುಳುಗಿದ್ದಳು. ಕೆಲವು ದಿನಗಳ ನಂತರ ಪತಿಗೆ ಫೋನ್‌ ಮಾಡಿ ಮನೆಗೆ ಬರುವೆನೆಂದು ಹೇಳಿದಳು. ಆದರೆ ಭಾಸ್ಕರ್‌ ಅವಳಿಗೆ ಇನ್ನಷ್ಟು ದಿನ ವಿಶ್ರಾಂತಿ ಪಡೆಯಲು ಹೇಳಿದ. ಅದರಂತೆ ಅವಳು ಮತ್ತಷ್ಟು ದಿನಗಳು ತವರಿನಲ್ಲೇ ಉಳಿದಳು. 3 ತಿಂಗಳು ಕಳೆದರೂ ಭಾಸ್ಕರ್‌ ಅವಳನ್ನು ಕರೆದೊಯ್ಯಲು ಬರಲಿಲ್ಲ. ಕಡೆಗೆ ಅವಳು ತಾನೇ ಹೊರಡಲು ತೀರ್ಮಾನಿಸಿದಳು.

ಪತಿಗೆ ತಿಳಿಸದೆಯೇ ದೀಪಾ ಹೊರಟು ಬಂದಳು. ಮನೆ ಬಾಗಿಲಲ್ಲಿ ನಿಂತು ಬೆಲ್ ಮಾಡುತ್ತಲೇ ಇದ್ದರೂ ಬಾಗಿಲು ತೆರೆಯದೇ ಇದ್ದಾಗ ಅವಳಿಗೆ ಯೋಚನೆಯಾಯಿತು. `ಇಂದು ಭಾನುವಾರ. ಆಫೀಸಿಗೆ ಹೋಗಿರುವುದಿಲ್ಲ. ಬಾಗಿಲಿಗೆ ಬೀಗ ಹಾಕಿಲ್ಲ. ಅಂದ ಮೇಲೆ ಹೊರಗೆಲ್ಲೂ ಹೋಗಿಲ್ಲ. ಮತ್ತೇಕೆ ಬಾಗಿಲು ತೆರೆಯುತ್ತಿಲ್ಲ?’

ಮಗುನ್ನೆತ್ತಿಕೊಂಡು ಯೋಚಿಸುತ್ತಲೇ ನಿಂತಿದ್ದಾಗ, ಇದ್ದಕ್ಕಿದ್ದಂತೆ ಧಡಾರನೆ ಬಾಗಿಲು ತೆರೆಯಿತು. ಅಪರಿಚಿತ ಹುಡುಗಿಯೊಬ್ಬಳು ತನ್ನ ಮನೆಯೊಳಗಿರುವುದನ್ನು ಕಂಡು ದೀಪಾ ಬೆರಗಾದಳು. ಅವಳು ಏನಾದರೂ ಕೇಳುವ ಮೊದಲೇ ಆ ಹುಡುಗಿ ಮಿಂಚಿನಂತೆ ಒಳಗೆ ಸರಿದಳು. ಇದ್ದಕ್ಕಿದ್ದಂತೆ ಬಂದಿಳಿದ ಪತ್ನಿಯನ್ನು ಕಂಡು ಭಾಸ್ಕರ ತಬ್ಬಿಬ್ಬಾದ.

ಪತಿಯ ಬೆವರಿದ ಮುಖವನ್ನೂ, ಮನೆಯಲ್ಲಿ ಒಬ್ಬ ಪರಸ್ತ್ರೀಯನ್ನು ನೋಡಿ ದೀಪಾಳ ಹುಬ್ಬು ಗಂಟಿಕ್ಕಿತು. ಅವಳು ಕೋಪದಿಂದ, “ಯಾರು ಅವಳು? ಇಲ್ಲೇನು ಮಾಡುತ್ತಿದ್ದಾಳೆ?” ಎಂದು ಕೇಳಿದಳು.

ಭಾಸ್ಕರ ತನ್ನ ಬುದ್ಧಿಯನ್ನು ಚುರುಕಾಗಿ ಓಡಿಸಿ, “ಇವಳು ನಮ್ಮ ಆಫೀಸಿನಲ್ಲಿ ಕೆಲಸಕ್ಕೆ ಸೇರಿದ್ದಾಳೆ, ಈ ಊರಿಗೆ ಹೊಸಬಳು. ಅವಳಿಗೆ ಉಳಿಯಲು ಸರಿಯಾದ ಜಾಗ ಸಿಕ್ಕದೆ ಇದ್ದುದರಿಂದ ಮಾನವೀಯ ದೃಷ್ಟಿಯಿಂದ ಅವಳಿಗೆ ಸಹಾಯ ಮಾಡುತ್ತಿದ್ದೇನೆ,” ಎಂದು ಸುಳ್ಳು ಕಥೆಯನ್ನು ಮುಂದಿಟ್ಟ.

“ಮತ್ತೇ, ನೀವು ಏಕೆ ನನಗೆ ಫೋನ್‌ ಮಾಡಿ ತಿಳಿಸಲಿಲ್ಲ? ನಮ್ಮ ಮನೆಯಲ್ಲಿ ಬೇರೆಯರೊಬ್ಬರು ಇರುವುದನ್ನು ನನಗೆ ತಿಳಿಸಬೇಕು ಅಂತ ಅನ್ನಿಸಲಿಲ್ಲವೇ?”

“ಇವಳು ಇವತ್ತು ತಾನೇ ಬಂದಿದ್ದಾಳೆ. ನಾನು ನಿನಗೆ ಫೋನ್‌ ಮಾಡಬೇಕು ಅಂತ ಅಂದುಕೊಳ್ಳುವ ಹೊತ್ತಿಗೆ ನೀನು ಹೀಗೆ ಬಂದು ನಾನು ಬೆಚ್ಚುವ ಹಾಗೆ ಮಾಡಿಬಿಟ್ಟೆ.  ನನಗೆ ನಿನ್ನ ಮತ್ತು ಮಗುವಿನ ನೆನಪು ತುಂಬಾ ಆಗುತ್ತಿತ್ತು,” ಎನ್ನುತ್ತಾ ಭಾಸ್ಕರ್ ಮಗುವನ್ನು ಎತ್ತಿಕೊಂಡು ಎದೆಗಾನಿಸಿಕೊಂಡ.

ದೀಪಾಳ ಸಂಶಯ ಪೂರ್ತಿ ಹೋಗಿರಲಿಲ್ಲ. ಅಷ್ಟರಲ್ಲಿ ಊರ್ಮಿಳಾ ನಿರಪರಾಧಿ ಮುಖಭಾವವನ್ನು ಪ್ರದರ್ಶಿಸುತ್ತಾ ಅಲ್ಲಿಗೆ ಬಂದಳು.

“ನನ್ನನ್ನು ಕ್ಷಮಿಸಿ, ನನ್ನಿಂದಾಗಿ ನಿಮಗೆ ತೊಂದರೆ ಆಗುತ್ತಿದೆ. ಇದರಲ್ಲಿ ಇವರದೇನೂ ತಪ್ಪಿಲ್ಲ. ನನ್ನ ಅಸಹಾಯಕತೆಯನ್ನು ಕಂಡು ನನಗೆ ಇಲ್ಲಿರಲು ಹೇಳಿದರು. ನಾನು ಇಂದೇ ಯಾವುದಾದರೂ ಹೋಟೆಲ್ ‌ಗೆ ಹೋಗಿಬಿಡುತ್ತೇನೆ,” ಎಂದಳು ಊರ್ಮಿಳಾ.

“ನಗರದಲ್ಲಿ ಎಷ್ಟೊಂದು ಲೇಡೀಸ್‌ ಹಾಸ್ಟೆಲ್ ‌ಇವೆ. ನೀನು ಅಲ್ಲಿ ವಿಚಾರಿಸಲಿಲ್ಲವೇ?” ದೀಪಾ ಕೇಳಿದಳು.

“ಹೌದು ಇವೆ. ಆದರೆ ಎಲ್ಲ ಕಡೆಯೂ ಯಾರಾದರೂ ಪರಿಚಿತರ ಗ್ಯಾರಂಟಿ ಕೇಳುತ್ತಾರೆ. ಆದರೆ ನನಗಿಲ್ಲಿ ಯಾರ ಪರಿಚಯ ಇಲ್ಲ.”

ಭಾಸ್ಕರ್‌ ಮತ್ತು ಊರ್ಮಿಳಾ ತಮ್ಮ ಕಪಟತನದಿಂದ ದೀಪಾಳನ್ನು ಬುಟ್ಟಿಗೆ ಬೀಳಿಸುವುದರಲ್ಲಿ ಯಶಸ್ವಿಯಾದರು. ಅವರಿಬ್ಬರಂತೆ ದೀಪಾ ಚತುರೆಯಾಗಿರಲಿಲ್ಲ. ಊರ್ಮಿಳಾ ಒಂಟಿ ಹುಡುಗಿ ಎಂಬ ಮಾತಿನಿಂದ ದೀಪಾಳ ಮನಸ್ಸು ಕರಗಿತು. ತಮ್ಮ ಗೆಸ್ಟ್ ರೂಮಿನಲ್ಲಿ ಊರ್ಮಿಳಾ ಕೆಲವು ದಿನಗಳು ಉಳಿಯಲು ಒಪ್ಪಿಗೆ ನೀಡಿದಳು.

ಭಾಸ್ಕರನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು. ಒಂದೇ ಸೂರಿನ ಕೆಳಗೆ ಪತ್ನಿ ಮತ್ತು ಪ್ರಿಯತಮೆ ಇಬ್ಬರ ಸಂಗ ಅವನಿಗೆ ದೊರೆತಿತ್ತು. ತಾನು ಬಹಳ ಅದೃಷ್ಟವಂತ ಎಂದು ಅವನು ಭಾವಿಸಿದ.

ದೀಪಾ ಮನೆಗೆ ಬಂದುದರಿಂದ ಭಾಸ್ಕರ ಮತ್ತು ಊರ್ಮಿಳಾರ ಪ್ರೇಮಲೀಲೆಗೆ ಕೊಂಚ ಅಡಚಣೆ ಉಂಟಾಯಿತು. ಈಗ ಅವರು ಎಚ್ಚರಿಕೆಯಿಂದ ಭೇಟಿ ಮಾಡುತ್ತಿದ್ದರು. ಆಫೀಸಿನಿಂದಲೂ ಬೇರೆ ಬೇರೆ ಸಮಯದಲ್ಲಿ ಹೊರಡುತ್ತಿದ್ದರು. ತಮ್ಮ ಸಂಬಂಧ ಆಫೀಸಿಗಷ್ಟೇ ಸೀಮಿತವಾಗಿರುವಂತೆ ದೀಪಾಳ ಮುಂದೆ ನಡೆದುಕೊಳ್ಳುತ್ತಿದ್ದರು.

ದೀಪಾ ಮನೆಯ ಒಡತಿಯಾಗಿದ್ದುದರಿಂದ ಎಲ್ಲ ಕೆಲಸ ಕಾರ್ಯಗಳು ಅವಳ ಇಚ್ಛಾನುಸಾರ ನಡೆಯುತ್ತಿದ್ದವು. ಊರ್ಮಿಳಾ ತನ್ನನ್ನು ಅವಳೊಂದಿಗೆ ಹೋಲಿಸಿ ನೋಡಿದಳು. ಭಾಸ್ಕರ ಅವಳಿಗೆ ಸಂಪೂರ್ಣವಾಗಿ ಒಲಿದಿದ್ದನಾದರೂ ಸಮಾಜ ಮತ್ತು ಕಾನೂನಿನ ದೃಷ್ಟಿಯಲ್ಲಿ ಅವರದು ಅನೈತಿಕ ಸಂಬಂಧವಾಗಿತ್ತು. ಆಫೀಸಿನಲ್ಲಿ ಅವಳು ಎಲ್ಲರ ಮನರಂಜನೆಯ ಸಾಧನವಾಗಿದ್ದಳು. ಸಹೋದ್ಯೋಗಿಗಳ ಕಣ್ಣುಗಳಲ್ಲಿ ತನ್ನ ಬಗ್ಗೆ ಗೌರವ ಕಡಿಮೆ, ಬಯಕೆ ಹೆಚ್ಚು ಎಂದು ಅವಳಿಗೆ ತೋರಿಬರುತ್ತಿತ್ತು.

ಭಾಸ್ಕರ ಮತ್ತು ದೀಪಾರೊಡನೆ ಅವರ ಮನೆಯಲ್ಲಿ ವಾಸಿಸಿದ ನಂತರ ಊರ್ಮಿಳಾಳಿಗೆ ಸಮಾಜದಲ್ಲಿ ಪತ್ನಿಯ ಸ್ಥಾನವೇನು ಎಂಬುದರ ಅರಿವಾಯಿತು. ಎಲ್ಲಿಯವರೆಗೆ ತಾನು ಭಾಸ್ಕರನ ಬಳಿ ಒಂದು ಆಟಿಕೆಯಂತೆ ಇರುವುದು? ಒಂದಲ್ಲ ಒಂದು ದಿನ ಅವನಿಗೆ ಈ ಆಟಿಕೆಯ ಮೇಲೆ ಬೇಸರ ಬರುತ್ತದೆ, ಎಂದು ಊರ್ಮಿಳಾ ಯೋಚಿಸತೊಡಗಿದಳು. ಅವಳಿಗೆ ತನ್ನ ಭವಿಷ್ಯದ ಬಗ್ಗೆ ಚಿಂತೆಯಾಯಿತು.. ಅವಳೀಗ ದೀಪಾಳ ಸ್ಥಾನದಲ್ಲಿ ತಾನಿರಬೇಕೆಂಬ ಬಯಕೆ ಮೂಡಿತು.

ಭಾಸ್ಕರನ ಬಳಿ ಒಳ್ಳೆಯ ಉದ್ಯೋಗ ಮತ್ತು ಹಣ ಎರಡೂ ಇರುವುದರಿಂದ ಅವನ ಜೊತೆಯಲ್ಲಿದ್ದರೆ ತನ್ನ ಬಾಳು ಬಂಗಾರವಾಗುವುದೆಂದು ಊರ್ಮಿಳಾ ಲೆಕ್ಕ ಹಾಕಿದಳು. ಅದಕ್ಕೆ ತಕ್ಕಂತೆ ದಾಳ ಎಸೆಯತೊಡಗಿದಳು. ತನ್ನನ್ನು ಮದುವೆಯಾಗುವಂತೆ ಅವಳು ಭಾಸ್ಕರನನ್ನು ಒತ್ತಾಯಿಸಿದಳು.

ಭಾಸ್ಕರನಿಗೆ ಪತ್ನಿ ಮತ್ತು ಪ್ರೇಯಸಿ ಇಬ್ಬರ ಸುಖ ಸಿಗುತ್ತಿದ್ದುದರಿಂದ ಅವನು ಮತ್ತೆ ಮದುವೆಯ ಗೊಂದಲದಲ್ಲಿ ಸಿಕ್ಕಿಕೊಳ್ಳಲು ಇಷ್ಟಪಡಲಿಲ್ಲ. ಊರ್ಮಿಳಾಳಿಗೆ ಹಲವು ಬಗೆಯಿಂದ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಅವಳು ಹಠ ಹಿಡಿದು ಕುಳಿತಳು. ದೀಪಾಳಿಗೆ ವಿಚ್ಛೇದನ ನೀಡಿ ಭಾಸ್ಕರ ತನ್ನನ್ನು ಮದುವೆಯಾಗಬೇಕು, ಇಲ್ಲವಾದರೆ ತಮ್ಮ ಸಂಬಂಧವನ್ನು ಕೊನೆಗಾಣಿಸುವುದಾಗಿ ಅವಳು ಹೇಳಿದಳು.

ಆಕರ್ಷಕ ಗೊಂಬೆಯ ಮೈಮಾಟದಿಂದ ಕಂಗೊಳಿಸುತ್ತಿದ್ದ ಊರ್ಮಿಳಾಳನ್ನು ಕಳೆದುಕೊಳ್ಳಲು ಭಾಸ್ಕರನಿಗೆ ಇಷ್ಟವಿರಲಿಲ್ಲ. ಅವನು ಕೆಲವು ದಿನಗಳ ಅವಕಾಶವನ್ನು ಕೇಳಿಕೊಂಡ.ಒಂದು ರಾತ್ರಿ ದೀಪಾಳಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಪಕ್ಕದಲ್ಲಿ ಭಾಸ್ಕರನಿರಲಿಲ್ಲ. ಅವಳು ರೂಮಿನಿಂದ ಹೊರಗೆ ಬಂದಳು. ಊರ್ಮಿಳಾಳ ಕೋಣೆಯಲ್ಲಿ ಮಾತನಾಡುವ ಶಬ್ದ ಕೇಳಿಸಿತು. ಬಾಗಿಲು ಪೂರ್ತಿ ಮುಚ್ಚಿರಲಿಲ್ಲ. ದೀಪಾ ಮೆಲ್ಲಗೆ ಇಣುಕಿ ನೋಡಿದಳು. ಭಾಸ್ಕರ ಮತ್ತು ಊರ್ಮಿಳಾ ಹಾಸಿಗೆಯ ಮೇಲೆ ಒಂದೇ ಹೊದಿಕೆಯಡಿಯಲ್ಲಿ……. ಅವರಿಗೆ ಹೊರಗಿನ ಪರಿವಂಯೇ ಇರಲಿಲ್ಲ.

ಆ ದೃಶ್ಯವನ್ನು ಕಂಡು ದೀಪಾ ಸ್ತಂಭಿತಳಾದಳು. ಇನ್ನೊಂದು ಕ್ಷಣ ಅಲ್ಲಿ ನಿಲ್ಲಲು ಅವಳಿಗಾಗಲಿಲ್ಲ. ಹೇಗೆ ಹೋದಳೋ ಹಾಗೆಯೇ ಹಿಂತಿರುಗಿ ಕೋಣೆಗೆ ಬಂದಳು. ಕಣ್ಣೀರು ಒಂದೇ ಸಮನೆ ಹರಿಯುತ್ತಿತ್ತು. ಬೆನ್ನ ಹಿಂದೆಯೇ ಇದೆಲ್ಲ ನಡೆಯುತ್ತಿದ್ದರೂ ಅವಳ ಅರಿವಿಗೆ ಬಂದಿರಲಿಲ್ಲ. ಅವರಿಬ್ಬರೂ ಇಂತಹ ವಿಶ್ವಾಸದ್ರೋಹ ಬಗೆಯುವರೆಂದು ಅವಳಿಗೆ ನಂಬಲು ಆಗಲಿಲ್ಲ.

ದೀಪಾಳ ಮನಸ್ಸಿನಲ್ಲಿ ದುಃಖ ಮಡುಗಟ್ಟಿತ್ತು. ಹೃದಯದಲ್ಲಿ ತಿರಸ್ಕಾರ ತುಂಬಿತ್ತು. ತಲೆಯಲ್ಲಿ ಏನೇನೋ ಯೋಚನೆಗಳು ಓಡುತ್ತಿದ್ದವು. ಈಗಲೇ ಆ ಕೋಣೆಗೆ ಹೋಗಿ ಇಬ್ಬರಿಗೂ ಚೆನ್ನಾಗಿ ಬಯ್ದು ಬಂದರೆ ಮನಸ್ಸು ಶಾಂತವಾಗುತ್ತದೆ. ಆಮೇಲೆ ಮನೆ ಬಿಟ್ಟು ಹೊರಟುಹೋಗಬೇಕು ಎಂಬ ಆಲೋಚನೆ ಬಂದಿತು. ಆದರೆ ನನ್ನ ಮನೆಯನ್ನು ಬಿಟ್ಟು ನಾನೇಕೆ ಹೋಗಲಿ? ಹೋಗಬೇಕಾದವಳು ಅವಳು! ನನ್ನ ಸಂಸಾರನ್ನು ಒಡೆಯಲು ಬಂದಿರುವ ಊರ್ಮಿಳಾ ಹೋಗಬೇಕು. ಕಡೆಗೆ ಹೇಗೋ ಮಾಡಿ ಮನಸ್ಸಿಗೆ ಸಂಯಮ ತಂದುಕೊಂಡು ದೀಪಾ ಒಂದು ನಿರ್ಧಾರಕ್ಕೆ ಬಂದಳು.

ಬಹಳ ಹೊತ್ತಿನ ನಂತರ ಭಾಸ್ಕರ ತನ್ನ ಕೋಣೆಗೆ ಹಿಂದಿರುಗಿದ. ದೀಪಾ ನಿದ್ರಿಸುತ್ತಿದ್ದಾಳೆಂದು ಭಾವಿಸಿ, ಏನೂ ಆಗಿಲ್ಲವೆಂಬಂತೆ ಬಂದು ಸದ್ದಿಲ್ಲದೆ ಹಾಸಿಗೆಯ ಮೇಲೆ ಮಲಗಿಕೊಂಡ.

ಮರುದಿನ ಊರ್ಮಿಳಾ ಆಫೀಸಿಗೆ ಹೊರಟಾಗ ದೀಪಾ ಅವಳನ್ನು ತಡೆದ ನಿಲ್ಲಿಸಿದಳು, “ಊರ್ಮಿಳಾ, ಇನ್ನು ನೀನಿಲ್ಲಿ ಇರುವ ಹಾಗಿಲ್ಲ. ನಿನ್ನ ಸಾಮಾನು ತೆಗೆದುಕೊಂಡು ಇಂದೇ ಇಲ್ಲಿಂದ ಹೊರಟುಹೋಗು!” ದೀಪಾಳ ಕಣ್ಣುಗಳಲ್ಲಿ ತಿರಸ್ಕಾರ, ಅಸಹ್ಯ ಭಾವನೆ ಎದ್ದು ಕಾಣುತ್ತಿತ್ತು.

“ಏನು ಹೇಳುತ್ತಿದ್ದೀಯಾ? ಊರ್ಮಿಳಾ ಎಲ್ಲಿಗೂ ಹೋಗುವುದಿಲ್ಲ,” ಭಾಸ್ಕರ ಮುಂದೆ ಬಂದು ಹೇಳಿದ.

“ನಾನು ಹೇಳಿದ ಮೇಲೆ ಆಯಿತು. ಅವಳು ಹೋಗಲೇಬೇಕು.”

ಭಾಸ್ಕರ್‌ ತನ್ನ ಪರವಾಗಿದ್ದಾನೆಂದು ಅರಿತ ಊರ್ಮಿಳಾ ಅವನ ಪಕ್ಕಕ್ಕೆ ಹೋಗಿ ನಿಂತಳು. ಅದನ್ನು ಕಂಡು ದೀಪಾಳಿಗೆ ಮೈಯೆಲ್ಲ ಉರಿದಂತಾಯಿತು.

ನಾಚಿಕೆ ಇಲ್ಲದೆ ನಿಂತಿದ್ದಾಳೆ ಎಂದು ದೀಪಾಳಿಗೆ ಕೋಪ ಕುದಿಯಿತು. ಅವಳು ಊರ್ಮಿಳಾಳ ತೋಳು ಹಿಡಿದು ಮುಂದೆ ತಳ್ಳಿದಳು.

ಆಗ ದೀಪಾಳ ಕೆನ್ನೆಗೆ ರಪ್‌ ಎಂದು ಪೆಟ್ಟು ಬಿದ್ದಿತು. ಅವಳು ಸ್ತಬ್ಧಳಾದಳು. ಬೇರೊಂದು ಹೆಣ್ಣಿಗಾಗಿ ಭಾಸ್ಕರ್‌ ತನ್ನ ಮೇಲೆ ಕೈ ಮಾಡಿದ್ದಾರೆ. ಇದನ್ನು ಅವಳು ಯೋಚಿಸಲೂ ಸಾಧ್ಯವಿಲ್ಲ. ಇವರು ತನ್ನ ಪತಿಯಲ್ಲ, ಬೇರಾವುದೋ ವ್ಯಕ್ತಿ ಎಂಬಂತೆ ಅವಳಿಗೆ ಭಾಸವಾಯಿತು.

ಕೆರಳಿದ ಸಿಂಹಿಣಿಯು ಗುರಗುಟ್ಟುವಂತೆ ದೀಪಾ ಸಿಟ್ಟಿನಿಂದ ಕಿರಿಚಿದಳು, “ನೀವು ಅವಳನ್ನು ಯಾಕೆ ಇರಿಸಿಕೊಳ್ಳುತ್ತಿದ್ದೀರಿ ಅಂತ ಗೊತ್ತು ನನಗೆ…. ನಿನ್ನೆ ರಾತ್ರಿ ನಿಮ್ಮಿಬ್ಬರ ಅಸಹ್ಯವಾದ ಸಲ್ಲಾಪವನ್ನು ನೋಡಿದ್ದೇನೆ!” ಮರ್ಯಾದೆಯ ಎಲ್ಲೆಯನ್ನು ಮುರಿದು ಭಾಸ್ಕರ್‌ ಪತ್ನಿಯ ಎದುರಿನಲ್ಲೇ ಊರ್ಮಿಳಾಳ ಸೊಂಟವನ್ನು ಬಳಸಿ ಹಿಡಿದ. ಅವನ ತುಟಿಯ ಮೇಲೆ ಕುಟಿಲ ನಗೆ ತುಳುಕಿತು.

“ನಿನಗೆ ವಿಷಯ ಗೊತ್ತಾಗಿದ್ದು ಒಳ್ಳೆಯದೇ ಆಯಿತು ಬಿಡು. ಇದನ್ನೂ ತಿಳಿದುಕೊ, ನಾನು ಊರ್ಮಿಳಾಳನ್ನು ಮದುವೆಯಾಗುತ್ತೇನೆ.”

ದೀಪಾ ಅವಾಕ್ಕಾದಳು. ಭಾಸ್ಕರ್‌ ಅಂಥವರಲ್ಲ. ಊರ್ಮಿಳಾ ಅವನ ತಲೆ ತಿರುಗಿಸಿದ್ದಾಳೆ ಅಂದುಕೊಂಡಳು.

“ನೀವು ಏನು ಹೇಳುತ್ತಿದ್ದೀರಿ ಅಂತ ಪ್ರಜ್ಞೆ ಇದೆಯೆ? ನಾನು ನಿಮ್ಮ ಪತ್ನಿ! ಇವಳು ನಮ್ಮಿಬ್ಬರ ಮಧ್ಯೆ ಬರುವ ಹಾಗಿಲ್ಲ…….”

“ನೀನು ನಮ್ಮಿಬ್ಬರ ಮಧ್ಯೆ ಇದೀಯಾ…. ನನಗೆ ನಿನ್ನ ಜೊತೆ ಇನ್ನೂ ಒಂದು ಕ್ಷಣ ಇರುವುದಕ್ಕೆ ಆಗುವುದಿಲ್ಲ,” ಭಾಸ್ಕರ ನಿರ್ಭಾವದಿಂದ ಕಡ್ಡಿ ಮುರಿದಂತೆ ಹೇಳಿದ.

ದೀಪಾ ತನ್ನದೇ ಮನೆಯಲ್ಲಿ ಬೇರೊಂದು ಹೆಣ್ಣಿನ ಮುಂದೆ ಅಪರಾಧೀ ಸ್ಥಾನದಲ್ಲಿ ನಿಂತಿದ್ದಳು. ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದ ವ್ಯಕ್ತಿಯೇ ಈಗ ತನ್ನವನಾಗಿಲ್ಲದಿರುವಾಗ, ಇನ್ನು ಈ ಮನೆ ತನ್ನದು ಹೇಗಾಗಬಲ್ಲದು? ಸುಖೀ ಸಂಸಾರ ಮೂರಾಬಟ್ಟೆಯಾಯಿತು.

ಭಾಸ್ಕರ ಡೈವೋರ್ಸ್‌ ನೋಟಿಸ್‌ ಕಳುಹಿಸಿದ್ದನ್ನು ಕಂಡು ದೀಪಾಳ ತಾಯಿ ತಂದೆಯರ ರಕ್ತ ಕುದಿಯಿತು. ಮಗಳ ಬಾಳನ್ನು ಹಾಳು ಮಾಡಿದ ಭಾಸ್ಕರನಿಗೆ ಬುದ್ಧಿ ಕಲಿಸಬೇಕೆಂದು ಬಯಸಿದರು. ಆದರೆ ದೀಪಾ ಅವರನ್ನು ಸಮಾಧಾನಗೊಳಿಸಿ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿದಳು.

ದಿನ ಕಳೆದಂತೆ ದುಃಖದ ಆವೇಗ ಕಡಿಮೆಯಾಗಿ ದೀಪಾ ಭವಿಷ್ಯದ ಬಗ್ಗೆ ಯೋಚಿಸಿದಳು. ತವರಿಗೆ ಭಾರವಾಗಿರುವ ಬದಲು ಮತ್ತೆ ಉದ್ಯೋಗ ಮಾಡಲು ನಿರ್ಧರಿಸಿದಳು. ಪುಟ್ಟ ಮಗುವನ್ನು ತಾಯಿಯ ಬಳಿ ಬಿಟ್ಟು ತಾನು ತೊರೆದು ಬಂದಿದ್ದ ಊರಿಗೇ ಮರಳಿ ಬಂದಳು. ದೀಪಾ ತಾನು ಹಿಂದೆ ಕೆಲಸ ಮಾಡುತ್ತಿದ್ದ ಬ್ಯೂಟಿ ಸಲೂನ್‌ ಗೆ ಮತ್ತೆ ಸೇರಿದಳು. ಅವಳ ಕೆಲಸ ನೈಪುಣ್ಯತೆ ವಿಶೇಷ ರೀತಿಯಾಗಿತ್ತು. ಹಲವು ಗ್ರಾಹಕರು ಅವಳ ಕೈಚಳಕಕ್ಕೆ ಮಾರುಹೋಗಿದ್ದರು.

ವಿವಾಹ ವಿಚ್ಛೇದನ ಜಾರಿಯಾದ ನಂತರ ನ್ಯಾಯಾಲಯದ ಆದೇಶದಂತೆ ದೀಪಾಳಿಗೆ ಭಾಸ್ಕರನಿಂದ ಒಂದಿಷ್ಟು ಹಣ ದೊರೆಯಿತು. ಆಗ ಅವಳು ತನ್ನದೇ ಸ್ವಂತ ಬ್ಯೂಟಿ ಸೆಲೂನ್‌ ಪ್ರಾರಂಭಿಸಲು ನಿರ್ಧರಿಸಿದಳು. ತನ್ನ ಉಳಿತಾಯದ ಹಣವನ್ನೂ ಸೇರಿಸಿ ಸೆಲೂನ್‌ ಗಾಗಿ ಒಂದು ಜಾಗ ಹುಡುಕಲು ತೊಡಗಿದಳು.

ಆ ಸಂದರ್ಭದಲ್ಲಿ ಅವಳಿಗೆ ಪ್ರಾಪರ್ಟಿ ಡೀಲರ್‌ ಅಮಿತ್‌ ನ ಪರಿಚಯವಾಯಿತು. ಅವನು ನಾಲ್ಕಾರು ಜಾಗಗಳನ್ನು ತೋರಿಸಿದುದಲ್ಲದೆ, ಅವಳ ಬಿಸ್‌ ನೆಸ್‌ ಗೆ ಯಾವ ಸ್ಥಳ ಸೂಕ್ತ ಎಂಬ ಸಲಹೆಯನ್ನೂ ಕೊಟ್ಟ. ಈ ವ್ಯವಹಾರದಲ್ಲಿ ತನ್ನ ಕಮಿಷನ್ ನ್ನೂ ಕಡಿಮೆ ಮಾಡಿದಾಗ ದೀಪಾ ಅವನಿಗೆ ಆಭಾರಿಯಾದಳು.

ದೀಪಾಳ ಸೆಲೂನ್‌ ಅಮಿತ್‌ ನ ರಿಯಲ್ ಎಸ್ಟೇಟ್‌ ಆಫೀಸ್‌ ಇದ್ದ ಬಡಾವಣೆಯಲ್ಲಿಯೇ ಇತ್ತು. ಹೀಗಾಗಿ ಒಮ್ಮೊಮ್ಮೆ ಅವರ ಭೇಟಿಯಾಗುತ್ತಿತ್ತು. ಕ್ರಮೇಣ ಅದು ಸ್ನೇಹಕ್ಕೆ ತಿರುಗಿತು.

ಅಮಿತ್‌ ಗೆ ದೀಪಾಳ ವಿಷಯ ತಿಳಿದಿತ್ತು. ಆದರೆ ಅವನೆಂದೂ ಅವಳ ಹಿಂದಿನ ವಿಷಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಬದಲಿಗೆ ಅವಳಿಗೆ ಧೈರ್ಯವಾಗಿ ಮುಂದೆ ನಡೆಯಲು ಸಲಹೆ ನೀಡುತ್ತಿದ್ದ. ಅವನ ಸಮಾಧಾನಕರವಾದ ಮಾತುಗಳು ದೀಪಾಳ ನೊಂದ ಮನಸ್ಸಿಗೆ ಸಾಂತ್ವನ ನೀಡುತ್ತಿದ್ದವು. ನಗುತ್ತಾ ನಡೆಯಲು ದೀಪಾಳಿಗೆ ಜೀವನ ಮತ್ತೊಂದು ಅವಕಾಶ ಒದಗಿಸಿಕೊಟ್ಟಿತ್ತು.

ಅವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಗಾಢವಾದಾಗ, ತಮ್ಮ ತಮ್ಮ ದೈನಂದಿನ ಬಿಸ್‌ ನೆಸ್‌ ಮುಗಿಸಿ ಒಟ್ಟಿಗೆ ಕಾಲ ಕಳೆಯುತ್ತಿದ್ದರು. ದೀಪಾ ಒಬ್ಬಳೇ ವಾಸಿಸುತ್ತಿದ್ದುದರಿಂದ ಅವಳಿಗೆ ಯಾವ ಅಡೆತಡೆ ಇರಲಿಲ್ಲ. ಬೇಕೆಂದಾಗ ಅಮಿತ್‌ ನ ಬಾಹುಬಂಧನದಲ್ಲಿ ಮೈಮರೆಯುತ್ತಿದ್ದಳು.

ಒಂದು ಸುಂದರ ಸಾಯಂಕಾಲ ತನ್ನ ತೊಡೆಯ ಮೇಲೆ ತಲೆಯಿರಿಸಿ ಕಣ್ಣುಮುಚ್ಚಿ ಮಲಗಿದ್ದ ಅಮಿತ್‌ ನ ದಟ್ಟ ಕೂದಲಿನಲ್ಲಿ ಬೆರಳಾಡಿಸುತ್ತಾ ದೀಪಾ, “ಅಮಿತ್‌, ನಾವು ಎಷ್ಟು ದಿನ ಹೀಗೆ ಭೇಟಿಯಾಗುತ್ತಾ ಇರುವುದು, ನಮ್ಮ ಈ ಸಂಬಂಧ ಎಲ್ಲಿಯವರೆಗೆ ನಡೆಯುತ್ತದೆ?” ಎಂದು ಕೇಳಿದಳು.

ದೀಪಾಳ ಸ್ಪರ್ಶ ಸುಖವನ್ನು ಅನುಭವಿಸುತ್ತಾ ಮೈ ಮರೆತಿದ್ದ ಅಮಿತ್‌ ಇದ್ದಕ್ಕಿದ್ದಂತೆ ಬಂದ ಪ್ರಶ್ನೆಯಿಂದ ಬೆಚ್ಚಿದ. ಕೊಂಚ ಸಾವರಿಸಿಕೊಂಡು, “ದೀಪಾ, ನೀನು ಎಲ್ಲಿಯವರೆಗೆ ಇಷ್ಟಪಡುವೆಯೋ ಅಲ್ಲಿಯವರೆಗೆ ನಾನು ಸದಾ ನಿನ್ನವನು,” ಎಂದ.

ಈ ಸಂಬಂಧಕ್ಕೆ ಒಂದು ಫಲ ಸಮಾಪ್ತಿ ಇದೆಯೋ, ಇಲ್ಲವೋ ಎಂದು ದೀಪಾಳಿಗೆ ತಿಳಿಯುತ್ತಿರಲಿಲ್ಲ. ಒಬ್ಬ ಪ್ರೇಯಸಿಯಾಗಿ ಪ್ರೀತಿಯನ್ನು ಪಡೆಯುವುದರಲ್ಲಿ ಆನಂದವೇನೋ ಇತ್ತು. ಆದರೆ ಈ ಜೊತೆ ಕೊನೆಯಾಗಿ ಬಿಟ್ಟರೆ ಎಂಬ ಭಯ ಅವಳಿಗಿತ್ತು.

ಈ ಬಗ್ಗೆ ಮಾತನಾಡುವಾಗ ಅಮಿತ್‌ ತನ್ನ ಮನೆಯವರು ಸಂಪ್ರದಾಯಸ್ಥರು ಎಂದು ಹೇಳಿದ. ಆಗ ದೀಪಾಳಿಗೆ ವಿಚ್ಛೇದಿತೆಯನ್ನು ಅಮಿತ್‌ ಮದುವೆಯಾಗಲು ಅವರು ಒಪ್ಪುವುದಿಲ್ಲವೆಂಬುದು ಖಾತ್ರಿಯಾಯಿತು. ಹೀಗಾಗಿ ಭವಿಷ್ಯದ ಬಗ್ಗೆ ಅವಳು ಚಿಂತಿತಳಾಗಿದ್ದಳು. ಆದರೆ ವರ್ತಮಾನದಲ್ಲಿ ಅಮಿತ್‌ ನೊಂದಿಗೆ ಅವಳು ಆನಂದದಿಂದಿದ್ದಳು.

ಒಂದು ದಿನ ಅಮಿತ್‌ ನ ಬೈಕ್‌ ನಲ್ಲಿ ಅವನ ಸೊಂಟ ಬಳಸಿ ಕುಳಿತು ಹೋಗುತ್ತಿದ್ದ ದೀಪಾಳನ್ನು ಭಾಸ್ಕರ್‌ ನೋಡಿದ. ದೀಪಾ ಈಗ ಅವನ ಪತ್ನಿಯಲ್ಲದಿದ್ದರೂ ಅವಳು ಪರಪುರುಷನೊಂದಿಗೆ ಹಾಗೆ ಹೋಗುವುದನ್ನು ಕಂಡು ಅವನ ಕೋಪ ಬುಸುಗುಟ್ಟಿತು. ಅವನೇ ದೂರ ಮಾಡಿದ ಹೆಣ್ಣು ಅವಳಾದರೂ, ಬೇರೊಬ್ಬನ ಜೊತೆ ಅವಳು ಮೋಜು ಮಾಡುವುದನ್ನು ಸಹಿಸಲಾಗಲಿಲ್ಲ.

ಊರ್ಮಿಳಾಳನ್ನು ಮದುವೆಯಾದ ಭಾಸ್ಕರ್‌ ತನ್ನ ಬಯಕೆ ಈಡೇರಿತೆಂದು ಸಂತುಷ್ಟನಾಗಿದ್ದನು. ಆದರೆ ಊರ್ಮಿಳಾ ಮದುವೆಯ ಬಳಿಕ ಪ್ರಿಯತಮೆಯಂತೆ ಇದ್ದಳೇ ಹೊರತು ಪತ್ನಿಯಂತೆ ವರ್ತಿಸಲಿಲ್ಲ. ಗೃಹಕೃತ್ಯದ ಜವಾಬ್ದಾರಿ ತೆಗೆದುಕೊಳ್ಳಲೇ ಇಲ್ಲ.

ಅವಳ ದುಂದುಗಾರಿಕೆ ಭಾಸ್ಕರನಿಗೆ ತಲೆನೋವು ತಂದಿತು. ಆ ಬಗ್ಗೆ ಅವನೇನಾದರೂ ಕೋಪ ತೋರಿದರೆ, ಚೆನ್ನಾಗಿ ದಬಾಯಿಸಿ ಬಿಡುತ್ತಿದ್ದಳು. ಡೈವೋರ್ಸ್‌ ಮತ್ತು ಪೊಲೀಸರ ಬೆದರಿಕೆ ಹಾಕುತ್ತಿದ್ದಳು. ಪ್ರೇಯಸಿಯಾಗಿದ್ದಾಗ ಊರ್ಮಿಳಾಳಿಂದ ದೊರೆಯುತ್ತಿದ್ದ ಶಾರೀರಿಕ ಸುಖ ಪತ್ನಿಯಾದ ನಂತರ ನೀರಸ ಎನಿಸತೊಡಗಿತು. ಪ್ರೀತಿ ಪ್ರೇಮದ ಭೂತ ತಲೆಯಿಂದ ಇಳಿದುಬಿಟ್ಟಿತು.

ಭಾಸ್ಕರನ ಮನಸ್ಸಿನಲ್ಲಿ ದೀಪಾಳೊಂದಿಗೆ ವಿವಾಹವಾದ ಪ್ರಾರಂಭದ ದಿನಗಳ ನೆನಪು ಸುಳಿದಾಡಿತು. ಅವನೀಗ ದೀಪಾಳ ಸಂಗಕ್ಕಾಗಿ ಹಾತೊರೆಯತೊಡಗಿದ. ನಾಲಿಗೆಯು ರುಚಿ ಬದಲಾವಣೆಯನ್ನು ಬಯಸುವಂತೆ ಶರೀರದ ಹಸಿ ಬದಲಾವಣೆ ಕೇಳುತ್ತದೆ.

ಭಾಸ್ಕರ್‌ ಹೇಗೋ ಮಾಡಿ ದೀಪಾಳ ಮನೆ ಮತ್ತು ಸೆಲೂನ್‌ ಗಳನ್ನು ಪತ್ತೆ ಮಾಡಿದ. ಒಂದು ದಿನ ಅವಳು ಇರುವ ಸಮಯ ನೋಡಿ ಫ್ಲಾಟ್‌ ಗೆ ಬಂದ. ಬಹಳ ಕಾಲದ ನಂತರ ಇದ್ದಕ್ಕಿದ್ದಂತೆ ಎದುರಿಗೆ ಬಂದ ಅವನನ್ನು ಕಂಡು ದೀಪಾ ಚಕಿತಳಾದಳು. ಇಲ್ಲೇಕೆ ಬಂದಿರಬಹುದೆಂದು ಚಿಂತಿಸಿದಳು.

“ಹೇಗಿದ್ದೀಯಾ ದೀಪಾ? ಬಹಳ ಬದಲಾಗಿಬಿಟ್ಟಿದ್ದೀಯಾ….. ಗುರುತೇ ಸಿಗದ ಹಾಗೆ ಆಗಿದ್ದೀಯಾ….” ಭಾಸ್ಕರ್‌ ಅವಳನ್ನೇ ದಿಟ್ಟಿಸುತ್ತಾ ಹೇಳಿದ.

ನಿಜಕ್ಕೂ ಈಗ ದೀಪಾ ಬದಲಾಗಿದ್ದಳು. ತನ್ನದೇ ಸೆಲೂನ್‌ ಆದ ಮೇಲೆ ಗ್ರಾಹಕರನ್ನು ಆಕರ್ಷಿಸಲು ಅವಳು ಚೆನ್ನಾಗಿ ಅಲಂಕರಿಸಿಕೊಳ್ಳುತ್ತಿದ್ದಳು. ಆಧುನಿಕ ಉಡುಪುಗಳನ್ನು ತೊಟ್ಟು, ಸ್ಟೈಲಿಶ್‌ ಹೇರ್‌ ಕಟ್‌ ಮಾಡಿಕೊಂಡು ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದಳು.

ಜೀವನದಲ್ಲಿ ದೊಡ್ಡ ಹೊಡೆತವನ್ನು ಅನುಭವಿಸಿದ್ದರೂ ಛಿದ್ರಛಿದ್ರವಾಗದಂತೆ ಧೈರ್ಯದಿಂದ ಮುನ್ನಡೆದಿದ್ದಳು. ಅವಳೀಗ ಯಾವುದೇ ಕಷ್ಟವನ್ನೂ ಎದುರಿಸಬಲ್ಲ ಸಾಮರ್ಥ್ಯ ಪಡೆದಿದ್ದಳು. ಭಾಸ್ಕರ್‌ ನನ್ನು ಕಂಡು ಕ್ಷಣಕಾಲ ಅಚ್ಚರಿಗೊಂಡರೂ ಅವಳು ವಿಚಲಿತಳಾಗಲಿಲ್ಲ.

“ಏನು ಬಂದದ್ದು?” ಅವಳು ಅಲಕ್ಷ್ಯಭಾವದಿಂದ ಕೇಳಿದಳು.

ದೀಪಾಳ ಮಾತಿನ ಧೋರಣೆ ಕಂಡು ಅವನಿಗೆ ಸಿಟ್ಟು ಬಂದಂತಾಯಿತು. ಆದರೂ ಸಾವರಿಸಿಕೊಂಡು, “ನಾನು ನನ್ನ ಮಗನನ್ನು ನೋಡಲು ಬಂದಿದ್ದೇನೆ. ನೀನು ಅವನನ್ನು ನನ್ನಿಂದ ದೂರ ಮಾಡಿಬಿಟ್ಟೆ,” ಎಂದು ದೂರಿದ.

“ಏನು, ಇದ್ದಕ್ಕಿದ್ದ ಹಾಗೆ ಮಗನ ಮೇಲೆ ಪ್ರೀತಿ ಬಂದುಬಿಟ್ಟಿದೆ? ಇಷ್ಟು ವರ್ಷಗಳಲ್ಲಿ ಒಂದು ಸಲ ಅವನ ಬಗ್ಗೆ ವಿಚಾರಿಸಲಿಲ್ಲ,” ದೀಪಾ ವ್ಯಂಗ್ಯವಾಗಿ ಹೇಳಿದಳು.

hum-hai-rahi-pyar-ke-story-2

“ನನಗೆ ಮಗನ ಮೇಲೆ ಪ್ರೀತಿ ಇಲ್ಲ ಅಂದುಕೊಂಡೆಯಾ? ನಾನು ಅವನ ತಂದೆ! ನಿನಗೆಷ್ಟು ಹಕ್ಕು ಇದೆಯೋ ನನಗೂ ಅಷ್ಟೇ ಇದೆ.”

“ಓಹೋ….. ಹಕ್ಕಿನ ವಿಷಯ ಮಾತನಾಡುವುದಕ್ಕೆ ಬಂದಿರಾ?” ಮಗನನ್ನು ನೋಡಬೇಕು ಎಂದು ಭಾಸ್ಕರ್‌ ಹೇಳಿದ್ದು ನೆಪಮಾತ್ರಕ್ಕೆ, ಅವನಿಗೆ ದೀಪಾಳ ಸಂಗ ಬೇಕೆನಿಸಿತ್ತು.

“ದೀಪಾ, ನಾನು ದೊಡ್ಡ ತಪ್ಪು ಮಾಡಿಬಿಟ್ಟೆ….. ನನ್ನನ್ನು ಕ್ಷಮಿಸಿ ಬಿಡು,” ಎನ್ನುತ್ತಾ  ಭಾಸ್ಕರ್‌ ಮುಂದೆ ಬಂದು ದೀಪಾಳ ಕೈ ಹಿಡಿದ.

ಆಗ ಫಟ್‌ ಎಂದು ಒಂದು ಪೆಟ್ಟು ಭಾಸ್ಕರನ ಕೆನ್ನೆಗೆ ಬಿದ್ದಿತು. ಭಾಸ್ಕರನ ಕೆನ್ನೆ ಬಿಸಿಯಾಯಿತು. ಅವನಿದನ್ನು ನಿರೀಕ್ಷಿಸಿರಲಿಲ್ಲ.

ಅವನು ಏನಾದರೂ ಹೇಳುವ ಮೊದಲೇ ದೀಪಾ ಕನಲಿ ಹೇಳಿದಳು, “ಇನ್ನೂ ಯಾವತ್ತೂ ನನ್ನನ್ನು ಮುಟ್ಟುವ ಧೈರ್ಯ ಮಾಡಬೇಡಿ. ಹುಷಾರ್‌, ನೀವೀಗ ನನ್ನ ಪತಿ ಅಲ್ಲ ಅನ್ನುವುದು ನೆಪಿರಲಿ. ಒಬ್ಬ ಪರಪುರುಷ ಹೀಗೆ ನನ್ನ ಕೈ ಹಿಡಿಯುವ ಹಾಗಿಲ್ಲ, ತಿಳಿಯಿತೇ? ಈಗ ಹೊರಡಿ ಇಲ್ಲಿಂದ.”

ಅವಮಾನಗೊಂಡ ಭಾಸ್ಕರ ಅವಾಚ್ಯ ಪದಗಳಿಂದ ಅವಳನ್ನು ಬೈಯುತ್ತಾ, “ಸತಿ ಸಾವಿತ್ರಿಯ ಹಾಗೆ ನಾಟಕ ಮಾಡಬೇಡ.  ನೀನು ಯಾರು ಯಾರ ಜೊತೆ ಮಜ ಮಾಡುತ್ತೀಯಾ ಅಂತ ಗೊತ್ತು ನನಗೆ. ಬೇರೆಯವರ ಜೊತೆ ತಪ್ಪು ಮಾಡುತ್ತೀಯ, ಮತ್ತೆ ನಾನೇಕೆ ಬೇಡ? ನನ್ನ ಕೆನ್ನೆಗೆ ಹೊಡೆಯುತ್ತೀಯಾ? ನಿನಗೆ ಅದಕ್ಕೆ ಸರಿಯಾಗಿ ಮಾಡುತ್ತೇನೆ….. ಊರಿನಲ್ಲೆಲ್ಲ ನಿನ್ನ ಮಾನ ಹರಾಜು ಮಾಡುತ್ತೇನೆ…..” ವೇಗಾಗಿ ಹೊರಗೆ ಹೋದ.

ಭಾಸ್ಕರ ಎಷ್ಟು ನೀಚ ಮತ್ತು ಕ್ರೂರಿಯಾಗಿದ್ದಾನೆ ಎಂದು ದೀಪಾ ಬಿಕ್ಕಳಿಸಿ ಅತ್ತಳು. ಅನ್ಯಾಯ ಆಗಿದ್ದು ಅವಳಿಗೆ. ಆದರೆ ಅವಳನ್ನೇ ತಪ್ಪಿತಸ್ಥಳೆಂದು ದೂಷಿಸಲಾಗಿತ್ತು.

ಈ ಸಂಕಟದ ಸಮಯದಲ್ಲಿ ಅವಳಿಗೆ ಅಮಿತ್‌ ಬೇಕೆನಿಸಿತು. ಅವನ ಪ್ರೀತಿಯ ಲೇಪನ ಅವಳ ನೊಂದ ಮನಸ್ಸಿಗೆ ಸಾಂತ್ವನ ನೀಡಬಲ್ಲದಾಗಿತ್ತು. ಅವಳು ಅಮಿತ್‌ ಗೆ ಫೋನ್‌ ಮಾಡಿದಳು. ಎಷ್ಟು ಸಲ ಪ್ರಯತ್ನಿಸಿದರೂ ಅವನು ಫೋನ್‌ ತೆಗೆಯದಿದ್ದಾಗ ಅವನನ್ನು ಭೇಟಿ ಮಾಡಲು ಹೊರಟಳು.

ಭಾಸ್ಕರ್‌ ಇನ್ನು ಸುಮ್ಮನಿರುವುದಿಲ್ಲ. ಅವಳ ಮರ್ಯಾದೆಗೆ ಕಳಂಕ ತಂದರೆ ಸೆಲೂನ್‌ ಬಿಸ್‌ ನೆಸ್‌ ಹಾಳಾಗುತ್ತದೆ. ಅಮಿತ್‌ ನನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಯೋಚಿಸಿ ಹೊರಟ ದೀಪಾ ಅಮಿತ್‌ ನ ಆಫೀಸಿಗೆ ಬೀಗ ಹಾಕಿರುವುದನ್ನು ಕಂಡು ನಿರಾಶಳಾದಳು.

ದೀಪಾ ಒಂದು ಕರೆ ಮಾಡಿದರೆ ಸಾಕು. ಅಮಿತ್‌ ಓಡಿ ಬರುತ್ತಿದ್ದ. ಇಂದೇಕೆ ಫೋನ್‌ ತೆಗೆಯುತ್ತಿಲ್ಲ? ದೀಪಾ ತನ್ನ ಪರ್ಸ್‌ ನಲ್ಲಿದ್ದ ಅವನ ವಿಸಿಟಿಂಗ್‌ ಕಾರ್ಡ್‌ ತೆಗೆದಳು. ಅವನ ಮನೆಯ ವಿಳಾಸ ನೋಡಿ, ಒಂದು ಆಟೋ ಕರೆದು ಅಲ್ಲಿಗೆ ಹೋಗಲು ಸೂಚಿಸಿದಳು.

ಕೊಂಚ ಅಳುಕುತ್ತಾ ದೀಪಾ ಫ್ಲಾಟ್‌ ನ ಕರೆಗಂಟೆ ಒತ್ತಿದಳು. ಅವಳದೇ ವಯಸ್ಸಿನ ಮಹಿಳೆ ಬಂದು ಬಾಗಿಲು ತೆರೆದು, “ಯಾರು, ಯಾರು ಬೇಕಾಗಿತ್ತು?” ಎಂದು ಕೇಳಿದಳು.

“ಇದು ಅಮಿತ್‌ ಮನೆನಾ? ನಾನು ಅಮಿತ್‌ ರನ್ನು ನೋಡಬೇಕಾಗಿತ್ತು,” ದೀಪಾ ಸಂಕೋಚದಿಂದ ಕೇಳಿದಳು.

“ಹೌದು. ನಾನು ಅಮಿತ್‌ ರ ಪತ್ನಿ. ಒಳಗೆ ಬನ್ನಿ…. ಏನು ಕೆಲಸ ಇತ್ತು?” ಆ ಮಹಿಳೆ ವಿನಯದಿಂದ ಪ್ರಶ್ನಿಸಿದಳು.

ದೀಪಾ ಆ ಮಹಿಳೆಯನ್ನು ನೋಡಿದಳು. ಸುಂದರ ಮತ್ತು ಸರಳವಾಗಿದ್ದಳು. ಹಣೆಯಲ್ಲಿ ಗುಂಡಾದ ಕುಂಕುಮ ಮುಖಕ್ಕೆ ಶೋಭೆ ನೀಡಿತ್ತು.

ಒಂದು ಕ್ಷಣ ಯೋಚಿಸಿದ ದೀಪಾ, “ಏನೂ ವಿಶೇಷವಿಲ್ಲ. ನನಗೆ ಬಾಡಿಗೆಗೆ ಒಂದು ಮನೆ ಬೇಕಾಗಿದೆ. ಆ ವಿಷಯ ಕೇಳಬೇಕಾಗಿತ್ತು. ಅವರು ಆಫೀಸಿನಲ್ಲಿ ಇರಲಿಲ್ಲ. ಫೋನ್‌ ಗೂ ಸಿಗಲಿಲ್ಲ. ಆದ್ದರಿಂದ ಇಲ್ಲಿಗೆ  ಬರಬೇಕಾಯಿತು.”

“ನಿಮ್ಮ ಹೆಸರು ಹೇಳಿದರೆ ಅವರು ಬಂದಾಗ ತಿಳಿಸುತ್ತೇನೆ.”

“ಇರಲಿ ಬಿಡಿ. ಅವರಿಗೆ ಗೊತ್ತಾಗುತ್ತದೆ,” ಎನ್ನುತ್ತಾ ದೀಪಾ ಬೇಗನೆ ಮೆಟ್ಟಿಲು ಇಳಿದು ಬಂದಳು.

ಅವಳ ಜೀವನದಲ್ಲಿ ಇದೇನಾಗುತ್ತಿದೆ? ಸಧ್ಯ, ಈಗಲೇ ಸತ್ಯ ಸಂಗತಿ ಕಣ್ಣೆದುರಿಗೆ ಬಂದಿತಲ್ಲ. ಅದಕ್ಕಾಗಿ ಅವಳು ದೈವಕ್ಕೆ ವಂದಿಸಿದಳು. ಭಾಸ್ಕರ್‌ ಅವಳಿಗೆ ಏನು ಮಾಡಿದ್ದನೋ ಅದನ್ನೇ ಈಗ ಅಮಿತ್‌ ಸಹ ಮಾಡಿದ್ದ. ಅವಳು ಮತ್ತೊಮ್ಮೆ ಮೋಸ ಹೋಗಿದ್ದಳು. ಆದರೆ ಈಗ ಅವಳು ತನ್ನ ಕಾಲ ಮೇಲೆ ಸ್ಥಿರವಾಗಿ ನಿಂತಿದ್ದಳು. ಊರ್ಮಿಳಾ ಇದ್ದ ಪಾತ್ರದಲ್ಲಿ ಈಗ ತಾನಿದ್ದಳು. ತನಗೂ ಊರ್ಮಿಳಾಳಿಗೂ ಯಾವ ವ್ಯತ್ಯಾಸವಿದೆ ಎಂದು ದೀಪಾ ಯೋಚಿಸಿದಳು. ಖಂಡಿತ ವ್ಯಾತ್ಯಾಸವಿದೆ. ತಾನು ವಿವೇಕ ಕಳೆದುಕೊಂಡಿಲ್ಲ, ಇನ್ನೊಬ್ಬರ ಸಂಸಾರವನ್ನೇ ಹಾಳು ಮಾಡು ಸ್ವಾರ್ಥಿ ತಾನಲ್ಲ. ತಾನು ಈಗ ಮಾಡಿರುವ ತಪ್ಪನ್ನು ಮತ್ತೆಂದೂ ಮಾಡುವುದಿಲ್ಲ. ತನ್ನ ಹೃದಯದೊಂದಿಗೆ ಆಟವಾಡಲು ಯಾರಿಗೂ ಇನ್ನೆಂದಿಗೂ ಅವಕಾಶ ನೀಡುವುದಿಲ್ಲ ಎಂದು ದೀಪಾ ನಿರ್ಧರಿಸಿದಳು. ಆ ದೃಢ ನಿರ್ಧಾರದೊಂದಿಗೆ ಸಮಾಧಾನದಿಂದ ಮನೆ ಸೇರಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ