ಯಾವ ತಾಯಿತಂದೆಯರು ಸದಾ ತಮ್ಮ ಮಕ್ಕಳ ಕಡೆಯೇ ಗಮನ ಕೊಡುತ್ತಿರುತ್ತಾರೊ, ಅವರಿಗೆ ಯಾವುದೇ ಸ್ವನಿರ್ಧಾರ ತೆಗೆದುಕೊಳ್ಳಲು ಅವಕಾಶ ಕೊಡುವುದಿಲ್ಲವೋ, ಅಂತಹ ಪೋಷಕರನ್ನು ಮನೋತಜ್ಞರು `ಹೆಲಿಕಾಪ್ಟರ್‌ ಪೇರೆಂಟ್ಸ್’ ಎಂದು ಕರೆಯುತ್ತಾರೆ. ಇದರ ಪರಿಣಾಮವೆಂಬಂತೆ ಮಕ್ಕಳಿಗೆ ಸರಿತಪ್ಪಿನ ಅರಿವಾಗುವುದಿಲ್ಲ, ಅವರು ಏಕಾಂಗಿಯಾಗಿ, ಬೇರೆಡೆ ಹೋಗಲು ಹೆದರುತ್ತಾರೆ.

`ಹೆಲಿಕಾಪ್ಟರ್‌ ಪೇರೆಂಟ್ಸ್’ ಎಂದು ಕರೆಯಿಸಿಕೊಳ್ಳುವವರು ತಮ್ಮ ಮಕ್ಕಳ ನಿರ್ಧಾರವನ್ನು ತಾವೇ ಸ್ವತಃ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಅವರ ಬಟ್ಟೆಗಳ ಆಯ್ಕೆಯಾಗಿರಬಹುದು, ಆಹಾರದ ಆಯ್ಕೆಯಾಗಿರಬಹುದು. ತಾಯಿತಂದೆಯರ ಈ ವರ್ತನೆ ಮಕ್ಕಳ ಮಾನಸಿಕ ಸಾಮರ್ಥ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.

`ಹೋರಿಂಗ್‌’ ಅಥವಾ `ಹೆಲಿಕಾಪ್ಟರ್‌ ಪೇರೆಂಟ್ಸ್’ ಶಬ್ದವನ್ನು ಎಲ್ಲಕ್ಕೂ ಮೊದಲು 1969ರಲ್ಲಿ ಡಾ. ಹೆಮ್ ಗಿನಾಟ್ಸ್ ರ `ಬಿಟ್ವೀನ್ ಪೇರೆಂಟ್ಸ್ ಅಂಡ್‌ ಟೀನ್‌ ಏಜರ್ಸ್‌’ ಪುಸ್ತಕದಲ್ಲಿ ಬಳಸಲಾಗಿತ್ತು. ಆ ಶಬ್ದ ಅದೆಷ್ಟು ಜನಪ್ರಿಯಗೊಂಡಿತೆಂದರೆ, 2011ರಲ್ಲಿ ಅದು ಶಬ್ದಕೋಶದಲ್ಲಿ ಸೇರ್ಪಡೆಗೊಂಡಿತು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳ ಸಂಪೂರ್ಣ ವಿಕಾಸ ಬಯಸುತ್ತಾರೆ. ತಮ್ಮ ಮಗು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇರಬೇಕೆಂದು ಬಯಸಿ ಸದಾ ಮಗುವಿನ ಹಿಂದೆ ಹಿಂದೆಯೇ ಇರುತ್ತಾರೆ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಮಗುವಿನ ಮೇಲೆ ನಿರೀಕ್ಷೆಯ ಭಾರವನ್ನು ಅತಿಯಾಗಿ ಹೊರಿಸುತ್ತಾರೆ. ಬೇರೆ ಮಕ್ಕಳಿಗಿಂತ ತಮ್ಮ ಮಗು ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದೆಂದು ಅದರ ಸುತ್ತಲೇ ಹೆಲಿಕಾಪ್ಟರ್‌ ರೀತಿಯಲ್ಲಿ ಗಿರಕಿ ಹೊಡೆಯುತ್ತಿರುತ್ತಾರೆ. ತಾವು ಹೆಚ್ಚು ಗಮನ ಕೊಡುವುದರಿಂದ ಮಗು ಯಶಸ್ಸಿನತ್ತ ಸಾಗುತ್ತದೆ ಎನ್ನುವುದು ಅವರ ವಿಚಾರವಾಗಿರುತ್ತದೆ.

ಆದರೆ ಪೋಷಕರು ಹೀಗೆ ಮಾಡಬಾರದು. ಮಗುವಿಗೆ ಅಷ್ಟಿಷ್ಟು ಬಂಧನಗಳಿಂದ ಮುಕ್ತಿ ಕೊಡಬೇಕು. ಎಷ್ಟೋ ಸಲ ಪೋಷಕರು ಮಕ್ಕಳಿಗೆ ಮೆಟ್ಟಿಲಾಗುವ ಬದಲು ಅವರ ಊರುಗೋಲಾಗಿ ಬಿಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ತಾವು ಪೋಷಕರಿಲ್ಲದೆ ಏನನ್ನೂ ಮಾಡಲು ಆಗುವುದಿಲ್ಲ ಎಂಬ ಅನುಭವ ಮೂಡತೊಡಗುತ್ತದೆ. ಯಾವುದೇ ಒಂದು ಕೆಲಸ ಮಾಡಲು ಅವರಿಗೆ ಹೆದರಿಕೆ ಆಗುತ್ತದೆ. ಮಕ್ಕಳು ಪೋಷಕರ ಜವಾಬ್ದಾರಿ ಎನ್ನುವುದೇನೋ ನಿಜ. ಆದರೆ ನೀವು ನಿಮ್ಮ ಇಷ್ಟವನ್ನು ಅವರ ಮೇಲೆ ಹೇರುವ ಪ್ರಯತ್ನ ಮಾಡಬಾರದು. ಮಕ್ಕಳಿಗೆ ಮೆಟ್ಟಿಲಾಗಿ ಅವರಿಗೆ ನೆರವಾದರೆ ಅವರು ಸ್ವಾವಲಂಬಿಗಳಾಗುತ್ತಾರೆ. ಆದರೆ ಊರುಗೋಲಿನ ರೀತಿ ಅವರಿಗೆ ಆಧಾರ ಕೊಡಲು ಹೋದರೆ ಅವರು ತಮ್ಮನ್ನು ತಾವು ದುರ್ಬಲ ಎಂದು ಭಾವಿಸುತ್ತಾರೆ. ಅವರನ್ನು ನಿರಾಳವಾಗಿರಲು ಬಿಡಿ. ಅವರು ತಮಗೆ ತಾವೇ ಯಾವುದಾದರೂ ನಿರ್ಧಾರ ಕೈಗೊಳ್ಳಲು ಅವಕಾಶ ಕೊಡಿ. ಏಕೆಂದರೆ ಅವರಲ್ಲಿ ಆತ್ಮವಿಶ್ವಾಸ ಜಾಗೃತಗೊಳ್ಳಬೇಕು. ಇದನ್ನು ಹೇಳುವ ಉದ್ದೇಶ ಇಷ್ಟೆ. ನಿಮ್ಮ ಆಸಕ್ತಿ ಅನಾಸಕ್ತಿಗಳನ್ನು ಅವರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ. ಸದಾ ಕಟ್ಟುನಿಟ್ಟಿನಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುವುದಿಲ್ಲ. ಅದೇ ರೀತಿ ಮಕ್ಕಳ ಮೇಲೆ ಅತಿಯಾಗಿ ಶಿಸ್ತಿನಿಂದ ಅವರಲ್ಲಿ ಹಠಮಾರಿತನ ಜಾಸ್ತಿಯಾಗಬಹುದು.

ಮಕ್ಕಳ ಮೇಲೆ ಕಠೋರ ಶಿಸ್ತು ಹೇರುವುದರಿಂದ ಅವರು ಕೋಪಿಷ್ಟರೂ, ಹಠಮಾರಿಗಳೂ ಆಗುತ್ತಾರೆ. ಅದರ ಪರಿಣಾಮವೆಂಬಂತೆ ಪೋಷಕರು ಮಕ್ಕಳಿಂದ ತದ್ವಿರುದ್ಧ ಉತ್ತರ ಕೇಳಿಸಿಕೊಳ್ಳಬೇಕಾಗುತ್ತದೆ.

ಏನು ಮಾಡಬೇಕು?

ಪೋಷಕರು ಹಿಂದೆಮುಂದೆ ಯೋಚಿಸದೆ ಮಕ್ಕಳಿಗೆ ಯಾವಾಗಲೂ ಏಕೆ? ಎಲ್ಲಿ? ಏನು? ಎಂಬ ಪ್ರಶ್ನೆಗಳನ್ನು ಮಾಡುತ್ತಿರುತ್ತಾರೆ. ಅದರಿಂದಾಗಿ ಮಕ್ಕಳು ಸಿಡಿಮಿಡಿ ಸ್ವಭಾದವರಾಗುತ್ತಾರೆ. ಅಲ್ಲಿಂದ ಮುಂದೆ ಅವರು ಸುಳ್ಳು ಹೇಳುವುದನ್ನು ರೂಢಿಸಿಕೊಳ್ಳುತ್ತಾರೆ. ಆದರೆ ಪೋಷಕರು ಮಾತ್ರ ತಾವು ಹೀಗೆ ಮಾಡುವುದರ ಮೂಲಕ ಮಕ್ಕಳ ತಪ್ಪು ಸುಧಾರಣೆ ಮಾಡುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಗಾಳಿಪಟವನ್ನು ನಾವು ಬಿಗಿ ಹಿಡಿಯದೆ, ಎಷ್ಟು ಸಡಿಲಬಿಡುತ್ತೇವೋ, ಅದು ಅಷ್ಟೇ ನಿರಾಳವಾಗಿ ಹಾರುತ್ತದೆ. ಹೆಚ್ಚು ಒತ್ತಡ, ಶಿಸ್ತು ಮಕ್ಕಳನ್ನು ಒಳಗೊಳಗೆ ತುಂಡರಿಸುತ್ತದೆ.

ತಾವು ಏನು ಕೇಳಿದರೂ ತಾಯಿ ತಂದೆ ಕೊಡಿಸದೇ ಇರುವುದು, ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ಹದ್ದಿನ ಕಣ್ಣು ಇಡುವುದು ಅವರನ್ನು ಗೊಂದಲಕ್ಕೆ ದೂಡುತ್ತದೆ. ಇದರಿಂದ ಅವರ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಕುಸಿಯಲಾರಂಭಿಸುತ್ತದೆ. ತಾಯಿ ತಂದೆಯ ಹೊರತು, ತಾವು ಏನನ್ನೂ ಮಾಡಲು ಆಗುವುದಿಲ್ಲ ಎಂದು ಅವರಿಗೆ ಅನಿಸತೊಡಗುತ್ತದೆ. ಇಂತಹ ಮಕ್ಕಳು ದೊಡ್ಡವರೇನೋ ಆಗುತ್ತಾರೆ. ಆದರೆ ತಮ್ಮ ಕಾಲ ಮೇಲೆ ತಾವು ನಿಲ್ಲಲು ಆಗುವುದಿಲ್ಲ. ಸದಾ ಬೇರೆಯವರ ಆಶ್ರಯ ಪಡೆಯುತ್ತಾರೆ. ಹೀಗಾಗಿ ಪೋಷಕರು ಹೆಲಿಕಾಪ್ಟರ್‌ ಆಗದೆ ಮಕ್ಕಳು ತಮಗೆ ತಾವೇ ಕೆಲವು ನಿರ್ಧಾರ ಕೈಗೊಳ್ಳಲು ಅವಕಾಶ ಕೊಡಿ. ಆಗಲೇ ಅವರು ಭವಿಷ್ಯದಲ್ಲಿ ಸಮರ್ಥ ವ್ಯಕ್ತಿಗಳಾಗುತ್ತಾರೆ.

ಪಾಲನೆಯ ವಿಧಾನ ಬದಲಿಸಿ

ಕಾಲಕ್ಕನುಗುಣವಾಗಿ ಪಾಲನೆ ಪೋಷಣೆಯ ವಿಧಾನದಲ್ಲೂ ಸಾಕಷ್ಟು ಬದಲಾವಣೆ ಬಂದಿದೆ. ಶಿಶು ಮನೋತಜ್ಞರ ಪ್ರಕಾರ, ಹೆಚ್ಚು ನಿರ್ಬಂಧ ಹೇರುವುದರಿಂದ ಮಗು ಮಾನಸಿಕವಾಗಿ ದುರ್ಬಲಗೊಳ್ಳುತ್ತದೆ. ವೈದ್ಯರ ಪ್ರಕಾರ ಪೋಷಕರು ತಮ್ಮ ಮಕ್ಕಳ ಹಿಂದೆಮುಂದೆ ಸುತ್ತಾಡದೆ, ಅವರ ಜೊತೆ ಸ್ನೇಹಿತರ ರೀತಿ ಇರಬೇಕು. ಅವರ ಮೇಲೆ ಗಮನವಿಡಲು ಸಾಧ್ಯವಾಗಿರಬೇಕು ಹಾಗೂ ಮಗುವಿನ ವಿಕಾಸ ಕೂಡ ಆಗಬೇಕು.

ಈ ಕುರಿತಂತೆ ಚೈಲ್ಡ್ ಕೌನ್ಸೆಲರ್‌ ಗೀತಾ ಹೀಗೆ ಹೇಳುತ್ತಾರೆ, “ನಿಮ್ಮ ಕಟುಮಾತುಗಳು, ಬಿಗು ಧೋರಣೆಯಿಂದ ಅವರ ಸ್ವಭಾವ ಸಾಮರ್ಥ್ಯ ಕುಂದುತ್ತದೆ. ಒಂದಿಷ್ಟು ಹೊಗಳಿಕೆ ಆಲಿಸಿದರೆ ಅವರ ಉತ್ಸಾಹ ದ್ವಿಗುಣಗೊಳ್ಳುತ್ತದೆ. ಪೋಷಕರ ಈ ವಿಧಾನ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ. ಇದರಿಂದಾಗಿ ಅವರಿಗೆ ಕೆಲವು ಬಗೆಯ ಅಭ್ಯಾಸಗಳನ್ನು ರೂಢಿಸುವಂತೆ ಮಾಡಬಹುದು.

ಹೆಲಿಕಾಪ್ಟರ್ಪೇರೆಂಟಿಂಗ್ನಿಂದ ಹಾನಿ

ಹೆಲಿಕಾಪ್ಟರ್‌ ಪೇರೆಂಟ್ಸ್ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿ ಬಹಳಷ್ಟು ಅಡೆತಡೆ ಉಂಟು ಮಾಡುತ್ತಾರೆ. ಏಕೆಂದರೆ ಪ್ರತಿಯೊಂದು ಮಗುವಿನ ಸ್ವಭಾವ ಒಂದೇ ರೀತಿ ಇರುವುದಿಲ್ಲ. ಪೋಷಕರ ಅಗತ್ಯಕ್ಕಿಂತ ಹೆಚ್ಚು ಕಾಳಜಿ, ಅದನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.

ಹೆಲಿಕಾಪ್ಟರ್‌ ಪೇರೆಂಟಿಂಗ್‌ ನಿಂದಾಗಿ ಮಕ್ಕಳ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಅವರಿಗೆ ತಮ್ಮದೇ ಸಾಮರ್ಥ್ಯದ ಮೇಲೆ ಸಂದೇಹ ಉಂಟಾಗುತ್ತದೆ. ತಾನು ಏಕಾಂಗಿಯಾಗಿ ಏನನ್ನು ಮಾಡಲು ಆಗುವುದಿಲ್ಲ. ಹಾಗೊಂದು ವೇಳೆ ಮಾಡಿದರೂ ತಂದೆ ತಾಯಿ ಅಪೇಕ್ಷೆಗೆ ತಕ್ಕಂತೆ ಮಾಡಲು ಆಗುವುದಿಲ್ಲ ಎಂದೆನಿಸುತ್ತದೆ. ಹೀಗಾಗಿ ಹೆಚ್ಚು ಮಾತನಾಡದೇ ಇರುವುದು, ಮೌನದಿಂದಿರುವುದು, ಏನನ್ನಾದರೂ ಮಾತನಾಡುವ ಮೊದಲು ಗಾಬರಿಗೆ ಒಳಗಾಗುವಂತಹ ಅಭ್ಯಾಸಗಳು ಅವರಲ್ಲಿ ಸೇರಿಕೊಳ್ಳುತ್ತದೆ.

ನಮ್ಮ ದೇಶದಲ್ಲಿ ಮಕ್ಕಳು ದೊಡ್ಡವರಾಗುವ ತನಕ ಪ್ರತಿಯೊಂದಕ್ಕೂ ತಾಯಿ ತಂದೆಯರನ್ನೇ ಅಲಂಬಿಸುತ್ತಾರೆ. ಎಸ್‌ಎಸ್‌ಎಲ್ಸಿ ಬಳಿಕ ಸೈನ್ಸ್, ಆರ್ಟ್ಸ್, ಕಾಮರ್ಸ್‌ ಯಾವುದರ ಕಡೆ ಹೋಗಬೇಕು ಎನ್ನುವುದನ್ನು ಪಾಲಕರೇ ನಿರ್ಧರಿಸುತ್ತಾರೆ. ಒಂದು ವೇಳೆ ಮಗು, ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದರೆ ನಿನ್ನಿಂದ ಅದಾಗದು ಎಂದು ಹೇಳಿ ಆ ಮಗುವಿನ ಬಾಯಿ ಮುಚ್ಚಿಸಿಬಿಡುತ್ತಾರೆ. ಒಂದು ವೇಳೆ ಆ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಅದರ ಹೊಣೆಯನ್ನು ಮಗುವಿನ ಮೇಲೆ ಹೊರಿಸಲಾಗುತ್ತದೆ.

ಮಕ್ಕಳು ತಪ್ಪು ದಾರಿ ತುಳಿಯಬಹುದು!

ಕಳೆದ ಕೆಲವು ವರ್ಷಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗಿವೆ. ಅದಕ್ಕೆ ಮುಖ್ಯ ಕಾರಣ ಹೆಲಿಕಾಪ್ಟರ್‌ ಪೇರೆಂಟಿಂಗ್‌, ಪರೀಕ್ಷೆಗಳು ಮೊದಲೂ ಕೂಡ ಸ್ಟ್ರೆಸ್‌ ಫುಲ್ ಆಗಿರುತ್ತಿದ್ದ. ಆದರೆ ಮಕ್ಕಳು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾವು ತಾಯಿ ತಂದೆಯ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಪಡೆದುಕೊಳ್ಳದಿದ್ದರೆ ಏನಾಗಬಹುದು ಎಂಬ ಚಿಂತೆ ಅವರನ್ನು ಕಾಡುತ್ತಿರುತ್ತದೆ. ಅದೇ ಚಿಂತೆಯಲ್ಲಿ ಅವರು ತಪ್ಪು ಹೆಜ್ಜೆ ಇಡುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕೋರ್ಸ್‌ ಮಾಡಿಸಿ. ನಿಮ್ಮ ಅಪೇಕ್ಷೆಯನ್ನು ಅವರ ಮೇಲೆ ಹೇರಬೇಡಿ.

ಕೆಲವು ತಾಯಿ ತಂದೆಯರಿಗೆ ತಮ್ಮ ಹೆಲಿಕಾಪ್ಟರ್‌ ಪೇರೆಂಟಿಂಗ್‌ ವಿಷಯ ತಿಳಿಯದೆ ಹೋಗಿರಬಹುದು. ಮಗು ಕೂಡ ಆ ಬಗ್ಗೆ ಏನನ್ನು ಹೇಳದೇ ಇರಬಹುದು. ಆದರೆ ಮಗು ಆ ಬಗ್ಗೆ ಹೇಗಾದರೂ ಮಾಡಿ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತದೆ. ಸಿಡಿಮಿಡಿತನದಿಂದ ವರ್ತಿಸಬಹುದು. ಇಲ್ಲಿ ಏಕಾಂಗಿಯಾಗಿ ಇರಲು ಪ್ರಯತ್ನಿಸಬಹುದು. ಊಟ, ತಿಂಡಿ ಇಲ್ಲವೇ ಓದುವುದನ್ನು ತನ್ನ ಕೋಣೆಯಲ್ಲಿಯೇ ಮಾಡುತ್ತಿರಬಹುದು. ಇವೆಲ್ಲ ಖಿನ್ನತೆಯ ಲಕ್ಷಣಗಳು.

ಎಷ್ಟೋ ಪ್ರಕರಣಗಳಲ್ಲಿ ಪೋಷಕರಿಗೆ ತಮ್ಮ ಮಗು ಬಹಳ ದಿನಗಳಿಂದ ಖಿನ್ನತೆಗೊಳಗಾಗಿದೆ ಎಂಬುದು ಗೊತ್ತೇ ಆಗುವುದಿಲ್ಲ. ಯಾವುದೇ ವಿಷಯದಲ್ಲಿ ಆಗಿರಬಹುದು, ಮಗುವಿನ ಜೊತೆಗೆ ಸಂವಹನ ನಡೆಸುವುದು ಅತ್ಯವಶ್ಯ. ಏಕೆಂದರೆ ಮಗುವಿನ ಮನದ ಮಾತುಗಳು ಗೊತ್ತಾಗಬೇಕು. ನಾವು ನಿಮ್ಮೊಂದಿಗಿದ್ದೇವೆ. ಧೈರ್ಯದಿಂದ ಮುಂದುವರಿ ಎಂದು ಮಗುವಿಗೆ ಧೈರ್ಯ ಕೊಡುವುದು ಮುಖ್ಯ.

ವನಿತಾ ಶೆಟ್ಟಿ

ಪೋಷಕರಿಗೆ ಟಿಪ್ಸ್

ಮಗು ಯಾರನ್ನು ಸ್ನೇಹಿತರನ್ನಾಗಿ ಮಾಡಿ ಕೊಳ್ಳಬೇಕು, ಯಾರನ್ನು ಮಾಡಿಕೊಳ್ಳ ಬಾರದು ಎಂಬ ಬಗ್ಗೆ ಪದೇ ಪದೇ ಅದಕ್ಕೆ ಉಪದೇಶ ಮಾಡಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆದರೆ ಆಹಾರದ ವಿಷಯದ ಬಗ್ಗೆ ಭಾಷಣ ಕೊಡಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ