“ಹಲೋ ವಿನು…. ಹೇಗಿದ್ದಿ? ನಾನು ಕಣೆ….. ಶಾಲಿ ಮಾತಾಡ್ತಿದ್ದೀನಿ….. ನಿನ್ನ ಪ್ರಾಣಸಖಿ!” ಎಂದು ಶಾಲಿನಿ ಅತಿ ಉತ್ಸಾಹದಲ್ಲಿ ಬಡಬಡ ಮಾತನಾಡಿದಳು. ಇದನ್ನು ಕೇಳಿಸಿಕೊಂಡ ವಿನುತಾಳಿಗೆ ಅರ್ಥ ಮಾಡಿಕೊಳ್ಳಲು 2 ನಿಮಿಷ ಬೇಕಾಯಿತು. ತಕ್ಷಣ ಅವಳ ನೆನಪಿನಶಕ್ತಿ ಜಾಗೃತಗೊಂಡು ಫೋನ್ ಮಾಡಿದವಳಾರೆಂದು ಗುರುತಿಸಿದಳು.
“ಅರೆ ಶಾಲಿ ನೀನಾ…..! ಇದೇನೇ ದಿಢೀರ್ ಅಂತ ಇಷ್ಟು ವರ್ಷಗಳ ಬಳಿಕ….. ನೀನು ಆ ದಿನೇಶನ್ನ ಮದುವೆಯಾಗಿ ಅಮೆರಿಕಾಗೆ ಹಾರಿದವಳು, ಅಂತೂ ನೆನಪಿಸಿಕೊಂಡು ಆಕಸ್ಮಿಕವಾಗಿ ಈಗ ಕಾಲ್ ಮಾಡಿದ್ದಿ. ನೀನು ಮೈಸೂರಿಗೆ ಬರ್ತಿದ್ದೀಯೇನೇ?” ವಿನುತಾ ತನ್ನ ಮನದ ಗಾಬರಿ ಮರೆಮಾಚುತ್ತಾ ಕೇಳಿದಳು.
“ಅಯ್ಯೋ….. ಇದೇನೇ ಇಷ್ಟೊಂದು ಪ್ರಶ್ನೆಗಳ ಮಳೆ ಸುರಿಸುತ್ತಿದ್ದಿ…. ಇರು, ಇರು…. ಒಂದೊಂದಾಗಿ ಹೇಳ್ತೀನಿ, ಈಗಷ್ಟೆ ನಿನ್ನ ಜೊತೆ ಮಾತು ಶುರು ಮಾಡಿದ್ದೀನಿ…..” ಶಾಲಿನಿ ತನ್ನ ಅಭ್ಯಾಸ ಬಲದಂತೆ ಪಕಪಕ ನಗುತ್ತಾ ಉತ್ತರಿಸಿದಳು.
“ಅದೆಲ್ಲ ಆಮೇಲಾಗಲಿ….. ಮೊದಲು ನನ್ನ ಪ್ರಶ್ನೆಗೆ ಉತ್ತರಿಸು. ನನ್ನ ಆ ಹಳೆಯ ಪ್ರಿಯತಮ ಇದ್ದನಲ್ಲ ನವೀನ್, ಅವನ ಬಗ್ಗೆ ಏನಾದರೂ ಸುದ್ದಿ ಗೊತ್ತೇನೇ…..? ಬಹುಶಃ ನನ್ನ ತರಹ ಅವನೂ ಸಹ ನಮ್ಮ ಗತಕಾಲದ ಪ್ರೇಮ ಕಾದಂಬರಿಯ ಕೆಲವು ಪುಟಗಳನ್ನು ಇಟ್ಟುಕೊಂಡಿರಬಹುದು……” ಎಂದಿನ ತನ್ನ ಕಾವ್ಯ ಧಾಟಿಯಲ್ಲಿ ಕೇಳಿದಳು ಶಾಲಿನಿ. ಇತ್ತ ಕೇಳುತ್ತಿದ್ದ ವಿನುತಾಳ ಕೈಯಿಂದ ಫೋನ್ ಜಾರುವುದರಲ್ಲಿತ್ತು.
ಅವಳು ಹೇಗೆ ಹೇಳಬಲ್ಲಳು….. ಶಾಲಿನಿಯ ಮಾಜಿ ಪ್ರಿಯಕರನೇ ಈಗ ತನ್ನ ಹಾಲಿ ಪ್ರಿಯತಮನೆಂದು…. ಯಾವ ಪ್ರೇಮ ಕಾದಂಬರಿಯ ಪುಟಗಳ ಕುರಿತು ಶಾಲಿನಿ ಹೇಳುತ್ತಿದ್ದಳೋ, ಅದೇ ಪುಟಗಳು ಇದೀಗ ಅವಳ ಬಾಳ ಡೈರಿಯ ನಿತ್ಯನೂತನ ಪುಟಗಳಾಗಿವೆ….. ಹಿಂದೆ ಶಾಲಿನಿಗೆ ಪ್ರಿಯನಾದವನು ಈಗ ಅವಳ ಪ್ರಿಯ ಗಂಡನಾಗಿದ್ದ.
ವಿನುತಾಳಿಗೆ ಯಾವ ಉತ್ತರ ಹೊಳೆಯಲ್ಲಿಲವಾಗಿ ಬೇಕೆಂದೇ “ಹಲೋ…. ಹಲೋ….” ಎನ್ನುತ್ತಾ ನೆಟ್ ವರ್ಕ್ ಸರಿ ಇಲ್ಲ ಎಂಬಂತೆ ವರ್ತಿಸಿದಳು. ಅತ್ತ ಲೈನ್ ಕಟ್ ಮಾಡಿದವಳೇ ಇತ್ತ ತಕ್ಷಣ ತನ್ನ ಫೋನ್ ಸ್ವಿಚ್ ಆಫ್ ಮಾಡಿದಳು ವಿನುತಾ. ಸದ್ಯಕ್ಕಂತೂ ಅವಳು ಶಾಲಿನಿಯ ಯಾವ ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅವಳು ಬೆಡ್ ರೂಮಿಗೆ ಬಂದು ಬುಡ ಕಡಿದ ಬಾಳೆಯ ಮರದಂತೆ ಹಾಸಿಗೆ ಮೇಲೆ ಬಿದ್ದಳು. ಅವಳಿಗೆ ಕಾಲೇಜಿನ ಜೀವನದ ಪ್ರತಿಯೊಂದು ಘಟನೆಗಳೂ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡವು.
ಡಿಗ್ರಿ ಓದುತ್ತಿದ್ದಾಗ ಶಾಲಿನಿ, ವಿನುತಾ, ನವೀನ್, ಎಲ್ಲರೂ ಸಹಪಾಠಿಗಳು. ಶಾಲಿನಿ ನವೀನ್ ಪ್ರೇಮಿಗಳು. ಅವರು ಅಂತಿಮ ವರ್ಷಕ್ಕೆ ಬರುವ ಹೊತ್ತಿಗೆ ಇವರಿಬ್ಬರ ಮದುವೆ ಸಾಧ್ಯವಿಲ್ಲವೆಂದು ಶಾಲಿನಿ ಮನೆಯವರು ಪಟ್ಟುಹಿಡಿದಿದ್ದರು. ಅದೇನಾಯಿತೋ ಏನೋ… ಹಲವು ತಿಂಗಳ ನಂತರ ಶಾಲಿನಿಯ ಮನೆಯವರು ಅವಳನ್ನು ಅಮೆರಿಕಾದಲ್ಲಿ ಕೆಲಸದಲ್ಲಿದ್ದ ಶ್ರೀಮಂತ ವರ ದಿನೇಶನೊಡನೆ ಮದುವೆಯಾಗಲು ಒಪ್ಪಿಸಿದ್ದರು. ಶಾಲಿನಿ ಈ ವಿವರ ತಿಳಿಸಿದಾಗ ವಿನುತಾಳೇ ಅವಳನ್ನು ಸಮಾಧಾನಪಡಿಸಿದ್ದಳು.
“ಆದರೆ ಶಾಲಿ…. ನೀನು ಆ ನವೀನ್ ನನ್ನು ಹೀಗೆ ಒಂದೇ ಸಲ ನಡುನೀರಲ್ಲಿ ಕೈ ಬಿಡುವುದು ಸರಿಯೇ? ಅವನಿಗಂತೂ ನಿನ್ನ ಮೇಲೆ ಅಖಂಡ ಭರವಸ ಇದೆ. ನಿನ್ನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೇಮಿಸುತ್ತಾನೆ. ಅವನು ಖಂಡಿತಾ ಹೃದಯ ಕಳೆದುಕೊಂಡು ಭಗ್ನಪ್ರೇಮಿಯಾಗಿ ಹುಚ್ಚನಾಗುತ್ತಾನೆ….. ಅವನು ಅದಕ್ಕೂ ಮಿಗಿಲಾಗಿ ತನಗೇ ಏನಾದರೂ ಮಾಡಿಕೊಂಡುಬಿಟ್ಟರೆ ಎಂದು ನನಗೆ ಬಹಳ ಹೆದರಿಕೆ…..” ವಿನುತಾ ಅಂತೂ ತನಗೆ ಗೊತ್ತಿದ್ದನ್ನೆಲ್ಲ ಹೇಳಿದ್ದಳು. ಅವರಿಬ್ಬರ ಪ್ರೇಮ ಪ್ರೀತಿಗೆ ಇವಳು ಪ್ರತ್ಯಕ್ಷ ಸಾಕ್ಷಿಯಾಗಿದ್ದಳು.
“ಅಯ್ಯೋ ಬಿಡೇ….. ಜೀವನದಲ್ಲಿ ಪ್ರಾಕ್ಟಿಕಲ್ ಆಗಿರಬೇಕು ಕಣೆ….. ದಿನೇಶ್ ನನಗೆ ವಿದೇಶದಲ್ಲಿ ಕೊಡಿಸಬಹುದಾದ ಸುಖ ಸೌಲಭ್ಯಗಳನ್ನು ಈ ನಿರುದ್ಯೋಗಿ ನವೀನ್ ಈ ದೇಶದಲ್ಲಿ ಏನೇ ಮಹಾ ಕೊಡಿಸಬಲ್ಲ? ದಿನೇಶ್ ಅಮೆರಿಕಾದ ಅತಿ ದೊಡ್ಡ ಖಾಸಗಿ ಫ್ಲೈಟ್ ಸರ್ವೀಸ್ ನಲ್ಲಿ ಸೀನಿಯರ್ ಪೈಲಟ್. ಅಂಥ ಸೊಗಸಾದ ಶ್ರೀಮಂತ ದೇಶದಲ್ಲಿ ಸ್ವಂತ ಬಂಗಲೆ, ಕಾರು, ಬೇಕಾದ ಶ್ರೀಮಂತಿಕೆ….. ಯಾರಿಗುಂಟು ಯಾರಿಗಿಲ್ಲ? ಬೇಕಾದಂತೆ ಫಾರಿನ್ ಟೂರ್ ಗೆ ಹೋಗಬಹುದು…. ಇವೆಲ್ಲವನ್ನೂ ಆ ನವೀನ್ ಕೊಡಿಸಲು ಸಾಧ್ಯವೇ? ನಿರುದ್ಯೋಗಿ ಆಗಿರುವ ಅವನು ಸೆಟಲ್ ಆಗಲು ಇನ್ನೆಷ್ಟು ಕಾಲ ಬೇಕೋ ಏನೋ…. ಅಷ್ಟು ಹೊತ್ತಿಗೆ ನನ್ನ ಯೌವನ ಉಳಿದಿರುತ್ತದೆಯೇ? ಗಾಳಿ ಬಂದಾಗ ತೂರಿಕೊಳ್ಳಬೇಕು ಕಣೆ!” ಎಂದು ಇವಳಿಗೇ ಬುದ್ಧಿವಾದ ಹೇಳಿದ್ದಳು.
“ನೋಡು ಶಾಲಿ….. ನಿನಗೆ ಏನು ಬೇಕೋ ಮಾಡಿಕೋ. ಆದರೆ ನಮ್ಮ ಫೈನಲ್ಸ್ ಮುಗಿಯುವವರೆಗೂ ಈ ವಿಷಯವನ್ನು ಖಂಡಿತಾ ನವೀನನಿಗೆ ತಿಳಿಸಬೇಡ. ಅನ್ಯಾಯವಾಗಿ ಅವನು ಮನಸ್ಸು ಕೆಡಿಸಿಕೊಂಡು ಪರೀಕ್ಷೆಯಲ್ಲಿ ಗೋತಾ ಹೊಡೆದಾನು…. ಅವನ ಭವಿಷ್ಯ ಹಾಳು ಮಾಡುವ ಹಕ್ಕು ನಿನಗಿಲ್ಲ ಕಣೆ!”
“ಆಯ್ತು ಬಿಡೆ, ನನ್ನ ಫ್ರೆಂಡ್ ನೀನಿಷ್ಟು ಕೇಳಿಕೊಂಡ ಮೇಲೆ ನಾನ್ಯಾಕೆ ಹಾಗೆ ಮಾಡಲಿ? ಅದು ಸರಿ…. ನೀನೇಕೆ ಆ ಪ್ರಾಣಿ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಿದ್ದೀಯಾ?” ಅವಳತ್ತ ಕರುಣಾ ನೋಟ ಬೀರುತ್ತಾ, ಅಟ್ಟಹಾಸದಿಂದ ಕಾಲಪ್ಪಳಿಸಿಕೊಂಡು ಹೊರಟಿದ್ದಳು ಶಾಲಿನಿ.
ಅಂತೂ ಇಂತೂ ಅಂತಿಮ ಪರೀಕ್ಷೆ ಮುಗಿದು ನವೀನ್ ಉತ್ತಮ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಇವರಿಬ್ಬರೂ ಸೆಕೆಂಡ್ ಕ್ಲಾಸ್ ಪಡೆದಿದ್ದರು. ಆಗ ಶಾಲಿನಿ ಇವರಿಬ್ಬರಿಗೂ ಹೋಟೆಲ್ ನಲ್ಲಿ ಟ್ರೀಟ್ ಕೊಡಿಸಲು ಕರೆಸಿ, ಹೊರಡುವಾಗ ಇದು ನನ್ನ ಎಂಗೇಜ್ ಮೆಂಟ್ ಟ್ರೀಟ್, ತಾನು ಮುಂದಿನ ತಿಂಗಳು ದಿನೇಶ್ ನನ್ನು ಮದುವೆಯಾಗಿ ಅಮೆರಿಕಾಗೆ ಹೋಗುತ್ತೇನೆಂದು ತಿಳಿಸಿದಳು. ವಿನುತಾ ಅಂತೂ ನವೀನ್ ಇದನ್ನು ಹೇಗೆ ತೆಗೆದುಕೊಳ್ಳುತ್ತಾನೋ ಎಂದು ಅವನನ್ನೇ ಎವೆಯಿಕ್ಕದೆ ನೋಡುತ್ತಿದ್ದಳು.
ಅವನು ನಿಸ್ತೇಜಿತನಾಗಿ ಬಿಳಚಿಕೊಂಡು ಕೇಳಿಸಿಕೊಳ್ಳುತ್ತಿದ್ದ. ಅವರಿಬ್ಬರನ್ನೂ ಅದೇ ಸಮಾಧಿ ಸ್ಥಿತಿಯಲ್ಲಿ ಬಿಟ್ಟು ಶಾಲಿನಿ ಯಾವಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದಳೋ ಇಬ್ಬರಿಗೂ ತಿಳಿಯಲಿಲ್ಲ. ವಿನುತಾ ತಾನೇ ಅದನ್ನು ಮೊದಲು ಗಮನಿಸಿದಳು. ಅಂತೂ ಇಂತೂ ಹೇಗೋ ವಿನುತಾ ಅವನನ್ನು ಅಲ್ಲಿಂದ ಹೊರಡಿಸಿಕೊಂಡೂ ರೂಮ್ ತಲುಪಿಸಿದ್ದಳು.
ಹೇಳಿದಂತೆಯೇ ಒಂದೇ ತಿಂಗಳು ಕಳೆಯುವಷ್ಟರಲ್ಲಿ ಶಾಲಿನಿ ದಿನೇಶ್ ರ ಮದುವೆಯಾಗಿ ಅವಳು ಅಮೆರಿಕಾಗೆ ಹಾರಿದ್ದಾಗಿತ್ತು. ತನ್ನ ಪ್ರೇಮ ಕಾಂದಬರಿಯ ಪುಟಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಡಿದ್ದಳು…. ಪಾಪ, ಇವಳನ್ನೇ ಸ್ಮರಿಸುತ್ತಾ ಹುಚ್ಚನಾಗುವಂತೆ ನವೀನನನ್ನು ನಡುನೀರಲ್ಲಿ ಕೈ ಬಿಟ್ಟಿದ್ದಳು. ಅವನನ್ನು ವಿನುತಾ ಸಂಭಾಳಿಸಿಕೊಂಡಿದ್ದೇ ಅಲ್ಲದೆ, ಶಾಲಿನಿಯ ನೆನಪಿನಿಂದ ಹೊರಬಂದು ಅವನು ಮತ್ತೆ ಸಾಮಾನ್ಯನಾಗಿ ಎಲ್ಲರಂತೆ ಕೆಲಸ ಹುಡುಕಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೆನ್ನೆಲುಬಾಗಿ ನಿಂತಳು.
ಕೆಲಸಕ್ಕೆ ಸೇರಿ ಇನ್ನೂ ಹಂತ ಹಂತವಾಗಿ ಮೇಲೇರಿ ತಾನೂ ಶ್ರೀಮಂತಿಕೆಯ ಮೆಟ್ಟಿಲೇರಬಲ್ಲೆ ಎಂದು ನಿರೂಪಿಸಲೆಂಬಂತೆ ಅವನು ಉನ್ನತ ವ್ಯಾಸಂಗ ಮುಂದುವರಿಸಿ ಪಿ.ಎಚ್.ಡಿ. ಸಹ ಮಾಡಿಕೊಂಡ. ಹೆಸರಾಂತ ಖಾಸಗಿ ಕಾಲೇಜೊಂದರಲ್ಲಿ ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥನಾಗಿ ಸೇರಿ, ಉನ್ನತ ವರ್ಗದಲ್ಲಿ ಗುರುತಿಸಿಕೊಂಡ. ಅವನ ಆದಾಯ ಈಗ ಶಾಲಿನಿ ಕಡೆಗಣಿಸುವಂತಿರಲಿಲ್ಲ.
ತನ್ನೆಲ್ಲ ಇಂದಿನ ಶ್ರೇಯಸ್ಸಿಗೆ ಕಾರಣಕರ್ತಳಾದ ಸಹಪಾಠಿ ವಿನುತಾಳಿಗೆ ಅತ್ಯಂತ ಕೃತಜ್ಞನಾದ ನವೀನ್, ಅವಳನ್ನು ಮದುವೆಯಾಗುವೆನೆಂದು ಪ್ರಪೋಸ್ ಮಾಡಿದಾಗ, ಅವಳು ಹೇಗೆ ತಾನೇ ಬೇಡವೆಂದಾಳು? ಇಬ್ಬರೂ ಮನೆಯವರ ಒಪ್ಪಿಗೆ, ಆಶೀರ್ವಾದದೊಂದಿಗೆ ಅವರ ವಿವಾಹ ವೈಭವವಾಗಿ ನಡೆದಿತ್ತು. ಅವರಿಬ್ಬರ ನಡುವೆ ಈಗ ಬಿಡಿಸಲಾರದ ಒಲವಿನ ಬಾಂಧವ್ಯ ಬೆಳೆದಿತ್ತು. ಅದೂ ಧರ್ಮ ಸಮ್ಮತವಾಗಿ. ಅಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗ್ ಆದಾಗ ಅವಳು ತಡಬಡಿಸುತ್ತಾ, ಫೋನ್ ರಿಸೀವ್ ಮಾಡಿದಳು.
“ಅರೆ ಏನಾಯ್ತು ವಿನು…. ನಿನ್ನ ಆರೋಗ್ಯ ಸರಿ ಇಲ್ಲವೇ? 2 ಸಲ ಮೊಬೈಲ್ ಗೆ ಮಾಡಿ ಈಗ ಇಲ್ಲಿಗೆ ಮಾಡಿದೆ…. ಹುಷಾರಾಗಿದ್ದಿ ತಾನೇ….” ಪ್ರೀತಿಯಿಂದ ಕೇಳಿದ ನವೀನ್. ಗಂಡನ ಮಾತಿನಲ್ಲಿದ್ದ ಕಳಕಳಿ ಅವಳ ಹೃದಯ ಮುಟ್ಟಿತು.
“ಓ…. ಮೊಬೈಲ್ ಸ್ವಿಚ್ ಆಫ್ ಬಂತೇ? ನಾನು ಗಮನಿಸಿಕೊಳ್ಳದೆ ಚಾರ್ಜ್ ಖಾಲಿ ಆಗಿರಬೇಕು. ಹಾಗೇ ಮಲಗಿಬಿಟ್ಟಿದ್ದೆ,” ವಿನುತಾ ಏನೋ ಸಮಜಾಯಿಷಿ ನೀಡಿದಳು.
“ವಿನು ಕೇಳಿಲ್ಲಿ…. ನಾನು ಮಧ್ಯಾಹ್ನ 3 ಗಂಟೆ ಮೇಲೆ ಒಂದು ಸೆಮಿನಾರ್ ಗಾಗಿ ಮುಂಬೈಗೆ ಹೊರಡಬೇಕಿದೆ. ನಮ್ಮ ಡಿಪಾರ್ಟ್ ಮೆಂಟ್ ಡ್ರೈವರ್ ಮನೆಗೆ ಬರುತ್ತಾನೆ. ಹಾಗೆ 2-3 ದಿನಗಳಿಗಾಗುವಷ್ಟು ಬಟ್ಟೆಬರೆ ಪ್ಯಾಕ್ ಮಾಡಿಬಿಡು ಪ್ಲೀಸ್. ಸಂಜೆ ಮನೆಗೆ ಬರಲಾಗುತ್ತಿಲ್ಲ. ಒಂದು ಅರ್ಜೆಂಟ್ ಮೀಟಿಂಗ್ ಇದೆ ಪ್ಲೀಸ್,” ಎಂದು ಹೇಳಿದ.
ಹೀಗೆ ಯಾವಾಗಲಾದರೂ ನವೀನ್ ಟೂರ್ ಗೆ ಹೊರಡುವುದಿತ್ತು. ಪ್ರತಿ ಸಲ ಗಂಡನನ್ನು ಕಳುಹಿಸಿಡುವಾಗ ಮನಸ್ಸು ಭಾರವಾಗುತ್ತಿತ್ತು. ಆದರೆ ಈ ಬಾರಿ ತುಸು ನಿರಾಳವಾಗಿಯೇ ಪ್ಯಾಕಿಂಗ್ ಆರಂಭಿಸಿದಳು. ಏಕೆಂದರೆ ಈ ಸಂದಿಗ್ಧದ ಸಮಯದಲ್ಲಿ ಅವಳು ತುಸು ಏಕಾಂತ ಬಯಸಿದಳು. ಶಾಲಿನಿ ಹೇಳಿದ ಕಗ್ಗಂಟಾದ ವಿಷಯ ಎಲ್ಲಿಗೆ ಮುಂದುವರಿಯಲಿದೆ ಎಂದು ಅದನ್ನು ಬಿಡಿಸಲು ಸಮಯಾಕಾಶಕ್ಕಾಗಿ ಕಾಯತೊಡಗಿದಳು.
`ಅವಳೇನಾದರೂ ಇಲ್ಲಿಗೆ ಮನೆ ನೋಡಲೆಂದು ಮೈಸೂರಿಗೆ ಬಂದುಬಿಟ್ಟರೆ…..? ತನ್ನ ಪತಿ, ಮಕ್ಕಳನ್ನು ಪರಿಚಯಿಸಬೇಕಾಗಿ ಬಂದರೆ….? ಶಾಲಿನಿಗೆ ಏನು ಹೇಳಿ ಸಮಾಧಾನಪಡಿಸಲಿ? ನವೀನನನ್ನು ಮದುವೆಯಾಗಿ ತಾನು ತಪ್ಪು ಮಾಡಿದೆನೇ……’ ಎಂದು ಯೋಚಿಸತೊಡಗಿದಳು. ಅಂತೂ ಪ್ಯಾಕಿಂಗ್ ಮುಗಿಸಿ, ಡ್ರೈವರ್ ಕೈಲಿ ಸಾಹೇಬರಿಗೆ ತಲುಪಿಸುವಂತೆ ಒಂದಿಷ್ಟು ತಿಂಡಿ, ಹಣ್ಣುಹಂಪಲು ಸಹ ಕೊಟ್ಟು ಕಳುಹಿಸಿದಳು.
ಅವಳ ಮನದಲ್ಲಿದ್ದ ಗಾಬರಿಯೇ ನಿಜವಾಯಿತು ಎಂಬಂತೆ ಮಾರನೇ ಮಧ್ಯಾಹ್ನ ಶಾಲಿನಿ ಮತ್ತೆ ಫೋನ್‌ಮಾಡಿದಳು. ಅವಳ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಲು ವಿನುತಾ ಈಗ ಸಿದ್ಧಳಾಗಿದ್ದಳು.
“ಅಲ್ಲ ವಿನು….. ನೀನೆಂಥ ಕಿಲಾಡಿ ನೋಡೆ! ನಾನು ತಟ್ಟೆ ಮುಚ್ಚಿರಿಸಿ ಹೊರಗೆ ಹೋಗಿದ್ದರೆ ನೀನು ಅದರಲ್ಲಿದ್ದದ್ದನ್ನು ಬಳಿದು ಬಾಯಿಗೆ ಹಾಕಿಕೊಳ್ಳುವುದೇ? ಈಗ ತಾನೇ ನವೀನನ ಫೇಸ್ ಬುಕ್ ನೋಡುತ್ತಿದ್ದಾಗ, ನೀನೇ ಅವನ ಹೆಂಡತಿ ಅಂತ ಗೊತ್ತಾಯಿತು. ನಿನ್ನ ಮನದಲ್ಲಿ ಎಷ್ಟು ಗಿಲ್ಟಿ ನೋಡು….. ನಿನ್ನೆ ಅದರ ಬಗ್ಗೆ ಸ್ವಲ್ಪ ಕೂಡ ಸುಳಿವೂ ಕೊಡಲಿಲ್ಲ…. ಮಹಾ ಛತ್ರಿ ಕಣೆ ನೀನು!”
“ನಾನು ಛತ್ರಿನೂ ಅಲ್ಲ, ಕಿಲಾಡೀನೂ ಅಲ್ಲ! ನಿನ್ನ ತಟ್ಟೆಯಲ್ಲಿದ್ದುದನ್ನು ಕಿತ್ತುಕೊಳ್ಳುವ ಬುದ್ಧಿ ನನಗಿರಲಿಲ್ಲ. ಯಾವುದನ್ನು ನೀನು ಹೊಸಕಿ ಹೀನಾಯ ಎಂದು ಎಸೆದಿದ್ದೋ ಆ ಹೂ ಬಾಡಿ ಹೋಗುವುದರಲ್ಲಿತ್ತು….. ಅದಕ್ಕೆ ಮರುಜೀವ ನೀಡಿ ಮಾಲೆ ಮಾಡಿ ಧರಿಸಿದ್ದೇನೆ ಅಷ್ಟೆ. ಈಗ ಅದರ ಫಲ ನನ್ನ ಮಡಿಲಿಗೆ ಬಿದ್ದಿದೆ… ಇರಲಿ, ಆ ವಿಷಯ ಬಿಡು….. ನಿನ್ನ ಜೀವನ ಈಗ ಹೇಗೆ ನಡೆಯುತ್ತಿದೆ? ನೀನು ಅಮೆರಿಕಾದಿಂದ ಯಾವಾಗ ಇಲ್ಲಿಗೆ ಬಂದೆ? ಮೈಸೂರಿಗೆ ಬರ್ತಿದ್ದೀಯಾ? ಒಬ್ಬಳೇ ಬಂದಿದ್ದೀಯಾ ಅಥವಾ ದಿನೇಶ್ ಸಹ ಬಂದಿದ್ದಾರಾ?”
“ಒಬ್ಬಳೇ ಬಂದಿದ್ದೀನಿ…. ಮೈಸೂರಿನ ತವರಿಗೆ ಶಾಶ್ವತವಾಗಿ ಬರುತ್ತಿದ್ದೀನಿ…. ನಮ್ಮ ವಿಚ್ಛೇದನ ಆಗಿಹೋಯ್ತು.”
“ಅದು ಹೇಗೆ? ದಿನೇಶನ ಸಂಬಂಧ ನಿನ್ನ ಲೆಕ್ಕದಲ್ಲಿ ಪರ್ಫೆಕ್ಟ್ ಆಗಿತ್ತಲ್ಲ…..”
“ಅದೆಲ್ಲ ಹೇಳಲಿಕ್ಕೆ ಚೆನ್ನ ಅಷ್ಟೆ….. ದೂರದ ಬೆಟ್ಟ ನೋಡಲು ನುಣ್ಣಗೆ ಅನ್ನುವುದನ್ನು ಮರೆಯಬಾರದು. ದಿನೇಶ್ ಸಹ ಹೊರಗಿನಿಂದ ಭಾರಿ ಮಾಡರ್ನ್ ವ್ಯಕ್ತಿ….. ಆದರೆ ಒಳಗೆ ಮಾತ್ರ….. ಟಿಪಿಕಲ್ ಇಂಡಿಯನ್ ಹಸ್ಬೆಂಡ್…. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ, ಅವರಿವರ ಜೊತೆ ಮಾತಾಡಬೇಡ….. ಬೇಕು, ಬೇಡಗಳ ದೊಡ್ಡ ಲಿಸ್ಟ್ ಫಾಲೋ ಮಾಡಿಸುತ್ತಾನೆ. ಇದನ್ನೆಲ್ಲ ಹೆಣಗಿ ಹೆಣಗಿ ನನಗೆ ರೋಸಿಹೋಯಿತು.
“ಪಾರ್ಟಿಯ ನೆಪದಲ್ಲಿ ಹೊರಗೆ ಕುಣಿಯುವುದು, ಸುತ್ತಾಡೋದು, ಕಂಡೋಳ ಜೊತೆ ಸರಸ ಆಡುವುದು…. ನಾನು ಸೋಶಿಯಲ್ ಆಗಿ ಯಾರ ಜೊತೆಯಲ್ಲಾದರೂ ಮಾತನಾಡಿದರೆ ಇವನಿಗೆ ಮೈಯೆಲ್ಲ ಉರಿ ಉರಿ….. ನಾನು ಮಾತ್ರ ಗರತಿ ಗಂಗಮ್ಮನಂತೆ ಸದಾ ಮನೆಯಲ್ಲೇ ಇವನ ಹಾದಿ ಕಾಯುತ್ತಾ ಬಿದ್ದಿರಬೇಕು…. ನನಗೂ ಸಾಕಾಗಿ ಸಿಕ್ಕಾಪಟ್ಟೆ ಜಗಳ ಆಡಿದೆ…. ಇದು ಹೆಚ್ಚು ದಿನ ನಡೆಯಲ್ಲ ಅಂತ ಕೊನೆಗೆ ಒಪ್ಪಿಗೆಯಿಂದ ನಾವು ಡೈವೋರ್ಸ್ ಪಡೆದೆವು….. ಇನ್ನು ಶಾಶ್ವತವಾಗಿ ಮೈಸೂರಿನಲ್ಲಿ ಠಿಕಾಣಿ ಹೂಡುವುದೇ!”
`ಛೇ….ಛೇ…. ಈ ಮಹಾತಾಯಿ ಮೈಸೂರಿಗೆ ಬಂದಿಳಿದ ಮೇಲೆ ನವೀನನನ್ನು ಭೇಟಿ ಆಗದೆ ಇರಲಾರಳು. ಇವರಿಬ್ಬರ ಹಳೆಯ ರೊಮಾನ್ಸ್ ಮತ್ತೆ ಚಿಗುರಿಕೊಂಡರೆ ಕಷ್ಟ…… ಯಾರೂ ತಮ್ಮ ಮೊದಲ ಪ್ರೇಮವನ್ನು ಮನಸ್ಸಿನಾಳದಿಂದ ಕಿತ್ತು ಹಾಕುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಹೋದರೆ ನಾನು ಏನು ಮಾಡುವುದು?’ ಇದೇ ಯೋಚನೆಯಲ್ಲಿ ಅವಳು ಬಸವಳಿದಳು.
ವಿನುತಾಳ ಮನದಲ್ಲಿ ಸಂದೇಹದ ಕಾರ್ಮೋಡ ಕವಿಯತೊಡಗಿತು. ಅವಳ ಸಂದೇಹ ನಿಜವಾಯಿತು ಎಂಬಂತೆ ಅವಳು ಫೇಸ್ ಬುಕ್ ಫಾಲೋ ಮಾಡುತ್ತಿದ್ದಾಗ ನೋಡಿದಳು, `ನವೀನ್ ಬಿಕಮ್ಸ್ ಫ್ರೆಂಡ್ ಆಫ್ ಶಾಲಿನಿ!’
`ಓಹ್…. ನವೀನ್ ಇದನ್ನು ನನಗೆ ಹೇಳಲೇ ಇಲ್ಲವಲ್ಲ…… ಬಹುಶಃ ಶಾಲಿನಿ ಇವರನ್ನು ಭೇಟಿ ಆಗಿರಲೂಬಹುದು….’ ವಿನುತಾಳ ಮನದಲ್ಲಿ ಸಂದೇಹದ ನಾಗ ಹೆಡೆಯಾಡಿತು. ತನ್ನ ಈ ಮನದ ತಳಮಳನ್ನು ಅವಳು ಯಾರೊಂದಿಗೂ ಹಂಚಿಕೊಳ್ಳಲಾರಳು. ಅವಳ ಅಂತರಾಳದ ಭಾವ ನಡತೆಯಲ್ಲಿ ಕಾಣತೊಡಗಿತು. ಹೀಗಾಗಿ ಅವಳ ವ್ಯವಹಾರವೆಲ್ಲ ಒರಟೊರಟಾಯಿತು. ನವೀನ್ ಎಂದಿನಂತೆ ಅವಳ ಜೊತೆ ಸಹಜವಾಗಿ ವರ್ತಿಸುತ್ತಾ ನಗಿಸಲು ಯತ್ನಿಸಿದರೂ ಅವಳು ಪ್ರತಿಕ್ರಿಯೆ ತೋರುತ್ತಿರಲಿಲ್ಲ.
“ನಿನಗೆ ಗೊತ್ತಾ ವಿನು…. ಶಾಲಿನಿ ಈಗ ಮೈಸೂರಿಗೇ ಬಂದುಬಿಟ್ಟಿದ್ದಾಳಂತೆ!” ನವೀನ್ ಶಾಕಿಂಗ್ ನ್ಯೂಸ್ ಎಂಬಂತೆ ಹೇಳತೊಡಗಿದ.
“ಹ್ಞೂಂ…. ಮೊನ್ನೆ 2 ದಿನಗಳ ಹಿಂದೆ ಅವಳು ನನಗೂ ಫೋನ್ ಮಾಡಿದ್ದಳು. ಆದರೆ…. ನಿನಗೆ ಯಾರು ಹೇಳಿದರು?” ವಿನುತಾ ಅವನ ಕಂಗಳನ್ನೇ ದಿಟ್ಟಿಸುತ್ತಾ ಕೇಳಿದಳು. ಅವನ ಕಂಗಳಲ್ಲಿ ಯಾವುದೇ ಕಪಟತನ ಇರಲಿಲ್ಲ. ಬದಲಿಗೆ ಅವನ ಕಂಗಳಲ್ಲಿ ಎಂದಿನ ವಿಶ್ವಾಸದ ಕಾಂತಿಯಿತ್ತು.
“ಇವತ್ತು ಅಚಾನಕ್ಕಾಗಿ ಅವಳೇ ನನಗೆ ಫೋನ್ ಮಾಡಿದ್ದಳು. ಇದೇನು….. ಲೋಕಲ್ ನಲ್ಲಿ ಇವಳ ಧ್ವನಿ ಕೇಳಿಸುತ್ತಿದೆಯಲ್ಲ ಅಂತ ಆಶ್ಚರ್ಯವಾಯಿತು. ತನಗೆ ಟೈಂಪಾಸ್ ಗಾಗಿ ಎಲ್ಲಾದರೂ ಕೆಲಸ ಕೊಡಿಸು ಎಂದು ಸಹಾಯಕ್ಕಾಗಿ ಫೋನ್ ಮಾಡಿದ್ದಳು.”
“ಮತ್ತೆ…… ನೀನೇನು ಹೇಳಿದೆ?”
“ನೋಡೋಣ, ಪರಿಚಿತರಿಗೆ ಹೇಳಿ ಟ್ರೈ ಮಾಡ್ತೀನಿ ಅಂದೆ.”
“ಅಂಥ ಕೊಳಕು ಕೆಸರಿನಲ್ಲಿ ಮತ್ತೆ ಸಿಲುಕಿಕೊಳ್ಳುವ ಕಷ್ಟ ನಿನಗೇಕೆ?” ಅವಳ ಧ್ವನಿ ತುಸು ಏರಿತ್ತು.
“ಅಯ್ಯೋ…. ಮಾನವೀಯತೆ ಅಂತ ಒಂದಿದೆಯಲ್ಲ, ಆಗಲಿ ನೋಡೋಣ ಎಂದೆ ಅಷ್ಟೆ. ಅದೆಲ್ಲ ಹೋಗಲಿ, ಒಳ್ಳೆ ಬಿಸಿ ಕಾಫಿ ಕೊಡು ಮಾರಾಯ್ತಿ. ಯಾಕೋ ತಲೆ ನೋಯ್ತಿದೆ,” ಎಂದು ಮಾತು ಮುಗಿಸಿದ.
ಆದರೆ ಈ ವಿಷಯ ಅಷ್ಟಕ್ಕೆ ಮುಗಿಯುವಂಥದೇ? ವಿನುತಾಳ ಕಿವಿಯಲ್ಲಿ ಶಾಲಿನಿಯ ಚಾಲೆಂಜಿಂಗ್ ಗಡಸು ದನಿಯೇ ಮೊಳಗುತ್ತಿತ್ತು. ಆದರೆ ಈಗ ಶಾಲಿನಿಯಿಂದ ಅವಳಿಗೆ ಫೋನ್ ಕರೆ ಬರುತ್ತಿರಲಿಲ್ಲ. ಈ ವಿಷಯ ಸಹ ಅವಳ ನೆಮ್ಮದಿಗೆ ಭಂಗ ತಂದಿತ್ತು.
`ಬಹುಶಃ ಈಗ ನೇರವಾಗಿ ನವೀನನಿಗೇ ಫೋನ್ ಮಾಡುತ್ತಿರಬೇಕು ಅನ್ಸುತ್ತೆ…. ಈಗ ಇವರಿಬ್ಬರ ಹಳೆಯ ಕಥೆ ಶುರುವಾದರೆ ನಾನೇ ಇವರಿಬ್ಬರ ಮಧ್ಯೆ ಶಿವ ಪೂಜೇಲಿ ಕರಡಿ ಬಿಟ್ಟಂತೆ ಆಗಿಬಿಡುತ್ತೇನೆ,’ ಎಂದು ವಿನುತಾ ತಾನೇ ಚಿಂತೆಗೊಳ್ಳುತ್ತಿದ್ದಳು. ಈ ಕಾರಣ ಆಗಾಗ ಅವಳ ಆರೋಗ್ಯ ಹದಗೆಡತೊಡಗಿತು.
ನವೀನ್ ಮಾರನೇ ದಿನ ಸಂಜೆ ಆಫೀಸಿನಿಂದ ಬಂದ ಮೇಲೆ ಹೇಳಿದ, “ನನ್ನ ಫ್ರೆಂಡ್ ಮೂಲಕ ಮೈಸೂರಿನ ಅರಮನೆ ಬಳಿಯ ಖ್ಯಾತ ಖಾಸಗಿ ಹೋಟೆಲ್ ನಲ್ಲಿ ಶಾಲಿನಿಗೆ ಎಚ್.ಆರ್ ವಿಭಾಗದಲ್ಲಿ ಕೆಲಸ ಕೊಡಿಸಿದೆ. ಅದೇ ಖುಷಿಯಲ್ಲಿ ಅವಳು ನಮ್ಮಿಬ್ಬರಿಗೂ ಸಂಜೆ ಅದೇ ಹೋಟೆಲ್ ನಲ್ಲಿ ಟ್ರೀಟ್ ಕೊಡಬೇಕು ಅಂತಿದ್ದಾಳೆ. ಬೇಗ ತಯಾರಾಗು ಹೊರಡೋಣ.”
“ಈ ಪಾರ್ಟಿಗೆ ನಾನು ಬರಲೇಬೇಕೇ?”
“ಇತ್ತೀಚೆಗೆ ನಿನಗೆ ಹೊರಗಿನ ಊಟತಿಂಡಿ ಸೇರೋದೇ ಇಲ್ಲ ಅಂತಿರ್ತೀಯಾ… ನೋಡು, ಬರುವ ಹಾಗಿದ್ದರೆ ಬೇಗ ರೆಡಿಯಾಗು,” ಅವನ ಮಾತಿನಲ್ಲಿ ಬರಲೇಬೇಕೆಂಬ ಬಲವಂತ ಕಾಣಲಿಲ್ಲ. ವಿನುತಾ ಪ್ರತಿಭಟಿಸುವ ಹಾಗೂ ಇರಲಿಲ್ಲ. ಸೋತ ಯೋಧನಂತೆ ತನ್ನ ಕೈಜಾರಿ ದೂರ ಸರಿಯುತ್ತಿರುವ ಗಂಡನತ್ತ ಅಸಹಾಯಕಳಾಗಿ ನೋಡತೊಡಗಿದಳು.
ಕ್ರಮೇಣ ವಿನುತಾ ಮೌನ ವಹಿಸುತ್ತಾ ತನ್ನಲ್ಲೇ ಅಡಗಿಹೋದಳು. ಆದಷ್ಟು ಗಂಡನಿಂದ ದೂರವೇ ಇರುವ ಪ್ರಯತ್ನ ಮಾಡತೊಡಗಿದಳು. ಅವರಿಬ್ಬರ ನಡುವೆ ಶೀತಲತೆ ಹೆಚ್ಚತೊಡಗಿತು. ತಾನು ಎಂದಿದ್ದರೂ ಅವನಿಂದ ವಿಚ್ಛೇದನ ಪಡೆಯಬೇಕಾದವಳೇ ಅಂತ ಅದಕ್ಕಾಗಿ ಮಾನಸಿಕವಾಗಿ ಸಿದ್ಧಳಾಗತೊಡಗಿದಳು. ಯಾಕೋ ಅವಳಿಗೆ ಆರೋಗ್ಯ ಸರಿ ಇಲ್ಲ, ಸಾಧ್ಯವಾದಷ್ಟೂ ವಿಶ್ರಾಂತಿ ಪಡೆಯಲಿ ಎಂದು ಅದನ್ನು ಸಹಜವಾಗಿಯೇ ತೆಗೆದುಕೊಳ್ಳುತ್ತಿದ್ದ. ಎಂದಿನಂತೆ ಆಫೀಸಿನಿಂದ ಬಂದ ಮೇಲೆ ಅಲ್ಲಿನ ಸ್ವಾರಸ್ಯಕರ ವಿಷಯಗಳಿದ್ದರೆ ಹಂಚಿಕೊಳ್ಳುತ್ತಿದ್ದ. ಇತ್ತೀಚೆಗೆ ಅವನ ಮಾತುಗಳಲ್ಲಿ ಶಾಲಿನಿಯ ಕುರಿತಾಗಿಯೂ ವಿಷಯ ಇರುತ್ತಿತ್ತು. ಒಮ್ಮೊಮ್ಮೆ ಅವಳೇ ಇವನ ಆಫೀಸಿಗೆ ಬರುತ್ತಿದ್ದರೆ, ನವೀನ್ ಸಹ ಅವಳನ್ನು ಭೇಟಿ ಆಗಲು 1-2 ಸಲ ಅವಳ ಹೋಟೆಲ್ ಗೆ ಹೋಗುತ್ತಿದ್ದನಂತೆ.
ನವೀನ್ ನಡೆಯುತ್ತಿದ್ದ ಸಮಸ್ತ ವಿಷಯಗಳನ್ನೂ ನಿಷ್ಕಲ್ಮಶವಾಗಿ ಹೇಳಿಕೊಳ್ಳುತ್ತಿದ್ದರೂ ವಿನುತಾಳ ಸಂದೇಹ ಕಡಿಮೆ ಆಗಲಿಲ್ಲ. ಹೀಗೆ ಕೊರಗಿ ಕೊರಗಿ ಕೊನೆಗೊಮ್ಮೆ ತೀರಾ ಲೋ ಬಿಪಿ ಆಗಿ ಅವಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆದಳು. ನವೀನ್ ಈಗ ನಿಜವಾಗಲು ಗಾಬರಿಗೊಂಡ. ಚೆನ್ನಾಗಿಯೇ ನಸುನಗುತ್ತಾ ನೆಮ್ಮದಿಯಾಗಿದ್ದ ವಿನುತಾಳ ಮನಶ್ಶಾಂತಿ ಈ ಪರಿ ಹದಗೆಟ್ಟಿದ್ದೇಕೆ ಎಂದೇ ಅವನಿಗೆ ತಿಳಿಯಲಿಲ್ಲ. ಕೆಲವು ದಿನಗಳಿಂದ ಏನೋ ಅನಾರೋಗ್ಯ ಇತ್ತು ಸರಿ, ಆದರೆ ಆಸ್ಪತ್ರೆ ಸೇರುವಷ್ಟು ಅವಳು ಮನಸ್ಸು ಕೆಡಿಸಿಕೊಂಡಿದ್ದೇಕೋ ಅವನಿಗೆ ತಿಳಿಯಲಿಲ್ಲ. ಅವನು ಪ್ರಾಮಾಣಿಕವಾಗಿ ಅವಳನ್ನು ಪ್ರೀತಿಸುತ್ತಿದ್ದ. ಹೀಗಾಗಿ ಬಲು ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ಕೊಡಿಸಿದ. ನವೀನ್ ಇಲ್ಲದ ಸಂದರ್ಭ ನೋಡಿಕೊಂಡು ಶಾಲಿನಿ ಇದ್ದಕ್ಕಿದ್ದಂತೆ ಧೂಮಕೇತು ತರಹ ಅಲ್ಲಿ ಪ್ರತ್ಯಕ್ಷಳಾದಳು.
“ಥ್ಯಾಂಕ್ಸ್ ವಿನು….. ನಿನ್ನ ಕಾಯಿಲೆ ನನ್ನ ದಾರಿ ಸುಗಮ ಮಾಡಿದೆ. ನೀನು ನವೀನನನ್ನು ಬಿಟ್ಟು ಎಷ್ಟು ಬೇಗ ದೂರ ಆಗುತ್ತಿಯೋ ಅವನು ಅಷ್ಟೇ ಬೇಗ ಮತ್ತೆ ನನ್ನನಾಗುತ್ತಾನೆ!” ಶಾಲಿನಿ ಯಾವ ಸಂಕೋಚ ಇಲ್ಲದೆ ಇವಳ ಎದುರಿಗೇ ಹೇಳಿದಳು. ಅಷ್ಟು ಸಾಲದೆಂಬಂತೆ ತಾನು ಅವನೊಂದಿಗೆ ತೆಗೆಸಿಕೊಂಡಿದ್ದ ಸೆಲ್ಛಿಗಳು, ನಸುನಗುತ್ತಾ ಮಾತನಾಡುತ್ತಿದ್ದ ಫೋಟೋಗಳನ್ನೂ ತೋರಿಸಿ ಶಾಲಿನಿ ವಿನುತಾಳ ಮನನೋಯಿಸಲು ಇನ್ನಷ್ಟು ಯತ್ನಿಸಿದಳು. ಶಾಲಿನಿಯ ಕೆಲವು ಕಲ್ಪನೆಯ ಮಾತುಗಳನ್ನೂ ಕೇಳಿಸಿಕೊಂಡು ಈಗಾಗಲೇ ಅವರು ಒಂದಾಗಿದ್ದಾರೆಂದು ವಿನುತಾ ಸಂಪೂರ್ಣ ಹತಾಶಳಾದಳು.
ಅವಳು ಅತ್ತ ಹೋದ ಮೇಲೆ ಇತ್ತ ಬಂದ ಗಂಡನನ್ನು ಕಂಡು, “ನವೀನ್, ನೀನು ಆದಷ್ಟು ಬೇಗ ಶಾಲಿನಿಯನ್ನು ಮದುವೆ ಆಗಿಬಿಡು. ನನ್ನಿಂದ ಡೈವೋರ್ಸ್ ಪಡೆಯಬೇಕೆಂಬ ತಲೆನೋವು ಇಲ್ಲ. ಇನ್ನೂ ಕೆಲವೇ ದಿನ….. ನಾನು ಆಸ್ಪತ್ರೆಯಿಂದ ಮನೆಗೆ ಬರುವ ಗ್ಯಾರಂಟಿ ಇಲ್ಲ…. ಹೀಗೆ ಪರಲೋಕ ಸೇರುತ್ತೇನೆ….”
ನವೀನನಿಗಂತೂ ಹೆಂಡತಿಯ ಮಾತುಗಳ ತಲೆಬುಡ ಅರ್ಥವಾಗಲಿಲ್ಲ. “ಇದೇನು ಮಾತನಾಡುತ್ತಿರುವೆ? ವಿನು….. ಹುಚ್ಚಿ ತರಹ ಹೀಗೇಕೆ ಬಡಬಡಿಸುತ್ತಿರುವೆ? ಇದರ ಮಧ್ಯೆ ಆ ಶಾಲಿ ಎಲ್ಲಿಂದ ಬಂದಳು? ಏನು ಹೇಳುತ್ತಿರುವೆ ನೀನು…. ನನಗೇನೂ ತಿಳಿಯುತ್ತಿಲ್ಲ…..”
“ನೀನು ನನ್ನ ಬಳಿ ಏನೂ ಮುಚ್ಚಿಡಬೇಕಾದ ಅನಿವಾರ್ಯತೆ ಇಲ್ಲ ನವೀನ್. ಶಾಲಿನಿ ಅರ್ಧ ಗಂಟೆ ಹಿಂದೆ ಇಲ್ಲಿಗೆ ಬಂದಿದ್ದಳು, ಎಲ್ಲಾ ವಿಷಯವನ್ನೂ ಬಿಡಿಸಿ ಹೇಳಿದಳು. ಅವಳ ಮಾತು ಮುಗಿಯು ಮುನ್ನವೇ ಕಣ್ಣೀರು ಧಾರೆಯಾಗಿ ಹರಿಯತೊಡಗಿತು.
“ನೀನೆಂಥ ಮಾತು ಹೇಳುತ್ತಿರುವೆ ವಿನು….. ಆ ತಲೆ ಕೆಟ್ಟ ಶಾಲಿ ಮಾತು ಕೇಳಿಕೊಂಡು ಅದೇ ನಿಜ ಅಂತ ಭಾವಿಸಿದೆಯಾ? ನನ್ನ ಮಾತು ಕೇಳಿಸಿಕೊಳ್ಳುವ ಸಹನೆ ಇಲ್ಲವೇ? ನಿನ್ನ ನವೀನ್ ಬಗ್ಗೆ ನಿನಗೆ ಇಷ್ಟೇನಾ ನಂಬಿಕೆ? ಅರೆ….. ಇಂಥ ಒಬ್ಬ ಶಾಲಿನಿ ಅಲ್ಲ, ಸಾವಿರ ಶಾಲಿನಿಯರು ಬಂದರೂ ನಾನೆಂದೂ ನಿನ್ನವನು! ಬಹುಶಃ ಬಹುಶಃ….. ನೀನು ನನ್ನ ಪ್ರೀತಿಯಲ್ಲಿ ಏನೋ ಕೊರತೆ ಕಂಡಿರಬೇಕು, ಅದಕ್ಕೆ ಅವಳ ಬಣ್ಣದ ಮಾತುಗಳನ್ನು ನಿಜ ಅಂತ ಭಾವಿಸಿರುವೆ….. ಇದರಲ್ಲಿ ನಿನ್ನ ತಪ್ಪೇನೂ ಇಲ್ಲ….. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ವಿನು, ನಿನ್ನ ಮನಸ್ಸಿನಲ್ಲಿ ಕೊರಗು ಮೂಡಿಸಿ ನಿನ್ನ ಆರೋಗ್ಯ ಈ ಮಟ್ಟಕ್ಕೆ ಹದಗೆಡಲು ನಾನೇ ಕಾರಣನಾದೆನೇ…?” ಅವನ ಮಾತು ಮುಗಿಯುವಷ್ಟರಲ್ಲಿ ಕಂಗಳು ತುಂಬಿ ಬಂದಿದ್ದವು.
“ಅಯ್ಯೋ….. ನನ್ನನ್ನು ದಯವಿಟ್ಟು ಕ್ಷಮಿಸಿ ಬಿಡು ನವೀನ್….. ಇದೇ ಮಾತುಗಳನ್ನು ನನ್ನ ಮನಸ್ಸಿಗೆ ನಾನು ಸಾವಿರ ಸಲ ಹೇಳಿಕೊಂಡಿದ್ದೇನೆ. ಆದರೆ ನನ್ನ ಅಂತರ್ಮನ ಒಪ್ಪುತ್ತಿಲ್ಲ. ಏನೇ ಆಗಲಿ, ಶಾಲಿನಿ ತಾನೇ ನಿನ್ನ ಮೊದಲ ಪ್ರೇಮ… ಅವಳನ್ನು ಮರೆಯಲು ಸಾಧ್ಯವಿಲ್ಲವೇನೋ ಎನಿಸುತ್ತದೆ. ಆ ಭಾವನೆ ಪ್ರಬಲವಾದಾಗ ನಾನು ಹಿಮ್ಮೆಟ್ಟುತ್ತೇನೆ.”
“ಅದು ಆ ಕಾಲದ ಮಾತು ವಿನು…. ಅವಳು ಎಂದೂ ನನ್ನನ್ನು ಮನಃಪೂರ್ವಕವಾಗಿ ತನ್ನವನು ಎಂದು ಭಾವಿಸಿರಲೇ ಇಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ನೀನೇ ಅಲ್ಲವೇ….. ಯಾವಾಗ ನನಗಿಂತ ಅನುಕೂಲಸ್ಥ ಸಿಕ್ಕಿದನೋ ಆಗ ನಾನು ಅವಳ ದೃಷ್ಟಿಯಲ್ಲಿ ಕ್ಷುಲ್ಲಕ ಆಗಿಬಿಟ್ಟೆ. ಅವಳಿಗೆ ಹಣವೇ ಎಲ್ಲಕ್ಕಿಂತ ಮುಖ್ಯ ಆಗಿಹೋದ ಮೇಲೆ……ನಾನು ಬದುಕಿದ್ದೀನಾ ಇಲ್ಲಾ ಅಂತಲೂ ಗಮನಿಸದವಳು, ಈಗ ತಾನು ಹೀನಾಯ ಸ್ಥಿತಿಯಲ್ಲಿರುವುದರಿಂದ ಸಂಗಾತಿ ಬೇಕು ಅಂತ ಹುಡುಕಿಕೊಂಡು ಬಂದರೆ ಅವಳಿಗೆ ಮರುಳಾಗಲು ನಾನು ಹುಚ್ಚನೇ?
“ನಾನು ಎಂಥ ಸ್ಥಿತಿಯಲ್ಲಿದ್ದಾಗ ನೀನು ನನ್ನ ಒಡನಾಡಿಯಾಗಿ ಬಂದು ನಾನು ನೆಲೆ ನಿಲ್ಲುವಂತೆ ಮಾಡಿರುವೆ ಎಂಬುದನ್ನು ನಾನು ಹೇಗೆ ತಾನೇ ಮರೆಯಬಲ್ಲೇ? ಜೀವನವೇ ಬೇಡ ಎಂದು ನಿರಾಶಾವಾದಿಯಾಗಿದ್ದ ನನ್ನನ್ನು ಉನ್ನತ ಸ್ಥಿತಿಗೆ ತಂದು ಸಂಸಾರಿ ಆಗಿಸಿದ ನಿನ್ನನ್ನು ನಾನು ಕೈ ಬಿಡಲು ಸಾಧ್ಯವೇ? ನನ್ನ ಈ ಮನಸ್ಸಿನ ನಿರ್ಮಲ ಪ್ರೀತಿ ನಿನಗಿನ್ನೂ ಅರ್ಥವಾಗಲಿಲ್ಲವೇ ವಿನುತಾ…..?
“ಇರು ಆ ಶಾಲಿನಿಗೆ ಮಾಡ್ತೀನಿ! ಆ ಹೋಟೆಲ್ ಮಾಲೀಕ ನನ್ನ ಗೆಳೆಯ. ಈಗಲೇ ಅವಳಿಗೆ ಆ ಕೆಲಸ ಇಲ್ಲದಂತೆ ಮಾಡಿಸ್ತೀನಿ….. ಆಗ ಅವಳು ಬೇರೆಲ್ಲಿಗಾದರೂ ಹೋಗಲಿ,” ಎಂದು ಮೊಬೈಲ್ ತೆಗೆಯಲಿದ್ದವನನ್ನು ತಡೆದಳು ವಿನುತಾ.
“ಬೇಡ ನವೀನ್…. ಇನ್ನೊಬ್ಬರ ಕೆಲಸ ಹೋಗುವಂತೆ ನಾವು ಮಾಡಬಾರದು….. ಎಲ್ಲಾ ತಪ್ಪು ನನ್ನದೇ ಅಂತ ಈಗ ಅರ್ಥ ಆಯ್ತು. ನಾನು ನನ್ನ ಪ್ರೀತಿಯನ್ನೇ ಸಂದೇಹಿಸಿದೆನಲ್ಲ…… ಬರೀ ಸಂದೇಹಗಳ ಸುಳಿಯಲ್ಲಿ ಸಿಲುಕಿ ವಾಸ್ತವ ಮರೆತಿದ್ದೆ. ನಮ್ಮ ಈ ಪವಿತ್ರ ಪ್ರೇಮದ ಮುಂದೆ ಇಂಥ ಶಾಲಿನಿಯರ ಆಟವೇನೂ ನಡೆಯೋಲ್ಲ!” ಎಂದು ಮುಗುಳ್ನಕ್ಕಳು. ಅಷ್ಟರಲ್ಲಿ ನವೀನ್ ಫೋನ್ ರಿಂಗ್ ಆಯ್ತು. ಶಾಲಿನಿಯದೇ ಕಾಲ್ ಎಂದು ಒಂದು ಕ್ಷಣ ಕೋಪ ಬಂದರೂ ಮರುಕ್ಷಣ ಅವಳ ಅಜ್ಞಾನಕ್ಕೆ ನಗು ಬಂತು. ಅವನು ಮೊಬೈಲ್ ಸ್ಪೀಕರ್ ಆನ್ ಮಾಡುತ್ತಾ, “ಹಲೋ….” ಎಂದ.
“ಹಲೋ ನವೀನ್…. ನೀನು ಫ್ರೀ ಆಗಿದ್ದರೆ ಇಂದು ಸಂಜೆ ಕಾಫಿಗೆ ಹೋಗೋಣವೇ? ನಿನಗೂ ಆ ವಿನುತಾಳಿಗಾಗಿ ಆಸ್ಪತ್ರೆಗೆ ಅಲೆದೂ ಅಲೆದೂ ಸಾಕಾಗಿರಬೇಕು…..” ಶಾಲಿನಿ ಪುಸಲಾಯಿಸುತ್ತಾ ಹೇಳಿದಳು.
“ವಿನು ಎಲ್ಲೇ ಇರಲಿ…. ಸದಾ ನನ್ನ ಹೃದಯದಲ್ಲಿರುತ್ತಾಳೆ. ನನ್ನ ಕುರಿತಾಗಿ ನೀನೇನಾದರೂ ನಿನ್ನ ಮನದಲ್ಲಿ ತಪ್ಪು ಅಭಿಪ್ರಾಯ ತಾಳಿದ್ದರೆ ಮೊದಲು ಅದನ್ನು ಕಿತ್ತೆಸಿ! ನೀನು ಎಂದೆಂದೂ ವಿನುತಾಳ ಸ್ಥಾನ ಹೊಂದಲಾರೆ….. ಗುಡ್ ಬೈ ಫಾರೆವರ್!”
“ಹ್ಞಾಂ…. ಥ್ಯಾಂಕ್ಸ್ ಶಾಲಿನಿ…. ನಮ್ಮಿಬ್ಬರ ಮಧ್ಯೆ ಇದ್ದ ಸಂದೇಹದ ಸುಳಿ ನಿವಾರಿಸಿ, ನಾವಿಬ್ಬರೂ ಮತ್ತಷ್ಟು ಹತ್ತಿರಾಗಲು ನೀನು ಮತ್ತೆ ಕಾರಣಳಾದೆ,” ಈ ಬಾರಿ ವಿನುತಾ ಜೋರಾಗಿ ನಗುತ್ತಾ ಹೇಳಿದಾಗ ಆ ಕಡೆ ಶಾಲಿನಿ ಕಕ್ಕಾಬಿಕ್ಕಿ……ತನ್ನ ಕಡೆ ಹೆಮ್ಮೆಯಿಂದ ನೋಡುತ್ತಿದ್ದ ಗಂಡನ ಬಾಹುಗಳಲ್ಲಿ ಒರಗಿದ ವಿನುತಾ, ನಿರ್ಮಲ ಪ್ರೀತಿಪ್ರೇಮದ ಎದುರು ಎಲ್ಲವೂ ಶೂನ್ಯ ಎಂದರಿತಳು.