ಅದೊಂದು ಕಾಲವಿತ್ತು. ಆಗ ಹುಡುಗಿಯರು ಮನೆಗೆಲಸಗಳಲ್ಲಿ ಅಮ್ಮನಿಗೆ ಸಹಾಯ ಮಾಡುವ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತಿದ್ದರು. ಅಡುಗೆ ಮನೆಗೆ ಹೋಗಿ ಬರುವವರ ಜವಾಬ್ದಾರಿ. ತಮ್ಮತಂಗಿಯರ ಅಭ್ಯಾಸದ ಹೊಣೆ ಅವರ ಮೇಲಿರುತ್ತಿತ್ತು. ಕಾಲೇಜು ಶಿಕ್ಷಣ ಮುಗಿಯುವ ಮೊದಲೇ ಅವರನ್ನು ವಿವಾಹ ಬಂಧನಕ್ಕೆ ದೂಡಲಾಗುತ್ತಿತ್ತು. ಆದರೆ ಬದಲಾದ ಯುಗದಲ್ಲಿ ಹುಡುಗಿಯರ ಬಗ್ಗೆ ಕೇವಲ ತಾಯಿತಂದೆಯರದ್ದಷ್ಟೇ ಅಲ್ಲ, ಸಮಾಜದ ಯೋಚನಾಶೈಲಿಯೂ ಬದಲಾಗಿದೆ. ಇಂದಿನ ಯುಗದಲ್ಲಿ ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಹುಡುಗರಿಗಿಂತ ಮುಂದೆ ಸಾಗುತ್ತಿದ್ದಾರೆ.

ಎಸ್‌.ಎಸ್‌.ಎಲ್.ಸಿ., ಸಿಬಿಎಸ್‌ಇ, ಐಸಿಎಸ್‌ಸಿ, ಪಿಯುಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುಡುಗರ ಪ್ರಮಾಣಕ್ಕಿಂತ ಹುಡುಗಿಯರದ್ದೇ ಶೇಕಡವಾರು ಹೆಚ್ಚಿಗೆ ಇರುತ್ತದೆ. ಸಮಾಜದ ಕಂದಾಚಾರದಿಂದ ಕೂಡಿದ ಯೋಚನೆಯನ್ನು ಹಿಮ್ಮೆಟ್ಟಿ ತಮಗಿಷ್ಟವಾದ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವುದಷ್ಟೇ ಅಲ್ಲ, ಜೊತೆಗೆ ತಮ್ಮ ಜವಾಬ್ದಾರಿಗಳನ್ನೂ ನಿಷ್ಠೆಯಿಂದ ಪೂರೈಸುತ್ತಿದ್ದಾರೆ.

ಗಂಡು ಮಕ್ಕಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದೇನಿಲ್ಲ. ಆದರೆ ಹೆಣ್ಣುಮಕ್ಕಳು ಮನೆಯ ಜವಾಬ್ದಾರಿ ನಿಭಾಯಿಸುವುದರ ಜೊತೆ ಜೊತೆಗೆ ಬಾಹ್ಯ ಜಗತ್ತಿನಲ್ಲೂ ತಮ್ಮ ಪಡಿಯಚ್ಚು ಮೂಡಿಸುತ್ತಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಹುಡುಗರು ಮಾತ್ರ ಹಾಗಲ್ಲ. ಅವರು ಹೊರಗಿನ ಕೆಲಸಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ.

ಯೋಚನೆ ಬದಲಿಸುವ ಅನಿವಾರ್ಯತೆ

ಒಬ್ಬ ಹುಡುಗಿ ಮನೆಯ ಕೆಲಸ ಕಾರ್ಯಗಳ ಜೊತೆಗೆ ಹೊರಗಿನ ಕೆಲಸಗಳನ್ನೂ ಪೂರೈಸುತ್ತಾಳೆಂದರೆ ಹುಡುಗರೂ ಸಹ ಏಕೆ ಮಾಡಬಾರದು? ಮನೆ ಕೆಲಸಗಳ ಬಗ್ಗೆ ಹುಡುಗರು ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಮಹಿಳೆಯರು ಅಡುಗೆ ಕೆಲಸ ಮಾಡುತ್ತಾರೆಂದರೆ, ಪುರುಷರು ಮನೆಯ ಫ್ಯಾನ್‌ ಗಳನ್ನು ಏಕೆ ಸ್ವಚ್ಛಗೊಳಿಸಬಾರದು? ಮನೆಯ ಕೆಲಸಗಳೆಂದರೆ ಅದು ಅಡುಗೆ ಮನೆಯ ನಿರ್ವಹಣೆಯಲ್ಲ, ಮನೆಯಲ್ಲಿ ಅಡುಗೆ ಮನೆಯ ಹೊರತಾಗಿ ಬೇರೆ ಕೆಲವು ಕೆಲಸಗಳೂ ಇದ್ದು, ಅವನ್ನು ಪುರುಷರು ಸುಲಭವಾಗಿ ಮಾಡಬಹುದು. ಉದಾಹರಣೆಗೆ ಫ್ಲಂಬರ್‌ ಅಥವಾ ಎಲೆಕ್ಟ್ರಿಶಿಯನ್‌ ಕರೆಸುವುದು.

ಮಹಿಳೆಯರು ವಾರದ ಎಲ್ಲಾ ದಿನಗಳಂದು ಮನೆಯ ಜವಾಬ್ದಾರಿ ನಿಭಾಯಿಸುತ್ತಾರೆಂದರೆ, ಮನೆಯ ಪುರುಷರು ಈ ಕೆಲಸಗಳಿಗಾಗಿ ತಮ್ಮ ಸಮಯವನ್ನೇಕೆ ಕೊಡಲು ಆಗುವುದಿಲ್ಲ?

ವಾಸ್ತವದಲ್ಲಿ ನಮ್ಮ ಸಮಾಜದಲ್ಲಿ ಮೊದಲಿನಿಂದಲೇ ಹುಡುಗ ಇಂಥದ್ದೇ ಕೆಲಸ ಮಾಡಬೇಕು, ಹುಡುಗಿ ಇಂಥದ್ದೇ ಕೆಲಸ ಮಾಡಬೇಕು ಎಂದು ಇಬ್ಬಗೆಯ ನೀತಿ ಅನುಸರಿಸುತ್ತಾರೆ. ಈ ಕಾರಣದಿಂದಾಗಿಯೇ ಹುಡುಗರ ಯೋಚನೆ, ಅವರ ವಿಚಾರಧಾರೆ ಹೇಗಾಗಿ ಬಿಡುತ್ತದೆ ಎಂದರೆ, ಆ ಕೆಲಸ ಕೇವಲ ಮಹಿಳೆಯರದ್ದು, ಅದನ್ನು ನಾನೇಕೆ ಮಾಡಬೇಕು ಎಂಬುದಾಗಿರುತ್ತದೆ. ಈ ಯೋಚನೆಯಲ್ಲಿ ಈಗ ಬದಲಾವಣೆ ಬರುತ್ತಿದೆ. ಅದು ಸಮಾಜಮುಖಿ ಬದಲಾವಣೆ. ಈಗ ಕೆಲವು ಕುಟುಂಬಗಳಲ್ಲಿ ಪ್ರತಿಯೊಂದು ಕೆಲಸ ಸಮಾನ ಹೊಣೆಗಾರಿಕೆಯದ್ದಾಗಿದೆ.

ವಿಶ್ವವಿದ್ಯಾಲಯವೊಂದರ ಪ್ರೊ. ಸಂಗೀತಾ ಹೀಗೆ ಹೇಳುತ್ತಾರೆ, “ವ್ಯಕ್ತಿಯೊಬ್ಬ ಲಿಂಗಭೇದ ಅನುಸರಿಸದೆ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧರಾಗಬೇಕು. ನಾವು ಈಗಲೂ ಸ್ವತಂತ್ರ ದೇಶದಲ್ಲಿ ಇಂತಹ ಕಂದಾಚಾರದಿಂದ ಕೂಡಿದ ಯೋಚನೆಗೆ ಕುಮ್ಮಕ್ಕು ಕೊಡುತ್ತಾ ಹೋದರೆ, ನಮ್ಮ ಮಾನಸಿಕತೆ ಹಾಗೂ ನಮ್ಮ ಯೋಚನೆ ಸದಾ ಸಂಕುಚಿತವಾಗಿಯೇ ಇರುತ್ತದೆ.”

ಭೇದಭಾವ ಬೇಡ

ದೇಶ ಸ್ವತಂತ್ರವಾಗಿದೆ. ಸಮಯ ಬದಲಾಗಿದೆ. ಆದರೆ ಇನ್ನೂ ಕೆಲವು ಸಂಗತಿಗಳು ಸ್ವತಂತ್ರವಾಗಬೇಕಿವೆ. ಈ ಕುರಿತಂತೆ ಉದ್ಯಮಿ ಉಷಾ ಹೀಗೆ ಹೇಳುತ್ತಾರೆ, “ನನಗೆ ಇಬ್ಬರು ಹೆಣ್ಣುಮಕ್ಕಳು. ಆದರೆ ಅವರೆಂದೂ ನನಗೆ ಮಗನೊಬ್ಬ ಇಲ್ಲವಲ್ಲ ಎಂಬಂತೆ ಮಾಡಲಿಲ್ಲ. ಅವರಿಬ್ಬರು ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ನನಗೆ ನೆರವಾಗುತ್ತಾರೆ, ಹೊರಗಿನ ಕೆಲಸಗಳ ಸಮಸ್ತ ಜವಾಬ್ದಾರಿ ವಹಿಸುತ್ತಾರೆ. ಕಾರ್ಯದ ಒತ್ತಡದಿಂದ ನಾನು ಅವರ ಕಡೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ.”

ಯಾವುದೇ ಒಬ್ಬ ವ್ಯಕ್ತಿ ಬಾಹ್ಯ ರೂಪದಲ್ಲಿ ಬದಲಾಗುವುದು ಸುಲಭ. ಆದರೆ ಮಾನಸಿಕವಾಗಿ ಬದಲಾಗುವುದು ಕಠಿಣ. ಈಗಲೂ ಅನೇಕ ಮನೆಗಳಲ್ಲಿ ಹೆಣ್ಣು ಸಂತಾನ ಇಲ್ಲದವರು ನಮಗೇಕೆ ಒಂದು ಹೆಣ್ಣು ಹುಟ್ಟಲಿಲ್ಲ ಎಂದು ಪರಿತಪಿಸುತ್ತಾರೆ. ಇನ್ನೂ ಕೆಲವರಿದ್ದಾರೆ, ಅವರು ನಮಗೆ ಹೆಣ್ಣು ಹುಟ್ಟಲಿಲ್ಲ. ನಮ್ಮ ಕಷ್ಟ ತಪ್ಪಿತು ಎನ್ನುವ ಕಂದಾಚಾರಿ ಮನೋಭಾವದವರು.

ನಾವು ಮಕ್ಕಳಿಗೆ ಬಾಲ್ಯದಿಂದಲೇ ಕೆಲವು ನೀತಿ ನಿಯಮಾಳಿಗಳನ್ನು ಹೇಳಿಕೊಡುತ್ತೇವೆ. ಕೆಲವು ನಿಯಗಳು ಹೇಗಿವೆಯೆಂದರೆ, ಅವು ಗಂಡು ಮಕ್ಕಳನ್ನು ಇನ್ನಷ್ಟು ಹಠಮಾರಿ ಮತ್ತು ಸೋಮಾರಿಗಳನ್ನಾಗಿ ಮಾಡುತ್ತವೆ. ಗಂಡು ಮಗ ಅತ್ತುಬಿಟ್ಟರೆ ಅವನಿಗೆ `ನೀನು ಅಳಬಾರದು. ಅಳುವುದೇನಿದ್ದರೂ ಹೆಣ್ಣುಮಕ್ಕಳ ಕೆಲಸ,’ ಎಂದೆಲ್ಲ ಹೇಳಲಾಗುತ್ತದೆ. ಈ ರೀತಿಯ ಬೋಧನೆ ಅವರನ್ನು ಮನೆಯ ಕೆಲಸ ಕಾರ್ಯಗಳಿಂದ ದೂರ ಇರುವಂತೆ ಮಾಡುತ್ತದೆ. ನನ್ನದಲ್ಲದ ಕೆಲಸವನ್ನು ನಾನೇಕೆ ಮಾಡಬೇಕು ಎಂದು ಅವರು ಪ್ರಶ್ನಿಸುವಂತಾಗುತ್ತದೆ. ಈ ರೀತಿಯ ಬೋಧನೆ ನಿಲ್ಲಿಸಿದರೆ ನಮ್ಮ ಸಮಾಜದಲ್ಲಿ ಹೆಣ್ಣು ಕೀಳು, ಗಂಡು ಮೇಲು ಎಂಬ ಭೇದಭಾವ ಕೊನೆಗೊಳ್ಳುತ್ತದೆ.

ಮನಸ್ವಿನಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ