`ಹೋಮ್ ಮೇಕರ್’ನ ಟ್ಯಾಗ್ ಕಿತ್ತೆಸೆದು `ಪಾಲಿಸಿ ಮೇಕರ್’ ಆಗಿಸುವ ಈ ಮಹಿಳೆಯರು ಪುರುಷ ಪ್ರಧಾನ ಸಮಾಜದ ಕಂದಾಚಾರದಿಂದ ಕೂಡಿದ ವಿಚಾರಧಾರೆಗೆ ಭಾರಿ ದೊಡ್ಡ ಸವಾಲು ಒಡ್ಡುತ್ತಿದ್ದಾರೆ.
ವಿಡಿಯೋಕಾನ್ ಸಾಲದ ಬಾಬತ್ತಿನಲ್ಲಿ ವಿವಾದಕ್ಕೆ ಸಿಲುಕಿದ್ದ ಐಸಿಐಸಿಐನ ಸಿಇಓ ಚಂದಾ ಕೋಚರ್ ರಾಜೀನಾಮೆ ನೀಡಬೇಕಾಗಿ ಬಂತು. ಅವರ ಮೇಲೆ ಇದ್ದ ಆರೋಪ ಏನೆಂದರೆ ವಿಡಿಯೋಕಾನ್ ಗ್ರೂಪ್ ಗೆ ಸಾಲ ನೀಡುವ ಸಂದರ್ಭ ಯಾವುದೇ ನಿಯಮಾವಳಿ ಪಾಲಿಸಲಿಲ್ಲ ಎಂಬುದಾಗಿತ್ತು. ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಗ್ರೂಪ್ ನ ನಿರ್ದೇಶಕ ಅರವಿಂದ್ ಗುಪ್ತ ಮಾಡಿರುವ ಆರೋಪ ಏನೆಂದರೆ, ಅವರು ವಿಡಿಯೋಕಾನ್ ಗ್ರೂಪ್ ಗೆ ಒಟ್ಟು 3,250 ಕೋಟಿ ರೂ. ಸಾಲ ಮಂಜೂರಾತಿ ನೀಡುವಾಗ ತಪ್ಪು ವಿಧಾನ ಅನುಸರಿಸಿ ವೈಯಕ್ತಿಕ ಲಾಭ ಮಾಡಿಕೊಂಡರು. ಇದರಲ್ಲಿ ಅವರ ಪತಿ ದೀಪಕ್ ಕೋಚರ್ ಹೆಸರು ಕೂಡ ಬೆಳಕಿಗೆ ಬಂತು.
ಚಂದಾ ಕೋಚರ್ ಆ ಆರೋಪ ಹಾಗೂ ತಮ್ಮ ರಾಜೀನಾಮೆಯಿಂದ ಚರ್ಚೆಯಲ್ಲಿದ್ದರು. ಆದರೆ ಮಹಿಳೆಯಾಗಿದ್ದುಕೊಂಡು ದೀರ್ಘಾವಧಿಯ ತನಕ ಐಸಿಐಸಿಐ ಬ್ಯಾಂಕಿನ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಚಂದಾ ಕೋಚರ್ ಅವರಷ್ಟೇ ಅಲ್ಲ, ದೇಶ ವಿದೇಶದಲ್ಲಿ ಇಂತಹ ಅನೇಕ ಮಹಿಳೆಯರಿದ್ದು, ಅವರು ಅಸಾಧಾರಣ ಸಾಧನೆ ಮಾಡಿದ್ದಾರೆ. ಅಂತಹ ದಿಟ್ಟ ಮಹಿಳೆಯರ ಸಾಧನೆಯ ಮೇಲೊಂದು ಕ್ಷಕಿರಣ.
ಸೋನಿಯಾ ಗಾಂಧಿ
ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ರಾಜೀವ್ ಗಾಂಧಿಯವರೊಂದಿಗೆ ಪ್ರೀತಿ ಮೊಳಕೆಯೊಡೆದು, ಭಾರತೀಯ ರೀತಿರಿವಾಜಿನ ಪ್ರಕಾರ ಮದುವೆ ಮಾಡಿಕೊಂಡು ನೆಹರು ಕುಟುಂಬಕ್ಕೆ ಸೇರ್ಪಡೆಗೊಂಡರು. 1991ರಲ್ಲಿ ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯ ಬಳಿಕ, ಪಕ್ಷದ ನಂಬಿಕಸ್ಥರು ಎಷ್ಟೇ ಹೇಳಿದರೂ ಕೂಡ ರಾಜಕೀಯಕ್ಕೆ ಬರದೆ, ಸಕ್ರಿಯ ರಾಜಕಾರಣದಿಂದ ದೂರವೇ ಉಳಿದರು. ಯಾವಾಗ ಪಕ್ಷ ಅಧೋಗತಿಗೆ ಸಾಗುತ್ತಿದೆ ಎಂಬ ಅರಿವು ಅವರಿಗೆ ಆಯಿತೊ, ಆಗ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದರು.
1998ರಲ್ಲಿ ಅವರು ಅಧ್ಯಕ್ಷರಾದಾಗ ಪಕ್ಷದಲ್ಲಿ ಅನಿಶ್ಚಿತತೆ ಮತ್ತು ಅಸಮಾಧಾನದ ವಾತಾವರಣವಿತ್ತು. 1 ವರ್ಷದ ಬಳಿಕ ಅಂದರೆ ಮೇ 15, 1999ರ ಲೋಕಸಭೆ ಚುನಾವಣೆಗೂ ಸ್ವಲ್ಪ ಮುಂಚೆ ಶರದ್ ಪವಾರ್, ಪಿ.ಎ. ಸಂಗ್ಮಾ, ತಾರೀಖ್ ಅವರುಗಳು ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಪ್ರಶ್ನೆಯನ್ನು ಎತ್ತಿ ಅವರು ಪ್ರಧಾನಿ ಹುದ್ದೆ ಅಲಂಕರಿಸುವುದನ್ನು ವಿರೋಧಿಸಿದ್ದರು. ಆಗ ಸೋನಿಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಆಗ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಬರೆದ ಪತ್ರದಲ್ಲಿ, “ನಾನು ವಿದೇಶಿ ನೆಲದಲ್ಲಿ ಹುಟ್ಟಿರಬಹುದು. ಆದರೆ ಭಾರತವನ್ನೇ ನನ್ನ ದೇಶಿಂದು ಒಪ್ಪಿಕೊಂಡಿರುವೆ. ನನ್ನ ಕೊನೆಯ ಉಸಿರಿರುವವರೆಗೂ ಭಾರತೀಯಳಾಗಿಯೇ ಇರುವೆ. ಭಾರತ ನನ್ನ ಮಾತೃಭೂಮಿ. ಅದು ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಪಾತ್ರ,” ಎಂದು ಉಲ್ಲೇಖಿಸಿದ್ದರು.
ಸೋನಿಯಾರ ನಿಲುವಿನಿಂದ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರದರ್ಶನ ನಡೆಸಿದರು. ಉಪವಾಸ ಸತ್ಯಾಗ್ರ ಕೈಗೊಂಡರು. ಪವಾರ್, ಅನ್ವರ್, ಸಂಗ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಸೋನಿಯಾ ಗಾಂಧಿ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದರು. ಆಗ ಮೊದಲ ಬಾರಿಗೆ ಪಕ್ಷದಲ್ಲಿನ ತಮ್ಮ ಸ್ಥಿತಿಯನ್ನು ಸ್ಪಷ್ಟಪಡಿಸಿದರು. ಅಲ್ಲಿಂದ ಮುಂದೆ ಅವರು ಭಯರಹಿತ ರಾಜಕಾರಣ ಶುರು ಮಾಡಿದರು. ಕ್ರಮೇಣ ಅವರು ಪಕ್ಷಕ್ಕೆ ಪುನರ್ಜೀವ ನೀಡಿದರು ಹಾಗೂ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯುವ ಹಾಗೆ ಮಾಡಿದರು. ಸತತ 2 ಅವಧಿಗೆ ಯಶಸ್ವಿಯಾಗಿ ಸರ್ಕಾರ ನಡೆಸುವಂತೆ ಮಾಡಿದರು.
ಪ್ರಿಯಾಂಕಾ ಗಾಂಧಿ
ಇಂದಿರಾ ಗಾಂಧಿಯಂತಹ ವರ್ಚಸ್ಸು ಆಕರ್ಷಕ ವ್ಯಕ್ತಿತ್ವ, ಉತ್ಸಾಹಭರಿತ ಭಾಷಣ ನೀಡುವ ಕಲೆ, ವಿರೋಧಿಗಳನ್ನೂ ತನ್ನ ಅಭಿಮಾನಿಗಳನ್ನಾಗಿಸುವ ಚಮತ್ಕಾರೀ ಶಕ್ತಿ ಈ ಎಲ್ಲ ವಿಶೇಷತೆಗಳು ಪ್ರಿಯಾಂಕಾ ಗಾಂಧಿ ವಾದ್ರಾರವರಲ್ಲಿ ಅಡಕವಾಗಿವೆ. ರಾಜಕೀಯದಿಂದ ಈವರೆಗೆ ದೂರ ಇದ್ದ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಗಾಗಿ ಮುನ್ನ ಉತ್ತರ ಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಪ್ರಿಯಾಂಕಾ ಮೊದಲ ಬಾರಿ 1999ರಲ್ಲಿ ಅಮೇಥಿಯಲ್ಲಿ ಅಮ್ಮನ ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಕಮಲಾ ಹ್ಯಾರಿಸ್
ಅಮೆರಿಕ ಸೇರಿದಂತೆ ಭಾರತದಲ್ಲೂ ಕೂಡ ಕಮಲಾ ಹ್ಯಾರಿಸ್ ಹೆಸರು ಹೆಚ್ಚು ಚರ್ಚೆಯಲ್ಲಿತ್ತು. ಇದಕ್ಕೆ ಕಾರಣ ಭಾರತೀಯ ಮೂಲದ ಈ ಮಹಿಳೆ 2020ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಛಲ ತೋರಿಸಿ ಒಮ್ಮೆಲೆ ಪ್ರಸಿದ್ಧಿಗೆ ಬಂದಿದ್ದರು.
ಡೊನಾಲ್ಡ್ ಟ್ರಂಪ್ ರ ಕಟು ಟೀಕಾಕಾರ, 55 ವರ್ಷದ ಹ್ಯಾರೀಸ್ ಸ್ಪರ್ಧೆಗೆ ಇಳಿಯುವ 4ನೇ ಆಕಾಂಕ್ಷಿ ಎನಿಸಿದ್ದರು. ಆದರೆ ಅಮೆರಿಕಾದ ಶೇ.3ರಷ್ಟು ಜನರು ಮಾತ್ರ ಅವರ ಪರ ಬೆಂಬಲ ತೋರಿಸಿದ್ದರಿಂದ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು. ಆದರೂ ಅವರು ಅಲ್ಲಿ ಚರ್ಚೆಗೆ ಕಾರಣವಾಗಿದ್ದು ಮಾತ್ರ ಜನಜನಿತ.
ತುಳಸಿ ಗಬಾರ್ಡ್
ಅಮೆರಿಕದ ಮೊದಲ ಹಿಂದೂ ಸಂಸದೆ ತುಳಸಿ ಗಬಾರ್ಡ್ 2020ರಲ್ಲಿ ನಡೆಯುವ ಅಮೆರಿಕ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರೇನಾದರೂ ಅಧ್ಯಕ್ಷರಾಗಿ ಆಯ್ಕೆಯಾದರೆ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಾಧ್ಯಕ್ಷೆ ಎಂಬ ಖ್ಯಾತಿ ಅವರಿಗೆ ದಕ್ಕುತ್ತದೆ. ಕಳೆದ ವರ್ಷ ಅಮೆರಿಕದ ಕೆಳಮನೆಯ ಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಇದು ಅವರ 4ನೇ ಗೆಲುವು. ಅವರು 2012ನೇ ಸವಾಲಿನಿಂದ ಈ ಸದನದ ಸದಸ್ಯರಾಗಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ಅವರು ಅತ್ಯಂತ ಜನಪ್ರಿಯರಾಗಿದ್ದಾರೆ.
ಅಮೆರಿಕದ ಶಿಕಾಗೊದಲ್ಲಿ ನಡೆಯುವ ವಿಶ್ವ ಹಿಂದೂ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ನಾಮ ನಿರ್ದೇಶನಗೊಂಡಿದ್ದಾರೆ. ಅಮೆರಿಕದ ಹವಾಯಿ ಪ್ರಾಂತ್ಯದಿಂದ ಡೆಮಾಕ್ರೆಟಿಕ್ ಸದಸ್ಯರಾಗಿರುವ ಅವರು ಪ್ರಸ್ತುತ `ಹೌಸ್ ಕಾಂಗ್ರೆಸ್ ನ ಕಾಕಸ್’ನ ಸಹ ಅಧ್ಯಕ್ಷೆ ಕೂಡ ಆಗಿದ್ದಾರೆ.
ಏಂಜೆಲಾ ಮಾರ್ಕೆಲ್
ಜಗತ್ತಿನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 65 ವರ್ಷದ ಏಂಜೆಲಾ ಮಾರ್ಕೆಲ್ ಸೇರಿದ್ದಾರೆ. 2005ರಿಂದ ಅವರು ಜರ್ಮನಿಯ ಚಾನ್ಸಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 2018ರಲ್ಲಿ ಅವರು 2ನೇ ಕ್ರಮಾಂಕದಲ್ಲಿದ್ದರು. ಸತತ 8ನೇ ವರ್ಷ ಅವರು ಟಾಪ್ 10ನಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡು ಬಂದಿದ್ದಾರೆ. ಅತ್ಯಂತ ಉನ್ನತ ಸ್ಥಾನದಲ್ಲಿರುವುದರಿಂದ ಅವರನ್ನು `ಡಿ ಫ್ಯಾಕ್ಟೊ ಲೀಡರ್ ಆಫ್ ದಿ ಯೂರೋಪಿಯನ್ ಯೂನಿಯನ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಮಿಶೆಲ್ ಒಬಾಮಾ
ಇವರು ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಪ್ರಿನ್ಸಟನ್ ವಿವಿ ಹಾಗೂ ಹಾರ್ವರ್ಡ್ ಸ್ಕೂಲ್ ನಿಂದ ಅವರು ಪದವಿ ಪಡೆದಿದ್ದಾರೆ. ವಿದ್ಯಾರ್ಥಿನಿಯಾಗಿರುವಾಗಲೇ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಜನಾಂಗ ಭೇದ ಕುರಿತಂತೆ ಅವರ ವಿಚಾರಗಳು ಬಹಳಷ್ಟು ಕ್ರಾಂತಿಕಾರಿಯಾಗಿದ್ದವು.
ಸಾಮಾನ್ಯವಾಗಿ ಮಹಿಳೆಯರು ತೆರೆ ಮರೆಯಲ್ಲಿದ್ದು ಸಂಗಾತಿಗೆ ನೆರವು ನೀಡುತ್ತಾರೆ. ಆದರೆ ಅವರು ಮುನ್ನೆಲೆಗೆ ಬಂದು ಸಂಗಾತಿಗೆ ನೆರವು ಬೆಂಬಲ ನೀಡುತ್ತಿದ್ದರು. ತಮ್ಮ ಪತಿಯನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿ ತಮ್ಮ ಛಲ ಎಂಥದು ಎಂದು ತೋರಿಸಿದರು. ಮಕ್ಕಳ ಯೋಗಕ್ಷೇಮದ ಜೊತೆ ಅವರು ವಕಾಲತ್ತು ಕೂಡ ನಡೆಸುತ್ತಾರೆ.
ಕಿರಣ್ ಮಜುಂದಾರ್ ಶಾ
ಭಾರತೀಯ ಉದ್ಯಮಿಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ, ಇಂದು ಬೆಂಗಳೂರಿನ ಐಇಎಂನ ಅಧ್ಯಕ್ಷರು ಕೂಡ ಆಗಿರುವ `ಬೂಕಾನ್’ ಹೆಸರಿನ ಔಷಧಿ ತಯಾರಿಸುವ ಕಂಪನಿಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2016ರಲ್ಲಿ ಅವರಿಗೆ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗಾಗಿ `ಓಥಮರ್ ಗೋಲ್ಡ್ ಮೆಡಲ್’ ನೀಡಿ ಗೌರವಿಸಲಾಯಿತು.
ಭಾರತ ಸರ್ಕಾರ ಕೂಡ ಅವರಿಗೆ 1989ರಲ್ಲಿ ಪದ್ಮಶ್ರೀ, 2005ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಟೈಮ್ಸ್ ಪತ್ರಿಕೆ ಅತ್ಯಂತ ಪ್ರಭಾವಿ ಮಹಿಳೆಯರ ಟಾಪ್ 100ರ ಪಟ್ಟಿಯಲ್ಲಿ ಅವರನ್ನು ಸೇರಿಸಿತ್ತು. ಅಷ್ಟೇ ಅಲ್ಲ, ಫೈನಾನ್ಶಿಯಲ್ ಟೈಮ್ಸ್ ಕೂಡ 50 ಮಹಿಳೆಯರ ಪಟ್ಟಿಯಲ್ಲಿ ಅವರನ್ನು ಸೇರ್ಪಡೆ ಮಾಡಿತ್ತು.
ಕ್ರಿಸ್ಟಿನ್ ಲೆಗಾರ್ಡ್
ಪ್ಯಾರಿಸ್ ನಲ್ಲಿ ಜನಿಸಿದ ಕ್ರಿಸ್ಟಿನ್ ಲೆಗಾರ್ಡ್ ಐಎಂಎಫ್ ನ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಅವರು 2011ರಲ್ಲಿ ಈ ಹುದ್ದೆಗೆ ಬಂದರು. ಅದಕ್ಕೂ ಮುಂಚೆ ಅವರು ಫ್ರಾನ್ಸ್ ಸರ್ಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರು ಜಿ8ರ ವಿತ್ತ ಸಚಿವರು ಹಾಗೂ ಐಎಂಎಫ್ ನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಪ್ರಥಮ ಮಹಿಳೆಯಾಗಿದ್ದಾರೆ. 2018ರಲ್ಲಿ ಅವರು ಫೇಬ್ಸ್ ನ ಮೋಸ್ಟ್ ಪವರ್ ಫುಲ್ ವುಮನ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರು.
ಹಿಲರಿ ಕ್ಲಿಂಟನ್
ಅಮೆರಿಕದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಉಮೇದುವಾರರಾಗಿ ಗೆದ್ದು ಇತಿಹಾಸ ನಿರ್ಮಿಸಿದರು. ಅಮೆರಿಕ ರಾಷ್ಟ್ರಾಧ್ಯಕ್ಷರ ಚುನಾವಣೆಯ 227 ವರ್ಷಗಳ ಇತಿಹಾಸದಲ್ಲಿ ಈ ಹಂತದ ತನಕ ತಲುಪಿದ ಏಕೈಕ ಮಹಿಳೆಯಾಗಿದ್ದಾರೆ. ಹಿಲರಿ ಕ್ಲಿಂಟನ್ ಅಮೆರಿಕದ ವಿದೇಶಾಂಗ ಸಚಿವೆ ಹಾಗೂ ನ್ಯೂಯಾರ್ಕ್ ಸೆನೆಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. 1988 ಹಾಗೂ 1991ರಲ್ಲಿ ಅವರನ್ನು ಅಮೆರಿಕದ ಅತ್ಯಂತ ಪ್ರಭಾವಶಾಲಿ ವಕೀಲರ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಥೆರೇಸಾ ಮೇ
ಮಾರ್ಗರೆಟ್ ಥ್ಯಾಚರ್ ಬಳಿಕ ಬ್ರಿಟನ್ನಿನ ಎರಡನೇ ಮಹಿಳಾ ಪ್ರಧಾನಮಂತ್ರಿ ಎಂದರೆ 59 ವರ್ಷ ಥೆರೇಸಾ ಮೇ. ಅವರು ಅತ್ಯಂತ ದೀರ್ಘಾವಧಿಯ ತನಕ ಗೃಹಮಂತ್ರಿಯಾಗಿರುವ ದಾಖಲೆ ಹೊಂದಿದ್ದಾರೆ. 1997ರಲ್ಲಿ ಅವರು ಮೊದಲ ಬಾರಿ ಸಂಸದೆಯಾಗಿದ್ದರು. ಪೇರ್ಬ್ 2018ರ ಅತ್ಯಂತ ಪ್ರಭಾಶಾಲಿ ಮಹಿಳೆಯರ ಪಟ್ಟಿಯಲ್ಲಿ ಅವರನ್ನು ದ್ವಿತೀಯ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಸಂದರ್ಶನವೊಂದರಲ್ಲಿ ಅವರು ತಾವು ತೋರಿಕೆಗಾಗಿ ಕಾರ್ಯ ನಿರ್ವಹಿಸುವ ರಾಜಕಾರಣಿಯಲ್ಲ ಎಂದು ಹೇಳಿದ್ದರು. ರಾಜಕೀಯ, ಕೃಷಿ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಯಾವ ವೇಗದಲ್ಲಿ ಮಹಿಳೆಯರು ಮುಂದೆ ಸಾಗುತ್ತಿದ್ದಾರೊ, ಮುಂದೊಂದು ದಿನ ಅವರು ಪುರುಷರಿಗಿಂತ ಮುಂದೆ ಹೋದರೂ ಅಚ್ಚರಿಯಿಲ್ಲ!
– ಗೌರಿ ಮನೋಹರ್