“ನಿಶಾ….” ಕಿಶೋರ್‌ ಪತ್ನಿಯ ಮೇಲೆ ರೇಗಾಡಿದ, “ನನ್ನ ಮುಂದೆ ಹೀಗೆ ಮಾತನಾಡಲು ನಿನಗೆಷ್ಟು ಧೈರ್ಯ? ಜೋಕೆ! ಇನ್ನೊಂದು ಸಲ ಬಾಯಿಬಿಟ್ಟರೆ ನೋಡಿಕೊ. ನಿನ್ನಂಥವಳಿಗೆ ನಾನು ಸಲಿಗೆ ಕೊಟ್ಟದ್ದು ಹೆಚ್ಚಾಯಿತು.”

ಕಿಶೋರ್‌ ಇನ್ನೂ ಅದೇನೇನು ಹೇಳಿದನೋ ನಿಶಾಳಿಗೆ ಗೊತ್ತಿಲ್ಲ. ಆದರೆ ಮರು ಮಾತಿಗೆ ಅವನು ಹೇಳು, “ನಿನ್ನಂಥವಳು…. ನಿನ್ನಂಥ ಹೆಣ್ಣು….” ಎನ್ನುವ ಪದಗಳು ಮಾತ್ರ ಅವಳ ಕಿವಿಯಲ್ಲಿ ಗುಂಯ್‌ ಗುಡುತ್ತಿರುತ್ತದೆ. ಅವಳು ಹಿಂದೆ ಹೇಗಿದ್ದಳೋ ಇಂದೂ ಹಾಗೇ ಇದ್ದಾಳೆ. ಅದೇಕೋ ಅವನು ಮಾತ್ರ ಹಾಗೇ ಛೇಡಿಸುತ್ತಿರುತ್ತಾನೆ. ಅವನ ಮಾತು ಕೇಳಿ ಕೇಳಿ ನಿಶಾಳಿಗೆ ತನಗೆ ವ್ಯಕ್ತಿತ್ವವೇ ಇಲ್ಲವೆನಿಸಿಬಿಟ್ಟಿದೆ.

ನಿಶಾ ತಾಯಿ ತಂದೆಗೆ ಒಬ್ಬಳೇ ಮಗಳು. ಬಹಳ ಪ್ರೀತಿಯಿಂದ, ಮುದ್ದಿನಿಂದ ಬೆಳೆಸಿದ್ದರು. ತಂದೆ ನಗರದ ಹೆಸರಾಂತ ಬಿಲ್ಡರ್‌. ಕಟ್ಟಡಗಳನ್ನು ಕಟ್ಟಿ ಮಾರುವ ಉದ್ಯೋಗ ಅವರದು. ನಿಶಾ ಹುಟ್ಟಿದ ನಂತರ ಅವರ ಬಿಸ್‌ ನೆಸ್‌ ಬಹಳ ಚೆನ್ನಾಗಿ ಬೆಳೆದುದರಿಂದ, ಮಗಳು ಹುಟ್ಟಿದ ಗಳಿಗೆ ಒಳ್ಳೆಯದೆಂದು ಹೆಮ್ಮೆಪಡುತ್ತಿದ್ದರು. ಮಗಳ ಯಾವುದೇ ಇಚ್ಛೆಯನ್ನೂ ಕಡೆಗಣಿಸುತ್ತಿರಲಿಲ್ಲ. ನಗರದ ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಅವಳ ವಿದ್ಯಾಭ್ಯಾಸ ನಡೆಯಿತು.

ನಿಶಾ ಸುಂದರ ಯುವತಿ. ಪಾಠ ಪ್ರವಚನಗಳಲ್ಲಿಯೂ ಜಾಣೆ. ಕಾಲೇಜಿನ ಸಮಾರಂಭಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಳು. ಹೀಗಾಗಿ ಸ್ನೇಹಿತ ವರ್ಗಕ್ಕೆ ಮಾತ್ರವಲ್ಲದೆ, ಅಧ್ಯಾಪಕ ವರ್ಗಕ್ಕೂ ಮೆಚ್ಚುಗೆಯಾಗಿದ್ದಳು. ಎಲ್ಲರೂ ಅವಳನ್ನು ಹೊಗಳುತ್ತಿದ್ದರು. ಇಷ್ಟಾದರೂ ಅವಳಲ್ಲಿ ಅಹಂಕಾರ, ದರ್ಪಗಳಿರಲಿಲ್ಲ. ಮನೆ ಮತ್ತು ಕಾಲೇಜಿನಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಹೊಂದಿಕೊಂಡು ನಡೆಯುತ್ತಿದ್ದಳು.

ಒಂದು ದಿನ ರಾತ್ರಿ ನಿಶಾಳ ತಂದೆ ಕೆಲಸ ಮುಗಿಸಿ ಮನೆಗೆ ಬಂದರು ಹಾಗೇ ಸೋಫಾದ ಮೇಲೆ ಕುಸಿದುಬಿದ್ದರು. ಅದನ್ನು ಕಂಡ ನಿಶಾ ಕೂಡಲೇ ನೆರೆಮನೆಯವರ ಸಹಾಯದಿಂದ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದಳು. ಹೃದಯಾಘಾತವಾಗಿದ್ದ ತಂದೆಯನ್ನು ಉಳಿಸಿಕೊಂಡಳು. ಅಂದಿನಿಂದ ತಾಯಿ ತಂದೆಗೆ ಅವಳ ಮೇಲೆ ಪ್ರೀತಿ ವಿಶ್ವಾಸ ಮತ್ತೂ ಹೆಚ್ಚಿತು.

“ನನ್ನ ಮಗಳು ಗಂಡು ಮಗನಿಗಿಂತ ಕಡಿಮೆಯಲ್ಲ!” ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದರು.

ಮಗಳ ಬಿಎಸ್ಸಿ ಡಿಗ್ರಿ ಮುಗಿದಾಗ ಅವಳಿಗೆ ಮದುವೆ ಮಾಡಬೇಕೆಂದು ತಂದೆ ಯೋಚಿಸಿದರು. ಅಳಿಯನ ಸಹಕಾರ ಸಿಕ್ಕಿದರೆ ತಮ್ಮ ಕೆಲಸಕ್ಕೆ ಅನುಕೂಲವಾಗುವುದೆಂದು ಅವರ ಎಣಿಕೆ. ಆದರೆ ನಿಶಾಳಿಗೆ ಎಂಎಸ್ಸಿ ಓದುವ ಬಯಕೆ. ಮಗಳ ಆಸೆಗೆ ಅಡ್ಡಿಪಡಿಸಲು ತಾಯಿ ತಂದೆಗೆ ಮನಸ್ಸಾಗಲಿಲ್ಲ.

ನಿಶಾ ಎಂಎಸ್ಸಿ ವ್ಯಾಸಂಗಕ್ಕೆ ಪ್ರವೇಶ ಪಡೆದಳು. ಡಿಗ್ರಿ ಓದುವಾಗ ಕಾಲೇಜಿಗೆ ಬಸ್‌ ನಲ್ಲಿ ಹೋಗುತ್ತಿದ್ದಳು. ಈಗ ಅವಳಿಗೆ ಅನುಕೂಲವಾಗಲೆಂದು ತಂದೆ ಕಾರು ತೆಗೆದುಕೊಟ್ಟರು. ದಿನ ಅವಳು ಕಾರಿನಲ್ಲೇ ಕಾಲೇಜಿಗೆ ಹೋಗತೊಡಗಿದಳು. ಅವಳ ಒಂದಿಬ್ಬರು ಗೆಳತಿಯರೂ ಅವಳ ಜೊತೆ ಹೋಗುತ್ತಿದ್ದರು. ತನ್ನ ಜಾಣ್ಮೆಯಿಂದಾಗಿ ನಿಶಾ ಹೊಸ ಕಾಲೇಜಿನಲ್ಲಿಯೂ ಎಲ್ಲರ ಗಮನ ಸೆಳೆದಳು.

ನಿತ್ಯದ ಪರಿಪಾಠದಂತೆ ನಿಶಾ ಒಂದು ದಿನ ಕ್ಲಾಸ್‌ ಮುಗಿದ ನಂತರ ಲೈಬ್ರೆರಿಗೆ ಹೋದಳು. ಬುಕ್‌ ರಾಕ್‌ ನಲ್ಲಿ ಅವಳು ಪುಸ್ತಕಗಳನ್ನು ಪರಿಶೀಲಿಸುತ್ತಿರುವಾಗ ಯಾರೋ ಹಿಂದೆ ಬಂದು ನಿಂತಂತೆ ಭಾಸವಾಯಿತು. ತಿರುಗಿ ನೋಡಿದಾಗ ಅಲ್ಲಿ ಒಬ್ಬ ಯುವಕ ನಿಂತಿದ್ದ. ಕಳೆದ ಕೆಲವಾರು ದಿನಗಳಿಂದ ಇದೇ ಯುವಕ ತನ್ನ ಹಿಂದೆ ಕಾಲೇಜಿನ ಆವರಣದಲ್ಲಿ ಇರುತ್ತಿದ್ದುದನ್ನು ನಿಶಾ ಗಮನಿಸಿದ್ದಳು. ಇವಳು ತಿರುಗಿ ನೋಡಿದಾಗ ಅವನು ಮುಗುಳ್ನಕ್ಕ. ಆದರೆ ನಿಶಾ ಏನೂ ಪ್ರತಿಕ್ರಿಯಿಸದೆ ದೂರ ಸರಿದಳು. ನಂತರದ ದಿನಗಳಲ್ಲಿ ಅವನು ಎದುರಿಗೇ ಕಾಣತೊಡಗಿದ.

ಒಂದು ದಿನ ನಿಶಾ ಲೈಬ್ರೆರಿಯ ರೆಫರೆನ್ಸ್ ಸೆಕ್ಷನ್‌ ನಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಳು. ಆಗ ಅವನು ಬಂದು ಅವಳ ಮುಂದೆಯೇ ಕುಳಿತ. ನಿಶಾ ಕೊಂಚ ಗಾಬರಿಯಾದಳು.

“ಹೆದರಬೇಡಿ ನಾನೂ ಇಲ್ಲಿಯೇ ಓದುತ್ತಿದ್ದೇನೆ. ನನ್ನ ಹೆಸರು ಕಿಶೋರ್‌. ನೀವು…….?”

ನಿಶಾ ತನ್ನ ಹೆಸರು ಹೇಳಿ ಎದ್ದುಬಿಟ್ಟಳು. ಕಿಶೋರ್‌ ಸಹ ಎದ್ದು ಅವಳ ಜೊತೆಯೇ ನಡೆದ.

ಇಬ್ಬರೂ ಆಗಾಗ ಭೇಟಿಯಾಗತೊಡಗಿದರು. ಬಿಡುವಿನ ಸಮಯದಲ್ಲಿ ಕ್ಯಾಂಟೀನ್‌ ಗೆ ಹೋಗುತ್ತಿದ್ದರು. ತಮ್ಮ ತಮ್ಮ ಮನೆಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಕಿಶೋರನಿಗೆ ತಾಯಿ ತಂದೆ ಇರಲಿಲ್ಲ. ಒಬ್ಬ ಅಣ್ಣನಿದ್ದ. ತಂದೆ ಬಿಟ್ಟು ಹೋಗಿದ್ದ ವ್ಯವಹಾರವನ್ನು ಅಣ್ಣ ಮುಂದುವರಿಸಿದ್ದ. ಅವನ ಮದುವೆಯಾಗಿತ್ತು. ಕಿಶೋರ್‌ ಬಿಸ್‌ ನೆಸ್‌ ಗೆ ಕೈಗೂಡಿಸಲು ಇಷ್ಟಪಡಲಿಲ್ಲ. ಅವನು ಎಂಬಿಎ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಮನೆ ಇದ್ದರೂ ಹಾಸ್ಟೆಲ್ ‌ಗೆ ಸೇರಿದ್ದ. ಅವನು ಬುದ್ಧಿವಂತ ವಿದ್ಯಾರ್ಥಿ. ಅವನಿಗೆ ಅನೇಕ ಕಂಪನಿಗಳಿಂದ ಜಾಬ್‌ ಆಫರ್ಸ್‌ ಬಂದಿದ್ದವು. ಯಾವುದನ್ನು ಆರಿಸಿಕೊಳ್ಳುವುದೆಂದು ಅವನು ಆಲೋಚಿಸುತ್ತಿದ್ದ.

ನಿಶಾ ಮತ್ತು ಕಿಶೋರ್‌ ಒಳ್ಳೆಯ ಸ್ನೇಹಿತರಾದರು. ಅವರಿಗೆ 1 ವರ್ಷ ಹೇಗೆ ಕಳೆಯಿತೆಂದೇ ತಿಳಿಯಲಿಲ್ಲ. ಅವರ ಸ್ನೇಹ ಪ್ರೀತಿಗೆ ತಿರುಗಿದ್ದೂ ಅವರ ಅರಿವಿಗೆ ಬರಲಿಲ್ಲ.

ನಿಶಾಳ ತಂದೆಯ ಬಿಸ್‌ ನೆಸ್‌ ಚೆನ್ನಾಗಿ ನಡೆಯುತ್ತಿತ್ತು. ಆದರೆ ಅವರಿಗೀಗ ಮೊದಲಿಂತೆ ಎಲ್ಲ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡಲು ಆಗುತ್ತಿರಲಿಲ್ಲ. ಅದಕ್ಕೆ ವಯಸ್ಸು ಕಾರಣವಿದ್ದಿರಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ಅವರ ಹೃದಯ ಸಂಬಂಧಿ ತೊಂದರೆಯುವ ಕೆಲಸಕ್ಕೆ ಅಡ್ಡಿಪಡಿಸುತ್ತಿತ್ತು.

ಒಂದು ದಿನ ನಿಶಾ ಗೆಳತಿಯರೊಂದಿಗೆ ಕಾಲೇಜಿಗೆ ಬಂದಳು. ತರಗತಿಗೆ ಹೋಗುವಷ್ಟರಲ್ಲಿ ಮನೆಯಿಂದ ತಂದೆಗೆ ಆರೋಗ್ಯ ಸರಿಯಿಲ್ಲವೆಂದು ಫೋನ್‌ ಕಾಲ್ ಬಂದಿತ್ತು. ಅವಳು ಕೂಡಲೇ ಮನೆಗೆ ಹಿಂದಿರುಗಿದಳು. ತಂದೆಗೆ ಮತ್ತೆ ಹೃದಯಾಘಾತವಾಗಿತ್ತು. ಈ ಬಾರಿ ಅದು ತೀವ್ರತರವಾಗಿದ್ದು ಅವರು ಕಡೆಯುಸಿರೆಳೆದರು. ತಾಯಿ ಮಗಳಿಬ್ಬರೂ ಅತ್ತು ಅತ್ತು ಕಡೆಗೆ ಅವರೇ ಒಬ್ಬರನ್ನೊಬ್ಬರು ಸಮಾಧಾನಪಡಿಸಿಕೊಂಡರು. ತಂದೆಯ ಬಿಸ್‌ ನೆಸ್‌ ಅವರೊಂದಿಗೇ ಕೊನೆಗೊಂಡಿತು.

ನಿಶಾ 1 ತಿಂಗಳು ಕಾಲೇಜಿಗೆ ಹೋಗಲಿಲ್ಲ. ಅವಳ ಗೆಳೆಯ ಗೆಳತಿಯರೆಲ್ಲ ಅವಳನ್ನು ನೋಡಲು ಬಂದರು. ಕಿಶೋರ್‌ ಸಹ ಬಂದಿದ್ದ.

“ಆದದ್ದಾಯಿತು. ನೀನು ಕಾಲೇಜು ತಪ್ಪಿಸಬೇಡ,” ಎಂದು ಎಲ್ಲರೂ ಸಲಹೆ ನೀಡಿದರು. ಆದರೆ ತಾಯಿಯೊಬ್ಬರನ್ನೇ ಬಿಡಲು ನಿಶಾಳಿಗೆ ಮನಸ್ಸಿರಲಿಲ್ಲ. ಕಡೆಗೆ ಅವಳ ತಾಯಿಯೇ, ನಿನ್ನ ವಿದ್ಯಾಭ್ಯಾಸನ್ನು ಅರ್ಧಕ್ಕೆ ನಿಲ್ಲಿಸುವುದು ಸರಿಯಲ್ಲ ಎಂದು ತಿಳಿಹೇಳಿದ ಮೇಲೆ ಅವಳು ಮತ್ತೆ ಕಾಲೇಜಿಗೆ ಹೋಗುವ ಆಲೋಚನೆ ಮಾಡಿದಳು.

ನಿಶಾಳ ತಂದೆ ಫ್ಲಾಟ್‌ ಗಳನ್ನು ಮಾಡುವಾಗ ತಮಗಾಗಿ 2 ಫ್ಲಾಟ್‌ ಗಳನ್ನು ಉಳಿಸಿಕೊಂಡು ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಆದ್ದರಿಂದ ಹಣದ ಸಮಸ್ಯೆ ಇರಲಿಲ್ಲ. ಅವಳು ಮೊದಲ ವರ್ಷದ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದ್ದಳು. 2ನೇ ವರ್ಷ ಒಳ್ಳೆಯ ಅಂಕದೊಂದಿಗೆ ತೇರ್ಗಡೆಯಾಗಬೇಕೆಂಬ ಆಸೆ ಅವಳಿಗೆ. ಕಿಶೋರನ ವಿದ್ಯಾಭ್ಯಾಸ ಮುಗಿದಿತ್ತು. ಅವನು 2 ತಿಂಗಳ ನಂತರ ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಬೇಕಾಗಿತ್ತು.

ಕಿಶೋರ್‌ ಒಂದು ದಿನ ಕಾಲೇಜಿನಲ್ಲಿ ನಿಶಾಳ ಬಳಿಗೆ ಬಂದ. ಅವನ ಕೈಯಲ್ಲಿ ಒಂದು ಪುಟ್ಟ ಗಿಫ್ಟ್ ಪ್ಯಾಕೆಟ್‌ ಇತ್ತು. ಅದನ್ನು ನಿಶಾಳ ಕೈಗಿತ್ತ. ನಿಶಾ ಅದನ್ನು ತೆರೆದು ನೋಡಿದರೆ ಅದರಲ್ಲಿ ಉಂಗುರವಿತ್ತು. ಅವಳು ಆಶ್ಚರ್ಯದಿಂದ ಅವನತ್ತ ನೋಡಿದಳು.

“ನನ್ನನ್ನು ವಿವಾಹವಾಗುವೆಯಾ?” ಕಿಶೋರನ ಪ್ರಶ್ನೆಗೆ ನಿಶಾ ನಾಚಿ ತಲೆ ತಗ್ಗಿಸಿ ಸಮ್ಮತಿ ಸೂಚಿಸಿಳು. ಅವಳ ತಾಯಿಯೂ ಇದಕ್ಕೆ ಒಪ್ಪಿಗೆ ಇತ್ತರು.

ನಿಶಾಳ ಅಂತಿಮ ವರ್ಷದ ಪರೀಕ್ಷೆ ಮುಗಿಯಿತು. ಅವಳೇ ಕಾಸ್ಜಿಗೆ ಟಾಪರ್‌ ಆಗಿದ್ದಳು. ಅಲಳಿಗೆ ಅದೇ ಕಾಸ್ಜಿನಲ್ಲಿ ಉದ್ಯೋಗಕ್ಕೆ ಸೇರುವಂತೆ ಅವಳ ಪ್ರಿನ್ಸಿಪಾಲರು ಹೇಳಿದರು. ಆದರೆ ಕಿಶೋರ್‌ ಅದಕ್ಕೆ ಒಪ್ಪಲಿಲ್ಲ.

ಕಿಶೋರ್‌ ಕೆಲಸಕ್ಕೆ ರಿಪೋರ್ಟ್‌ ಆದ ನಂತರ ನಿಶಾಳೊಡನೆ ವಿವಾಹವಾಗಿ ಅವಳನ್ನು ತನ್ನ ಮನೆಗೆ ಕರೆದೊಯ್ದ. ಅದು ಸಾಕಷ್ಟು ದೊಡ್ಡ ಮನೆ. ನಿಶಾ ತಾಯಿಯನ್ನು ಬಿಟ್ಟು ಹೋಗಬೇಕಾಯಿತು.

ಕಿಶೋರ್‌ ಕಾಲೇಜಿನಲ್ಲಿ ನಿಶಾಳನ್ನು ಭೇಟಿಯಾಗುತ್ತಿದ್ದ ದಿನಗಳಲ್ಲಿ ತನ್ನ ಬಗ್ಗೆ ಬಹಳಷ್ಟು ಹೇಳಿಕೊಳ್ಳುತ್ತಿದ್ದ. ವಿವಾಹವಾದ ನಂತರ ಅವನ ನಿಜವಾದ ಗುಣಗಳು ಕಾಣಿಸಿಕೊಳ್ಳತೊಡಗಿದವು. ಕೆಲಸದಲ್ಲಿ ತನ್ನಂಥ ನಿಪುಣ ಬೇರೊಬ್ಬನಿಲ್ಲ ಎಂದು ಜಂಭ ತೋರಿಸುತ್ತಿದ್ದ. ನಿಶಾಳ ಎಲ್ಲ ಕೆಲಸಗಳನ್ನು ಕೀಳಾಗಿ ಕಾಣುತ್ತಿದ್ದ.

ನಿಶಾಳಿಗೆ ಅಡುಗೆ ಮನೆ ಕೆಲಸ ಮಾಡಿ ಗೊತ್ತಿರಲಿಲ್ಲ. ವಿವಾಹವಾದ ನಂತರವೇ ಅವಳು ಅದನ್ನು ಕಲಿಯಲು ಪ್ರಾರಂಭಿಸಿದ್ದು. ಹೀಗಾಗಿ ಕಿಶೋರನನ್ನು ತೃಪ್ತಿಪಡಿಸಲು ಅವಳಿಂದ ಸಾಧ್ಯವಿರಲಿಲ್ಲ. ಆ ಬಗ್ಗೆ ಅವನು ನಿಶಾಳನ್ನು ಸಾಕಷ್ಟು ಮೂದಲಿಸುತ್ತಿದ್ದ. ಕೆಲಸದವಳ ಮುಂದೆಯೂ,  “ನೀನು ಕೆಲಸದವಳಿಗಿಂತ ಕಡೆಯಾಗಿ ಅಡುಗೆ ತಿಂಡಿ ಮಾಡುತ್ತೀಯಾ,” ಎಂದು ಕೂಗಾಡುತ್ತಿದ್ದ.

ಪ್ರತಿಯೊಂದು ವಿಷಯದಲ್ಲಿಯೂ ಕಿಶೋರ್‌ ಪತ್ನಿಯನ್ನು ನಿಕೃಷ್ಟವಾಗಿ ಕಾಣುತ್ತಿದ್ದ. ಅವನು ಹಂಗಿಸುವುದನ್ನು ಕೇಳಿ ಕೇಳಿ ನಿಶಾಳ ಮನಸ್ಸು ರೋಸಿ ಹೋಗುತ್ತಿತ್ತು. ತಿಂಗಳುಗಳು, ವರ್ಷಗಳು ಕಳೆದರೂ ಮೂದಲಿಕೆಯ ಮಾತು ಮಾತ್ರ ತಪ್ಪಲಿಲ್ಲ. ನಿಶಾ ತುಟಿ ಎರಡು ಮಾಡುವಂತಿರಲಿಲ್ಲ. ಏನಾದರೂ ಒಂದು ಮಾತು ಹೇಳಿದರೆ ಸಾಕು ಅವನ ಪ್ರಲಾಪ ಪ್ರಾರಂಭವಾಗುತ್ತಿತ್ತು, “ಸಮಾಜದಲ್ಲಿ ಬಾಳುವುದಕ್ಕೆ ಒಬ್ಬಳು ಸುಂದರ ಪತ್ನಿ ಬೇಕು ಮತ್ತು ಮನೆ ನೋಡಿಕೊಳ್ಳುವುದಕ್ಕೆ ಒಬ್ಬರು ಹೆಂಗಸು ಬೇಕು ಅನ್ನುವುದಕ್ಕಾಗಿ ನಿನ್ನನ್ನು ಮದುವೆಯಾದೆ. ಅಷ್ಟಲ್ಲದೆ ನಿನ್ನಲ್ಲಿ ಯಾವ ವಿಶೇಷ ಗುಣ ಇದೆ ಅಂತ ಮದುವೆಯಾಗಬೇಕಿತ್ತು?”

ಹೀಗೇ 5 ವರ್ಷಗಳು ಕಳೆದವು. ಪತಿಯ ಚುಚ್ಚು ಮಾತು, ತಾಯಿಯ ಒಂಟಿತನ ಎರಡೂ ನಿಶಾಳನ್ನು ನೋಯಿಸುತ್ತಿದ್ದವು. ಒಂದೇ ಊರಿನಲ್ಲಿದ್ದೂ ಬೇಕೆಂದಾಗ ತಾಯಿಯನ್ನು ನೋಡಲು ಸಾಧ್ಯವಿರಲಿಲ್ಲ. ಮೊದಲೆಲ್ಲಲ್ಲ ತಾಯಿಗೆ ಅಳಿಯನ ವರ್ತನೆಯ ಅರಿವಿರಲಿಲ್ಲ. ಕ್ರಮೇಣ ಮಗಳ ಮುಖ ನೋಡಿ ಅರ್ಥ ಮಾಡಿಕೊಂಡಿದ್ದರು. ಆದರೂ ತಿಳಿಯದವರಂತೆ ಮೌನವಾಗಿದ್ದರು.

ತಾಯಿಗೆ ವಯಸ್ಸಾಯಿತು. ಇನ್ನು ಅವರು ಒಂಟಿಯಾಗಿರುವುದು ಸರಿಯಲ್ಲ ಎಂದು ನಿಶಾ ಅವರನ್ನು ತನ್ನ ಮನೆಗೆ ಬರುವಂತೆ ಕರೆದಳು. ಆದರೆ ತಾಯಿ ಮಾತ್ರ ಅದಕ್ಕೆ ಒಪ್ಪಲಿಲ್ಲ.

ತನ್ನ ಪ್ರಯತ್ನ ಫಲಿಸದಿದ್ದಾಗ ಒಂದು ದಿನ ಪತಿಯ ಮೂಡ್‌ ನೋಡಿಕೊಂಡು ನಿಶಾ ಮಾತು ತೆಗೆದಳು, “ಕಿಶೋರ್‌, ಅಮ್ಮ ಒಂಟಿಯಾಗಿದ್ದಾರೆ ಅದಕ್ಕೆ……”

ಅವಳ ಮಾತು ಮುಗಿಯುವ ಮೊದಲೇ ಕಿಶೋರ್‌, “ಅದಕ್ಕೇನಂತೆ. ಒಬ್ಬರು ಫುಲ್ ಟೈಮ್ ಕೇರ್‌ ಟೇಕರ್‌ ನ್ನು ಇರಿಸೋಣ,” ಎಂದು ಹೇಳಿ ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಕೋಣೆಯಿಂದ ಹೊರ ನಡೆದ.

ನಿಶಾ ನಿಂತಲ್ಲೇ ನಿಂತುಬಿಟ್ಟಳು, `ತಾಯಿ ತಂದೆಯ ಪ್ರೀತಿ, ಸಂಸಾರ ಎಂದರೇನು ಎನ್ನುವುದು ಕಿಶೋರನಿಗೆ ಹೇಗೆ ಅರ್ಥವಾದೀತು? ಮೊದಲಿನಿಂದ ಹಾಸ್ಟೆಲ್ ‌ನಲ್ಲಿ ಇದ್ದದ್ದು, ಈಗ ತಲೆ ತುಂಬ ಅಹಂಕಾರ ತುಂಬಿದೆ. ಹೀಗಿರುವುದಕ್ಕೇ ನಮ್ಮ ಸಂಸಾರ ಬೆಳೆಯುತ್ತಿಲ್ಲ.’ ಪತಿಯ ಮಾತಿಗೆ ನಿಶಾ ತಲೆ ಬಾಗಬೇಕಾಯಿತು.

ಒಂದು ದಿನ ತಾಯಿಗೆ ಬಹಳ ಜ್ವರ ಬಂದಿದೆ ಎಂದು ಕೇರ್‌ ಟೇಕರ್‌ ಫೋನ್‌ ಮಾಡಿದಳು. ತಾಯಿಯನ್ನು ನೋಡಲು ನಿಶಾ ಹೊರಟಳು. ಆದರೆ ಕಿಶೋರ್‌ ಅವಳನ್ನು ತಡೆದು, “ಇಂದು ಭಾನುವಾರ. ನನಗೆ ರಜೆ ಇರುವಾಗ ನೀನು ಹೊರಗಡೆ ಹೋಗುತ್ತೀಯಾ? ನನಗೆ ರಜಾ ಇರುವಾಗ ನೀನು ಮನೆಯಲ್ಲಿರಬೇಕು……. ನಿನ್ನ ತಾಯಿಗೆ ಜ್ವರ ಬಂದಿದ್ದರೆ ಮಾತ್ರೆ ಕೊಡೋದಕ್ಕೆ ಕೇರ್‌ ಟೇಕರ್‌ ಗೆ ಹೇಳು,” ಎಂದ.

ನಿಶಾ ತಾಯಿಯನ್ನು ನೋಡಲು ಹೋಗಲಾಗಲಿಲ್ಲ. ತಾಯಿಯ ಆರೋಗ್ಯ ಹದಗೆಟ್ಟಿತು. ಏನನ್ನೂ ತಿನ್ನಲಾಗುತ್ತಿರಲಿಲ್ಲ ನಿಶಾ ಅಳುಕುತ್ತಾ  ಪತಿಯನ್ನು, “ಅಮ್ಮನ ಆರೋಗ್ಯ ಬಹಳ ಕೆಟ್ಟಿದೆ. ನಾನು ಅವರ ಜೊತೆ ಇರಬೇಕಾಗುತ್ತೆ….ಅದಕ್ಕೆ ಅವರನ್ನು ಇಲ್ಲಿಗೆ ಕರೆದುಕೊಂಡು ಬರಲೇ?” ಎಂದು ಕೇಳಿದಳು.

kyon-aasuo-ka-story

ಕಿಶೋರ ಸಿಟ್ಟಿನಿಂದ ಕಿರಿಚಿದ, “ಏಕೆ…..? ನಾನೇನು ನಿನ್ನ ಇಡೀ ವಂಶವನ್ನೇ ನೋಡಿಕೊಳ್ಳುತ್ತೇನೆ ಅಂತ ಬರೆದುಕೊಟ್ಟಿದ್ದೀನೇನು? ನಿನ್ನನ್ನು ಮದುವೆಯಾಗಿ ಇಲ್ಲಿ ತಂದಿಟ್ಟುಕೊಂಡಿರುವುದೇ ದೊಡ್ಡ ವಿಷಯ. ಅಷ್ಟಲ್ಲದೆ ನಿಮ್ಮ ಅಮ್ಮನ ಹೊರೆಯನ್ನು ಹೊರಬೇಕು ಅಂತೀಯಾ? ಅಲ್ಲಾ…. ನಿಮ್ಮಮ್ಮ ಇನ್ನೂ ಎಷ್ಟು ದಿನ ಬದುಕಿರುತ್ತಾರೆ? ಕೇರ್‌ ಟೇಕರ್‌ ಇದ್ದಾರೆ ಬಿಡು ಅವರನ್ನು ನೋಡಿಕೊಳ್ಳುವುದಕ್ಕೆ.”

ಇಡೀ ದಿನ ನಿಶಾ, `ನನಗೊಂದು ವ್ಯಕ್ತಿತ್ವವೇ ಇಲ್ಲವೇ? ಅವರು ಆಡಿಸಿದಂತೆ ಆಡುವುದಷ್ಟೇ ನನ್ನ ಕೆಲಸವೇ?” ಎಂದು ಚಿಂತಿಸಿದಳು.

ರಾತ್ರಿಯಿಡೀ ಅವಳು ಕಳೆದ ವರ್ಷಗಳ ಬಗ್ಗೆ ಯೋಚಿಸಿದಳು, `ಇಷ್ಟು ವರ್ಷಗಳೂ ಮೌನವಾಗಿ ಕೀಲು ಬೊಂಬೆಯಂತೆ ನಡೆದುಕೊಂಡದ್ದಾಯಿತು. ಸಹನೆಗೂ ಒಂದು ಮಿತಿ ಇದೆ.’

ಹಿಂದೆ 2-3 ಸಲ ಪತಿಯಿಂದ ಅವಮಾನಗೊಂಡು ನಿಶಾ ತಾಯಿಯ ಮನೆಗೆ ಹೋಗಿದ್ದಳು. ಆದರೆ ಕಿಶೋರನ ಮಾತಿಗಾಗಿ ಹಿಂದಿರುಗಿದ್ದಳು. ಆದರೆ ಆ ಬಾಳು ಸಾಕು. ಹಿಂದಿರುಗುವುದು ಬೇಡ ಎಂದು ಯೋಚಿಸಿದಳು.

ಕಿಶೋರ್‌ ಆಫೀಸಿಗೆ ಹೋದ ಮೇಲೆ ನಿಶಾ ತನ್ನ ಸಾಮಾನುಗಳನ್ನು ತೆಗೆದುಕೊಂಡು ತಾಯಿಯ ಮನೆಗೆ ಹೊರಟುಹೋದಳು. ತಾಯಿಗೆ ಅವಳ ಅಗತ್ಯವಿತ್ತು.

ನಿಶಾಳನ್ನು ಕಂಡು ತಾಯಿಗೆ ಸಮಾಧಾನವಾಯಿತು, “ಕಿಶೋರ್‌ ಬಿಟ್ಟು ಹೋದರೇನಮ್ಮಾ….?” ಎಂದು ಕೇಳಿದರು.

“ಇಲ್ಲ ಅಮ್ಮಾ, ಬರುವುದಕ್ಕೆ ಒಪ್ಪಿಗೆ ಅಥವಾ ಜೊತೆಯ ಅಗತ್ಯವಿಲ್ಲ. ಬೇಕಾದಾಗ ಬರಬಹುದು,” ನಿಶಾ ನಗುತ್ತಾ ಹೇಳಿದಳು.

“ಏನಮ್ಮ ಹಾಗೆಂದರೆ…..?” ತಾಯಿ ಕೇಳಿದರು.

“ಏನಿಲ್ಲಮ್ಮಾ, ಈಗ ನಿಮಗೆ ನನ್ನ ಅಗತ್ಯ ಇದೆ ಅಲ್ಲವೇ? ಅದಕ್ಕೆ ನಾನೇ ಹೊರಟು ಬಂದೆ,” ಎಂದಳು. ನಿಶಾ ಚೆನ್ನಾಗಿ ತಾಯಿಯ ಸೇವೆ ಮಾಡಿದಳು. ಅವರ ಆರೋಗ್ಯ ಸುಧಾರಿಸಿತು. ಕಿಶೋರ್‌ ಒಂದು ದಿನವೂ ಫೋನ್‌ ಮಾಡಲಿಲ್ಲ. ಅತ್ತೆಯ ಆರೋಗ್ಯ ವಿಚಾರಿಸಲಿಲ್ಲ. `ಸ್ವಾರ್ಥಿ’ ಎಂದುಕೊಂಡಳು ನಿಶಾ. ತಾಯಿ ಒಂದು ದಿನ ಅಳಿಯನ ಬಗ್ಗೆ ವಿಚಾರಿಸಿದರು. ನಿಶಾ ಇರುವ ವಿಷಯನ್ನು ತಿಳಿಸಿದಳು. ತಾನು ಹಿಂದಿರುಗಿ ಹೋಗುದಿಲ್ಲವೆಂದೂ ಹೇಳಿದಳು.

ಒಂದು ಬೆಳಗ್ಗೆ ಕಿಶೋರ್‌ಬಂದು ನಿಶಾಳ ಮೇಲೆ ಕೂಗಾಡಿದ, “ಏನು ಮಹಾರಾಣಿಯ ಕಾರುಬಾರು…..? ಹೇಳದೆ ಹೋಗೋದು….. ಆಮೇಲೆ ದಿನಗಟ್ಟಳೆ ಮನೆಗೆ ಬರದೆ ಉಳಿಯುವುದು…… ನಡಿ ಮನೆಗೆ ಹೊರಗೆ ಕಾರ್‌ ನಲ್ಲಿ ಕುಳಿತಿರುತ್ತೇನೆ. ನಿನ್ನ ಸಾಮಾನುಗಳನ್ನೆಲ್ಲ ತೆಗೆದುಕೊಂಡು ಬಾ,” ಒಂದೇ ಉಸಿರಿನಲ್ಲಿ ಒದರಿ ಹೊರಗೆ ಹೋದ. ಅವನು ತಾಯಿಯನ್ನು ಮಾತನಾಡಿಸಲೂ ಇಲ್ಲ.

ಕಿಶೋರ್‌ ಹೊರಗೆ ಕಾಲಿಡುತ್ತಿದ್ದಂತೆ ನಿಶಾ ಜೋರಾಗಿ, “ನಿಲ್ಲಿ ಕಿಶೋರ್‌, ನನ್ನನ್ನು ಏನು ಅಂದಿಕೊಂಡಿದ್ದೀರಿ…..? ನನಗೆ ಏನು ಬೇಕಾದರೂ ಅನ್ನಬಹುದು. ಬೇಡವಾದಾಗ ಹೊರಗೆ ಹಾಕಬಹುದು, ಬೇಕಾದಾಗ ಮನೆಗೆ ಕರೆಯಬಹುದು. ನಾನೇನು ಒಂದು ವಸ್ತುವೋ ಅಥವಾ ಒಂದು ಕೀಲುಬೊಂಬೆಯೋ? ಎರಡೂ ಅಲ್ಲ. ನಾನೂ ಒಬ್ಬಳು ಹೆಣ್ಣು! ನನಗೆ ನನ್ನದೇ ಆದ ವ್ಯಕ್ತಿತ್ವವಿರುತ್ತದೆ. ಒಬ್ಬ ಸ್ತ್ರೀ ತಾನೇ ಜೀವಿಸಬಲ್ಲಳು ಅವಳೆಂದೂ ಅಪೂರ್ಣಳಲ್ಲ. ಅವಳು ಏನೇನು ಮಾಡಬಲ್ಲಳು ಅನ್ನುವುದನ್ನು ನಾನು ಹೇಳುತ್ತೇನೆ ಕೇಳಿ….. ಅವಳು ತಾಯಿ ತಂದೆಯನ್ನೂ ನೋಡಿಕೊಳ್ಳಬಲ್ಲಳು, ಮನೆಯನ್ನು ನೋಡಿಕೊಳ್ಳಬಲ್ಲಳು, ಉದ್ಯೋಗ ಮಾಡಬಲ್ಲಳು. ಆದ್ದರಿಂದ ನನ್ನನ್ನು ನೀವು ಅಪ್ರಯೋಜಕಳು ಅಂತ ತಿಳಿಯಬೇಡಿ. ಜೀವನ ಎಂದೂ ಅಪೂರ್ಣವಲ್ಲ. ನಿಶಾ ಸಹ ಎಂದೂ ಅಪೂರ್ಣಳಾಗಿರಲಿಲ್ಲ. ಆಗುವುದೂ ಇಲ್ಲ. ಆದ್ದರಿಂದ ನಾನು ನಿಮ್ಮ ಜೊತೆ ಬರೋದಿಲ್ಲ. ಇನ್ನು ಮುಂದೆ ನನ್ನ ಮನೆಗೆ ಕಾಲಿಡಬೇಡಿ!” ಎಂದಳು.

ಕಿಶೋರ್‌ ಅಚ್ಚರಿಗೊಂಡ. ಅವನು ಏನೋ ಹೇಳಲು ಬಾಯ್ತೆರೆಯುವಷ್ಟರಲ್ಲಿ ನಿಶಾ ಬಾಗಿಲು ಮುಚ್ಚಿಬಿಟ್ಟಳು. ಮುಚ್ಚಿದ ಬಾಗಿಲನ್ನು ನೋಡುತ್ತಾ ಕಿಶೋರ್‌ ನಿಧಾನವಾಗಿ ಅಲ್ಲಿಂದ ಹೊರಟುಹೋದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ