ಸ್ನೇಹಾಳ ಮದುವೆಯಾಗಿ 5 ವರ್ಷಗಳಾಗಿದೆ. ಅವಳು ಗಂಡನೊಂದಿಗೆ ಅದೆಷ್ಟು ಖುಷಿಯಾಗಿದ್ದಾಳೆಂದರೆ, ಮನೆ ನಿರ್ವಹಣೆಯ ಬಗ್ಗೆ ಅವಳಿಗೆ ತಿಳಿದುಕೊಳ್ಳುವ ಅವಶ್ಯಕತೆ ಉಂಟಾಗುತ್ತಿರಲಿಲ್ಲ. ಗಂಡ ಪರಮೇಶ್‌ ಈ ಬಗ್ಗೆ ತಿಳಿ ಹೇಳಲು ಬಂದರೆ ಆಕೆ, “ನೀವು ನನ್ನ ಜೊತೆಯೇ ಇರುವಾಗ ನಾನು ಆ ವಿಷಯ ತಿಳಿದುಕೊಳ್ಳುವ ಅಗತ್ಯವಾದರೂ ಏನಿದೆ?” ಎಂದು ಕೇಳುತ್ತಿದ್ದಳು. ಆ ಕಾರಣದಿಂದ ಪರಮೇಶ್‌ ಗೆ ಬಹಳಷ್ಟು ಕೆಲಸಗಳನ್ನು ತಾನೊಬ್ಬನೇ ಸಂಭಾಳಿಸಬೇಕಾಗಿ ಬರುತ್ತಿತ್ತು. ಮನೆಯ ಖರ್ಚಿನ ಲೆಕ್ಕಪತ್ರಗಳನ್ನು ತಾನೊಬ್ಬನೇ ನಿರ್ವಹಿಸಬೇಕಾಗಿ ಬರುತ್ತಿತ್ತು. ಅವಳಿಗೆ ಏನು ಬೇಕಾಗುತ್ತಿತ್ತೊ ಅದಕ್ಕಷ್ಟೇ ಅವನಿಂದ ಹಣ ಕೇಳಿ ಪಡೆಯುತ್ತಿದ್ದಳು.

ಒಂದು ಕಂಪನಿಯ ಜವಾಬ್ದಾರಿ ಸ್ಥಾನದಲ್ಲಿರುವ ಪರಮೇಶ್‌ ನನ್ನು ಅವರ ಕಂಪನಿ 6 ತಿಂಗಳ ಮಟ್ಟಿಗೆ ವಿದೇಶಕ್ಕೆ ಕಳುಹಿಸುವ ಬಗ್ಗೆ ತಿಳಿಸಿತು. ಗಂಡನ ಜೊತೆ ತಾನೂ ಹೋಗಬಹುದು ಎಂದು ಸ್ನೇಹಾ ಭಾವಿಸಿದ್ದಳು. ಆದರೆ ಕಂಪನಿ ಪರಮೇಶ್‌ ಮಾತ್ರ ಹೋಗಬೇಕು ಎಂದು ಹೇಳಿದ್ದರಿಂದ ಸ್ನೇಹಾಳಿಗೆ ನಿರಾಶೆಯಾಯಿತು. ಗಂಡ ವಿದೇಶಕ್ಕೆ ಹಾರಿದ ಬಳಿಕ ಸ್ನೇಹಾ ಒಬ್ಬಳೇ ಮನೆಯಲ್ಲಿ ಇರಬೇಕಾಯಿತು. ಈಗ ಮನೆಯ ಎಲ್ಲ ಜವಾಬ್ದಾರಿಗಳನ್ನು ಅವಳೊಬ್ಬಳೇ ನಿಭಾಯಿಸಬೇಕಿತ್ತು. ಆದರೆ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವಳಿಗೆ ಕಿಂಚಿತ್ತೂ ಇರಲಿಲ್ಲ.

ಎಲ್ಐಸಿ ಪಾಲಿಸಿ, ವಿದ್ಯುತ್‌ ಬಿಲ್‌, ನೀರಿನ ಬಿಲ್ ‌ಎಲ್ಲವೂ ಕಟ್ಟಬೇಕು ಎನ್ನುವುದು ಅವಳಿಗೆ ಗೊತ್ತೇ ಇರಲಿಲ್ಲ. ತಾನು ಮೊದಲಿನಿಂದಲೇ ಈ ಕೆಲಸಗಳ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿದ್ದರೆ ಈ ಕಷ್ಟ ಬರುತ್ತಿರಲಿಲ್ಲ ಎನ್ನುವುದು ಅವಳಿಗೆ ಅರಿವಾಯಿತು.

ಸ್ನೇಹಾಳಿಗಿಂತಲೂ ಹೆಚ್ಚು ತೊಂದರಗೆ ಒಳಗಾದವಳು ಸೀಮಾ. ಆಕೆ ಮನೆಯ ಯಾವುದೇ ಕೆಲಸಗಳ ಬಗ್ಗೆ ಗಮನವನ್ನೇ ಕೊಡುತ್ತಿರಲಿಲ್ಲ. ಅದೊಂದು ದಿನ ಆಕೆಯ ಗಂಡ ಅಪಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ. ಸೀಮಾಳಿಗೆ ಆಗ ಗಂಡನ ಚಿಕಿತ್ಸೆಯ ಖರ್ಚಿಗೆ ಎಲ್ಲಿಂದ ಹಣ ತರಬೇಕು ಎಂಬ ಚಿಂತೆ ಶುರುವಾಯಿತು. ಬ್ಯಾಂಕಿನ ಪಾಸ್‌ ಬುಕ್‌ ಎಲ್ಲಿದೆ, ಎ.ಟಿ.ಎಂ ಪಿನ್‌ ಏನು ಎಂಬುದು ಅವಳಿಗೆ ಗೊತ್ತಿರಲಿಲ್ಲ. ಬ್ಯಾಂಕಿನಲ್ಲಿ ಹಣ ಇದ್ದೂ ಕೂಡ ಅವಳು ಅವರಿವರಿಂದ ಹಣ ಸಾಲ ಕೇಳಿ ಆಸ್ಪತ್ರೆಗೆ ಕೊಡಬೇಕಾಯಿತು. ಶಾಪಿಂಗ್‌, ಕಿಟಿ ಪಾರ್ಟಿ ಎಂದು ಸ್ನೇಹಿತೆಯರ ಜೊತೆ ಸುತ್ತಾಡುತ್ತಿದ್ದ ಸೀಮಾಳಿಗೆ ಈಗ ವಾಸ್ತವ ಸ್ಥಿತಿಯ ಅರಿವಾಗುತ್ತಿತ್ತು.

shutterstock-117396625

ಸ್ನೇಹಾ ಹಾಗೂ ಸೀಮಾರಿಗಿಂತ ರಶ್ಮಿ ಸ್ಥಿತಿ ವಿಭಿನ್ನ. ಅವಳು ಗಂಡನ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾಳೆ. ಗಂಡ ಸಂಬಳದ ಒಂದು ಭಾಗವನ್ನು ಜಂಟಿ ಖಾತೆಗೆ ಹಾಕುತ್ತಾನೆ. ರಶ್ಮಿ ಮನೆಯ ಜವಾಬ್ದಾರಿಗೆ ಎಷ್ಟು ಹಣ ಬೇಕೊ ಅಷ್ಟು ಹಣವನ್ನು ತೆಗೆದುಕೊಂಡು ಉಳಿದ ಹಣವನ್ನು ಉಳಿತಾಯಕ್ಕೆ ಸೇರಿಸುತ್ತಾಳೆ. ರಶ್ಮಿಗೆ ಚಿಕ್ಕಪುಟ್ಟ ಕೆಲಸಗಳಿಗಾಗಿ ಗಂಡನ ಮುಂದೆ ನಿಲ್ಲಬೇಕಾದ ಅಗತ್ಯ ಉಂಟಾಗುವುದಿಲ್ಲ. ಯಾರು ಗಂಡನ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಾರೊ, ಅವರು ಗಂಡನಿಗೆ ಅತ್ಯಂತ ಪ್ರೀತಿ ಪಾತ್ರರಾಗುತ್ತಾರೆ.

ಜೀವನದಲ್ಲಿ ಈ ತೆರನಾದ ಸ್ಥಿತಿ ಯಾರಿಗೆ, ಯಾವಾಗ ಬೇಕಾದರೂ ಬರಬಹುದು. ಹೀಗಾಗಿ ನೀವು ಅಡುಗೆ ಕೆಲಸ ಕಾರ್ಯಗಳ ಹೊರತಾಗಿ ಬೇರೆ ಕೆಲವು ಜವಾಬ್ದಾರಿಗಳನ್ನು ನಿಭಾಯಿಸುವುದನ್ನೂ ಕಲಿತುಕೊಳ್ಳಬೇಕು. ಅದರಲ್ಲೂ ಹಣಕಾಸಿಗೆ ಸಂಬಂಧಪಟ್ಟ ಒಂದಷ್ಟು ಕೆಲಸಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು. ನೀವು ಹೀಗೆ ಮಾಡುವುದರಿಂದ ಗಂಡನ ಜವಾಬ್ದಾರಿಗಳು ಅಷ್ಟಿಷ್ಟು ಕಡಿಮೆಯಾಗಿ ಅವನು ತನ್ನ ಕೆಲಸ ಕಾರ್ಯಗಳನ್ನು ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ.

ನೀವು ಈ ಕೆಳಕಂಡ ಟಿಪ್ಸ್ ಅನುಸರಿಸಿದರೆ ನೀವು ಗಂಡನ ಮೆಚ್ಚಿನ ಹೆಂಡತಿಯಾಗುವುದರ ಜೊತೆಗೆ ಗಂಡನ ಪಾರ್ಟ್‌ ನರ್‌ ಕೂಡ ಆಗುವಿರಿ :

ಮನೆಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿ ಇಡಿ. ಮನೆ ಕಂದಾಯ, ದೂರವಾಣಿ ಬಿಲ್‌, ಫೋನ್‌, ಆಭರಣ, ವಾಷಿಂಗ್ ಮೆಷಿನ್‌ ಮುಂತಾದವುಗಳನ್ನು ಖರೀದಿಸಿದ ಬಿಲ್ ‌ಗಳನ್ನು ಸರಿಯಾಗಿ ಫೈಲ್ ಮಾಡಿ ಇಡಿ. ಬ್ಯಾಂಕ್‌ ವಹಿವಾಟಿನ ರಸೀದಿಗಳನ್ನು ಸರಿಯಾಗಿ ನಿರ್ವಹಿಸಿ. ಅಗತ್ಯಬಿದ್ದಾಗ ನಿಮಗೆ ಹುಡುಕು ಕಷ್ಟ ಉಂಟಾಗಬಾರದು.

IB152155-152155153102977-SM572582

ಬ್ಯಾಂಕ್‌ ಗೆ ಜಮೆ ಮಾಡುವ ಹಣದ ಪೂರ್ತಿ ವಿವರ ನಿಮ್ಮ ಬಳಿ ಇರಬೇಕು. ಬ್ಯಾಂಕಿನ ಪಾಸ್‌ ಬುಕ್‌ ನ್ನು ಯಾವಾಗಲೂ ಅಪ್ ಡೇಟ್‌ ಆಗಿಡಿ. ಅದೇ ರೀತಿ ಚೆಕ್‌ ಬುಕ್‌ ವಿವರಗಳನ್ನು ಬರೆದಿಡಿ. ಚೆಕ್‌ ಯಾರಿಗೆ, ಯಾವಾಗ ಕೊಟ್ಟಿದ್ದೀರಿ ಅದರ ವಿವರದ ಜೊತೆಗೆ ಬ್ಯಾಂಕಿನ ಖಾತೆಯಲ್ಲಿ ಬಾಕಿ ಉಳಿದ ಮೊತ್ತದ ಬಗ್ಗೆ ಪರಿಶೀಲನೆ ನಡೆಸಿ. ಹೀಗೆ ಮಾಡುವುದರಿಂದ ಚೆಕ್‌ ತಿರಸ್ಕೃತಗೊಳ್ಳುವ ಅಪಾಯ ಕಡಿಮೆಯಾಗುತ್ತದೆ.

ಮನೆ ಕಂದಾಯ, ವಿದ್ಯುತ್‌, ನೀರು, ಫೋನ್‌ ಬಿಲ್ಲುಗಳನ್ನು ನೀವೇ ಸ್ವತಃ ತುಂಬಿ. ಬಿಲ್ ‌ಗಳಲ್ಲಿ ವ್ಯತ್ಯಾಸ ಉಂಟಾದರೆ ಪರಿಶೀಲನೆ ನಡೆಸಬಹುದು.

ಟಿ.ವಿ., ಫ್ರಿಜ್‌, ವಾಷಿಂಗ್‌ ಮೆಷಿನ್‌ ಮುಂತಾದ ಸರ್ವೀಸಿಂಗ್‌ ಕೇಂದ್ರಗಳ ಫೋನ್‌ ನಂಬರ್‌ ಒಂದು ಡೈರಿಯಲ್ಲಿ ನಮೂದಿಸಿ ಇಡಿ. ಇದರ ಹೊರತಾಗಿ ನಿಮ್ಮ ಹತ್ತಿರದ ವಿದ್ಯುತ್‌, ನೀರು, ದೂರವಾಣಿ ಕೇಂದ್ರ ಹೀಗೆ ಎಲ್ಲ ಸೇವಾ ಕೇಂದ್ರಗಳ ನಂಬರ್‌ ಗಳನ್ನು ಬರೆದಿಡಿ. ಸಂದರ್ಭ ಬಂದಾಗ ಅನುಕೂಲವಾಗುತ್ತದೆ.

ಯಾವದೇ ಹೊಸ ಸಲಕರಣೆ ಖರೀದಿಸಿದಾಗ ಅದರ ಗ್ಯಾರಂಟಿ ಕಾರ್ಡ್‌ ನ್ನು ಒಂದು ಕಡೆ ಸರಿಯಾಗಿ ತೆಗೆದಿಡಿ. ಅವಶ್ಯಕತೆ ಉಂಟಾದಾಗ ಆ ಸಲಕರಣೆಯನ್ನು ಉಚಿತವಾಗಿ ದುರಸ್ತಿ ಮಾಡಿಸಲು ಅನುಕೂಲವಾಗುತ್ತದೆ.

ನೀವು ಸಾಲ ಪಡೆದಿದ್ದರೆ ಅದರ ವಿವರಗಳುಳ್ಳ ದಾಖಲೆಗಳನ್ನು ಒಂದು ಕಡೆಗೆ ಫೈಲ್ ‌ಮಾಡಿಡಿ. ಸಾಲದ ಮೊತ್ತ, ಬಡ್ಡಿ ದರ, ಬ್ಯಾಂಕ್‌ ನಿಂದ ಕಡಿತಗೊಳ್ಳುತ್ತಿರುವ ಮೊತ್ತ ಈ ಎಲ್ಲ ವಿವರಗಳನ್ನು ಸರಿಯಾಗಿ ನಮೂದಿಸಿ.

ಎಲ್ಲ ಮೂಲ ದಾಖಲೆಗಳ ನಕಲು ಪ್ರತಿ ತೆಗೆದಿಡಿ. ಮೂಲ ದಾಖಲೆಗಳು ಕಳೆದುಹೋದರೆ ನಕಲು ಪ್ರತಿಗಳು ಉಪಯೋಗಕ್ಕೆ ಬರುತ್ತವೆ.

ಒಂದು ವೇಳೆ ಗಂಡ ಆಫೀಸಿನ ದಾಖಲೆಗಳನ್ನು ಮನೆಯಲ್ಲಿ ಇಟ್ಟಿದ್ದರೆ ಅವುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಿ. ಆಫೀಸಿನ ಕಾಗದಪತ್ರಗಳಿಗೂ ನನಗೂ ಏನು ಸಂಬಂಧ ಎಂದು ನಿರ್ಲಕ್ಷ್ಯ ತೋರಬೇಡಿ.

ಗಂಡ ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದರ ವಿವರಗಳನ್ನು ಕೂಡ ಒಂಡು ಕಡೆ ನಮೂದಿಸಿಡಿ. ಯಾರಿಂದ, ಯಾವಾಗ, ಎಷ್ಟು ಹಣ ಬರುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಹೀಗೆ, ಬಹಳಷ್ಟು ಕೆಲಸಗಳನ್ನು ಮಾಡುವುದರಿಂದ ನೀವು ಗಂಡನಿಗೆ ನಿಜವಾದ ಪಾರ್ಟ್‌ನರ್‌ ಆಗಬಹುದು.

ವೀಣಾ ವರುಣ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ