ಸತೀಶ್‌ ನಗರವಾಸಿ. ಅವನು ಆಗಾಗ ಹೆಂಡತಿಯ ಮೇಲೆ ಕೈ ಮಾಡುತ್ತಿದ್ದ. ಪಕ್ಕದ ಮನೆಯಲ್ಲಿ ವಾಸಿಸುವ ಚಂದ್ರಕಾಂತ 1-2 ಸಲ ಆ ಬಗ್ಗೆ ಗಮನಿಸಿಯೂ ಏನೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಸತೀಶ್‌ ಹೊಡೆಯುವುದನ್ನು ನಿಲ್ಲಿಸದೇ ಇದ್ದಾಗ ಚಂದ್ರಕಾಂತ ಸತೀಶ್‌ ಗೆ ಎಚ್ಚರಿಕೆ ಕೊಟ್ಟರು, “ನೀನು ನಿನ್ನ ಹೆಂಡತಿಯ ಮೇಲೆ ಕೈ ಮಾಡುವುದನ್ನು ನಿಲ್ಲಿಸದೇ ಇದ್ದರೆ, ನಾನು ನಿನ್ನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಕೊಡುತ್ತೇನೆ.”

`ತನಗೆ ಬುದ್ಧಿ ಹೇಳಲು ಇವರಾರು?’ ಎಂದು ಸತೀಶ್‌ ಕೋಪಗೊಂಡು ನಾಲ್ಕೈದು ಜನ ಸ್ನೇಹಿತರನ್ನು ಕರೆದುಕೊಂಡು ಬಂದು ಚಂದ್ರಕಾಂತ್‌ ರನ್ನು ಮನಬಂದಂತೆ ಥಳಿಸಿದ. ಅಷ್ಟೇ ಅಲ್ಲ, ಅವರ ಮಗನ ಮೇಲೂ ಹಲ್ಲೇ ಮಾಡಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಂದ.

ಮತ್ತೊಂದು ಘಟನೆ. ಬದ್ರಿ ಪ್ರಸಾದ್‌ ಹಾಗೂ ಅವರ ಮಗ ಶ್ರೀನಿವಾಸ್‌ ಮೇಲೆ ಪಕ್ಕದ ಮನೆಯ ಅನಿಲ್ ‌ಎಂಬಾತ ಹಲ್ಲೆ ನೆಡಸಿದ. ಇದಕ್ಕೆ ಕಾರಣ ಏನು ಗೊತ್ತೆ? ತಮ್ಮ ಮನೆ ಎದುರು ಗಾಡಿ ನಿಲ್ಲಿಸಬೇಡಿ ಎಂದು ಬದ್ರಿ ಪ್ರಸಾದ್‌ ಮತ್ತು ಅವರ ಮಗ ಶ್ರೀನಿವಾಸ್ ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ತೋರಿಸಿದ.

ದೆಹಲಿಯಲ್ಲಿ 15 ವರ್ಷದ ರೋಹನ್‌ ಎಂಬ ಯುವಕನನ್ನು ಅವನ ಗೆಳೆಯರೇ ಹೊಡೆದು ಸಾಯಿಸಿದರು. ಅದಕ್ಕೆ ಬಲವಾದ ಕಾರಣವೇನೂ ಇರಲಿಲ್ಲ. ಯಾವುದೊ ವಿಷಯಕ್ಕೆ ಸಂಬಂಧಪಟ್ಟಂತೆ ಮನಸ್ತಾಪ ಆಗಿತ್ತಂತೆ. ಅದೇ ಕಾರಣ ಮುಂದಿಟ್ಟುಕೊಂಡು ಗೆಳೆಯರು ಅವನನ್ನು ಹೊಡೆದು ಸಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂಬಂತಾಗಿವೆ. ಜನರ ಹೃದಯದಲ್ಲಿ ಪ್ರೀತಿಯ ಬದಲಿಗೆ ಸಿಡಿಮಿಡಿತನ, ಕೋಪ, ಆಕ್ರೋಶ, ಆವೇಶಗಳು ಮನೆ ಮಾಡಿಕೊಂಡಿವೆ. ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಪಟ್ಟಂತೆ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.

ಕೆಲವೇ ಕೆಲವು ನಿಮಿಷಗಳ ಕೋಪ, ಆವೇಶ ಇನ್ನೊಬ್ಬರ ಜೀವಕ್ಕೆ ಅಪಾಯ ಉಂಟು ಮಾಡಿದರೆ, ಅದರ ಪರಿಣಾಮ ಅನುಭವಿಸುವವರು ಕೋಪ ಮಾಡಿಕೊಂಡರೇ ಹೊರತು ಬೇರಾರೂ ಅಲ್ಲ. ಅದರಿಂದಾಗಿ ಅವರ ಜೀವನವೇ ನರಕವಾಗುತ್ತದೆ. ಅವರ ಜೀವನ ಜೈಲಿನಲ್ಲಿ ಅಥವಾ ಜೈಲಿಗೆ ಹೋಗುವುದನ್ನು ತಡೆಯುವ ಪ್ರಯತ್ನದಲ್ಲೇ ಕಳೆದುಹೋಗುತ್ತದೆ.

ಅಂದಹಾಗೆ ಸಿಟ್ಟು ಅಥವಾ ಆಕ್ರೋಶ ದೇಹಕ್ಕೆ ತಲುಪಿದ ಬಳಿಕ ವಿಷದ ಹಾಗೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ದೈಹಿಕ ಮಾನಸಿಕ ದೃಷ್ಟಿಯಿಂದ ಹಾನಿ ತಲುಪಿಸುವುದರ ಜೊತೆ ಜೊತೆಗೆ ಜೀವನದ ನೆಮ್ಮದಿಯನ್ನೇ ಉಡುಗಿಸಿಬಿಡುತ್ತದೆ.

ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆಯುತ್ತವೆ. ಆಗ ನಾವು ಕೋಪದ ಮೇಲೆ ನಿಯಂತ್ರಣ ಕಳೆದುಕೊಂಡು ಬಿಡುತ್ತೇವೆ. ನಾವು ಮಾನಸಿಕವಾಗಿ ದುರ್ಬಲರಾದಾಗ ನಮ್ಮೊಳಗಿನ ಶಕ್ತಿಯೂ ಸಹ ಮಂದಾಗುತ್ತದೆ.

ಇದಕ್ಕೊಂದು ಒಳ್ಳೆಯ ಉಪಾಯವೆಂದರೆ, ನಾವು ನಮ್ಮ ಕೋಪದ ಮೇಲೆ ನಿಯಂತ್ರಣ ಹೊಂದಬೇಕು.`ಸ್ಟಾಪ್‌ ಟೆಕ್ನಿಕ್‌’ ಅನುಸರಿಸಿ

`ಎಸ್‌’ ಅಂದರೆ ಸ್ಟಾಪ್‌. `ಟಿ’ ಅಂದರೆ ಟೇಕ್‌ ಎ ಬ್ರೆಥ್‌, `ಓ’ ಅಂದರೆ ಅಬ್ಸರ್ವ್ಸ್, `ಪಿ’ ಅಂದರೆ ಪ್ರೊಸೀಡ್‌! ಯಾವುದೇ ವ್ಯಕ್ತಿ ನಿಮ್ಮ ಜೊತೆಗೆ ಕೋಪದಲ್ಲಿ ಏನಾದರೂ ಮಾತನಾಡಿದರೆ, ಆವೇಶದಲ್ಲಿ ಪ್ರತಿಕ್ರಿಯೆ ನೀಡಲು ಹೋಗಬೇಡಿ, ನಂತರ ದೀರ್ಘ ಶ್ವಾಸ ತೆಗೆದುಕೊಂಡು ನಾನೇಕೆ ಅಸಮಾಧಾನಗೊಂಡಿರುವೆ? ಆಸುಪಾಸಿನ ಪರಿಸ್ಥಿತಿಯ ಬಗ್ಗೆ ಗಮನ ಕೊಡುತ್ತ ವಾಸ್ತವ ಸ್ಥಿತಿ ಏನು, ಮುಂದಿನ ಪ್ರತಿಕ್ರಿಯೆ ಏನು ಕೊಡಬೇಕು ಎಂದು ಯೋಚಿಸಿ. ಹೆಚ್ಚಿನ ಪ್ರಕರಣಗಳಲ್ಲಿ ಅತೃಪ್ತಿಯ ಮೂಲ ವಿಷಯವೇ ಮಾಯವಾಗಿ ನೀವು ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.

ಕೋಪಕ್ಕೆ ಮುಂಚೆ ಯೋಚಿಸಿ

ನ್ಯೂಯಾರ್ಕ್‌ ನ ಸೈಕೊ ಥೆರಪಿಸ್ಟ್ ಮ್ಯಾಗ್‌ ಜೋಸೆಫ್‌ ಹೀಗೆ ಹೇಳುತ್ತಾರೆ, “ನನಗೆ ಕೋಪ ಬಂದಾಗ ನಾನು 13ರ ತನಕ ಎಣಿಕೆ ಮಾಡುತ್ತೇನೆ. ಈ ಅವಧಿಯಲ್ಲಿ ವಾಸ್ತವ ಪರಿಸ್ಥಿತಿ ಹಾಗೂ ಸತ್ಯಾಂಶಗಳ ಬಗ್ಗೆ ಅರಿಯಲು ಪ್ರಯತ್ನಿಸುವೆ. ನನ್ನ ಕೋಪಕ್ಕೆ ಅರ್ಥ ಇದೆಯೇ ಎಂದು ತಿಳಿದುಕೊಳ್ಳುವೆ. ಆ ಬಳಿಕ ನಾನು ನನ್ನ ಕೋಪ ಹೇಗೆ ಬೇರೆಯವರ ಮೇಲೆ ಪ್ರಭಾವ ಬೀರುತ್ತದೆ ಎಂದು ಯೋಚಿಸುತ್ತೇನೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿ ಸಂಬಂಧದ ಮೇಲೆ ಹಾನಿ ಉಂಟಾಗಬಹುದೆ ಎಂದು ಯೋಚಿಸಿ, ಅಂತಹ ಮಾತುಗಳನ್ನು ಆಡದೆ ಇರುತ್ತೇನೆ.”

ಸ್ಪೇಸ್ಕೊಡಿ

ನೀವು ನಿಮ್ಮ ಎಮೋಶನ್ಸ್ ಹಾಗೂ ರಿಯಾಕ್ಷನ್‌ ಗಳ ನಡುವೆ ಸಾಕಷ್ಟು ಅಂತರ ಕೊಡಿ. ನಿಮ್ಮನ್ನು ನೀವೇ ಕ್ರೋಧ ಮತ್ತು ಆವೇಶದ ಸ್ಥಿತಿಯಲ್ಲಿ ಕಂಡುಕೊಂಡರೆ, ಮೂಗಿನಿಂದ ಗಾಢ ಉಸಿರು ಎಳೆದುಕೊಂಡು, ಬಾಯಿಂದ ಉಸಿರು ಬಿಡಿ. ಇದು ನಿಮ್ಮಲ್ಲಿ ಅದ್ಭುತ ಪರಿವರ್ತನೆ ತರುತ್ತದೆ. ನೀವು ಜಗಳ ಆಡುವ ಬದಲು, ಹೋಗಲಿ ಬಿಡಿ ಎಂಬ ಸ್ಥಿತಿಗೆ ಬರುವಿರಿ.

ಆಕ್ರೋಶ ಹೊರಹೊಮ್ಮಿಸಿ

ಕೋಪವನ್ನು ನಿಮ್ಮಲ್ಲೇ ಹತ್ತಿಕ್ಕುವ ಬದಲು ಅದನ್ನು ನಿಮ್ಮ ದೇಹದಿಂದ ಹೊರಹಾಕಿಸಿ. ಏಕೆಂದರೆ ಹತ್ತಿಕ್ಕಲ್ಪಟ್ಟ ಭಾವನೆಗಳು ಎಂದೂ ಸಾಯುವುದಿಲ್ಲ. ಅವು ನಿಮ್ಮ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ನೀವು ಕೋಪವನ್ನು ಕಾಲ್ಪನಿಕವಾಗಿ ಹೊರಹೊಮ್ಮಿಸುವ ದಾರಿ ಕಂಡುಕೊಳ್ಳಿ. ನೀವು ಕಲ್ಪನೆ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಯಾವ ವ್ಯಕ್ತಿ ನಿಮಗೆ ನಿಜವಾಗಿಯೂ ತೊಂದರೆ ಕೊಟ್ಟಿರುತ್ತಾನೊ, ಅಂತಹ ವ್ಯಕ್ತಿಯ ವಿರುದ್ಧ ಮುಚ್ಚಿದ ಕೋಣೆಯಲ್ಲಿ ಆ ವ್ಯಕ್ತಿ ಕಣ್ಮುಂದೆಯೇ ಇದ್ದಾನೆಂದು ಭಾವಿಸಿಕೊಂಡು ನಿಮ್ಮ ಆಕ್ರೋಶವನ್ನು ಮನಸಾರೆ ಹೊರಹಾಕಿಬಿಡಿ. ಆಗ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ.

ಸಂಗೀತದಿಂದ ಮೂಡ್‌ ಬದಲಿಸಿ ಕೆಲವರು ಕೋಪ ಬಂದಾಗ ಸಾಮಾನುಗಳನ್ನು ಅತ್ತಿತ್ತ ಬಿಸಾಡುತ್ತಾರೆ. ಅದರಿಂದ ಅವರು ತಮಗಷ್ಟೇ ಅಲ್ಲ, ಬೇರೆಯವರಿಗೂ ಹಾನಿಯುಂಟು ಮಾಡುತ್ತಾರೆ. ನಿಮಗೆ ಕೋಪ ಬಂದಾಗ ಆ ಜಾಗದಿಂದ ಸ್ವಲ್ಪ ದೂರ ಹೋಗಿ. ಜಿಮ್ ಗೆ ಹೋಗಿ ಇಲ್ಲಿ ಮ್ಯೂಸಿಕ್‌ ಆಲಿಸಿ ಅಥವಾ ಯಾವುದಾದರೂ ಹಾಡಿಗೆ ಹೆಜ್ಜೆ ಹಾಕಿ. ಅಂತಹ ಸಂದರ್ಭದಲ್ಲಿ ನೀರು, ಹಾಲು ಕುಡಿಯಿರಿ. ಇಲ್ಲಿ, ನಿಮಗೆ ಇಷ್ಟವಾದ ಯಾವುದಾದರೂ ಸಿಹಿ ಪದಾರ್ಥ ಸೇವಿಸಿ.

ಎದುರಿನವರಿಗೆ ಮನವರಿಕೆ ಮಾಡಿ

ಎಷ್ಟೋ ಸಲ ನಾವು ಬೇರೆಯವರ ಬಗ್ಗೆ ತೀರ್ಮಾನಕ್ಕೆ ಬಂದು ಬಿಟ್ಟಿರುತ್ತೇವೆ ಅಥವಾ ಎದುರಿಗಿನ ವ್ಯಕ್ತಿ ಉದ್ದೇಶಪೂರ್ವಕವಾಗಿ ನನಗೆ ನೋವುಂಟು ಮಾಡಿದ್ದಾನೆ ಎಂದು ಭಾವಿಸುತ್ತೇವೆ. ಆದರೆ ಒಮ್ಮೊಮ್ಮೆ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಉದಾಹರಣೆಗಾಗಿ ಯಾರೊ ಒಬ್ಬ ವ್ಯಕ್ತಿ ತನ್ನ ವಾಹನದಿಂದ ನಿಮಗೆ ಗಾಯ ಮಾಡಿದ. ಆ ವ್ಯಕ್ತಿ ಅನಾರೋಗ್ಯ ಪೀಡಿತ ತನ್ನ ಆತ್ಮೀಯರೊಬ್ಬರನ್ನು ನೋಡಲು ಆಸ್ಪತ್ರೆಗೆ ಹೋಗುವ ಆತುರದಲ್ಲಿ ಕೆಟ್ಟು ಹೋದ ಮೂಡ್‌ ನಲ್ಲಿ ತನ್ನ ವಾಹನವನ್ನು ನಿಮಗೆ ತಗುಲಿಸಿರಬಹುದು. ಆಗ ಕೋಪದಿಂದ ಜಗಳವಾಡಿ, ಬಳಿಕ ಪಶ್ಚಾತ್ತಾಪ ಪಡುವ ಬದಲು, ಸಕಾಲದಲ್ಲಿಯೇ ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು.

ಗೌರಿ ಪ್ರಸನ್ನ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ