ಅವಳೊಬ್ಬ ಮಧ್ಯಮ ವರ್ಗದ ಹುಡುಗಿ, ಆದರೆ ಆಸೆಗಳು ನೂರಾರು. ಅಪ್ಪ ಅಮ್ಮ ಇಬ್ಬರೂ ಅಷ್ಟು ವಿದ್ಯಾವಂತರಲ್ಲ, ಆದರೆ ಸಂಸ್ಕಾರವಂತರು. ಅವಳು ಓದಿದ್ದು ಸರ್ಕಾರಿ ಶಾಲೆಯಲ್ಲಿ, ತನ್ನ ಓರಗೆಯ ಹೆಣ್ಣುಮಕ್ಕಳೆಲ್ಲಾ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದರು. ಆದರೆ ಇವಳಿಗೆ ಅದೇ ಪದ್ಧತಿಗೆ ಜೋತುಬೀಳಲು ಇಷ್ಟವಿಲ್ಲ. ಓದಲು ಆಸೆ. ಅದೂ ಎಂಜಿನಿಯರ್‌ ಆಗುವ ಹೆಬ್ಬಯಕೆ. ಅವಳ ತಂದೆ ಎಲ್ಲ ರೀತಿಯಲ್ಲೂ ಜೊತೆಗಿದ್ದರೂ ಅವರದೇ ಆದ ಕೆಲವು ಮಿತಿಗಳಿದ್ದವು ಕಾರಣ ಅವಳು ಪಾಲಿಟೆಕ್ನಿಕ್‌ ಗೆ ಸೇರಲಿ ಸಾಕು ಎನ್ನುವುದು ಅವರ ಮಾತು. ಅವಳಿಗೆ ಎಂಜಿನಿಯರಿಂಗ್‌ ಫ್ರೀ ಸೀಟ್‌ ಸಿಕ್ಕಾಗ ತಂದೆ ಮಾತನಾಡಲಿಲ್ಲ, ಸಂತೋಷಪಟ್ಟರು. ಅವಳೇ ಇಡೀ ಕುಟುಂಬಕ್ಕೆ ಮೊದಲ ಎಂಜಿನಿಯರ್‌ ಎನ್ನುವುದು ಹೆಗ್ಗಳಿಕೆಯೂ ಹೌದು.

ಅವಳು ಎಂಜಿನಿಯರಿಂಗ್‌ ಪದವಿ ಪಡೆದ ನಂತರ. ಕೆಲಸಕ್ಕೆ ಸೇರಿದಳು. ಅಲ್ಲಿ 8 ವರ್ಷ ಕೆಲಸ ಮಾಡಿದ ನಂತರ ಮದುವೆ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೆಲಸ ಬಿಡಬೇಕಾಯಿತು. ತನ್ನ ಕೆಲಸದಿಂದಲೇ ಗುರುತಿಸಿಕೊಳ್ಳುತ್ತಿದ್ದ ಅವಳಿಗೆ ಉದ್ಯೋಗ ಬಿಟ್ಟ ಮೊದಲಿಗೆ ಬಹಳ ಕಷ್ಟವಾಯಿತು. ಆದರೆ ತಾನು ಕೆಲಸ ಬಿಟ್ಟ ಬಗ್ಗೆ ಅವಳಿಗೆ ಈಗ ಯಾವ ಬೇಸರ ಇಲ್ಲ. ಏಕೆಂದರೆ ಅವಳ ಜೀವನಕ್ಕೆ ಸರಿಯಾದ ತಿರುವು ಬಂದದ್ದು ಅವಳು ಕೆಲಸ ಬಿಟ್ಟು ಮನೆಯಲ್ಲಿದ್ದಾಗಲೇ! ನಮ್ಮ ಈ ಕಥೆಯಲ್ಲಿ ಅವಳು ಎನ್ನುವ ಪಾತ್ರ ಭಾರತಿ ಯಾದವ್ ಅವರದು.

IMG_20191130_235659

ಮಕ್ಕಳಿಗಾಗಿ ಕೆಲಸ ಬಿಟ್ಟ ನಂತರ ಮನೆಯಲ್ಲಿದ್ದಾಗ ಮಕ್ಕಳಿಗೆ ಪಾಠ ಹೇಳಿ ಕೊಡಬೇಕಲ್ಲವೇ…..? ಅವರು ಮಕ್ಕಳ ಶಾಲೆಯ ಎಲ್ಲಾ ವಿಷಯಗಳನ್ನೂ ಕಲಿತುಕೊಂಡರು. ಆದರೆ ಗಣಿತಕ್ಕೆ ಮಾತ್ರಾ ಇನ್ನೂ ಹೆಚ್ಚಿನ ಆಸ್ಥೆ ನೀಡಿದರು. ಇವರ ಮಕ್ಕಳು ಗಣಿತದಲ್ಲಿ ಬಹಳ ಮುಂದಿದ್ದರು. ಈ ಸಮಯದಲ್ಲಿ ಇವರ ಕೆಲವು ಗೆಳತಿಯರು ಇವರಿಗೆ ಗಣಿತ ಹೇಳಿಕೊಡುವಂತೆ ಕೇಳಿದರು. ಅಲ್ಲದೆ ಅವರ ಮಕ್ಕಳಿಗೆ ಗಣಿತ ಹೇಳಿಕೊಡಲು ಸಹಾಯ ಮಾಡುವಂತೆ ಕೇಳಿಕೊಂಡರು.

ಅನೇಕ ಬಾರಿ ಗೆಳತಿಯರಿಂದ ದೂರವಾಣಿ ಕರೆ ಬರುತ್ತಿತ್ತು. ಬಹಳಷ್ಟು ಬಾರಿ ಇವರ ದೈನಂದಿನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿತ್ತು. ಆಗ ಇವರ ಪತಿ ವಿಡಿಯೋ ಮಾಡಿ, ಯೂ ಟ್ಯೂಬಿನಲ್ಲಿ ಅಪ್ಲೋಡ್‌ ಮಾಡಲು ಹೇಳಿದರು. ಆಗ ಉಗಮವಾಯಿತು ಇವರ ಯೂ ಟ್ಯೂಬ್‌ ಚಾನೆಲ್‌`ಮ್ಯಾತ್ಸ್ ಸ್ಮಾರ್ಟ್‌!’ ಅಂತರ್ಜಾಲವನ್ನು ತಡಕಾಡುವವರೆಲ್ಲಾ ಇವರಿಗೆ ಹಾರ್ದಿಕ ಸ್ವಾಗತ ನೀಡಿದರು. ಈಗ ಯೂ ಬ್ಯೂಬಿನಲ್ಲಿ ಇವರ 554 ವೀಡಿಯೋಗಳಿವೆ. ಅದನ್ನು ನೋಡುವವರು 1,65,000 ಜನರು. 1 ಲಕ್ಷಕ್ಕಿಂತಾ ಹೆಚ್ಚು ಚಂದಾದಾರರನ್ನು ಹೊಂದಿರುವವರಿಗೆ ನೀಡುವ ಸಿಲ್ವರ್‌ ಪ್ಲೇ ಬಟನ್‌ ಪ್ರಶಸ್ತಿಯನ್ನು ಗೂಗಲ್ ಅವರು ನೀಡಿದ್ದಾರೆ.

2 ವರ್ಷಗಳ ಹಿಂದೆ ಇವರು ಹಿಂದಿ ಭಾಷಿಕರಿಗಾಗಿ `ಮ್ಯಾತ್ಸ್ ಸ್ಮಾರ್ಟ್‌’ ಹಿಂದಿಯನ್ನು ಪ್ರಾರಂಭ ಮಾಡಿದ್ದಾರೆ. ಇದರ 166 ವೀಡಿಯೋಗಳು ಬಿಡುಗಡೆಯಾಗಿವೆ ಮತ್ತು 14,500ಕ್ಕಿಂತ ಹೆಚ್ಚು ಚಂದಾದಾರರಿದ್ದಾರೆ.  ಅನೇಕ ಪ್ರಶಸ್ತಿ ಪಡೆದಿದ್ದಾರೆ.

“ಒಂದು ಗಣಿತದ ಸಮಸ್ಯೆಯನ್ನು ಪರಿಹರಿಸಬೇಕಾದಾಗ ಮಗು ಮೊದಲು ಆ ಲೆಕ್ಕನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗುವಂತೆ ಕೆಲವು ವಿಧಾನಗಳನ್ನು ತಿಳಿಸಿದ್ದೇನೆ. ಆಗ ಲೆಕ್ಕದ ಸಮಸ್ಯೆ ಸುಲಭವಾಗಿ ಪರಿಹಾರವಾಗಲು ಸಾಧ್ಯ,” ಎನ್ನುತ್ತಾರೆ ಭಾರತಿ.

ಇದು ಬರಿಯ ಮಕ್ಕಳಿಗಷ್ಟೇ ಅಲ್ಲ, ತಾಯಿ ತಂದೆಯರಿಗೆ, ಅಜ್ಜ ಅಜ್ಜಿಯರಿಗೆ ಮತ್ತು ಶಿಕ್ಷಕರಿಗೂ ಮಕ್ಕಳಿಗೆ ಗಣಿತ ಹೇಳಿ ಕೊಡಲು ಸಹಾಯಕವಾಗುತ್ತದೆ. ಉದ್ಯೋಗಕ್ಕೆ ಸೇರುವ ಯುವ ಜನಾಂಗ ಇವರ ವಿಡಿಯೋಗಳನ್ನು ಸಾಕಷ್ಟು ಬಳಸುತ್ತಾರೆ. ಮೆಚ್ಚುಗೆ ಸೂಸುವ ಸಂದೇಶಗಳು ಬರುತ್ತಲೇ ಇರುತ್ತವೆ.

“ನಾನು ಯಾವುದಾದರೂ ಉದ್ಯೋಗಕ್ಕೆ ಸೇರಿದದರೆ ಇನ್ನೂ ಹೆಚ್ಚು ಸಂಪಾದಿಸಬಹುದಿತ್ತು. ಆದರೆ ನಾನು ನಿಜಕ್ಕೂ ಸಂತೋಷದಿಂದ ಇದ್ದೇನೆ ಮತ್ತು ನಾನು ಮಾಡುತ್ತಿರುವ ಕೆಲಸ ನನಗೆ ತೃಪ್ತಿಯನ್ನು ನೀಡಿದೆ. ಪ್ರತಿ ದಿನ ಬೆಳಗ್ಗೆ ಯಾವುದಾದರೂ ಮೆಚ್ಚುಗೆಯ ಸಂದೇಶವನ್ನು ನೋಡಿದಾಗ ಸಾರ್ಥಕವೆನಿಸುತ್ತದೆ,” ಎನ್ನುತ್ತಾರೆ ಭಾರತಿ.

ಇವರು 2006ರಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿಯ ಜನ ತುಂಬಾ ಒಳ್ಳೆಯರು. ಈ ಊರು ಖಂಡಿತ ಅವಕಾಶಗಳ ತವರೂರು. ನನಗೆ ಬೆಂಗಳೂರನ್ನು ಕಂಡರೆ ಅಪರಿಮಿತ ಪ್ರೇಮ ಎಂಬುದು ಭಾರತಿಯರ ಅನಿಸಿಕೆ.

ಆಲ್ ದಿ ಬೆಸ್ಟ್!

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ