“ವಿನ್‌ ವಿನ್‌ ಸಿಚುಯೇಶನ್‌ ಅಂದ್ರೆ ಎರಡೂ ಪಕ್ಷಗಳಿಗೂ ಲಾಭ ಆಗಬೇಕು. ಉದಾ, ನಾವು ಯಾವುದೋ ಸಾಮಗ್ರಿಯನ್ನು 50/ ರೂ.ಗಳಲ್ಲಿ ತಯಾರು ಮಾಡಿ ಅದನ್ನು 80/ ರೂ.ಗೆ ಮಾರಿದರೆ ಅದು ನಮಗೆ ಲಾಭ ತರುವ ದಂಧೆ. ಆದರೆ ಅದೇ ಸಾಮಗ್ರಿಯನ್ನು ಯಾರಾದರೂ ಮಾರ್ಕೆಟ್‌ ನಲ್ಲಿ ಅಷ್ಟು ದಿನ 100/ ರೂ. ಕೊಟ್ಟು ತೆಗೆದುಕೊಳ್ಳುತ್ತಿದ್ದರೆ, ಖಂಡಿತಾ ಅಂದಿನಿಂದ ಅವರು ನಮ್ಮ ಪ್ರಾಡಕ್ಟ್ ಕೊಳ್ಳುತ್ತಾರೆ. ಅಂದ್ರೆ ನಮ್ಮ 80/ರ ಪ್ರಾಡಕ್ಟ್ ಅವರಿಗೆ 20/ರ ಲಾಭ ತಂದುಕೊಡುತ್ತದೆ ಹಾಗೂ ನಮಗೂ 30/ ರೂ. ಲಾಭ ಕೊಡುತ್ತದೆ. ಇದನ್ನೇ ವಿನ್‌ ವಿನ್‌ ಸಿಚುಯೇಶನ್‌ ಎನ್ನುತ್ತಾರೆ,” ಮಾರ್ಕೆಟಿಂಗ್‌ ಮ್ಯಾನೇಜರ್‌, ಸೋಮೇಶ್‌, ತನ್ನ ಕಂಪನಿಯ ಹೊಸ ಸೇಲ್ಸ್ ಎಕ್ಸಿಕ್ಯುಟಿವ್ಸ್ ಗೆ ಹೀಗೆ ತರಬೇತಿ ನೀಡುತ್ತಿದ್ದ.

ಸೋಮೇಶ್‌ ಆ ಕಂಪನಿಗೆ ಸೇರಿ ಈಗಾಗಲೇ 12 ವರ್ಷ ಕಳೆದಿತ್ತು. ಮ್ಯಾನೇಜರ್‌ ಆದಕಾರಣ ಹೊಸಬರಿಗೆ ಟ್ರೇನಿಂಗ್‌ ಕೊಡುವ ಜವಾಬ್ದಾರಿ ಈಗ ಅವನದೇ ಆಗಿತ್ತು. 12 ವರ್ಷಗಳಲ್ಲಿ ಅವನ ಹುದ್ದೆ, ಆದಾಯ ಹೆಚ್ಚಿದ್ದಲ್ಲದೆ, ಸಂಸಾರ ದೊಡ್ಡದಾಗಿತ್ತು. ಇತ್ತೀಚೆಗಷ್ಟೆ ಅವನು 2ನೇ ಮಗುವಿನ ತಂದೆಯಾಗಿದ್ದ. ಈ ಬಾರಿ ಸಂತೋಷಕ್ಕಿಂತ ಹೆಚ್ಚಾಗಿ ಜವಾಬ್ದಾರಿ ಹೆಚ್ಚಿರುವುದು ಅವನ ಅರಿವಿಗೆ ಬಂದಿತ್ತು. ವರ್ಷ ವರ್ಷ ಅದೇ ತರಹದ ಕೆಲಸ ಮಾಡಿ ಮಾಡಿ ಕಂಪನಿಯಲ್ಲಿ ಹೆಚ್ಚುತ್ತಿದ್ದ ಜವಾಬ್ದಾರಿಗಳಿಂದ ಅವನು ಬೇಸತ್ತಿದ್ದ. ಅವನ ಹೆಂಡತಿ ರಮಾ ಸದಾ ಮಕ್ಕಳ ಜಂಜಾಟದಲ್ಲೇ ಮುಳುಗಿರುತ್ತಿದ್ದಳು.

ಆಗ ಮಧ್ಯಾಹ್ನ 2ರ ಊಟದ ಸಮಯ. ಆಫೀಸಿನಲ್ಲಿ ಸಹೋದ್ಯೋಗಿಗಳ ಜೊತೆ ಸೋಮೇಶ್‌ ಊಟಕ್ಕೆ ಕುಳಿತಿದ್ದ. ಮನೆಯಿಂದ ತಂದಿದ್ದ ಲಂಚ್‌ ಬಾಕ್ಸ್ ತೆರೆದ ತಕ್ಷಣ ಅವನು ಮುಖ ಕಿವುಚಿದ.

“ಏನ್ರಿ…. ಇವತ್ತೂ ಮೇಡಂ ನಿಮಗೆ ಚಪಾತಿ ಜೊತೆ ಸೋರೆಕಾಯಿ ಪಲ್ಯ ಕಳುಹಿಸಿದ್ದಾರಾ?” ಮಾಧವ ಇವನ ಡಬ್ಬಿಯತ್ತ ತಿರುಗಿ ನೋಡದೆ ಇವನ ಮುಖಚರ್ಯೆಯಿಂದಲೇ ಊಹಿಸಿದ್ದ. ಸೋಮೇಶನಿಗೆ ಮೊದಲೇ ಸೋರೆಕಾಯಿಯನ್ನು ಕಂಡರಾಗುತ್ತಿರಲಿಲ್ಲ. ಈ ದಿನ ಮತ್ತಷ್ಟು ಬೇಸರ ಹೆಚ್ಚಿತು.

ಆ ಡಬ್ಬಿಯನ್ನು ಅಲ್ಲೇ ಬಿಟ್ಟ ಸೋಮೇಶ್‌ ನಿಧಾನವಾಗಿ ಕ್ಯಾಂಟೀನಿನತ್ತ ಹೆಜ್ಜೆ ಹಾಕಿದ.

“ಸಾರ್‌, ನೀವು ನಿಮ್ಮ ಬಾಕ್ಸ್ ನ್ನು ಹಾಗೆ ಓಪನ್‌ ಆಗಿ ಬಿಟ್ಟು ಬಂದಿರುವಿರಿ,” ಕೋಮಲ ದನಿಯೊಂದು ತನ್ನನ್ನು ಕರೆದಂತಾಗಲು ಅವನು ಹೊರಳಿ ನೋಡಿದ. ತಮ್ಮ ಕಂಪನಿಗೆ ಹೊಸದಾಗಿ ಮಾರ್ಕೆಟಿಂಗ್‌ ಎಗ್ಸಿಕ್ಯುಟಿವ್ ‌ಆಗಿ ಸೇರಿದ್ದ ಹುಡುಗಿ ರಮ್ಯಾ, ಅವನ ಟಿಫನ್‌ ಬಾಕ್ಸ್ ಹಿಡಿದು ಅವನು ಇದ್ದಲ್ಲಿಗೆ ಬಂದಳು. ಆ ಕಂಪನಿಯಲ್ಲಿ ಇನ್ನೂ ಅನೇಕ ಹುಡುಗಿಯರಿದ್ದರು, ಸೋಮೇಶ್‌ ಮಾತ್ರ ಅವರೆಲ್ಲರ ಜೊತೆ ಬಲು ಬಿಗುವಾಗಿ, ಅತಿ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದ. ಇಷ್ಟು ಕ್ಯಾಶ್ಯುಯೆಲ್ ‌ಆಗಿ ಯಾವ ಹುಡುಗಿಯೂ ಸಲುಗೆ ತೆಗೆದುಕೊಂಡು ವರ್ತಿಸಿರಲಿಲ್ಲ.

“ಸಾರ್‌, ನಾನು ಇದನ್ನು ಈ ಟೇಬಲ್ ಮೇಲೆಯೇ ಇಡ್ತಿದ್ದೀನಿ,” ಎಂದಳು. ಅದಕ್ಕೆ ಅವನೇನೂ ಉತ್ತರಿಸಲಿಲ್ಲ.

“ಸಾರ್‌, ನೀವು ತಪ್ಪು ತಿಳಿಯದಿದ್ದರೆ, ನಾನೂ ಇಲ್ಲೇ ಕುಳಿತು ಊಟ ಮಾಡಬಹುದೇ? ಆ ಕಡೆ ದೊಡ್ಡ ಟೇಬಲ್ ಇದೆಯಲ್ಲ….. ಅಲ್ಲಿ ಕುರ್ಚಿ ಖಾಲಿ ಇಲ್ಲ.”

ಸೋಮೇಶ್‌ ಬೇಕೆಂದೇ ದೊಡ್ಡ ಟೇಬಲ್ ನತ್ತ ಕಣ್ಣೋಡಿಸಿದ. ಇಂಥ ಹೊಸ ಎಂಟ್ರಿಗಳಿಂದಾಗಿ ಆ ಟೇಬಲ್ ತುಂಬಿ ತುಳುಕುತ್ತಿತ್ತು. ಅವನು ಸರಿ ಎಂಬಂತೆ ತಲೆ ಆಡಿಸಿದ.

ಏನೋ ದೊಡ್ಡ ಕೆಲಸ ಮಾಡುವವಳಂತೆ ಬೇಕೆಂದೇ ಸೋಮೇಶನ ಡಬ್ಬಿ ತೆರೆದು ನೋಡಿದವಳೇ, “ಓಹ್‌….. ನನ್ನ ಫೇವರಿಟ್ ಸೋರೆ ಪಲ್ಯ…..” ಅವನ ಕಡೆ ಓರೆ ನೋಟ ಬೀರುತ್ತಾ ಹಾಗೆ ಮಾಡಬಾರದಿತ್ತೇನೋ ಎಂದು ಹಲ್ಲು ಕಚ್ಚಿಕೊಂಡಳು. ನಂತರ ತಪ್ಪು ಮಾಡಿದ ವಿದ್ಯಾರ್ಥಿನಿ ಮೌನವಹಿಸುವಂತೆ, ತಲೆ ತಗ್ಗಿಸಿ ತೆಪ್ಪಗೆ ತನ್ನ ಡಬ್ಬಿ ತೆರೆದು ತಾನು ತಂದಿದ್ದ ವಾಂಗಿಭಾತ್ ಸವಿಯತೊಡಗಿದಳು. ಆಕಸ್ಮಿಕವಾಗಿ ಅವನ ದೃಷ್ಟಿ ಅವಳು ಬಾಕ್ಸ್ ನಲ್ಲಿ ಏನು ತಂದಿದ್ದಾಳೋ ಎಂಬುದರತ್ತ ಹರಿಯಿತು. ಅದು ವಾಂಗಿಭಾತ್‌…. ಅದು ಬಟಾಣಿ, ಆಲೂ, ಕ್ಯಾಪ್ಸಿಕಂ ಬೆರೆತ ಉತ್ತಮ ಗುಣಮಟ್ಟದ ಮಸಾಲೆಯಿಂದ ಘಂ ಎನ್ನುತ್ತಿದ್ದ ವಾಂಗೀಭಾತ್‌ ನಿಂದ ಅವನ ಬಾಯಲ್ಲಿ ನೀರೂರಿತು. ಸೋಮೇಶ್‌ ತೆಪ್ಪಗೆ ತಾನು ತಂದಿದ್ದ ಚಪಾತಿಯನ್ನು ಉಪ್ಪಿನಕಾಯಿ ಜೊತೆಗೆ ನೆಂಚಿಕೊಂಡು ತಿನ್ನತೊಡಗಿದ.

“ಸಾರ್‌…. ನೀವು ಪಲ್ಯ ತಿನ್ನುತ್ತಲೇ ಇಲ್ಲ,” ತರಲೆ ವಿದ್ಯಾರ್ಥಿಯಂತೆ ಅವಳು ಮತ್ತೆ ಶುರು ಹಚ್ಚಿಕೊಂಡಳು.

ಅವಳತ್ತ ಗಂಭೀರವಾಗಿ ನೋಟ ಹರಿಸುತ್ತಾ ಅದನ್ನು ಕಟ್ಟಿಕೊಂಡು ನಿನಗೇನು ಎಂಬಂತೆ, “ನನಗೆ ಸೋರೆಕಾಯಿ ಅಂದ್ರೆ ಅಲರ್ಜಿ!” ಎಂದ. ಅವಳಂತೂ ಅವನತ್ತ ಆಶ್ಚರ್ಯದಿಂದ ನೋಡತೊಡಗಿದಳು.

ತನ್ನ ಅಚ್ಚುಮೆಚ್ಚಿನ ತರಕಾರಿಯನ್ನು ಯಾರೋ ಖಂಡಿಸಿ ತೆಗಳಿದಾಗ ಅದು ತನಗೆ ಒಪ್ಪಿಗೆಯಾಗಲಿಲ್ಲ ಎಂಬಂತೆ ಮುಖ ಹುಳಿ ಹುಳಿ ಮಾಡಿಕೊಂಡಳು.

“ಹಾಗೆಲ್ಲ ಊಟ ಎಸಲೇಬಾರದು ಬಿಡಿ ಸಾರ್‌…..” ಚಿಕ್ಕ ಮಕ್ಕಳಿಗೆ ವೇಸ್ಟ್ ಮಾಡಬೇಡ ಎಂಬಂತೆ ಹೇಳಿದಳು. ಅವನು ಕೋಪಗೊಳ್ಳುವ ಬದಲು ಇದ್ದಕ್ಕಿದ್ದಂತೆ ನಕ್ಕುಬಿಟ್ಟ.

“ಹೌದೇ…. ಹಾಗಾದರೆ ನೀನೇ ಈ ಪಲ್ಯ ತಿನ್ನು….. ದಿಸ್‌ ಬ್ಯೂಟಿಫುಲ್ ಸೋರೇಕಾಯಿ!” ಎಂದು ವ್ಯಂಗ್ಯವಾಡಿದ.

“ಹೌದಾ ಸಾರ್‌…… ರಿಯಲಿ?” ತನಗೆ ಬೇಕಾದ್ದನ್ನು ಪಡೆದ ಚಿಕ್ಕ ಹುಡುಗಿಯ ಖುಷಿ ಇತ್ತು ಅವಳ ನಗುವಿನಲ್ಲಿ.

“ಹ್ಞೂಂ….. ದೆನ್‌ ವಾಟ್‌, ಬದಲಿಗೆ ನೀನು ನಿನ್ನ ಆ ವಾಂಗಿಭಾತ್‌ ನನಗೆ ಕೊಡಬೇಕಾಗುತ್ತೆ ನೋಡು,” ಅವನಿಗೆ ವಾಂಗಿಭಾತ್ ಎಂದರೆ ಮೊದಲಿನಿಂದಲೂ ಇಷ್ಟ.

“ಓ….. ಬೈ ಆಲ್ ಮೀನ್ಸ್ ಸಾರ್‌….. ನಮ್ಮ ಮನೆಯಲ್ಲಿ ವಾಂಗಿಭಾತ್‌ ಅಪರೂಪವೇನಲ್ಲ….” ಎನ್ನುತ್ತಾ ತಮ್ಮಿಬ್ಬರ ಟಿಫನ್ ಬಾಕ್ಸ್ ಬದಲಾಯಿಸಿದಳು.

“ಬೆಳಗ್ಗೆ ಲೇಟ್‌ ಆಗಬಾರದೂಂತ ಇದನ್ನೇ ಟಿಫನ್‌ ಕಂ ಲಂಚ್‌ ಆಗಿ ಪ್ಯಾಕ್‌ ಮಾಡಿಕೊಂಡಿದ್ದೆ.”

“ಓ…. ನೀನೇ ಇದನ್ನು ಮಾಡಿದ್ದು ಅನ್ನು.”

“ಹೌದು ಸಾರ್‌….. ನಾನು ಒಬ್ಬಂಟಿ. ಹೀಗಾಗಿ ನಾನೇ ಅಡುಗೆ ಮಾಡಿಕೊಳ್ಳಬೇಕಾಗುತ್ತೆ…”

“ಓ…. ಯೂ ಮೀನ್‌ ಯೂ ಆರ್‌ ಸಿಂಗಲ್…..”

“ಎಸ್‌ ಸಾರ್‌, ಅಮ್ಮನ ಚಿಕಿತ್ಸೆ ಆಗಬೇಕಿದೆ. ಹೀಗಾಗಿ ಅವರನ್ನು ಮೈಸೂರಿನಲ್ಲಿ ಸೋದರ ಮಾವನ ಮನೆಯಲ್ಲೇ ಬಿಟ್ಟು ಬಂದಿದ್ದೇನೆ.” ಸೋಮೇಶನಿಗೆ ರಮ್ಯಾಳನ್ನು ಆ ಬಗ್ಗೆ ಇನ್ನೂ ಕೆದಕಿ ಕೇಳಬೇಕೆನಿಸಿತು. ಆದರೆ ಮೊದಲ ಭೇಟಿಯಲ್ಲೇ ಜೂನಿಯರ್‌ಬಳಿ ಅಷ್ಟೊಂದು ಸಲುಗೆ ವಹಿಸಿ ವಿಚಾರಿಸಿದರೆ, ಮುಂದೆ ಅವಳು ಟೇಕನ್‌ ಟು ಬಿ ಗ್ರಾಂಟೆಡ್‌ ಆಗಿ ಭಾವಿಸಬಾರದೆಂದು ಸುಮ್ಮನಾದ. ಅಷ್ಟರಲ್ಲಿ ಊಟದ ಸಮಯ ಮುಗಿಯಿತು.

ಲಂಚ್‌ ನಂತರ ಅವನು ಎಂ.ಡಿ ಬಳಿ ಮೀಟಿಂಗ್‌ ಗಾಗಿ ಹೋಗಬೇಕಿತ್ತು. ಅಂತೂ ಇಬ್ಬರೂ ತಮ್ಮಿಷ್ಟದ ಆಹಾರ ಸೇವಿಸುವುದರಲ್ಲಿ ಮಗ್ನರಾದರು.

ಅಂತೂ ಊಟ ಮುಗಿಸಿ ಇಬ್ಬರೂ ತಂತಮ್ಮ ಜಾಗಕ್ಕೆ ಮರಳಿದರು. ಬಾಸ್‌ ಪಿ.ಎ ಫೋನ್‌ ಮಾಡಿ ಬರುವಂತೆ ಸೂಚಿಸಿದಾಗ, ಬೇಕಾದ ಫೈಲ್ಸ್ ತೆಗೆದುಕೊಂಡು ಅವರ ಕ್ಯಾಬಿನ್‌ ನತ್ತ ಹೊರಟ ಸೋಮೇಶ್‌. ಬಾಸ್‌ ಅವನನ್ನು ಹೊಸ ತಂಡದ ಹುಡುಗಿಯರ ಕೆಲಸ ಹೇಗೆ, ಯಾರೆಲ್ಲ ಚುರುಕಾಗಿದ್ದಾರೆ, ಅವರ ಪರ್ಫಾರ್ಮೆನ್ಸ್ ಬಗ್ಗೆ ಸಾದ್ಯಂತ ವಿಚಾರಿಸಿದರು. ಇವರಲ್ಲಿ ಯಾರನ್ನು ತನ್ನ ತಂಡದೊಂದಿಗೆ ತೆಗೆದುಕೊಳ್ಳುತ್ತಿ ಎಂದು ಕೇಳಿದಾಗ, ಎಲ್ಲರೂ ಹೊಸಬರೇ ಆದ್ದರಿಂದ ಅವರು ಇನ್ನೂ ಪಳಗಬೇಕಿತ್ತು. ಅವರಲ್ಲಿ ಯಾರು ಬಂದರೂ ಒಂದೇ ಎಂದು ಸೋಮೇಶ್‌, “ನೀವು ಹೇಗೆ ಡಿಸೈಡ್‌ ಮಾಡಿದರೆ ಹಾಗೆ,” ಎಂದು ಅವರಿಗೇ ಆಯ್ಕೆ ಬಿಟ್ಟುಕೊಟ್ಟ.

“ಹಾಗಿದ್ದರೆ ನಾನು ರಮ್ಯಾ, ಶ್ರೀಕಾಂತ್‌, ದಿಲೀಪ್‌ ರನ್ನು ನಿನ್ನ ಟೀಮಿಗೆ ಸೇರಿಸುತ್ತಿದ್ದೇನೆ. ಏಕೆಂದರೆ ಮಾಧವ್ ಈಗಾಗಲೇ ಪ್ರತ್ಯೂಷಾ, ದೀಪಕ್‌, ವಿವೇಕ್‌ ರನ್ನು ತಮ್ಮ ಟೀಮಿಗೆ ತಗೊಂಡಿದ್ದಾರೆ. ದೇವೇಂದ್ರ ಸ್ವಭಾವ ನಿಮಗೆ ಗೊತ್ತಿದೆ, ಹೆಣ್ಣುಮಕ್ಕಳು ಅವರ ಟೀಂ ಸೇರಲು ಬಯಸಲ್ಲ ಬಿಡಿ,” ಎಂಡಿ ನಸುನಗುತ್ತಾ ಹೇಳಿದಾಗ ಸೋಮೇಶ್‌ ಆಗಲಿ ಎಂದ.

ಮಾರನೇ ದಿನದಿಂದಲೇ ರಮ್ಯಾ ಸೋಮೇಶನ ಟೀಮಿಗೆ ಸೇರಿಕೊಂಡು ಅವನ ಬಲಗೈ ಆಗಿ ಬಲು ಚುರುಕಾಗಿ ಕೆಲಸ ನಿರ್ವಹಿಸತೊಡಗಿದಳು. ವಾರಗಳು ಕಳೆದಂತೆ ಸಲೀಸಾಗಿ ಟಿಫನ್‌ ಬಾಕ್ಸ್ ಬದಲಾಗ ತೊಡಗಿದ.

“ಇವತ್ತು ಸಂಜೆ ಬೇಗ ಬಂದುಬಿಡಿ, ಸಂಜೆ ಮಗನ್ನು ಕ್ಲಿನಿಕ್‌ ಗೆ ಕರೆದೊಯ್ದು ಇಂಜೆಕ್ಷನ್‌ ಹಾಕಿಸಬೇಕು,” ಸೋಮೇಶನ ಪತ್ನಿ ರಮಾ ಅವನು ಆಫೀಸಿಗೆ ಹೊರಡುವಾಗ ಬೆಳಗ್ಗೆ ಎಚ್ಚರಿಸಿದಳು. ಅವಳ ಅಪ್ಪಣೆ ಪಾಲಿಸುವೆ ಎಂಬಂತೆ ತಲೆ ಆಡಿಸುತ್ತಾ ಅವನು ಹೊರಟುಬಂದಿದ್ದ.

ಆದರೆ ಸಂಜೆ ಅವನು ಮನೆಗೆ ಹೊರಡುವಾಗ ಜೋರಾಗಿ ಮಳೆ ಶುರುವಾಯಿತು. ಅವನು ಪಾರ್ಕಿಂಗ್‌ ಕಡೆ ನಿಲ್ಲಿಸಿದ್ದ ಗಾಡಿಯತ್ತ ಓಡಿದ. ಆದರೆ ಸ್ವಲ್ಪ ನೆನೆಯಲೇ ಬೇಕಾಯಿತು. ಅವನು 5 ನಿಮಿಷ ಆ ತುಂತುರು ಮಳೆ ಸಹಿಸುತ್ತಾ ಮುಂದೆ ಹೊರಟಿದ್ದ. ಅಲ್ಲಿನ ಮೂಲೆ ಅಂಗಡಿಯೊಂದರಲ್ಲಿ ಮಳೆಯಿಂದ ಬಚಾವಾಗಲು ರಮ್ಯಾ ನಿಂತಿರುವುದು ಕಾಣಿಸಿತು.

ಔಪಚಾರಿಕವಾಗಿ ಅವಳನ್ನು ಮಾತನಾಡಿಸಲು ಅವನು ಮಳೆಯ ನೆಪ ಮಾಡಿಕೊಳ್ಳುತ್ತಾ ಗಾಡಿ ಒಂದೆಡೆ ನಿಲ್ಲಿಸಿ ಅವಳಿದ್ದ ಕಡೆ ಹಾದು ಬಂದ.

“ಕ್ವಿಕ್‌…. ಹಾಪ್‌ ಇನ್‌ ಟು ದಿ ಕಾರ್‌. ಈ ಮಳೆ ನಿಲ್ಲಲಿ ಅಂತ ನೀನು ಕಾಯುತ್ತಿದ್ದರೆ ಟೈಂ ವೇಸ್ಟ್. ಹಾಗೆ ನೆನೆದುಕೊಂಡು ಹೋದರೆ ಆರೋಗ್ಯ ಕೆಡುತ್ತೆ. ಒಬ್ಬಳೇ ಇರುವ ನಿನ್ನನ್ನು ನೋಡಿಕೊಳ್ಳುವರಾರು?”

ಹಿರಿಯ ಅಧಿಕಾರಿಯ ಮಾತು ಧಿಕ್ಕರಿಸಲಾರದೆ ಅವಳು ಹಾಗೇ ಓಡಿ ಬಂದು ಅವನ ಕಾರಿನಲ್ಲಿ ಹತ್ತಿ ಪಕ್ಕದಲ್ಲಿ ಕುಳಿತಳು. ಅವಳ ತಲೆಯಿಂದ ಕೆಲವು ಹನಿ ನೀರು ತೊಟ್ಟಿಕ್ಕುತ್ತಿತ್ತು.

“ಓಹ್‌! ನೀನು ಈಗಾಗಲೇ ನೆಂದುಬಿಟ್ಟಿದ್ದಿ,” ಸೋಮೇಶ್‌ ಅವಳತ್ತ ಸಂವೇದನಾಶೀಲ ನೋಟ ಬೀರುತ್ತಾ ಹೇಳಿದ, “ನಿಮ್ಮ ಮನೆ ಎಲ್ಲಿದೆ?”

“ಇಲ್ಲೇ ಹತ್ತಿರವೇ ಇದೆ ಸಾರ್‌….. 23 ಕಿ.ಮೀ. ಆಗಬಹುದು. ಎಷ್ಟೋ ಸಲ ನಡೆದುಕೊಂಡೇ ಬಂದುಬಿಡ್ತೀನಿ. ಇವತ್ತು ಮಳೆ ಜಾಸ್ತಿ ಆಯ್ತು. ಅನ್ಯಾಯವಾಗಿ ನಿಮಗೆ ಕಷ್ಟ ಕೊಡೋ ತರಹ ಆಯ್ತು.”

ಹೀಗೆ ಮಾತು ಮುಂದುವರಿಸುತ್ತಾ ಇಬ್ಬರೂ ತಮ್ಮ ಕುಟುಂಬದ ಪರಿಚಯ ಮಾಡಿಕೊಂಡರು. ಅವಳಿಗೆ ತಂದೆ ಇದ್ದರೂ ತಾಯಿಯ ಆರೋಗ್ಯದ ಸಂಪೂರ್ಣ ಹೊಣೆ ಅವಳ ಮೇಲೆ ಬಿದ್ದಿರುವುದು ನೋಡಿ ಅವನಿಗೆ ಆಶ್ಚರ್ಯವಾಯಿತು.

“ಅಂದ್ರೆ…. ನಿಮ್ಮ ತಂದೆಯರಿಗೂ ಹುಷಾರಿಲ್ಲವೋ ಅಥವಾ ಅವರು ನಿಮ್ಮ ಜೊತೆ ಇಲ್ಲವೋ?” ಸೋಮೇಶನಿಗೆ ಅವಳ ಸ್ಥಿತಿ ಮರುಕ ತರಿಸಿತು.

“ಇಲ್ಲ ಸಾರ್‌….. ಪರಸ್ಪರ ಹೊಂದಾಣಿಕೆ ಆಗದೆ ನಮ್ಮ ತಾಯಿತಂದೆ ಮೊದಲಿನಿಂದಲೂ ದೂರ ದೂರ  ಇದ್ದಾರೆ…..”

“ಅಂದ್ರೆ…. ಅವರು ಡೈವೋರ್ಸ್‌ ಗೆ ಪ್ರಯತ್ನಿಸಲಿಲ್ಲವೇ? ಆಗ ನಿಮ್ಮ ತಾಯಿಯವರಿಗೆ ಹಣದ ಕಷ್ಟ ತಪ್ಪುತ್ತಿತ್ತು.”

“ಇಲ್ಲ…. ನಮ್ಮಮ್ಮನ ನಡತೆ ಸಂದೇಹಿಸಿದರು ಅಂತ ಅವರು ನಮ್ಮಪ್ಪನ ಒಂದು ಪೈಸೆ ಮುಟ್ಟಲಿಕ್ಕೂ ಇಷ್ಟಪಡಲ್ಲ.”

“ಓಹ್‌….. ವೆರಿ ಸಾರಿ, ಟು ಡಿಸ್ಟರ್ಬ್‌ ಯೂ!”

ಹೀಗೆ ಮಾತನಾಡುತ್ತಿದ್ದಾಗ ಅವರು ರಮ್ಯಾಳ ಮನೆಗಿಂತ ತುಸು ಮುಂದೆ ಬಂದಿದ್ದರು. ಅದನ್ನು ಗಮನಿಸಿದಾಗ ಸೋಮೇಶನಿಗೆ ಫೋನ್‌ ಬಂದಿತ್ತು.

“ನೋಡಿ….. ಜೋರಾಗಿ ಮಳೆ ಬರ್ತಿದೆ. ಹೀಗಿರುವಾಗ ಮಗುವನ್ನು ಕರೆದುಕೊಂಡು ಅಷ್ಟು ದೂರದ ಕ್ಲಿನಿಕ್‌ ಗೆ ಇವತ್ತು ಹೋಗುವುದು ಬೇಡ. ನಾಳೆ ಹೋಗೋಣ,” ಎಂದು ರಮಾ ತಿಳಿಸಿದಳು.

“ಓಹ್‌….. ಸಾರಿ ಸಾರ್‌, ನಾವು ಸ್ವಲ್ಪ ಮುಂದೆ ಬಂದುಬಿಟ್ಟಿದ್ದೇವೆ. ದಯವಿಟ್ಟು ನೆಕ್ಸ್ಟ್ ಲೆಫ್ಟ್ ಟರ್ನ್‌ ಮಾಡಿ.”

“ನೋ ಪ್ರಾಬ್ಲಂ,” ಎನ್ನುತ್ತಾ ಸೋಮೇಶ್‌ ಅವಳು ಹೇಳಿದಂತೆ ಕಾರು ತಿರಗಿಸಿದ. ಸಧ್ಯ, ಈಗ ಅವಸರದಲ್ಲಿ ಮನೆಗೆ ಹೋಗಬೇಕಾದ ಪ್ರಮೇಯವಿಲ್ಲ ಎಂದುಕೊಂಡ.

ಅಷ್ಟರಲ್ಲಿ ರಮ್ಯಾ ಜೋರಾಗಿ `ಆ…ಕ್ಷಿ’ ಎಂದಳು.

“ಮಳೆಯಲ್ಲಿ ಬಹಳ ನೆನೆದಿರುವೆ. ಬಹುಶಃ ಶೀತ ಆಗಿರಬೇಕು,” ಸೋಮೇಶ್‌ ಕಳಕಳಿಯಿಂದ ನುಡಿದ.

ಅಂತೂ ರಮ್ಯಾಳ ಮನೆ ಬಂತು. ಅವಳು ಶಿಷ್ಟಾಚಾರಕ್ಕಾಗಿ, “ಒಳಗೆ ಬನ್ನಿ…… 1 ಕಪ್‌ ಟೀ ಕುಡಿಯುವಿರಂತೆ,” ಎಂದು ಆಹ್ವಾನಿಸಿದಳು.

ಸೋಮೇಶನಿಗೂ ಆ ಚಳಿಯಲ್ಲಿ ಟೀ ಕುಡಿಯಬೇಕೆನಿಸಿತು. ಸರಿ ಎಂದು ಹೆಚ್ಚು ಉಪಚರಿಸಿಕೊಳ್ಳದೆ ಅವಳ ಹಿಂದೆ ಆ ಒಂಟಿ ಕೋಣೆಯ ಮನೆಯೊಳಗೆ ಹೊಕ್ಕ. ಅವನನ್ನು ಒಳಗೆ ಕರೆದು ಮೇಜಿನ ಬಳಿ ಕುರ್ಚಿ ಮೇಲೆ ಕೂರಿಸಿ, “ನಾನು ಈಗಲೇ ಚೇಂಜ್ ಮಾಡಿ ಬರ್ತೀನಿ,” ಎಂದು ಅವಳು ಒಳಗಿನ ಚಿಕ್ಕ ಕೋಣೆಗೆ ಹೋದಳು. ಅಲ್ಲೇ ಅಟ್ಯಾಚ್ಡ್ ಬಾತ್‌ ರೂಂ ಸಹ ಇತ್ತು. ಸ್ವಲ್ಪ ಹೊತ್ತಾದ ಮೇಲೆ ಒದ್ದೆ ಬಟ್ಟೆ ಬದಲಿಸಿ ಬಂದ ರಮ್ಯಾ ಟೀ ಮಾಡತೊಡಗಿದಳು. ಬೇಡ ಬೇಡವೆಂದರೂ ಅವನ ಕಣ್ಣು ಅವಳ ಸ್ಲೀವ್ ಲೆ‌ಸ್‌ ಡ್ರೆಸ್‌ ಕಡೆ ಹರಿಯುತ್ತಿತ್ತು. ಅವರಿಬ್ಬರಿಗೂ ಮಾತನಾಡಲು ಮತ್ತೆ ಹೊಸ ವಿಷಯ ಇಲ್ಲದ್ದರಿಂದ ರಮ್ಯಾಳ ಕೆಲಸವನ್ನೇ ಅವನು ಗಮನಿಸತೊಡಗಿದ. ಅವಳು ಬೇಗ ಟೀ ಮಾಡಿ ತಂದು ಅವನಿಗೂ ಕೊಟ್ಟು, ತಾನೊಂದು ಕಪ್‌ ಹಿಡಿದು ಎದುರಿನ ಕುರ್ಚಿಯಲ್ಲಿ ಕುಳಿತಳು.

ಟೀ ಹೀರುತ್ತಲೇ ಅವಳ ಸೌಂದರ್ಯವನ್ನೂ ಕಣ್ತುಂಬಾ ಹೀರಿಕೊಂಡ. ಆಕಸ್ಮಿಕವಾಗಿ ಅವನ ಕೈ ಮೇಜಿನ ಮೇಲಿದ್ದ ಅವಳ ಕೈಗೆ ತಾಗಿತು. ರಮ್ಯಾ ಅಲ್ಲಿಂದ ಕೈ ಎತ್ತುವ ಬದಲು ಅವನ ದೃಷ್ಟಿಗೆ ದೃಷ್ಟಿ ಬೆರೆಸಿದಳು. ಸಂಯಮ ಕಳೆದುಕೊಂಡ ಅವನು ಅವಳನ್ನು ಹಾಗೇ ಬಳಸಿ ಅಪ್ಪಿಕೊಂಡ. ಸ್ವಲ್ಪ ಸಂದೇಹಿಸದೆ ಅವನ ಎದೆಗೊರಗಿ ಅವಳು ಅವನ ಚುಂಬನ ಸ್ವೀಕರಿಸಿದಳು. ಯಾವುದು ಬೇಡವೆಂದು ಅಂದುಕೊಂಡನೋ ಅದೇ ನಡೆಯಿತು. ರಮ್ಯಾ ಸಹಜವಾಗಿ ತನ್ನನ್ನು ಅರ್ಪಿಸಿಕೊಂಡಿದ್ದಳು.

ಅವಳ ನೋಟಕ್ಕೆ ನೋಟ ಬೆರೆಸಲಾರದೆ ಅವನು ತಲೆ ತಗ್ಗಿಸಿದ. ಅವಳೇ ಅವನ ಕೈ ಅದುಮಿ ಸಾಂತ್ವನ ಹೇಳಬೇಕಾಯಿತು.

“ಇದಕ್ಕೆ ಯಾಕೆ ಇಷ್ಟೊಂದು ಟೆನ್ಶನ್‌ ತೆಗೆದುಕೊಳ್ಳುತ್ತಿದ್ದೀರಿ? ಇದು ದೇಹದ ಸಹಜ ಹಸಿವು ತಾನೇ…. ಹೋಟೆಲಿ‌ಗೆ ಹೋಗಿ ಬರುವಂತೆ. ಈ ಅನುಭವ ನನಗೆ ಹೊಸತೇನಲ್ಲ. ಹಿಂದೆ ಒಬ್ಬ ಬಾಯ್‌ ಫ್ರೆಂಡ್‌ ಇದ್ದ. ಅವನು ತಾನಾಗಿ ಬಿಟ್ಟುಹೋದ.”

ಅವಳ ಮಾತು ಕೇಳಿ ಅವನಿಗೆ ಅಪರಾಧಿಪ್ರಜ್ಞೆ ಕಡಿಮೆ ಆಯಿತು. ಅವಳಿಗೆ ಏನೂ ಜವಾಬು ಕೊಡದೆ ಅಲ್ಲಿಂದ ತನ್ನ ಮನೆಯ ದಾರಿ ಹಿಡಿದ. ಮಾರನೇ ದಿನದಿಂದ ಸೋಮೇಶ್‌ ಪ್ರತಿ ಕ್ಷಣ ಟೆನ್ಶನ್‌ ಗೆ ಒಳಗಾಗುತ್ತಿದ್ದ. ರಮ್ಯಾ ಎದುರಿಗಿದ್ದಾಗ ಅವನ ಚಡಪಡಿಕೆ ಇನ್ನೂ ಹೆಚ್ಚುತ್ತಿತ್ತು. ಆದರೆ ರಮ್ಯಾ ಮಾತ್ರ ಎಂದಿನಂತೆ ಕೂಲ್ ‌ಆಗಿಯೇ ಇದ್ದಳು. ರಮ್ಯಾಳೊಂದಿಗೆ ಮತ್ತೆ ಏಕಾಂತ ಹೊಂದಲು ಅವನು ನೆಪ ಹುಡುಕುತ್ತಿದ್ದ.

ಅವಳನ್ನು ಮನೆಗೆ ಡ್ರಾಪ್‌ ಮಾಡುವ ನೆಪದಲ್ಲಿ ಹಲವು ಸಲ ಬಂದು ಹೋದ. ರಮ್ಯಾ ಸಹಜವಾಗಿ ಅವನೊಂದಿಗೆ ಬೆರೆತು ಹೋಗುತ್ತಿದ್ದಳು. ಬದಲಿಗೆ ಸೋಮೇಶ್‌ ಅವಳಿಗೆ ಬೇಗ ಬೇಗ ಬಡ್ತಿ, ಇನ್‌ ಕ್ರಿಮೆಂಟ್‌, ಇನ್‌ಸೆಂಟಿವ್ ‌ಕೊಡತೊಡಗಿದ. ಹಿರಿಯ ಅಧಿಕಾರಿಯನ್ನು ಪಳಗಿಸಲು ಕಲಿತ ರಮ್ಯಾ ನಿಜ ಅರ್ಥದಲ್ಲಿ ವಿನ್‌ ವಿನ್‌ ಸಿಚುಯೇಷನ್‌ ಎಂದರೇನೆಂದು ಗ್ರಹಿಸಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ