ಮಧ್ಯಾಹ್ನದ ಊಟ ಮಾಡಿ ಕೆಲಸ ಮುಗಿಸಿ ಕಿಟಕಿಯಿಂದ ಆಚೆ ನೋಡಿದರು ಸುನಂದಮ್ಮ. ಮಳೆ ಇನ್ನೇನು ಬಂದೇಬಿಟ್ಟೀತು ಎನ್ನುವಂತೆ ಮೋಡಗಳು ಆವರಿಸಿವೆ. ಒಂದು ರೀತಿಯ ಮಬ್ಬಾದ ವಾತಾವರಣ. ಮಟಮಟ ಮಧ್ಯಾಹ್ನವಾದರೂ ಮನೆಯ ಒಳಗೆ ಒಂದು ರೀತಿಯ ಕತ್ತಲು. ಮೇಲೆ ಬೆವರಿಳಿಸುವ ಸೆಕೆ. `ಉಷ್‌….!’ ಎಂದು ರೂಮಿನೆಡೆಗೆ ಹೊರಟರು. ಮಂಚದ ಮೇಲೆ ಆರಾಮವಾಗಿ ನಿದ್ರಿಸುತ್ತಿರುವ ಪತಿಯನ್ನು ಕಂಡು ಇಂತಹ ಸೆಕೆಯಲ್ಲೂ ಅದು ಹೇಗೆ ಹೊದ್ದು ಮಲಗುತ್ತಾರೋ ಎಂಬಂತೆ ನೋಡಿ ಹೊರಬಂದರು. ತಮಗೂ ನಿದ್ದೆ ಬಂದಂತಿದೆ. ಆದರೂ ಮಲಗಲು ಹೋದರೆ ಹತ್ತಬೇಕಲ್ಲ. ಈ ಸೆಕೆಯಲ್ಲಿ ತಮ್ಮಿಂದ ಮಲಗಲಾಗದೆಂಬುದು ಅವರಿಗೆ ಗೊತ್ತು.

ಏನಾದರೂ  ಓದಿದರಾಯಿತೆಂದು ಪಕ್ಕದ ಕೋಣೆಗೆ ಬಂದರು. ಎಲ್ಲ ಓದಿರುವ ಕಾದಂಬರಿಗಳೇ. ಇತ್ತೀಚೆಗೆ ಯಾವುದೇ ಹೊಸ ಪುಸ್ತಕ ತರಲಾಗಿಲ್ಲ. ಮತ್ತೊಮ್ಮೆ ಓದಿ ತಾನೇನು ಪರೀಕ್ಷೆ ಬರೆಯಬೇಕೆ ಎಂದುಕೊಂಡು ಮೂಲೆಯಲ್ಲಿದ್ದ ಹಳೆಯ ಕಪಾಟಿನತ್ತ ನೋಡಿದರು. ತಕ್ಷಣ ಅವರಿಗೆ ತಮ್ಮ ಹಳೆಯ ಪತ್ರಗಳ ನೆನಪಾಯಿತು. ಆಗೆಲ್ಲ ತಾವು ಸುದ್ದಿಗಾಗಿ ಪತ್ರಗಳಿಗೆ ಕಾಯುತ್ತಿದ್ದರು. ಪತ್ರ ಬಂದೊಡನೆ ಬಿಚ್ಚಿ ಓದುವುದು ವಿಷಯ ತಿಳಿದು ಇನ್ನೊಬ್ಬರಿಗೆ ಮುಟ್ಟಿಸುವುದು. ಅದೆಲ್ಲ ಎಷ್ಟು ಚೆನ್ನಾಗಿತ್ತು. ಈಗ ಸುಮ್ಮನೆ ಕೂರುವ ಬದಲು ಆ ಹಳೆಯ ಪತ್ರಗಳನ್ನು ಓದಿದರಾಯಿತು ಎಂದುಕೊಂಡರು.

ಕಪಾಟಿನಲ್ಲಿದ್ದ ಪತ್ರದ ಗಂಟನ್ನು ಬಿಚ್ಚಿ ಒಂದೊಂದಾಗಿ ತೆಗೆಯತೊಡಗಿದರು. ಬಹುತೇಕ ಪತ್ರಗಳೆಲ್ಲ ತಮಗೆ ಗಂಡನಿಂದ ಬಂದದ್ದು. ಕೆಲವು ಮದುವೆಗೆ ಮುನ್ನ, ಇನ್ನುಳಿದ ಮದುವೆಯ ನಂತರ. ಅದೇನು ಪತ್ರಗಳೋ ಒಂದರಲ್ಲೂ ಸಾರವೇ ಇಲ್ಲ. `ನಾನು ಇಲ್ಲಿ ಬಂದು ಮುಟ್ಟಿದೆ. ಈ ವಾರ ಕೆಲಸ ಮುಗಿಯುತ್ತಿದ್ದಂತೆ ರವಿವಾರ ಹೊರಟು ಬಂದುಬಿಡುತ್ತೇನೆ. ಮಕ್ಕಳಿಗೂ ತಿಳಿಸು,’ ಕೆಲಸದ ಮೇಲೆ ಬೇರೆ ಊರಿಗೆ ಹೋದಾಗ ಇವರು ಬರೆದಿದ್ದ ಪತ್ರವಲ್ಲ ಇದು ಎಂದು ಯೋಚಿಸುತ್ತಾ ಗಂಡ ಬರೆದಿದ್ದ ಪತ್ರಗಳನ್ನೆಲ್ಲ ಆ ಕಡೆ ಸರಿಸಿದರು. ಇವರಿಗೆ ನೆಟ್ಟಗೆ ಸ್ವಾರಸ್ಯದ ಒಂದು ಪತ್ರವನ್ನು ಬರೆಯಲಾಗುವುದಿಲ್ಲ. ಮೊದಲು ಪತ್ರ ಬರೆಯುವುದನ್ನು ಇವರಿಗೆ ನಾನೇ ಕಲಿಸಬೇಕು ಅಂದುಕೊಂಡರು.

ತಕ್ಷಣವೇ ಛೇ! ಛೇ! ಬೇಡ ಬೇಡ. ಈಗಿನ ಕಾಲದಲ್ಲಿ ಇವರು ಯಾರಿಗೆ ಪತ್ರ ಬರೆಯಬೇಕಿದೆ? ಸರಿಯಾಗಿ ಫೋನಿನಲ್ಲಿ ಮಾತನಾಡಿದರಾಯಿತೆಂದು ಕ್ಷಣದಲ್ಲೇ ತಮ್ಮ ಅನಿಸಿಕೆಯನ್ನು ಬದಲಾಯಿಸಿದರು. ತಾವು ಒಮ್ಮೆಯೂ ಇವರೊಡನೆ ಫೋನ್‌ ನಲ್ಲಿ ಮಾತನಾಡಲೇ ಇಲ್ಲವಲ್ಲ ಎಂಬುದು ಆಗಲೇ ಹೊಳೆದದ್ದು ಸುನಂದಮ್ಮನಿಗೆ. `ಆ ಕಾಲದಲ್ಲಿ ಅದೆಲ್ಲ ಎಲ್ಲಿತ್ತು ಮಣ್ಣು!’ ಎಂದು ಗುನುಗುತ್ತ ಮತ್ತೊಂದು ಹಳೆಯ ಪತ್ರವನ್ನು ಕೈಗೆ ತೆಗೆದುಕೊಂಡು ನೋಡಿದರೆ ಕಳುಹಿಸಿದವರ ವಿಳಾಸವೇ ಇಲ್ಲ. ತುಂಬಾ ವರ್ಷಗಳ ಹಿಂದಿನದಾದ್ದರಿಂದ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದರೂ ಅಕ್ಷರಗಳನ್ನು ಊಹಿಸಿ ಓದಬಹುದಾಗಿತ್ತು. ತಮಗೇ ಬಂದ ಪತ್ರವೆಂದು ಖಚಿತವಾಯಿತು. ಪತ್ರವನ್ನು ಓದತೊಡಗಿದರು.

ಪ್ರಿಯ ಶ್ರೀಮತಿ ಸುನಂದಾ ಸುಧೀಂದ್ರ,

ಇದೇನು, ಇಷ್ಟೊಂದು ದಿನಗಳ ಮೇಲೆ ನಿನ್ನನ್ನು ನೆನೆಸುತ್ತಿದ್ದೇನೆಂದು ಯೋಚಿಸುತ್ತಿರುವೆಯಾ? ನಿನ್ನ ಯೋಚನೆ ಸಹಜ. ನಾನಾದರೂ ಏನು ಮಾಡಲಿ? ಇತ್ತೀಚೆಗೆ ಬರೀ ಕೆಲಸ. ಮನಸ್ಸಿನಲ್ಲಿ ಯೋಚಿಸಲು ಈಗ ಬೇಕಾದಷ್ಟು ಜನರಿದ್ದಾರೆ. ಕೆಲವರ ಸಮಸ್ಯೆಗಳಿವೆ. ಕೆಲವರ ವಿಚಾರಗಳು ಬಲು ಕ್ಲಿಷ್ಟವಾಗಿವೆ. ಕೆಲವರನ್ನು ಅರಿತುಕೊಳ್ಳುವುದರಲ್ಲಿ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಇದೆಲ್ಲದರ ಮಧ್ಯೆ ನಿನ್ನನ್ನು ನೆನೆಯುವುದು ಸ್ವಲ್ಪ ಕಷ್ಟವೇ ಅಂದರೆ ಸುಳ್ಳಾಗದು. ಆದರೂ ಏನು ಮಾಡ್ಲಿ? ನೀನು ಮಾಡಿರುವ ಕೆಲಸವೇ ಅಂತದು. ನಿನ್ನನ್ನು ನೆನೆಯದೆ ಬೇರೆ ಮಾರ್ಗವೇ ಇಲ್ಲದಂತಾಗಿದೆ.

ನಿನ್ನ ಕೈ ರುಚಿ ಚೆನ್ನಾಗಿರಬಹುದೆಂದು ಊಹಿಸಿದ್ದೆ. ಆದರೂ ನಿನ್ನ ಗಂಡನ ಮನೆಯಲ್ಲಿ ಪ್ರಥಮ ಬಾರಿ ಅಡುಗೆ ಮಾಡಿದಾಗಲೇ ನಿನ್ನ ಸಾಮರ್ಥ್ಯವನ್ನು ಇಷ್ಟು ಚೊಕ್ಕವಾಗಿ ತೋರಿಸಿದ್ದಿ ಎಂದರೆ ಯಾರಾದರೂ ಮರುಳಾದಾರು. ಮೊದಲಿನಿಂದಲೂ ಅಡುಗೆ ನಿನಗೆ ಒಲಿದು ಬಂದಿದೆ ಅನ್ನು. ನಿನ್ನೆಯಂತೂ ನಿನ್ನ ಅಡುಗೆ ಉಂಡ ಮೇಲೆ ನಿನ್ನನ್ನು ಹೊಗಳದಿದ್ದರೆ ನಾನು ಅಸೂಯೆಪಟ್ಟಿದ್ದೇನೆ ಎಂದೆನಿಸಿತು. ನೀನು ತಟ್ಟೆಯಲ್ಲಿ ಬಡಿಸಿದ್ದ ಪ್ರತಿಯೊಂದು ವ್ಯಂಜನಕ್ಕೂ ತನ್ನದೇ ಆದ ಸ್ವಾದವಿತ್ತು. ಉಪ್ಪಿನ ಪಕ್ಕಕ್ಕಿದ್ದ ಆ ನಿಂಬೆಕಾಯಿ ಉಪ್ಪಿನಕಾಯಿ ನಾಲಿಗೆಯ ಮೇಲಿಟ್ಟರೆ ಬಾಯಿ ಚಪ್ಪರಿಸಬೇಕು. ಅದು ನಡುನಡುವೆ ಕೊಟ್ಟ ಹುಳಿಸಿಹಿ ರುಚಿ ನಶೆ ಏರಿಸುವಂತಿತ್ತು. ಕೋಸಂಬರಿಯಲ್ಲಿ ಸೌತೆಕಾಯಿ, ಕೊಬ್ಬರಿ ತುರಿ, ನಿಂಬೆರಸದೊಂದಿಗೆ ಹಾಲುಜೇನು ಬೆರೆತಂತೆ ಬೆರೆತು ಅಮೋಘ ಆನಂದ ನೀಡಿತು. ಬೆಂಡೆಕಾಯಿ ಗೊಜ್ಜು ಅನ್ನಕ್ಕಾದರೂ ಸರಿ, ಇಲ್ಲ ಹಾಗೆ ತಿಂದರೂ ಸರಿ. ಹುರುಳಿಕಾಯಿಯನ್ನು ಅದೆಷ್ಟು ಚೆನ್ನಾಗಿ ಹೆಚ್ಚಿದ್ದೆಯೆಂದರೆ ಒಂದೊಂದು ಹುರುಳಿಕಾಯಿಯನ್ನು ಪಟ್ಟಿಯಿಂದ ಅಳೆದು ಅಳೆದು ಸಮನಾಗಿ ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿದ್ದೆಯೇನೋ ಎಂದೆನಿಸುವಂತಿತ್ತು. ಒಂದೂ ಅಸಮ ಹೋಳೇ ಇರಲಿಲ್ಲ ಆ ಅದ್ಭುತ ಪಲ್ಯದಲ್ಲಿ!

ಇನ್ನು ಗಸಗಸೆ ಪಾಯಸ. ಎರಡು ಬಾರಿಯಾದರೂ ಕುಡಿದೆನಲ್ಲವೆ ನಾನು? ಆ ತಿಳಿ ಸಾರಿನ ಸುವಾಸನೆ ನನ್ನ ಬೆರಳುಗಳಿಂದ ಇನ್ನೂ ಹೋಗಿಲ್ಲ. ಪತ್ರ ಬರೆಯುತ್ತಿರುವಂತೆ ಆ ಬೆರಳುಗಳನ್ನು ನಡುನಡುವೆ ಮೂಸಿ ಸಾರಿನ ವಾಸನೆ ಗ್ರಹಿಸುತ್ತಿದ್ದೇನೆ. ಎಂತಹ ಮುದ ನೀಡುತ್ತಿದೆ ನಿನ್ನ ಸಾರಿನ ಪರಿಮಳ! ಕುಂಬಳಕಾಯಿ ಹುಳಿಯಂತೂ ಆಹಾ! ಸಣ್ಣ ಕೊಳದಲ್ಲಿ ನೂರಾರು ಮೀನುಗಳಿರುವಂತೆ ಒಂದು ಬಟ್ಟಲಲ್ಲಿ ಅದೆಷ್ಟು ಹೋಳುಗಳು ಸಿಕ್ಕವು. ನಿನ್ನ ಕೈ ಧಾರಾಳ ಎಂಬುದಕ್ಕೆ ಮತ್ತೊಂದು ಸಾಕ್ಷಿ ಬೇಕೇ? ಆದರೂ ನೀನು ಅಷ್ಟು ಚೆನ್ನಾಗಿ ಕೊಬ್ಬರಿ ಹೋಳಿಗೆ ಮಾಡುವ ವಿಷಯ ನನಗೆ ತಿಳಿದಿರಲಿಲ್ಲ. ಸಿಹಿಯೆಂದರೆ ಮೂಗು ಮುರಿಯುವ ನಾನು ತೇಲುತ್ತಿದ್ದ ತುಪ್ಪದಲ್ಲಿ ಎರಡು ಹೋಳಿಗೆ ತಿನ್ನಬೇಕೆಂದರೆ ಅದರ ರುಚಿಯಾದರೂ ಹೇಗಿರಬೇಕು! ಈ ಹೋಳಿಗೆ ಮಾಡುವುದನ್ನು ನಿನ್ನ ಅಮ್ಮನಿಂದಲೇ ಕಲಿತಿರಬಹುದು. ಹಾಗಾದರೆ ನೀನು ಅವರಿಗೆ ಕೃತಜ್ಞಳಾಗಿರಲೇಬೇಕು. ಇಷ್ಟೆಲ್ಲಾ ಮಾಡಿದ್ದರೂ ನಿನ್ನ ನೆಚ್ಚಿನ ಸೊಪ್ಪಿನ ಅನ್ನ ಕಲಸುವುದನ್ನು ಮರೆತಿಲ್ಲ ನೋಡು ನೀನು. ಆ ಸೊಪ್ಪಿನ ಅನ್ನ ತಿಂದವರಿಗೆಲ್ಲಾ ಅದು ಅಚ್ಚುಮೆಚ್ಚಾಗುವುದರಲ್ಲಿ ಸಂಶಯವೇ ಬೇಡ. ಮಜ್ಜಿಗೆಗೆ ಹಾಕಿದ ತುಪ್ಪದ ಜೀರಿಗೆ ಒಗ್ಗರಣೆ ಬಲು ವಿಶೇಷವಾಗಿತ್ತು. ಅಂತ್ಯ ಒಳ್ಳೆಯದಾದರೆ ಎಲ್ಲ ಒಳ್ಳೆಯದಲ್ಲನೋ! ಆ ಒಳ್ಳೆಯ ಅಂತ್ಯವನ್ನು ನಿನ್ನ ಮಜ್ಜಿಗೆ ತಂದಿತೆನ್ನುವುದು ದಿಟ.

ನಿನ್ನ ಅಡುಗೆ ಮಾಡು ಕಲೆ ಎಲ್ಲರಿಗೂ ಮಾದರಿಯಾಗಲಿ, ಸುನಂದಾ, ನಿನ್ನ ಪಾಕ ಪ್ರಾವೀಣ್ಯತೆಯು ದಿನದಿಂದ ದಿನಕ್ಕೆ ವೃದ್ಧಿಸಲಿ. ಇಂತಹ ಭೂರಿಭೋಜನದ ಅದೃಷ್ಟವನ್ನು ನನ್ನ ಹೊಟ್ಟೆಗೆ ನೀಡಿದ್ದಕ್ಕಾಗಿ ನಿನಗೆ ಅನಂತಾನಂತ ಧನ್ಯವಾದಗಳು.

ನಿನ್ನ ವಿಜಿ.

ಇದೇನಿದು! ತನ್ನ ಅಡುಗೆಯ ಬಗ್ಗೆ ಇಷ್ಟೊಂದು ಸವಿಸ್ತಾರವಾಗಿ ಹೊಗಳಿ ಬರೆದಿದ್ದಾರೆ. ಯಾರಿರಬಹುದು ಇವರು? ಹೆಸರು ನೋಡಿದರೆ `ವಿಜಿ’ ಎಂದಿದೆಯಲ್ಲ. ತನಗೆ ಗೊತ್ತಿರು ಈ ವಿಜಿ ಯಾರು ಎಂಬುದೇ ಈಗ ಸುನಂದಮ್ಮನ ವಿಚಾರವಾಯಿತು. ಧೂಳಾದ ಭಾವಚಿತ್ರವನ್ನು ಒರೆಸಿ ಸ್ಪಷ್ಟವಾಗಿ ಕಾಣುವ ಹಾಗೆ ಮಾಡುವಂತೆ ಮಸುಕು ಮಸುಕಾದ ನೆನಪುಗಳನ್ನು ಪ್ರಯತ್ನಪಟ್ಟು ಮೆಲುಕು ಹಾಕತೊಡಗಿದರು.

ತನಗೆ ಇನ್ನೂ ಇಪ್ಪತ್ತು ತುಂಬಿರಲಿಕ್ಕಿಲ್ಲ ಮದುವೆಯಾದಾಗ, ಅತ್ತೆ, ಮಾವ, ಭಾವ, ಭಾವನ ಹೆಂಡತಿ, ಮೈದುನ ಎಲ್ಲರೂ ಒಟ್ಟಿಗೆ ಇದ್ದ ಕುಟುಂಬ. ಹೊಸ ವಾತಾವರಣ, ಹೊಸ ಜನ. ಹತ್ತು ಹದಿನೈದು ದಿನಗಳು ಏನೊಂದು ಕೆಲಸವಿಲ್ಲದೆ ಆರಾಮವಾಗಿ ಕಳೆದೆ. ನಂತರ ಮೊದಲ ಬಾರಿ ಅಡುಗೆ ಮಾಡುವ ಸರದಿ ಬಂತು. ಆ ದಿನ ಈ ಊರಿನಲ್ಲಿದ್ದ ನೆಂಟರು, ಇವರ ಕೆಲವು ಸ್ನೇಹಿತರು ಬಂದಿದ್ದರು. ಇಪ್ಪತ್ತು ಇಪ್ಪತ್ತೈದು ಜನರಾದರೂ ಸೇರಿರಬಹುದು. ಆದರೂ ಅಡುಗೆಯ ಸಮಸ್ತ ಜವಾಬ್ದಾರಿ ಹೊತ್ತು ಮುಂಜಾನೆ ಬೇಗನೇ ಎದ್ದು ಕೆಲಸ ಶುರು ಮಾಡಿ ಹೇಳಿದ ಹೊತ್ತಿಗಿಂತ ಹತ್ತು ನಿಮಿಷ ಮುಂಚೆಯೇ ಎಲ್ಲಾ ತಯಾರಿ ಮಾಡಿದ್ದೆ.

ಅಡುಗೆ ಬಡಿಸಿದಾಗ ಒಂದು ರೀತಿಯ ಆತಂಕ, ಒಂದು ರೀತಿಯ ಉತ್ಸಾಹ. ಊಟ ಮಾಡುವವರ ಮುಖದ ಭಾವಗಳನ್ನು ಗಮನಿಸಿ ಅವರಿಗೆ ಅಡುಗೆ ಸೇರುತ್ತಿದೆಯೇ ಎಂದು ಊಹಿಸುವ ಪ್ರಯತ್ನ ಮಾಡಿದ್ದೆ. ಯಾರೂ ಬಾಯಿ ಬಿಟ್ಟು ಹೇಳಿದ್ದಾಗಲೀ ಬಾಯಿ ತುಂಬ ಹೊಗಳಿದ್ದಾಗಲೀ ನೆನಪಿಲ್ಲ. ಇವರನ್ನು `ಅಡುಗೆ ಸರಿಯಾಗಿದೆಯೇ?’ ಎಂದು ಪ್ರಶ್ನಿಸಿದಾಗ `ಸರಿ ಇದೆ ಸರಿ ಇದೆ’ ಎಂದಷ್ಟೇ ಹೇಳಿ ಸ್ನೇಹಿತರೊಂದಿಗೆ ಮಾತನಾಡುವುದರಲ್ಲಿಯೇ ತೊಡಗಿದ್ದರು. ಇವರ ಪ್ರತಿಕ್ರಿಯೆ ಬೇಸರ ತಂದರೂ ಹೆಚ್ಚಲ್ಲ. ಮದುವೆಯಾದ ಹದಿನೈದು ದಿನಗಳಲ್ಲಿ ಇವರ ಸ್ವಭಾವ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ತಾನೋ ಒಂದು ಮಾತನಾಡುವಲ್ಲಿ ಎರಡು ಸೇರಿಸಿ ಹೇಳುವವಳು. ಇವರೋ ಒಂದು ಹೇಳುವಲ್ಲಿ ಅರ್ಧ ಹೇಳಿದರೂ ಸಾಕಷ್ಟಾಯಿತು ಎನ್ನುವವರು. ಆದರೆ ಒಳ್ಳೆಯವರು. ಇವರ ಮನೆಯಲ್ಲೇ ಹೀಗೆ. ಯಾರದೂ ಹೆಚ್ಚಿನ ಮಾತಿಲ್ಲ. ಬಾಯಿ ತುಂಬ ಹೊಗಳುವುದು ಗೊತ್ತೇ ಇಲ್ಲ. ಅಂದಮೇಲೆ ಅಲ್ಲಿರುವವರಲ್ಲಿ ಯಾರು ಈ ರೀತಿ ಪತ್ರ ಬರೆದಿರಬಹುದು? `’ಕಾರದಿಂದ ಬರುವ ಹೆಸರಿರುವವರು ಆ ದಿನ ಇದ್ದವರಾರು? ಎಲ್ಲರ ಹೆಸರುಗಳನ್ನು ನೆನೆಯುವ ಕೆಲಸ ಶುರು ಮಾಡಿದರು ಸುನಂದಮ್ಮ. ಇವರ ಮನೆಯಲ್ಲಿ `ವಿಜಿ’ ಅಂದರೆ ಇವರ ತಮ್ಮ  ವಿಜಯೇಂದ್ರನೇ? ಅವನಂತೂ ಇದ್ದೇ ಇದ್ದ ಆ ದಿನ. ಆದರೆ ಅವನನ್ನು `ವಿಜಯಾ ವಿಜಯಾ’ ಎಂದು ಮನೆಯಲ್ಲಿ ಹುಡುಗಿಯ ಹೆಸರಿನಂತೆ ಕರೆಯುತ್ತಾರಲ್ಲ. ಅವನೇ `ವಿಜಿ’ ಎಂದು ತಮಾಷೆಗಾಗಿ ಬರೆದನೆ? ಇಲ್ಲ ಇಲ್ಲ, ಅವನಿಗೆ ಅಷ್ಟೊಂದು ಧೈರ್ಯವೇ ಇಲ್ಲ. ಆ ದಿನ ಊಟ ಮುಗಿದ ಮೇಲೆ ಅಡುಗೆಮನೆ ಬಳಿ ನಿಂತ, `ಅತ್ತಿಗೆ, ಅಡುಗೆ ಚೆನ್ನಾಗಿತ್ತು,’ ಎನ್ನುವುದರಲ್ಲಿ ಅವನಿಗೆ ಬೆವರಿಟ್ಟಿತ್ತು. ತಾನೇನೋ ಬೇರೆ ಗ್ರಹದಿಂದ ಬಂದಹಾಗೆ. ಶುದ್ಧ ನಾಚಿಕೆಯ ಸ್ವಭಾವ ಅದಕ್ಕೆ. ಚಿಕ್ಕ ವಯಸ್ಸಿನಿಂದಲೂ ತಮಾಷೆ ಗಿಮಾಷೆ ಮಾಡಿ ತಿಳಿದೇ ಇಲ್ಲವಂತೆ. ಅವನಂತೂ ಈ ರೀತಿ ಬರೆಯುವುದಿರಲಿ ಯೋಚನೆಯೂ ಮಾಡಿರಲಾರ.

ಅದಲ್ಲದೆ, ಈ ಅಡುಗೆಯನ್ನು ಸವಿಯುತ್ತ ತಿನ್ನುವ ನಾಲಿಗೆಯಲ್ಲ ಅವನದು. ಹ್ಞೂಂ! ಮತ್ತಾರಿದ್ದರು ಆ ದಿನ? ಸುನಂದಮ್ಮನ ಯೋಚನೆ ಒಂದು ಮಟ್ಟಕ್ಕೇರಿರಲಿಲ್ಲ. ಆಗಲೇ ಸಣ್ಣ ವಿರಾಮವೆಂಬಂತೆ ಮನೆಯ ಗಂಟೆ ಬಾರಿಸಿತು. ಯಾರೆಂದು ನೋಡಿದರೆ `ಸೇಲ್ಸ್ ಗರ್ಲ್.’ ಛೇ! ತನ್ನ ಸುಮಧುರ ನೆನಪನ್ನು ಕೆಡಿಸಲು ಬಂದಿದ್ದಾಳೆ. ಈ ಹೊತ್ತಿನಲ್ಲಿ ಸುಮ್ಮನೆ ಕುಳಿತು ತಾನೊಂದು ಕೆಲಸ ಮಾಡುವಂತಿಲ್ಲ ಎಂದುಕೊಳ್ಳುತ್ತಲೇ, ಏನು ತಂದಿರಬಹುದು ಹುಡುಗಿ ಎನ್ನುವ ಕುತೂಹಲವನ್ನು ತೋರದೆ, `ಬೇಡ ಹೋಗಮ್ಮ’ ಎಂದು ಬಾಗಿಲು ಹಾಕಿ ಮತ್ತೆ ಕೋಣೆಯ ಒಳ ಹೊಕ್ಕರು ನೆನಪುಗಳ ಅಲೆಯಲ್ಲಿ ತೇಲಾಡಲು.

`ವಿಜಿ’ ಅಂದರೆ ಗಂಡಸೇ ಏಕಿರಬೇಕು? ಹೆಂಗಸೂ ಇರಬಹುದಲ್ಲವೇ? ಹಾಗಾದರೆ ಆ ದಿನ ಇವರ ದೊಡ್ಡಪ್ಪನ ಕಡೆಯ ಮಗಳು ವೈಜಯಂತಿ ಬಂದಿದ್ದಳಲ್ಲ, ಅವಳಿರಬಹುದೆ? ಅವಳನ್ನು ಮನೆಯಲ್ಲಿ `ವೈಜೂ’ ಅನ್ನುತ್ತಾರಲ್ಲವೇ? ಊಟ ಮಾಡಿಯಾದ ಮೇಲೆ `ಪರವಾಗಿಲ್ಲ ಅತ್ತಿಗೆ, ನಿಮ್ಮ ಕೈ ರುಚಿ ಚೆನ್ನಾಗಿದೆ,’ ಎಂದಿದ್ದಳು. ಅವಳು ನಂತರ ಮನೆಗೆ ಹೋಗಿ ಆ ಪತ್ರ ಬರೆದಿದ್ದರೆ? ಆದರೆ, ಆ ದಿನ ಆಕೆಗೆ ನನ್ನ ಮೇಲೆ ಸಿಟ್ಟು ಬಂದಿತ್ತು. ಮನೆಗೆ ಹೋಗುವಾಗ ಅವಳಿಗೆ ಕುಂಕುಮ ಹಚ್ಚಿ ನನ್ನ ಮದುವೆಯಲ್ಲಿ ನನಗೆ ಬಂದಿದ್ದ ಕೆಂಪು ಸೀರೆಯೊಂದನ್ನು ಅವಳಿಗೆ ಕೊಟ್ಟಿದ್ದೆ. ಬಹುಶಃ ಆ ಗಾಢ ಬಣ್ಣ ನನಗೆ ಒಪ್ಪುದಿಲ್ಲವೆಂದು. ಆದರೆ ಅವಳಿಗೆ ಈ ವಿಷಯ ತಿಳಿಸಿರಲಿಲ್ಲ. `ವೈಜೂ ನಿನಗಾಗಿ ಈ ಸೀರೆ,’ ಎಂದಷ್ಟೇ ಉಸುರಿದ್ದೆ. ಮರುದಿನವೇ ಮುಖ ಊದಿಸಿ ಆ ಸೀರೆಯೊಂದಿಗೆ ಬಂದಿದ್ದಳು. ಆ ಸೀರೆಯನ್ನು ಕೊಟ್ಟಿದ್ದು ವೈಜಯಂತಿಯ ತಾಯಿಯ ತಂಗಿಯೇ ಅಂತೆ. ಅವಳು ಇಲ್ಲಿ ಊಟ ಮುಗಿಸಿ ಮನೆ ತಲುಪುವಷ್ಟರಲ್ಲಿ ಅವರು ಅಲ್ಲಿ ಬಂದಿದ್ದರಂತೆ. ಇವಳು ಅತ್ತಿಗೆ ಕೊಟ್ಟ ಸೀರೆಯೆಂದು ತೋರಿಸಿದ್ದೇ ತಡ, ಅವರಿಗೆ ತಮ್ಮ ಸೀರೆಯನ್ನು ನಾನು ಬಳಸಿಲ್ಲವೆಂದು ತುಸು ಕೋಪ ಬಂದು ನಿಜಾಂಶವನ್ನು ತಿಳಿಸಿಯೇಬಿಟ್ಟರಂತೆ. ಈಕೆ ಮರುದಿನ ಮುಂಜಾನೆಯೇ ನೇರವಾಗಿ ನಾನಿದ್ದಲ್ಲಿಗೆ ಬಂದು, “ಅತ್ತಿಗೆ, ಹೀಗೆ ನೀವು ಅವರಿವರು ಕೊಟ್ಟ ಸೀರೆ ನಿಮಗೆ ಇಷ್ಟವಾಗಲಿಲ್ಲವೆಂದು ನನಗೆ ಕೊಟ್ಟರೆ ನಾನೇಕೆ ಉಡಲಿ? ಪ್ರೀತಿಯಿದ್ದರೆ ಹೊಸದನ್ನು ಕೊಡಬೇಕು. ಹೀಗೆ ಹಳತನ್ನು ರವಾನಿಸುವುದರಲ್ಲಿ ನಿಮಗೇನು ಬಂದೀತು? ನನಗೆ ಈ ಸೀರೆ ಬೇಡ. ನೀವೇ ಉಡಿ. ನನ್ನ ಬಳಿ ಇದಕ್ಕಿಂತ ಚೆಂದದ ಸೀರೆಗಳು ಸಾಕಷ್ಟಿವೆ. ನಿನ್ನೆ ಚಿಕ್ಕಮ್ಮ ಬಂದು ಹೇಳಿದ್ದಕ್ಕೆ ಎಷ್ಟು ಮಾನ ಹೋದ ಹಾಗಾಯಿತು ಗೊತ್ತೆ? ರಾತ್ರಿಯೆಲ್ಲ ಕಣ್ಣು ತುಂಬ ನಿದ್ದೆ ಇಲ್ಲ ನನಗೆ. ಯಾವಾಗ ನಿಮಗೆ ಇದನ್ನು ಕೊಟ್ಟೇನೋ ಅನಿಸಿತ್ತು,” ಎಂದು ಸೀರೆಯನ್ನು ನನ್ನ ಬಳಿಯೇ ಇಟ್ಟು ಹೊರಟೇಬಿಟ್ಟಳು.

“ಇರು ವೈಜೂ. ನನಗೆ ಈ ಬಣ್ಣ ಒಪ್ಪುದಿಲ್ಲ. ನಿನಗಾದರೆ ಒಪ್ಪೀತು ಎಂದು ಹೀಗೆ ಮಾಡಿದೆ,” ಅಂದರೆ ಹೊರ ಬಾಗಿಲ ಬಳಿಯಿಂದಲೇ

“ಕೊಡುವಾಗ ನಿಜ ಹೇಳಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು?” ಎಂದು ಪ್ರಶ್ನಿಸಿ ಉತ್ತರಕ್ಕೂ ಕಾಯದೆ ಹೊರಟೇಹೋಗಿದ್ದಳು. ನನಗೂ ಕೋಪ ಬಂದಿತ್ತು. ಆದರೆ ಅವಳ ಮೇಲಲ್ಲ. ನನ್ನ ಮೇಲೆಯೇ. ನಾನು ಅವಳಿಗೆ ಬಣ್ಣ ಒಪ್ಪುವುದೆಂದು ಆ ಸೀರೆಯನ್ನು ಕೊಟ್ಟೆನೋ ಇಲ್ಲ ಹೇಗಾದರೂ ನನಗೆ ಬೇಡದ ಸೀರೆಯನ್ನು ಇನ್ನೊಬ್ಬರಿಗೆ ರವಾನಿಸಿದರಾಯಿತೆಂದು ಹಾಗೆ ಮಾಡಿದೆನೋ ಎಂದೆನಿಸದಿರಲಿಲ್ಲ. ನಾಲ್ಕು ದಿನ ಮಾತನಾಡದ ಅವಳು ಐದನೇ ದಿನ ನಮ್ಮ ಮನೆಗೆ ಬಂದಾಗ ಏನೂ ಆಗಿಲ್ಲವೆಂಬಂತೆ ಯಾರಿಗೂ ಏನೂ ಹೇಳದೆ ಎಷ್ಟು ಚೆನ್ನಾಗಿ ಮಾತನಾಡಿದಳು.

ಅವಳ ವರ್ತನೆಯಲ್ಲಿ ಒಂದು ಚೂರೂ ಕೋಪ ಕಾಣಿಸಲಿಲ್ಲ. ನಿಜವಾಗಿಯೂ ಅವಳು ನಡೆದದ್ದನ್ನು ಮರೆತೇಬಿಟ್ಟಳೇನೋ ಎಂಬಂತಿತ್ತು ಅವಳ ವರ್ತನೆ. ನನಗಿಂತ ಸಣ್ಣವಳಾದ ಆಕೆಯ ಸ್ವಭಾವದಲ್ಲಿದ್ದ ಹಿರಿತನ ನನ್ನ ಬಾಲಿಶ ವರ್ತನೆಯನ್ನು ಕೆಣಕಿದಂತಿತ್ತು. ಸಣ್ಣ ವಿಷಯಗಳು ಸಂಬಂಧಗಳಲ್ಲಿ ಎಷ್ಟು ಮುಖ್ಯ ಅನಿಸಿಬಿಟ್ಟಿತ್ತು. ಮತ್ತೊಮ್ಮೆ ಸುನಂದಮ್ಮನ ಕಣ್ಣು ಪತ್ರದತ್ತ ನೋಡಿತು. ಅವಳು ಆ ಸಿಟ್ಟಿನಲ್ಲಿ ಮರುದಿನವೇ ನನಗೆ ಈ ರೀತಿಯ ಪತ್ರ ಬರೆಯುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದರು.

ಒಂದು ಬಾರಿ ಕಿಟಕಿಯಿಂದಾಚೆ ನೋಡಿದರು. ಮೋಡಗಳೂ ಕದಲುತ್ತಿಲ್ಲ. ಮಳೆಯೂ ಹೊಡೆಯುತ್ತಿಲ್ಲ. ದಿನವೆಲ್ಲ ಈ ಮಬ್ಬಿನಲ್ಲಿ ಕಳೆಯುವುದೆಂತು ಅಂದುಕೊಂಡರು. ಈ ಮಳೆಯ ವಾತಾವರಣ ತಮಗೆ ಹಿಡಿಸದು. ಆದರೆ, ಇವರ ವಾರಿಜಕ್ಕನಿಗೆ ಮಳೆ ಬಲು ಪ್ರೀತಿ. ವಾರಿಜಕ್ಕ….! ಅಂದ ಹಾಗೆ ಅವರೂ ಆ ದಿನ ಊಟಕ್ಕೆ ಬಂದಿದ್ದರಲ್ಲಿ. ಅವರದು ಸ್ವಲ್ಪ ತಮಾಷೆಯ ಸ್ವಭಾವ. ವಾರಿಜಕ್ಕ `ವಿಜಿ’ ಎಂದು ಬರೆದಿರಬಹುದು.

“ಸುನಂದಾ, ಇಷ್ಟೊಂದು ಅಡುಗೆ ಮಾಡಿದ್ದೀಯಾ? ನಿನಗೆ ಬರುವ ವ್ಯಂಜನಗಳೆಲ್ಲವನ್ನೂ ಈ ದಿನವೇ ಮಾಡಿ ತೋರಿಸಿಬಿಡಬೇಕೆಂಬ ಆಸೆಯೇನು?” ಎಂದು ಕೇಳಿ ನಕ್ಕಿದ್ದರು. ಅವರಿಗೂ ಅಡುಗೆ ಮಾಡುವಲ್ಲಿ ಎಂತಹ ನೈಪುಣ್ಯತೆ ಇದೆ. ಅವರನ್ನು ನಾನು ಕಂಡದ್ದು ಮದುವೆಯ ದಿನವೇ. ಅಂದಮೇಲೆ ಅತಿ ಹಳೆಯ ಪರಿಚಯದವರಂತೆ ಇತ್ತೀಚೆಗೆ ನನ್ನನ್ನು ನೆನೆಯಲು ಸಮಯವಿಲ್ಲವೆಂಬಂತೆ ಅದೇಕೆ ಬರೆದಿದ್ದಾರೆ? ಅವರಿಗಂತೂ ನನಗೆ ಸೊಪ್ಪಿನ ಅನ್ನ ನೆಚ್ಚಿನದೆಂದು ಈ ದಿನದವರೆಗೂ ಗೊತ್ತಾಗಿಲ್ಲ. ವಾರಿಜಕ್ಕನದು ಬರಿ ತಮಾಷೆಯ ಮಾತು. ಬರೆಯುವುದೆಲ್ಲ ಅವರ ಜಾಯಮಾನವಲ್ಲ. ಅದಲ್ಲದೆ ಮರುದಿನ ಮುಂಜಾನೆಯೇ ಅವರು ಊರಿಗೆ ಹೊರಟವರಲ್ಲಿ. ಪ್ರಯಾಣದಲ್ಲಿ ಪತ್ರ ಬರೆದಿರಲಾರರು. ಈ ಅಕ್ಷರಗಳು ಮುದ್ದಾಗಿವೆ. ಹಾಗೆ ಹೀಗೆ ಗೀಚಿದಂತಿಲ್ಲ. ಅವರಿರಲಾರರು.

ಯೋಚಿಸುತ್ತಲೇ ಇದ್ದಾಗ ಕಣ್ಣು ರೆಪ್ಪೆಗಳು ಯಾವಾಗ ಮುಚ್ಚಿತೆಂಬುದೇ ತಿಳಿಯಲಿಲ್ಲ. ಎಚ್ಚರವಾದದ್ದು ಗಂಡ ಎದ್ದು “ಸುನಂದಾ, ಕಾಫಿ ಮಾಡೆ,’ ಎಂದು ಕೂಗಿದಾಗಲೇ. ಕಣ್ಣು ಬಿಟ್ಟವರೆ ತಾವೇಕೆ ಹೀಗೆ ಮಲಗಿದ್ದೆಂದು ತಮ್ಮನ್ನೇ ಶಪಿಸಿಕೊಂಡರು. ಈಗ ಪತ್ರ ಬರೆದವರ ಪತ್ತೆ ಹಚ್ಚದಿದ್ದರೆ ತಮಗೆ ರಾತ್ರಿಯೆಲ್ಲ ನಿದ್ದೆ ಬರದೆಂದು ಗಡಿಬಿಡಿಯಿಂದ ಕಾಫಿ ಮಾಡಿ ಗಂಡನಿಗೆ ಕೊಟ್ಟು ತಮಗೂ ಒಂದು ಲೋಟ ಕಾಫಿಯನ್ನು ತಂದರು. ಕೋಣೆಯಲ್ಲಿದ್ದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿದರು. ತಮ್ಮ ಅಡುಗೆಯ ರುಚಿಯನ್ನು ಮನತುಂಬ ಹೊಗಳಿದವರಿಗೆ ತಾನು ಧನ್ಯವಾದ ಹೇಳಿ ಪತ್ರ ಬರೆದಿದ್ದ ನೆನಪೇ ತಮಗಿಲ್ಲವೆಂದುಕೊಂಡರು.

ಮತ್ತಾವ ಹೆಣ್ಣಿನ ಹೆಸರೂ `ವಿಕಾರದಲಿಲ್ಲ ನಮ್ಮ ಮನೆಯಲ್ಲಿ. ಹಾಗಿದ್ದಲ್ಲಿ, ಹೀಗೆಲ್ಲ ಹೊಗಳಿ ತಮ್ಮ ಅಡುಗೆಯನ್ನು ಸವಿದು ಪಾವನವಾದಂತೆ ಬರೆದ ಈ ಭೂಪ ಯಾರಿರಬಹುದು? ಇವರ ಗೆಳೆಯ ವಜ್ರಪಾಣಿ ಬಂದಿದ್ದರಲ್ಲ ಆ ದಿನದ ಊಟಕ್ಕೆ. ಅವರು ಈ ರೀತಿ ಬರೆದಿರಬಹುದೆ? ಅವರಿಗೆಷ್ಟು ಧೈರ್ಯ ಈ ರೀತಿ ನನ್ನನ್ನು ಹೊಗಳಲು.

ಆ ದಿನ “ನಿನ್ನ ಹೊಟ್ಟೆಗೆ ಇನ್ಮುಂದೆ ಪ್ರತಿದಿನ ಹಬ್ಬವೇ ಕಣೋ,” ಎಂದು ಇವರೆಡೆಗೆ ಹೇಳಿ ನಕ್ಕಿದ್ದರು. ಈ ಪತ್ರದ ವಿಷಯ ಇವರಿಗೆ ಹೇಳಬೇಕು ಎಂದುಕೊಂಡು ಹೊರ ಹೋಗುವುದರಲ್ಲಿ ಗಂಡ ಹೇಳಿದ ವಿಷಯ ನೆನಪಿಗೆ ಬಂತು. ವಜ್ರಪಾಣಿಯವರಿಗೆ ಕನ್ನಡ ಓದಲಾಗಲಿ ಬರೆಯಲಾಗಲಿ ಬರುವುದೇ ಇಲ್ಲವೆಂದು. ಅವರ ಮಾತೃಭಾಷೆಯಂತೂ ಕನ್ನಡ ಅಲ್ಲ. ಮೇಲಾಗಿ ಮೊದಲಿನಿಂದಲೂ ಇಂಗ್ಲಿಷ್‌ ಕಲಿಕೆ ಬೇರೆ. ಬೇರೆಯವರೊಡನೆ ಕನ್ನಡದಲ್ಲಿ ಇಷ್ಟೆಲ್ಲ ತರಕಾರಿ ವ್ಯಂಜನಗಳ ಹೆಸರು ಹೇಳಿ ಅವರಿಂದ ಬರೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಇದೇನಿದು? ತನ್ನ ವಿಚಾರಗಳು ದಿಕ್ಕು ದೆಸೆಯಿಲ್ಲದೆ ಎತ್ತೆತ್ತಲೋ ಓಡುತ್ತಿವೆಯಲ್ಲ. ಇವರ ಸ್ನೇಹಿತರೆಲ್ಲ ಹೀಗೆ ಮಾಡುವುದಾದರೂ ಸಾಧ್ಯವೇ? ಇವರ ಸ್ನೇಹಿತರ ಪೈಕಿ ಯಾರೂ ಪತ್ರ ಗಿತ್ರ ಬರೆದಿರಲಾರರು. ಸಂಬಂಧಿಗಳಲ್ಲ, ಸ್ನೇಹಿತರೂ ಅಲ್ಲ. ಮತ್ತಾರು? ಯೋಚನೆ ಮುಂದುವರೆಯಿತು.

ಆ ದಿನ ಮನೆಗೆ ಪೂಜಾ ಭಟ್ಟರು ವಿಜಯನಾರಸಿಂಹಾಚಾರ್ಯರು ಬಂದಿದ್ದರಲ್ಲ. ಅವರದೇನು ಈ ಕೆಲಸ? ಎಲ್ಲವನ್ನೂ ಕೇಳಿ ಕೇಳಿ ಹಾಕಿಸಿಕೊಂಡು ತಿಂದದ್ದು ಅವರೇ. ಆ ದಿನವೇ ನನ್ನನ್ನು ಹೊಗಳಿ ಆಶೀರ್ದಿಸಿದರಲ್ಲ. ಅವರೇಕೆ ಈ ರೀತಿ ಬರೆಯಹೋದರು? ಈ ದಿನ ಹೋಗಿ ಅವರನ್ನು ವಿಚಾರಿಸಬೇಕೆಂದರೆ ಅವರೆಲ್ಲಿದ್ದಾರೆ ಈಗ ಈ ಭೂಮಿಯ ಮೇಲೆ? ಸುನಂದಮ್ಮನಿಗೆ ಒಂದು ರೀತಿ ಸಿಟ್ಟು ಬಂದಂತಿತ್ತು. ಮತ್ತೆ ಮರು ಘಳಿಗೆಯೇ ಛೇ! ಏನಾಗಿದೆ ತನಗೆ? ಪತ್ರವನ್ನು ಆಚಾರ್ಯರು ಬರೆಯಲಾದರೂ ಸಾಧ್ಯವೇ? ತುಂಬಾ ಒಳ್ಳೆಯ ಮನುಷ್ಯ. ನನ್ನ ಮದುವೆಯಾದ ಹೊಸದರಲ್ಲಿ ತಮ್ಮ ಮೊಮ್ಮಗಳಂತೆ ಕಂಡರು. ಮಂತ್ರ ಮರೆತು ಗಿರೆತು ಹೋದರೂ ಅಷ್ಟೆ. ಪುಸ್ತಕ ನೋಡುತ್ತಿರಲಿಲ್ಲ.

ಅವರಿಗೆ ಆಗ ಕಣ್ಣೇ ಸರಿ ಕಾಣುತ್ತಿರಲಿಲ್ಲ. ಓದಲೇ ಆಗದವರು ಈ ರೀತಿ ಹೊಗಳಿ ಪತ್ರವನ್ನು ಹೇಗೆ ಬರೆದಾರು? ತನಗೆ ತಲೆ ಸಿಡಿಯುತ್ತಿದೆಯೆಂದುಕೊಂಡು ಸುನಂದಮ್ಮ ಪತ್ರವನ್ನು ಬಿಸಾಕಿ ಬಿಡಲೇ ಎಂದುಕೊಂಡರು. ಆದರೆ ಹಾಗೂ ಮಾಡಲಾರರು. ತಮ್ಮ ಹೊಗಳಿಕೆಯನ್ನು ತಾವೇ ಬಿಸಾಡಲು ಪ್ರಾಯಶಃ ಯಾರಿಂದಲೂ ಸಾಧ್ಯವಿಲ್ಲ. ಏನು ಮಾಡಿದರೂ `ವಿಜಿ’ ಯಾರೆಂದು ನೆನಪೇ ಆಗಲಿಲ್ಲ. ಯೋಚನೆಯಲ್ಲಿ ಮುಳುಗಿದ್ದ ಸುನಂದಮ್ಮನನ್ನು ಎಚ್ಚರಿಸಿದ್ದು ಅವರ ಗಂಡನ ಕೂಗು.

“ಸುನಂದಾ…ಏ ಸುನಂದಾ…. ಅದೇನು ಮಾಡ್ತಿದಿಯಾ ಆ ಕೋಣೆಯಲ್ಲಿ? ನಿನ್ನ ಚಿಕ್ಕಮ್ಮನ ಮಗಳು ಮಮತಾ ಕರೆ ಮಾಡಿದ್ದಾಳೆ. ಬೇಗ ಬಾ.”

“ಯಾರು? ಮಮತಾಳೆ? ಬಂದೆ…. ಬಂದೆ….?” ಪತ್ರದ ಸಹಿತವೇ ಹೊರಟರು ಸುನಂದಮ್ಮ.

“ಹಲೋ ಮಮತಾ…. ಹೇಗಿದಿಯಾ? ಇಷ್ಟು ದಿನದ ನಂತರ ನನ್ನ ನೆನಪಾಯಿತೆ?”

“ನಾನು ಚೆನ್ನಾಗಿದೀನಿ. ಅಕ್ಕಾ, ನೀವು ಹೇಗಿದ್ದೀರಿ?”

“ನಾನೂ ಆರಾಮಾಗಿದೀನಿ.”

“ಅಕ್ಕಾ, ನಮ್ಮ ಮನೆಯ ಮೇಲೆ ಮತ್ತೊಂದು ಅಂತಸ್ತು ಏರಿಸುತ್ತಿದ್ದೇವೆ ಎಂದು ಹೇಳಿದ್ದೆನಲ್ಲ. ಅದೇ, ಬಾಡಿಗೆ ಕೊಡುವ ಸಲುವಾಗಿ. ಈಗ ಮನೆ ಕಟ್ಟಿಸುವುದು ಮುಗಿದು ಇದೇ ಭಾನುವಾರ ಗೃಹಪ್ರವೇಶ ಮಾಡ್ತಿದೀವಿ. ನೀನು ಭಾವನವರೊಂದಿಗೆ ಖಂಡಿತ ಬರಬೇಕು.”

“ಹೌದೇನೇ? ಖಂಡಿತ ಬರ್ತೀವಿ. ಒಂದು ರೀತಿ ಮನೆಯ ಮೇಲೆ ಬಾಡಿಗೆಗೆ ಬಂದರೆ ನಿನಗೂ ಒಂದು ರೀತಿಯ ಧೈರ್ಯ ಅಲ್ಲವೇ?”

“ಹೌದಕ್ಕ. ಅದೂ ನಿಜ ಅನ್ನಿ. ನನಗೂ ಒಬ್ಬಳೇ ಮನೆಯಲ್ಲಿ ಬೇಸರ. ಯಾರಾದರೂ ಒಳ್ಳೆಯ ಗೃಹಸ್ಥರು ಬಂದರೆ ನನಗೂ ಜೊತೆ ಸಿಕ್ಕ ಹಾಗಾಗುತ್ತೆ. ಇನ್ನೂ ಬಹಳ ಜನಕ್ಕೆ ಕರೆ ಮಾಡಬೇಕಿದೆ. ಫೋನ್‌ ಇಡ್ತೀನಿ. ಭಾನುವಾರ ಸಿಗೋಣ ವಿಜಿ ಅಕ್ಕ.”

ಕೊನೆಯ ಪದ ಕೇಳಿ ಸುನಂದಮ್ಮನಿಗೆ ಏನೋ ವಿಚಿತ್ರವೆನಿಸಿತು. ಅವಳು ತನ್ನನ್ನು `ವಿಜಿ ಅಕ್ಕ’ ಎಂದಳಲ್ಲವೇ? `ವಿಜಿ!’ ಓಹ್‌, ಹೌದಲ್ಲ! ತನ್ನ ತವರು ಮನೆಯ ಹೆಸರು `ವಿಜಯಲಕ್ಷ್ಮಿ.’ ಎಲ್ಲರೂ ಪ್ರೀತಿಯಿಂದ `ವಿಜಿ’ ಎಂದೇ ಕರೆಯುತ್ತಿದ್ದರಲ್ಲವೇ. ಎಷ್ಟೋ ವರ್ಷಗಳಿಂದ ಯಾರೂ ತನ್ನನ್ನು ಈ ಹೆಸರಿಂದ ಕರೆದೇ ಇಲ್ಲ. ಮದುವೆಯ ಬಳಿಕ ಎಲ್ಲರೂ ಸುನಂದಾ ಅನ್ನುವವರೇ. `ವಿಜಿ’ ಎಂದು ಕರೆಯುವ ಸ್ವಲ್ಪ ಜನ ತನ್ನನ್ನು ಅಗಲಿ ಅದೆಷ್ಟೋ ವರ್ಷಗಳು ಸಂದಿವೆ. ಈಗ ತನ್ನ ತವರು ಸಂಬಂಧಿ ಮಮತಾ ಮಾತ್ರ ತನ್ನನ್ನು ಈ ಹೆಸರಿನಿಂದ ಕೂಗುವವಳು. ಕೈಯಲ್ಲಿಯೇ ಹಿಡಿದ ಪತ್ರವನ್ನು ನೋಡಿದರು. ಏನೋ ನೆನಪಾದಂತಾಗಿ ನಗೆ ತಡೆಯದಾದರು. ಈ ಪತ್ರವನ್ನು ತಾವೇ ಬರೆದದ್ದಲ್ಲವೇ? ಮೊದಲ ಬಾರಿ ಮಾಡಿದ ರುಚಿಕಟ್ಟಾದ ಅಡುಗೆಗೆ ಅತ್ತೆಮನೆಯಲ್ಲಿ ತೀರ ಸಪ್ಪೆ ಪ್ರತಿಕ್ರಿಯೆ ದೊರೆತದ್ದಕ್ಕೆ ತನಗೆ ಸ್ವಲ್ಪ ಬೇಸರವೇ ಆಗಿತ್ತು. ಆಗ ತಾನಿನ್ನೂ ಚಿಕ್ಕವಳು. ಹೊಗಳಿಕೆ ಕೇಳಬೇಕೆಂದು ಬಯಸಿದಳು. ತನಗೆ ಕೇಳಬೇಕೆನಿಸಿದ್ದ ಹೊಗಳಿಕೆ ಮಾತುಗಳನ್ನೆಲ್ಲ ತಾನೇ ಪತ್ರದಲ್ಲಿ ಬರೆದದ್ದು. ಒಂದೇ ಹೆಸರು ಬೇಡವೆಂದು ತವರುಮನೆ ಹೆಸರಿನಿಂದ ಅತ್ತೆಯಮನೆ ಹೆಸರಿಗೆ ಬರೆದದ್ದು. ಎಂಥ ಹುಚ್ಚಿ ತಾನು ಆಗ! ಈಗೀನು ಕಮ್ಮಿಯೇ? ಎಲ್ಲರನ್ನೂ ನೆನೆಯುವಲ್ಲಿ ತನ್ನನ್ನೇ ಮರೆತೆನಲ್ಲ? ಸಂಸಾರ ನಿಭಾಯಿಸುವಲ್ಲಿ ತನ್ನನ್ನೇ ತಾನು ಮರೆತಿದ್ದೇನೆಯೇ? ಏನೇ ಆಗಲಿ, ಈ ಪತ್ರದಿಂದ ನನ್ನ ನೆನಪು ನನಗೆ ಆಯಿತು ಎಂದುಕೊಂಡರು ಸುನಂದಮ್ಮ. ಈ ವಿಷಯವನ್ನು ಮಗಳು ಆರತಿಗೆ ಹೇಳಿ? ಬೇಡ ಬೇಡ. ಅವಳು ಶುದ್ಧ ತರಲೆ. ತಾನೂ ನಕ್ಕು ತನ್ನ ಮಗನಿಗೂ ಹೇಳಿ ಅವನು ನನ್ನ ಹಿಂದೆ ಮುಂದೆ ಅಲೆದು `ಅಲ್ವತ್ತಕ್ಕೆ ಅಳ್ಳು ಮಳ್ಳು’ ಎಂದು ಮುದ್ದು ಮುದ್ದಾಗಿ ಹೇಳುವಂತೆ ಮಾಡಿಯಾಳು. ನೆನೆಯುತ್ತಲೇ ಸುನಂದಮ್ಮ ಜೋರಾಗಿ ನಕ್ಕರು. ಎಷ್ಟೋ ದಿನಗಳಿಂದ ಬಾಯಿಯ ಗೂಡಿನಲ್ಲಿ ಕುಳಿತ ಕೃತಕ ಹಲ್ಲುಗಳು ಹೊರ ಪ್ರಪಂಚವನ್ನು ಕಂಡವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ