ಪ್ರಜ್ವಾ ಒಂದು ಶೈಕ್ಷಣಿಕ ಕಾರ್ಯಕ್ರಮ ನಡೆಸುತ್ತಿದ್ದಾಗ….. ವಿರೋಧಿಗಳ ದಂಡು ನನ್ನ ಮೇಲೆರಗಿ ಸಾಮೂಹಿಕ ಅತ್ಯಾಚಾರ ನಡೆಸಿತು. ಬಾಲ್ಯದಿಂದಲೇ ಸಮಾಜ ಸೇವೆಯ ಕೆಲಸದಲ್ಲಿ ತೊಡಗಿಕೊಂಡಿರುವ ಸುನೀತಾ ಕೃಷ್ಣನ್‌ ಅತ್ಯಾಚಾರಕ್ಕೆ ಒಳಗಾದರು. ಸೆಕ್ಸ್ ಟ್ರಾಫಿಕಿಂಗ್‌ ಗೆ ಸಿಕ್ಕಿದ ಸಂತ್ರಸ್ತೆಯರು, ಬಾಲಕಿಯರು, ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕಿದ ಹೆಣ್ಣುಮಕ್ಕಳನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರ ಮೇಲೆ 17 ಸಲ ಜೀವ ತೆಗೆಯುವ ಹಲ್ಲೆ ನಡೆದಿದೆ, ಆದರೆ ಅಂಥ ದುರ್ಘಟನೆಗಳು ಇವರ ದೃಢ ವಿಶ್ವಾಸವನ್ನು ಕದಲಿಸಲು ಸಾಧ್ಯವಾಗಲಿಲ್ಲ. ಇವರ ಮೇಲೆ 15ರ ಹರೆಯದಲ್ಲೇ ಸಾಮೂಹಿಕ ಅತ್ಯಾಚಾರ ನಡೆಯಿತು. ದುಷ್ಕರ್ಮಿಗಳು ಲಾಠಿ, ದೊಣ್ಣೆಗಳಿಂದ ಸಾಯ ಹೊಡೆದಿದ್ದರು. ಹಲವು ಸಲ ಆ್ಯಸಿಡ್‌ ದಾಳಿಯ ಯತ್ನ ನಡೆಸಿದ್ದರು. ವಿಷ ಉಣಿಸಿ ಕೊಲ್ಲುವ ಪ್ರಯತ್ನ ನಡೆದಿತ್ತು!

ಆದರೆ ಈ ಎಲ್ಲಾ ಪ್ರಯತ್ನಗಳೂ ಸುನೀತಾರನ್ನು ಭಯಭೀತರಾಗಿಸಲಿಲ್ಲ, ಬದಲಿಗೆ ಸೈನಿಕರಂತೆ ಮಾಡಿತು. ನೋವು, ಯಾತನೆ, ಅಪಮಾನ, ಜೀವನದ ಕಾಠಿಣ್ಯಗಳು ಇವರನ್ನು ಮತ್ತಷ್ಟು ಕಠೋರವಾಗಿಸಿ ಸಶಕ್ತಗೊಳಿಸಿದವು.

ಕಳೆದ 30 ವರ್ಷಗಳಿಂದ ಸುನೀತಾ ಸತತ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. 15ರ ಸಣ್ಣ ಪ್ರಾಯದಲ್ಲೇ ದಲಿತ ಸಮುದಾಯವನ್ನು ಸಾಕ್ಷರರನ್ನಾಗಿಸುವ ಒಂದು ಉತ್ತಮ ಪ್ರಯತ್ನದಲ್ಲಿದ್ದಾಗ, ಇವರ ಮೇಲೆ 8 ಮಂದಿ ಬಲಿಷ್ಠ ಗೂಂಡಾಗಳು ಸಾಮೂಹಿಕ ಅತ್ಯಾಚಾರ ನಡೆಸಿದರು. ಆಕೆಗೆ ಬಿದ್ದ ದೊಣ್ಣೆ ಪೆಟ್ಟಿನಿಂದಾಗಿ ಬದುಕಿ ಉಳಿದದ್ದೇ ಹೆಚ್ಚು. ಈ ದುರ್ಘಟನೆ ಆಕೆಯನ್ನು ಮತ್ತು ಅವರ ಮನೆಯವರನ್ನು ಬಹಳ ಹೆದರಿಸಿಬಿಟ್ಟಿತ್ತು. ಭಯ ಮೆಟ್ಟಿದಾಗ ಮಾತ್ರ ಯಶಸ್ಸು ಎಂಬುದನ್ನು ತೋರಿಸಿಕೊಟ್ಟರು.

2016ರಲ್ಲಿ ಇವರಿಗೆ ದೇಶದ ಸರ್ವೋಚ್ಚ ಪದ್ಮಶ್ರೀ ಪ್ರಶಸ್ತಿ ಮತ್ತು ಮದರ್‌ ಥೆರೇಸಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರ ಸಾಹಸಗಾಥೆಯನ್ನು ಸಂಕ್ಷಿಪ್ತವಾಗಿ ತಿಳಿಯೋಣವೇ? :

ನೀವು ಬಾಲ್ಯದಿಂದೀ ಸಮಾಜ ಸೇವೆಗೆ ತೊಡಗಿದ್ದಿರಿ, ಅದರ ನಡುವೆ ಅನೇಕ ಅಪಾಯ, ಕರ್ಮಕಾಂಡಗಳನ್ನು ಅನುಭವಿಸಿದಿರಿ. ಆಗ ನಿಮ್ಮ ಮನೆಯವರು, ಬಂಧುಬಾಂಧವರು ನಿಮ್ಮನ್ನು ತಡೆಯಲಿಲ್ಲವೇ?

ನಾನು ಅತಿ ಸಣ್ಣ ವಯಸ್ಸಿನಿಂದಲೇ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. 15ರ ಹರೆಯದಲ್ಲೇ ಹಳ್ಳಿಯ ದಲಿತರು, ಶೋಷಿತರು, ಶೈಕ್ಷಣಿಕ ಏಳಿಗೆಗಾಗಿ ದುಡಿಯುತ್ತಿದ್ದೆ. ಇದನ್ನು ವಿರೋಧಿಸಿದ ದುಷ್ಟರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಈ ದುರ್ಘಟನೆಯಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು. ಇದರಿಂದ ನನ್ನ ಮನದಲ್ಲಿ ಒಂದು ಬಗೆಯ ವಿರಕ್ತಿ ಮೂಡಿತು. ನಮ್ಮ ಮನೆಯವರು ಮೌನದ ಚಿಪ್ಪಿನಲ್ಲಿ ಅಡಗಿಹೋದರು. ಎಲ್ಲರೂ ನನ್ನನ್ನು ತೆಪ್ಪಗಿರುವಂತೆ ತಾಕೀತು ಮಾಡಿದರು. ಅದೊಂದು ನುಂಗಲಾರದ ತುತ್ತಾಗಿತ್ತು. ಇಡೀ ಸಮಾಜ ನನ್ನತ್ತ ವ್ಯಂಗ್ಯವಾಗಿ ಕುಹಕದ ಅಟ್ಟಹಾಸಗೈಯುತ್ತಿದೆ ಎಂದೆನಿಸಿತು. ಆದರೆ ಇದೀಗ 25-30 ವರ್ಷ ಕಳೆದ ನಂತರ, ನಾನು ಹಿಂದಿರುಗಿ ನನ್ನ 15ರ ಹರೆಯದ ದಿನಗಳನ್ನು ನೆನೆಸಿಕೊಂಡಾಗ ನಮ್ಮ ಮನೆಯವರ ಮೌನವೇ ನನಗೆ ಮುಂದೆ ನಡೆಯಲು ಮಾರ್ಗದರ್ಶನ ನೀಡಿತು ಎನ್ನಬಹುದು. ಅವರೇನಾದರೂ ಹೆಚ್ಚಿಗೆ ಮಾತನಾಡಿ, ನಾನು ಮುಂದುವರಿಯದಂತೆ ತಡೆದಿದ್ದರೆ, ಇಂದು ನಾನು ಇಷ್ಟು ಸಾಧನೆ ಮಾಡಲು ಆಗುತ್ತಿರಲಿಲ್ಲ.

ನಿಮ್ಮ `ಪ್ರಜ್ವಾಸಂಸ್ಥೆಯ ಸ್ಥಾಪನೆ ಯಾವಾಗ, ಯಾವ ಉದ್ದೇಶದಿಂದ ಮಾಡಲಾಯಿತು?

1996ರಲ್ಲಿ ನಾನು ಈ `ಪ್ರಜ್ವಾ’ ಸಂಸ್ಥೆ ಪ್ರಾರಂಭಿಸಿದೆ. ವೇಶ್ಯಾವೃತ್ತಿಯ ನಿರ್ಮೂಲನೆ ಇದರ ಉದ್ದೇಶ. ಈ ನಿಟ್ಟಿನಲ್ಲಿ ನಮ್ಮ ಕೆಲಸ ಮುಂದುವರಿದಂತೆ, ಇದು ಒಂದು ಸಂಘಟಿತ ಅಪರಾಧ, ಇದನ್ನು ಸಂಘಟಿತ ಕಾಣದ ಕೈಗೆ ಕಂಟ್ರೋಲ್ ಮಾಡುತ್ತಿವೆ ಎಂಬುದನ್ನು ಅರಿತುಕೊಂಡೆ. ಇದರಲ್ಲಿ ಹೈಸ್ಕೂಲ್ ‌ಮಟ್ಟದ ಹೆಣ್ಣುಮಕ್ಕಳ ಅಪಹರಣ, ಅವರ ವ್ಯಾಪಾರ, ದೇಶದ ಒಂದು ಬದಿಯಿಂದ ಇನ್ನೊಂದೆಡೆಗೆ ರವಾನೆ (ಟ್ರಾಫಿಕಿಂಗ್‌), ದೇಹದಂಧೆಗಾಗಿ ಹಿಂಸೆ, ದೊಡ್ಡ ವ್ಯಾಪಾರಿ ಮಂಡಿಗಳಿಗೆ ತಲುಪಿಸುವುದು ಇವೆಲ್ಲ ನಿರಂತರ ನಡೆಯುತ್ತದೆ.

ಇಂಥ ಹೇಯ ಕೃತ್ಯಗಳು ಪೊಲೀಸರ ಮೂಗಿನಡಿಯಲ್ಲೇ ಬಂದೋಬಸ್ತಾಗಿ ನಡೆಯುವುದು ಇಡೀ ದೇಶಕ್ಕೇ ನಾಚಿಕೆಗೇಡಿನ ವಿಷಯ. ಆಗ ಇದರ ವಿರೋಧ ದೊಡ್ಡ ಆಂದೋಲನದ ದಾರಿ ಹಿಡಿಯಿತು. ನಾವು ಹಲವು ಹಂತಗಳಲ್ಲಿ ಹೋರಾಟ ನಡೆಸಿದೆ. ವೇಶ್ಯಾವೃತ್ತಿಯ ಕಬಂಧಬಾಹುಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಯಿತು. ನಂತರ ಅವರ ಮನೆಯವರನ್ನು ಹುಡುಕಿ ಈ ಹುಡುಗಿಯರನ್ನು ಅಲ್ಲಿಗೆ ಸುರಕ್ಷಿತವಾಗಿ ತಲುಪಿಸುವುದು ಮತ್ತೂ ಪ್ರಯಾಸದ ಕೆಲಸ.

ಹೀಗೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಕುರಿತಾಗಿ ಸಮಾಜ ಅವರನ್ನು ನೋಡುವ ಪರಿಯಲ್ಲಿ ವ್ಯತ್ಯಾಸ ಉಂಟಾಗಿದೆಯೇ?

ನೋಡಿ, ಎಲ್ಲಿಯರೆಗೆ ನಾವು ಹೆಣ್ಣನ್ನು ತನ್ನ ಸುರಕ್ಷೆ ತಾನೇ ಮಾಡಿಕೊಳ್ಳಬೇಕು ಎಂದು ಜವಾಬ್ದಾರಿ ಹೊರಿಸಿ ಕೈತೊಳೆದುಕೊಳ್ಳುತ್ತೇವೋ ಅವಳೆಂದೂ ಸುರಕ್ಷಿತಳಾಗಿರಲು ಸಾಧ್ಯವೇ ಇಲ್ಲ! ಇದಕ್ಕೆ ತಕ್ಷಣ ನಾವು ನಮ್ಮ ಗಂಡುಮಕ್ಕಳು, ಅಣ್ಣ ತಮ್ಮಂದಿರಿಗೆ ಸರಿಯಾಗಿ ತಿಳಿವಳಿಕೆ ಕೊಡಬೇಕು. ಎಲ್ಲಾ ಗಂಡು ಮಕ್ಕಳಿಗೂ ಬೀದಿಯ ಯಾವ ಹೆಣ್ಣೇ ಆಗಲಿ, ಅವಳನ್ನು ರಕ್ಷಿಸುವುದೇ ಮೊದಲ ಕರ್ತವ್ಯ ಎಂಬಂತೆ ಕಲಿಸಬೇಕು. ಆಗ ಒಬ್ಬ ಹುಡುಗನ ಸಪೋರ್ಟ್‌ಗೆ ಇಡೀ ಬೀದಿಯ ಹುಡುಗರೆಲ್ಲ ನಿಲ್ಲುತ್ತಾರೆ. ಊರಿಗೇ ಊರೇ ಬೆಂಬಲಕ್ಕೆ ನಿಂತಾಗ ಯಾವ ಪಾಪಿ ಯಾರನ್ನು ಏನು ಮಾಡಬಲ್ಲ? ಹೀಗೆ ಇಡೀ ಸಮಾಜ ಬದಲಾದಾಗ ಹೆಣ್ಣು ಸುರಕ್ಷಿತಳಾಗುತ್ತಾಳೆ.

ನಸೀಮಾ ಅನ್ಸಾರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ