ಪ್ರತಿಯೊಬ್ಬ ಗೃಹಿಣಿಯ ಮನಸ್ಸಿನಲ್ಲಿ ತನ್ನ ಮನೆಯ ಕುರಿತಾದ ಒಂದು ಕನಸು ಇದ್ದೇ ಇರುತ್ತದೆ. ಅದನ್ನು ತನ್ನ ಆಸಕ್ತಿ ಹಾಗೂ ಬಜೆಟ್‌ ಗೆ ಅನುಸಾರ ಅಲಂಕರಿಸುವ ಅಭಿಲಾಷೆ ಇರುತ್ತದೆ. ಈಗ ಈ ಕನಸನ್ನು ನನಸು ಮಾಡಿಕೊಳ್ಳುವುದು ಕಷ್ಟಕರವೇನಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ಪರ್ಯಾಯಗಳಿವೆಯೆಂದರೆ, ನಿಮಗೆ ಬೇಕಾದುದನ್ನೇ ಖರೀದಿಸಬಹುದು.

ಮಾರುಕಟ್ಟೆಯಲ್ಲಿ ಸರ್ವೀಸ್‌ ಪ್ರೊವೈಡರ್‌ ಗಳು, ಡೆಕೋರೇಶನ್‌ ಹಾಗೂ ಇತರೆ ಅಲಂಕಾರಿಕ ಆ್ಯಕ್ಸೆಸರೀಸ್‌ ಗಳನ್ನು ಗ್ರಾಹಕರ ಇಚ್ಛೆ ಹಾಗೂ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿಕೊಡುತ್ತಾರೆ. ಇಂತಹದರಲ್ಲಿ ಮನೆಯ ಒಳಾಲಂಕಾರಕ್ಕೆ ನಿಮ್ಮದೇ ಆದ ಛಾಪು ಮೂಡಿಸಲು ಯಾರಾದರೂ ಇಂಟೀರಿಯರ್‌ ಡಿಸೈನರ್‌ ನ ನೆರವು ಪಡೆದುಕೊಳ್ಳಲೇಬೇಕು ಎಂದೇನಿಲ್ಲ.

ಒಂದುವೇಳೆ ನೀವು ಬಜೆಟ್‌ ನಲ್ಲಿ ಇಂಟೀರಿಯರ್‌ ಡೆಕೋರೇಟರ್‌ ಮೇಲೆ ಹಣ ಸುರಿಯಲು ಸಿದ್ಧರಿರದೇ ಇದ್ದಲ್ಲಿ, ನಿಮಗೆ ಇಷ್ಟವಾದ ಇಂಟೀರಿಯರ್‌ ನ್ನು ಆಯ್ದುಕೊಂಡು ಕಡಿಮೆ ಹಣದಲ್ಲಿಯೇ ಇಂದು ಡಿಸೈನರ್‌ ಮನೆ ಮಾಡಬಹುದು.

ಇದಕ್ಕಾಗಿ ಎಲ್ಲಕ್ಕೂ ಮುಂಚೆ ನಿಮಗೆ ಟ್ರೆಡಿಶನಲ್ ಅಥವಾ ಫ್ಯೂಷನ್‌ ಎಂತಹ ಇಂಟೀರಿಯರ್‌ ಬೇಕು ಎನ್ನುವುದನ್ನು ನಿರ್ಧರಿಸಿ. ಆ ಬಳಿಕ ಬೆಳಕಿನ ವ್ಯವಸ್ಥೆ, ಪೀಠೋಪಕರಣಗಳು, ಫ್ಲೋರಿಂಗ್‌ ಮತ್ತು ಪೇಂಟ್‌ ನ ದರಗಳ ಬಗ್ಗೆ ತಿಳಿದುಕೊಳ್ಳಿ. ಯಾವುದು ನಿಮ್ಮ ಬಜೆಟ್‌ ಗೆ ಸೂಕ್ತ ಎನಿಸುತ್ತದೋ ಅವಕ್ಕೆ ನಿಮ್ಮ ಇಂಟೀರಿಯರ್‌ ನಲ್ಲಿ ಸ್ಥಾನ ಕೊಡಿ.

ಕಸ್ಟಮೈಸ್ಡ್ ಇಂಟೀರಿಯರ್ ಬಹೂಪಯೋಗ

ಹೋಮ್ ಡೆಕೋರ್‌ ನಲ್ಲಿ ಕಸ್ಟಮೈಸ್ಡ್ ಇಂಟೀರಿಯರ್‌ ನ್ನು ಅನುಸರಿಸುವುದರಿಂದ ನಮಗಾಗುವ ಲಾಭವೆಂದರೆ, ಪ್ರತಿಯೊಬ್ಬ ಗ್ರಾಹಕ ತನ್ನ ವೈಯಕ್ತಿಕ ಆಸಕ್ತಿಗನುಗುಣವಾಗಿ ಪ್ರತ್ಯೇಕ ಡಿಸೈನ್‌ ಹಾಗೂ ಸ್ಟೈಲ್ ನ್ನು ರೂಪಿಸಿಕೊಳ್ಳಬಹುದು.

ಮೊದಲು ಒಂದು ಸೋಫಾದ ಡಿಸೈನ್‌ ಅಥವಾ ಪರದೆಯ ಸ್ಟೈಲ್ ‌ನೋಡಿ ಬೇರೆಯವರಿಗೂ ತಮ್ಮ ಮನೆಗೂ ಅಂಥದೇ ಡಿಸೈನ್ ಬೇಕೆಂದು ಅನಿಸುತ್ತಿತ್ತು. ಇದೇ ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿ ಒಂದೇ ರೀತಿ ಬೆತ್ತದ ಕುರ್ಚಿಗಳು, ಬಿಳಿ ವರ್ಣದ ಗ್ಲಾಸಿನ ಮೇಜುಗಳು ಹಾಗೂ ಒಂದೇ ಆಕಾರದ ಸೋಫಾಗಳು ಮತ್ತು ವಾಶ್‌ ಬೇಸಿನ್‌ ಗಳು ನೋಡಲು ಸಿಗುತ್ತಿದ್ದವು. ಯಾವುದೇ ಒಂದು ವಸ್ತುವಿನಲ್ಲಿ ತನ್ನದೇ ಆದ ಒಂದು ವೈಶಿಷ್ಟ್ಯವೆನ್ನುವುದು ಇರುತ್ತಿರಲಿಲ್ಲ. ಇಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಒಂದು ವಸ್ತು ಇತರರಿಗಿಂತ ಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ಬಹಳ ಅಳೆದೂ ತೂಗಿ, ಪ್ರತಿಯೊಂದು ಸಂಗತಿಗಳ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ಪ್ರತಿಯೊಂದು ಮೂಲೆಯನ್ನೂ ಡಿಸೈನ್‌ ಮಾಡಲಾಗುತ್ತದೆ.

ಡಿಸೈನರ್‌ ಲಿಪಿ ಅವರ ಪ್ರಕಾರ, ಉಪಯೋಗಿಸುವ ವ್ಯಕ್ತಿಯ ಅಗತ್ಯ ಹಾಗೂ ಮನೆಯ ಪ್ರತಿಯೊಂದು ಜಾಗ ಅಂದರೆ ಕೋಣೆ, ಅಡುಗೆಮನೆ ಮತ್ತು ಸ್ನಾನದ ಕೋಣೆ ಹಾಗೂ ಬಾಲ್ಕನಿಯನ್ನು ಗಮನದಲ್ಲಿಟ್ಟುಕೊಂಡು ಅಲಂಕಾರ ಮಾಡಲಾಗುತ್ತದೆ. ಅದನ್ನು `ಕಸ್ಟಮೈಸ್ಡ್ ಇಂಟೀರಿಯರ್‌’ ಎಂದು ಕರೆಯಲಾಗುತ್ತದೆ.

ಈ ರೀತಿಯ ಅಲಂಕಾರದಲ್ಲಿ ಪ್ರತಿಯೊಂದು ವಸ್ತುವಿನ ಅಗತ್ಯ, ಬಣ್ಣ, ಆಕಾರ, ಫ್ಯಾಬ್ರಿಕ್‌, ಮೆಟೇರಿಯಲ್ ಹಾಗೂ ಡಿಸೈನಿಂಗ್ ಮುಂತಾದ ಒಂದಕ್ಕೊಂದು ಅನುರೂಪವಾಗಿರುತ್ತವೆ. ಸೋಫಾ, ಕುಶನ್‌, ಗೋಡೆ, ಸೀಲಿಂಗ್‌ ಪರದೆಗಳು ಹಾಗೂ ಅಲ್ಲಿನ ಪರಿಕರಗಳೆಲ್ಲ ಒಂದೇ ವರ್ಣದ್ದಾಗಿರುತ್ತವೆ.

DLP_9937

ನೀವು ಮಾರುಕಟ್ಟೆಗೆ ಹೋಗಿ ನಿಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಬಹುದು. ಆದರೆ ಅವು ನಿಮ್ಮ ಕೋಣೆಯ ಆಕಾರಕ್ಕೆ ಫಿಟ್ ಆಗದೇ ಹೋಗಬಹುದು. ಹೀಗಾಗಿ ಮನೆಯಲ್ಲಿ ಎಂತಹ ವಸ್ತುಗಳನ್ನು ತರಬೇಕೆಂದರೆ, ಅವು ಬೇರೆ ಪರಿಕರಗಳೊಂದಿಗೆ ಹೊಂದಾಣಿಕೆ ಆಗುವಂತಿರಬೇಕು, ಜೊತೆಗೆ ನಿಮ್ಮ ಬಜೆಟ್‌ ಗೂ ಸರಿಹೊಂದಬೇಕು.

ನಿಮ್ಮ ಲಿವಿಂಗ್‌ ರೂಮ್ ಚಿಕ್ಕದಾಗಿದ್ದು, ನೀವು ಮಾರುಕಟ್ಟೆಯಿಂದ ದೊಡ್ಡ ಸೋಫಾವೊಂದನ್ನು ಕೊಂಡು ತಂದಲ್ಲಿ, ನಿಮಗೆ ಅಲ್ಲಿ ನಡೆದಾಡಲು ಕಷ್ಟವಾಗಬಹುದು. ಹೀಗಾಗಿ ಚಿಕ್ಕ ಸೋಫಾಗಳನ್ನು ಹಾಗೂ ಅದೇ ಆಕಾರದಲ್ಲಿ ಇತರ ಫರ್ನೀಚರ್‌ ಗಳನ್ನು ಕೂಡ ತಯಾರಿಸಲಾಗುತ್ತದೆ.

ಸೊರೊಗೀಕಾ ಬ್ರ್ಯಾಂಡ್‌ ನ ಡೈರೆಕ್ಟರ್‌ ಹಾಗೂ ಸಿಇಓ ಅಂಜಲಿ ಅವರ ಪ್ರಕಾರ, “ಕಸ್ಟಮೈಸ್ಡ್ ಇಂಟೀರಿಯರ್‌ ವಿಭಿನ್ನ ಡಿಸೈನರ್‌ ಸಂಗತಿಗಳನ್ನು ಪ್ರಯೋಗ ಮಾಡುತ್ತಾ ಹಾಗೂ ಆ ಜಾಗ ಉಪಯೋಗಿಸುವ ವ್ಯಕ್ತಿಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ಅದರಲ್ಲಿ ವಾಸಿಸುವ ವ್ಯಕ್ತಿಯ ಖಾಸಗಿ ಛಾಪು ಗೋಚರಿಸುತ್ತದೆ. ಈ ತೆರನಾದ ಡಿಸೈನಿಂಗ್‌ ನಿಂದ ಇಡೀ ಮನೆಯ ಡಿಸೈನಿಂಗ್‌ ನ್ನು ಬದಲಿಸಬಹುದಾಗಿದೆ.

“ಲೆದರ್‌ ನ ಅಪ್‌ ಹೋಲ್ಸ್ ಟ್ರೀ ಜೊತೆಗೆ ಉಪಯೋಗಿಸಲ್ಪಡುವ ಸಾಲಿಡ್‌ ವುಡ್‌ ಫರ್ನೀಚರ್‌ ಬಿಸಿಯ ಅನುಭವವನ್ನುಂಟು ಮಾಡುತ್ತದೆ. ಗಾಜಿನ ಉಪಯೋಗ ವಿಭಿನ್ನ ಲುಕ್ಸ್ ನೀಡುತ್ತದೆ. ಇದು ನಿಮ್ಮ ಆಸಕ್ತಿ ಎಷ್ಟೊಂದು ವಿಭಿನ್ನ ಎಂಬುದನ್ನು ಇತರರಿಗೆ ಮನದಟ್ಟು ಮಾಡಿಕೊಡುತ್ತದೆ. ಈ ತೆರನಾದ ಡಿಸೈನಿಂಗ್‌ ಗಳಲ್ಲಿ ಪರ್ಯಾಯಗಳಿಗೇನೂ ಕೊರತೆ ಇರುವುದಿಲ್ಲ. ನೀವು ಇಷ್ಟಪಟ್ಟರೆ ಅದಕ್ಕೆ ಮಾಡರ್ನ್‌ ಲುಕ್ಸ್ ಕೊಡಬಹುದು ಅಥವಾ ಪಾರಂಪರಿಕ ಲುಕ್ಸ್ ನ್ನೇ ವಿಭಿನ್ನವಾಗಿ ಮಾಡಬಹುದು.

ಸ್ಟೈಲಿಶ್‌ಡಿಫರೆಂಟ್‌ ಬದಲಾಗುತ್ತಿರುವ ಇಂದಿನ ಯುಗದಲ್ಲಿ ನಿಮ್ಮದೇ ಆದ ಲೆಕ್ಕಾಚಾರದಲ್ಲಿ ಮನೆಗೊಂದು ವಿಶಿಷ್ಟ ಲುಕ್‌ ಕೊಡಲು ಡಿಸೈನ್‌ ಗಳ ಹಲವ ಪರ್ಯಾಯಗಳು ಲಭ್ಯವಿರುವುದರಿಂದ `ಕಸ್ಟಮೈಸ್ಡ್ ಇಂಟೀರಿಯರ್‌’ ಫ್ಯಾಷನ್‌ ಆಗಿದೆ.

ಡಿಸೈನರ್‌ ಮಧು ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಕಸ್ಟಮೈಸ್ಡ್ ಲುಕ್ಸ್ ನ ಜನಪ್ರಿಯತೆಯ ಹಿಂದೆ ಮಾಧ್ಯಮಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಅತ್ಯುತ್ತಮ ಜೀವನ ನಡೆಸುವ ರೀತಿ ಹಾಗೂ ಸೆಲೆಬ್ರಿಟಿಗಳ ಮನೆಗಳನ್ನು ಟಿ.ವಿ.ಯಲ್ಲಿ ಕಂಡು ಅಂಥದೇ ಮನೆಗಳನ್ನು ತಾವು ಹೊಂದಬೇಕೆಂದು ಜನ ಮನಸ್ಸಿನಲ್ಲಿಯೇ ನಿರ್ಧರಿಸುತ್ತಾರೆ.

ಅಂಜಲಿ ಅವರ ಪ್ರಕಾರ, “ಇಂದು ನಾವು ಇಂಟೀರಿಯರ್ಸ್ ಬಗ್ಗೆ ಏನೇನು ಮಾತನಾಡುತ್ತೇವೋ, ಅದರಲ್ಲಿ ಎಲ್ಲಕ್ಕೂ ಮೊದಲು ನಮ್ಮ ಮೆದುಳಿಗೆ ಗೋಚರಿಸುವುದು ಅದರ ಸ್ಟೈಲಿಶ್‌ ಲುಕ್ಸ್. ಅದನ್ನು ಕಸ್ಟಮೈಸ್ಡ್ ಡಿಸೈನಿಂಗ್‌ ಮುಖಾಂತರ ಪಡೆದುಕೊಳ್ಳಬಹುದು. ಇದರಲ್ಲಿ ಇಂಟೀರಿಯರ್‌ ಡಿಸೈನರ್‌ ಜನರ ಅವಶ್ಯಕತೆಗಳು, ಉಪಯೋಗ ಹಾಗೂ ಜಾಗವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ, ಸಮಂಜಸ ಹಾಗೂ ಉಪಯುಕ್ತ ಥೀಮ್, ಪ್ರಾಡಕ್ಟ್ ಹಾಗೂ ಪರಿಪೂರ್ಣ ಅಲಂಕಾರದ ಬಗ್ಗೆ ಸಲಹೆ ನೀಡುತ್ತಾರೆ.

“ಈ ಪರಿಪೂರ್ಣ ಪ್ರಕ್ರಿಯೆಯಲ್ಲಿ ಸೃಜನಶೀಲತೆಯ ಜತೆಗೆ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಬಳಸಲಾಗುತ್ತದೆ. ಹೀಗಾಗಿ ಇಂಟೀರಿಯರ್‌ ಡಿಸೈನರ್‌ ತಾಂತ್ರಿಕ ಕೌಶಲ್ಯ ಹೊಂದಿರುವುದು ಅತ್ಯವಶ್ಯಕ.”

ನಿಮ್ಮಿಷ್ಟದ ಗೃಹಾಲಂಕಾರ

ಲಿಪಿ ಅವರು ಈ ಕುರಿತಂತೆ ನೀಡುವ ಸಲಹೆ ಏನೆಂದರೆ, ನೀವು ಯಾವ ಬಣ್ಣದ ಪರದೆಗಳನ್ನು ಹಾಕುತ್ತೀರೋ, ಅದೇ ವರ್ಣದ ಬೆಡ್‌ ಕವರ್‌, ಕುಶನ್‌ ಕವರ್‌ ಹಾಕಬಹುದು. ಅದರಿಂದ ಕೋಣೆಯಲ್ಲಿ ಒಂದು ಬಗೆಯ ಸಮನ್ವಯತೆ ಬರುತ್ತದೆ. ಪರದೆಗಳ ಮೇಲೆ ಗೋಡೆಯ ಬಣ್ಣಕ್ಕೆ ಮ್ಯಾಚ್‌ ಆಗುವಂತೆ ಹಾಕಬೇಕು. ನಿಮ್ಮ ಮನೆ ಚಿಕ್ಕದಾಗಿದ್ದರೆ, ದೊಡ್ಡದೆಂಬಂತೆ ಕಾಣಲು ಗೋಡೆಗಳ ಮೇಲೆ ವಾಲ್ ‌ಪೇಪರ್‌ ಅಂಟಿಸಬಹುದು. ಇಲ್ಲಿ ವಾಲ್ ‌ಪೇಪರ್‌ ಮೇಲೆ ಪೇಂಟ್‌ ಮಾಡಬಹುದು.

ನೀವು ಯಾವುದೇ ಒಂದು ವಸ್ತುವನ್ನು ಖರೀದಿಸಿ ತರುತ್ತೀರಿ, ಅದು ನಿಮ್ಮ ಮನೆಯ ಅಲಂಕಾರಕ್ಕೆ ಹೊಂದಬಹುದು. ಬಣ್ಣಕ್ಕೆ ಸೂಕ್ತವೆನಿಸಬಹುದು ಎಂದೇನಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಫ್ಲೋರಿಂಗ್‌ ಚಿಪ್ ಹಲವು ತೆರನಾದದ್ದು ಇರುತ್ತದೆ. ಒಂದು ವೇಳೆ ನಿಮ್ಮ ಸೋಫಾದ ಬಣ್ಣ ನೀಲಿಯಾಗಿದ್ದಲ್ಲಿ, ಅದರ ಮೇಲ್ಭಾಗದಲ್ಲಿ ಟವರ್‌ ಕ್ವೈಜ್‌ ಟೈಲ್ಸ್ ಹಾಕಬಹುದು ಮತ್ತು ಅದೇ ರೀತಿಯ ವಾಲ್ ‌ಹ್ಯಾಂಗಿಂಗ್‌ ನೇತುಹಾಕಬಹುದು. ಇದರಿಂದ ಒಂದು ಬಗೆಯ ಪರಿಪೂರ್ಣ ಲುಕ್‌ ಬರುತ್ತದೆ ಹಾಗೂ ಉಪಯೋಗಿಸುವವರಿಗೆ ಯಾವುದೇ ತೆರನಾದ ಅಸೌಕರ್ಯ ಉಂಟಾಗುವುದಿಲ್ಲ.

ಅಡುಗೆಮನೆಯಲ್ಲಿ ಕಸ್ಟಮೈಸ್ಡ್ ಲುಕ್ಸ್ ಎಲ್ಲಕ್ಕೂ ಮುಖ್ಯ. ಉದಾಹರಣೆಗೆ ಒಬ್ಬ ಮಹಿಳೆ ಅಷ್ಟೇನೂ ಎತ್ತರವಿಲ್ಲ. ಆದರೆ ಅಡುಗೆಮನೆಯಲ್ಲಿ ಎತ್ತರದಲ್ಲಿ ಕ್ಯಾಬಿನೆಟ್‌ ಗಳನ್ನು ಹಾಕಲಾಗಿದ್ದು, ಆಕೆ ಸ್ಟೂಲ್ ‌ಮೇಲೆ ಹತ್ತಿ ಸಾಮಾನುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಆಕೆಗೆ ಸೌಲಭ್ಯದಾಯಕ ಸ್ಥಿತಿಯೇ? ಅವಳಿಗೆ ತನ್ನ ಎತ್ತರಕ್ಕನುಗುಣವಾಗಿ ಕ್ಯಾಬಿನೆಟ್ ಮುಂತಾದವನ್ನು ನಿರ್ಮಿಸಬೇಕಾಗಿ ಬಂದರೆ ಇಲ್ಲಿ ಹಿಟ್ಟಿನ ಡಬ್ಬಿ ಅಥವಾ ಮಸಾಲೆ ಇಡಲು ಬಹಳಷ್ಟು ಸ್ಟೋರೇಜ್‌ ಗಳ ಅವಶ್ಯಕತೆ ಉಂಟಾದರೆ, ಅದರಲ್ಲಿ ಅಗತ್ಯಕ್ಕನುಸಾರವಾಗಿ ಬದಲಾವಣೆ ಮಾಡಿಕೊಳ್ಳಬಹುದು. ಉಪಯೋಗಿಸುವವರ ಎತ್ತರ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಮ್ಮ ಇಚ್ಛೆ ಹಾಗೂ ಉಪಯೋಗಕ್ಕೆ ತಕ್ಕಂತೆ ಮನೆಯನ್ನು ಅಲಂಕರಿಸುವುದೆಂದರೆ ಸಿಕ್ಕಾಪಟ್ಟೆ ಹಣವನ್ನು ದುಂದುವೆಚ್ಚ ಮಾಡಿದಂತೆ ಎಂದು ಸಾಮಾನ್ಯರು ಭಾವಿಸಿರುತ್ತಾರೆ. ಆದರೆ ಈಗ ಹಾಗಿಲ್ಲ. ಇದಕ್ಕೆ ಕಾರಣ ಹಲವು ಬಗೆಯ, ಮೆಟೀರಿಯಲ್ಸ್ ಲಭ್ಯವಿವೆ. ನೀವು ಸೋಫಾ ಅಥವಾ ಬೆಡ್‌ ಖರೀದಿಸುವ ಇಚ್ಛೆ ಹೊಂದಿದರಾದಲ್ಲಿ, ದುಬಾರಿ ವುಡನ್‌ ಖರೀದಿಸದೆ, ಕಡಿಮೆ ಬೆಲೆಯ ವುಡನ್‌ ಖರೀದಿಸಬಹುದು. ಅದೇ ರೀತಿ ಫ್ಯಾಬ್ರಿಕ್‌, ಕಿಚನ್‌ ಆ್ಯಕ್ಸೆಸರೀಸ್‌ ನಿಮಗೆ ಎಷ್ಟೊಂದು ಬಗೆಯ ನೋಡಲು ಸಿಗುತ್ತವೆಂದರೆ, ನಿಮ್ಮ ಪುಟ್ಟ ಫ್ಲ್ಯಾಟ್‌ ಅಥವಾ ಅಪಾರ್ಟ್‌ ಮೆಂಟ್‌ ಗೆ ತಕ್ಕಂತೆ ಅತ್ಯಂತ ಉಪಯುಕ್ತ ಹಾಗೂ ಕಡಿಮೆ ಬಜೆಟ್ ನದಾಗಿರುತ್ತದೆ. ಇದಕ್ಕಾಗಿ ನೀವು ಮಾಹಿತಿ ಸಂಗ್ರಹಿಸುವುದು ಹಾಗೂ ಸೂಕ್ತವಾದುದನ್ನು ಹುಡುಕುವುದು ಮಹತ್ವದ್ದಾಗಿದೆ. ಬೇರೆಯವರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಆಸಕ್ತಿ ಹಾಗೂ ಅವಶ್ಯಕತೆಯ ಬಗ್ಗೆ ಗಮನಕೊಡಿ ಹಾಗೂ ಸೌಲಭ್ಯದಾಯಕ ಜೀವನ ನಡೆಸಿ.

ವಿಶಾಲಾಕ್ಷಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ