ಟ್ರೀ ಸಿಸ್ಟರ್ ಎಂದೇ ಪ್ರಸಿದ್ಧಳಾದ ಯಮುನಾಳ ಅಕ್ಕರೆ ಮತ್ತು ಪರಿಶ್ರಮದಿಂದ ಝಾರ್ಖಂಡ್ ನ ಕಾಡನ್ನು ಹಸಿರನ್ನಾಗಿ ಮಾಡುವ ಕನಸನ್ನು ನನಸಾಗಿಸುವುದು ಸುಲಭವಾಗಿದೆ. ಕಾಡನ್ನು ನಾಶ ಮಾಡುವವರೇ, ಎಚ್ಚೆತ್ತುಕೊಳ್ಳಿ, ಎಚ್ಚೆತ್ತುಕೊಳ್ಳಿ….. ಯಾರು ಕಾಡನ್ನು ಕತ್ತರಿಸುತ್ತಾರೋ ಅವರ ಕೈಗಳನ್ನು ನಾವು ಕತ್ತರಿಸುತ್ತೇವೆ. ಕಾಡು ಉಳಿದರೆ ನಾವು ಉಳಿಯುತ್ತೇವೆ…. ಎಂಬ ಘೋಷಣೆಗಳೊಂದಿಗೆ ಯಮುನಾ ಟುಡ್ಡೂ ಮತ್ತು ಅವರ ಗೆಳತಿಯರು ಹೂಂಕರಿಸಿದಾಗ ಮುತುರ್ ಖಮ್ ಕಾಡಿನ ಪ್ರತಿಯೊಂದು ಮರದ ತುಂಬಾ ಸಂತಸದ ಅಲೆ ತೇಲುತ್ತದೆ ಮತ್ತು ಕಾಡನ್ನು ನಾಶ ಮಾಡುವವರ ಮುಖದಲ್ಲಿ ಭಯದ ವಾತಾವರಣ ಮೂಡುತ್ತದೆ. ಕೈಗಳಲ್ಲಿ ಬಿಲ್ಲು ಬಾಣ, ಮಚ್ಚು, ಕುಡುಗೋಲು, ದೊಣ್ಣೆಗಳನ್ನು ಹಿಡಿದು ಯಮುನಾ ಮತ್ತು ಅವರ ವನರಕ್ಷಣಾ ಸಮಿತಿಯ ಮಹಿಳೆಯರು ದಿನ ಕಾಡಿನಲ್ಲಿ ಗಸ್ತು ಹೊಡೆಯುತ್ತಾರೆ ಮತ್ತು ಮರ ಕಡಿಯುವವರನ್ನು ಫಾರೆಸ್ಟ್ ಆಫೀಸ್ ನವರಿಗೆ ಹಿಡಿದುಕೊಡುತ್ತಾರೆ.
`ಟ್ರೀ ಸಿಸ್ಟರ್’ ಎಂದು ಹೆಸರು ಗಳಿಸಿದ 32 ವರ್ಷದ ಯಮುನಾ 1999ರಲ್ಲಿ ಕಾಡಿನಲ್ಲಿ ಕಾನೂನಿಗೆ ವಿರುದ್ಧವಾಗಿ ಮರ ಕಡಿಯುವವರ ವಿರುದ್ಧ ಏಕಾಂಗಿಯಾಗಿ ಧ್ವನಿ ಎತ್ತಿದರು. ಅವರು ಕಾಡಿನಲ್ಲಿ ಮರ ಬೆಳೆಸಲು ಶುರು ಮಾಡಿದಾಗ ಜನ ಅವರನ್ನು ಹುಚ್ಚಿ ಎಂದು ಗೇಲಿ ಮಾಡಿದರು. ಇಂದು ಸಾಮಾನ್ಯ ಜನರಷ್ಟೇ ಅಲ್ಲ, ಫಾರೆಸ್ಟ್ ಆಫೀಸರ್ ಗಳೂ ಸಹ ಅವರನ್ನು ಕಾಡಿನ ಗಾರ್ಡಿಯನ್, ಮರಗಳ ತಂಗಿ ಎಂದೆಲ್ಲಾ ಕರೆಯುತ್ತಾರೆ.
ಹೆಚ್ಚಿನ ಸಾಮರ್ಥ್ಯ
ಯಮುನಾರ ಸಾಮರ್ಥ್ಯ ಆಕಾಶಕ್ಕಿಂತಲೂ ಉನ್ನತವಾಗಿದೆ. ಅವರು 10ನೇ ತರಗತಿಯವರೆಗೆ ಮಾತ್ರ ಓದಿದ್ದರೂ ಕಾಡು, ಮರಗಿಡ ಮತ್ತು ಪರಿಸರದ ಮಹತ್ವದ ಬಗ್ಗೆ ಚೆನ್ನಾಗಿ ಓದಿದವರಿಗಿಂತ ಹೆಚ್ಚು ತಿಳಿದುಕೊಂಡಿದ್ದಾರೆ. ರಾಂಚಿಯ ಆಗ್ನೇಯ ಭಾಗದಲ್ಲಿ ಸುಮಾರು 35 ಕಿ.ಮೀ. ದೂರದಲ್ಲಿರುವ ಮುತುರ್ ಖಮ್ ಕಾಡಿನಿಂದ ಶುರುವಾಗಿ ದೂರ ದೂರದವರೆಗೆ ಯಮುನಾ ಮತ್ತು ಅವರ ವನ ರಕ್ಷಣಾ ಸಮಿತಿಯ ಕಾರ್ಯ ಚಟುವಟಿಕೆಗಳು ಹಬ್ಬಿವೆ. ಇದರಿಂದಾಗಿ ಕಾಡನ್ನು ನಾಶ ಮಾಡಿ ಕಾನೂನಿಗೆ ವಿರುದ್ಧವಾಗಿ ದಂಧೆ ಮಾಡುವ ಮಾಫಿಯಾದವರಲ್ಲಿ ನಡುಕ ಶುರುವಾಗಿದೆ.
12 ವರ್ಷಗಳ ಹಿಂದೆ ಯಮುನಾ 25 ಗೃಹಿಣಿಯರೊಂದಿಗೆ ವನ ರಕ್ಷಣಾ ಸಮಿತಿ ರಚಿಸಿದರು. ಈಗ ಅದರಲ್ಲಿ 72 ಮಹಿಳೆಯರಿದ್ದಾರೆ. ಫಾರೆಸ್ಟ್ ಡಿಪಾರ್ಟ್ ಮೆಂಟ್ ನಿಂದ ಸಮಿತಿ ರಿಜಿಸ್ಟರ್ ಮಾಡಿಸಿದ ಯಮುನಾ ಅವರ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಪಾರಂಪರಿಕ ಆದಿವಾಸಿ ಆಯುಧಗಳನ್ನು ಹಿಡಿದ ಮಹಿಳೆಯರು ಯಮುನಾರ ಮುಂದಾಳತ್ವದಲ್ಲಿ ಕಾಡಿನಲ್ಲಿ ಗಸ್ತು ಹೊಡೆಯುವಾಗ ತಾವೆಷ್ಟು ದೊಡ್ಡ ಕೆಲಸದಲ್ಲಿ ಮನಸಾರೆ ತೊಡಗಿಕೊಂಡಿದ್ದೇವೆ ಎಂದು ಅವರ ಮುಖದ ಮೇಲಿನ ಕಾಂತಿಯೇ ಹೇಳುತ್ತದೆ. ರಾತ್ರಿಯ ಗಸ್ತಿನಲ್ಲಿ ಮಹಿಳೆಯರೊಂದಿಗೆ ಅವರ ಮನೆಯ ಪುರುಷರೂ ಜೊತೆ ನೀಡುತ್ತಾರೆ. ಹಳ್ಳಿಯ ನಾಯಿಗಳೂ ಗಸ್ತಿನಲ್ಲಿ ಜೊತೆಗಿರುತ್ತವೆ.
ಯಮುನಾರ ಗುಂಪಿನಲ್ಲಿ 13 ವಯಸ್ಸಿನ ಹುಡುಗಿ ಬಹಾಮಯಿಯಿಂದ ಹಿಡಿದು 71 ವರ್ಷದ ಮಾಲತಿ ಟುಡ್ಡೂರಂತಹ ಮಹಿಳೆಯರು ಇದ್ದಾರೆ. ಮರ ಕಡಿಯುವಾಗ ಸಿಕ್ಕಿಬಿದ್ದರಿಂದ 501 ರೂ. ದಂಡ ವಸೂಲಿ ಮಾಡಲಾಗುತ್ತದೆ ಮತ್ತು ಅವರನ್ನು ಫಾರೆಸ್ಟ್ ಡಿಪಾರ್ಟ್ ಮೆಂಟ್ ವಶಕ್ಕೆ ಕೊಡಲಾಗುತ್ತದೆ. ದಂಡದ ರೂಪದಲ್ಲಿ ಬಂದ ಹಣವನ್ನು ಸಮಿತಿಯ ಫಂಡ್ ಗೆ ಜಮೆ ಮಾಡಲಾಗುತ್ತದೆ. ಆ ಹಣದಿಂದ ಸಮಿತಿಯ ಸದಸ್ಯರಿಗೆ ಆಯುಧಗಳನ್ನು ಖರೀದಿಸಲಾಗುತ್ತದೆ. ಜೊತೆಗೆ ಕೆರೆ, ಬಾವಿಗಳ ಸ್ವಚ್ಛತೆ, ಜನರೇಟರ್ ಮತ್ತು ಕೃಷಿಗೆ ಬೇಕಾದ ಯಂತ್ರಗಳನ್ನು ಖರೀದಿಸಲಾಗುತ್ತದೆ.
ಕಾಡು ಮತ್ತೆ ಹಸಿರು
ಒಂದೇ ಸಮನೆ ಮರಗಳನ್ನು ಕತ್ತರಿಸಿದ್ದರಿಂದ ಬಯಲಾಗಿದ್ದ 50 ಹೆಕ್ಟೇರ್ ನಲ್ಲಿ ಹರಡಿರುವ ಮುತುರ್ ಖಮ್ ಕಾಡನ್ನು ಯಮುನಾ ಮತ್ತೆ ಹಸಿರುಗೊಳಿಸಿದ್ದಾರೆ. 12 ವರ್ಷಗಳಿಂದ ಅವರು ಮತ್ತು ಅವರ ಸಮಿತಿಯ ಸದಸ್ಯರು 1 ಲಕ್ಷಕ್ಕಿಂತಲೂ ಹೆಚ್ಚು ಮರಗಳನ್ನು ನೆಟ್ಟು ಅದಕ್ಕೆ ಮತ್ತೆ ಕಾಡಿನ ರೂಪ ಕೊಟ್ಟಿದ್ದಾರೆ. ಮರ ಕಡಿಯುತ್ತಿದ್ದುದರಿಂದ 25-30 ಅಡಿಗಳ ಅಂತರದಲ್ಲಿ 1 ಮರ ಇತ್ತು. ಈಗ ಪ್ರತಿ 6 ಅಡಿಗಳ ಅಂತರದಲ್ಲಿ 1 ಮರ ಇದ್ದು ಕಾಡಿನ ರೂಪುರೇಷೆ ಮತ್ತು ಕಾಂತಿ ಹಿಂತಿರುಗಿದೆ. ಹಳ್ಳಿಯ ಮುಖ್ಯಸ್ಥ ಚಾರು ಶರಣ್, ಇಡೀ ಕಾಡು ಮತ್ತು ಝಾರ್ಖಂಡ್, ಯಮುನಾ ಮತ್ತು ಅವರ ಗುಂಪಿಗೆ ಕೃತಜ್ಞರಾಗಿದೆ ಎನ್ನುತ್ತಾರೆ. ಆದಿವಾಸಿಗಳಿಗೆ ನೀರು, ಕಾಡು ಮತ್ತು ಜಮೀನಿನ ಬಗ್ಗೆ ಬಹಳ ಅಭಿಮಾನವಿದೆ. ಆದ್ದರಿಂದ ಯಮುನಾರಂತೆ ಪ್ರತಿ ಆದಿವಾಸಿಗಳೂ ಇದರ ಬಗ್ಗೆ ಜಾಗೃತರಾಗಬೇಕು. ಯಮುನಾರ ಶ್ರದ್ಧೆ, ಪರಿಶ್ರಮದಿಂದ ಇಡೀ ಕಾಡು ಯೂಕಲಿಪ್ಟಸ್, ಬಿದಿರು, ಜಾಲಿ, ಬೂರುಗ, ಬೇವು ಇತ್ಯಾದಿ ಮರಗಳಿಂದ ತುಂಬಿದೆ.
ಝಾರ್ಖಂಡ್ ನ ಒಟ್ಟು ಕಾಡಿನ ಪ್ರದೇಶ 23 ಲಕ್ಷ 60 ಸಾವಿರದ ಐನೂರು ಹೆಕ್ಟೇರುಗಳು. ಝಾರ್ಖಂಡ್ ನ ಕಾಡು ಮತ್ತು ಪರಿಸರ ಮಂತ್ರಿ ಸುಧೀರ್ ಮಹತೋ, “ಒಂದು ವೇಳೆ ಪ್ರತಿ ಜಿಲ್ಲೆಯಲ್ಲೂ ಯಮುನಾ ಟುಡ್ಡೂರಂತಹ ಜಾಗೃತ ಮಹಿಳೆಯರಿದ್ದರೆ ಝಾರ್ಖಂಡ್ ನ ಕಾಡನ್ನು ಉಳಿಸಲು ಮತ್ತು ಹಸಿರುಮಯವನ್ನಾಗಿ ಮಾಡುವ ಕನಸನ್ನು ಸುಲಭವಾಗಿ ನನಸಾಗಿಸಬಹುದು,” ಎನ್ನುತ್ತಾರೆ.
– ಬಿ.ಬಿ. ಜ್ಯೋತಿ