“ರಾಧಾ……..” ಬಾಥ್‌ ರೂಮಿನಲ್ಲಿ ನುಗ್ಗಿದ ಕೂಡಲೇ ತಣ್ಣೀರಿನ ಸ್ಪರ್ಶದಿಂದ ನನ್ನ ಬಾಯಿಂದ ಕೂಡಲೇ ಶಬ್ದ ಹೊರಬಿತ್ತು. ಅವಳು ಕಳೆದ 2 ತಿಂಗಳುಗಳಿಂದ ಮನೆಯಲ್ಲಿ ಇಲ್ಲ. ಅನೇಕ ಯುಗಗಳನ್ನು ಕಳೆದಂತಾಗಿದೆ.

ರಾಧಾ ಹೀಗೆ ಇದ್ದಕ್ಕಿದ್ದಂತೆ ಹೊರಟುಹೋಗಿದ್ದು ನನಗೆ ಅನಿರೀಕ್ಷಿತವಾಗಿತ್ತು. ಗಂಡನ ಮನೆಗೆ ಬಂದವಳು ಗಂಡನ ಸಾವಿರಾರು ತಪ್ಪುಗಳನ್ನು ಸಹಿಸಿಕೊಂಡು ಸಾಯುವವರೆಗೂ ಅಲ್ಲಿಯೇ ಇರುತ್ತಾಳೆ ಎಂದುಕೊಂಡಿದ್ದೆ. ಆದರೆ ಒಂದೇ ಸಮನೆ ಪೆಟ್ಟು ಬೀಳುತ್ತಿದ್ದರೆ ಕಬ್ಬಿಣದ ಆಕಾರ ಬದಲಾಗುತ್ತದೆ ಎಂಬುದು ನಾನು ಬಹುಶಃ ಮರೆತುಬಿಟ್ಟಿದ್ದೆ, ಇರಲಿ, ಆಗ ನನಗೆ ಬೇಕಾಗಿದ್ದ ಸ್ವಾತಂತ್ರ್ಯ ಸಹಜವಾಗಿಯೇ ನನಗೆ ಸಿಕ್ಕುಬಿಟ್ಟಿತ್ತು.

ಕಾವ್ಯಾ ನನ್ನ ಸೆಕ್ರೆಟರಿಯಾಗಿದ್ದಳು. ಅವಳ ಮುಗ್ಧ ಸೌಂದರ್ಯದಲ್ಲಿ ಅರಳಿದ ಹೂವಿನ ಮೇಲಿನ ಮಂಜಿನ ಹನಿಗಳಂತಹ ಆಕರ್ಷಣೆಯಿತ್ತು. ಆಫೀಸಿನ ಕಾರ್ಯಗಳನ್ನು ಸಂಭಾಳಿಸುತ್ತಾ ಅವಳು ಯಾವಾಗ ನನ್ನ ಸನಿಹಕ್ಕೆ ಬಂದಳೋ ತಿಳಿಯಲಿಲ್ಲ. ಅವಳ ನೋಟ, ಒನಪು ಒಯ್ಯಾರಗಳಲ್ಲಿ ನಾನು ಸಮ್ಮೋಹಿತಗೊಂಡಿದ್ದೆ. ಅವಳಿಲ್ಲದೆ ನನಗೆ ಏನೂ ತೋಚುತ್ತಿರಲಿಲ್ಲ. ನನ್ನ ಪಾಲಿಗೆ ರಾಧಾ ಜೇಷ್ಠ ಮಾಸದ ಬಿಸಿಲಾಗಿದ್ದರೆ ಕಾವ್ಯಾ ವಸಂತಮಾಸದ ಚುಂಬಕ ಗಾಳಿಯಂತೆ. ರಾಧಾ ಹೊರಟುಹೋದ ನಂತರ ನನ್ನೊಂದಿಗೆ ಕಾವ್ಯಾಳ ಸರ್ವಾಧಿಕಾರ ನಡೆಯತೊಡಗಿತು.

ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಬಂದೆರಗಿದ ಆರ್ಥಿಕ ಹಿಂಜರಿತದಿಂದಾಗಿ ನನಗಿದ್ದ ಒಳ್ಳೆಯ ಕೆಲಸ ಹೋಯಿತು. ಅದರೊಂದಿಗೆ ನನ್ನ ದುರ್ದಿನಗಳು ಆರಂಭವಾದವು. ನಾನು ಯಾವ ಹೂಗಳ ಸುವಾಸನೆಯೊಂದಿಗೆ ಓಡಾಡುತ್ತಿದ್ದೆನೋ, ಅವೀಗ ಒಂದೊಂದಾಗಿ ಕ್ಯಾಕ್ಟಸ್‌ ಆಗಿ ಬದಲಾಗತೊಡಗಿದವು. ನಾನು ಈ ಪೆಟ್ಟಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕಾವ್ಯಾಳ ನಿಜ ಬಣ್ಣ ಬಯಲಾಯಿತು. ಅವಳ ಗೋಸುಂಬೆಯಂತಹ ಸ್ವಭಾವ ನನ್ನನ್ನು ಹತಾಶನನ್ನಾಗಿ ಮಾಡಿತು. ಆರ್ಥಿಕ ಹಿಂಜರಿತದಿಂದಾಗಿ ನನ್ನಲ್ಲಿ ಒಂಟಿತನ, ಕಾವ್ಯಾಳ ಮೋಸ, ರಾಧಾಳೊಂದಿಗೆ ಕೀಳಾಗಿ ವರ್ತಿಸಿದ್ದರಿಂದ ಅಪರಾಧಿ ಮನೋಭಾವ ತುಂಬಿಕೊಂಡಿದ್ದವು.

ರಾಧಾಳ ಪ್ರೇಮ, ಮುಗ್ಧತೆ ಮತ್ತು ಸಹಜ ಸಮರ್ಪಣೆ ಬೇಡವೆಂದರೂ ನನ್ನ ಕಣ್ಣು ಕುಕ್ಕುತ್ತದೆ. ಬೆಳಗ್ಗೆ ಎದ್ದ ಕೂಡಲೇ ಬೆಡ್‌ ಕಾಫಿ, ಬಚ್ಚಲು ಮನೆಯಲ್ಲಿ ಬಿಸಿನೀರು, ಡೈನಿಂಗ್‌ ಟೇಬಲ್ ನಲ್ಲಿ ತಿಂಡಿ ಜೊತೆಗೆ ಪತ್ರಿಕೆಯನ್ನೂ ಇಟ್ಟಿರುತ್ತಿದ್ದಳು. ಆಫೀಸಿಗೆ ಹೊರಡುವಾಗ ಇಸ್ತ್ರೀ ಮಾಡಿದ ಬಟ್ಟೆಗಳು, ಪಾಲಿಶ್‌ ಮಾಡಿದ ಶೂಸ್‌, ಬ್ರೀಫ್‌ ಕೇಸ್‌ ತಂದಿಡುವುದು ಇದರ ಮಧ್ಯೆ ಶೃತಿಯನ್ನು ಸಂಭಾಳಿಸುವುದು ಎಲ್ಲವನ್ನೂ ರಾಧಾ ಬಹಳ ಸಹಜವಾಗಿ ಮಾಡಿ ಮುಗಿಸುತ್ತಿದ್ದಳು. ಅವುಗಳಲ್ಲಿ ಒಂದು ಕೆಲಸನ್ನಾದರೂ ಸಮಯಕ್ಕೆ ಸರಿಯಾಗಿ ನಾನು ಮಾಡಲಾಗುವುದಿಲ್ಲ. ಆದರೆ ರಾಧಾ ಅಷ್ಟೂ ಕೆಲಸಗಳನ್ನು ಒಬ್ಬಳೇ ಹೇಗೆ ಮಾಡುತ್ತಿದ್ದಳೆಂದು ಯೋಚಿಸಿ ಆಶ್ಚರ್ಯಚಕಿತನಾಗುತ್ತೇನೆ. ಮನೆಯನ್ನು ಬಹಳ ಚೆನ್ನಾಗಿ ಸಂಭಾಳಿಸುತ್ತಿದ್ದಳು. ಅವಳು ಹೊರಟುಹೋದ ನಂತರ ಇಲ್ಲಿರುವ ಕಣಕಣದಲ್ಲೂ ಅವಳ ಉಪಸ್ಥಿತಿ ಮತ್ತು ನನ್ನ ಜೀವನದಲ್ಲಿ ಅವಳಿಗಿದ್ದ ಮಹತ್ವದ ಅರಿವಾಗುತ್ತಿದೆ ನನಗೆ. ನಾನು ಅವಳನ್ನು ಹಗಲೂ ರಾತ್ರಿಯೆನ್ನದೆ ಹುಡುಕಿದೆ. ಎಲ್ಲಾದರೂ ಅವಳು ಸಿಗುತ್ತಾಳೆಂಬ ಸಣ್ಣ ಸುಳಿವು ಸಿಕ್ಕರೂ ಓಡೋಡಿ ಹೋಗುತ್ತಿದ್ದೆ.  ಆದರೆ ಎಲ್ಲಾ ಕಡೆಯೂ ನಿರಾಶೆಯಾಗುತ್ತಿತ್ತು. ಅವಳು ಎಲ್ಲಿ ಮಾಯವಾದಳೆಂದು ತಿಳಿಯಲಿಲ್ಲ.

ಮನದ ಒಂದು ಮೂಲೆಯಲ್ಲಿ ಪೊಲೀಸರಿಗೆ ದೂರು ನೀಡಬೇಕೆನ್ನಿಸಿತು. ಆದರೆ ಈ ವ್ಯರ್ಥ ಕೆಲಸಕ್ಕೆ ನಾನು ಗಮನ ಕೊಡಲಿಲ್ಲ. ರಾಧಾಳ ಕಣ್ಣಲ್ಲಿ ರಕ್ತ ಹರಿಸಿದ್ದೇನೆ, ಅವಳನ್ನು ಮಿತಿ ಮೀರಿ ಅವಮಾನಗೊಳಿಸಿದ್ದೇನೆ. ಪೊಲೀಸರು ಅವಳು ಮನೆ ಬಿಟ್ಟು ಹೋದ ಬಗ್ಗೆ ನೂರಾರು ರೀತಿ ಅರ್ಥೈಸುತ್ತಾರೆ. ಹೀಗಾಗಿ ನಾನು ನನ್ನ ಮಟ್ಟದಲ್ಲೇ ಹುಡುಕುವ ಪ್ರಯತ್ನ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ತಲೆಯಲ್ಲಿ ಮಿಂಚು ಹೊಳೆದಂತಾಯಿತು. ಕವಿತಾ ರಾಧಾಳ ಕ್ಲೋಸ್‌ ಫ್ರೆಂಡ್‌ ಆಗಿದ್ದಳು. ಇದುವರೆಗೆ ಅವಳೇಕೆ ನೆನಪಾಗಲಿಲ್ಲ……. ನನ್ನ ಮೇಲೆ ನನಗೇ ಕೋಪ ಬಂತು. ಖಂಡಿತಾ ರಾಧಾ ಅವಳ ಬಳಿಯೇ ಹೋಗಿರಬೇಕು ಅಥವಾ ಅವಳು ಎಲ್ಲಿ ಹೋಗಿರುವಳೆಂದು ಕವಿತಾಗೆ ತಿಳಿದಿರಬೇಕು. ವಿನಾಶದ ದಟ್ಟ ಗಾಢಾಂಧಕಾರದಲ್ಲಿ ಆಸೆಯ ಒಂದು ಕಿರಣ ನನ್ನೊಳಗೆ ಉತ್ಸಾಹ ತಂದಿತು. ನಾನು ಬೇಗನೇ ಸಿದ್ಧನಾಗಿ ಹೊರಟೆ. ಆಗಲೇ 10 ಗಂಟೆಯಾಗಿತ್ತು. ನಾನು ಸೀದಾ ಕವಿತಾಳ ಆಫೀಸಿಗೆ ಹೋದೆ.

“ ರಾಧಾ ನಿಮ್ಮನ್ನು ಬಿಟ್ಟು ಹೋಗಿದ್ದು ನನಗೆ ಈಗ ತಾನೇ ತಿಳಿಯಿತು ನಿಮಗೆ ಒಳ್ಳೆದಾಯ್ತು ಬಿಡಿ. ಪೀಡೆ ತೊಲಗಿತು,” ಕವಿತಾ ಹೇಳಿದಳು.

ನಾನು ಮಾತಾಡಲಿಲ್ಲ.“ಅವಳು ಎಲ್ಲಿದ್ದಾಳೇಂತ ನನಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೂ ನಿಮಗೆ ಹೇಳೋದಿಲ್ಲ,” ಅವಳ ಮಾತಿನಲ್ಲಿ ತಿರಸ್ಕಾರವಿತ್ತು.

“ಅವಳು ಎಲ್ಲೇ ಇದ್ದರೂ ನೆಮ್ಮದಿಯಾಗಿ ಇರುತ್ತಾಳೆ. ಇಲ್ಲಿ ಇದ್ರೆ ಕೊರಗಿ ಕೊರಗಿ ಸಾಯ್ತಾಳೆ.”

“ಕವಿತಾ ಪ್ಲೀಸ್‌, ನನಗೆ ನನ್ನ ತಪ್ಪಿನ ಅರಿವಾಗಿದೆ. ಕಾವ್ಯಾ ನನ್ನ ಕಣ್ಣಿಗೆ ಕಟ್ಟಿದ್ದ ಪ್ರೇಮದ ಪೊರೆ ಈಗ ಕಳಚಿ ಬಿದ್ದಿದೆ.”

“ ನನಗೆ ಈಗ ತುಂಬಾ ಕೆಲಸ ಇದೆ ಪ್ರಸಾದ್‌.”

ರಾತ್ರಿಯಾಗುತ್ತಿದ್ದಂತೆ ಶೀತ ಗಾಳಿ ಮೈ ಕೊರೆಯುತ್ತಿತ್ತು. ನಾನು ಯಾವುದೋ ಯೋಚನೆಯಲ್ಲಿ ಮುಳುಗಿ ಬಾಲ್ಕನಿಯಲ್ಲಿ ಕೂತಿದ್ದೆ. ಹೊರಗೆ ಬಹುದೂರದವರೆಗೆ ಇಬ್ಬನಿ ಹರಡಿತ್ತು. ಅದಕ್ಕಿಂತಲೂ ದಟ್ಟವಾದ ಇಬ್ಬನಿ ನನ್ನೊಳಗೆ ಹರಡಿದ್ದು ನಾನು ಅದರಲ್ಲಿ ಮುಳುಗುತ್ತಿದ್ದೆ. ಬಹಳ ಹೊತ್ತು ಅಲ್ಲೇ ಕೂತಿದ್ದ ನಾನು ರಾಧಾಳ ನೆನಪಿನಲ್ಲಿ ಪ್ರಲಾಪಿಸುತ್ತಿದ್ದೆ. ಅವಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದು ಅದೀಗ ನನ್ನ ತಲೆಯನ್ನು ಕೊರೆಯುತ್ತಿದೆ.

ಮುಂದೆ ಹಲವಾರು ದಿನಗಳವರೆಗೆ ನನ್ನ ಪರಿಸ್ಥಿತಿ ಬಹಳ ವಿಚಿತ್ರವಾಗಿತ್ತು. ರಾಧಾಳೊಂದಿಗೆ ಕಳೆದ ಒಂದೊಂದು ಕ್ಷಣ ನನ್ನ ಎದೆಯನ್ನು ಚೂರಿಯಿಂದ ಇರಿದಂತಾಗುತ್ತಿತ್ತು. ಒಂದು ಬಾರಿ, ಕೇವಲ ಒಂದು ಬಾರಿ ರಾಧಾ ನನಗೆ ಸಿಗಲಿ. ಇನ್ನೆಂದೂ ಅವಳನ್ನು ನನ್ನಿಂದ ದೂರವಾಗಲು ಬಿಡುವುದಿಲ್ಲ. ಅವಳಿಗೆ ಕೈಮುಗಿದು ಕ್ಷಮೆ ಯಾಚಿಸುತ್ತೇನೆ. ಅವಳು ಹೇಳಿದಂತೆ ನನ್ನ ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ಅವಳು ನನ್ನೆಲ್ಲಾ ತಪ್ಪುಗಳನ್ನು ಮರೆಯುವಷ್ಟು ಅವಳನ್ನು ಪ್ರೀತಿಸುತ್ತೇನೆ. ಅವಳ ಕಣ್ಣಲ್ಲಿ ಒಂದು ಹನಿ ನೀರು ಬರದಂತೆ ನೋಡಿಕೊಳ್ಳುತ್ತೇನೆ. ಅವಳ ದುಃಖವನ್ನು ತೊಡೆಯಲು ನನ್ನೆಲ್ಲಾ ಖುಷಿಗಳನ್ನು ತ್ಯಾಗ ಮಾಡುತ್ತೇನೆ. ಆದರೆ ಎಲ್ಲಕ್ಕೂ ಮೊದಲು ರಾಧಾ ನನಗೆ ಅಗತ್ಯವಾಗಿ ಸಿಗಬೇಕು.

ಅದು ಬಹಳ ಬಿಜಿ ಏರಿಯಾ ಆಗಿತ್ತು. ಸುತ್ತಮುತ್ತಲೂ ದೊಡ್ಡ ದೊಡ್ಡ ಕಂಪನಿಗಳ ಆಫೀಸುಗಳಿದ್ದವು. ಸಂಜೆ ಹೊತ್ತು ಬಹಳ ಧಾವಂತವಿರುತ್ತಿತ್ತು. ಒಂದು ದಿನ ನಾನು ಏನೋ ಯೋಚಿಸುತ್ತಾ ಅಲ್ಲಿಂದ ಹೋಗುತ್ತಿದ್ದಾಗ ನಿರ್ಜೀವದಂತಹ ನನ್ನ ಶರೀರದಲ್ಲೂ ಕರೆಂಟ್‌ ಹೊಡೆದಂತಾಯಿತು. ನನ್ನ ಎದುರಿಗಿದ್ದ ಬಿಲ್ಡಿಂಗ್‌ ನಿಂದ ರಾಧಾ ಬರುತ್ತಿರುವುದು ಕಂಡಿತು. ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ನಾನು ಕೂಡಲೇ ಓಡಿ ಅವಳತ್ತ ಹೋಗಲು ಬಯಸಿದೆ. ಆದರೆ ರಸ್ತೆಯಲ್ಲಿ ವೇಗವಾಗಿ ಓಡುವ ವಾಹನಗಳ ದೆಸೆಯಿಂದ ಹಾಗೆ ಮಾಡಲಾಗಲಿಲ್ಲ. ಗ್ರೀನ್‌ ಸಿಗ್ನಲ್ ಬಂದಾಗ ಬಹಳಷ್ಟು ವಾಹನಗಳು ವೇಗವಾಗಿ ಓಡಲಾರಂಭಿಸಿದೆ. ಅಷ್ಟರಲ್ಲಿ ಅವಳು ಒಂದು ಬಸ್‌ ಹತ್ತಿ  ಕೂತುಬಿಟ್ಟಳು. ನಾನು ವೇಗವಾಗಿ ಓಡಿ ರಸ್ತೆ ದಾಟಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ನನ್ನ ತಲೆ ತಿರುಗಲಾರಂಭಿಸಿತು.

ಮರುದಿನ ಸೆಕೆಂಡ್‌ ಸಾಟರ್ಡೇ ಆಗಿದ್ದು ಅದರ ಮರುದಿನ ಭಾನುವಾರ. ಈ ಎರಡು ದಿನಗಳು ಕಳೆಯುವುದು ನನಗೆ ಆವಕಾಶ ಮತ್ತು ಪಾತಾಳದಂತಾಗಿತ್ತು. ನಾನು ಏನೋ ಯೋಚಿಸುತ್ತಾ ಆದೇ ವೇಗದಲ್ಲಿ ರಾಧಾ ಹೊರಬಂದ ಆಫೀಸಿಗೆ ಹೋದೆ. ರಿಸೆಪ್ಶನ್‌ ನಲ್ಲಿ ಒಬ್ಬ ಸುಂದರವಾದ ಹುಡುಗಿ ಕುಳಿತಿದ್ದಳು. ನಾನು ವೇಗವಾಗಿ ಹೊಡೆದುಕೊಳ್ಳುತ್ತಿದ್ದ ಎದೆಯನ್ನು ಸಂಭಾಳಿಸಿಕೊಂಡು ರಾಧಾ ಇದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಳಾ? ಎಂದು ಆಕೆಯನ್ನು ಕೇಳಿದೆ. ಅವಳು ಹೌದು ಎಂದಾಗ ರಾಧಾಳ ಅಡ್ರೆಸ್‌ ಕೇಳಿದೆ. ಅವಳು ನನ್ನನ್ನು ವಿಚಿತ್ರವಾಗಿ ನೋಡಿದಳು.

“ಮೇಡಂ ಪ್ಲೀಸ್‌,” ನಾನು ಅವಳನ್ನು ವಿನಂತಿಸಿದೆ, “ ರಾಧಾ ನನ್ನ ಹೆಂಡತಿ. ಕೆಲವು ಕಾರಣಗಳಿಂದಾಗಿ ನಮ್ಮಿಬ್ಬರಲ್ಲಿ ಮಿಸ್ ಅಂಡರ್‌ ಸ್ಟ್ಯಾಡಿಂಗ್‌ ಉಂಟಾಯಿತು. ಅವಳು ನನ್ನಿಂದ ಬೇರೆಯಾದಳು. ನಾನು ಅವಳನ್ನು ಭೇಟಿಯಾಗಿ ನಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಇಚ್ಛಿಸುತ್ತೇನೆ. ನಮಗೆ ಒಬ್ಬ ಚಿಕ್ಕ ಮಗಳೂ ಇದ್ದಾಳೆ. ನೀವು ಅವಳ ಅಡ್ರೆಸ್‌ ಕೊಟ್ಟರೆ ಬಹಳ ಉಪಕಾರವಾಗುತ್ತದೆ. ಬಿಲೀವ್ ‌ಮಿ ಐ ಆ್ಯಮ್ ಆನೆಸ್ಟ್,” ನನ್ನ ಕಂಠ ತುಂಬಿ ಬಂದಿತು. ಅವಳು ಸ್ವಲ್ಪ ಹೊತ್ತು ನನ್ನ ಮಾತಿನ ಸತ್ಯಾಸತ್ಯತೆಯನ್ನು ತೂಗಿ ನೋಡುತ್ತಿದ್ದಳು. ಬಹುಶಃ ಅವಳಿಗೆ ನನ್ನ ಮೇಲೆ ನಂಬಿಕೆ ಬಂತೆಂದು ತೋರುತ್ತದೆ. ಅವಳು ಒಂದು ಕಾಗದದಲ್ಲಿ ರಾಧಾಳ ಅಡ್ರೆಸ್‌ ಬರೆದು ಕೈಗಿತ್ತಳು.

ನಾನು ಗಾಳಿಯಲ್ಲಿ ತೇಲಾಡುತ್ತಾ ವಾಪಸ್‌ ಬಂದೆ. ಇಡೀ ರಾತ್ರಿ ನನಗೆ ನಿದ್ದೆ ಬರಲಿಲ್ಲ. ರಾಧಾಳನ್ನು ಹೇಗೆ ಎದುರಿಸುವುದೆಂದು ಮನದಲ್ಲೇ ಕೊರೆಯುತ್ತಿತ್ತು. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತದೆಯೇ? ಅವಳು ನನ್ನನ್ನು ಕ್ಷಮಿಸುತ್ತಾಳೋ ಇಲ್ಲವೋ? ಅವಳ ಸ್ವಭಾವ ನನಗೆ ಚೆನ್ನಾಗಿ ತಿಳಿದಿತ್ತು. ಮನದಲ್ಲಿ ಒಮ್ಮೆ ನಿಶ್ಚಯಿಸಿದರೆ ಅದನ್ನು ಮುಗಿಸುವವರೆಗೂ ಬಿಡುತ್ತಿರಲಿಲ್ಲ.

ಮನದ ಯಾವುದೋ ಒಂದು ಮೂಲೆಯಲ್ಲಿ ಮೂಡಿ ಬಂದ ವ್ಯಗ್ರತೆ ನನ್ನ ಇಡೀ ವ್ಯಕ್ತಿತ್ವವನ್ನು ತುಳಿಯುತ್ತಿತ್ತು. ಮನದಲ್ಲಿದ್ದ ಸಂಶಯದ ಮೋಡಗಳನ್ನು ನಾನು ಬಹಳ ತೀವ್ರವಾಗಿ ತಳ್ಳಿಹಾಕುತ್ತಿದ್ದೆ. ಅವಳು ನನ್ನ ಹೆಂಡತಿ. ಅವಳು ನನ್ನನ್ನು ಮನಸ್ಸಿನಾಳದಿಂದ ಪ್ರೀತಿಸಿದ್ದಾಳೆ.  ಸ್ವಲ್ಪ ದಿನಗಳ ಮಟ್ಟಿಗೆ ನನ್ನಿಂದ ದೂರವಾಗಿರಬಹುದು. ಆದರೆ ಖಾಯಂ ಆಗಿ ಅಲ್ಲ. ನನ್ನ ಮನಸ್ಸು ಕೊಂಚ ಹಗುರವಾಯಿತು. ಅವಳ ಮುಗ್ಧ ಸೌಂದರ್ಯ ನನ್ನ ಕಣ್ಣುಗಳ ಮುಂದೆ ಕುಣಿದಾಡುತ್ತಿತ್ತು.

ಅವಳ ವಿಳಾಸ ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ. ಮೀಡಿಯಂ ದರ್ಜೆಯ ಕಾಲೋನಿಯಲ್ಲಿ ಎರಡು ಕೋಣೆಗಳ ಒಂದು ಸ್ವಚ್ಛವಾದ ಫ್ಲ್ಯಾಟ್‌ ಅದಾಗಿತ್ತು. ಸುತ್ತಮುತ್ತ ಪ್ರಶಾಂತ ವಾತಾವರಣವಿತ್ತು. ಹೊರಗೆ ಇಟ್ಟಿದ್ದ ಹೂ ಕುಂಡಗಳಲ್ಲಿ ಬೆಳೆದಿದ್ದ ಗುಲಾಬಿ ಹೂಗಳ ಸುಗಂಧದಿಂದ ರಾಧಾಳ ಸುಗಂಧದ ಅನುಭವವಾಗುತ್ತಿತ್ತು. ನನಗೆ ರೋಮಾಂಚನವಾಯಿತು. ನಾನು ಕಾಲಿಂಗ್‌ ಬೆಲ್ ಒತ್ತಿದೆ. ಒಳಗೆ ಗುಂಯ್‌ ಗುಡುತ್ತಿದ್ದ ಸಂಗೀತದ ಅಲೆಗಳು ನನ್ನ ಕಿವಿಗಳಿಗೆ ಆಪ್ಯಾಯಮಾನವಾಗಿದ್ದವು. ಒಳಗಿನಿಂದ ಬರುತ್ತಿದ್ದ ರಾಧಾಳ ಹೆಜ್ಜೆಗಳ ಸಪ್ಪಳವನ್ನು ನಾನು ಗುರುತಿಸಿದೆ. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು.

“ ನೀಲಾ?” ಎದುರಿಗೆ ನನ್ನನ್ನು ಕಂಡು ಅವಳು ಬೆಚ್ಚಿಬಿದ್ದಳು.

“ರಾಧಾ, ನಿನ್ನನ್ನು ಎಷ್ಟು ಕಡೆ ಹುಡುಕಿದೆ. ನೀನು ಎಲ್ಲಿಯೂ ಸಿಗಲಿಲ್ಲ. ನೀನು ನನಗೆ ಆಲೋಚನೆ ಮಾಡಲು ಅವಕಾಶವನ್ನೇ ಕೊಡಲಿಲ್ಲ. ಇದಕ್ಕಿದ್ದಂತೆ ನನ್ನನ್ನು ಬಿಟ್ಟು ಹೊರಟುಬಿಟ್ಟೆ.”

“ ಇದ್ದಕ್ಕಿದಂತೆ ಏನಿಲ್ಲ, ಮೋಡಿ ಮಾಡಿಬಿಟ್ಟಿದ್ರಿ. ನನಗೆ ಅದರಿಂದ ಹೊರಬರೋಕೆ ಬಹಳ ಕಷ್ಟಪಡಬೇಕಾಯಿತು. ಇನ್ನೂ ಸ್ವಲ್ಪ ದಿನ ನಿಮ್ಮ ಜೊತೆ ಇದ್ದಿದ್ರೆ ಬದುಕೋದೇ ಕಷ್ಟವಾಗ್ತಿತ್ತು. ನಾನು ಸಾಯಲೀಂತ ನೀವು ಕಾಯ್ತಿದ್ರಿ. ನಿಮ್ಮ ಕಡೆಯಿಂದ ಕೊಡಬಾರದ ಕಷ್ಟ ಕೊಟ್ರಿ”.

“ನನಗೆ ಬಹಳ ನಾಚಿಕೆಯಾಗಿದೆ ರಾಧಾ, ” ನಾನು ಕೈ ಜೋಡಿಸಿದೆ,

“ ನಿನಗೆ ಮಾಡಿದ ಅನ್ಯಾಯಕ್ಕೆ ನಾನು ಸಾಕಷ್ಟು ಶಿಕ್ಷೆ ಅನುಭವಿಸಿದ್ದೀನಿ. ಆಗಿದ್ದನ್ನು ಮರೆತು ದಯವಿಟ್ಟು ಕ್ಷಮಿಸು.”

“ ಹುಂ, ನನಗೆ ಇಷ್ಟು ತೊಂದರೆ ಕೊಟ್ಟರೂ ನಿಮಗೆ ಸಾಲಲಿಲ್ಲ. ಅದಕ್ಕೆ ಈಗ ಒಂದು ಹೊಸ ಕಥೆ ಹೇಳ್ತಿದ್ದೀರಿ.” ಅವಳ ಧ್ವನಿ ಕಠೋರವಾಗಿತ್ತು,

“ ನಿಮ್ಮ ಈ ಬಣ್ಣದ ಮಾತುಗಳು ನನ್ನನ್ನು ಬಹಳ ಅಳಿಸಿವೆ. ಇನ್ನು ಸಾಕು, ಇಲ್ಲಿಂದ ಹೊರಡಿ. ನಿಮ್ಮಂಥ ಕೀಳು ಮನುಷ್ಯನ ಜೊತೆ ಸಂಬಂಧ ಮುಂದುವರಿಸೋಕೆ ನನಗಿಷ್ಟವಿಲ್ಲ.”

ನಾನು ಆಶ್ಚರ್ಯದಿಂದ ಅವಳನ್ನು ನೋಡುತ್ತಿದ್ದೆ.

“ ನಿಮ್ಮ ಬುದ್ಧಿ ನನಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಸ್ವಾರ್ಥಕ್ಕಾಗಿ ನೀವು ಯಾವ ಮಟ್ಟಕ್ಕೆ ಬೇಕಾದ್ರೂ ಇಳೀತೀರಿ. ನೀವು ಕೊಟ್ಟ ಒಂದೊಂದು ಪೆಟ್ಟೂ ನನಗೆ ಇಂದಿಗೂ ಮರೆಯೋಕಾಗ್ತಿಲ್ಲ.”

“ ನನಗೆ ಪ್ರಾಯಶ್ಚಿತ್ತ ಮಾಡ್ಕೊಳ್ಕೊಕೆ ಒಂದು ಅವಕಾಶ ಕೊಡು ರಾಧಾ.”

“ ನನಗೆ ಏನು ಕೇಳೋಕೂ ಇಷ್ಟವಿಲ್ಲ. ನಿಮ್ಮ ಜೊತೆ ಕಳೆದ ದಿನಗಳ ನೆನಪುಗಳನ್ನು ನನ್ನ ಮನಸ್ಸಿನಿಂದ ತೆಗೆದುಹಾಕಿಬಿಟ್ಟಿದ್ದೀನಿ.”

“ನನ್ನನ್ನು ಒಳಕ್ಕೆ ಕರೆಯೋಲ್ವಾ?” ಮಾತು ಬದಲಾಯಿಸಲು ಹೇಳಿದೆ.

“ ಆ ಅಧಿಕಾರ ನೀವು ಬಹಳ ಹಿಂದೇನೇ ಕಳೆದುಕೊಂಡ್ರಿ.” ನಾನು ಮಾತಾಡಲಿಲ್ಲ.

“ಈ ಪರಿಸ್ಥಿತಿ ನೀವೇ ತಂದುಕೊಂಡಿದ್ದು. ನಮ್ಮ ಪ್ರೀತಿ ಉಳಿಸಿಕೊಳ್ಳೊಕೆ ನಾನು ಎಲ್ಲಾ ರೀತಿ ಪ್ರಯತ್ನ ಮಾಡಿದೆ. ನಾನು ಅಷ್ಟೆಲ್ಲಾ ಪ್ರಯತ್ನಿಸಿದರೂ ನೀವೆಂದೂ ನನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಸಹಿಸೋಕಾಗುವಷ್ಟು ಸಹಿಸಿದೆ. ಇನ್ನೆಷ್ಟು ಸಹಿಸೋದು? ಇನ್ನೆಷ್ಟು ಬಾಗೋದು? ಬಾಗೀ ಬಾಗೀ ಕುಸಿಯತೊಡಗಿದೆ. ನಾನು ಕುಸಿಯದಂತೆ ನೀವು ರಕ್ಷಿಸಬಹುದೂಂತ ನಿಮ್ಮತ್ತ ಕೈ ಚಾಚಿದೆ. ಆದರೆ ನೀವು ನನ್ನನ್ನು ನಾಶ ಮಾಡೋಕೆ ಸಿದ್ಧರಾಗಿದ್ದಿರಿ”

ನಾನು ಮಾತಾಡದೇ ಹಾಗೇ ನಿಂತಿದ್ದೆ.

“ ನಿಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲವಲ್ಲಾಂತ ಪಶ್ಚಾತ್ತಾಪ ಆಗ್ತಿದೆ. ಅರ್ಥ ಮಾಡಿಕೊಳ್ಳೋದಾದರೂ ಹೇಗೇ ನೀವು ಸಜ್ಜನಿಕೆಯ ಮುಖವಾಡ ಹಾಕಿಕೊಂಡಿದ್ರಿ. ಇದೇ ಮುಖವಾಡದ ಆ ಕಾಂತಿಯಲ್ಲಿ ನಿಮ್ಮಂತಹ ಸಂಗಾತಿ ಪಡೆದು ಹೆಮ್ಮೆಪಟ್ಟಿದ್ದೆ. ಆದರೆ ನಾನೆಂತಹ ತಪ್ಪು ಮಾಡಿದೆ ಎಂದು ಮದುವೆಯ ನಂತರ ತಿಳಿಯಿತು. ನಾನು ನಿಮ್ಮನ್ನು ಅರಿತುಕೊಂಡಂತೆಲ್ಲಾ ನೀವು ಹಾಕಿಕೊಂಡಿದ್ದ ಮುಖವಾಡ ಕಳಚಿ ಬಿದ್ದಾಗ ನಿಮ್ಮ ನಿಜರೂಪ ಕಂಡು ನಾನು ದಂಗಾಗಿಹೋಗಿದ್ದೆ.

“ಆರಂಭದಲ್ಲಿ ಎಲ್ಲ ಸರಿಯಾಗಿತ್ತು. ಮುಂದೆ ನೀವು ಆಗಾಗ ಹಲವು ದಿನಗಳವರೆಗೆ ನಾಪತ್ತೆಯಾಗುತ್ತಿದ್ದಿರಿ. ಬಿಸ್‌ ನೆಸ್‌ ಟೂರ್ ಎಂದು ನನಗೆ ನಂಬಿಸ್ತಿದ್ರಿ. ಇದ್ದಕ್ಕಿದ್ದಂತೆ ಒಂದು ದಿನ ನಿಮ್ಮ ಸೆಕ್ರೆಟರಿ ಕಾವ್ಯಾಳ ಸೊಂಟವನ್ನು ಬಳಸಿಕೊಂಡಿದ್ದನ್ನು ನೋಡಿರದಿದ್ದರೆ ಇದುವರೆಗೂ ಅದೇ ಭ್ರಮೆಯಲ್ಲೇ ಬದುಕುತ್ತಿದ್ದೆ. ಕವಿತಾಳ ಒತ್ತಾಯದಿಂದ  ಸೆಮಿನಾರ್‌ ನಲ್ಲಿ  ಪಾಲ್ಗೊಳ್ಳಲು ನಾನು ಹೋಟೆಲ್ ಗೆ ಹೋದಾಗ ಅದೇ ಹೋಟೆಲ್ ‌ನಲ್ಲಿ ನಿಮ್ಮ ಬಿಸ್‌ ನೆಸ್‌ ಟೂರ್‌ ನ ರಹಸ್ಯ ಬಯಲಾಗಿತ್ತು. ನಿಮ್ಮ ತೋಳುಗಳಲ್ಲಿ ಬೇರೆ ಯಾರನ್ನೊ ನೋಡಿ ನನಗೆ ಆಕಾಶದಿಂದ ಧೊಪ್ಪನೆ ಬಿದ್ದಂತಾಗಿತ್ತು. ಅದರೆ ನಿಮ್ಮ ಮುಖದಲ್ಲಿ ಯಾವುದೇ ರೀತಿಯ ಗಾಬರಿ ಕಂಡುಬರಲಿಲ್ಲ. ನಾನು ಏನನ್ನಾದರೂ ಹೇಳುವ ಮೊದಲೇ ನಾನು ಅಲ್ಲಿ ಇದ್ದುದಕ್ಕೆ ನೀವು ಸಾವಿರಾರು ಪ್ರಶ್ನೆಗಳನ್ನು ಕೇಳಿದ್ರಿ. ನಾನು ಬಯಸಿದ್ದರೆ ನಿಮ್ಮ ಪ್ರತಿಯೊಂದು ಪ್ರಶ್ನೆಗೂ ಖಡಕ್‌ ಉತ್ತರವನ್ನೇ ಕೊಡುತ್ತಿದ್ದೆ. ಆದರೆ ನಿಮ್ಮ ವರ್ತನೆಯಿಂದ ನನ್ನ ಸೋಲೇ ಕಂಡುಬರುತ್ತಿತ್ತು. ನನ್ನ ಮೌನವನ್ನು ದೌರ್ಬಲ್ಯವೆಂದು ತಿಳಿದು ನಿಮಗೆ ಇಷ್ಟ ಬಂದಹಾಗೆ ಮಾಡತೊಡಗಿದ್ರಿ. ನಾನು ಸದ್ದಿಲ್ಲದೆ ಅಳುತ್ತಾ ನಿಮಗಾಗಿ ಕಾಯುತ್ತಾ ಮಂಚದ ಮೇಲೆ ಮಗ್ಗಲು ಬದಲಿಸುತ್ತಿದ್ದೆ. ಅತ್ತ ನೀವು ಬೇರೆಯವರ ತೋಳುಗಳಲ್ಲಿ ಬಂಧಿಯಾಗಿರುತ್ತಿದ್ದಿರಿ.”

“ಅದೆಲ್ಲಾ ಆಗಿಹೋದ ಸಮಾಚಾರ. ನಾನು ಅದನ್ನು, ಮರೆತುಬಿಟ್ಟಿದ್ದೇನೆ.” ಬಹಳ ಕಷ್ಟದಿಂದ ಹೇಳಿದೆ.

gunah-story-2

“ ನಿಮಗೆ ಅದು ಸಾಮಾನ್ಯ ವಿಷಯ ಆಗಿರಬಹುದು, ಆದರೆ ನನ್ನದೆಲ್ಲ ಕಳೆದುಹೋದ ನೆನ್ನೆಯಡಿ ಹೂತುಹೋಗಿದೆ. ಆ ನೋವುಗಳನ್ನು ಇಂದಿಗೂ ಅನುಭವಿಸುತ್ತಿದ್ದೇನೆ. ನಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ನೆನಪು ಮಾಡಿಕೊಳ್ಳಿ. ಅಂದು ನೀವು ಬೇಗನೆ ಮನೆಯಿಂದ ಹೊರಟಿರಿ. ಅಂದು ಮಧ್ಯರಾತ್ರಿಯವರೆಗೆ ನಿಮಗಾಗಿ ಕಾಯುತ್ತಿದ್ದೆ. ಸಣ್ಣ ಸದ್ದಾದರೂ ಬಾಗಿಲ ಬಳಿ ಓಡುತ್ತಿದ್ದೆ. ನೀವು ಹತ್ತಿರದಲ್ಲೇ ಇದ್ದು ಬೇಕೆಂದೇ ನನ್ನನ್ನು ಸತಾಯಿಸುತ್ತಿರಬಹುದು ಎಂದುಕೊಂಡಿದ್ದೆ. ಕೊನೆಗೂ ನೀವು ತೂರಾಡುತ್ತಾ ಮನೆಗೆ ಬಂದ್ರಿ. ನಾನು ಸಂಭಾಳಿಸಿಕೊಂಡು ನಿಮ್ಮನ್ನು ಬೆಡ್‌ ರೂಮಿಗೆ ಕರೆದುಕೊಂಡು ಹೋಗಿದ್ದೆ. ಅಂದು ನೀವು ಊಟ ಬೇಡ ಅಂದಿದ್ರಿ. ಬಹುಶಃ ಕಾವ್ಯಾ ಜೊತೆ ಹೋಟೆಲ್ ‌ನಲ್ಲಿ ತಿಂದು ಬಂದಿದ್ರಿ. ನಾನು ಬೇರೆ ರೂಮಿಗೆ ಹೋಗಬೇಕೆಂದುಕೊಳ್ಳುವಷ್ಟರಲ್ಲಿ ನೀವು ನನ್ನ ಮೇಲೆ ತೋಳದಂತೆ ಎರಗಿ ಹಿಡಿದುಕೊಂಡ್ರಿ. ಬಹಳ ಹೊತ್ತಿನವರೆಗೆ ನನ್ನನ್ನು ಕಚ್ಚಿ, ಹಿಂಡಿ, ಹಿಂಸೆ ಕೊಟ್ರಿ. ನಾನು ನಿಮ್ಮ ಮೃಗೀಯ ಹಿಡಿತದಲ್ಲಿ ಒದ್ದಾಡುತ್ತಿದ್ದೆ. ನಿಮ್ಮ ಹಿಂಸೆಯಿಂದ ದೇಹಕ್ಕೆ ಮನಸ್ಸಿಗೆ ಗಾಯವಾಗಿತ್ತು. ಅದನ್ನೆಲ್ಲಾ ಹೇಗೆ ಮರೆಯಲು ಸಾಧ್ಯ?”

“ಸಾಕು ರಾಧಾ,” ನಾನು ಕಿವಿಗಳ ಮೇಲೆ ಕೈಯಿಟ್ಟು ಕೂಗಿದೆ, “ ನಾನು ಮಾಡಿದ ತಪ್ಪುಗಳು ವಿಷ ಸರ್ಪವಾಗಿ ಪ್ರತಿ ಕ್ಷಣ ನನ್ನನ್ನು ಕಚ್ಚುತ್ತಿರುತ್ತವೆ. ಇನ್ನು ಸಹಿಸಲು ಸಾಧ್ಯವಿಲ್ಲ. ಪ್ಲೀಸ್‌, ಇದೊಂದು ಬಾರಿ ನನ್ನನ್ನು ಕ್ಷಮಿಸು. ಇನ್ನು ಮುಂದೆ ನಿನಗೆ ಯಾವುದೇ ತೊಂದರೆ ಕೊಡ್ಲಾಂತ ಪ್ರಮಾಣ ಮಾಡ್ತೀನಿ.”

“ನೀವು ನನ್ನನ್ನು ಎಷ್ಟು ಗೋಳು ಹೊಯ್ದು ಕೂಂಡಿದ್ದೀರಿ ಅಂದ್ರೆ ಇನ್ನೇನೂ ಬಾಕಿ ಇಲ್ಲ. ಹೂವಿನಂತಿರೋ ನನ್ನನ್ನು ಬೇಕೆಂದಾಗ ಹೊಸಕಿ ಹಾಕಿದ್ದೀರಿ. ಹಾಸಿಗೆ ಬಿಟ್ಟರೆ ನನಗೆ ಬೇರೊಂದು ಅಸ್ತಿತ್ವ ಇದೆ ಅನ್ನೋದನ್ನು ತಿಳಿಯೋಕೆ ಎಂದೂ ಪ್ರಯತ್ನ ಪಡಲಿಲ್ಲ. ನಾನೂ ನಿಮ್ಮಂತೆಯೇ ಮನುಷ್ಯಳು. ನನ್ನ ದೇಹ ಮೂಳೆ ಮಾಂಸದ ತಡಿಕೆಯಾಗಿದೆ. ಅದರೊಳಗೆ ಹೃದಯ ಮಿಡಿಯುತ್ತದೆ. ನಿಮ್ಮ ಹಾಗೆ ಸುಖ ದುಃಖಗಳ ಅನುಭವ ಪಡೆಯುತ್ತದೆ.

“ಇದರ ಮಧ್ಯೆ ಕವಿತಾ ನನಗೆ ಬಹಳ ಸಹಾಯ ಮಾಡಿದಳು. ಬದುಕಲು ಪ್ರೇರಣೆ ನೀಡಿದಳು. ಹೆಜ್ಜೆ ಹೆಜ್ಜೆಗೂ ಧೈರ್ಯ ತುಂಬಿದಳು. ಅವಳು ಭಾವನಾತ್ಮಕ ಬೆಂಬಲ ಕೊಡದೇ ಇದ್ದಿದ್ರೆ ನಾನು ಇಷ್ಟು ಹೊತ್ತಿಗೆ ಏನಾಗಿರುತ್ತಿದ್ದೆನೋ? ನನ್ನ ಅಸ್ತಿತ್ವ ಉಳಿಸಿಕೊಳ್ಳಲು ನನ್ನ ಕಾಲುಗಳ ಮೇಲೆ ನಾನು ನಿಲ್ಲಲು ಪ್ರಯತ್ನಿಸುತ್ತಿದ್ದೆ. ಕವಿತಾ ನನಗೆ ಬಹಳಷ್ಚು ಸಹಾಯ ಮಾಡಿದಳು. ನಾನು ಕೆಲಸಕ್ಕೆ ಹೋಗುವುದು ನಿಮಗೆ ಸುತರಾಂ ಇಷ್ಟವಿರಲಿಲ್ಲ. ನಿಮ್ಮ ಸರಿಸಮನಾಗಿ ನಾನು ನಿಲ್ಲುವುದನ್ನು ನೋಡಿ ನೀವು ವಿಚಲಿತರಾದಿರಿ. ಅಂದಹಾಗೆ ನನ್ನ ಕಣ್ಣೀರಿನಿಂದ ನಿಮ್ಮ ಅಹಂಗೆ ತೃಪ್ತಿಯಾಗುತ್ತಿತ್ತು. ಇಲ್ಲದಿದ್ದರೆ ನೀವು ಹತಾಶೆಯಿಂದ ಚಡಪಡಿಸುತ್ತಿದ್ದಿರಿ.”

“ನನ್ನ ಎಲ್ಲ ತಪ್ಪುಗಳನ್ನೂ ಒಪ್ಕೋತೀನಿ. ನಿನಗೆ ಇಷ್ಟ ಬಂದ ಶಿಕ್ಷೆ, ಕೊಡು. ಆದರೆ ದಯವಿಟ್ಟು ಮನೆಗೆ ಬಾ,” ನಾನು ಅಸಹಾಯಕತೆಯಿಂದ ವಿನಂತಿಸಿದೆ.

“ಯಾವ ಮನೆ?” ಅವಳು ಸಿಟ್ಟಿಗೆದ್ದಳು, “ಕಲ್ಲು ಇಟ್ಟಿಗೆಯಿಂದ ನಿರ್ಮಿಸಿದ ಆ ನಿರ್ಜೀವ ಕಟ್ಟಡಾನಾ? ಅದರಲ್ಲಿ ನಿಮ್ಮ ತುಗಲಕ್‌ ದರ್ಬಾರ್‌ ಮಾತ್ರ ನಡೆಯೋದು. ನಿಮಗೆ ಯಾವುದು ಇಷ್ಟವೋ ಅದೇ ಆಗುತ್ತೆ. ಬೆಡ್‌ ರೂಮಿಂದ ಹಿಡಿದು ಡ್ರಾಯಿಂಗ್ ರೂಂನ ಅಲಂಕಾರದವರೆಗೆ ನಿಮ್ಮಿಷ್ಟದಂತೆಯೇ ನಡೀತಿತ್ತು.

“ನಾನು ಯಾವ ಬಣ್ಣದ ಸೀರೆ ಉಡಬೇಕು, ಯಾವ ಅಡುಗೆ ಮಾಡಬೇಕೂಂತ ನೀವೆ ಹೇಳ್ತಿದ್ರಿ. ನನಗೆ ಯಾವುದು ಇಷ್ಟಾಂತ ನೀವು ಕೇಳ್ತಿರಲಿಲ್ಲ. ನಾನು ಟಿವಿ ನೋಡಲು ಕುಳಿತರೆ ನೀವು ರಿಮೋಟ್‌ ಕಿತ್ತುಕೊಳ್ಳುತ್ತಿದ್ದಿರಿ. ನನಗಿಷ್ಟವಾದ ಕಾರ್ಯಕ್ರಮಗಳು ನಿಮಗೆ ಹಿಡಿಸುತ್ತಿರಲಿಲ್ಲ.

“ಅಲ್ಲಿ, ನನ್ನ ಅಸ್ತಿತ್ವವೇ ಕಂಡುಬರುತ್ತಿರಲಿಲ್ಲ. ನನ್ನ ವಿಚಾರಗಳು, ನನ್ನ ಭಾವನೆಗಳು, ನನ್ನ ಅಸ್ತಿತ್ವ ನಿಮ್ಮ ವಿಷೇಷ ನಡವಳಿಕೆಯಲ್ಲಿ ಮುಚ್ಚಿಹೋಗಿತ್ತು. ನಿಮ್ಮ ಹಿಟ್ಲರ್‌ ದರ್ಬಾರ್‌ ನಲ್ಲಿ ನನ್ನ ಬದುಕು ಅಸಹನೀಯವಾಗಿತ್ತು. ಆ ಕತ್ತಲು ಕೋಣೆಯಲ್ಲಿ ನನ್ನ ಉಸಿರುಗಟ್ಟುತ್ತಿತ್ತು. ಆದ್ದರಿಂದ ನಿಮ್ಮಿಂದ ಬಹಳ ದೂರ ಹೊರಟಿದ್ದೇನೆ. ಏಕೆಂದರೆ ನನಗೆ ಬೇಕಾದಂತೆ ನೆಮ್ಮದಿಯಾಗಿ ಎರಡು ಕ್ಷಣ ಬದುಕಬಹುದು.”

“ಈಗ ನೀನು ಏನು ಬಯಸ್ತಿಯೋ ಹಾಗೆ ಆಗುತ್ತೆ. ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಾನು ಒಂದು ಹೆಜ್ಜೆನೂ ಇಡಲ್ಲ. ನೀನು ಮನೆ ಬಿಟ್ಟು ಹೋದಮೇಲೆ ಅದು ಪಾಳು ಬಂಗಲೆಯಂತಾಗಿದೆ. ಮಗಳ ಕಿಲ ಕಿಲ ನಗುವನ್ನು ಕೇಳಲು ಮನಸ್ಸಾಗುತ್ತಿದೆ. ಆ ಪಾಳುಮನೆಯನ್ನು ಮತ್ತೆ ಸುಂದರ ಮನೆಯನ್ನಾಗಿ ಮಾಡು ರಾಧಾ,” ನನ್ನ ಗಂಟಲು ತುಂಬಿ ಬಂದಿತ್ತು.

“ನಿಮ್ಮ ಕೊಳಕು ನಾಲಿಗೆಯಿಂದ ಮಗಳ ಹೆಸರೆತ್ತಬೇಡಿ.” ಅವಳ ಧ್ವನಿಯಲ್ಲಿ ದ್ವೇಷ ತುಂಬಿತ್ತು, “ಭೌತಿಕ ಸುಖ ಮತ್ತು ರಾಸಾಯನಿಕ ಪ್ರಕ್ರಿಯೆಯಿಂದ ಯಾರಾದರೂ ಅಪ್ಪ ಅನ್ನಿಸಿಕೊಳ್ಳೋ ಹಕ್ಕನ್ನು ಪಡೆಯಲ್ಲ. ಮಕ್ಕಳಿಗಾಗಿ ಬಹಳಷ್ಟು ತ್ಯಾಗ ಮಾಡಬೇಕಾಗುತ್ತೆ. ನಾನು ಗರ್ಭಿಣಿಯಾದಾಗ ನೀವು ನನ್ನ ಗರ್ಭದಲ್ಲಿ ಬೆಳೀತಿರೋದು ನನ್ನ ರಕ್ತ ಅಲ್ಲ, ನನ್ನ ಬಾಸ್‌ ದು ಎಂದು ಗಂಟಲು ಹರಿದುಕೊಂಡು ಕಿರುಚಿಕೊಂಡಿರಿ. ನಿಮ್ಮ ವರ್ತನೆ ಕಂಡು ನಾನು ಸ್ತಂಭೀಭೂತಳಾಗಿದ್ದೆ.  ನೀವೇನೋ ಸುಲಭವಾಗಿ ಅದೆಲ್ಲಾ ಹೇಳಿಬಿಟ್ರಿ. ಆದರೆ ನನ್ನ ಹೃದಯದಲ್ಲಿ ಆಳವಾದ ಗಾಯವಾಗಿತ್ತು. ನಿಮ್ಮ ನಾಲಿಗೇನ ಸೀಳಬೇಕು ಅನ್ನಿಸಿತ್ತು. ಆದರೆ ಸಂಸ್ಕಾರ ನನ್ನ ಕೈ ಕಟ್ಟಿಹಾಕಿತ್ತು.

“ನಾನು ಗರ್ಭಪಾತ ಮಾಡಿಸಿಕೊಳ್ಳಬೇಕೆಂದು ನನ್ನ ಮೇಲೆ ಹಲವಾರು ಆರೋಪಗಳನ್ನು ಹೊರಿಸಿ ಒತ್ತಾಯ ಮಾಡಿದ್ರಿ. ಆದರೆ ನಾನು ಮಗುವಿಗೆ ಜನ್ಮ ಕೊಡಲು ದೃಢ ಸಂಕಲ್ಪ ಮಾಡಿದ್ದೆ. ಪ್ರಸವದ ಕೋಣೆಯಲ್ಲಿ ನಾನು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ನೀವು ಕಾವ್ಯಾಳೊಂದಿಗೆ ಮೋಜು ಮಾಡುತ್ತಿದ್ರಿ. ನಾನು ಯಾವ ಸ್ಥಿತಿಯಲ್ಲಿ ಇದ್ದೇನೆಂದು ನೋಡಲು ಒಮ್ಮೆಯೂ ಬರಲಿಲ್ಲ. ನಾನು ಸತ್ತು ಹೋದರೆ ನಿಮ್ಮ ದಾರಿಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದುಕೊಂಡಿರಿ. ಇಂತಹ ಕಷ್ಟದ ಸಮಯದಲ್ಲಿ ಕವಿತಾ ಸಹಾಯ ಮಾಡದಿದ್ದಲ್ಲಿ ನಾನು ಸತ್ತೇಹೋಗುತ್ತಿದ್ದೆ.”

“ನನಗೆ ತೊಂದರೆ ಕೊಡಲು ನೀವು ಹೊಸ ಹೊಸ ವಿಧಾನಗಳನ್ನು ಹುಡುಕಿದ್ರಿ. ನೀವು ಆಗಾಗ ನನ್ನನ್ನು ಕಾವ್ಯಾಳೊಂದಿಗೆ ಹೋಲಿಕೆ ಮಾಡ್ತಿದ್ರಿ. ನಿಮ್ಮ ದೃಷ್ಟಿಯಲ್ಲಿ ನನ್ನ ಮುಖ, ಲಿಪ್‌ ಸ್ಟಿಕ್‌ ಹಚ್ಚುವ ರೀತಿ, ಹೇರ್‌ ಸ್ಟೈ‌ಲ್, ಡ್ರೆಸ್‌ ಮತ್ತು ಫಿಗರ್‌ ಎಲ್ಲವೂ ಅವಳ ಮುಂದೆ ಭಾರಿ ಸಪ್ಪೆ. ನನ್ನ ಪ್ರತಿಯೊಂದು ವಿಷಯದಲ್ಲೂ ತಪ್ಪು ಹುಡುಕುವುದು ನಿಮ್ಮ ಅಭ್ಯಾಸವಾಗಿತ್ತು. ಮೂರ್ಖಳು, ಹುಚ್ಚಳು, ಬುದ್ಧಿ ಇಲ್ಲದವಳು…. ನಿಮ್ಮ ಬಾಯಿಂದ ಹೊರಬಂದ ಇಂತಹ ಎಷ್ಟೊ ಶಬ್ದಗಳು ಬಾಣಗಳಂತೆ ನನ್ನ ಹೃದಯವನ್ನು ಇರಿದಿವೆ. ನಾನು ನಿಮ್ಮ ಶಬ್ದಾಲಂಕಾರದ ಅಗ್ನಿಯ ದಳಗೊಳಗೆ ಕೊತಕೊತನೆ ಕುದಿಯುತ್ತಿದ್ದೆ. ನಾನು ಅಷ್ಟು ಕೆಟ್ಟದಾಗಿದ್ದರೆ ನನ್ನನ್ನೇ ಏಕೆ ಮದುವೆಯಾದಿರಿ ಎಂದು ಕೇಳಿದರೆ ನನ್ನ ಮೇಲೆ ರೇಗಾಡುತ್ತಿದ್ರಿ.

“ ನನಗೆ ಈ ಜೀವನದಿಂದ ಬೇಸರ ಬಂದಿತ್ತು. ನನ್ನನ್ನು ಕತ್ತಲೆಯ ಕೊಠಡಿಯಲ್ಲಿ ಮುಚ್ಚಿಹಾಕಿದಂತೆ ಅನ್ನಿಸುತ್ತಿತ್ತು. ನನ್ನ ಕಣಕಣವನ್ನೂ ವಿಷದ ಚೇಳುಗಳು ಕಚ್ಚುತ್ತಿದ್ದಂತಿತ್ತು. ನನ್ನ ರಕ್ತದಲ್ಲಿ ವಿಷ ಕರಗಿಹೋಗಿತ್ತು. ಉಸಿರು ನಿಂತುಹೋಗುತ್ತಿತ್ತು. ಅಂತಹ ಸ್ಥಿತಿಯಲ್ಲಿ ನನ್ನ ಮಗಳ ಜೀವನ ಹಾಳಾಗುವುದು ಇಷ್ಟವಿರಲಿಲ್ಲ. ನಾನು ಅನುಭವಿಸಿದ ಕಷ್ಟಗಳು ನನ್ನ ಮಗಳಿಗೆ  ಉಂಟಾಗಬಾರದು. ನೀವಾಗಿಯೇ ಇಲ್ಲಿಂದ ಹೊರಟುಹೋಗಿ. ಇಲ್ಲದಿದ್ದರೆ ನಿಮ್ಮಂತಹ ನಾಚಿಕೆಗೆಟ್ಟ ಮನುಷ್ಯನನ್ನು ಕುತ್ತಿಗೆ ಹಿಡಿದು ಹೊರಗೆ ತಳ್ಳುವುದು ನನಗೆ ಚೆನ್ನಾಗಿ ಗೊತ್ತು. ಮತ್ತೆ ಇನ್ನೊಂದು ವಿಷಯ,” ನನ್ನತ್ತ ಬೆರಳು ತೋರಿಸಿ ಹುಲಿಯಂತೆ ಗರ್ಜಿಸಿದಳು, “ಮುಂದೆ ಮರೆತೂ ಇತ್ತ ತಲೆ ಹಾಕಬೇಡಿ! ಹಾಗೇನಾದರೂ ಬಂದರೆ ಉಳಿದಿರುವ ಜೀವನವನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡ್ತೀನಿ,” ಎಂದು ಹೇಳಿ ನನ್ನತ್ತ ನೋಡದೆ ಒಳಗೆ ಹೋಗಿ ನನ್ನ ಮುಖಕ್ಕೆ ರಪ್ಪನೆ ಬಡಿದಂತೆ ಬಾಗಿಲನ್ನು ಹಾಕಿಕೊಂಡಳು.

ನಾನು ಏನೂ ಮಾಡಲೂ ತೋಚದೆ ನಿಂತೇ ಇದ್ದೆ. ಮನುಷ್ಯನ ತಪ್ಪುಗಳು ನೆರಳಿನಂತೆ ಅವನನ್ನು ಹಿಂಬಾಲಿಸುತ್ತಲೇ. ಲಕ್ಷ ಪ್ರಯತ್ನಗಳ ನಂತರ ಪರಿಣಾಮವನ್ನು ಅನುಭವಿಸದೆ ಅವುಗಳಿಂದ ಅವನಿಗೆ ಮುಕ್ತಿ ಸಿಗುವುದಿಲ್ಲ. ನಿನ್ನೆ ನಾನು ಯಾರ ಮೌಲ್ಯವನ್ನು ಅರಿತಿರಲಿಲ್ಲಿ, ಇಂದು ಅವರ ದೃಷ್ಟಿಯಲ್ಲಿ ನನಗೆ ವೌಲ್ಯವಿಲ್ಲ. ಈ ಪ್ರಪಂಚ ಬಾವಿಯಂತೆ, ನಾವು ಹೇಗೆ ಕೂಗುತ್ತೇವೋ ಅದರಂತೆಯೇ ಪ್ರತಿಧ್ವನಿ ಬರುತ್ತದೆ. ನಾವು ಹೇಗೆ ಬೀಜ ಬಿತ್ತುತ್ತೇವೋ ಹಾಗೆಯೇ ಬೆಳೆಯನ್ನು ಕತ್ತರಿಸುತ್ತೇವೆ.  ಏಕಾಂತತೆಯ ಕಲ್ಪನೆ ನನ್ನ ಕಣ್ಣುಗಳಲ್ಲಿ ಸಾವಿನ ನೆರಳನ್ನು ಹೊತ್ತು ತಂದಿತು. ಅಲೆಮಾರಿ ಮೋಡದಂತೆ ನನ್ನನ್ನು ನಾನು ಎಳೆದುಕೊಳ್ಳುತ್ತಾ ಅಪರಿಚಿತ ರಸ್ತೆಯಲ್ಲಿ ಹೊರಟೆ. ಹೇಗೆ ಇದ್ದರೂ, ಈಗ ಇದೇ ಜೀವನ ನನ್ನ ತಪ್ಪುಗಳ ಬಗ್ಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ