ತಿಂಗಳಾನುಗಟ್ಟಲೆ ವಾದ ವಿವಾದ, ಎಳೆದಾಟದ ಬಳಿಕ ಕೊನೆಗೊಮ್ಮೆ ಬಲಾತ್ಕಾರ ತಡೆ ಮಸೂದೆ ಕಾನೂನಿನ ರೂಪವನ್ನೇನೋ ಪಡೆದುಕೊಂಡಿತು. ಆದರೆ ಈ ಕಾನೂನಿನಲ್ಲಿ ಈಗಲೂ ಅನೇಕ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಕಾನೂನು ಬಿಗಿ ಮಾಡುವ ಹೆಸರಿನಲ್ಲಿ ಸಾಕಷ್ಟು ಗೊಂದಲ ಗಲಾಟೆ ನಡೆದವು. ಅದೆಷ್ಟೋ ವಿಷಯಗಳಲ್ಲಿ ಒಮ್ಮತವೇ ಮೂಡುತ್ತಿರಲಿಲ್ಲ. ಅಂದಹಾಗೆ ಈ ಮಸೂದೆಯಲ್ಲಿ ಕೆಲವು ನೆಮ್ಮದಿ ನೀಡುವ ಸಂಗತಿಗಳೂ ಇವೆ. ಆ್ಯಸಿಡ್‌ ದಾಳಿಯನ್ನು ಅಪರಾಧದ ಶ್ರೇಣಿಯಲ್ಲಿ ತರಲಾಗಿದೆ.

ಅದಕ್ಕೂ ಮುಂಚೆ ಈ ಅಪರಾಧಕ್ಕಾಗಿ ಯಾವುದೇ ವಿಶೇಷ ಕಾನೂನುಗಳು ಇರಲಿಲ್ಲ. ಸೇಡು ತೀರಿಸಿಕೊಳ್ಳಲು ಇಷ್ಟೊಂದು ಗಂಭೀರ ಆರೋಪ ಮಾಡಿಯೂ ಸಾಧಾರಣ ಸಜೆ ಅನುಭವಿಸಿ ಅಪರಾಧಿಗಳು ಎದೆ ಸೆಟೆಸಿಕೊಂಡು ಊರೆಲ್ಲ ಸುತ್ತಾಡುತ್ತಿದ್ದರು. ಆದರೆ ಈಗ ಹೀಗಾಗುವುದಿಲ್ಲ. ಈಗ ಶಿಕ್ಷೆಯ ಕಟ್ಟುಪಾಡುಗಳನ್ನು ಅತ್ಯಂತ ಕಠೋರಗೊಳಿಸಲಾಗಿದೆ.ಈಗ ಎಫ್‌ಐಆರ್‌ ದಾಖಲು ಮಾಡಲು ನಿರಾಕರಿಸುವ ಪೊಲೀಸ್‌ ಸ್ಟೇಷನ್‌ ಹಾಗೂ ಬಲಾತ್ಕಾರಕ್ಕೆ ತುತ್ತಾದ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಮಹಿಳೆಯನ್ನು ಬಹಿರಂಗವಾಗಿ ನಿರ್ವಸ್ತ್ರಗೊಳಿಸಿ ಬೀದಿಯಲ್ಲಿ ಸುತ್ತಾಡಿಸುವುದಕ್ಕೂ ಕಡಿವಾಣ ಹೇರಲಾಗಿದೆ. ಈಗ ಕೇವಲ ಹೊರಗಡೆ ನಿರ್ವಸ್ತ್ರಗೊಳಿಸುವುದಷ್ಟೇ ಅಲ್ಲದೆ, ಮುಚ್ಚಿದ ಕೋಣೆಯಲ್ಲಿ ನಿರ್ವಸ್ತ್ರಗೊಳಿಸುವ ಪ್ರಯತ್ನವನ್ನು ಕೂಡ `ಬಲತ್ಕಾರ’ ಎಂದೇ ಭಾವಿಸಲಾಗುತ್ತದೆ.

ಇದರ ಹೊರತಾಗಿ ಈ ಕಾನೂನಿನಲ್ಲಿ ಕೆಲವು ಸೆಕ್ಷನ್‌ ಗಳಿದ್ದು, ಅವುಗಳಿಂದ ಕೆಲವರ ನಿದ್ದೆಯೇ ಹಾರಿಹೋಗಿಬಿಟ್ಟಿದೆ. ಯಾವುದೇ ಒಬ್ಬ ಮಹಿಳೆಯನ್ನು ಹಿಂಬಾಲಿಸುವುದು ಅಥವಾ ಕದ್ದುಮುಚ್ಚಿ ಆಕೆಯ ಫೋಟೊ ತೆಗೆದುಕೊಳ್ಳುವುದನ್ನು ಕೂಡ ಇದೇ ಶ್ರೇಣಿಯಲ್ಲಿ ಇಡಲಾಗಿದೆ. ಇಂತಹ ಅಪರಾಧಗಳಿಗೆ ಜಾಮೀನು ಕೂಡ ದೊರಕುವುದಿಲ್ಲ. ಇದೇ ಚಿಂತೆಯ ವಿಷಯ. ನಮ್ಮಲ್ಲಿ ಹುಡುಗಿಯರನ್ನು ದಿಟ್ಟಿಸಿ ನೋಡುವುದು ಹಾಗೂ ಹಿಂಬಾಲಿಸುವುದು ಒಂದು ಸಾಮಾನ್ಯ ಸಂಗತಿ ಎಂಬಂತಾಗಿಬಿಟ್ಟಿದೆ.

ಜನರ ಭಾವನೆಗಳೊಂದಿಗೆ ಚೆಲ್ಲಾಟ

ಬಾಲಾಪರಾಧ ಕಾನೂನಿಗೂ ತಿದ್ದುಪಡಿ ತರುವ ಕುರಿತಂತೆ ಸಾಕಷ್ಟು ಚರ್ಚೆಗಳು ಆದವು. ಒಂದು ಗಮನಾರ್ಹ ಸಂಗತಿಯೆಂದರೆ, ದೆಹಲಿಯ ಚಲಿಸುತ್ತಿರುವ ಬಸ್ಸಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಅಪ್ರಾಪ್ತ ವಯಸ್ಸಿನ. ಆತನಿಗೆ 18 ವರ್ಷವಾಗಲು ಇನ್ನು ಕೆಲವು ದಿನಗಳು ಇದ್ದವು. ಇದರ ಆಧಾರದ ಮೇಲೆ ಅವನಿಗೆ ಕಠೋರ ಶಿಕ್ಷೆಯಾಗುವುದಿಲ್ಲ. ಅವನೇ ದಾಮಿನಿಯ ಜೊತೆಗೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದ ಎಂದು ಹೇಳಲಾಗುತ್ತದೆ. ದೆಹಲಿ ಅತ್ಯಾಚಾರ ಪ್ರಕರಣದ ಒಬ್ಬ ಪ್ರಮುಖ ಆರೋಪಿ ಅಪ್ರಾಪ್ತ ವಯಸ್ಸಿನವ ಎಂದು ಗೊತ್ತಾಗುತ್ತಿದ್ದಂತೆ, ಸಮಾಜದ ಎಲ್ಲ ಕಡೆಯಿಂದಲೂ ಬಾಲಾಪರಾಧ ಕಾನೂನಿಗೂ ತಿದ್ದುಪಡಿ ತರುವಂತೆ ಒತ್ತಾಯಗಳು ಕೇಳಿಬಂದವು.

ಈ ಕುರಿತಂತೆ ಜನರು ಹೇಳುವುದೇನೆಂದರೆ, ಅಪರಾಧಿಗೆ ಸಜೆ ಅವನ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನಿರ್ಧರಿಸಬೇಕೇ ಹೊರತು, ಅವನ ವಯಸ್ಸು ನೋಡಿ ಅಲ್ಲ. ಆದರೆ ನಮ್ಮಿಂದ ಆರಿಸಿಹೋದ ಪ್ರತಿನಿಧಿಗಳು ಜನಸಾಮಾನ್ಯರ ಭಾವನೆಗಳಿಗೆ ಬೆಲೆ ಕೊಡಲೇ ಇಲ್ಲ. ಹೀಗಾಗಿ ಬಾಲಾಪರಾಧದ ಕಾನೂನಿಗೆ ತಿದ್ದುಪಡಿ ಆಗಲೇ ಇಲ್ಲ. ವರ್ಮಾ ಸಮಿತಿಯ ಶಿಫಾರಸುಗಳನ್ನು ಕೂಡ ಪರಿಪೂರ್ಣವಾಗಿ ಒಪ್ಪಲಿಲ್ಲ.

ಕಾನೂನು ಬಿಗಿಯಾಗಬೇಕು

ಹೈಕೋರ್ಟ್‌ ವಕೀಲರಾಗಿರುವ ಶಶಿಧರ್‌ ಹೀಗೆ ಹೇಳುತ್ತಾರೆ, ಬಲಾತ್ಕಾರಕ್ಕೆ ಸಂಬಂಧಪಟ್ಟಂತೆ ಕಾನೂನು ಮತ್ತಷ್ಟು ಬಿಗಿಯಾಗಬೇಕು. ಬಾಲಾಪರಾಧದ ಕಾನೂನಿಗೆ ತಿದ್ದುಪಡಿ ತರಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ಇತ್ತೀಚೆಗೆ ಜೀವನಶೈಲಿ ಹಾಗೂ ಆಹಾರದಲ್ಲಾದ ಬದಲಾವಣೆ ಹೊಸ ಪೀಳಿಗೆಯವರಲ್ಲೂ ಹಲವು ಬದಲಾವಣೆಗಳನ್ನು ತಂದಿದೆ. ಸಿನಿಮಾಗಳು ಹಾಗೂ ಟಿ.ವಿ.ಯ ಕೆಲವು ಕಾರ್ಯಕ್ರಮಗಳು ಅವರನ್ನು ಉತ್ತೇಜಿಸುತ್ತಿವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಲೈಂಗಿಕತೆಯ ಕಡೆ ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣದಿಂದ ಬಾಲಾಪರಾಧದ ಬಗ್ಗೆ ಹೊಸ ರೀತಿಯಲ್ಲಿ ವ್ಯಾಖ್ಯಾನ ಮಾಡಬೇಕಾದ ಅಗತ್ಯ ಇದೆ.

ಪ್ರಸ್ತುತ ಜುಲೆನೈಲ್ ‌ಜಸ್ಟಿಸ್‌ (ಕೇರ್‌ ಅಂಡ್‌ ಪ್ರೊಟೆಕ್ಷನ್‌ ಆಫ್‌ ಚಿಲ್ಡ್ರನ್‌) ಕಾನೂನಿನ 15(ಜಿ)ಯ ಪ್ರಕಾರ, ಅಪ್ರಾಪ್ತನ ವಯಸ್ಸು 16-18ರ ನಡುವೆ ಇದ್ದರೆ, ಅವನನ್ನು ಯಾವುದಾದರೂ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪರಿಗಣಿಸಿದರೆ, ಅವನನ್ನು ಗರಿಷ್ಠ 3 ವರ್ಷಗಳ ಕಾಲ ರಿಮ್ಯಾಂಡ್‌ ಹೋಮ್ ನಲ್ಲಿ ಇಡಬಹುದಾಗಿದೆ. ಆ ಬಳಿಕ ಅವನನ್ನು ಪ್ರೊಬೇಶನ್‌ ಮೇಲೆ ಬಿಡುಗಡೆಗೊಳಿಸಲಾಗುತ್ತದೆ. ಇದೇ ಕಾಯ್ದೆಯ ಕಲಂ 16ರ ಪ್ರಕಾರ, ಯಾವುದೇ ಅಪ್ರಾಪ್ತ ವಯಸ್ಸಿನ ಹುಡುಗನ ವಯಸ್ಸು 18ಕ್ಕಿಂತ ಹೆಚ್ಚಾಗಿದ್ದಲ್ಲಿ, ಅವನನ್ನು ರಿಮ್ಯಾಂಡ್‌ ಹೋಮ್ ಗೆ ಕಳಿಸಲಾಗುವುದಿಲ್ಲ. ದೆಹಲಿ ಸಾಮೂಹಿಕ ಬಲಾತ್ಕಾರ ಪ್ರಕರಣದ 6ನೇ ಆರೋಪಿಯನ್ನು ಅಪ್ರಾಪ್ತ ವಯಸ್ಸಿನವ ಎಂದು ಭಾವಿಸಲಾಗಿದೆ. ಅವನಿಗೆ ಕೆಲವೇ ತಿಂಗಳುಗಳ ಶಿಕ್ಷೆಯಷ್ಟೇ ಆಗುತ್ತದೆ.

ಬಾಲಾಪರಾಧದ ಲಭ್ಯವಿರುವ ಅಂಕಿಅಂಶಗಳು ಎಂಥವರ ಹಣೆಯ ಮೇಲೂ ಚಿಂತೆಯ ಗೆರೆಗಳನ್ನು ಮೂಡಿಸುವಂತಿವೆ. ದೇಶದ ಕ್ರೈಂ ಬ್ಯೂರೋದ ಅಂಕಿಅಂಶಗಳು ಏನು ಹೇಳುತ್ತವೆ ಸ್ವಲ್ಪ ನೋಡಿ. ಪ್ರತಿವರ್ಷ ಘಟಿಸುವ ಅಪರಾಧದ ಘಟನೆಗಳಲ್ಲಿ 34,000 ಮಕ್ಕಳು ಬಂಧಿಸಲ್ಪಡುತ್ತಾರೆ. ಇದರಲ್ಲಿ 32,000 ಹುಡುಗರು ಹಾಗೂ 2,000 ಹುಡುಗಿಯರಿರುತ್ತಾರೆ. ಆಶ್ಚರ್ಯದ ಸಂಗತಿಯೆಂದರೆ, ಅಪರಾಧದ ಕೃತ್ಯದಲ್ಲಿ ತೊಡಗುವವರ ಸರಾಸರಿ ವಯಸ್ಸು 16-18 ವರ್ಷವಾಗಿರುತ್ತದೆ. ಈ ವಯೋಮಾನದ ಬಾಲಾಪರಾಧಿಗಳ ಸಂಖ್ಯೆ ಶೇ.64ರಷ್ಟಾಗಿದೆ. ಅದೇ 12-16ನೇ ವಯೋಮಾನದವರ ಪ್ರಮಾಣ ಶೇ.33 ರಷ್ಟಿದೆ. 7-12 ವಯೋಮಾನದವರ ಪ್ರಮಾಣ ಶೇ.3ಕ್ಕಿಂತ ಸ್ವಲ್ಪ ಹೆಚ್ಚಿಗೆ ಇದೆ. ಅಂದಹಾಗೆ 2011ರಲ್ಲಿ ದೇಶದಲ್ಲಿ ವಿವಿಧ ಅಪರಾಧದಡಿ 33,887 ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಲಾಗಿತ್ತು. ನಿಜಕ್ಕೂ ಇದು ಚಿಂತೆಯ ವಿಷಯ.

ಆದರೆ ಸರ್ಕಾರದ ಪರವಾಗಿ ನೀಡುತ್ತಿರುವ ತರ್ಕವೇನೆಂದರೆ, ಯಾವುದೋ ಒಂದು ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಬಾಲಾಪರಾಧ ಕಾನೂನಿಗೆ ತಿದ್ದುಪಡಿ ಮಾಡುವುದೆಂದರೆ, ದೇಶದ ಇತರೆ ಮಕ್ಕಳಿಗೆ ಅನ್ಯಾಯ ಮಾಡಿದಂತೆ. ಬಾಲ ಆಯೋಗದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಮಕ್ಕಳ ಸಂಖ್ಯೆ 44 ಕೋಟಿ.

ಹೈಕೋರ್ಟಿನ ಮತ್ತೊಬ್ಬ ವಕೀಲ ನಾಗರಾಜ ಅವರು ಹೀಗೆ ಹೇಳುತ್ತಾರೆ, “1986ರ ತನಕ ಜುಲೆನೈಲ್ ಜಸ್ಟಿಸ್‌ ಆ್ಯಕ್ಟ್ ನಲ್ಲಿ ಅಪ್ರಾಪ್ತ ವಯಸ್ಸಿನವರ ವಯೋಮಿತಿ 16 ವರ್ಷ ಇತ್ತು. ಆದರೆ 1992ರ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ, ಅದನ್ನು 18ಕ್ಕೇರಿಸಲಾಗಿತ್ತು. ಇಂತಹ ಅಪರಾಧಗಳಿಗೆ ಹಿಂದುಳಿದಿರುವಿಕೆ, ಅನಕ್ಷರತೆ ಹಾಗೂ ಬಡತನ ಕಾರಣವಾಗಿದೆ ಎಂಬ ತರ್ಕ ಮಂಡಿಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಈ ತರ್ಕ ಒಂದಿಷ್ಟೂ ಸರಿಹೊಂದುವುದಿಲ್ಲ.

“ಕೆಲವು ಪ್ರಕರಣಗಳಲ್ಲಿ ಬಾಲಾಪರಾಧಿಗಳು ಶ್ರೀಮಂತ ಕುಟುಂಬಗಳಿಂದ ಬಂದಿರುತ್ತಾರೆ. ಬಾಲಾಪರಾಧದ ಪ್ರಕರಣಗಳಲ್ಲಿ ಬಡತನ, ಅನಕ್ಷರತೆ ಹಾಗೂ ಹಿಂದುಳಿದಿರುವಿಕೆಯ ಕಾರಣ ನೀಡಿ ತಪ್ಪಿಸಿಕೊಳ್ಳಲಾಗುವುದಿಲ್ಲ.”

ಲೈಂಗಿಕ ಸಂಬಂಧ ಹಾಗೂ ಪರಸ್ಪರ ಒಪ್ಪಿಗೆ

ಮಸೂದೆಯಲ್ಲಿ ಲೈಂಗಿಕ ಸಂಬಂಧ ಹೊಂದಲು ಪರಸ್ಪರ ಸಮ್ಮತಿಗೆ ವಯಸ್ಸಿನ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಅಂತಿಮ ನಿರ್ದೇಶನದಲ್ಲಿ ಅದನ್ನು 18 ವರ್ಷಗಳಿಂದ 16ನೇ ವರ್ಷಕ್ಕೆ ಇಳಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ವಿರೋಧ ಪಕ್ಷಗಳೂ ಸೇರಿದಂತೆ ಅನೇಕ ಚಿಕ್ಕಪುಟ್ಟ ಪಕ್ಷಗಳು ಇದನ್ನು ಪ್ರಬಲವಾಗಿ ವಿರೋಧಿಸಿದ್ದವು.

ಸಮಾಜ ಹಾಗೂ ಜೀವನಶೈಲಿಯಲ್ಲಿ ಆದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡ ನಮ್ಮ ದೇಶದ ಕಾನೂನು, ಮೊಟ್ಟ ಮೊದಲ ಬಾರಿಗೆ ಹದಿಹರೆಯದ ಹುಡುಗ ಹುಡುಗಿಯರಿಗೆ ತಮ್ಮದೇ ಆದ ಲೈಂಗಿಕ ಹಕ್ಕು ಇದೆಯೆನ್ನುವುದನ್ನು ಒಪ್ಪಿಕೊಂಡಿತು. ಅವರಿಗೆ ತಮ್ಮದೇ ದೇಹದ ಮೇಲೆ ಹಕ್ಕು ಇರಬೇಕು. ಇದೇ ಮೊದಲ ಬಾರಿಗೆ 16ನೇ ವರ್ಷಕ್ಕೆ ಈ ಹಕ್ಕನ್ನು ನೀಡುವ ಪ್ರಯತ್ನಗಳೂ ನಡೆದವು. ಆದರೆ ಅದಕ್ಕೆ ಮಾನ್ಯತೆ ನೀಡುವ ಪ್ರಶ್ನೆಗೆ ಸಮಾಜ ಹಾಗೂ ರಾಜಕಾರಣ ಅಡ್ಡಬಂತು. ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಟ್ಟಿತು.

ಅಂದಹಾಗೆ ನಮ್ಮ ಸಮಾಜ ಸಂಕೀರ್ಣ ಮನೋಭಾವ ಹೊಂದಿದೆ, ಸಂಪ್ರದಾಯ ವಾದಿಯಾಗಿದೆ. ಇದೇ ಕಾರಣದಿಂದ ನಮ್ಮ ನ್ಯಾಯಾಂಗ ವ್ಯವಸ್ಥೆ ಲೈಂಗಿಕ ಹಕ್ಕು ನೀಡುವ ಬದಲು ಕೇವಲ ಲೈಂಗಿಕ ಅಪರಾಧದ ಮೇಲೆಯೇ ತನ್ನ ಗಮನ ಕೇಂದ್ರೀಕರಿಸಿರುತ್ತದೆ. ಹಾಗೆಂದೇ 16 ವರ್ಷದ ಹುಡುಗಿಯೊಬ್ಬಳ ಮದುವೆಯನ್ನು ತನಗಿಂತ ಎರಡು ಮೂರು ಪಟ್ಟು ದೊಡ್ಡವನಾಗಿರುವ ಪುರುಷನೊಂದಿಗೆ ಮಾಡಿದರೂ ಕೂಡ ಆ ಮದುವೆಯನ್ನು ಅಧಿಕೃತ ಎಂದೇ ಭಾವಿಸಲಾಗುತ್ತದೆ. ಆದರೆ ಹುಡುಗಿಯೊಬ್ಬಳು 18ನೇ ವಯಸ್ಸಿನಲ್ಲಿ ಯಾವುದೋ ಹುಡುಗನ ಜೊತೆ ಓಡಿಹೋಗಿ ಮದುವೆ ಮಾಡಿಕೊಂಡರೆ ಕುಟುಂಬ ಹಾಗೂ ಸಮಾಜದ ಗೌರವ ಪ್ರತಿಷ್ಠೆಯ ನೆಪವೊಡ್ಡಿ ಹುಡುಗನ ಮೇಲೆ ಅಪಹರಣ ಅಥವಾ ಬಲಾತ್ಕಾರದ ಆರೋಪ ಹೊರಿಸಲಾಗುತ್ತದೆ.

ಧರ್ಮ ಹಾಗೂ ಸಮಾಜದ ಪಾತ್ರ

Anti-Rspe-bill

ಅಂದಹಾಗೆ, ನಮ್ಮ ಸಮಾಜದ ಸಮ್ಮುಖದಲ್ಲಿ ಒಂದು ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಅದೇನೆಂದರೆ, ಯಾವ ವಯಸ್ಸಿನಲ್ಲಿ ಮಾನಸಿಕವಾಗಿ ದೈಹಿಕ ಆಸೆಆಕಾಂಕ್ಷೆಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ನಿರ್ಮಾಣವಾಗುತ್ತದೆ? ಪ್ರಸ್ತುತ ಕಾನೂನಿನ ಪ್ರಕಾರ, 18 ವರ್ಷದ ನಾಗರಿಕನನ್ನು `ವಯಸ್ಕ’ ಎಂದು ಭಾವಿಸಲಾಗುತ್ತದೆ ಹಾಗೂ ಈ ಕಾನೂನಿನ ಪ್ರಕಾರ, ತನ್ನ ದೈಹಿಕ ಆಕಾಂಕ್ಷೆಯನ್ನು ತೀರಿಸಿಕೊಳ್ಳುವ ಲೈಸೆನ್ಲ್ ದೊರಕುತ್ತದೆ. ಆದರೆ ವ್ಯವಹಾರಿಕವಾಗಿ ನಮ್ಮ ದೇಶದಲ್ಲಿ ಈ ವಿಷಯದ ಕುರಿತಂತೆ ಇವರು ಸಾಕಷ್ಟು ಹಕ್ಕುಗಳು ಸಮಾಜ ಹಾಗೂ ನ್ಯಾಯಾಲಯದ ಬಳಿಯೇ ಇವೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾಜಿಕವಾಗಿ ದೈಹಿಕ ಅಪೇಕ್ಷೆಯನ್ನು ವೈವಾಹಿಕ ಎಂಬ ಕನ್ನಡಕದ ಮುಖಾಂತರ ನೋಡುವುದು ರೂಢಿಯಾಗಿಬಿಟ್ಟಿದೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಮದುವೆಯನ್ನು ತಂದೆತಾಯಿಗಳೇ ನಿರ್ಧರಿಸುತ್ತಾರೆ. ಕಾನೂನಿನ ದೃಷ್ಟಿಯಲ್ಲಿ ಹಿಂದೂ ವಿವಾಹ ಕಾನೂನಿನ ಪ್ರಕಾರ, ವಿವಾಹದ ವಯಸ್ಸು ಹುಡುಗಿಗೆ 18 ಹಾಗೂ ಹುಡುಗನಿಗೆ 21 ಎಂದು ನಿಗದಿಪಡಿಸಲಾಗಿದೆ. ಇಲ್ಲಿ ಒಂದು ಧಾರ್ಮಿಕ ರಿಯಾಯಿತಿ ಕೂಡ ನೀಡಲಾಗಿದೆ. ಅದೆಂದರೆ, 18 ಹಾಗೂ 21 ವರ್ಷಕ್ಕಿಂತ ಮುಂಚೆ ಮದುವೆ ನಡೆದಿದ್ದರೆ ಧಾರ್ಮಿಕ ರಾಜಕಾರಣದ ಪ್ರಕಾರ ಅದನ್ನು ಅನಧಿಕೃತ ಎಂದು ಪರಿಗಣಿಸುವುದಿಲ್ಲ. ಆದರೆ 16ಕ್ಕೂ ಮುಂಚೆ ಲೈಂಗಿಕ ಸಂಬಂಧ ಹೊಂದಲು ಕಾನೂನು ಖಂಡಿತವಾಗಿ ಅವಕಾಶ ನೀಡುವುದಿಲ್ಲ.

ಭಾರತೀಯ ಸಮಾಜದಲ್ಲಿ ಪ್ರತಿ ಐವರು ಹುಡುಗಿಯರಲ್ಲಿ ಒಬ್ಬ ಹುಡುಗಿಯ ಮದುವೆ 15 ವರ್ಷ ಅಥವಾ ಅದಕ್ಕೂ ಮುಂಚಿನ ವಯಸ್ಸಿನಲ್ಲಿಯೇ ನಡೆಯುತ್ತದೆ. ಅಷ್ಟೇ ಅಲ್ಲ, ಪ್ರತಿ ಇಬ್ಬರು ಹುಡುಗಿಯರಲ್ಲಿ ಒಬ್ಬ ಹುಡುಗಿಯ ಮದುವೆ 18 ವರ್ಷಕ್ಕೂ ಮುಂಚೆಯೇ ನಡೆದಿರುತ್ತದೆ ಹಾಗೂ ಮದುವೆಯಾದ 1 ವರ್ಷದಲ್ಲೇ ಆಕೆ ತಾಯಿಯಾಗಿರುತ್ತಾಳೆ. ಅದೇ ಷರೀಯತ್‌ನ ಬಗ್ಗೆ ಹೇಳಬೇಕೆಂದರೆ, ಋತುಚಕ್ರ ಶುರುವಾಗುತ್ತಿದ್ದಂತೆಯೇ ದೇಹ ಲೈಂಗಿಕ ಸಂಬಂಧಕ್ಕೆ ಅರ್ಹ ಎಂದು ಭಾವಿಸಲಾಗುತ್ತದೆ. ಈ ರೀತಿಯಾಗಿ ವ್ಯಾವಹಾರಿಕವಾಗಿ ದೇಹ ಹಾಗೂ ಲೈಂಗಿಕ ಅಪೇಕ್ಷೆಯ ಹೊಣೆಯನ್ನು ಧರ್ಮ ಹಾಗೂ ಸಮಾಜ ತನ್ನ ಹೆಗಲಿಗೆ ತೆಗೆದುಕೊಳ್ಳುತ್ತದೆ. ಆ ಸ್ಥಿತಿಯಲ್ಲಿ ಈಗಲೂ ಬದಲಾವಣೆಯಾಗಿಲ್ಲ.

ಕಾನೂನು ಏಕರೂಪವಾಗಿರಲಿ

ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಹೊಂದುವ ಪ್ರಶ್ನೆಯ ಬಗ್ಗೆ ಹೇಳಬೇಕೆಂದರೆ, ನಮ್ಮಲ್ಲಿ ಇದು ಹೊಸ ವಿಷಯವೇನೂ ಅಲ್ಲ. ಆಗಾಗ ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸಾಮಾನ್ಯವಾಗಿ ಭಾವಾವೇಷದಲ್ಲಿ ಮೈಮರೆತ ಹುಡುಗ ಹುಡುಗಿಯರು ಒಂದು ವೇಳೆ ಲೈಂಗಿಕ ಸಂಬಂಧದಲ್ಲಿ ಮೈ ಮರೆತರೆ ಒಬ್ಬರನ್ನೇ ತಪ್ಪಿತಸ್ಥರನ್ನಾಗಿಸುವುದಕ್ಕಿಂತ, ಯಾರ ನಡುವೆ ಸಂಬಂಧ ಏರ್ಪಟ್ಟಿರುತ್ತದೋ, ಅವರ ಆ ಪರಿಸ್ಥಿತಿಯ ಬಗೆಗೂ ಗಮನಹರಿಸಬೇಕು. ಈ ಕಾನೂನಿನಲ್ಲಿ ಅಂತಹದ್ದೇನೂ ಆಗಲಿಲ್ಲ. ಪರಸ್ಪರ ಸಮ್ಮತಿಯ ವಯಸ್ಸಿನ ಕುರಿತಂತೆ ಸ್ವತಃ ನಮ್ಮ ಸಂಸದರ ನಡುವೆಯೇ ಒಮ್ಮತ ಏರ್ಪಟ್ಟಿಲ್ಲ.

ಸಂಸದರ ಒಂದು ಗುಂಪಿನ ಪ್ರಕಾರ, ಮದುವೆಯ ಕಾನೂನಾತ್ಮಕ ವಯಸ್ಸು ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ಇದೆ. ಇಂತಹದರಲ್ಲಿ ಲೈಂಗಿಕ ಸಂಬಂಧಕ್ಕಾಗಿ ಪರಸ್ಪರ ಒಪ್ಪಿಗೆಯ ವಯಸ್ಸನ್ನು 16 ವರ್ಷಕ್ಕೆ ಇಳಿಸಿದರೆ ಅರಾಜಕ ಸ್ಥಿತಿ ನಿರ್ಮಾಣವಾಗುತ್ತದೆ. ಹದಿವಯಸ್ಸಿನ ಹುಡುಗ ಹುಡುಗಿಯರು ಕೆಟ್ಟುಹೋಗಲು ನಾವೇ ಕಾರಣರಾಗಬೇಕಾಗುತ್ತದೆ.

ಇಂತಹ ತರ್ಕ ಮಂಡಿಸುವವರ ಮುಂದೆ ಒಂದೇ ಒಂದು ದಾರಿ ಉಳಿಯುತ್ತದೆ. ಅದೆಂದರೆ, ಎಲ್ಲರಿಗೂ ಏಕರೂಪದ ಕಾನೂನು ರೂಪುಗೊಳ್ಳಬೇಕು. ಎಲ್ಲ ಜಾತಿ ಧರ್ಮದ ಹುಡುಗಿಯರಿಗೆ 18 ವರ್ಷ ಹಾಗೂ ಹುಡುಗರಿಗೆ 21 ವರ್ಷ ಎಂದು ನಿಗದಿಪಡಿಸಬೇಕು. ಯಾರಾದರೂ ನಿಗದಿಪಡಿಸಿದ ವಯೋಮಿತಿಯನ್ನು ಮೀರಿ ಮದುವೆಯಾದರೆ, ಅಂಥವರ ಮದುವೆಯನ್ನು ರದ್ದುಪಡಿಸಬೇಕು. ಈ ನಿಯಮವನ್ನು ಜಾರಿ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬೇಕು. ಒಂದು ವೇಳೆ ಹೀಗಾಗದಿದ್ದರೆ ಖಾಪ್‌ಪಂಚಾಯತ್‌ ಗಳು ಕೈಗೊಳ್ಳುವ ನಿರ್ಧಾರದ ಮೇಲೆ ನಿಯಂತ್ರಣ ಹೇರುವುದು ಕಷ್ಟವಾಗುತ್ತದೆ.

ಸಾಧನಾ ಸ್ವರೂಪ್‌.

ಕ್ರೈಂ ಬ್ಯೂರೋದ ಅಂಕಿಅಂಶಗಳು ಹೇಳುವುದೇನೆಂದರೆ, ನಮ್ಮಲ್ಲಿ ಘಟಿಸುವ ಅಪರಾಧ ಘಟನೆಗಳಲ್ಲಿ ಪ್ರತಿ ವರ್ಷ ಸುಮಾರು 34,000 ಮಕ್ಕಳು ಬಂಧಿಸಲ್ಪಡುತ್ತಾರೆ. ಇವರಲ್ಲಿ 2,000 ಹುಡುಗಿಯರು ಇರುತ್ತಾರೆ.

ಈ ಮಸೂದೆಯಲ್ಲಿ ಆ್ಯಸಿಡ್‌ ದಾಳಿಯನ್ನು ಅಪರಾಧದ ಶ್ರೇಣಿಯಲ್ಲಿ ತರಲಾಗಿದೆ. ಈ ಮುಂಚೆ ಈ ಅಪರಾಧಕ್ಕಾಗಿ ಯಾವುದೇ ವಿಶೇಷ ಕಾನೂನುಗಳಿರಲಿಲ್ಲ.

16-18 ವಯೋಮಿತಿಯ ಅಪರಾಧಿಗಳ ಸಂಖ್ಯೆ ಸುಮಾರು ಶೇ.64ರಷ್ಟಿದೆ. ಅದೇ 12-16ರ ನಡುವಿನ ಬಾಲಾಪರಾಧಿಗಳ ಪ್ರಮಾಣ ಶೇ.33ರಷ್ಟಿದೆ.

1986ರ ತನಕ ಜುಲೆನೈಲ್ ‌ಜಸ್ಟೀಸ್‌ ಆ್ಯಕ್ಟ್ ನಲ್ಲಿ 16 ವರ್ಷ ವಯಸ್ಸಿನವರನ್ನು ಅಪ್ರಾಪ್ತ ವಯಸ್ಸಿನವರು ಎಂದು ಪರಿಗಣಿಸಲಾಗುತ್ತದೆ. 1992ರಲ್ಲಿ ವಿಶ್ವಸಂಸ್ಥೆಯ ಒಂದು ಅಧಿವೇಶನ ಈ ವಯೋಮಿತಿಯನ್ನು 18ಕ್ಕೇರಿಸಿತು.

ಭಾರತೀಯ ಸಮಾಜದಲ್ಲಿ ಪ್ರತಿ ಐವರು ಹುಡುಗಿಯರಲ್ಲಿ ಒಬ್ಬಳ ಮದುವೆ 15 ಅಥವಾ ಅದಕ್ಕೂ ಮುಂಚೆಯೇ ಆಗುತ್ತದೆ. ಅಷ್ಟೇ ಅಲ್ಲ, ಪ್ರತಿ ಇಬ್ಬರು ಹುಡುಗಿಯರಲ್ಲಿ ಒಬ್ಬಳ ಮದುವೆ 18 ವರ್ಷಕ್ಕೂ ಮುಂಚೆಯೇ ಆಗುತ್ತದೆ. ಮದುವೆಯಾದ ಒಂದು ವರ್ಷದಲ್ಲಿಯೇ ಆಕೆ ತಾಯಿಯಾಗುತ್ತಾಳೆ.

ಸಂಸದರ ಪ್ರಕಾರ, ಲೈಂಗಿಕ ಸಂಬಂಧದ ಪರಸ್ಪರ ಒಪ್ಪಿಗೆಯ ವಯೋಮಿತಿಯನ್ನು 16ಕ್ಕೆ ಇಳಿಸಿದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಹದಿಹರೆಯದವರಿಗೆ ಲೈಂಗಿಕ ಸಂಬಂಧ ಹೊಂದಲು ಮುಕ್ತ ಸ್ವಾತಂತ್ರ್ಯ ಕೊಟ್ಟಂತಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ