ಸಾಮಾನ್ಯವಾಗಿ ನಶೆಯ ಬಗ್ಗೆ ಮಾತಾಡಿದರೆ ಮನಸ್ಸಿನಲ್ಲಿ ಮದ್ಯ, ಚರಸ್, ಹೆರಾಯಿನ್, ಬಂಗಿ, ಗಾಂಜಾ, ಸಿಗರೇಟು ಇತ್ಯಾದಿಗಳ ಚಿತ್ರ ಮೂಡುತ್ತದೆ. ನಶೆ ಪೀಡಿತ ವ್ಯಕ್ತಿಗಳಿಗೆ ಮೇಲೆ ಹೇಳಿದ ವಸ್ತುಗಳೆಲ್ಲಾ ನಶೆ ಬರಿಸುತ್ತಿರಬಹುದು. ಆದರೆ ಕಾಲ ಬದಲಾದಂತೆ ಬಹಳಷ್ಟು ವಸ್ತುಗಳು ಬದಲಾಗಿವೆ. ನಶೆಯೂ ಬದಲಾಗಿದೆ. ಹೊಸ ಪೀಳಿಗೆಯ ನಶೆ ಯಾವ ರೀತಿ ಇದೆ ಮತ್ತು ಹೇಗಿದೆ ಎಂದು ತಿಳಿಯೋಣ ಬನ್ನಿ.
ಮೆಡಿಕಲ್ ಅಡಿಕ್ಷನ್
ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರನ್ನು ಆಕ್ರಮಿಸುವ ಈ ನಶೆ ಸಾಕಷ್ಟು ದುಬಾರಿ. ಇದರ ವಶದಲ್ಲಿ ಸಿಕ್ಕಿಕೊಂಡರೆ ಜೇಬಿಗೆ ಕನ್ನ ಹಾಕಿದ ಹಾಗೆ. ಆದರೆ ನಶೆ ನಶೆಯೇ. ಒಮ್ಮೆ ಅದರ ಚಟ ಅಂಟಿಕೊಂಡರೆ ಬಿಡುವುದು ಕಷ್ಟ. ಮೆಡಿಕಲ್ ಅಡಿಕ್ಷನ್ ನಲ್ಲಿ ಮುಖ್ಯವಾಗಿ ದೈಹಿಕ ಬದಲಾವಣೆಯ ಇಚ್ಛೆ ಅಡಗಿರುತ್ತದೆ. ಸದಾ ಯೌವನವಂತರಾಗಿ ಸುಂದರವಾಗಿರಬೇಕೆಂಬ ಇಚ್ಛೆಯಲ್ಲಿ ಮಹಿಳೆಯರು ಈ ಹೊಸ ರೀತಿಯ ನಶೆಗೆ ದಾಸರಾಗುತ್ತಾರೆ.
ಬೋಟಾಕ್ಸ್
30 ವರ್ಷವಾಗುತ್ತಿದ್ದಂತೆಯೇ ಮಹಿಳೆಯರಲ್ಲಿ ಕಣ್ಣುಗಳ ಕೆಳಗೆ ನೆರಿಗೆಗಳು ಉಂಟಾಗುವುದು ಸಾಮಾನ್ಯ. ಒತ್ತಡ ಮತ್ತು ಸಿಕ್ಕುಗಳಿಂದ ತುಂಬಿದ ಜೀವನಶೈಲಿಯಲ್ಲಿ ಈ ನೆರಿಗೆಗಳು ವಯಸ್ಸಿಗೆ ಮುಂಚೆಯೇ ಕಾಣಿಸಿಕೊಳ್ಳುತ್ತವೆ. ಇಂದಿನ ಮಹಿಳೆಯರು ತಮ್ಮ ವಯಸ್ಸಿಗಿಂತ ದೊಡ್ಡವರಾಗಿ ಕಾಣುವುದನ್ನು ಹೇಗೆ ತಡೆದುಕೊಳ್ಳುತ್ತಾರೆ. ಅವರು ಯಾವಾಗಲೂ ತಮ್ಮ ವಯಸ್ಸಿಗಿಂತ 10-15 ವರ್ಷ ಚಿಕ್ಕವರಂತೆ ಕಾಣಲು ಇಚ್ಛಿಸುತ್ತಾರೆ. ಅವರ ಈ ಬಯಕೆಯನ್ನು ಪೂರ್ತಿ ಮಾಡಲು ಬೋಟಾಕ್ಸ್ ಪಣ ತೊಟ್ಟಿದೆ. ಬೋಟಾಕ್ಸ್ ನ ಮುಖ್ಯ ಕೆಲಸ ಕಣ್ಣುಗಳ ತೊಂದರೆಯನ್ನು ದೂರ ಮಾಡುವುದು. ಕಣ್ಣುಗಳ ಕೆಳಗಿನ ನೆರಿಗೆಗಳನ್ನು ದೂರ ಮಾಡುವ ಇದರ ಕಲೆ ಜನಪ್ರಿಯವಾಗಿದೆ. ಬೋಟಾಕ್ಸ್ ನ ಪ್ರಭಾವ 6 ತಿಂಗಳು ಇರುತ್ತದೆ. ಒಮ್ಮೆ ಇದರ ಇಂಜೆಕ್ಷನ್ ತೆಗೆದುಕೊಂಡರೆ ನೆರಿಗೆಗಳಿಂದ ಮುಕ್ತಿ ಸಿಗುತ್ತದೆ.
ಆದರೆ ಆರೋಗ್ಯ ಸಂಸ್ಥೆಗಳ ಮೂಲಕ ಮಾಡಿದ ಸಮೀಕ್ಷೆ ಪ್ರಕಾರ ಈಗ ಬೋಟಾಕ್ಸ್ ನ್ನು 20 ರಿಂದ 30 ವರ್ಷದವರೆಗಿನ ಯುವತಿಯರೂ ಉಪಯೋಗಿಸುತ್ತಿದ್ದಾರೆ. ಬೋಟಾಕ್ಸ್ ನ್ನು ಪದೇ ಪದೇ ಉಪಯೋಗಿಸಿದರೆ ಯಾವುದಾದರೂ ಅಪಾಯಕಾರಿ ಕಾಯಿಲೆಯನ್ನು ಆಹ್ವಾನಿಸಿದಂತೆ. ನಶೆಯ ರೂಪ ತಳೆದಿರುವ ಬೋಟಾಕ್ಸ್ ಮಹಿಳೆಯರ ತಲೆಯೇರಿ ಕುಳಿತಿದೆ. ಸೌಂದರ್ಯದ ನಶೆಯೆದುರು ಮಹಿಳೆಯರು ಯಾವುದೇ ಅಪಾಯವನ್ನು ಆಹ್ವಾನಿಸಲು ಸಿದ್ಧರಾಗಿದ್ದಾರೆ.
ಲೈಪೋಸಕ್ಷನ್
`ಟಶನ್' ಚಿತ್ರದಲ್ಲಿ ಕರೀನಾರ `ಝೀರೋ ಫಿಗರ್' ಕಂಡು ಯುವತಿಯರಿಗೆ ತಾವು ಆ ರೀತಿ ಆಗಬೇಕೆಂಬ ನಶೆ ಉಂಟಾಯಿತು. ಸುಂದರ ಮುಖದ ನಶೆ, ಸುಂದರ ಶರೀರದ ನಶೆ ಹೆಚ್ಚಾಯಿತು. ಅದಕ್ಕಾಗಿ ಯುವತಿಯರು ಏನೇನೆಲ್ಲಾ ಮಾಡಲು ಸಿದ್ಧ. ಯಾವುದೇ ಪರಿಶ್ರಮವಿಲ್ಲದೆ ಹಣದ ಬಲದಿಂದ ಸುಂದರ ರೂಪ ಪಡೆಯುವ ಬಯಕೆ ಮಹಿಳೆಯರಲ್ಲಿ ಹೆಚ್ಚಾಯಿತು.
ಲೈಪೋಸಕ್ಷನ್ ಹೆಸರಿನ ಈ ಸರ್ಜರಿ ಬಹಳ ದುಬಾರಿ. ಈ ವಿಧಾನದಿಂದ ತೊಡೆಗಳು, ಕೈ ಕಾಲುಗಳು, ಸೊಂಟ, ಹೊಟ್ಟೆ ಎಲ್ಲಾ ಭಾಗಗಳಿಂದ ಕೊಬ್ಬನ್ನು ತೆಗೆಯಲಾಗುತ್ತದೆ. ಇದಲ್ಲದೆ ತೂಕ ಕಡಿಮೆ ಮಾಡಲು ಮಹಿಳೆಯರು ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಅದು ಲೈಪೋಸಕ್ಷನ್ ಗೆ ಹೋಲಿಸಿದರೆ ಕೊಂಚ ಅಗ್ಗ. ಈ ಎರಡೂ ವಿಧಾನಗಳಲ್ಲಿ ಯಾವುದಾದರೂ ಸೈಡ್ ಎಫೆಕ್ಟ್ ಖಂಡಿತಾ ಇರುತ್ತದೆ. ಆದರೆ ಯುವತಿಯರಿಗೆ ಹತ್ತಿದ ಝೀರೋ ಫಿಗರ್ ನ ನಶೆ ಯಾವುದೇ ಅಪಾಯ ಎದುರಿಸಲು ಸಿದ್ಧವಾಗಿರುತ್ತದೆ.