ಒಂದು ಸಲ ಬಣ್ಣ ಹಚ್ಚಿಬಿಟ್ಟರೆ ಆಯಿತು, ಸಿನಿಮಾ ಲೋಕದಿಂದ ದೂರ ಸರಿಯಲು ಸಾಧ್ಯವೇ ಇಲ್ಲ. ಅನೇಕ ನಟಿಯರು ಇನ್ನು ಮುಂದೆ ನಟಿಸೋದಿಲ್ಲ ಎಂದು ಗೃಹಿಣಿಯರಾದರೂ ಒಂದಲ್ಲ ಒಂದು ಕಾರಣಕ್ಕೆ ಬಣ್ಣ ಹಚ್ಚಿ ಮರುಪ್ರವೇಶ ಪಡೆದಿದ್ದಾರೆ. ಬಣ್ಣದ ನಂಟು ಬಿಡಿಸಿಕೊಳ್ಳುವುದು ಬಹಳ ಕಷ್ಟ ಎನ್ನುತ್ತಾರೆ.

ಚಂದ್ರಿಕಾ ಎನ್ನುವ ನಟಿ ಕನ್ನಡ ಚಿತ್ರರಂಗದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದು ಬ್ರೇಕ್‌ಕೆ ಬಾದ್‌ ಎನ್ನುವಂತೆ ಬಿಗ್‌ ಬಾಸ್‌ ರಿಯಾಲಿಟಿ ಶೋ ನಂತರ!

ಚಂದ್ರಿಕಾಗೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೇ ಡ್ಯಾನ್ ಅಂದ್ರೆ ಪ್ರಾಣ. ಮನೆಯಲ್ಲೇ ರೆಕಾರ್ಡ್‌ ಹಾಕಿಕೊಂಡು ಡ್ಯಾನ್ಸ್ ಮಾಡೋ ಹುಚ್ಚು. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಚಂದ್ರಿಕಾ ನಿಂತಿದ್ದು ಯಾರ ಮುಂದೆ ಗೊತ್ತಾ? ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಎದುರು.`ಮಸಣದ ಹೂ’ ಚಿತ್ರೀಕರಣದ ಸಮಯದಲ್ಲಿ ಚಂದ್ರಿಕಾ (ಆಗ ಭಾರತಿ)ಗೆ ಮೇಕಪ್‌ ಟೆಸ್ಟ್ ಮತ್ತು ನಟನೆಯ ಪರೀಕ್ಷೆ ಮಾಡಲಾಗಿತ್ತು. ಹುಡುಗಿ ಮುದ್ದಾಗಿದ್ದಾಳೆ ಅಂತ ಒಂದು ಸಣ್ಣ ಪಾತ್ರ ಆ ಸ್ಥಳದಲ್ಲೇ ನೀಡಿಬಿಟ್ಟಿದ್ದರು.

“ನನಗೆ ಮುಂದಿನ ಚಿತ್ರಗಳಲ್ಲಿ ಒಳ್ಳೆ ಪಾತ್ರ ಕೊಡುತ್ತೇನೆ ಎಂದು ಪುಟ್ಟಣ್ಣಾಜಿ ಹೇಳಿದ್ದರು. ಮೊದಲ ಅವಕಾಶವೇ ಪುಟ್ಟಣ್ಣನಂಥವರ ಚಿತ್ರದಲ್ಲಿ ನಟಿಸಿದ್ದು ನನ್ನ ಅದೃಷ್ಟ.

“ಆದರೆ ಅವರ ಕಡೆಯ ಚಿತ್ರ ಅದೇ ಆದಾಗ ತುಂಬಾ ನೋವಾಯಿತು. `ಮಸಣದ ಹೂ’ ಚಿತ್ರೀಕರಣದ ಸಮಯದಲ್ಲಿ ಮದ್ರಾಸಿನಿಂದ ಬಂದಿದ್ದ ಛಾಯಾಗ್ರಾಹಕರು ನನ್ನ ಫೋಟೋವನ್ನು ಅಲ್ಲಿಯ ನಿರ್ಮಾಪಕರಿಗೆ ತೋರಿಸಿದಾಗ ತಮಿಳು ಚಿತ್ರದಿಂದ ಆಫರ್ಸ್‌ ಬಂದಿತು.

“ನನಗೆ ಕನ್ನಡ ಚಿತ್ರದಲ್ಲೇ ನಟಿಸಬೇಕೆಂಬ ಹಂಬಲ. `ತಾಯಿಗೊಬ್ಬ ತರ್ಲೆ ಮಗ’ ಚಿತ್ರದಲ್ಲಿ ಕಾಶೀನಾಥರ ಜೊತೆ ನಾಯಕಿಯಾಗಿ ನಟಿಸಿದೆ. ಜೈಜಗದೀಶ್‌, ಶ್ರೀನಿವಾಸ್‌ ಮೂರ್ತಿ  ನಿರ್ಮಾಪಕರು. ನನಗೆ ಚಂದ್ರಿಕಾ ಅಂತ ಹೆಸರು ಕೊಟ್ಟಿದ್ದು ಶ್ರೀನಿವಾಸಮೂರ್ತಿ ಅವರು. ಸುಮಾರು ಐವತ್ತು ಚಿತ್ರಗಳಲ್ಲಿ ನಟಿಸಿದ ಮೇಲೂ, ನಿರೀಕ್ಷಿಸಿದ ಹಾಗೆ ಪಾತ್ರಗಳು ಸಿಗದೇ ಹೋದಾಗ ನಾನು ಚಿತ್ರರಂಗದಿಂದ ದೂರ ಸರಿದೆ. ಆದರೆ ನನ್ನದೇ ಆದ ಬೇರೆ ಲೋಕ ಕಟ್ಟಿಕೊಂಡೆ.

“ಮದುವೆಯಾಗಿ ಮಗುವಾಯ್ತು. ಬದುಕಿನಲ್ಲಿ ಕಹಿ ಗಾಳಿಯೂ ಬೀಸಿತು. ನಾನು, ನನ್ನ ಮಗ ಆರ್ಯನ್‌…. ನಮ್ಮದೇ ಬದುಕು. ನಾನು ನನ್ನ ಕಾಲ ಮೇಲೆ ನಿಲ್ಲಬೇಕಿತ್ತು. ಮಾನಸಿಕವಾಗಿ, ಆರ್ಥಿಕವಾಗಿ ಭದ್ರವಾಗಬೇಕಿತ್ತು. ರಿಯಲ್ ಎಸ್ಟೇಟ್‌ ಮತ್ತು ಬಿಲ್ಡರ್‌ಆಗಿ ನನ್ನ ವೃತ್ತಿ ಶುರು ಮಾಡಿದೆ. ಸಿನಿಮಾರಂಗದತ್ತ ತಿರುಗಿ ನೋಡುತ್ತೇನೆಂದು ಸಹ ಅಂದುಕೊಂಡಿರಲಿಲ್ಲ. ಈ ನಡುವೆ ಒಂದೆರಡು ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡಿದ್ದೆ.

“ಈಗ ನನ್ನ ವೃತ್ತಿಯಲ್ಲಿ ನಾನೇ ಬಾಸ್‌. ಮಗನನ್ನು ನೋಡಿಕೊಳ್ಳೋದು, ಅವನ ಓದುಬರಹ, ಆಟಪಾಠ, ಎಲ್ಲದರ ಕಡೆ ಗಮನ ಕೊಡುವುದರಿಂದ ಅವನು ಶಿಸ್ತಿನ ಮಗುವಾಗಿ ಬೆಳೆದಿದ್ದಾನೆ,” ಎಂದು ಹೇಳುವ ಚಂದ್ರಿಕಾ, `ಬಿಗ್‌ ಬಾಸ್‌’ ಮನೆಯೊಳಗೆ ಹೋಗಿದ್ದು ಕೂಡ ಆಕಸ್ಮಿಕ. ಅವಕಾಶ ಬಂದಾಗ ಒಂದು ಕೈ ನೋಡಿಯೇ ಬಿಡೋಣ ಅಂತ ಧೈರ್ಯ ಮಾಡಿ ಬಂದ ಚಂದ್ರಿಕಾ ಒಬ್ಬ ಸ್ಟ್ರಾಂಗ್‌ ಸ್ಪರ್ಧಿಯಾಗಿ ಕಡೆಯವರೆಗೂ ವೀಕ್ಷಕರನ್ನು ರಂಜಿಸಿದ್ದಳು. ಇಂದು ಚಂದ್ರಿಕಾ ಎಲ್ಲ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ತಾರೆಯಾಗಿದ್ದಾಳೆ.

“ನೋಡಿ, `ಬಿಗ್‌ ಬಾಸ್‌’ ಮನೆಯಿಂದ ಹೊರಬಂದ ನಂತರ ನಾನು ನನ್ನ ವ್ಯವಹಾರಗಳತ್ತ ಗಮನಹರಿಸತೊಡಗಿದೆ. ಸಿನಿಮಾ ರಂಗದಿಂದ ಸಾಕಷ್ಟು ಆಫರ್ಸ್‌ ಬಂತು, ಇನ್ನೂ ಬರ್ತಾ ಇದೆ. ನಾನು ಎಲ್ಲ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ಬ್ರೇಕ್ ತಗೊಂಡು ಬಂದಿರುವಾಗ ಒಂದೊಳ್ಳೆ ಪಾತ್ರ ಸಿಕ್ಕರೆ ಮಾಡಬಹುದು.

“ಅಕ್ಕ, ಅತ್ತಿಗೆ ಅಂತ ಬಂದು ಹೋಗುವ ರೋಲ್ ‌ಗಳು ನನಗಿಷ್ಟವಿಲ್ಲ. ಹಾಗಂತ ನಾನು ನಾಯಕಿ ಪಾತ್ರವನ್ನು ಕೊಡಿ ಅಂತ ಕೇಳುವುದಿಲ್ಲ. ನನ್ನ ಇಮೇಜಿಗೆ, ವಯಸ್ಸಿಗೆ ತಕ್ಕಂತೆ ಎಲ್ಲರ ಗಮನ ಸೆಳೆಯುವಂಥ ಪಾತ್ರ ಸಿಕ್ಕರೆ ಖಂಡಿತ ನಟಿಸುವೆ. ಈಗಾಗಲೇ ಅಂಥವೊಂದು ಪಾತ್ರ ಬಂದಿದೆ. ಸ್ಕ್ರಿಪ್ಟ್ ಕೇಳಿದ ನಂತರ ಒಪ್ಪಿಕೊಳ್ಳುವೆ.”

ವ್ಯವಹಾರದಲ್ಲಿ ಸಾಕಷ್ಟು ಪಳಗಿರುವ ಚಂದ್ರಿಕಾ, ನೀವೇ ಏಕೆ ಒಂದು ಸಿನಿಮಾ ನಿರ್ಮಿಸಿ, ನಟಿಸಿ, ನಿರ್ದೇಶಿಸಬಾರದು?

ಮಾಡಿದರೆ ಒಳ್ಳೆ ಸಿನಿಮಾ ಮಾಡಬೇಕು. ಬಜೆಟ್‌ ಚಿಕ್ಕದಾಗಿದ್ದರೂ ಒಳ್ಳೆ ಚಿತ್ರ ಮಾಡಬೇಕು. ನಿರ್ದೇಶನ ಮಾಡುವ ಆಸೆ ನನಗೂ ಇದೆ. ಆದರೆ ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತ ಅದರ ಬಗ್ಗೆ ಯೋಚಿಸಬಹುದು.

ಸಿನಿಮಾರಂಗದಲ್ಲಿ ಸ್ನೇಹಿತರಿಲ್ಲವೇ?

ಅಯ್ಯೋ…. ಬಹಳ ವರ್ಷಗಳಾಗಿಬಿಟ್ಟಿದೆ, ಟಚ್‌ ಬಿಟ್ಟುಹೋಗಿದೆ. ಸದ್ಯಕ್ಕಂತೂ ಯಾರೂ ಫ್ರೆಂಡ್ಸ್ ಇಲ್ಲ. ಹೊಸಬರೇ ಜಾಸ್ತಿ ಇದ್ದಾರೆ, `ಬಿಗ್‌ ಬಾಸ್‌’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರಿಂದ ಎಲ್ಲ ಸ್ಪರ್ಧಿಗಳ ಜೊತೆ ಬೆರೆಯುವಂತಾಯಿತು. ಜಯಲಕ್ಷ್ಮಿ ನನ್ನ ಒಳ್ಳೆ ಫ್ರೆಂಡ್‌ ಆಗಿದ್ದಾರೆ. ಆಕೆ ಒಳ್ಳೆಯ ಹೆಣ್ಣುಮಗಳು. ಲೈಫ್ ನಲ್ಲಿ ಚೆನ್ನಾಗಿ ಸೆಟಲ್ ಆಗಬೇಕು, ಒಳ್ಳೆ ಗಂಡು ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.

ಇಂಡಸ್ಟ್ರೀಗೆ ಹಿಂತಿರುಗಿ ಬಂದದ್ದು ಖುಷಿ ಅನಿಸಿದೆಯಾ?

ಅದೇನು ಋಣವೇ….. ಮತ್ತೆ ನನ್ನನ್ನು ಬಣ್ಣದ ಲೋಕಕ್ಕೆ ಕರೆದು ತಂದಿದೆ. ನನ್ನ ಬಗ್ಗೆ ಅಷ್ಟೊಂದು ಅಭಿಮಾನವಿಟ್ಟುಕೊಂಡಿರುವ ಎಲ್ಲ ಹೆಣ್ಣುಮಕ್ಕಳಿಗಾಗಿ ಒಳ್ಳೆ ಪಾತ್ರ ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ.

ಲಾಸ್ಟ್ ಬಟ್ನಾಟ್ಲೀಸ್ಟ್, ನಿಮ್ಮ ರೀ ಎಂಟ್ರಿಯ ಬಗ್ಗೆ ಒಂದಿಷ್ಟು….?

ಹೌದು, ನಾನೀಗ ಹೊಸ ಡೈರೆಕ್ಟರ್‌ ಕೃಷ್ಣ ಲೇಖನ ಅವರ `ಚತುರ್ಭುಜ’ ಚಿತ್ರದಲ್ಲಿ ಒಂದು ಹಾಟ್‌ ಐಟಮ್ ಮಾಡಿದ್ದೀನಿ. ಇದರ ಕೊರಿಯೋ ಗ್ರಾಷಿಕ್‌ ಮದನ್‌ ಹರಿಣಿ.

ಆಲ್ ದಿ ಬೆಸ್ಟ್ ಚಂದ್ರಿಕಾ!

ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ