ಒಂದು ಸಲ ಬಣ್ಣ ಹಚ್ಚಿಬಿಟ್ಟರೆ ಆಯಿತು, ಸಿನಿಮಾ ಲೋಕದಿಂದ ದೂರ ಸರಿಯಲು ಸಾಧ್ಯವೇ ಇಲ್ಲ. ಅನೇಕ ನಟಿಯರು ಇನ್ನು ಮುಂದೆ ನಟಿಸೋದಿಲ್ಲ ಎಂದು ಗೃಹಿಣಿಯರಾದರೂ ಒಂದಲ್ಲ ಒಂದು ಕಾರಣಕ್ಕೆ ಬಣ್ಣ ಹಚ್ಚಿ ಮರುಪ್ರವೇಶ ಪಡೆದಿದ್ದಾರೆ. ಬಣ್ಣದ ನಂಟು ಬಿಡಿಸಿಕೊಳ್ಳುವುದು ಬಹಳ ಕಷ್ಟ ಎನ್ನುತ್ತಾರೆ.
ಚಂದ್ರಿಕಾ ಎನ್ನುವ ನಟಿ ಕನ್ನಡ ಚಿತ್ರರಂಗದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದು ಬ್ರೇಕ್‌ಕೆ ಬಾದ್ ಎನ್ನುವಂತೆ ಬಿಗ್ ಬಾಸ್ ರಿಯಾಲಿಟಿ ಶೋ ನಂತರ!
ಚಂದ್ರಿಕಾಗೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೇ ಡ್ಯಾನ್ ಅಂದ್ರೆ ಪ್ರಾಣ. ಮನೆಯಲ್ಲೇ ರೆಕಾರ್ಡ್ ಹಾಕಿಕೊಂಡು ಡ್ಯಾನ್ಸ್ ಮಾಡೋ ಹುಚ್ಚು. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಚಂದ್ರಿಕಾ ನಿಂತಿದ್ದು ಯಾರ ಮುಂದೆ ಗೊತ್ತಾ? ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಎದುರು.`ಮಸಣದ ಹೂ' ಚಿತ್ರೀಕರಣದ ಸಮಯದಲ್ಲಿ ಚಂದ್ರಿಕಾ (ಆಗ ಭಾರತಿ)ಗೆ ಮೇಕಪ್ ಟೆಸ್ಟ್ ಮತ್ತು ನಟನೆಯ ಪರೀಕ್ಷೆ ಮಾಡಲಾಗಿತ್ತು. ಹುಡುಗಿ ಮುದ್ದಾಗಿದ್ದಾಳೆ ಅಂತ ಒಂದು ಸಣ್ಣ ಪಾತ್ರ ಆ ಸ್ಥಳದಲ್ಲೇ ನೀಡಿಬಿಟ್ಟಿದ್ದರು.
``ನನಗೆ ಮುಂದಿನ ಚಿತ್ರಗಳಲ್ಲಿ ಒಳ್ಳೆ ಪಾತ್ರ ಕೊಡುತ್ತೇನೆ ಎಂದು ಪುಟ್ಟಣ್ಣಾಜಿ ಹೇಳಿದ್ದರು. ಮೊದಲ ಅವಕಾಶವೇ ಪುಟ್ಟಣ್ಣನಂಥವರ ಚಿತ್ರದಲ್ಲಿ ನಟಿಸಿದ್ದು ನನ್ನ ಅದೃಷ್ಟ.
``ಆದರೆ ಅವರ ಕಡೆಯ ಚಿತ್ರ ಅದೇ ಆದಾಗ ತುಂಬಾ ನೋವಾಯಿತು. `ಮಸಣದ ಹೂ' ಚಿತ್ರೀಕರಣದ ಸಮಯದಲ್ಲಿ ಮದ್ರಾಸಿನಿಂದ ಬಂದಿದ್ದ ಛಾಯಾಗ್ರಾಹಕರು ನನ್ನ ಫೋಟೋವನ್ನು ಅಲ್ಲಿಯ ನಿರ್ಮಾಪಕರಿಗೆ ತೋರಿಸಿದಾಗ ತಮಿಳು ಚಿತ್ರದಿಂದ ಆಫರ್ಸ್ ಬಂದಿತು.
``ನನಗೆ ಕನ್ನಡ ಚಿತ್ರದಲ್ಲೇ ನಟಿಸಬೇಕೆಂಬ ಹಂಬಲ. `ತಾಯಿಗೊಬ್ಬ ತರ್ಲೆ ಮಗ' ಚಿತ್ರದಲ್ಲಿ ಕಾಶೀನಾಥರ ಜೊತೆ ನಾಯಕಿಯಾಗಿ ನಟಿಸಿದೆ. ಜೈಜಗದೀಶ್, ಶ್ರೀನಿವಾಸ್ ಮೂರ್ತಿ ನಿರ್ಮಾಪಕರು. ನನಗೆ ಚಂದ್ರಿಕಾ ಅಂತ ಹೆಸರು ಕೊಟ್ಟಿದ್ದು ಶ್ರೀನಿವಾಸಮೂರ್ತಿ ಅವರು. ಸುಮಾರು ಐವತ್ತು ಚಿತ್ರಗಳಲ್ಲಿ ನಟಿಸಿದ ಮೇಲೂ, ನಿರೀಕ್ಷಿಸಿದ ಹಾಗೆ ಪಾತ್ರಗಳು ಸಿಗದೇ ಹೋದಾಗ ನಾನು ಚಿತ್ರರಂಗದಿಂದ ದೂರ ಸರಿದೆ. ಆದರೆ ನನ್ನದೇ ಆದ ಬೇರೆ ಲೋಕ ಕಟ್ಟಿಕೊಂಡೆ.

``ಮದುವೆಯಾಗಿ ಮಗುವಾಯ್ತು. ಬದುಕಿನಲ್ಲಿ ಕಹಿ ಗಾಳಿಯೂ ಬೀಸಿತು. ನಾನು, ನನ್ನ ಮಗ ಆರ್ಯನ್.... ನಮ್ಮದೇ ಬದುಕು. ನಾನು ನನ್ನ ಕಾಲ ಮೇಲೆ ನಿಲ್ಲಬೇಕಿತ್ತು. ಮಾನಸಿಕವಾಗಿ, ಆರ್ಥಿಕವಾಗಿ ಭದ್ರವಾಗಬೇಕಿತ್ತು. ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಆಗಿ ನನ್ನ ವೃತ್ತಿ ಶುರು ಮಾಡಿದೆ. ಸಿನಿಮಾರಂಗದತ್ತ ತಿರುಗಿ ನೋಡುತ್ತೇನೆಂದು ಸಹ ಅಂದುಕೊಂಡಿರಲಿಲ್ಲ. ಈ ನಡುವೆ ಒಂದೆರಡು ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡಿದ್ದೆ.
``ಈಗ ನನ್ನ ವೃತ್ತಿಯಲ್ಲಿ ನಾನೇ ಬಾಸ್. ಮಗನನ್ನು ನೋಡಿಕೊಳ್ಳೋದು, ಅವನ ಓದುಬರಹ, ಆಟಪಾಠ, ಎಲ್ಲದರ ಕಡೆ ಗಮನ ಕೊಡುವುದರಿಂದ ಅವನು ಶಿಸ್ತಿನ ಮಗುವಾಗಿ ಬೆಳೆದಿದ್ದಾನೆ,'' ಎಂದು ಹೇಳುವ ಚಂದ್ರಿಕಾ, `ಬಿಗ್ ಬಾಸ್' ಮನೆಯೊಳಗೆ ಹೋಗಿದ್ದು ಕೂಡ ಆಕಸ್ಮಿಕ. ಅವಕಾಶ ಬಂದಾಗ ಒಂದು ಕೈ ನೋಡಿಯೇ ಬಿಡೋಣ ಅಂತ ಧೈರ್ಯ ಮಾಡಿ ಬಂದ ಚಂದ್ರಿಕಾ ಒಬ್ಬ ಸ್ಟ್ರಾಂಗ್ ಸ್ಪರ್ಧಿಯಾಗಿ ಕಡೆಯವರೆಗೂ ವೀಕ್ಷಕರನ್ನು ರಂಜಿಸಿದ್ದಳು. ಇಂದು ಚಂದ್ರಿಕಾ ಎಲ್ಲ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ತಾರೆಯಾಗಿದ್ದಾಳೆ.





