ಸಾವಿತ್ರಮ್ಮನ ಮನೆಯಂಗಳದಲ್ಲಿ ಮಂಗಳ ವಾದ್ಯದ ಸದ್ದು ಮಧುರವಾಗಿ ಕೇಳಿಬರತ್ತಿತ್ತು. ಮನೆ ತುಂಬಾ ಉಲ್ಲಾಸದ ವಾತಾವರಣ. ಮದುಮಗಳು ಶೃತಿ ಹಾಗೂ ಮದುಮಗ ಅರುಣ್ ಅನುರೂಪದ ಜೋಡಿಯಂತೆ ಕಂಗೊಳಿಸುತ್ತಿದ್ದರು.
ಅರುಣನ ಕೈ ಹಿಡಿದ ಶೃತಿಗೆ ತುಂಬಾ ಸಂತಸವಾಗಿತ್ತು. ಆದರೆ ದಿನ ಕಳೆದಂತೆಲ್ಲ ಶೃತಿ ಮತ್ತು ಅರುಣ್ ಮಧ್ಯೆ ಅದ್ಯಾವುದೋ ಒಂದು ಅಸಮಾನತೆಯ ಭಾವ ಗೋಚರಿಸತೊಡಗಿತ್ತು. ಶೃತಿ ಆಧುನಿಕ ಮನೆತನದಿಂದ ಬಂದ ಬುದ್ಧಿವಂತ ಹುಡುಗಿಯಾಗಿದ್ದರೆ, ಅರುಣ್ ಕುಟುಂಬ ಪಾರಂಪರಿಕ ಸಂಪ್ರದಾಯಸ್ಥ ಮನೆತನ. ಅರುಣ್ ವ್ಯಕ್ತಿಗತ ಒಬ್ಬ ಎಂಜಿನಿಯರ್ ಆಗಿದ್ದರೂ ಕೂಡ, ಆತನ ವ್ಯಕ್ತಿತ್ವದಲ್ಲಿ ಮೂಢತೆಯ ಪ್ರಭಾವಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಶೃತಿಗೆ ಇನ್ನೂ ನೆನಪಿನಲ್ಲಿದೆ, ಅದೊಂದು ದಿನ ಮದುವೆಯಾದ ಹೊಸತರಲ್ಲಿ ಅರುಣನೊಂದಿಗೆ ಹೊರಗಡೆ ಸುತ್ತಾಡಲೂ ಹೊರಟಾಗ ಅವಳ ಓರಗಿತ್ತಿ ಅಡ್ಡಗಾಲು ಹಾಕಿದ್ದಳು, “ಶೃತಿ, ಮನೆಗೆ ಹೊಸದಾಗಿ ಬಂದ ಸೊಸೆ ನೀನು. ಶಾಸ್ತ್ರಿಗಳು ಮುಹೂರ್ತ ಹೇಳುವವರೆಗೂ ಹೊರ ಹೊಗುವಂತಿಲ್ಲ! ಇದು ಈ ಮನೆಯ ಸಂಪ್ರದಾಯ,” ಎನ್ನುತ್ತ ಶೃತಿ ಹಾಗೂ ಅರುಣರತ್ತ ಕೊಂಕು ದೃಷ್ಟಿ ಬೀರಿ ಕತ್ತು ಕುಣಿಸುತ್ತ ಒಳ ನಡೆದಿದ್ದಳು.
ಅವಳ ಮಾತಿಗೆ ಕಿವಿಗೊಟ್ಟ ಅರುಣ್ ತಾನೂ ಸುತ್ತಾಡಲು ಹೋಗುವ ಕಾರ್ಯಕ್ರಮನ್ನು ರದ್ದುಗೊಳಿಸಿದ್ದನ್ನು ಕಂಡು ಶೃತಿಗೆ ವೇದನೆಯಾಯಿತು.
ಪ್ರತಿದಿನ ಏನಾದರೊಂದು ಘಟನೆ ನಡೆಯುತ್ತಲೇ ಇತ್ತು. ಶೃತಿಯ ಮನಸ್ಸು ಇದೆಲ್ಲವನ್ನು ಪ್ರತಿಭಟಿಸುತ್ತಲಿತ್ತು. ಆದರೆ ತಾನು ಆ ಮನೆಗೆ ಹೊಸಬಳು ಎಂಬ ಕಾರಣಕ್ಕೆ ನಿಯಂತ್ರಿಸಿಕೊಂಡಿದ್ದಳು. ಪ್ರತಿಯೊಂದು ಚಟುವಟಿಕೆಗಳಿಗೂ ಸಾವಿತ್ರಮ್ಮ ಶಾಸ್ತ್ರಿಗಳಿಂದ ಘಳಿಗೆ, ಮುಹೂರ್ತ ವಿಚಾರಿಸದೇ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರಂತೂ ಶಾಸ್ತ್ರಿಗಳು ಹೇಳುವ ಆಚರಣೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಇದರಿಂದಾಗಿ ಆ ಶಾಸ್ತ್ರಿಗಳ ಮನೆಗೆ ಅದೆಷ್ಟು ಗುರುದಕ್ಷಿಣೆ, ಪೂಜಾಫಲಗಳು ತಲುಪಿವೆಯೋ ಲೆಕ್ಕವಿಲ್ಲ!
ಕ್ರಮೇಣ ದಿನಗಳು ಉರುಳತೊಡಗಿದವು. ಶೃತಿ ಅರುಣನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಆದರೆ ಬಾಲ್ಯದಿಂದಲೇ ಆತ ಮನೆಯ ಸಾಂಪ್ರದಾಯಿಕ ಮೌಢ್ಯತೆಗೆ ಹೊಂದಿಕೊಂಡವನಾಗಿದ್ದ, ಆದ್ದರಿಂದ ಆತನು ಆ ಮೂಢ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಶೃತಿಯ ಕಾಲುಗಳು ಊದಿಕೊಂಡಿರುವ ಸುದ್ದಿ ಕೇಳಿ ಮನೆತುಂಬ ಹಬ್ಬದ ವಾತಾವರಣ ಕಳೆಗಟ್ಟಿತು. ತಕ್ಷಣ ಶೃತಿಯ ಅತ್ತೆ ಸಾವಿತ್ರಮ್ಮ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿಸಿ, ಅರ್ಚನೆ ಕೂಡ ಮಾಡಿಸಿ ಬಂದರು. ಈ ಸುದ್ದಿ ತಿಳಿಯುತ್ತಿದ್ದಂತೆ ರಾಮಾ ಜೋಯಿಸ ಶಾಸ್ತ್ರಿ ತನ್ನ ಪಂಚಾಂಗ ಪತ್ರಿಕೆಗಳೊಂದಿಗೆ ಹಾಜರಾಗಿಯೇಬಿಟ್ಟ.
ಹೊಟ್ಟೆ ತುಂಬಾ ತಿಂದೂ ಉಂಡೂ ಆದ್ಮೇಲೆ ತನ್ನ ಭಾರಿ ಗುಡಾಣದಂತಹ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, “ನೋಡು ಮಗಳೆ, ಇನ್ಮುಂದೆ ನೀನು ನಿನ್ನ ಸೊಸೆಯ ಬಗ್ಗೆ ತುಂಬಾ ಜಾಗೃತಳಾಗಿರಬೇಕು.
“ಮುಂದಿನ 9 ತಿಂಗಳಂತೂ ಅವಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಹೂರ್ತ ನೋಡದೆ ಅವಳನ್ನು ಹೊರಗೆ ಕಳುಹಿಸಬಾರದು. ಇನ್ನೇನೂ ಹೆಚ್ಚುಕಡಿಮೆ ಆಗಬಾರದು ಅನ್ನುವ ಕಾರಣಕ್ಕೆ ಮಾತ್ರ ಒಂದು ಪೂಜೆ ಮಾಡಿಸಲೇಬೇಕು!” ಎಂದ ಶಾಸ್ತ್ರಿ “ಯಾವ ಪೂಜೆ ಹೇಳಿ ಶಾಸ್ತ್ರಿಗಳೇ? ಹುಟ್ಟಿ ಬರುವ ಹೊಸ ಜೀವಕ್ಕಾಗಿ ನಾನು ಏನು ಮಾಡಲೂ ತಯಾರಾಗಿದ್ದೇನೆ!” ಎಂದು ಆತುರದಿಂದ ಸಾವಿತ್ರಮ್ಮ ರಾಮ ಜೋಯಿಸರ ಕಾಲು ಮುಟ್ಟಿ ನಮಸ್ಕರಿಸಿದರು. ರಾಮ ಜೋಯಿಸ ಶಾಸ್ತ್ರಿ ಮುಗುಳ್ನಗುತ್ತಾ, ಇನ್ನೇನು ಒಂದು ವರ್ಷಕ್ಕಾಗುವಷ್ಟು ಆದಾಯ ಒಂದೇ ಏಟಿಗೆ ಬಂದುಬಿಟ್ಟಿತು ಎಂದು ಒಳಗೊಳಗೆ ಖುಷಿಪಡುತ್ತಾ, “ನೋಡಮ್ಮ, ಈಗಷ್ಟೇ ಸೊಸೆಯ ಕಾಲುಗಳು ಊದಿಕೊಂಡಿವೆ ಎಂದರೆ, ಮುಂದಿನ 9 ತಿಂಗಳಲ್ಲೂ ತೊಂದರೆಯಾಗದಂತೆ ಹೋಮ ಮಾಡಿದರೆ ಸಾಕು, ಎಲ್ಲಾ ಸರಿಹೋಗುತ್ತದೆ,” ಎಂದ.
“ಎಷ್ಟು ಖರ್ಚಾದೀತು ಶಾಸ್ತ್ರಿಗಳೇ?” ಎಂದರು ಸಾವಿತ್ರಮ್ಮ.
“ಹೆಚ್ಚು ಕಡಿಮೆ ಐದು ಸಾವಿರ ಆದೀತು! ಹವನಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ತರಿಸಿಬಿಡಿ. ಮತ್ತೆ ನನ್ನ ಜೊತೆಗೆ ಇನ್ನೂ ನಾಲ್ಕು ಜನ ಪುರೋಹಿತರೂ ಬರುತ್ತಾರೆ,” ಎಂದು ಶಾಸ್ತ್ರಿ ಮುನ್ಸೂಚನೆಯನ್ನು ನೀಡಿಬಿಟ್ಟ.
ಹಣ ತೆಗೆದುಕೊಂಡು ಬಂದು ಶಾಸ್ತ್ರಿಯ ಕೈಗೆ ಒಪ್ಪಿಸಿದ ಸಾವಿತ್ರಮ್ಮ, “ ತೆಗೆದುಕೊಳ್ಳಿ ಶಾಸ್ತ್ರಿಗಳೇ, ಇನ್ನು ಮುಂದಿನ ಜವಾಬ್ದಾರಿಯೆಲ್ಲ ನಿಮಗೇ ಬಿಟ್ಟಿದ್ದು. ಆದಷ್ಟು ಬೇಗ ಹೋಮ ಮಾಡಿಬಿಡಿ,” ಎಂದರು.
“ನೀನೇನು ಚಿಂತಿಸಬೇಡ ಮಗಳೇ ನಿಮಗೆಲ್ಲರಿಗೂ ಒಳ್ಳೆಯದೇ ಆಗುತ್ತದೆ,” ಎನ್ನುತ್ತಾ ಶಾಸ್ತ್ರಿ ತನ್ನ ಜೋಳಿಗೆಯನ್ನು ಎತ್ತಿಕೊಂಡು ಹೊರಡಲನುವಾದ.
ಇದನ್ನೆಲ್ಲ ಕಣ್ಣಾರೆ ಕಂಡ ಶೃತಿ ತುಂಬ ನೊಂದುಕೊಂಡಳು. ಧೈರ್ಯದಿಂದ ಸಾವಿತ್ರಮ್ಮನ ಬಳಿ ಹೋಗಿ, “ಅಮ್ಮಾ, ಇಂತಹ ವೈಜ್ಞಾನಿಕ ಯುಗದಲ್ಲೂ ನೀವು ಈ ಶಾಸ್ತ್ರಿಗಳ ಹೋಮ, ಹವನಗಳನ್ನೆಲ್ಲ ನಂಬುತ್ತೀರಲ್ಲ! ಇದು ಮೂಢನಂಬಿಕೆಯಲ್ಲವೇ?” ಎಂದು ಕೇಳಿದಳು.
“ನೋಡು ಶೃತಿ, ನೀನೇನೋ ಆಧುನಿಕ ಜಗತ್ತಿನವಳು ಅಂತ ನಮಗೂ ಗೊತ್ತು, ಆದರೆ ನಾವು ಪ್ರಪಂಚ ಕಂಡಿದ್ದೇವೆ. ನಮ್ಮ ಕೂದಲೇನು ಬಿಸಿಲಿನ ತಾಪಕ್ಕೆ ಬೆಳ್ಳಗಾಗಿಲ್ಲ! ಇನ್ನು ಮುಂದೆ ಇಂತಹ ವಿಷಯಗಳಿಗೆ ನೀನು ತಲೆ ಹಾಕದಿದ್ದರೇನೆ ಒಳ್ಳೆಯದು,” ಎಂದು ಖಡಕ್ಕಾಗಿಯೇ ಹೇಳಿದರು ಸಾವಿತ್ರಮ್ಮ.
ಶೃತಿ ತೆಪ್ಪಗಾದಳು. ಇನ್ನು ಅತ್ತೆಗೆ ಏನು ತಿಳಿಹೇಳಿದರೂ ಪ್ರಯೋಜನವಿಲ್ಲ ಎಂದು ನಿರ್ಧರಿಸಿದಳು. ಅತ್ತೆ ಅಷ್ಟೇ, ಏನೂ ಪ್ರಯೋಜನವಿಲ್ಲ ಎಂದು ಮನಗಂಡಳು.
ಕೆಲವು ದಿನಗಳು ಕಳೆದ ನಂತರ ರಾಮಾ ಜೋಯಿಸ ಶಾಸ್ತ್ರಿ ತನ್ನೊಂದಿಗೆ ಇನ್ನೂ ನಾಲ್ಕು ಜನ ಪುರೋಹಿತರನ್ನು ಕರೆದುಕೊಂಡು ಹೋಮ ಮಾಡಲು ಬಂದು ಕುಳಿತ. ಸಾವಿತ್ರಮ್ಮ ಅವರೆಲ್ಲರನ್ನೂ ಅತ್ಯಾದರದಿಂದ ಬರಮಾಡಿಕೊಂಡು ಪಾದ ಮುಟ್ಟಿ ನಮಸ್ಕರಿಸಿದರು.
“ಶಾಸ್ತ್ರಿಗಳೇ, ಈ ಹೋಮ ಮಾಡಿಸುವುದರಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದಲ್ಲವೇ?” ಎಂದು ಸಾವಿತ್ರಮ್ಮ ಕೇಳಿದರು.
“ಹೌದು ಮಗಳೆ, ಎಲ್ಲಾ ಮಂಗಳವಾಗುತ್ತೆ!” ಎಂದ ಶಾಸ್ತ್ರಿ.
ಶೃತಿ ಕೂಡ ಅರುಣ್ ನೊಂದಿಗೆ ಹೋಮದಲ್ಲಿ ಕುಳಿತುಕೊಳ್ಳಬೇಕಾಯಿತು. ಢೋಂಗಿ ಶಾಸ್ತ್ರಿಯನ್ನು ಕಂಡು ಶೃತಿಯ ಮನಸ್ಸು ಧಿಕ್ಕರಿಸತೊಡಗಿತ್ತು. ಜೊತೆಗೆ ಕುಟುಂಬ ಸದಸ್ಯರನ್ನು ಮೂಢನಂಭಿಕೆಯ ಚಕ್ರವ್ಯೂಹದಿಂದ ಹೊರತರಲು ಆಗುತ್ತಿಲ್ಲವಲ್ಲ ಎಂದೂ ಮರುಗತೊಡಗಿದಳು.
ಹೋಮ ಮುಗಿದ ನಂತರ, ಶಾಸ್ತ್ರಿಗಳು ತಂತಮ್ಮ ದಾನ, ಧರ್ಮ, ದಕ್ಷಿಣಾದಿಗಳನ್ನೆಲ್ಲ ಜೋಳಿಗೆಯಲ್ಲಿ ತುಂಬಿಕೊಂಡು ಹೊರಟು ಹೋದರು.
ರಾತ್ರಿ ಹೊತ್ತು ಶೃತಿ ಅರುಣನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದಳು, “ನೋಡಿ ಅರುಣ್, ಇದೆಲ್ಲ ಮೂಢತನ. ಹೋಮ, ಹವನ, ಪೂಜೆ, ಪುನಸ್ಕಾರ ಎಂದು ಇಷ್ಟೆಲ್ಲ ಸಮಯ ಹಾಳುಮಾಡುವುದು, ಹಣ ವ್ಯರ್ಥಗೊಳಿಸುವುದು ಸರಿಯಲ್ಲ. ಈಗಿನ ಕಾಲದಲ್ಲಿ ಡಾಕ್ಟರ್ ಗಳೇ ಮಗು ಆರೋಗ್ಯವಾಗಿ ಜನಿಸುತ್ತದೊ, ಇಲ್ಲವೋ ಎಂದು ಹೇಳಿಬಿಡುತ್ತಾರೆ. ಈ ಶಾಸ್ತ್ರಿಗಳು ನಮಗೆ ಎಲ್ಲಿಯೂ ಗೋಚರಿಸದ ಗ್ರಹಗಳ ಚಲನವಲನದ ಸುಳಿಯಲ್ಲಿ ಸಿಲುಕಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.”
“ಅಲ್ಲಾ ಶೃತಿ, ಅಮ್ಮ ಆಗಲಿ, ಕುಟುಂಬದ ಇತರೆ ಸದಸ್ಯರಾಗಲಿ ನಿನ್ನ ಒಳ್ಳೆಯದಕ್ಕೋಸ್ಕರವೇ ಇದನ್ನೆಲ್ಲ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲಾ ಶುಭಕಾರ್ಯಗಳನ್ನು ಶಾಸ್ತ್ರಿಗಳನ್ನು ಕೇಳಿಯೇ ಮಾಡುವುದು ಸಂಪ್ರದಾಯ. ಆದ್ದರಿಂದ ಈ ವಿಚಾರದಲ್ಲಿ ನೀನು ಮೌನವಾಗಿರುವುದೇ ಒಳ್ಳೆಯದು,” ಎಂದು ಅರುಣ್ ಕೋಪದಿಂದಲೇ ಪ್ರತಿಕ್ರಿಯಿಸಿದ.
ಕಾಲ ಕಳೆದಂತೆಲ್ಲ, ಶೃತಿಗೆ ತಾನು ಅಸಹಾಯಕಳು ಎಂಬಂತೆ ಭಾಸವಾಗತೊಡಗಿತು. ಆದರೆ ಡಾ. ಸೀಮಾಳ ಹತ್ತಿರ ಚೆಕಪ್ ಗೆಂದು ಹೋದಾಗೆಲ್ಲ ಎಲ್ಲಾ ಆರೋಗ್ಯವಾಗಿದೆ ಎಂದು ತಿಳಿದ ನಂತರ ನಿರುಮ್ಮಳವಾಗುತ್ತಿದ್ದಳು.
2 ತಿಂಗಳ ನಂತರ, ಒಂದು ದಿನ ಮಧ್ಯಾಹ್ನ ಮನೆಯ ಕರೆಗಂಟೆ ಶಬ್ದ ಮಾಡಿತ್ತು. ಸಾವಿತ್ರಮ್ಮ ಬಾಗಿಲು ತೆರೆದಾಗ, ಬಾಗಿಲಲ್ಲಿ ಒಬ್ಬ ಶಾಸ್ತ್ರಿ ನಿಂತಿದ್ದ. ಖಾವಿ ಪಂಚೆ ಉಟ್ಟು, ಹಣೆಯ ಮೇಲೆ ಢಾಳಾಗಿ ವಿಭೂತಿ ಬಳಿದುಕೊಂಡು, ಜನಿವಾರ ಧರಿಸಿದ ಆಸಾಮಿ ಕೈಯಲ್ಲಿ ಪಂಚಾಗ ಪತ್ರಿಕೆಗಳು ಇದ್ದವು. ಒಳನುಗ್ಗಲು ಕಾತರಿಸುತ್ತಿದ್ದ ಶಾಸ್ತ್ರಿಯನ್ನು ಕಂಡ ಸಾವಿತ್ರಮ್ಮ, “ತಮ್ಮ ಪರಿಚಯ ಆಗಲಿಲ್ಲವಲ್ಲ ಶಾಸ್ತ್ರಿಗಳೇ?” ಎಂದರು.
ಶಾಸ್ತ್ರಿಯು ಮನೆಯ ಒಳಭಾಗದಲ್ಲಿ ದೃಷ್ಟಿ ಹರಿಸುತ್ತ, “ಕಂಟಕ…. ದೊಡ್ಡ ಕಂಟಕ ಕಾದಿದೆ ಮಗಳೇ! ಈ ಮನೆಯ ಎದುರಿನಿಂದ ಹೋಗುತ್ತಿರಬೇಕಾದರೆ, ಈ ಮನೆಗೆ ಬರುತ್ತಿರುವ ಹೊಸ ಜೀವವೊಂದಕ್ಕೆ ಭಾರಿ ಕಂಟಕ ಕಾದಿದೆ ಎಂದು ನಮಗೆ ದೈವ ಸಂದೇಶ ದೊರಕಿದೆ. ಆ ಜೀವದ ಗ್ರಹಗತಿ ಒಂದಿನಿತೂ ಚೆನ್ನಾಗಿಲ್ಲ! ಅದಕ್ಕೇನಾದರೂ ಉಪಾಯ ಮಾಡೀಬೇಕು.”
“ಆದರೆ ಶಾಸ್ತ್ರಿಗಳೇ ಮೊನ್ನೆಯಷ್ಟೇ….” ಎಂದು ಸಾವಿತ್ರಮ್ಮ ಇನ್ನೇನೋ ಹೇಳುವಷ್ಟರಲ್ಲಿಯೇ ಆ ಆಸಾಮಿ, “ಮಾತನಾಡಬೇಡ ಮಗಳೇ! ನೀನು ಪಂಡಿತ ದೀನಾನಾಥನ ಹೆಸರು ಕೇಳಿರುವೆಯಾ? ನಾನೇ ಅವನು! ನನ್ನ ಮಾತು ಯಾವತ್ತೂ ಹುಸಿಯಾಗಿಲ್ಲ. ನನ್ನ ಮಾತನ್ನು ನಿರ್ಲಕ್ಷಿಸಿದರೆ ಅನರ್ಥವಾದೀತು, ಎಚ್ಚರ…” ಎಂದು ದಬಾಯಿಸಿದ. ಇದೆಲ್ಲ ಕೇಳಿ ದಿಗಿಲುಗೊಂಡ ಆಕೆ. “ಅಯ್ಯೋ ನೀವು ಹೇಗೆ ಹೇಳುವಿರೋ ಹಾಗೆಯೇ ಮಾಡೋಣ ಬನ್ನಿ ಶಾಸ್ತ್ರಿಗಳೆ!” ಎಂದು ಒಳಗೆ ಆಹ್ವಾನಿಸಿದರು. ಇದನ್ನೆಲ್ಲ ಕಣ್ಣಾರೆ ಕಂಡು, ಕೇಳಿಸಿಕೊಂಡ ಶೃತಿ ಹಣೆ ಚಚ್ಚಿಕೊಂಡಳು. ಮತ್ತದೇ ಕಥೆ ನಡೆಯುವುದೆಂದು ಅವಳಿಗೆ ಮನದಟ್ಟಾಯಿತು. ಬೀದೀಲಿ ಹೋಗುವವರೆಲ್ಲ ಮನೆಗೆ ನುಗ್ಗಿ ಪೂಜೆ ಪುನಸ್ಕಾರಗಳ ನೆಪವೊಡ್ಡಿ ಹಗಲು ದರೋಡೆ ಮಾಡುತ್ತಿದ್ದಾರಲ್ಲ… ಇದೆಂತಹ ವಿಡಂಬನೆ? ತಾನೇನೋ ಹೇಳಬೇಕು ಎನ್ನುವಷ್ಟರಲ್ಲಿ ಸಾವಿತ್ರಮ್ಮ ದುರುಗುಟ್ಟಿಕೊಂಡು ಅವಳನ್ನೇ ನೋಡತೊಡಗಿದ್ದರು, “ಶೃತಿ, ಶಾಸ್ತ್ರಿಗಳಿಗೆ ಹಣ್ಣು, ಹಾಲು ತೆಗೆದುಕೊಂಡು ಬಾ,” ಎಂದು ಆದೇಶಿಸಿದರು.
ಮೂಕವೇದನೆ ಅನುಭವಿಸುತ್ತಿದ್ದ ಶೃತಿ ತೆಪ್ಪಗೆ ಒಳಗೆ ಹೋದಳು. ಏನು ಮಾಡಬೇಕೆಂಬುದೆ ಅವಳಿಗೆ ಹೊಳೆಯಲಿಲ್ಲ .ಇತ್ತ ಶಾಸ್ತ್ರಿಗಳು ಪಂಚಾಂಗ ಬಿಡಿಸಿಕೊಂಡು ಕುಳಿತು ಗ್ರಹಗತಿಗಳ ಲೆಕ್ಕಾಚಾರ ಆರಂಭಿಸಿದ್ದರು, “ನಿನ್ನ ಸೊಸೆಗೆ ಈಗ ನಾಲ್ಕು ತಿಂಗಳು ತುಂಬಿವೆಯಲ್ಲ ಮಗಳೇ? ಸೊಸೆಯ ರಾಶಿ ಯಾವುದು?” ಎಂದು ಸಾವಿತ್ರಮ್ಮನನ್ನು ಪ್ರಶ್ನಿಸಿದರು.“ಹ್ಞಾ… ತುಲಾ ರಾಶಿ,” ಎಂದು ಉತ್ತರಿಸಿದರು.
“ಬಹುದೊಡ್ಡ ಗಂಡಾಂತರ ಕಾದಿದೆ ಮಗಳೇ! ತಾಯಿ ಮತ್ತು ಮಗುವನ್ನು ಸಂರಕ್ಷಿಸಲು ಏನಾದರೊಂದು ಪರಿಹಾರ ಮಾಡಲೇಬೇಕು! ಒಂದಿಷ್ಟು ದಾನಧರ್ಮ ನೀಡಿದರೆ ಸಾಕು, ನಾನೇ ಪರಿಹಾರ ಮಾಡುತ್ತೇನೆ,” ಎಂದು ಮನದಲ್ಲೇ ಕಪಟ ನಗೆ ಬೀರುತ್ತ ಸಾವಿತ್ರಮ್ಮನಿಗೆ ಹೇಳಿದ ಶಾಸ್ತ್ರಿ.
ಹೊಟ್ಟೆ ತುಂಬಾ ಹಣ್ಣು, ಹಾಲು ಸೇವಿಸಿ ಅನಾಮತ್ತು 1,100 ರೂಪಾಯಿ ದಕ್ಷಿಣೆ ಪಡೆದ ಶಾಸ್ತ್ರಿ ಅಲ್ಲಿಂದ ಹೊರಟು ಹೋದ. ಆಗಲೇ ಅರುಣ್ ಮನೆಗೆ ಬಂದನು. ಎಲ್ಲ ವಿಷಯ ಕೇಳಿ ಆತನಿಗೂ ಸಮಾಧಾನವಾಯಿತು.
“ಹೋಗಲಿ ಬಿಡಮ್ಮ , ದಾರಿಯಲ್ಲಿ ಹೋಗುವವನಾದ್ರೂ ನಮ್ಮ ಮನೆ ಬಗ್ಗೆ ಮುತುರ್ಜಿ ತೋರಿದನಲ್ಲ! ” ಎಂದ. ಈ ವಿಚಾರದಲ್ಲಿ ಇವರಿಗೆ ಯಾವುದೇ ರೀತಿಯ ಬುದ್ಧಿವಾದ ಹೇಳುವುದರಲ್ಲಿ ಅರ್ಥವೇ ಇಲ್ಲ ಎಂದುಕೊಂಡಳು ಶೃತಿ.
ಹೀಗೆಯೇ ದಿನಗಳು ಉರುಳತೊಡಗಿದವು. ಯಾರೊಬ್ಬರಿಗೂ ಗೊತ್ತಾಗದ ವಿಷಯ ಏನೆಂದರೆ, ಬೀದಿಯಲ್ಲಿ ಹೋಗುತ್ತಿದ್ದ ದಾಸಯ್ಯ ಮನೆಗೆ ನುಗ್ಗಿ ಎರಡು ಬಣ್ಣದ ಮಾತನಾಡಿ ಹೋದವನು ಬೇರಾರೂ ಅಲ್ಲ, ಪಂಡಿತ ರಾಮಾ ಜೋಯಿಸ ಶಾಸ್ತ್ರಿಯ ಶಿಷ್ಯನೆಂದು. ಆತನಿಗೆ ಶೃತಿ ಬಗ್ಗೆ ಹಾಗೂ ಸಾವಿತ್ರಮ್ಮನ ಕುಟುಂಬದ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಇದೀಗ, ಯಾವುದೇ ಕೇಡು ಉಂಟಾಗುವುದಿಲ್ಲವೆಂದು ಎಲ್ಲರೂ ನಿಶ್ಚಿಂತೆಯಿಂದ ಇದ್ದರು.
ಒಂದು ದಿನ ಶೃತಿ ಅಡುಗೆಮನೆಯಲ್ಲಿದ್ದಾಗ ರಾಮಾ ಜೋಯಿಸ ಶಾಸ್ತ್ರಿಯ ಧ್ವನಿ ಕೇಳಿಸಿತು. ಮತ್ತದೇ ಪ್ರಕ್ರಿಯೆ ಜರುಗುವುದು ಎಂದು ಶೃತಿಗೆ ಮನದಟ್ಟಾಯಿತು.
ಶೃತಿಗೆ ನವಮಾಸ ತುಂಬಿದವು. ಅವಳ ಅತ್ತೆ ಶಾಸ್ತ್ರಿಗಳನ್ನು ಕರೆಸಿದ್ದರು. ತನ್ನ ಅತ್ತೆ ಹಾಗೂ ಶಾಸ್ತ್ರಿಗಳ ಸಂಭಾಷಣೆ ಕೇಳಿ ಶೃತಿ ದಿಗಿಲುಗೊಂಡಳು. ಅಬ್ಬಾ ಇದೆಂತಹ ಮೌಢ್ಯ? ಇದೆಂತಹ ವಿಚಿತ್ರ ಸಂಪ್ರದಾಯ ಎಂದುಕೊಂಡಳು. ಅವಳತ್ತೆ ಶೃತಿಯ ಜನ್ಮ ಕುಂಡಲಿಯನ್ನು ತೋರಿಸುತ್ತ, ಮಗು ಯಾವ ಶುಭ ಘಳಿಗೆಯಲ್ಲಿ ಜನಿಸಿದರೆ ಅದಕ್ಕೆ ಮೇಧಾವಿತನ, ಪ್ರತಿಭಾವಂತಿಕೆ ಹಾಗೂ ದೀರ್ಘಾಯುಷ್ಯ ದೊರೆಯುತ್ತದೆ? ಎಂದು ಕೇಳುತ್ತಿದ್ದರು. ಶಾಸ್ತ್ರಿಗಳು ಕುಂಡಲಿಯನ್ನು ಕಂಡು ಗ್ರಹಗತಿಗಳ ಲೆಕ್ಕಾಚಾರ ಹಾಕತೊಡಗಿದ್ದರು. ಅತ್ತ ಶೃತಿ ಆಂದೋಲನಕ್ಕೆ ಒಳಗಾಗಿದ್ದಳು. ಇದ್ಯಾವ ಮೂಢನಂಬಿಕೆ, ಇದೇನು ಹುಚ್ಚಾಟ? ಪ್ರಕೃತಿಯ ನೀತಿ ನಿಯಮಗಳಲ್ಲೂ ಮನಷ್ಯ ತನ್ನ ಹಸ್ತಕ್ಷೇಪ ಮಾಡುವಂತಾಯಿತಲ್ಲ! ಎಂದು ವ್ಯಥೆಪಟ್ಟಳು.
ಒಂದು ಮಗು ಜನಿಸಿ ಭೂಮಿಗೆ ಬರುವುದೆಂದರೆ ಅದೊಂದು ನೈಸರ್ಗಿಕ ಪ್ರಕ್ರಿಯೆ, ಅದರ ಮೇಲೂ ಗ್ರಹಗಳ ಚಲನವಲನೆಯ ದೋಷಾರೋಪ ಮಾಡುತ್ತಿರುವುದನ್ನು ಕಂಡು ಎಂತಹ ವಿದ್ಯಾವಂತರೂ ದಿಗ್ಭ್ರಮೆಗೊಳ್ಳುವಂತೆ ಆಯಿತು. ಇದೆಲ್ಲವನ್ನೂ ಪ್ರತ್ಯಕ್ಷ ಅನುಭವಿಸಿದ ಶೃತಿ ಹೇಗಾದರೂ ಸರಿ ಇವರ ಮೂಢ ಸಂಪ್ರದಾಯವನ್ನು ಹೋಗಲಾಡಿಸಬೇಕೆಂದು ನಿರ್ಧರಿಸಿದಳು. ಸುಮಾರು ಹೊತ್ತು ಆಲೋಚಿಸಿ ಕೊನೆಗೆ ಒಂದು ಯೋಜನೆಯನ್ನು ರೂಪಿಸಿ ಜಾರಿಗೆ ತರಲು ಕಾರ್ಯತತ್ಪರಳಾದಳು. ತನ್ನ ಯೋಜನೆಯಲ್ಲಿ ಡಾ.ಸೀಮಾಳನ್ನು ಸೇರಿಸಿಕೊಳ್ಳಲು ನಿರ್ಧರಿಸಿದಳು. ಏಕೆಂದರೆ ಸೀಮಾ ಇಲ್ಲದೆ, ಅವಳ ಯೋಜನೆ ಸಂಭವವಿರಲಿಲ್ಲ. ಎರಡೇ ದಿನಗಳಲ್ಲಿ ಶೃತಿ, ಡಾ.ಸೀಮಾ ಬಳಿಗೆ ತಪಾಸಣೆಗೆಂದು ಹೋಗಲಿಕ್ಕಿತ್ತು. ತಪಾಸಣೆಯ ಬಳಿಕ ಡಾ.ಸೀಮಾಳಿಗೆ ತನ್ನ ಅತ್ತೆಯ ಬಯಕೆಯ ವೃತ್ತಾಂತವನ್ನೆಲ್ಲ ವಿವರಿಸಿ, ತನಗದು ಇಷ್ಟವಿಲ್ಲ, ಇದನ್ನು ತಪ್ಪಿಸಲು ತಾವು ನನಗೆ ಸಹಕರಿಸಲೇಬೇಕೆಂದು ಕೇಳಿಕೊಂಡಳು.
ಶೃತಿಯ ಎಲ್ಲಾ ಮಾತುಗಳನ್ನು ಸಂಯಮದಿಂದ ಕೇಳಿದ ಡಾ.ಸೀಮಾ, “ಶೃತಿ, ಇತ್ತೀಚೆಗೆ ಸಮಾಜದ ಪ್ರತಿಯೊಂದು ವರ್ಗದವರೂ ಮಹೂರ್ತ ನೋಡಿ ಆಪರೇಷನ್ ಮಾಡಿಸಿ ಮಗುವಿಗೆ ಜನ್ಮ ನೀಡುವುದು ಅಭ್ಯಾಸವಾಗಿಬಿಟ್ಟಿದೆ. ಸಂಪೂರ್ಣ ನೈಸರ್ಗಿಕವಾಗಿ ನಡೆಯಬೇಕಿದ್ದ ಈ ಪ್ರಕ್ರಿಯೆಗೂ ಕೂಡ ಶಾಸ್ತ್ರಿಗಳ ಪಂಡಿತರುಗಳ ಬ್ರ್ಯಾಂಡ್ ತಗುಲಿಕೊಂಡುಬಿಟ್ಟಿದೆ.
“ಕೆಲವು ತುರ್ತು ಪರಿಸ್ಥಿತಿಯಲ್ಲಿ ಸಿಸೇರಿಯನ್ ಮಾಡಿಯೇ ಪ್ರಸವ ಮಾಡಿಸಬೇಕಾಗುತ್ತದೆ, ಆದರೆ ಶಾಸ್ತ್ರಿಗಳ ಜೊತೆಗೆ ಕೈಜೋಡಿಸಿದ ಕೆಲವು ನರ್ಸಿಂಗ್ ಹೋಮ್ ಗಳು ಕೂಡ ದುಡ್ಡಿನ ಆಸೆಗಾಗಿ ಜನ ಕೇಳಿದ ಸಮಯಕ್ಕೆ ಸರಿಯಾಗಿ ಸಿಸೇರಿಯನ್ ಮೂಲಕ ಪ್ರಸವ ಮಾಡಿಸುತ್ತಿದ್ದಾರೆ. ಆದರೆ ನೀನೇನು ಚಿಂತಿಸಬೇಡ. ನಾನು ನಿನ್ನೊಂದಿಗಿದ್ದೇನೆ,” ಎಂದರು. ಡಾಕ್ಟರ್ ಕ್ಯಾಬಿನ್ ನಿಂದ ಹೊರಬಂದ ಶೃತಿಯ ಹೃದಯ ನಿರುಮ್ಮಳವಾಗಿತ್ತು. ಇನ್ನು ತನ್ನ ಮಗು ಮೂಢನಂಬಿಕೆಯ ಮಹೂರ್ತಕ್ಕೆ ಬಲಿಯಾಗುವುದಿಲ್ಲ ಎಂದು ನಿಶ್ಚಿಂತಳಾದಳು.
ಹೊರಬರುತ್ತಿದ್ದಂತೆಯೆ ಅವಳ ಹಿರಿಯ ಓರಗಿತ್ತಿ ಯಾಕೆ ಇಷ್ಟೊತ್ತು? ಏನು ತಪಾಸಣೆ ಮಾಡುತ್ತಿದ್ದರು? ಎಂದು ಕೇಳಿದಳಾದರೂ ಶೃತಿ ಅವಳ ಪ್ರಶ್ನೆಗೆ ಉತ್ತರಿಸದೆ ಜಾಣ ಮೌನ ತೋರಿದಳು. ಸೊಸೆಗೆ 9 ತಿಂಗಳು ತುಂಬಿದ ಬಳಿಕ ಶಾಸ್ತ್ರಿಗಳು ತಿಳಿಸಿದ ಮಹೂರ್ತಕ್ಕೆ ಸರಿಯಾಗಿ ಶೃತಿಯನ್ನು ಕರೆದುಕೊಂಡು ಸಾವಿತ್ರಮ್ಮ ನರ್ಸಿಂಗ್ ಹೋಮ್ ತಲುಪಿದರು. ಮಾಮೂಲಾಗಿ ತಪಾಸಣೆ ನಡೆಸಿದ ಡಾ. ಸೀಮಾ, “ತಕ್ಷಣ ಇವಳನ್ನು ಅಡ್ಮಿಟ್ ಮಾಡಿಬಿಡಿ, ಇವಳ ರಕ್ತದೊತ್ತಡ ಅದೇಕೊ ಕ್ರಮೇಣ ಏರುತ್ತಲೇ ಇದೆ!” ಎಂದರು.
“ಆದರೆ ಡಾಕ್ಟರೆ, ನಾಳೆಯ ಮಹೂರ್ತ ತುಂಬ ಪ್ರಶಸ್ತವಾಗಿದೆ. ಹೇಗಾದರು ಸರಿ ನಾಳೆಯೇ ಮಗು ಜನಿಸುವಂತೆ ನೋಡಿಕೊಳ್ಳಿ. ಅದೆಷ್ಟೆ ಖರ್ಚಾದರು ಸರಿ, ನಾನು ಭರಿಸಲು ಸಿದ್ಧಳಿದ್ದೇನೆ. ಒಟ್ಟಾರೆ ಮಗು ಮಾತ್ರ ಮಹೂರ್ತಕ್ಕೆ ಸರಿಯಾಗಿ ಜನಿಸಬೇಕು,” ಎಂದು ಸಾವಿತ್ರಮ್ಮ ಖಡಾಖಂಡಿತವಾಗಿ ಹೇಳಿದರು?
“ರೀ, ತಲೆ ಗಿಲೆ ಕೆಟ್ಟಿದೆ ಏನ್ರಿ ನಿಮಗೆ? ಅಲ್ಲಾ, ಮೊದಲೇ ಬ್ಲಡ್ ಪ್ರೆಶರ್ ಜಾಸ್ತಿ ಆಗಿದೆ ಅಂತ ನಮಗಿಲ್ಲಿ ಟೆನ್ಯನ್ ಆಗ್ತಿದ್ರೆ, ನೀವು ಮಹೂರ್ತದ ಕಥೆ ಹೇಳ್ತೀರಲ್ರಿ! ಮೊದಲು ಅವಳ ಕಂಡೀಷನ್ ಸಹಜವಾಗಲಿ, ಆಮೇಲೆ ನೋಡೋಣ. ನಿಮ್ಮ ದುಡ್ಡಿಗಿಂತಲೂ ನನಗೆ ನನ್ನ ಪೇಶೆಂಟ್ ಪ್ರಾಣ ಮುಖ್ಯ,” ಎಂದು ಕೋಪದಿಂದ ಡಾಕ್ಟರ್ ಜಡಾಯಿಸಿಬಿಟ್ಟರು.
ಅವಮಾನಿತರಾದ ಸಾವಿತ್ರಮ್ಮ ದುಮುಗುಟ್ಟುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಂಡರು. ಕುಟುಂಬ ಸದಸ್ಯರೆಲ್ಲರೂ ಒಬ್ಬೊಬ್ಬರಾಗಿ ನರ್ಸಿಂಗ್ ಹೋಮ್ ನಲ್ಲಿ ಜಮಾಯಿಸತೊಡಗಿದರು. ಬಹುಶಃ ಮಹೂರ್ತಕ್ಕೆ ಸರಿಯಾಗಿ ಜನಿಸಲಿರುವ ಮಗುವನ್ನು ನೋಡಲು ಎಲ್ಲರೂ ಕಾತರರಾಗಿದ್ದರು ಎಂದೆನಿಸುತ್ತದೆ. ಆದರೆ ಶೃತಿಯ ಆರೋಗ್ಯದ ಏರಿಳಿತದ ವಿಷಯ ತಿಳಿದು ಎಲ್ಲರೂ ದಿಗ್ಭ್ರಾಂತರಾಗಿದ್ದರು. ಇತ್ತ ಶೃತಿ ಮನದಲ್ಲೇ ಮುಗುಳ್ನಗೆ ಬೀರತೊಡಗಿದ್ದಳು, ಏಕೆಂದರೆ ಡಾ.ಸೀಮಾರ ಸಹಾಯದಿಂದ ತನ್ನ ಉದ್ದೇಶ ಈಡೇರುವಲ್ಲಿ ಪ್ರಗತಿ ಕಂಡಿದ್ದಳು. ಅತ್ತ ಸಾವಿತ್ರಮ್ಮ ತಕ್ಷಣ ರಾಮಾ ಜೋಯಿಸರನ್ನು ಭೇಟಿ ಮಾಡಿ ಸೊಸೆಯ ಆರೋಗ್ಯದ ಕುರಿತು ಚರ್ಚಿಸಿದರು. ಶಾಸ್ತ್ರಿಯಂತೂ ಪಕ್ಕಾ ಅವಕಾಶವಾದಿಯಾಗಿದ್ದ, ತಕ್ಷಣ ತಲೆ ಓಡಿಸಿ ಮುಂದಿನ ವಾರಕ್ಕೆ ಮತ್ತೊಂದು ಮುಹೂರ್ತ ತಿಳಿಸಿ, ಸುಲಭವಾಗಿ 501 ರೂಪಾಯಿ ದಕ್ಷಿಣೆಯನ್ನು ಜೋಳಿಗೆಗೆ ಹಾಕಿಕೊಂಡ. ಈಗ ಸಾವಿತ್ರಮ್ಮನ ಸಂತಸ ಹೇಳತೀರದಂತಾಯಿತು. ಒಂದು ವಾರದ ನಂತರವಾದರೂ ಮಹೂರ್ತಕ್ಕೆ ಸರಿಯಾಗಿ ಆಪರೇಷನ್ ಮಾಡಿಸೋಣ ಎಂದುಕೊಂಡು ಖುಷಿಪಟ್ಟರು.
ಎರಡೇ ದಿನಗಳ ನಂತರ ಶೃತಿ ನಿರಾಯಾಸವಾಗಿ ಒಂದು ಆರೋಗ್ಯವಂತ, ಸುಂದರ ಗಂಡುಮಗುವಿಗೆ ಜನ್ಮ ನೀಡಿದ್ದಳು. ತಮ್ಮ ಮನೆಯ ಮೊದಲ ಮೊಮ್ಮಗನನ್ನು ಕಂಡ ಸಾವಿತ್ರಮ್ಮ ಹಾಗೂ ಪರಿವಾರದವರೆಲ್ಲರೂ ಸಂತಸಪಟ್ಟರು. ಆದರೆ ತಾವು ಅಂದುಕೊಂಡ ಮಹೂರ್ತದಲ್ಲಿ ಜನಿಸಲಿಲ್ಲವಲ್ಲ ಇನ್ನು ಭವಿಷ್ಯದಲ್ಲಿ ಏನು ಆಪತ್ತು ಕಾದಿದೆಯೋ ಏನೋ? ಎಂದು ಭಯಭೀತರಾದರು. ಆಗಲೇ ಡಾ. ಸೀಮಾ ಒಳ ಪ್ರವೇಶಿಸಿದ್ದರು.
“ಡಾಕ್ಟರೇ, ಶಾಸ್ತ್ರಿಗಳು ಒಂದು ವಾರದ ನಂತರ ಮಹೂರ್ತ ಹೇಳಿದ್ದರು. ಆದರೆ ಮಗು ಇವತ್ತೇ ಜನಿಸಿಬಿಟ್ಟಿದೆ. ಹೀಗಾಗಿ ಮಗು ಆರೋಗ್ಯವಾಗಿದೆಯೋ ಇಲ್ಲವೋ ಎಂದು ಸ್ವಲ್ಪ ಕೂಲಂಕಷವಾಗಿ ಪರೀಕ್ಷಿಸಿ ಹೇಳಿ. ನಾನೀಗಲೇ ಶಾಸ್ತ್ರಿಗಳನ್ನು ಕರೆಸುತ್ತೇನೆ,” ಎಂದು ಸಾವಿತ್ರಮ್ಮ ಧಾವಂತದಿಂದ ತಡಬಡಾಯಿಸಿದರು.
ಕಿರುನಗೆ ಬೀರಿದ ಡಾ. ಸೀಮಾ, “ ಏನಮ್ಮ ನೀವು! ಏನು ಮಾತು ಅಂತ ಆಡುತ್ತಿರುವಿರಿ? ಈ ಮಗು ಅತ್ಯಂತ ಸಹಜವಾಗಿಯೇ ಜನಿಸಿದೆ. ಆದ್ದರಿಂದ ಸಂಪೂರ್ಣ ಆರೋಗ್ಯವಾಗಿದೆ, ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಒಂದು ವಿಚಾರ ಮಾತ್ರ ನಿಮಗೆ ತಿಳಿಸಲೇಬೇಕು. ನಿಜ ಹೇಳಬೇಕೆಂದರೆ, ಶೃತಿ ಹೆಬ್ಬಂಡೆಯಷ್ಟೆ ಆರೋಗ್ಯಯುತವಾಗಿದ್ದರೂ ಕೂಡ ನಿಮ್ಮ ಶಾಸ್ತ್ರಿಗಳ ಮಹೂರ್ತ ತಪ್ಪಿಸಿ ಸಹಜ ಪ್ರಸವ ಆಗಲಿಯೆಂದು ಬ್ಲಡ್ ಪ್ರೆಶರ್ ಜಾಸ್ತಿಯಾಗಿದೆಯೆಂದು ಸುಳ್ಳು ಹೇಳಿದೆ. ಏಕೆಂದರೆ ನಿಮ್ಮ ಮೈಮನಗಳಲ್ಲಿ ತುಂಬಿಕೊಂಡಿರುವ ಮೂಢನಂಬಿಕೆಗಳನ್ನು ಹೊಡೆದುಹಾಕಬೇಕೆಂದು ನಾವು ನಿರ್ಧರಿಸಿದ್ದೆವು.
“ಇಂದು ನೋಡಿ, ಶೃತಿಯು ತುಂಬಾ ಸಹಜವಾಗಿ, ನೈಸರ್ಗಿಕ ನಿಯಮದಂತೆ ಸುಪುಷ್ಟ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ನಿಸರ್ಗದ ಮಹೂರ್ತಕ್ಕೆ ಯಾವುದೇ ಶುಭ ಅಶುಭ ಘಳಿಗೆ ಎಂಬುದಿಲ್ಲ ಎಂದು ಸಾಬೀತಾಗಿದೆ. ಘಳಿಗೆ, ಮಹೂರ್ತವಲ್ಲ ಶಾಸ್ತ್ರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯೋಗಿಸುವ ಮೌಢ್ಯತನವೇ ಹೊರತು ಬೇರೇನೂ ಅಲ್ಲ! ಶೃತಿಯೇ ಮೊಟ್ಟ ಮೊದಲು ಮೂಢನಂಭಿಕೆಗಳ ವಿರುದ್ಧ ಹೋರಾಡಲು ನಿಶ್ಚಯಿಸಿದಳು. ಹೀಗಾಗಿ ಮೊದಲು ಅವಳಿಗೆ ಅಭಿನಂದನೆ ಸಲ್ಲಿಸಬೇಕು,” ಎಂದರು.
ಡಾ.ಸೀಮಾ ನೀಡಿದ ವಿವರಣೆಯನ್ನು ಕೇಳಿ ಎಲ್ಲರೂ ಸ್ತಬ್ಧರಾಗಿಬಿಟ್ಟರು. ಎಲ್ಲರಲ್ಲೂ ಮನೆಮಾಡಿದ್ದ ಮೂಢನಂಬಿಕೆಯ ಭಾವ ಮಾಯವಾಗಿತ್ತು. ಮುಂದಿನ ಸುಂದರ ದಿನಗಳನ್ನು ಕಲ್ಪಿಸಿಕೊಂಡ ಎಲ್ಲರ ತುಟಿಯಂಚಿನಲ್ಲೂ ಹೂನಗೆ ಬಿರಿಯಿತು.