``ಅಯ್ಯೋ, ಅದ್ಯಾವ ಕೇಡುಗಾಲವೋ ಏನೋ ಈ ಅನಿಷ್ಟವನ್ನು ತಂದು ಮನೆ ತುಂಬಿಸಿಕೊಂಡೆ. ಇದೊಂದು ಬಂಜರು ಭೂಮಿ ಎಂದು ನನಗೆ ಆವಾಗಲೇ ಗೊತ್ತಾಗಲಿಲ್ಲವಲ್ಲ! ಒಂದಕ್ಕಿಂತ ಒಂದು ಮಿಗಿಲಾದ ಸಂಬಂಧಗಳು ಬಂದಿದ್ದವು. ಅವನ್ನು ಬಿಟ್ಟು ಇದನ್ನು ಕಟ್ಟಿಕೊಂಡೆ. ಐದು ವರ್ಷಗಳೇ ಕಳೆದವು. ಗೊಡ್ಡು ಮುಂದೇಡು, ಒಂದು ಮಗುವನ್ನೂ ಹೆರಲಿಲ್ಲ.....'' ಎಂದು ನನ್ನ ಅತ್ತೆ ನಿರಂತರವಾಗಿ ಹಲುಬುತ್ತಲೇ ಇರುತ್ತಿದ್ದಳು. ಆ ಕೊಂಕು ಮಾತುಗಳನ್ನು ಕೇಳಿ ನನ್ನ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾಗುತ್ತಿತ್ತು.
ಇದೇನು ಮೊದಲಲ್ಲ. ಮದುವೆಯಾದ ಮಾರನೇ ವರ್ಷದಿಂದಲೇ ಇಂತಹ ಕರ್ಣ ಕಠೋರ ಅಪಮಾನಭರಿತ ನುಡಿಗಳನ್ನು ಕೇಳುತ್ತಲೇ ಇದ್ದೇನೆ. ಶಿವರಾಜ್ ಅವರ ಏಕಮಾತ್ರ ಸುಪುತ್ರ ಹಾಗೂ ನನ್ನ ಪತಿ. ನನ್ನ ಮಾನವರಂತೂ ಬಹುದಿನಗಳ ಹಿಂದೆಯೇ ತೀರಿಹೋಗಿದ್ದರು. ಮನೆಯಲ್ಲಿ ಅತ್ತೆ ಮತ್ತು ಶಿವರಾಜ್ ರನ್ನು ಹೊರತುಪಡಿಸಿದರೆ ಬೇರಾರೂ ಇರಲಿಲ್ಲ. ಅತ್ತೆಗೆ ಅರ್ಜೆಂಟಾಗಿ ಮೊಮ್ಮಗು ಬೇಕಾಗಿತ್ತು. ಹೇಗಾದರೂ ಸರಿ ನಾನು ಅವರಿಗೆ ಮೊಮ್ಮಗು ಹೆತ್ತು ಕೊಡಬೇಕಿತ್ತು.
ನಾನೂ ಎರಡು ಬಾರಿ ಗೈನಕಾಲಜಿಸ್ಟ್ ಬಳಿ ಪರೀಕ್ಷೆ ಮಾಡಿಸಿಕೊಂಡಿದ್ದೆ. ಎಲ್ಲಾ ರೀತಿಯಲ್ಲೂ ಆರೋಗ್ಯಯುತವಾಗಿರುವುದು ಸಾಬೀತಾಗಿತ್ತು. ಶಿವರಾಜ್ ಗೂ ಸಾಕಷ್ಟು ತಿಳಿಹೇಳಿ ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದೆ. ಅವರಲ್ಲೂ ಏನೂ ದೋಷವಿಲ್ಲ ಎಂದು ವರದಿ ಬಂದಿತ್ತು.
ಡಾಕ್ಟರೇ ನಮಗೆ ಮಾರ್ಗದರ್ಶನ ನೀಡಿದ್ದರು, ``ಇತ್ತೀಚೆಗೆ ಹೀಗಾಗುವುದು ತುಂಬಾ ಸಾಮಾನ್ಯವಾಗಿದೆ. ಯಾವುದೇ ಕಾರಣಕ್ಕೂ ನೀವು ಆತಂಕಪಡುವ ಅಗತ್ಯವಿಲ್ಲ. ಅತಿ ಶೀಘ್ರ ಆ ನೈಸರ್ಗಿಕ ಪ್ರಕ್ರಿಯೆ ನಿಮ್ಮಲ್ಲೂ ಚಿಗುರಲಿ,'' ಎಂದು ಹಾರೈಸಿದ್ದರು ಕೂಡ.
ಡಾಕ್ಟರ್ ರ ಮಾತುಗಳೇನೊ ನಮ್ಮಿಬ್ಬರಿಗೂ ಅರ್ಥವಾಗಿದ್ದವು. ಆದರೆ ನಮ್ಮ ಅತ್ತೆಗೆ ಅರ್ಥವಾಗುವಂತೆ ಹೇಳುವವರು ಯಾರು? ಪ್ರತಿದಿನ ಅವರ ವಕ್ರದೃಷ್ಟಿ ನನ್ನ ಮೇಲೆಯೇ ಭುಸುಗುಟ್ಟುತ್ತಿತ್ತು. ಅವರ ದೃಷ್ಟಿಯಲ್ಲಿ ನಾನೇ ಅಪರಾಧಿಯಾಗಿದ್ದೆ. ಇತ್ತೀಚೆಗಂತೂ, ತನ್ನ ವಂಶ ಬೆಳೆಯಬೇಕೆಂದರೆ ಇವಳಿಗೆ ನನ್ನ ಮಗನಿಂದ ಸೋಡಾ ಚೀಟಿ ಕೊಡಿಸಿ ಬೇರೆ ಸೊಸೆಯನ್ನು ತರುವೆ ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡತೊಡಗಿದ್ದರು.
ಅವರ ಇಂತಹ ಬಿರುನುಡಿಗಳಿಂದಾಗಿ ನನ್ನ ತಲೆಕೆಟ್ಟು ಹೋಗುತ್ತಿತ್ತು. ಹೀಗಿರುವಾಗ ಕೆಲವೊಮ್ಮೆ ಶಿವರಾಜ್ ನನ್ನನ್ನು ಸಂತೈಸುತ್ತಿದ್ದರು, ``ಅಮ್ಮನ ಮಾತಿಗೆ ಕಿವಿಗೊಟ್ಟು ನಿನ್ನ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡ. ಅಮ್ಮನಿಗೆ ವಟಗುಟ್ಟುವುದೇ ಒಂದು ಅಭ್ಯಾಸ.''
``ನಿಮಗೇನೂ ಚಿಂತೆ ಇಲ್ಲ ಬಿಡಿ, ದಿನಪೂರ್ತಿ ಆಫೀಸಿನಲ್ಲಿರುತ್ತೀರಿ. ಅವರ ಅಣಕದ ಮಾತುಗಳನ್ನು ಕೇಳುವುದೇ ನನ್ನ ಕೆಲಸವಾಗಿಬಿಟ್ಟಿದೆ. ಇತ್ತೀಚೆಗಂತೂ ನಮಗಿಬ್ಬರಿಗೂ ಡೈವೋರ್ಸ್ ಕೊಡಿಸಿ ನಿಮಗೆ ಬೇರೆ ಮದುವೆ ಮಾಡುವ ಮಾತುಗಳನ್ನೂ ಆಡುತ್ತಿದ್ದಾರೆ.''
``ರಾಧಿಕಾ, ನೀನು ಚಿಂತಿಸಬೇಡ. ನಾನು ನಿನಗೆ ಡೈವೋರ್ಸ್ ಕೊಡೋದಿಲ್ಲ, ಬೇರೆ ಮದುವೆಯ ಆಲೋಚನೆಯೂ ನನಗಿಲ್ಲ. ಏಕೆಂದರೆ, ನಿನ್ನಲ್ಲೇನೂ ಕೊರತೆಯಿಲ್ಲ ಅಂತ ನನಗೆ ನಂಬಿಕೆ ಇದೆ.''
ಒಂದು ಸಲ ನಮ್ಮ ಊರಿಗೆ ಒಬ್ಬ ಬಾಬಾ ಬಂದಿದ್ದ. ಅವನು ಅಧೂತ ಸನ್ಯಾಸಿ ಎಂದೇ ಪ್ರಸಿದ್ಧಿ ಪಡೆದವನಂತೆ. ಆತ ನೀಡುವ ಭಸ್ಮ ಹಾಲಿನಲ್ಲಿ ಬೆರೆಸಿ ಕುಡಿದರೆ ಬಂಜೆಯರಿಗೆ ಸಂತಾನಭಾಗ್ಯ ಖಚಿತವೆಂದೂ ಹೇಳಲಾಗುತ್ತಿತ್ತು.