ತಿಳಿವಳಿಕೆ ಗ್ಯಾರಂಟಿ, ಆರೋಗ್ಯ ಗೋವಿಂದಾಯ...... ನಮಃ!
ಇತ್ತೀಚೆಗೆ ಎಚ್ 1 ಎನ್ 1, ಸ್ಪೈನ್ ಫ್ಲೂ, ಬರ್ಡ್ ಫ್ಲೂ, ಮೆಡ್ರಾಸ್ ಐಗಳಿಗಿಂತಲೂ ಹೆಚ್ಚಾಗಿ ವೈಫ್ ಫ್ಲೂ (ಪತ್ನಿ ಜ್ವರ) ಎಂಬ ಭಯಾನಕ ಕಾಯಿಲೆಗೆ ಬೆಚ್ಚಿ ಬಿಳುವಂತಾಗಿದೆ. ಇದರಿಂದಾಗಿ ಸಮಾಜದಲ್ಲಿ ಮಾನಸಿಕ ಪ್ರಕ್ಷೋಭೆ ಉಂಟಾಗುತ್ತಿರುವುದು ಸಾಮಾನ್ಯವಾಗಿದೆ. ಎಲ್ಲಾ ಫ್ಲೂಗಳನ್ನು ಔಷಧೋಪಚಾರ ಮಾಡಿ ನಿವಾರಿಸಬಹುದು, ಆದರೆ ವೈಫ್ ಫ್ಲೂಗೆ ಮಾತ್ರ ಇನ್ನೂವರೆಗೂ ಔಷಧಿಯೇ ಸಿಕ್ಕಿಲ್ಲ.
ಇನ್ನು ನಮ್ಮ ಯುವಕರೆಲ್ಲರಿಗೂ ದಟ್ಟವಾಗಿ ಮೀಸೆ ಬಿಟ್ಟು ಆಕರ್ಷಕವಾಗಿ, ರೋಮಾಂಚಕವಾಗಿ ಕಾಣಿಸಿಕೊಳ್ಳಬೇಕೆಂಬ ಚಪಲ ನಿಸರ್ಗ ಸಹಜವಾಗಿ ಬಂದಿರುತ್ತದೆ. ಆದರೆ ಮದುವೆಯಾದ ನಂತರ ಇದರ ಕಥೆಯೇ ಬದಲಾಗಿಬಿಡುತ್ತಲ್ಲ.....? ಪ್ರಥಮ ರಾತ್ರಿಯೇ ವೈಫ್ ಫ್ಲೂ ನಮ್ಮ ಮೀಸೆಯ ಮೇಲೆಯೇ ಆಕ್ರಮಿಸಿಬಿಡುತ್ತದೆ. ಅವರಿಗೆ ಅದೇನು ಕಷ್ಟ ಕೊಡುತ್ತದೋ? `ನೋಡ್ರಿ ಈ ಮೀಸೆ ನಿಮಗೆ ಸೂಟ್ ಆಗ್ತಾ ಇಲ್ಲ. ಸೋ ನಾಳೇನೇ ತೆಗೆದ್ಬಿಡಿ' ಎಂದು ಖಡಾಖಂಡಿತವಾಗಿ ನೇರವಾಗಿಯೇ ಹೇಳಿಬಿಡುತ್ತಾರಲ್ಲ!
ಇದೇನೊ ಅವಸರದ ಅಭಿಪ್ರಾಯ ಇರಬಹುದು ಎಂದು ಉದಾಸೀನ ಮಾಡಿ, ಇಷ್ಟು ವರ್ಷ ಪ್ರೀತಿಯಿಂದ ಬೆಳೆಸಿಕೊಂಡು ಬಂದ ಮೀಸೆಯನ್ನು ತುಟಿಯಿಂದ ನೇವರಿಸಿಕೊಂಡು ನಿದ್ರೆಗೆ ಜಾರಿದ್ದೆ. ಸಹಜವಾಗಿ ಬೆಳಗ್ಗೆ ಎದ್ದು ಬ್ರಷ್ ಮಾಡಲು ಸಿಂಕ್ ಎದುರು ನಿಂತಾಗ, ಕನ್ನಡಿಯಲ್ಲಿ ಮೀಸೆಯೇ ಇಲ್ಲದ ಮುಖವನ್ನು ಕಂಡು ಅಯೋಮಯನಾದೆ. ಆಮೇಲೆ ಗೊತ್ತಾಯಿತು, ವೈಫ್ ಏನನ್ನು ಹೇಳುತ್ತಾಳೊ ಅದನ್ನು ಮಾಡಿ ತೋರಿಸುವ ಶಕ್ತಿಯನ್ನು ಪಡೆದಿದ್ದಾಳೆಂದು. ಹೀಗಾಗಿ ಅವತ್ತೇ ಡಿಸೈಡ್ ಮಾಡಿದೆ, ಇನ್ನು ಜೀವನ ಪೂರ್ತಿ ವೈಫ್ ದಾಸನಾಗಿಯೇ ಇರಬೇಕು ಇಲ್ಲವಾದರೆ ಉಳಿಗಾಲವಿಲ್ಲ ಎಂದು.ಇನ್ನೊಂದು ದಿನ ಮುಂಜಾನೆ, ನಾನಿನ್ನೂ ಸ್ವಲ್ಪ ನಿದ್ದೆ ಮಾಡಬೇಕೆಂದು ಮಲಗಿಯೇ ಇದ್ದೆ. ಅಷ್ಟರಲ್ಲಿ ಸಿಂಹ ಘರ್ಜಿಸಿದಂತಾಯಿತು.
``ರೀ, ಸೂರ್ಯ ನೆತ್ತಿಯ ಮೇಲೆ ಬಂದಾಯ್ತು ಇನ್ನೂ ಮಲಗಿದ್ದೀರಲ್ರಿ, ಏನು? ಮನೆಯ ಎಲ್ಲಾ ಕೆಲಸಗಳನ್ನು ನಾನೊಬ್ಬಳೆ ಮಾಡಬೇಕೆಂದು ಏನಾದ್ರು ಕಾನೂನಿದೆಯಾ? ಎದ್ದೇಳ್ರಿ, ನಲ್ಲಿಯಲ್ಲಿ ನೀರು ಬಂದಿದೆ, ತುಂಬಿಟ್ಟು ಬೇಗ ಹೋಗಿ ತರಕಾರಿ ತೆಗೆದುಕೊಂಡು ಬನ್ರಿ. ಹಾಂ! ಹಾಲು ಮುಗಿದಿದೆ. ಮರೀದೆ ಹಾಲು ಕೂಡ ತಗೊಂಬನ್ನಿ.'' ಚಟಕ್ಕನೆ ಎದ್ದು ಕುಳಿತಿದ್ದೆ. ನಿಮ್ಮ ಆಜ್ಞೆ ಮಹಾರಾಣಿಯವರೇ ಎನ್ನುತ್ತಾ ತಲೆಬಾಗಿಸುವುದೊಂದೇ ಬಾಕಿ ಇತ್ತು.
ಇದಾದ ಮೇಲೆ ಸ್ವಲ್ಪ ಪ್ರೀತಿಯನ್ನು ತೋರಿಸುತ್ತ ``ರೀ, ಒಂಚೂರು ಟೀ ಮಾಡ್ಕೊಂಡು ಬನ್ರಿ. ಇಬ್ಬರೂ ಒಟ್ಟಿಗೇ ಕೂತು ಕುಡಿಯೋಣ'' ಎನ್ನಬೇಕೇ?
ಇಲ್ಲಿಯವರೆಗೂ ಇದೇನೂಂತಾನೇ ಅರ್ಥವಾಗಿರಲಿಲ್ಲ. ಕ್ರಮೇಣ ನಿಧಾನಕ್ಕೆ ಅರಿವಾಗಿದ್ದೇನೆಂದರೆ, ನಾನು ವೈಫ್ ಫ್ಲೂಗೆ ಬಲಿಯಾಗಿದ್ದೇನೆ, ಇದು ಅಷ್ಟು ಸರಳವಾಗಿ ವಾಸಿಯಾಗುವ ಕಾಯಿಲೆಯಲ್ಲ. ಬಿಸಿಲು ಏರಿದಂತೆಲ್ಲ ಈ ಜ್ವರ ಏರುತ್ತದೆ, ಸಾಯಂಕಾಲ ತಂಪಾದಂತೆಲ್ಲ ತಣ್ಣಗಾಗುತ್ತದೆ. ಆದರೆ ಅದೇಕೊ ವೈಫ್ ನ್ನು ನೋಡಿದ ಕೂಡಲೇ ದೇಹವೆಲ್ಲ ಗಡಗಡನೆ ನಡುಗುತ್ತದೆ.
ಈಗ ಇದೇ ನಮಗೆ ಒಂದು ಸಂಶೋಧನೆಯ ವಿಷಯವಾಯಿತು ಈ ವೈಫ್ ಫ್ಲೂ ಎಂದರೆ ಏನು? ಇದು ಏಕೆ ತಗುಲುತ್ತದೆ? ಇದು ತುಂಬಾ ಸರಳವಾದ ವಿಷಯ. ಮದುವೆಯಾಗುತ್ತಲೇ ವೈಫ್ ಫ್ಲೂ ತಗುಲಿಕೊಳ್ಳುತ್ತದೆ. ಇದರ ಹರಡುವಿಕೆಯ ತೀವ್ರತೆ ಆಯಾಯ ಹಸ್ಬೆಂಡ್‌ಗಳ ಫ್ಲೂ ನಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಸಾರಿ ವೈಫ್ ಫ್ಲೂಗೆ ಬಲಿಯಾದವರು ಜೀವನಪೂರ್ತಿ ಇದನ್ನು ಅನುಭವಿಸಬೇಕಾಗುತ್ತದೆ.