ಅವತ್ತು ಭಾನುವಾರವಾಗಿದ್ದರಿಂದ ರಾಹುಲ್ ಇನ್ನೂ ಮಲಗಿದ್ದ. ಟೆಲಿಫೋನ್ ಗಂಟೆ ಒಂದೇ ಸಮನೆ ಬಾರಿಸತೊಡಗಿತ್ತು. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸ್ನೇಹಾಳೇ ಕಾಲ್ ಗಳನ್ನು ರಿಸೀವ್ ಮಾಡುವುದು, ಪ್ರತಿದಿನ ಬೆಳಗ್ಗೆ ಬೆಡ್ ಕಾಫಿ ತೆಗೆದುಕೊಂಡು ಬಂದು ಮಂಚದ ಪಕ್ಕದ ಟೀಪಾಯ್ ಮೇಲಿಟ್ಟು ರಾಹುಲ್ ನನ್ನು ಎಬ್ಬಿಸುವುದು ಸಂಪ್ರದಾಯ. ಇಂದು ಅದು ಕೂಡ ಮಿಸ್ಸಿಂಗ್. ಸ್ನೇಹಾಳನ್ನು ಕೂಗಿದನಾದರೂ ಯಾವುದೇ ಪ್ರತಿಕ್ರಿಯೆ ಬರದಿದ್ದರಿಂದ, ರಾಹುಲ್ ಸ್ವತಃ ಮಂಚದಿಂದ ಎದ್ದು ಟೆಲಿಫೋನ್ ನತ್ತ ನಡೆದ.
``ಹಲೋ, ನಾನು ಸ್ನೇಹಾ ಮಾತಾಡ್ತಾ ಇದೀನಿ,'' ಅತ್ತಲಿಂದ ಸ್ನೇಹಾಳ ಧ್ವನಿ ಕೇಳಿಸಿತ್ತು.
``ಅರೆ, ಎಲ್ಲಿಂದ ಮಾತನಾಡುತ್ತಿರುವೆ?'' ಎಂದು ಕೇಳಿದ.
``ನಾನು ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲ್ಯಾಟ್ ಬಾಡಿಗೆಗೆ ತೆಗೆದುಕೊಂಡಿದ್ದೇನೆ. ಇನ್ನು ಮುಂದೆ ನಾನು ನಿನ್ನೊಂದಿಗೆ ಇರಲು ಸಾಧ್ಯವಿಲ್ಲ.''
``ಇಲ್ಲ....ಇಲ್ಲ.... ನೀನು ಹಾಗೆಲ್ಲ ಮಾಡಬಾರದು,'' ಎಂದು ರಾಹುಲ್ ಆತಂಕದಿಂದ ಹೇಳಿದ.
``ಇಲ್ಲ ರಾಹುಲ್, ನಾನು ಏನು ಯೋಚಿಸಿದ್ದೇನೊ ಅದನ್ನೇ ಮಾಡೋದು. ನೀನು ಕೆಲಸವಿಲ್ಲದೆ ಅಲೆಯುವುದು, ನನ್ನ ಸಂಪಾದನೆಯಲ್ಲೇ ಸಂಸಾರ ನಿಭಾಯಿಸುವುದು, ಇದೆಲ್ಲ ಎಷ್ಟು ದಿನಗಳವರೆಗೆ ನಡೆಯುತ್ತೆ? ನಾನೇನು ನಿನಗೆ ಡೈವೋರ್ಸ್ ಕೊಡುತ್ತಿಲ್ಲ. ಒಂದು ಹಂತದವರೆಗೆ ಒಂಟಿಯಾಗಿ ಬದುಕುವೆ ಅಷ್ಟೆ. ನಾನು ನಿನ್ನನ್ನು ತುಂಬಾ ಇಷ್ಟಪಡುತ್ತೇನೆ ರಾಹುಲ್, ಆದರೆ ನಿನ್ನನ್ನು ಇಂತಹ ನಿಷ್ಪ್ರಯೋಜಕ ಸ್ಥಿತಿಯಲ್ಲಿ ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನು ಏನಾದರೊಂದು ಸಾಧಿಸಿದಾಗಲೇ ನಿನ್ನೊಂದಿಗೆ ಒಂದಾಗುವುದಾಗಿ ನಿಶ್ಚಯಿಸಿದ್ದೇನೆ.''
``ನಿನ್ನ ತವರುಮನೆಗಾದರೂ ಹೋಗಬಹುದಿತ್ತಲ್ಲ. ಅಲ್ಲಿ ಉಳಿದರೆ ಎಲ್ಲಾ ರೀತಿಯ ಅನುಕೂಲವಿರುತ್ತೆ,'' ಎಂದು ರಾಹುಲ್ ಸಲಹೆ ನೀಡಿದ. ಈ ಮಾತು ಕೇಳಿ ಕೋಪಗೊಂಡ ಸ್ನೇಹಾ, ``ತವರುಮನೆಗೆ ಹೋಗುವುದಂತೂ ಸಾಧ್ಯವೇ ಇಲ್ಲ. ನನ್ನ ಸ್ವಾಭಿಮಾನ ಇದಕ್ಕೆ ಒಪ್ಪಲಾರದು. ಚಿಂತಿಸಬೇಡ, ನಾನು ಎಲ್ಲರೊಂದಿಗೂ ಸಂಪರ್ಕದಲ್ಲಿರುತ್ತೇನೆ. ಆದರೆ ನೀನು ಮಾತ್ರ ಜೀವನದಲ್ಲೊಂದು ಉತ್ತಮ ಸಾಧನೆ ಮಾಡಿದ ನಂತರವೇ ನಿನ್ನ ಜೊತೆಗೂಡುತ್ತೇನೆ,'' ಎಂದಳು.
ರಾಹುಲ್ ಗೆ ಕ್ಷಣಕಾಲ ದಿಕ್ಕು ತೋಚದಂತಾಯಿತು. ಸ್ನೇಹಾ ಹೀಗೆ ತನ್ನನ್ನು ತೊರೆದು ಒಂಟಿಯಾಗಿ ಬಾಳುವ ನಿರ್ಧಾರ ತಳೆಯಬಲ್ಲಳೆಂದು ಆತ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಸುಧಾರಿಸಿಕೊಂಡ ರಾಹುಲ್, ``ನೀನು ಒಂಟಿಯಾಗಿ ಬಾಳುವ ನಿರ್ಧಾರವೇ ಅಂತಿಮವಾಗಿದ್ದಲ್ಲಿ, ನಿನ್ನ ತಂದೆಗೂ ಒಂದು ಸಲ ತಿಳಿಸುವುದು ಉತ್ತಮ,'' ಎಂದ.
ಸ್ನೇಹಾಳಿಗೂ ಅವನ ಮಾತು ಸಮಂಜಸವೆನಿಸಿತು. ಅವಳ ತಂದೆ ತವರಿಗೇ ಬಂದುಬಿಡು ಎಂದು ಆಹ್ವಾನಿಸಿದಾಗ, ``ಅಪ್ಪ, ಇಷ್ಟು ವರ್ಷ ನೀವು ನನ್ನನ್ನು ಹೆತ್ತು, ಹೊತ್ತು, ಬೆಳೆಸಿ, ಓದಿಸಿ ಸ್ವಾವಲಂಬಿಯನ್ನಾಗಿ ಮಾಡಿದ್ದೀರಿ. ನಾನೇನೂ ರಾಹುಲ್ ಗೆ ಡೈವೋರ್ಸ್ ಕೊಡುತ್ತಿಲ್ಲ. ನಾನು ರಾಹುಲ್ ನನ್ನು ಅದೆಷ್ಟು ಇಷ್ಟಪಡುತ್ತೇನೆಂದು ನಿಮಗೂ ತಿಳಿದೇ ಇದೆ. ನಿಮ್ಮ ಮತ್ತು ಅಮ್ಮನ ಒಪ್ಪಿಗೆ ಇಲ್ಲದಿದ್ದರೂ ರಾಹುಲ್ ನನ್ನೇ ಮದುವೆಯಾದೆ. ಒಟ್ಟಾರೆ ರಾಹುಲ್ ಒಬ್ಬ ಯಶಸ್ವಿ ಪುರುಷನಾಗಬೇಕು ಎಂಬುದಷ್ಟೇ ನನ್ನ ಉದ್ದೇಶ,'' ಎಂದಳು.
ಸ್ನೇಹಾಳ ಆಲೋಚನೆ ಅವಳ ತಂದೆಗೆ ಸಂಪೂರ್ಣ ಅರ್ಥವಾಯಿತು. ``ಸ್ನೇಹಾ, ಈ ನಿನ್ನ ಕಠಿಣ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಮಗಳೇ, ಆದರೂ ಏನಾದರೂ ಸಹಕಾರ ಬೇಕಾದಾಗ ನಮ್ಮನ್ನು ಕೇಳಲು ಸಂಕೋಚಪಟ್ಟುಕೊಳ್ಳಬೇಡ ಅಷ್ಟೇ,'' ಎಂದರು.