ಆಗಿನ್ನೂ ಬೆಳಗಿನ ಜಾನ ಸುಮಾರು ಆರು ಗಂಟೆ ಆಗಿರಬಹುದು. ನಾವಿನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ ಕೂಡ. ಅದೇ ಸಮಯದಲ್ಲಿ ಟೆಲಿಫೋನ್ ಗಂಟೆ ಬಾರಿಸತೊಡಗಿತು. ಕಾಲ್ ರಿಸೀವ್ ಮಾಡಿದ ಸೀಮಾ ನನ್ನೆಡೆಗೆ ತಿರುಗುತ್ತ, ``ಆಸ್ಪತ್ರೆಯಿಂದ ನರ್ಸ್ ನಿರ್ಮಲಾ ಅರ್ಜೆಂಟಾಗಿ ನಿಮ್ಮೊಂದಿಗೇ ಮಾತನಾಡಬೇಕಂತೆ.''
ನರ್ಸ್ ಹೆಸರು ಕೇಳುತ್ತಿದ್ದಂತೆ ನನ್ನ ನಿದ್ದೆ ಹಾರಿಹೋಯಿತು. ಕ್ಷಣಮಾತ್ರದಲ್ಲಿ ಮನಸ್ಸಿನ ತುಂಬಾ ಅನಿತಾಳ ಕುರಿತ ಆಲೋಚನೆಗಳು ಭುಗಿಲೆದ್ದವು. ಏನಾಗಬಾರದೆಂದು ಅಂದುಕೊಂಡಿದ್ದೆನೋ ಅದೇ ನಡೆದು ಹೋಗಿತ್ತು. ರಾತ್ರಿಯೇ ಅನಿತಾ ಕೋಮಾ ಸ್ಥಿತಿ ತಲುಪಿದ್ದಾಳೆಂದು ನರ್ಸ್ ತಿಳಿಸಿದ್ದಳು.
ನನ್ನ ವ್ಯಾಕುಲತೆ ಕಂಡ ಸೀಮಾ, ``ಯಾಕೆ? ಏನಾಯ್ತು? ಎಲ್ಲಾ ಸರಿಯಾಗಿದೆ ತಾನೆ?'' ಎಂದು ಕೇಳಿದಳು.
``ಏನೊಂದೂ ಸರಿಯಾಗಿಲ್ಲ. ನಿನ್ನೆ ರಾತ್ರಿಯೇ ಅವಳು ಕೋಮಾಗೆ ಹೋಗಿದ್ದಾಳಂತೆ. ಇನ್ನೇನು ಅವಳು ಕೆಲವೇ ಗಂಟೆಗಳ ಅತಿಥಿ ಎಂದು ನರ್ಸ್ ಹೇಳಿದಳು.''
ಸೀಮಾ ನಿಶ್ಶಬ್ದಳಾದಳು. ಅವಳ ಮೌನ ಕಂಡು ನಾನೇ, ``ಏಕೆ? ಏನು ಯೋಚಿಸುತ್ತಿರುವೆ?'' ಎಂದೆ.
``ಇಲ್ಲಿ ಅವಳ ಸಂಬಂಧಿಕರು ಯಾರೂ ಇಲ್ಲವೇ? ಮೊನ್ನೆ ಯಾರೊ ಅವಳ ಅಕ್ಕ ಭಾವ ಇಲ್ಲಿಯೇ ಇದ್ದಾರೆ ಅಂತ ಹೇಳಿದಂತಿತ್ತಲ್ಲ.''
``ಹ್ಞಾಂ.... ಹೌದು, ನಾನು ಮೊದಲನೇ ಸಲ ಅವಳನ್ನು ಭೇಟಿಯಾದಾಗ ಅವಳು ಇಲ್ಲಿಯೇ ತನ್ನ ಅಕ್ಕ ಭಾವನೊಂದಿಗೆ ಇದ್ದಳು. ಆಮೇಲೆ ಸ್ವಲ್ಪ ದಿನಗಳ ನಂತರ ಅವರ ಬಗ್ಗೆ ವಿಚಾರಿಸಿದಾಗ, ಅವಳ ಅಕ್ಕ ತೀರಿಹೋಗಿದ್ದರಿಂದ, ಭಾವ ಮತ್ತೊಂದು ಮದುವೆ ಮಾಡಿಕೊಂಡು ಮಾರಿಷಸ್ ಗೆ ಹೋದರು ಎಂದು ಹೇಳಿದ್ದಳು. ಅವಳ ಅಕ್ಕ ನಮ್ರತಾಳಿಗೆ ಮಕ್ಕಳಿಲ್ಲವಾದ್ದರಿಂದ ಭಾವನ ಜೊತೆ ಈಗ ಸಂಪರ್ಕವೇ ಇಲ್ಲವಂತೆ.''
``ಈಗೇನು ಮಾಡೋದು?''
``ಇನ್ನೇನು ಮಾಡೋಕಾಗುತ್ತೆ? ಇಲ್ಲಿ ಅವಳ ಯಾವ ಸಂಬಂಧಿಕರೂ ಇಲ್ಲ. ಪರಿಚಿತರಂತೂ ಇಲ್ಲವೇ ಇಲ್ಲ. ಆದ್ದರಿಂದ ಅವಳ ಶವ ಸಂಸ್ಕಾರ ಮಾಡುವುದು ನಮ್ಮ ಕರ್ತವ್ಯ ಎಂದುಕೊಳ್ಳುತ್ತೇನೆ,'' ಎಂದು ಅವಳ ಪ್ರತಿಕ್ರಿಯೆಗಾಗಿ ಎದುರು ನೋಡಿದೆ. ಸೀಮಾಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಸುಮಾರು ವರ್ಷಗಳ ನಂತರ, ಆರು ತಿಂಗಳ ಹಿಂದೆಯಷ್ಟೇ ಅನಿತಾ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ಸಿಕ್ಕಿದ್ದಳು. ಅವಳು ಮೊದಲಿನಂತಿರಲಿಲ್ಲ. ಸಂಪೂರ್ಣ ಬದಲಾಗಿದ್ದಳು. ನೆರೆತ ತಲೆಗೂದಲು, ಕಳೆಗುಂದಿದ ಮುಖ, ಆಳಕ್ಕಿಳಿದ ಕಣ್ಣುಗಳು, ನನಗಂತೂ ಅವಳನ್ನು ಗುರುತಿಸಲೇ ಸಾಧ್ಯವಾಗಲಿಲ್ಲ. ಆದರೆ ಅವಳೇ ನನ್ನನ್ನು ಗುರುತಿಸಿ `ಹಲೋ' ಎನ್ನುತ್ತಾ ಎದುರಿಗೆ ಬಂದಳು.
``ಹೇಗಿದ್ದಿಯಾ?'' ಎಂದು ಕೇಳಿದೆ.
``ಚೆನ್ನಾಗಿದ್ದೇನೆ, ನೀನು ಹೇಗಿದ್ದಿಯಾ?''
``ಪರವಾಗಿಲ್ಲ, ಚೆನ್ನಾಗಿದ್ದೇನೆ.''
``ಮತ್ತೆ ಮಕ್ಕಳು?''
``ನಾಲ್ಕು ವರ್ಷದ ಮಗನಿದ್ದಾನೆ, ಆನಂದ್ ಅಂತ ಹೆಸರು. ತುಂಬಾ ಸುಂದರವಾಗಿ ಥೇಟ್ ಅವನ ಅಮ್ಮನಂತೆಯೇ ಇದ್ದಾನೆ.''
ಇದನ್ನು ಕೇಳಿ ಅವಳಿಗೆ ಕಸಿವಿಸಿ ಆದಂತಾಯಿತು. ಕಸಿವಿಸಿಗೊಂಡಿದ್ದು ಕಂಡು ನಾನೇ ಮಾತಿನ ಧಾಟಿ ಬದಲಾಯಿಸಿದೆ. ಸ್ವಲ್ಪ ಸಮಯದ ನಂತರ ಅವಳು ಕಾಫಿ ಕುಡಿಯಲು ಒಪ್ಪಿಕೊಂಡ ಮೇಲೆ ಕಾಫಿ ಡೇಯತ್ತ ಕರೆದುಕೊಂಡು ಬಂದೆ.
``ಏನಾದರೂ ತಿನ್ನುವೆಯಾ?'' ಎಂದು ಕೇಳಿದೆ.
``ಊಹೂಂ.... ಏನೂ ಬೇಡ. ಕಾಫಿ ಅಷ್ಟೇ ಸಾಕು.''
`ನಿನಗಿನ್ನೂ ಚಹಾ ಕುಡಿಯುವ ಅಭ್ಯಾಸವಾಗಿಲ್ಲವೇ?''
ಅವಳೇನೂ ಪ್ರತಿಕ್ರಿಯಿಸಲಿಲ್ಲ. ಸುಮ್ಮನೆ ಒಂದು ಹುಸಿ ನಗೆ ನಕ್ಕಳು.