`ಕಡ್ಡಿಪುಡಿ’ ಚಿತ್ರದ ಯಶಸ್ಸಿನ ನಂತರ ಶಿವಣ್ಣ ಇನ್ನಷ್ಟು ಜನಪ್ರಿಯರಾಗುತ್ತಿದ್ದಾರೆ. ಅವರ ಸ್ಟಾರ್‌ ವ್ಯಾಲ್ಯೂ ಹೆಚ್ಚುತ್ತಿದೆ. ಒಳ್ಳೆ ಸ್ಕ್ರಿಪ್ಟ್ ತರುವ ಯುವ ನಿರ್ದೇಶಕರನ್ನು ಸಾಕಷ್ಟು ಪ್ರೋತ್ಸಾಹಿಸುವ ಶಿವಣ್ಣ ಹಿರಿಯ ನಿರ್ದೇಶಕರನ್ನು ಮರೆತಿಲ್ಲ. ಅವರ ಮೆಚ್ಚಿನ ನಿರ್ದೇಶಕರಲ್ಲೊಬ್ಬರಾದ ಡಿ. ರಾಜೇಂದ್ರಬಾಬು ಅವರ `ಆರ್ಯನ್‌’ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸೆಂಚುರಿ ಸ್ಟಾರ್‌ ಅನಿಸಿಕೊಂಡಿರು ಶಿವಣ್ಣ `ಭಜರಂಗಿ’ಯಾಗಿ ಹರ್ಷ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.

ನೃತ್ಯ ನಿರ್ದೇಶಕ ಹರ್ಷ ಈಗಾಗಲೇ `ಗೆಳೆಯ,’ `ಬಿರುಗಾಳಿ,’ `ಚಿಂಗಾರಿ’ಯಂಥ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರಿಗೆ ಮೊದಲಿನಿಂದಲೂ ಶಿವಣ್ಣ ಫೇವರಿಟ್‌. ಅವರ ಜೊತೆ ಒಂದು ಚಿತ್ರ ಮಾಡುವ ಆಸೆ ಇದ್ದೇ ಇತ್ತು. ಅದಕ್ಕಾಗಿ ಒಳ್ಳೆ ಸಬ್ಜೆಕ್ಟ್ ಹುಡುಕುತ್ತಲೇ ಇದ್ದರು. `ಶಿವರಾಜ್‌ ಕುಮಾರ್‌ ಅವರನ್ನು ಬೇರೆಯೇ ರೂಪದಲ್ಲಿ ತೆರೆ ಮೇಲೆ ತೋರಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. `ನಾನು ಶೋಗಳಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೂ ಸಹ ಶಿವಣ್ಣ ನನ್ನನ್ನು ಕಂಡರೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರಂಥ ದೊಡ್ಡ ಕಲಾವಿದರ ಜೊತೆ ನಾನು ಸಿನಿಮಾ ಮಾಡಲು ಸಾಧ್ಯವೇ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನು ನಿರ್ದೇಶಕನಾಗಿ ನನ್ನ ಪ್ರತಿಭೆ ತೋರಿಸಿದ ನಂತರವೇ ಶಿವಣ್ಣ ಅವರೆದುರು ಹೋಗಿ, ಕಥೆ ಹೇಳುವಷ್ಟು ಧೈರ್ಯ ಬಂದಿತು,’ ಎನ್ನುವ ಹರ್ಷ `ಭಜರಂಗಿ’ ಚಿತ್ರದಲ್ಲಿ ಶಿಣ್ಣನವರನ್ನು ವೈವಿಧ್ಯಮಯ ಪಾತ್ರದಲ್ಲಿ ತೋರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

`ಭಜರಂಗಿ’ ಚಿತ್ರದ ಬಗ್ಗೆ ಶಿವಣ್ಣ ಅವರಿಗೂ ಸಾಕಷ್ಟು ಉತ್ಸಾಹವಿದೆ. `ಭಜರಂಗಿ’ ಚಿತ್ರಕ್ಕಾಗಿಯೇ ಶಿವರಾಜ್‌ ಕುಮಾರ್‌ ಸಿಕ್ಸ್ ಪ್ಯಾಕ್‌ ಮಾಡಿಕೊಂಡಿದ್ದಾರೆ. ಈ ತಯಾರಿಗಾಗಿ ಶಿವಣ್ಣ ಒಂದು ತಿಂಗಳು ಕಳೆದಿದ್ದರು. `ಭಜರಂಗಿ’ ಚಿತ್ರದಲ್ಲಿ ಹಿಂದಿನ ಕಾಲಮಾನವನ್ನು ನೋಡಬಹುದಾಗಿದೆ. ವಿಭಿನ್ನ ಗೆಟಪ್‌, ಡಕಾಯಿತನ ವೇಷ, ಮಂತ್ರವಾದಿ, ಅಘೋರಿಯಂತೆ ಕಾಣಿಸುವಂಥ ಲುಕ್ಸ್. ಶಿವಣ್ಣ ಇದೂವರೆಗೂ ಮಾಡದ ಪಾತ್ರವನ್ನು `ಭಜರಂಗಿ’ ಚಿತ್ರದಲ್ಲಿ ಮಾಡಿದ್ದಾರೆ ಎನ್ನಲಾಗಿದೆ.

ಹರ್ಷ ಕೂಡಾ ಸಾಕಷ್ಟು ಹೋಂವರ್ಕ್‌ ಮಾಡಿಕೊಂಡು ಚಿತ್ರ ಶುರು ಮಾಡಿದ್ದರು. ಪೋಸ್ಟರ್‌ ವಿನ್ಯಾಸಕ್ಕೆ ಕಂಪ್ಯೂಟರ್‌ ಗ್ರಾಫಿಕ್ಸ್ ಬದಲು ಪೇಂಟಿಂಗ್‌ ಮಾಡಿಸಿದ್ದಾರಂತೆ. ಹರ್ಷ ಅವರ ಕಥೆಯಲ್ಲಿ ಒಂದಷ್ಟು ವೈವಿಧ್ಯತೆಯ ರೂಪಗಳಿರುವುದು ಚಿತ್ರದ ಪೋಸ್ಟರ್ ಗಳನ್ನು ನೋಡಿದಾಗಲೇ ತಿಳಿಯುತ್ತದೆ.

ಕುದುರೆ ಸವಾರನಾಗಿ, ಗದೆ ಹಿಡಿದು ದುಷ್ಟ ಸಂಹಾರಕ್ಕೆ ನಿಂತ ಆಂಜನೇಯನಾಗಿ ಶಿವರಾಜ್‌ ಕುಮಾರ್‌ ಅವರ ನಾನಾ ರೂಪಗಳನ್ನು ತೋರುವ ಮೂಲಕ ಹರ್ಷ ಸಾಕಷ್ಟು ಕುತೂಹಲ ಹುಟ್ಟಿಸಿದ್ದಾರೆ. ಅಂದಹಾಗೆ `ಭಜರಂಗಿ’ ಚಿತ್ರದ ಕಥೆ ಏನು ಹೇಳುತ್ತೆ? ಹರ್ಷ ಹೇಳುವಂತೆ `ಭಜರಂಗಿ’ ಸಾಮಾನ್ಯ ಮನುಷ್ಯನೊಬ್ಬನ ಕಥೆ. ಅವರನ್ನು ವಿಭಿನ್ನವಾಗಿ ಪ್ರೊಜೆಕ್ಟ್ ಮಾಡುವುದಷ್ಟೇ ಅವರ ಪ್ರಯತ್ನವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಹರ್ಷ ಚಿಕ್ಕ ಹುಡುಗ. ಅಗಿನಿಂದಲೂ ಶಿವಣ್ಣನವರ ಅಭಿಮಾನಿಯಂತೆ. ಅವರ ಹಾಡುಗಳಿಗೆ ಡ್ಯಾನ್ಸ್ ಮಾಡೋದು, ಅವರಂತೆ ಹೇರ್‌ ಸ್ಟೈಲ್ ಮಾಡಿಸಿಕೊಳ್ಳೋದು, ನೃತ್ಯ ನಿರ್ದೇಶಕನಾದ ಮೇಲೆ ಶಿವಣ್ಣ ಅವರ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುವ ಅವಕಾಶ ಸಿಕ್ಕಿತು.

ತನ್ನ ಮೆಚ್ಚಿನ ನಾಯಕನ ಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿರುವಾಗ ಅದನ್ನು ಸಮರ್ಥವಾಗಿ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಶಿವಣ್ಣ ಈ ಚಿತ್ರದಲ್ಲಿ ಎರಡು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಂದು ಪಾತ್ರ ಎಪ್ಪತ್ತೈದು ವರ್ಷಗಳ ಹಿಂದಕ್ಕೆ ಹೋಗುವ ಕಥೆ. ಈ ಪಾತ್ರಕ್ಕಾಗಿ ಶಿವಣ್ಣ ಸಿಕ್ಸ್ ಪ್ಯಾಕ್‌ ನ್ನು ದೇಹಕ್ಕೆ ಒಗ್ಗಿಸಿಕೊಂಡಿದ್ದಾರೆ. ಶಿವಣ್ಣರ ಜೋಡಿಯಾಗಿ ಐಂದ್ರಿತಾ ನಟಿಸುತ್ತಿದ್ದಾಳೆ. ಈಗಾಗಲೇ `ಕಡ್ಡಿ ಪುಡಿ’ ಚಿತ್ರದ ಹಾಡೊಂದರಲ್ಲಿ ಮಾತ್ರ ಶಿವಣ್ಣ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದ ಐಂದ್ರಿತಾ ಎಲ್ಲರ ಗಮನ ಸೆಳೆದಿದ್ದಾಳೆ.

`ಕಡ್ಡಿ ಪುಡಿ’ ಚಿತ್ರದ ಸೌಂದರ್ಯ ಸಮರ ಹಾಡಂತೂ ಸಾಕಷ್ಟು ಜನಪ್ರಿಯಾಗಿದೆ. `ಭಜರಂಗಿ’ ಚಿತ್ರದಲ್ಲಿ ಶಿವಣ್ಣ ಅವರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರೋದು ಹರುಷ ತಂದಿದೆ. ಐಂದ್ರಿತಾಳಿಗೆ ಈ ಚಿತ್ರದಲ್ಲಿ ಬಜಾರಿ ಹುಡುಗಿಯ ಪಾತ್ರವಂತೆ. `ಶಿವಣ್ಣ ಅವರಂಥ ಅನುಭವೀ ನಟರೆದುರು ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ನಾನು ಅವರಿಂದ ಬಹಳಷ್ಟು ಕಲಿಯುವುದಕ್ಕಿದೆ. ಶಿವಣ್ಣ ಅಷ್ಟು ದೊಡ್ಡ ಸ್ಟಾರ್‌ ಆದರೂ ಡೌನ್‌ ಟು ಅರ್ತ್‌. ಬಹಳ ಸರಳ ಜೀವಿ,’ ಎಂದು ಐಂದ್ರಿತಾ ಹೇಳುತ್ತಾಳೆ.

ಹರ್ಷ ಅವರಿಗೆ ನಿಜಕ್ಕೂ ಈ ಚಿತ್ರ ಛಾಲೆಂಜಾಗಿದೆ. ಅವರೇ ನೃತ್ಯ ನಿರ್ದೇಶಕರೂ ಆಗಿರೋದ್ರಿಂದ ಶಿವಣ್ಣ ಅವರಿಗೆ ಡಿಫರೆಂಟಾಗಿ ಕೊರಿಯಾಗ್ರಫಿ ಮಾಡುತ್ತಿದ್ದಾರಂತೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಿಟ್‌ ಹಾಡುಗಳನ್ನು ಕೊಡುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ `ಭಜರಂಗಿ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಹಾಡುಗಳಲ್ಲಿ ಮಾಧುರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರಂತೆ.

ಈಗಿನ ಯುವ ನಾಯಕರು ನಾಚುವಂತೆ ಟ್ರಿಮ್ಮಾಗಿ, ಹೆಚ್ಚು ಸ್ಮಾರ್ಟಾಗಿ ಕಾಣುವ ಶಿಣ್ಣ `ಭಜರಂಗಿ’ ಚಿತ್ರದಿಂದ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರೆದುರು ಬರಲಿದ್ದಾರೆ.

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ